ಜಪಾನ್‌ನಲ್ಲಿ ಸಾಧ್ಯವಾದುದು ನಮ್ಮಲ್ಲೇಕೆ ಆಗುತ್ತಿಲ್ಲ?

ಜಪಾನಿನಲ್ಲಿ ಕಾರ್ಖಾನೆಗಳು ಪರಿಸರ ವಿರೋಧಿ ನಿಲುವು ಹೊಂದಿದರೆ, ಯಾವುದೇ ತರಹದ ಮಾಲಿನ್ಯಕಾರಕ ಅನಿಲಗಳನ್ನು ಅಥವಾ ತ್ಯಾಜ್ಯಗಳನ್ನು ಹೊರ ಸೂಸಿದರೆ ಕಂಪೆನಿಯ ಮಾಲಕರ ಹೆಸರುಗಳನ್ನು ಹಾಗೂ ಉತ್ಪಾದನೆಗಳ ಹೆಸರುಗಳನ್ನು ಸಾರ್ವಜನಿಕವಾಗಿ ಜಾಹೀರಾತು ಮೂಲಕ ಬಹಿರಂಗಪಡಿಸುತ್ತಾರೆ. ಜನರು ಸಾರ್ವಜನಿಕವಾಗಿ ಆ ಉತ್ಪಾದನೆಯನ್ನು ಬಹಿಷ್ಕರಿಸುತ್ತಾರೆ. ಇದರಿಂದಾಗಿ ಅವರ ಉತ್ಪಾದನೆಯ ಮೇಲೆ, ಕಂಪೆನಿಯ ಹೆಸರಿನ ಮೇಲೆ, ಬ್ರ್ಯಾಂಡ್ ಗೌರವದ ಮೇಲೆ ನೇರ ಹೊಡೆತ ಬೀಳುತ್ತದೆ.

Update: 2024-11-06 06:49 GMT

ಎರಡನೇ ಮಹಾಯುದ್ಧದ ಕಾಲವದು. ಜರ್ಮನಿಯ ಮಿತ್ರ ರಾಷ್ಟ್ರಗಳು ಮತ್ತು ಇಂಗ್ಲೆಂಡ್, ಅಮೆರಿಕದ ಮಿತ್ರ ರಾಷ್ಟ್ರಗಳ ನಡುವಿನ ರಕ್ತದಾಟ ಆರಂಭವಾಗಿತ್ತು. ಈ ಸಂದರ್ಭದಲ್ಲಿ ಇಂಧನಕ್ಕೆ ಬಹುಮುಖ್ಯ ಬೇಡಿಕೆ. ಜಪಾನ್ ಕೂಡ ಜರ್ಮನಿಯ ಯುದ್ಧ ಮಿತ್ರನಾಗಿ ಎರಡನೇ ಮಹಾಯುದ್ಧಕ್ಕೆ ಧುಮುಕಿತು. ಈ ಸಂದರ್ಭದಲ್ಲಿ ಪೆಟ್ರೋಲ್ ಕೆಮಿಕಲ್ಸ್‌ಗೆ ಇಂಧನದ ಉತ್ಪಾದನೆಗೆ ತನ್ನ ಶಕ್ತಿ ಮೀರಿ ಪ್ರಯತ್ನಿಸಿ ಪ್ರೋತ್ಸಾಹಿಸಿತು. ಹೀಗಾಗಿ ಮಿಯಾ ಪ್ರಿಪೆಕ್ಚರ್ (ರಾಜ್ಯ)ನ ಯಕೋಚಿ ನಗರದಲ್ಲಿದ್ದ ಪೆಟ್ರೋಲ್ ಕೆಮಿಕಲ್ ಕಂಪೆನಿಗೆ ಯಾವುದೇ ಅಡೆತಡೆಗಳಿಲ್ಲದೆ ಇಂಧನ ಉತ್ಪಾದನೆಯೇ ಮೂಲ ಉದ್ದೇಶವಾಯಿತು.

ಎರಡನೇ ಮಹಾಯುದ್ಧದಲ್ಲಿ ಜಪಾನ್ ಮಿತ್ರಕೂಟ ಸೋತ ನಂತರ 1950ರಿಂದ 1960ರ ವೇಳೆಗೆ ಜಪಾನ್ ತನ್ನನ್ನು ತಾನು ಮತ್ತೆ ಆರ್ಥಿಕವಾಗಿ ಬಲಿಷ್ಠಗೊಳಿಸಿಕೊಳ್ಳಲು ವೇಗವಾಗಿ ತಂತ್ರಜ್ಞಾನದ ಮೊರೆ ಹೋಯಿತು. ಕೈಗಾರಿಕಾ ಕ್ರಾಂತಿಯ ಮೂಲಕ ದೇಶವನ್ನು ಮರು ಕಟ್ಟುವ ಉದ್ದೇಶಕ್ಕಾಗಿ ಕಾರ್ಖಾನೆ ಮತ್ತು ಮೂಲಭೂತ ಸೌಕರ್ಯಗಳನ್ನು ನಿರ್ಮಿಸುವುದಕ್ಕಾಗಿ ಸಂಚಾರ ಹೆಚ್ಚಾಯಿತು. ಪೆಟ್ರೋಲ್ ಕೆಮಿಕಲ್ ಕಾರ್ಖಾನೆಗಳು ಪರಿಸರ ವಿರೋಧಿ ಅನಿಲಗಳಾದ ಸಲ್ಫರ್ ಡೈ ಆಕ್ಸೈಡ್, ಕಾರ್ಬನ್ ಡೈ ಆಕ್ಸೈಡ್, ನೈಟ್ರೋಜನ್ ಡೈ ಆಕ್ಸೈಡ್ ಹೀಗೆ ಇನ್ನಿತರ ಮಾಲಿನ್ಯಕಾರಕಗಳನ್ನು ಮಿತಿ ಮೀರಿ ಹೊರ ಸೂಸಿದವು. ಇದರಿಂದಾಗಿ ಯಕೋಚಿ ನಗರವು ವಾಯು ಮಾಲಿನ್ಯದ ಗೂಡಾಯಿತು.

ಬಹುತೇಕ ರೈತರು ಮೀನುಗಾರಿಕೆ ಮೇಲೆ ಅವಲಂಬನೆಗೊಂಡಿದ್ದರು. ಕೆಮಿಕಲ್ ಕಾರ್ಖಾನೆಗಳು ಹೊರಹಾಕುತ್ತಿದ್ದ ತ್ಯಾಜ್ಯವು ಪೆಸಿಫಿಕ್ ಸಮುದ್ರ ಸೇರಿ ಜಲಚರ ಜೀವಗಳಿಗೆ ವಿಷವಾಯಿತು. ಮೀನುಗಾರರ ಬದುಕಿಗೆ ಕುತ್ತಾಯಿತು. ಆರೋಗ್ಯವಾಗಿದ್ದ ಜನರು ಕೆಮ್ಮತೊಡಗಿದರು. ಆ ಕೆಮ್ಮು ನಗರದ ಜನರನ್ನು ಅಸ್ತಮಾ ಆಗಿ ಕಾಡತೊಡಗಿತು. ಜನರ ಸುಂದರ ಬದುಕು ನರಕವಾಗಲು ಆರಂಭವಾಯಿತು. ಜನರು ಹೃದಯ ಸಂಬಂಧಿ, ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಹಾಗೂ ಇನ್ನಿತರ ಕಾಯಿಲೆಗಳಿಗೆ ತುತ್ತಾಗ ತೊಡಗಿದರು. ಕಾರ್ಖಾನೆಗಳು ಹೊರಸೂಸುವ ಹೊಗೆಯು ಕಪ್ಪು ಮೋಡವಾಗಿ ನೀಲಿ ಆಕಾಶ ಕಾಣದಂತೆ ಪರದೆ ಹಾಕಿತು. ಯಕೋಚಿ ನಗರವು ಕೊಳಕು ನಗರ, ಜಪಾನಿನ ದೊಡ್ಡ ಅಸ್ತಮಾ ನಗರವೆಂದು ಕುಖ್ಯಾತಿ ಪಡೆಯಿತು. ಮಾಲಿನ್ಯದಿಂದ ಹರಡುವ ದೊಡ್ಡ ನಾಲ್ಕು ಕಾಯಿಲೆಗಳಲ್ಲಿ ಇದೊಂದಾಗಿತ್ತು. ಅಲ್ಲಿನ ಅಸ್ತಮಾ ರೋಗವನ್ನು ‘ಯಕೋಚಿ ಅಸ್ತಮಾ’ ರೋಗವೆಂದು ಕರೆಯ ತೊಡಗಿದರು.

ನಾವು ಯಕೋಚಿ ಮಾಲಿನ್ಯ ಮ್ಯೂಸಿಯಂಗೆ ಭೇಟಿ ನೀಡಿದ್ದೆವು. ಅಲ್ಲಿ ಶಾಲಾ ಮಕ್ಕಳಿಗೆ ಪ್ರತಿದಿನ ಬಾಯಿ ಮುಕ್ಕಳಿಸಲು (ಗಾರ್ಗಲಿಂಗ್) ನಾಳದ ವ್ಯವಸ್ಥೆ ಇತ್ತು. ಅಷ್ಟೊಂದು ಕೆಟ್ಟದಾಗಿ ವಾಯು ಮಾಲಿನ್ಯ ಪರಿಣಾಮ ಬೀರಿತ್ತು.

ಸ್ಥಳೀಯ ಪರಿಸರವಾದಿಗಳು ಕೆಮಿಕಲ್ ಕಾರ್ಖಾನೆಗಳ ವಿರುದ್ಧ ಮತ್ತು ಸರಕಾರದ ವಿರುದ್ಧ ಘೋಷಣೆ ಕೂಗುತ್ತಾ ಬೀದಿಗಿಳಿದರು. ಸರಕಾರವು ಜನರ ಮಾತಿಗೆ ಕಿವಿಗೊಡದೆ ಬಂಡವಾಳಶಾಹಿ ಕಂಪೆನಿಗಳ ಪರವಾಗಿಯೇ ನಿಂತಿತು. 1970ರ ದಶಕದಲ್ಲಿ 3 ಸಾವಿರ ಇದ್ದ ಪರಿಸರ ಹೋರಾಟಗಾರರ ಸಂಖ್ಯೆ 1980ರ ಹೊತ್ತಿಗೆ ಸುಮಾರು 1 ಲಕ್ಷ 35 ಸಾವಿರ ಜನರು ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. 1980ರ ನಂತರ ಪರಿಸರವಾದಿಗಳ ಸಂಖ್ಯೆ ಕುಸಿದು ಮತ್ತೆ ಹೆಚ್ಚಾಗ ತೊಡಗಿತು. ಹೋರಾಟದಲ್ಲಿ ವಿದ್ಯಾರ್ಥಿಗಳು, ಯುವಜನರು ಮತ್ತು ಮಹಿಳೆಯರ ಪಾತ್ರ ಬಹು ಮುಖ್ಯವಾಗಿತ್ತು.

ಜನರು ಒಂದು ಕಡೆ ಬೀದಿ ಹೋರಾಟ ಇನ್ನೊಂದೆಡೆ ಕಾನೂನು ಹೋರಾಟಕ್ಕೆ ಮುಂದಾದರು. 1967 ಸೆಪ್ಟಂಬರ್‌ನಲ್ಲಿ, ಐಸೊಜು ನಿವಾಸಿಗಳಾಗಿರುವ ಒಂಭತ್ತು ಮಾಲಿನ್ಯ ಸಂತ್ರಸ್ತರು ಪೆಟ್ರೋಕೆಮಿಕಲ್ ಕಾಂಪ್ಲೆಕ್ಸ್ ಒಂದನೇ ಘಟಕದಲ್ಲಿರುವ ಆರು ಕಂಪೆನಿಗಳ ವಿರುದ್ಧ ಪ್ರಕರಣವನ್ನು ದಾಖಲಿಸಿದರು.

ಜಪಾನಿನಾದ್ಯಂತ ತೀವ್ರವಾದ ಪರಿಸರ ಮಾಲಿನ್ಯದ ಸಮಯದಲ್ಲಿ ಮಾಲಿನ್ಯದ ಸಂತ್ರಸ್ತರು ದಾಖಲಿಸಿದ ಮೊದಲ ಪ್ರಕರಣವಾಗಿ ಯಕೋಚಿ ವಾಯುಮಾಲಿನ್ಯ ಮೊಕದ್ದಮೆಯು ದೇಶಾದ್ಯಂತ ಹೆಚ್ಚು ಗಮನ ಸೆಳೆಯಿತು. ಯಾಕೊಹಾಮ, ಹಿರೋಶಿಮಾ ಮುಂತಾದ ವಿಶ್ವವಿದ್ಯಾನಿಲಯಗಳು ವಿದ್ಯಾರ್ಥಿಗಳ ಮತ್ತು ಪ್ರೊಫೆಸರ್‌ಗಳ ಮೂಲಕ ಮಾಲಿನ್ಯದ ಕುರಿತು ಅನೇಕ ಸಂಶೋಧನೆಗಳನ್ನು ಕೈಗೊಂಡು ವರದಿಗಳನ್ನು ಬಿಡುಗಡೆ ಮಾಡಿದವು. ಅಸ್ತಮಾ ರೋಗಕ್ಕೆ ಕಾರ್ಖಾನೆಗಳು ಬಿಡುತ್ತಿರುವ ವಿಷ ಅನಿಲಗಳೇ ನೇರ ಕಾರಣವೆಂದು ಬಯಲು ಮಾಡಿದರು.

ಪರಿಸರವಾದಿಗಳು ಅನೇಕ ತಂಡಗಳನ್ನು ಮಾಡಿಕೊಂಡು ಕಾರ್ಖಾನೆಗಳಿಗೆ ಭೇಟಿ ನೀಡಿ ಕಾರ್ಖಾನೆಗಳು ಮಾಲಿನ್ಯ ತಡೆಗಟ್ಟುವಲ್ಲಿ ಏನು ಮುನ್ಸೂಚನೆಗಳನ್ನು ತೆಗೆದುಕೊಂಡಿದೆ? ಯಾವ ರೀತಿಯ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ? ಎಂಬುದನ್ನು ಅಧ್ಯಯನ ಮಾಡಿ ವರದಿ ಬಿಡುಗಡೆ ಮಾಡಿದರು.

ಸುದೀರ್ಘ ಚರ್ಚೆ ಮತ್ತು ವರದಿಗಳ ಅಧ್ಯಯನದ ನಂತರ ಜುಲೈ 24, 1972ರಂದು ತೀರ್ಪು ಫಿರ್ಯಾದಿಗಳ ಪರವಾಯಿತು. ಯಕೋಚಿ ಅಸ್ತಮಾ ಮೊಕದ್ದಮೆಯಿಂದಾಗಿ ಆ ಮಾಲಿನ್ಯದಿಂದ ಉಂಟಾದ ಆ ನಾಲ್ಕು ಪ್ರಮುಖ ಕಾಯಿಲೆಗಳಿಗೆ ತುತ್ತಾದ ರೋಗಿಗಳಿಗೆ, ಸಂತ್ರಸ್ತರಿಗೆ ಪರಿಹಾರವನ್ನು ನೀಡುವಂತೆ ಕೋರ್ಟ್ ಆದೇಶ ನೀಡಿತು.

ಕೋರ್ಟ್ ಆದೇಶ ಬಂದ ನಂತರ ಕಂಪೆನಿಗಳು ಮತ್ತು ಸರಕಾರ ಪರಿಹಾರ ಮೊತ್ತವನ್ನು ನೀಡಿದವು. ಇದು ವಿಶ್ವದ ಮೊದಲ ಮಾಲಿನ್ಯ ಸಂತ್ರಸ್ತರಿಗೆ ಸಾರ್ವಜನಿಕ-ಪರಿಹಾರ ನೀಡಿದ ಘಟನೆಯಾಗಿದೆ. ಜಪಾನ್ ಕೇಂದ್ರ ಸರಕಾರವು ಸ್ಥಳೀಯ ಸರಕಾರದೊಂದಿಗೆ ಕೈ ಜೋಡಿಸಿತು. ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಂಪೆನಿಗಳ ಜೊತೆ ಸೇರಿ ಮಾಲಿನ್ಯ ತಡೆಗಟ್ಟುವಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚೆ ಮಾಡಿದರು. ಹೊಸ ಹೊಸ ತಂತ್ರಜ್ಞಾನಗಳನ್ನು ಅಳವಡಿಕೆ ಮಾಡಲು ಮುಂದಾದರು. 1988ರ ಹೊತ್ತಿಗೆ ಯಾಕೋಚಿ ನಗರದ ಮಾಲಿನ್ಯ ಕಡಿಮೆ ಆಗುತ್ತಾ ಬಂತು.

ನಾನು ಜಪಾನ್‌ನಲ್ಲಿ ಒಂದು ಅಂತರ್‌ರಾಷ್ಟ್ರೀಯ ನಾಯಕತ್ವದ ತರಬೇತಿ ಕಾರ್ಯಕ್ರಮದಲ್ಲಿ ಇದ್ದುದರಿಂದ ಯಕೋಚಿ ಪೆಟ್ರೋಲ್ ಕೆಮಿಕಲ್ ಕಂಪೆನಿಗೆ ಭೇಟಿ ನೀಡಿದ್ದೆ. ಅಲ್ಲಿ ಯಾವುದೇ ತರಹದ ಕೆಟ್ಟ ವಾಸನೆ ಸ್ವಲ್ಪವೂ ಇರಲಿಲ್ಲ. ಸಮುದ್ರದ ನೀರು ತಿಳಿಯಾಗಿತ್ತು. ಯಕೋಚಿ ನಗರವು ಇಂದು ಜಪಾನಿನ ಸ್ವಚ್ಛ ಗಾಳಿ ಹೊಂದಿರುವ ನಗರದಲ್ಲೊಂದು. ಯಕೋಚಿ ನಗರವು ಮಾಲಿನ್ಯದ ಇತಿಹಾಸ ಹೊಂದಿದೆ ಎಂದು ನಂಬಲು ಸಾಧ್ಯವಾಗಿಲ್ಲ, ಅಷ್ಟೊಂದು ಸುಂದರವಾಗಿದೆ.

ಯಕೋಚಿ ನಗರವು ತನ್ನ ಪರಿಸರ ವಿರೋಧಿ ನಿಲುವಿನಿಂದ ಹೊರ ಬಂದು ಅನೇಕ ಕಾನೂನುಗಳನ್ನು ಜಾರಿಗೆ ತಂದು ಪರಿಸರ ಸ್ನೇಹಿ ಉತ್ಪಾದನೆಗೆ ಬೆಂಬಲ ನೀಡಿದ್ದಕ್ಕೆ ಇಂದು ನಗರದ AQI 50-60ರ ಒಳಗೆ ಇರುತ್ತದೆ. ಇಲ್ಲಿ ಜನರ ಭಾಗವಹಿಸುವಿಕೆ, ಸರಕಾರದ ಗಟ್ಟಿಯಾದ ನಿಲುವು ಮತ್ತು ಕಂಪೆನಿಗಳ ಭಾಗೀದಾರಿಕೆಯಿಂದಾಗಿ ವಾಯುಮಾಲಿನ್ಯ ಸಂಪೂರ್ಣವಾಗಿ ತಡೆಗಟ್ಟಲ್ಪಟ್ಟಿತು. ಜಪಾನಿನಲ್ಲಿ ಕಾರ್ಖಾನೆಗಳು ಪರಿಸರ ವಿರೋಧಿ ನಿಲುವು ಹೊಂದಿದರೆ, ಯಾವುದೇ ತರಹದ ಮಾಲಿನ್ಯಕಾರಕ ಅನಿಲಗಳನ್ನು ಅಥವಾ ತ್ಯಾಜ್ಯಗಳನ್ನು ಹೊರ ಸೂಸಿದರೆ ಕಂಪೆನಿಯ ಮಾಲಕರ ಹೆಸರುಗಳನ್ನು ಹಾಗೂ ಉತ್ಪಾದನೆಗಳ ಹೆಸರುಗಳನ್ನು ಸಾರ್ವಜನಿಕವಾಗಿ ಜಾಹೀರಾತು ಮೂಲಕ ಬಹಿರಂಗಪಡಿಸುತ್ತಾರೆ. ಜನರು ಸಾರ್ವಜನಿಕವಾಗಿ ಆ ಉತ್ಪಾದನೆಯನ್ನು ಬಹಿಷ್ಕರಿಸುತ್ತಾರೆ. ಇದರಿಂದಾಗಿ ಅವರ ಉತ್ಪಾದನೆಯ ಮೇಲೆ, ಕಂಪೆನಿಯ ಹೆಸರಿನ ಮೇಲೆ, ಬ್ರ್ಯಾಂಡ್ ಗೌರವದ ಮೇಲೆ ನೇರ ಹೊಡೆತ ಬೀಳುತ್ತದೆ.

ವಾಯು ಮಾಲಿನ್ಯ ಗುಣಮಟ್ಟವನ್ನು ಅಳೆಯಲು AQI 0-50 ಗಾಳಿಯ ಒಳ್ಳೆಯ ಗುಣಮಟ್ಟ, 50-100 ಮಧ್ಯಮ ಗುಣಮಟ್ಟ, 101-150 ಸೂಕ್ಷ್ಮ ಗುಂಪುಗಳಿಗೆ ಅನಾರೋಗ್ಯಕರ, 151-200 ಅನಾರೋಗ್ಯಕರ, 201-300 ತುಂಬಾ ಅನಾರೋಗ್ಯಕರ ಹಾಗೂ 300+ ಇದ್ದರೆ ಅಪಾಯಕಾರಿ ಎಂದು ವರ್ಗೀಕರಿಸಲಾಗಿದೆ.

ನಮ್ಮ ದಿಲ್ಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಾಗುತ್ತಿದೆ. ವಾಯು ಗುಣಮಟ್ಟ ಸೂಚಂಕ್ಯ 350ರ ಗಡಿ ದಾಟಿದೆ. ನೆಹರೂ ನಗರ, ಆನಂದ ವಿಹಾರ ಮತ್ತು ಈಸ್ಟ್ ದಿಲ್ಲಿಯಲ್ಲಿAQI 450ರ ಗಡಿ ದಾಟಿದ ವರದಿಯಾಗಿದೆ. ಒಂದು ಇತ್ತೀಚಿನ ಅಧ್ಯಯನದ ಪ್ರಕಾರ ವಾಯು ಮಾಲಿನ್ಯದಿಂದಾಗಿ ಶೇ. 69 ಕುಟುಂಬಗಳು ಕೆಮ್ಮು ಅಥವಾ ಗಂಟಲು, ಕಣ್ಣು ಉರಿ ಮುಂತಾದ ರೋಗದಿಂದ ಬಳಲುತ್ತಿದ್ದಾರೆ. ಶೇ. 31ರಷ್ಟು ಮಂದಿ ಅಸ್ತಮಾ ರೋಗಕ್ಕೆ ತುತ್ತಾಗುತ್ತಿದ್ದಾರೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಚಂದ್ರಚೂಡ್‌ರವರು ಬೆಳಗ್ಗೆ ವಾಕಿಂಗ್ ಹೋಗುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಹೇಳಿದ್ದರು. ಹರ್ಯಾಣದಲ್ಲಿ ಕಲ್ಲು ಕ್ರಷರ್ ಮಾಲಿನ್ಯದಿಂದ ಜನರು ಕೆಲ ಹಳ್ಳಿಗಳನ್ನು ತೊರೆದು ಬೇರೆ ಕಡೆ ಹೋಗುತ್ತಿರುವುದು ವರದಿ ಆಗುತ್ತಿದೆ. ನಮ್ಮ ಕೊಪ್ಪಳ ಜಿಲ್ಲೆಯಲ್ಲಿ ಕಪ್ಪು ಧೂಳಿನಿಂದ ಜನ ಭಯಭೀತರಾಗಿದ್ದಾರೆ. ಹಾಗಾದರೆ ನಮ್ಮ ದೇಶದಲ್ಲಿ ಕಾನೂನುಗಳು ಯಾಕೆ, ಯಾರಿಗಾಗಿ ಇವೆ? ಚುನಾವಣೆಯ ಸಂದರ್ಭದಲ್ಲಿ ಮಾಲಿನ್ಯವು ಯಾಕೆ ಮುಖ್ಯ ವಿಷಯವಾಗುತ್ತಿಲ್ಲ? ಮಾಲಿನ್ಯ ಹಿಂದೂ, ಮುಸ್ಲಿಮ್, ಸಿಖ್ ಎಲ್ಲಾ ಧರ್ಮ, ಜಾತಿಯವರನ್ನು ಸಮಾನವಾಗಿ ಬಲಿ ತೆಗೆದುಕೊಳ್ಳುತ್ತಿದೆ.

ಲಡಾಖ್‌ನ ಪರಿಸರವಾದಿ ಸೋನಮ್ ವಾಂಗ್ಚುಕ್ ಉಪವಾಸ ಕೈಗೊಂಡರು. ಲಡಾಖ್‌ನಿಂದ ದಿಲ್ಲಿಯವರೆಗೂ ಪಾದಯಾತ್ರೆ ಮಾಡಿದರು. ಆದರೆ ಅವರನ್ನು ಕೇಂದ್ರ ಸರಕಾರ ಜೈಲಿಗೆ ಹಾಕಿತ್ತು. ಇದು ದೇಶಾದ್ಯಂತ ಹೆಚ್ಚು ಚರ್ಚೆಯೂ ಆಗಲಿಲ್ಲ. ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈಯವರು ಹಬ್ಬಕ್ಕೆ ಹೆಚ್ಚು ಪಟಾಕಿ ಹೊಡೆಯಿರಿ ಎಂದು ಪ್ರಚೋದನೆ ನೀಡುತ್ತಾರೆೆ. ನಾವು ಮಾಲಿನ್ಯದ ಬಗ್ಗೆ ಇನ್ನಾದರೂ ಹೆಚ್ಚು ಗಮನಹರಿಸಿ ಪರಿಸರ ಸ್ನೇಹಿ ಉತ್ಪಾದನೆ, ವ್ಯವಹಾರ ಹಾಗೂ ಬದುಕಿನೆಡೆ ಸಾಗಬೇಕಿದೆ. ಇಲ್ಲದೇ ಹೋದರೆ ಎಲ್ಲರೂ ಮಾಲಿನ್ಯಕ್ಕೆ ತುತ್ತಾಗಲೇಬೇಕು.

ಸರಕಾರ ಮತ್ತು ಜನರ ಇಚ್ಛಾ ಶಕ್ತಿ ಒಂದಾದರೆ ಸುಲಭವಾಗಿ ಕಾರ್ಖಾನೆಗಳ ಭಾಗೀದಾರಿಕೆಯೊಂದಿಗೆ ಇದನ್ನು ಸಾಧಿಸಬಹುದು ಎಂಬ ಉದಾಹರಣೆ ನಮ್ಮ ಮುಂದಿದೆ. ಜಪಾನಿನ ಯಕೋಚಿ ನಗರದ ಇತಿಹಾಸದಿಂದ ನಾವು ಮಾಲಿನ್ಯ ತಡೆಗಟ್ಟುವುದರ ಬಗ್ಗೆ ಕಲಿಯಬಹುದು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಎಂ.ಕೆ. ಸಾಹೇಬ್ ನಾಗೇಶನಹಳ್ಳಿ

contributor

Similar News