ಭಾರೀ ಪ್ರಚಾರ ಪಡೆದ ರೈಲ್ವೆ ಸುರಕ್ಷತಾ ವ್ಯವಸ್ಥೆ ‘ಕವಚ’ ಎಲ್ಲಿ ಹೋಯಿತು?

ಯಾಕೆ ಹೀಗೆ ರೈಲ್ವೆ ಹಳಿಗಳಲ್ಲಿ ಅಮಾಯಕರು ಬಲಿಯಾಗುತ್ತಿದ್ದಾರೆ? ಏನಾಯಿತು ಮೋದಿ ಸರಕಾರ ಭಾರೀ ಪ್ರಚಾರ ಪಡೆದ ಕವಚ ಸುರಕ್ಷತಾ ವ್ಯವಸ್ಥೆ? ಕೆಲವೇ ಕೆಲವು ರೈಲ್ವೆ ನಿಲ್ದಾಣಗಳನ್ನು ಅಗತ್ಯಕ್ಕಿಂತ ಜಾಸ್ತಿ ಅತ್ಯಾಧುನಿಕಗೊಳಿಸಿ, ರೈಲ್ವೆ ಪ್ರಯಾಣ ದರ ಸಿಕ್ಕಾಪಟ್ಟೆ ಏರಿಸಿ, ಜನರಲ್ ಬೋಗಿಗಳ ಸಂಖ್ಯೆ ಕಡಿತಗೊಳಿಸುತ್ತಾ ಹೋಗಿ, ಲಕ್ಷಾಂತರ ಖಾಲಿ ಹುದ್ದೆಗಳನ್ನು ಹಾಗೆಯೇ ಇಟ್ಟು, ಮೋದಿ ಸರಕಾರ ರೈಲ್ವೆಯಲ್ಲಿ ಮಾಡುತ್ತ್ತಾ ಇರುವುದು ಏನು?

Update: 2024-06-19 06:31 GMT

ವಂದೇ ಭಾರತ್ ರೈಲುಗಳ ವೈಭವ, ಅಲ್ಲೊಂದು ಇಲ್ಲೊಂದು ನಿರ್ಮಾಣಗೊಂಡ ಅತ್ಯಾಧುನಿಕ ಹಾಗೂ ಅಗತ್ಯಕ್ಕೂ ಮೀರಿದ ವೈಭವದ ರೈಲ್ವೆ ನಿಲ್ದಾಣಗಳ ಬಗ್ಗೆ ಅಬ್ಬರದ ಪ್ರಚಾರ...

ಇವೆಲ್ಲವುಗಳ ನಡುವೆಯೇ ದೇಶದಲ್ಲಿ ಇನ್ನೊಂದು ರೈಲ್ವೆ ಅವಘಡ ಸಂಭವಿಸಿದೆ. 15ಕ್ಕೂ ಹೆಚ್ಚು ಜೀವಗಳು ಬಲಿಯಾಗಿವೆ.

ಆದರೆ ರೈಲ್ವೆ ಸಚಿವರು ದುರಂತ ನಡೆದ ಸ್ಥಳಕ್ಕೆ ಬೈಕ್‌ನಲ್ಲಿ ಹೋಗಿ ತಲುಪಿದರು ಎಂಬುದೇ ಕೆಲವು ಮೀಡಿಯಾಗಳಿಗೆ ದೊಡ್ಡ ಸುದ್ದಿಯಾಗಿದೆ.

ಯಾಕೆ ಹೀಗೆ ರೈಲ್ವೆ ಹಳಿಗಳಲ್ಲಿ ಅಮಾಯಕರು ಬಲಿಯಾಗುತ್ತಿದ್ದಾರೆ? ಏನಾಯಿತು ಮೋದಿ ಸರಕಾರ ಭಾರೀ ಪ್ರಚಾರ ಪಡೆದ ಕವಚ ಸುರಕ್ಷತಾ ವ್ಯವಸ್ಥೆ?

ಕೆಲವೇ ಕೆಲವು ರೈಲ್ವೆ ನಿಲ್ದಾಣಗಳನ್ನು ಅಗತ್ಯಕ್ಕಿಂತ ಜಾಸ್ತಿ ಅತ್ಯಾಧುನಿಕಗೊಳಿಸಿ, ರೈಲ್ವೆ ಪ್ರಯಾಣ ದರ ಸಿಕ್ಕಾಪಟ್ಟೆ ಏರಿಸಿ, ಜನರಲ್ ಬೋಗಿಗಳ ಸಂಖ್ಯೆ ಕಡಿತಗೊಳಿಸುತ್ತಾ ಹೋಗಿ, ಲಕ್ಷಾಂತರ ಖಾಲಿ ಹುದ್ದೆಗಳನ್ನು ಹಾಗೆಯೇ ಇಟ್ಟು, ಮೋದಿ ಸರಕಾರ ರೈಲ್ವೆಯಲ್ಲಿ ಮಾಡುತ್ತ್ತಾ ಇರುವುದು ಏನು?

ಸೋಮವಾರ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯಲ್ಲಿ ಸಂಭವಿಸಿದ ಕಾಂಚನ್ ಜುಂಗಾ ಎಕ್ಸ್‌ಪ್ರೆಸ್ ರೈಲು ಅಪಘಾತದಲ್ಲಿ 15ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. 60ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ಕೋಲ್ಕತಾದ ಸೀಲ್ದಾಗೆ ತೆರಳುತ್ತಿದ್ದ ಕಾಂಚನ್ ಜುಂಗಾ ಎಕ್ಸ್‌ಪ್ರೆಸ್‌ಗೆ ಗೂಡ್ಸ್ ರೈಲು ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ ಮತ್ತು 60 ಮಂದಿ ಗಾಯಗೊಂಡಿದ್ದಾರೆ.

ಅಪಘಾತ ನಡೆದಾಗೆಲ್ಲ ಅಲ್ಲಿಗೆ ಭೇಟಿ, ಪರಿಹಾರ, ಸಾಂತ್ವನ, ತನಿಖೆಗೆ ಆದೇಶಿಸುವ ಕೆಲವು ಹೇಳಿಕೆಗಳು ಬರುತ್ತವೆ. ಅದಾದ ಮೇಲೆ ಸರಕಾರ ಎಲ್ಲವನ್ನೂ ಮರೆತು ಬಿಡುತ್ತದೆ ಮತ್ತು ಬೇರೆಯದೇ ಪ್ರಚಾರದ ಶೋಕಿಯಲ್ಲಿ ಮೈಮರೆಯುತ್ತದೆ. ಜನಸಾಮಾನ್ಯರಿಗೆ ಅಗತ್ಯವಿರುವ ರೈಲುಗಳ ವ್ಯವಸ್ಥೆ ಸರಿಪಡಿಸುವ ಬಗ್ಗೆ ಮೋದಿ ಸರಕಾರಕ್ಕೆ ಕಳಕಳಿ ಇದೆಯೇ?

ನಾಲ್ಕಾರು ಜನ ಓಡಾಡುವ ವಂದೇ ಭಾರತ್ ರೈಲಿನ ಬಗ್ಗೆ ಮಾತ್ರ ಇನ್ನಿಲ್ಲದ ಅಬ್ಬರವನ್ನು ಮಾಡುತ್ತಲೇ ಬರಲಾಗಿದೆ.

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕೂಡ ಇದೇ ಕಾರಣಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ದುರಂತಕ್ಕೆ ಕೇಂದ್ರ ಸರಕಾರವೇ ಹೊಣೆ ಎಂದು ಅವರು ಹೇಳಿದ್ದಾರೆ.

ಇಡೀ ರೈಲ್ವೆ ಇಲಾಖೆಯೇ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ರೈಲ್ವೆ ಸಚಿವಾಲಯ ಸರಿಯಾದ ಕಾಳಜಿ ವಹಿಸಬೇಕಾಗಿದೆ ಎಂದಿರುವ ಅವರು, ವಂದೇ ಭಾರತ್ ರೈಲುಗಳ ಪ್ರಚಾರದಲ್ಲಿಯೇ ಸರಕಾರ ಮುಳುಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘‘ಈ ಸರಕಾರಕ್ಕೆ ಪ್ರಯಾಣ ದರ ಹೆಚ್ಚಿಸುವುದು ಆದ್ಯತೆಯಾಗಿದೆಯೇ ಹೊರತು, ಪ್ರಯಾಣಿಕರಿಗೆ ಅಗತ್ಯ ಸೌಲಭ್ಯ, ರಕ್ಷಣೆ ಒದಗಿಸುವುದರ ಬಗ್ಗೆ ಅದಕ್ಕೆ ಯೋಚನೆಯೇ ಇಲ್ಲ’’ ಎಂದು ಮೋದಿ ಸರಕಾರದ ವಿರುದ್ಧ ಮಮತಾ ಕಿಡಿ ಕಾರಿದ್ದಾರೆ.

ರೈಲ್ವೆಗೆ ಇಂದು ಇಲಾಖೆಯಿದ್ದೂ ಹಳೇ ವೈಭವ ಇಲ್ಲವಾಗಿದೆ. ಚಂದವಾಗಿ ಕಾಣುವಂತೆ ಮಾಡುವುದಕ್ಕೆ, ಶೋಕಿಗೆ ಗಮನ ಕೊಡಲಾಗಿದೆ. ಆದರೆ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ಇಲ್ಲವಾಗಿದೆ. ಅವರು ದೊಡ್ಡ ಮಾತುಗಳನ್ನಾಡುತ್ತಾರೆ. ಆದರೆ ರೈಲ್ವೆ ಅಧಿಕಾರಿಗಳು, ತಾಂತ್ರಿಕ ಸಿಬ್ಬಂದಿ, ಸುರಕ್ಷಾ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿಯ ಬಗ್ಗೆ ಅವರಿಗೆ ಕಾಳಜಿಯೇ ಇಲ್ಲ ಎಂದಿದ್ದಾರೆ ಮಮತಾ.

ಅಪಘಾತಗಳು ಯಾರ ನಿಯಂತ್ರಣದಲ್ಲೂ ಇಲ್ಲ. ಆದರೆ ರೈಲುಗಳು ಢಿಕ್ಕಿಯಾಗುವುದನ್ನು ತಡೆಯುವ ವ್ಯವಸ್ಥೆಯನ್ನು ಇಲಾಖೆ ಸರಿಯಾಗಿ ಅಳವಡಿಸಿಲ್ಲ ಎಂಬುದು ಮಮತಾ ತಕರಾರು.

ಈಗ ನಡೆದಿರುವ ಅಪಘಾತ ಕೂಡ ಸಿಗ್ನಲ್‌ನಲ್ಲಿಯ ತಾಂತ್ರಿಕ ದೋಷದಿಂದ ಸಂಭವಿಸಿರಬಹುದೆಂದು ಹೇಳಲಾಗುತ್ತಿದೆ. ಇಲ್ಲಿಯೂ ‘ಕವಚ’ ಸುರಕ್ಷತಾ ವ್ಯವಸ್ಥೆ ಅಳವಡಿಸಿರಲಿಲ್ಲ.

ಕವಚ, ಸ್ವಯಂಚಾಲಿತ ರೈಲು ರಕ್ಷಣೆ ವ್ಯವಸ್ಥೆಯಾಗಿದೆ.

ಇದನ್ನು ಭಾರತದಲ್ಲಿ ಸಂಶೋಧನಾ ವಿನ್ಯಾಸ ಮತ್ತು ಗುಣಮಟ್ಟ ಸಂಸ್ಥೆ ಆರ್‌ಎಸ್‌ಸಿಒ ಮತ್ತು ಇತರ ಭಾರತೀಯ ಸಂಸ್ಥೆಗಳು ಅಭಿವೃದ್ಧಿಪಡಿಸಿವೆ. ಚಾಲಕ ಸಮಯಕ್ಕೆ ಬ್ರೇಕ್ ಹಾಕಲು ವಿಫಲವಾದಲ್ಲಿ ರೈಲಿನ ವೇಗವನ್ನು ನಿಯಂತ್ರಿಸುವಲ್ಲಿ ಇದು ತನ್ನ ಪಾತ್ರ ನಿರ್ವಹಿಸುತ್ತದೆ. ಅಪಾಯದ ಸಂಕೇತಗಳನ್ನು ಹೆಚ್ಚು ನಿಖರತೆಯೊಂದಿಗೆ ತಿಳಿಯಲು ಇದು ಲೊಕೊ ಪೈಲಟ್‌ಗಳಿಗೆ ಸಹಾಯ ಮಾಡುತ್ತದೆ. ರೈಲು ರೆಡ್ ಸಿಗ್ನಲ್ ದಾಟಿಹೋದಾಗ ಚಾಲಕನಿಗೆ ಎಚ್ಚರಿಕೆ ಸಂದೇಶ ಕೊಡುತ್ತದೆ. ಅದೇ ಮಾರ್ಗದಲ್ಲಿ ಮತ್ತೊಂದು ರೈಲು ಸಂಚರಿಸುತ್ತಿದ್ದರೆ, ನಿರ್ದಿಷ್ಟ ಅಂತರವಿರುವಾಗಲೇ ಆ ರೈಲನ್ನು ಗುರುತಿಸುವ ಕವಚ ತಕ್ಷಣವೇ ಬ್ರೇಕ್ ಹಾಕಿ ರೈಲು ನಿಲ್ಲುವಂತೆ ಮಾಡಿ ರೈಲುಗಳ ಮಧ್ಯೆ ಮುಖಾಮುಖಿ ಢಿಕ್ಕಿ ತಪ್ಪಿಸುತ್ತದೆ. ಅತ್ಯಂತ ದಟ್ಟವಾದ ಮಂಜಿನ ವಾತಾವರಣದಲ್ಲೂ ರೈಲು ಸುರಕ್ಷಿತವಾಗಿ ಚಲಿಸಲು ನೆರವಾಗುತ್ತದೆ.

ಆದರೆ ವಿಪರ್ಯಾಸವೆಂದರೆ ಒಂದು ಲಕ್ಷ ಕಿ.ಮೀ. ಇರುವ ಭಾರತೀಯ ರೈಲ್ವೆ ಜಾಲದಲ್ಲಿ ಈವರೆಗೆ ಕೇವಲ ಒಂದೂವರೆ ಸಾವಿರ ಕಿ.ಮೀ.ಗೆ ಮಾತ್ರ ಈ ಕವಚ ವ್ಯವಸ್ಥೆ ಅಳವಡಿಸಲಾಗಿದೆ.

ಇಡೀ ರೈಲ್ವೆ ಜಾಲಕ್ಕೆ ಕವಚ ವ್ಯವಸ್ಥೆ ಅಳವಡಿಸಲು ಬೇಕಿರುವುದು ಒಂದು ಲಕ್ಷ ಕೋಟಿ ರೂಪಾಯಿ.

ಆದರೆ ಕವಚದ ಬಗ್ಗೆ ಇನ್ನಿಲ್ಲದ ಪ್ರಚಾರ ಮಾಡುವ ಮೋದಿ ಸರಕಾರ ಅದಕ್ಕೆ ಕೊಟ್ಟಿದ್ದು ರೂ. 500 ಕೋಟಿಗಿಂತಲೂ ಕಡಿಮೆ. ಭಾರತೀಯ ರೈಲ್ವೆ 10,000 ಕಿ.ಮೀ. ಕವಚ ವ್ಯವಸ್ಥೆ ಅಳವಡಿಸಲು ಟೆಂಡರ್‌ಗಳನ್ನು ನೀಡಿತ್ತು. ಇಲ್ಲಿಯವರೆಗೆ ಇದನ್ನು ದಕ್ಷಿಣ ಮಧ್ಯ ರೈಲ್ವೆಯಲ್ಲಿ 139 ಇಂಜಿನ್‌ಗಳಿಗೆ ಮಾತ್ರ ಅಳವಡಿಸಲಾಗಿದೆ.

ಗುವಾಹಟಿ ಮಾರ್ಗದಲ್ಲಿ ಇದು ಇನ್ನೂ ಲಭ್ಯವಿಲ್ಲ.

ಕವಚದ ಅಭಿವೃದ್ಧಿಗೆ ಒಟ್ಟು 16.88 ಕೋಟಿ ರೂ. ವೆಚ್ಚವಾಗಿದೆ.

ಕವಚದ ಬಗ್ಗೆ ಮೋದಿ ಸರಕಾರ ಅಬ್ಬರದಿಂದ ಪ್ರಚಾರ ಮಾಡಿದ್ದು ಕಡಿಮೆಯೇನಿಲ್ಲ. ಆದರೆ ಅದರ ನಂತರ ಏನಾಗಿದೆ ಎಂದು ನೋಡಿಕೊಂಡರೆ ಏನೂ ಇಲ್ಲ. ಅತ್ಯಂತ ಮಹತ್ವದ ಮಾರ್ಗಗಳಲ್ಲಿಯೂ ಕವಚ ವ್ಯವಸ್ಥೆ ಅಳವಡಿಸಲಾಗಿಲ್ಲ.

ದುರ್ಘಟನೆ ನಡೆದಾಗೆಲ್ಲ ಮಾತ್ರ ಅಲ್ಲಿ ಕವಚ ವ್ಯವಸ್ಥೆ ಅಳವಡಿಸದೇ ಇದ್ದುದು ಗಮನಕ್ಕೆ ಬರುತ್ತದೆ.

ಈಗ ಇಲ್ಲಿಯೂ ಅಂಥದೇ ಪ್ರಶ್ನೆ ಎದುರಾಗಿದೆ. ಆದರೆ ಇಂತಹ ಪ್ರಶ್ನೆಗಳು ಈಗ ಎದ್ದು, ನಾಳೆಯ ಹೊತ್ತಿಗೆ ಮರೆತುಹೋಗುತ್ತದೆ.

ಸಿಎಜಿ ವರದಿ ಪ್ರಕಾರ, ರೈಲುಗಳು ಮತ್ತು ರೈಲು ಹಳಿಗಳ ಸುರಕ್ಷತೆಯನ್ನು ಕಡೆಗಣಿಸಲಾಗಿದೆ.

ಎಲ್ಲಾ ರೈಲ್ವೆ ವಲಯಗಳಲ್ಲಿ ಕೈಗೊಳ್ಳಬೇಕಿದ್ದ ಹಳಿ ಪರಿಶೀಲನೆಗಳ ಸಂಖ್ಯೆ 350. ಹಳಿ ಪರಿಶೀಲನೆ ನಡೆದಿರುವುದು 169 ಮಾತ್ರ.ಹಳಿ ಪರಿಶೀಲನೆಯ ಪ್ರಮಾಣ ಶೇ. 50ಕ್ಕಿಂತಲೂ ಕಡಿಮೆಯಿದೆ ಎನ್ನಲಾಗಿದೆ.

2017ರಿಂದ 2021ರ ಅವಧಿಯಲ್ಲಿ ಸಂಭವಿಸಿರುವ ರೈಲು ಅವಘಡಗಳು 1,800. ಸಿಗ್ನಲ್ ಸಮಸ್ಯೆಯಿಂದಾಗಿರುವ ಅವಘಡಗಳು 211. ರೈಲು ಹಳಿ ತಪ್ಪಿ ಆಗಿರುವ ಅವಘಡಗಳು 408.

ವಂದೇ ಭಾರತ್ ಶೋಕಿಯಲ್ಲಿ, ಆಯ್ದ ರೈಲು ನಿಲ್ದಾಣಗಳನ್ನು ಅಲಂಕರಿಸಿ ಝಗಮಗಗೊಳಿಸುವ ಶೋಕಿಯಲ್ಲಿ ಮೈಮರೆತಿರುವ ಮೋದಿ ಸರಕಾರಕ್ಕೆ ಕವಚ ವಿಚಾರವಂತೂ ನೆನಪಿದ್ದಂತೆಯೂ ಕಾಣಿಸುತ್ತಿಲ್ಲ.

ವಂದೇ ಭಾರತ್ ಬಗ್ಗೆ ಹೇಳುವಾಗಂತೂ ಪ್ರತೀ ಗಂಟೆಗೆ 160ರಿಂದ 180 ಕಿ.ಮೀ.ವರೆಗೂ ಓಡುತ್ತದೆ ಎಂದು ಹೇಳಲಾಗುತ್ತದೆ. ಆದರೆ ವರದಿಗಳ ಪ್ರಕಾರ ಪ್ರತಿ ಗಂಟೆಗೆ 70ಕ್ಕಿಂತಲೂ ಕಡಿಮೆ ವೇಗದಲ್ಲಿ ಅದು ಚಲಿಸುತ್ತಿದೆ.

ಇನ್ನು ಬುಲೆಟ್ ರೈಲು ವಿಚಾರದಲ್ಲಿಯೂ ಭಾರೀ ಅಬ್ಬರ, ತೋರಿಸಿಕೊಳ್ಳುವಿಕೆ ನಡೆದೇ ಇದೆ.

ಅದಕ್ಕೆ ತಗಲುವ ಭಾರೀ ವೆಚ್ಚ, ಶ್ರಮ ಹಾಗೂ ಆಗಬೇಕಾದ ಕೆಲಸ ನೋಡಿದರೆ ಅದು ನಿಜಕ್ಕೂ ಬೇಕಿತ್ತೇ? ಎಂಬ ಪ್ರಶ್ನೆ ಮೂಡುವುದು ಸಹಜ. ಅತ್ಯಗತ್ಯ ಸುರಕ್ಷತಾ ವ್ಯವಸ್ಥೆಗೆ ಬಜೆಟ್ ಹೊಂದಿಸಲು ಆಗದೇ ಇರುವಾಗ ಬುಲೆಟ್ ರೈಲಿನ ಆಡಂಬರ ಬೇಕೇ ಎಂಬ ಪ್ರಶ್ನೆಗಳೂ ಇವೆ.

ಹೀಗೆ ಹಲವು ಸಮಸ್ಯೆಗಳಲ್ಲಿ ಸಿಲುಕಿಕೊಂಡು ಇಡೀ ರೈಲ್ವೆ ವ್ಯವಸ್ಥೆಯೇ ಹಳಿ ತಪ್ಪಿದಂತಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಚಂದ್ರಕಾಂತ್ ಎನ್.

contributor

Similar News