ಮಾನವ ಧರ್ಮ ಎಂದರೆ?
ಆಧುನಿಕ ಪರಿಜ್ಞಾನದೊಂದಿಗೆ ಈ ಎಲ್ಲ ಧರ್ಮಗಳು ಮತ್ತು ಧರ್ಮಗಳ ಹೊರತಾಗಿ ಕೂಡ ಇರುವ ಮಾನವೀಯ ಸಿದ್ಧಾಂತಗಳ ಆಶಯಗಳನ್ನು ಅರ್ಥ ಮಾಡಿಕೊಂಡು ಬದುಕುವುದು ಆಧುನಿಕ ಮಾನವನ ಭವಿಷ್ಯಕ್ಕೆ ಅವಶ್ಯವಾಗಿದೆ. ಹೀಗೆ ಬದುಕುವ ವಿಧಾನವೇ ಮಾನವಧರ್ಮ ಎನಿಸಿಕೊಳ್ಳುತ್ತದೆ.
‘‘ಮತ ಧರ್ಮಗಳ ವಿಚಾರದಲ್ಲಿ ಜಗಳವಾಡಬೇಡ.
ಸಾಂಗತ್ಯ ಶ್ಲಾಘನೀಯವಾದದ್ದು.
ಸತ್ಯದ ಮೇಲೆ ನಿನ್ನ ಸಂಪೂರ್ಣ ಸ್ವಾಮ್ಯವಿದೆಯೆಂದು ಕಲ್ಪನೆ ಮಾಡಿಕೊಳ್ಳಬೇಡ.
ನಿನ್ನ ಸ್ವಾಮ್ಯ ಇಲ್ಲದೆ ಇರಬಹುದು.
ಯಾವ ಮತಧರ್ಮವೂ ಸತ್ಯದ ಮೇಲೆ ಪೂರ್ಣ ಸ್ವಾಮ್ಯ ಹೊಂದಿರುವುದಿಲ್ಲ.
ನೀನು ಬೇರೆ ಬೇರೆ ರೀತಿಗಳಲ್ಲಿ ಹಾಗೂ ಬೇರೆ ಬೇರೆ ವ್ಯಕ್ತಿಗಳಲ್ಲಿ ಅಭಿವ್ಯಕ್ತಿಯಾಗುವ ದೇವರನ್ನು ಅರಿಯಲು ಪ್ರಯತ್ನಿಸು.’’
ಎಂದು ಅಶೋಕನ ಶಾಸನವೊಂದರಲ್ಲಿ ಬರೆದದ್ದು ಮಾರ್ಮಿಕವಾಗಿದೆ. 21ನೇ ಶತಮಾನದಲ್ಲಿಯಂತೂ ಭಾರತೀಯರಿಗೆ ಈ ಶಾಸನದ ಆಶಯ ಬಹಳಷ್ಟು ಅವಶ್ಯವಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಶೀಘ್ರವಾಗಿ ಬೆಳೆಯುತ್ತಿರುವ ಈ ಕಾಲದಲ್ಲಿ ಮಾನವರಿಗೆ ಇಡೀ ವಿಶ್ವವೇ ಒಂದು ಗೂಡಾಗಿ ಪರಿಣಮಿಸಿದೆ. ‘‘ಯತ್ರ ವಿಶ್ವಂ ಭವತಿ ಏಕ ನೀಡಂ’’ (ಇಡೀ ವಿಶ್ವವೇ ಒಂದು ಗೂಡು) ಎಂಬ ವೇದೋಕ್ತಿ ಸತ್ಯವಾಗಿದೆ. ಬಹು ದೇಶಗಳು, ಬಹು ಸಂಸ್ಕೃತಿಗಳು, ಬಹು ಭಾಷೆಗಳು, ಬಹು ಧರ್ಮಗಳು, ಬಹು ಜನಾಂಗಗಳು ಎಲ್ಲವೂ ಒಂದೇ ವಿಶ್ವದಲ್ಲಿ ಇರುವಂಥವು. ಎಲ್ಲ ಮಾನವರು ಒಂದೇ ಗೂಡಲ್ಲಿ ಇರುವ ಹಕ್ಕಿಯ ಮರಿಗಳಂತೆ ಅವೆಲ್ಲ ವೈವಿಧ್ಯದೊಂದಿಗೆ ಸಮಾನತೆ ಮತ್ತು ಸೌಹಾರ್ದದಿಂದ ಇರಬೇಕು ಎಂಬ ಆಶಯ ಈ ಸಾಲಿನಲ್ಲಿ ಅಡಗಿದೆ. ಹೀಗೆ ಎಲ್ಲಿ ವಿಶ್ವ ಒಂದು ಗೂಡಾಗುವುದೋ ಆಗ ಅದು ಸರ್ವ ಸಮಾನತೆಯ ವಾಸಸ್ಥಳವಾಗುವುದು ಎಂಬುದು ಈ ಸಾಲಿನ ಆಶಯವಾಗಿದೆ.
ಯಾವುದೋ ಒಂದು ಧರ್ಮವನ್ನು ಎತ್ತಿಕೊಂಡು ಇದು ‘ವಿಶ್ವಧರ್ಮ’ ಎಂದು ಹೇಳಲಿಕ್ಕಾಗದು. ಆಧುನಿಕ ಮಾನವನಿಗೆ ಬದುಕಲು ಒಂದೇ ಧರ್ಮ ಸಾಲದು. ವಿಮಾನ ಮುಂತಾದ ಆಧುನಿಕ ಸಾರಿಗೆ ವ್ಯವಸ್ಥೆ, ರೇಡಿಯೊ, ಟಿ.ವಿ. ಸ್ಮಾರ್ಟ್ಫೋನ್ ಮತ್ತು ಇಂಟರ್ನೆಟ್ ಮುಂತಾದ ಜಾಲತಾಣಗಳ ಮೂಲಕ ವಿಶಾಲವಾದ ಜಗತ್ತು ಚಿಕ್ಕದಾಗಿ ನಮ್ಮ ಕಣ್ಣ ಮುಂದೆ ಬಂದು ನಿಲ್ಲುತ್ತದೆ. ವಿಜ್ಞಾನ ಮತ್ತು ತಂತ್ರಜ್ಞಾನಗಳು ನಮ್ಮ ಅರಿವನ್ನು ಹೆಚ್ಚಿಸಿವೆ. ಆಧುನಿಕ ಮನುಷ್ಯ ಕೇವಲ ಒಂದು ಧರ್ಮಗ್ರಂಥದ ಮೂಲಕ ಬದುಕಲು ಸಾಧ್ಯವಿಲ್ಲ. ಪ್ರತೀ ಧರ್ಮಗ್ರಂಥವೂ ಮಾನವಕುಲದ ಏಳ್ಗೆಗೆ ತನ್ನದೇ ಆದ ಕಾಣಿಕೆ ನೀಡಿದೆ. ಆಧುನಿಕ ಸಿದ್ಧಾಂತಗಳ ಜ್ಞಾನದ ಜೊತೆ ಅನೇಕ ಧರ್ಮಗ್ರಂಥಗಳಲ್ಲಿನ ಮಾನವೀಯ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುತ್ತ ಯಾಂತ್ರಿಕ ಮತ್ತು ಸೈಬರ್ ಅಪರಾಧದ ವಾತಾವರಣದಲ್ಲಿ ಬದುಕಿನಲ್ಲಿ ನೆಮ್ಮದಿ ಪಡೆಯಲು ಮಾನವರು ತಮ್ಮ ಧರ್ಮಗಳನ್ನು ಮೀರಿ ಪ್ರಯತ್ನಿಸಬೇಕಾಗಿದೆ. ಧರ್ಮಗಳನ್ನು ಮೀರುವುದೆಂದರೆ ಧರ್ಮಗಳನ್ನು ಬಿಡಬೇಕು ಎಂದಲ್ಲ. ಅದು ಅವರವರ ಆಯ್ಕೆಗೆ ಬಿಟ್ಟಿದ್ದು. ದೈವವಾದಿಗಳು, ಸಂದೇಹವಾದಿಗಳು ಮತ್ತು ನಿರೀಶ್ವರರು ಕೂಡ ಧರ್ಮಗಳಲ್ಲಿನ ಮಾನವೀಯ ಮೌಲ್ಯಗಳನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಆದರೆ ವಿವಿಧ ಧರ್ಮಗಳ ಬಹುಪಾಲು ಧರ್ಮಗುರುಗಳು ತಮ್ಮ ತಮ್ಮ ಧರ್ಮಗಳಲ್ಲಿನ ಮೌಲ್ಯಗಳ ಬಗ್ಗೆ ತಿಳಿಸದೆ ಕೇವಲ ಧಾರ್ಮಿಕ ವಿಧಿವಿಧಾನಗಳ ಬಗ್ಗೆಯೇ ಒತ್ತುಕೊಡುವುದರಿಂದ ವಿವಿಧ ಧರ್ಮಗಳ ಅನೇಕ ಯುವಕರು ತಮ್ಮ ತಮ್ಮ ಧರ್ಮಗಳಿಂದ ದೂರ ಸರಿಯುತ್ತಿದ್ದಾರೆ. ಇಂದು ವಿಶ್ವದ ಜನಸಂಖ್ಯೆ 812 ಕೋಟಿ ಇದೆ. ಅದರಲ್ಲಿ ಕ್ರೈಸ್ತರು 237 ಕೋಟಿ, ಮುಸ್ಲಿಮರು 190 ಕೋಟಿ, ಹಿಂದೂಗಳು 120 ಕೋಟಿ, ನಾಸ್ತಿಕರು ಮತ್ತು ಧರ್ಮದಿಂದ ದೂರ ಉಳಿದವರು 111 ಕೋಟಿ ಇದ್ದಾರೆ. ಐರೋಪ್ಯ ರಾಷ್ಟ್ರಗಳಲ್ಲೇ ನಾಸ್ತಿಕರ ಸಂಖ್ಯೆ ಹೆಚ್ಚಾಗಿದ್ದು ಉಳಿದ ಕಡೆಗಳಲ್ಲಿ ಬಹಳ ಕಡಿಮೆ ಇದೆ. ಬಂಡವಾಳಶಾಹಿ ಮತ್ತು ಸಾಮ್ರಾಜ್ಯಶಾಹಿ ವ್ಯವಸ್ಥೆಯಲ್ಲಿ ಹೆಚ್ಚೆಚ್ಚು ಯುವಕರು ನಾಸ್ತಿಕರಾಗುತ್ತಿದ್ದಾರೆ. ಹೀಗಾಗಿ ಅವರು ಧರ್ಮಗಳಲ್ಲಿನ ಮೌಲ್ಯಗಳ ಬಗ್ಗೆ ವಂಚಿತರಾಗುತ್ತಿದ್ದಾರೆ. ಇದರ ಹೊಣೆಯನ್ನು ಧರ್ಮಗುರುಗಳೇ ಹೊತ್ತುಕೊಳ್ಳುವುದು ಅನಿವಾರ್ಯವಾಗಿದೆ.
ಪ್ರತೀ ಧರ್ಮದಲ್ಲಿ ಎರಡು ಮುಖ್ಯ ಭಾಗಗಳಿರುತ್ತವೆ. ಮೊದಲನೆಯದಾಗಿ ಅದು ಧಾರ್ಮಿಕ ಆಚರಣೆಗೆ ಸಂಬಂಧಿಸಿದ ವಿಧಿ ವಿಧಾನಗಳನ್ನು ಹೊಂದಿರುತ್ತದೆ. ಈ ಆಚರಣೆಗಳು ವ್ಯಕ್ತಿ, ಕುಟುಂಬ ಮತ್ತು ಆ ಧಾರ್ಮಿಕ ಸಮಾಜಕ್ಕೆ ಸಂಬಂಧಿಸಿರುತ್ತವೆ. ಈ ವಿಧಿವಿಧಾನಗಳಿಗೂ ಲೋಕದ ಮಾನವರಿಗೂ ಯಾವುದೇ ಸಂಬಂಧವಿರುವುದಿಲ್ಲ. ಆದರೆ ಧರ್ಮದ ಎರಡನೆಯ ಭಾಗವಾಗಿ ಜೀವನ ಮೌಲ್ಯಗಳಿರುತ್ತವೆ. ಈ ಮೌಲ್ಯಗಳು ಮಾನವಲೋಕ, ಜೀವಲೋಕ, ನಿಸರ್ಗ ಹಾಗೂ ಒಟ್ಟಾರೆ ಅನಂತ ವಿಶ್ವಕ್ಕೆ ಸಂಬಂಧಿಸಿದವುಗಳಾಗಿರುತ್ತವೆ. ಆಧುನಿಕ ಪರಿಜ್ಞಾನದೊಂದಿಗೆ ಈ ಎಲ್ಲ ಧರ್ಮಗಳು ಮತ್ತು ಧರ್ಮಗಳ ಹೊರತಾಗಿ ಕೂಡ ಇರುವ ಮಾನವೀಯ ಸಿದ್ಧಾಂತಗಳ ಆಶಯಗಳನ್ನು ಅರ್ಥ ಮಾಡಿಕೊಂಡು ಬದುಕುವುದು ಆಧುನಿಕ ಮಾನವನ ಭವಿಷ್ಯಕ್ಕೆ ಅವಶ್ಯವಾಗಿದೆ. ಹೀಗೆ ಬದುಕುವ ವಿಧಾನವೇ ಮಾನವಧರ್ಮ ಎನಿಸಿಕೊಳ್ಳುತ್ತದೆ. ಈ ಮಾನವಧರ್ಮ ಧಾರ್ಮಿಕ ಆಚರಣೆಗಳಿಂದ ಮುಕ್ತವಾಗಿ ಕೇವಲ ಮೌಲ್ಯಗಳ ಆಧಾರದ ಮೇಲೆ ಅಸ್ತಿತ್ವ ಪಡೆಯುತ್ತದೆ.
‘‘ಪೃಥ್ವಿಯಿಂದ ಸಕಲ ಜೀವರೆಲ್ಲರು ಉದ್ಭವಿಸಿದರು’’ ಎಂದು ಅಲ್ಲಮ ಪ್ರಭುಗಳು ಹೇಳಿದ್ದಾರೆ. ಸಕಲ ಜೀವಾತ್ಮರ ತಾಯಿ ಪೃಥ್ವಿಯೇ ಆಗಿದೆ. ಪೃಥ್ವಿಗೆ ಯಾರೂ ಹೊರಗಿನವರಲ್ಲ. ಮಾನವರು ಹುಟ್ಟಿದ ನಂತರ, ಅವರ ಮೂಲಕ ಎಲ್ಲ ಧರ್ಮಗಳು ಹುಟ್ಟಿವೆ. ವಿವಿಧ ಧರ್ಮಗಳಲ್ಲಿ ಹುಟ್ಟಿದ ಮಾನವರು ತಮ್ಮ ಮೂಲವನ್ನೇ ಮರೆತಿದ್ದಾರೆ. ಆದ್ದರಿಂದ ಧರ್ಮಗಳು ಹುಟ್ಟುವ ಮೊದಲು ಮಾನವರೆಲ್ಲ ಒಂದೇ ಆಗಿದ್ದರು ಎಂಬುದರ ಅರಿವಾಗುವುದು ಅವಶ್ಯವಾಗಿದೆ. ಆ ಅರಿವು ಆಚರಣೆಯಲ್ಲಿ ಬಂದಾಗ ವಿವಿಧ ಧರ್ಮಗಳಲ್ಲಿ ಹರಿದು ಹಂಚಿಹೋಗಿರುವ ಮಾನವಕುಲ ಒಂದಾಗಲು ಸಾಧ್ಯ. ಪ್ರತಿಯೊಬ್ಬ ಮನುಷ್ಯ ತಾನು ಇಷ್ಟಪಟ್ಟ ಧರ್ಮವನ್ನು ಹೊಂದಿ ಉಳಿದ ಧರ್ಮಗಳವರ ಜೊತೆ ಮತ್ತು ಯಾವುದೇ ಧರ್ಮ ಪಾಲನೆ ಮಾಡದವರ ಜೊತೆಗೂ ಕೂಡಿ ಬದುಕುವ ಕಲೆಯನ್ನು ಸಾಧಿಸಬಲ್ಲ.
ಧಾರ್ಮಿಕ ಆಚರಣೆಗಳನ್ನು ಮುಂದೆ ಮಾಡುವ ಮೂಲಕ, ಅನ್ಯ ಧರ್ಮೀಯರನ್ನು ಹೊರ ಹಾಕುವ ಸಂಸ್ಕೃತಿ ಮತ್ತು ಸ್ವಧರ್ಮ ಪಾಲನೆ ಮಾಡುತ್ತಲೇ ಎಲ್ಲ ಧರ್ಮಗಳ ಜನರನ್ನು ಒಳಗೊಳ್ಳುವ ಸಂಸ್ಕೃತಿಗಳನ್ನು ವಿಶ್ವದ ಎಲ್ಲೆಡೆ ಕಾಣುತ್ತಿದ್ದೇವೆ. ಪ್ರತೀ ಧರ್ಮದಲ್ಲಿ ಹೊರ ಹಾಕುವ ಮತ್ತು ಒಳಗೊಳ್ಳುವ ಸಂಸ್ಕೃತಿಗಳಿವೆ. ಇವು ಒಂದೇ ಧರ್ಮದ ಎರಡು ಮುಖಗಳಾಗಿವೆ. ಹೊರ ಹಾಕುವ ಸಂಸ್ಕೃತಿಗಳು ಧಾರ್ಮಿಕ ಆಚರಣೆಗಳನ್ನು ಮುಂದೆ ಮಾಡುತ್ತವೆ. ಒಳಗೊಳ್ಳುವ ಸಂಸ್ಕೃತಿಗಳು ಧರ್ಮದ ಜೀವನಮೌಲ್ಯಗಳನ್ನು ಮುಂದೆ ಮಾಡುತ್ತವೆ.
‘‘ಹಿಂದೆ ಇದ್ದ ಧರ್ಮಗಳನ್ನೆಲ್ಲ ಸ್ವೀಕರಿಸುತ್ತೇನೆ. ಮುಂದೆ ಬರುವುದನ್ನು ಸ್ವೀಕರಿಸುವುದಕ್ಕೆ ಹೃದಯ ತೆರೆದಿರುತ್ತೇನೆ. ಮಸೀದಿಗೆ ಹೋಗುತ್ತೇನೆ. ಚರ್ಚಿನಲ್ಲಿ ಶಿಲುಬೆಯ ಎದುರು ತಲೆಬಾಗುತ್ತೇನೆ. ಬುದ್ಧ ವಿಹಾರಕ್ಕೆ ಹೋಗಿ ಬೌದ್ಧ ಧರ್ಮದ ತತ್ವಗಳಿಗೆ ಶರಣೆನ್ನುತ್ತೇನೆ. ಹಿಂದೂಗಳೊಂದಿಗೆ ಅರಣ್ಯಕ್ಕೆ ಹೋಗಿ ಎಲ್ಲೆಲ್ಲಿಯೂ ಬೆಳಗುತ್ತಿರುವ ಆ ಪರಂಜ್ಯೋತಿಯ ದರ್ಶನ ಧ್ಯಾನ ಮಗ್ನನಾಗುತ್ತೇನೆ’’ ಎಂದು ಹೇಳುವ ಮೂಲಕ ಸ್ವಾಮಿ ವಿವೇಕಾನಂದರು ಮಾನವಧರ್ಮದ ಭಾಷ್ಯ ಬರೆದಿದ್ದಾರೆ. ಆ ಮೂಲಕ ಧರ್ಮಗಳ ಸಾಂಘಿಕ ಆಚರಣೆಯನ್ನು ಮೀರಿದ ವಿಶ್ವಮಾನ್ಯ ಮೌಲ್ಯಗಳ ಕಡೆಗೆ ನಮ್ಮ ಗಮನವನ್ನು ಹರಿಸುತ್ತಾರೆ. ಮುಂದೆ ಬರಬಹುದಾದ ಧರ್ಮಗಳಲ್ಲಿನ ಮೌಲ್ಯಗಳನ್ನು ಸ್ವೀಕರಿಸುವುದಕ್ಕೂ ಕಾತರರಾಗಿದ್ದಾರೆ. ಮಾನವ ಧರ್ಮ ನಿರಂತರವಾಗಿ ರೂಪುಗೊಳ್ಳುತ್ತ ಹೋಗುವ ಬಗೆ ಇದು.
ಮಾನವಧರ್ಮದಲ್ಲಿ ಧಾರ್ಮಿಕ ಆಚರಣೆಗಳು ಕೇವಲ ಸಂಕೇತವಾಗಿ ಉಳಿಯುತ್ತವೆ. ಆಯಾ ಧರ್ಮದವರು ಅವುಗಳನ್ನು ಆಚರಿಸಬಹುದು. ಆದರೆ ಎಲ್ಲ ಧರ್ಮಗಳಲ್ಲಿನ ವಿಶ್ವಮಾನ್ಯ ಮೌಲ್ಯಗಳನ್ನು ಒಂದಾಗಿಸಿಕೊಂಡು ವೈಚಾರಿಕ ಔನತ್ಯ ಸಾಧಿಸುವುದೇ ಮಾನವಧರ್ಮದ ಮೂಲ ಉದ್ದೇಶವಾಗಿದೆ. ವೈಜ್ಞಾನಿಕ ಮನೋಭಾವದ ಹಿನ್ನೆಲೆಯಲ್ಲಿ ಜೀವಕಾರುಣ್ಯದಿಂದ ಕೂಡಿದ ಸರ್ವಧರ್ಮಗಳ ಮೌಲ್ಯಗಳ ಸಮ್ಮಿಲನವೇ ಮಾನವಧರ್ಮ.
‘‘ದಯವಿಲ್ಲದ ಧರ್ಮ ಅದಾವುದಯ್ಯಾ?’’ ಎಂದು ಬಸವಣ್ಣನವರು ಪ್ರಶ್ನಿಸಿದ್ದಾರೆ. ಅವರ ಈ ಪ್ರಶ್ನೆಯಲ್ಲಿ ಆಳವಾದ ಚಿಂತನೆ ಇದೆ. ಧರ್ಮಗಳು ದಯೆಯನ್ನು ಕಳೆದುಕೊಂಡರೆ ಕೋಮುವಾದಿ ಕೊಲೆಗಡುಕರ ಕೈಯಲ್ಲಿನ ಖಡ್ಗಗಳಾಗುತ್ತವೆ. ಧರ್ಮದ ಹೆಸರಿನಲ್ಲಿ ಉಗ್ರಗಾಮಿಗಳು ಹುಟ್ಟತೊಡಗುತ್ತಾರೆ. ಸಕಲ ಜೀವಾತ್ಮರಿಗೆ ಲೇಸನ್ನು ಬಯಸುವುದಕ್ಕೆ ಬಸವಣ್ಣನವರು ದಯೆ ಎಂದು ಕರೆದಿದ್ದಾರೆ. ಅವರು ವಿಶ್ವಪ್ರೇಮವನ್ನು ದಯೆಯ ರೂಪದಲ್ಲಿ ಕಂಡಿದ್ದಾರೆ. ಈ ವಿಶ್ವಪ್ರೇಮಕ್ಕೆ ಸೂಫಿಗಳು ‘ಇಷ್ಕ್’ ಎಂದು ಕರೆದಿದ್ದಾರೆ. ಜೈನರಲ್ಲಿ ಅದು ‘ಅಹಿಂಸೆ’ಯ ಪರಿಕಲ್ಪನೆಯಲ್ಲಿ ಇದೆ. ‘ಅಹಿಂಸಾ ಪರಮೋ ಧರ್ಮಃ’ ಅಂದರೆ ಅಹಿಂಸೆಯೆ ಪರಮ ಧರ್ಮ ಎಂದು ಜೈನ ಧರ್ಮ ಹೇಳುತ್ತದೆ. ಇದೇ ದಯೆ ಬೌದ್ಧರಲ್ಲಿ ‘ಕರುಣಾ ಶೀಲ ಮೈತ್ರಿ’ಯ ರೂಪದಲ್ಲಿದೆ.
‘‘ಇವನಾರವ ಇವನಾರವ ಇವನಾರವನೆಂದೆನಿಸದಿರಯ್ಯಾ. ಇವ ನಮ್ಮವ ಇವ ನಮ್ಮವ ಇವ ನಮ್ಮವನು ಎಂದೆನಿಸಯ್ಯಾ’’ ಎಂದು ಬಸವಣ್ಣನವರು ಹೇಳುವ ಮೂಲಕ ಒಳಗೊಳ್ಳುವ ಸಂಸ್ಕೃತಿಯನ್ನು ಎತ್ತಿ ಹಿಡಿದಿದ್ದಾರೆ. ಜಾತಿ ಮತ್ತು ಅಸ್ಪಶ್ಯತೆ ಆಚರಣೆ, ಅನ್ಯ ಧರ್ಮೀಯರ ಬಗ್ಗೆ ತಿರಸ್ಕಾರ, ಆಹಾರ ಸಂಸ್ಕೃತಿಯನ್ನು ಎತ್ತಿ ತೋರಿಸುವುದು ಮುಂತಾದವು ‘ಇವನಾರವ’ ಎನ್ನುವ ಹೊರ ಹಾಕುವ ಸಂಸ್ಕೃತಿಗೆ ಸಂಬಂಧಪಟ್ಟವುಗಳಾಗಿವೆ. ಆದರೆ ‘ಇವ ನಮ್ಮವ’ ಎನ್ನುವ ಸಂಸ್ಕೃತಿ ಇದಕ್ಕೆ ವಿರುದ್ಧವಾಗಿರುತ್ತದೆ. ಅದು ಎಲ್ಲರನ್ನೂ ಒಳಗೊಳ್ಳುವುದನ್ನು ಕಲಿಸುತ್ತದೆ. ಅದು ತನ್ನ ಒಳಗೊಳ್ಳುವ ಧರ್ಮದ ಜೀವನಮೌಲ್ಯಗಳನ್ನು ಎತ್ತಿ ಹಿಡಿಯುವುದರ ಜೊತೆಗೆ ಇತರ ಧರ್ಮಗಳ ಜೀವನಮೌಲ್ಯಗಳನ್ನು ಗೌರವಿಸುತ್ತದೆ. ಇಂಥ ಅರಿವಿನ ಕ್ರಿಯೆಯ ಮೂಲಕವೇ ರೂಪುಗೊಳ್ಳುವ ಮಾನವಧರ್ಮ ವಿಸ್ತಾರಗೊಳ್ಳುತ್ತ ತನ್ನ ಅಸ್ತಿತ್ವವನ್ನು ವಿಶ್ವಮಯವಾಗಿಸುತ್ತದೆ.
‘‘ಮನ ನೋಯಿಸದವನೆ, ಒಬ್ಬರ ಘಾತವ ಮಾಡದವನೆ ಪರಮ ಪಾವನ’’ ಎಂದು ಸಿದ್ಧರಾಮ ತಿಳಿಸಿದ್ದಾರೆ. ‘‘ನಲ್ಮೆಯ ಒಂದು ಸವಿನುಡಿ ಹಾಗೂ ಕ್ಷಮೆಯು ದಾನ ಧರ್ಮಕ್ಕಿಂತ ಉತ್ತಮ’’ ಎಂದು ಪವಿತ್ರ ಕುರ್ಆನ್ ತಿಳಿಸಿದೆ. ‘‘ಮನಸ್ಸನ್ನು ನಿರ್ಮಲವಾಗಿಟ್ಟುಕೊಳ್ಳುವುದೇ ಧರ್ಮ’’ ಎಂದು ತಿರುವಳ್ಳುವರ್ ಹೇಳಿದ್ದಾರೆ. ‘‘ಕರುಣೆಯೆ ನಿಜ ಧರ್ಮ, ತಿಳಿದರೆ ಸಾಕು. ಪ್ರೀತಿಯೆ ನಿಜ ಪೂಜೆ ಈ ಭೇದವ್ಯಾಕೊ. ಸ್ನೇಹದಿ ನೀ ಸನಿಹ ಬರಲಿಲ್ಲವ್ಯಾಕೊ, ಮೊದಲಿಗೆ ಮಾನವ ನೀನಾಗು ಸಾಕು’’ ಎಂದು ಗುರು ಖಾದರಿ ಪೀರಾ ಅವರು ತಿಳಿಸಿದ್ದಾರೆ. ‘‘ನಿಮ್ಮ ವಿಜಯವು ಮಹಿಳೆಯರ ಮತ್ತು ಮಕ್ಕಳ ರಕ್ತದಿಂದ ಕಳಂಕಿತವಾಗದಿರಲಿ, ಮರಗಳನ್ನು ನಾಶ ಮಾಡದಿರಿ, ಹೊಲಗಳನ್ನು ಸುಡದಿರಿ, ಫಲಭರಿತ ಮರಗಳನ್ನು ಕಡಿಯದಿರಿ, ಸಾಕು ಪ್ರಾಣಿಗಳಿಗೆ ಕಿರುಕುಳ ಕೊಡದಿರಿ, ಕೊಟ್ಟ ಮಾತಿಗೆ ಮತ್ತು ಆಶ್ವಾಸನೆಗೆ ಭಂಗ ತರದಿರಿ. ಧಾರ್ಮಿಕ ವ್ಯಕ್ತಿಗಳು ತಮ್ಮದೇ ಆದ ವಿಧಾನದಲ್ಲಿ ದೇವಮಾರ್ಗದಲ್ಲಿ ಸೇವೆ ಸಲ್ಲಿಸುತ್ತಿರಬಹುದು. ಅವರನ್ನು ಅವರಷ್ಟಕ್ಕೆ ಬಿಟ್ಟುಬಿಡಿ. ಅವರನ್ನು ವಧಿಸದಿರಿ. ಅವರ ಮಠ ಮಂದಿರಗಳನ್ನು ಹಾಳುಗೆಡವದಿರಿ’’ ಎಂದು ಇಸ್ಲಾಂ ಧರ್ಮದ ಖಲೀಫಾ ಹಝರತ್ ಅಬೂಬಕರ್, ಸಿರಿಯಾಕ್ಕೆ ಕಳಿಸಿದ ಸೇನಾ ತುಕಡಿಗೆ ನೀಡಿದ ಆದೇಶ ಇದಾಗಿದೆ. ಈ ಎಲ್ಲ ಚಿಂತನೆಗಳ ಹಿಂದೆ ಜೀವಕಾರುಣ್ಯವು ಅಡಕವಾಗಿದೆ. ಹೀಗೆ ಮಾನವಧರ್ಮದ ಅಡಿಪಾಯವಾಗಿ ಅಂತಃಕರಣವೇ ಇದೆ.
ಪರ ವಿಚಾರ ಪರ ಧರ್ಮ
‘‘ಕಸವರಮೆಂಬುದು ನೆರೆ ಸೈರಿಸಲಾರ್ಪೊಡೆ ಪರ ವಿಚಾರಮಂ ಪರ ಧರ್ಮಮುಮಂ’’. ಅನ್ಯರ ವಿಚಾರವನ್ನು ಮತ್ತು ಧರ್ಮವನ್ನು ಸಂಪೂರ್ಣ ಸಹನೆಯಿಂದ ಕಾಣಲು ಸಾಧ್ಯವಾದರೆ ಆ ಮನಸ್ಸೇ ಪರಿಶುದ್ಧ ಬಂಗಾರ ಎಂದು ಕವಿರಾಜಮಾರ್ಗದ ಶ್ರೀವಿಜಯ ಹೇಳಿದ್ದಾನೆ. ಹೀಗೆ ಸಹನೆಯಿಂದ ಕಾಣಲು ಸಾಧ್ಯವಾಗುವುದು ಆಯಾ ಧರ್ಮಗಳಲ್ಲಿನ ಮೌಲ್ಯಗಳನ್ನು ಧರ್ಮದವರು ಪಾಲಿಸಲು ಸಾಧ್ಯವಾದಾಗ ಮತ್ತು ಹೊರಗಿನವರು ಆ ಮೌಲ್ಯಗಳನ್ನು ಅರ್ಥೈಸಿಕೊಳ್ಳುವ ಪ್ರಬುದ್ಧತೆ ಇದ್ದಾಗ.
‘‘ಧರ್ಮ ಯೋ ಬಾಧತೇ ಧರ್ಮಃ ನ ಧರ್ಮಃ ಕುಧರ್ಮತತ್|
ಅವಿರೋಧಾತ್ ತು ಯೋ ಧರ್ಮಃ ಸಧರ್ಮಃ ಸತ್ಯವಿಕ್ರಮಃ॥’’
ಒಂದು ಧರ್ಮ ಮತ್ತೊಂದು ಧರ್ಮಕ್ಕೆ ಬಾಧಕವಾಗಬಾರದು. ಹಾಗಾದರೆ ಅದು ಧರ್ಮವೇ ಅಲ್ಲ. ಧರ್ಮಗಳಲ್ಲಿ ವಿರೋಧ ಇಲ್ಲದಿರುವುದೇ ಸದ್ಧರ್ಮ ಎಂದು ಮಹಾಭಾರತದಲ್ಲಿ ಹೇಳಲಾಗಿದೆ. ಧರ್ಮಗಳಲ್ಲಿನ ಮೌಲ್ಯಗಳನ್ನು ಅರ್ಥ ಮಾಡಿಕೊಂಡರೆ ಒಂದು ಧರ್ಮ ಇನ್ನೊಂದು ಧರ್ಮಕ್ಕೆ ಬಾಧಕವಾಗಲಾರದು. ಧರ್ಮಗಳು ಬೇರೆ ಬೇರೆಯಾದರೂ ಆಯಾ ಧರ್ಮಗಳ ಜೀವನಮೌಲ್ಯಗಳು ಒಂದಕ್ಕೊಂದು ಬಾಧಕವಾಗಲಾರವು. ಆಯಾ ಧರ್ಮಗಳಲ್ಲಿನ ಸಾಂಪ್ರದಾಯಿಕ ಆಚರಣೆಗಳೇ ಮುನ್ನೆಲೆಗೆ ಬಂದರೆ ಒಂದಕ್ಕೊಂದು ತಾಕಲಾಟವಾಗಿ ಕುಧರ್ಮದ ಸ್ಥಾನದಲ್ಲಿ ನಿಲ್ಲುತ್ತವೆ. ಅಂಥ ಗಳಿಗೆಯಲ್ಲೇ ಕೋಮುವಾದದ ಜನನವಾಗುವುದು. ಕೊಲೆ, ಸುಲಿಗೆ, ಜನಾಂಗ ಹತ್ಯೆಗಳಾಗುವವು. ಆನಂತರ ಯುದ್ಧವೂ ನಡೆದು ಧರ್ಮಯುದ್ಧ ಎಂದು ಕರೆಯಿಸಿಕೊಂಡು ಧರ್ಮಗಳನ್ನು ಅವಮಾನಿಸಲಾಗುವುದು. ಭಾರತದಲ್ಲಿ 19ನೇ ಶತಮಾನದಲ್ಲಿ ಇಂಥ ದುರಂತ ಸ್ಥಿತಿಯನ್ನು ಕಂಡ ಸ್ವಾಮಿ ವಿವೇಕಾನಂದರು, ‘‘ಸತ್ಯ ನನ್ನ ದೇವರು, ವಿಶ್ವ ನನ್ನ ದೇಶ. ವಿಭಿನ್ನ ಧರ್ಮಗಳು ಒಂದೇ ಧರ್ಮದ ಅನಂತ ರೂಪಗಳೆಂಬುದನ್ನು ಕಲಿಸಬೇಕು. ಇದರಿಂದ ಪ್ರತಿಯೊಬ್ಬನು ತನಗೆ ಯಾವುದು ಉತ್ತಮ ಧರ್ಮವೋ ಅದನ್ನು ಅನುಸರಿಸಬಹುದು’’ ಎಂದು ತಿಳಿಸಿದ್ದಾರೆ. ‘‘ನಮ್ಮ ಮಾತೃಭೂಮಿಯಲ್ಲಿ ಹಿಂದೂ ಮತ್ತು ಮುಸಲ್ಮಾನ ಧರ್ಮಗಳೆರಡೂ ಮಿಲನವಾಗಬೇಕು. ವೇದಾಂತದ ಮಿದುಳು, ಇಸ್ಲಾಮಿನ ದೇಹ; ಇದೊಂದೇ ನಮ್ಮ ಅಭಿವೃದ್ಧಿಗೆ ದಾರಿ’’ ಎಂದು ಸಾರಿದ್ದಾರೆ. ಆದರೆ ಭಾರತೀಯರಲ್ಲಿ ಕೋಮುವಾದ ಇನ್ನೂ ಜೀವಂತವಾಗಿದೆ. ತಮ್ಮ ತಮ್ಮ ಧರ್ಮಗಳ ಮಹತ್ವವನ್ನು ಅರಿಯದವರು ಬೇರೆಯವರ ಧರ್ಮಗಳ ಮಹತ್ವ ಅರಿಯಲು ಸಾಧ್ಯವಿಲ್ಲ. ಇಂಥ ವಿಷಮ ವಾತಾವರಣ ಭಾರತದಲ್ಲಿ ಸೃಷ್ಟಿಯಾಗುತ್ತಿದೆ. ಇಲ್ಲಿ ಮೂಲಭೂತವಾದ ಮತ್ತು ಕೋಮುವಾದಗಳೇ ರಾಜಕೀಯ ಅಸ್ತ್ರವಾಗುತ್ತಿದೆ. ‘‘ಆ ನೋ ಭದ್ರಾಃ ಕೃತವೋ ಎಂತು ವಿಶ್ವತಃ’’ ಅಂದರೆ ಉದಾತ್ತ ವಿಚಾರಗಳು ನಮಗೆ ಎಲ್ಲೆಡೆಯಿಂದ ಬರಲಿ ಎಂಬ ಋಗ್ವೇದ ಆಶಯ ಕೇವಲ ಆಶಯವಾಗಿಯೇ ಉಳಿದಿದೆ.
‘‘ಓಂ ಸಹನಾವವತು ಸಹ ನೌ ಭುನಕ್ತು
ಸಹ ವೀರ್ಯಂ ಕರವಾವ ಹೈ
ತೇಜಸ್ವಿನಾವಧೀತಮಸ್ತು | ಮಾ ವಿದ್ವಿಷಾವ ಹೈಃ
ಓಂ ಶಾಂತಿಃ ಶಾಂತಿಃ ಶಾಂತಿಃ ॥’’
‘‘ದೇವರು ನಮ್ಮನ್ನು ರಕ್ಷಿಸಲಿ, ನಾವು ಕೂಡಿ ಉಣ್ಣೋಣ
ನಾವು ಸಮರ್ಥರಾಗೋಣ. ನಾವು ತೇಜಸ್ವಿಗಳಾಗೋಣ. ನಾವು ದ್ವೇಷ ತೊರೆಯೋಣ. ಓಂ ಶಾಂತಿಃ ಶಾಂತಿಃ ಶಾಂತಿಃ’’ ಎಂದು ತೈತ್ತಿರೀಯ ಉಪನಿಷತ್ ಸಾರುತ್ತದೆ. ದ್ವೇಷ ತೊರೆದು ಕೂಡಿ ಬದುಕುವುದು, ಕೂಡಿ ಉಣ್ಣುವುದು ಮತ್ತು ಮಾನವಘನತೆಯೊಂದಿಗೆ ತೇಜಸ್ವಿಗಳಾಗಿ ಬದುಕುವುದು ಮಾನವಧರ್ಮದ ಲಕ್ಷಣವೇ ಆಗಿದೆ.
‘‘ಒಬ್ಬ ಹಿಂದೂ ಇನ್ನೂ ಉತ್ತಮವಾದ ಹಿಂದೂ ಆಗುವಂತೆ, ಒಬ್ಬ ಮುಸ್ಲಿಮ್ ಇನ್ನೂ ಉತ್ತಮವಾದ ಮುಸ್ಲಿಮ್ ಆಗುವಂತೆ, ಒಬ್ಬ ಕ್ರೈಸ್ತ ಇನ್ನೂ ಉತ್ತಮವಾದ ಕ್ರೈಸ್ತ ಆಗುವಂತೆ ನಾವು ನೆರವಾಗಬೇಕು’’ ಎಂದು ಗಾಂಧೀಜಿ ತಿಳಿಸಿದ್ದಾರೆ. ನಾವು ಮಾನವ ಧರ್ಮೀಯರಾದಾಗ ಮಾತ್ರ ಹೀಗೆ ನೆರವಾಗಲು ಸಾಧ್ಯವಾಗುವುದು. ಮೊದಲು ಮಾನವರಾದಾಗಲೇ ಒಳ್ಳೆಯ ಹಿಂದೂ ಅಥವಾ ಮುಸ್ಲಿಮನಾಗಲು ಸಾಧ್ಯ. ‘‘ಭಗವಂತನ ದೃಷ್ಟಿಯಲ್ಲಿ ಹಿಂದೂ ಮುಸಲ್ಮಾನ ಎಂಬ ಭೇದ ಇದೆಯೆ? ಅಲ್ಲಾಹನು ಎಲ್ಲರನ್ನೂ ಸಮಾನ ದೃಷ್ಟಿಯಲ್ಲಿಟ್ಟು ಸೃಷ್ಟಿಸಿದ್ದಾನೆ. ಎಲ್ಲರನ್ನೂ ಪ್ರೀತಿಸಿದಾಗ ಮಾತ್ರ ನಾವು ಆತನನ್ನು ಪ್ರೀತಿಸಿದಂತಾಗುತ್ತದೆ’’ ಎಂದು ಹಝರತ್ ಖ್ವಾಜಾ ಬಂದೇ ನವಾಝ್ ಹೇಳಿದ್ದಾರೆ. ‘‘ಧರ್ಮ ಎಂಬುದು ಮಾತಿನ ಮಾಲೆ ಅಲ್ಲ. ಯಾವನು ಎಲ್ಲರನ್ನು ಸಮನಾಗಿ ಕಾಣುವನೋ ಅವನೇ ನಿಜವಾದ ಧರ್ಮವಂತ. ... ಈ ಲೋಕದ ಮಾಲಿನ್ಯದ ಮಧ್ಯೆ ನಿರ್ಮಲವಾದುದನ್ನು ಸಾಧಿಸುವುದೇ ಧರ್ಮ. ಹಿಂದೂ ಇಲ್ಲ, ಮುಸ್ಲಿಮ್ ಇಲ್ಲ, ಇರುವುದು ಕೇವಲ ಮನುಷ್ಯ.’’ ಎಂದು ಗುರುನಾನಕರು ತಿಳಿಸಿದ್ದಾರೆ. ‘‘ಒಂದೇ ಜಾತಿ ಒಂದೇ ಧರ್ಮ ಒಬ್ಬನೇ ದೇವರು’’ ಎಂದು ನಾರಾಯಣ ಗುರು ಹೇಳಿದ್ದಾರೆ. ‘‘ಎಲ್ಲರ ದೇವರು ಒಬ್ಬನೇ, ಒಂದಾಗಿರಿ ಪವಿತ್ರವಾಗಿರಿ’’ ಎಂದು ಶಿರಡಿ ಸಾಯಿಬಾಬಾ ಅವರು ತಿಳಿಸಿದ್ದಾರೆ.
‘‘ಓಂ ಸರ್ವೇ ಜನಾ ಸುಖಿನೋ ಭವಂತು |
ಸರ್ವೇ ಸಂತು ನಿರಾಮಯಾ |
ಸರ್ವೇ ಭದ್ರಾನಿ ಪಶ್ಯಂತು |
ಮಾ ಕಶ್ವಿತ್ ದುಃಖ ಭಾಗ್ ಭವೇತ್ |
ಲೋಕಾಃ ಸಮಸ್ತಾಃ ಸುಖಿನೋ ಭವಂತು ॥’’
ಸರ್ವ ಜನರು ಸುಖವಾಗಿ ಬಾಳಲಿ, ಸರ್ವರೂ ರೋಗಗಳಿಂದ ಮುಕ್ತರಾಗಲಿ, ಸರ್ವರಿಗೂ ಮಂಗಲವಾಗಲಿ, ಯಾರೂ ದುಃಖದಿಂದ ಬಳಲದಿರಲಿ, ಲೋಕ ಆನಂದಮಯವಾಗಿರಲಿ ಎಂಬುದು ಮಂಗಲಮಂತ್ರವಾಗಿದೆ. ಇದುವೇ ಮಾನವಧರ್ಮದ ಮಂಗಲ ಮಂತ್ರ.