ಮಕ್ಕಳ ಒತ್ತಡ ನಿವಾರಿಸುವ ಜವಾಬ್ದಾರಿ ಯಾರದು?

ಸರಕಾರ ಮತ್ತು ಶಿಕ್ಷಣ ಸಂಸ್ಥೆಗಳು ಈಗಿನ ಪರೀಕ್ಷಾ ಪದ್ಧತಿಯಲ್ಲಿ ಇರುವ ಅಂಕಗಳ ನೀಡುವಿಕೆ, ರ್ಯಾಂಕ್ ವ್ಯವಸ್ಥೆ ಕುರಿತು ಗಂಭೀರವಾಗಿ ಚಿಂತಿಸಬೇಕಿವೆ. ಅಂಕಗಳ ಆಧಾರದಲ್ಲಿ ಅಥವಾ ಕಲಿಕೆಯ ಆಧಾರದಲ್ಲಿ ಗ್ರೇಡ್ ನೀಡುವ ವ್ಯವಸ್ಥೆ ಬಗ್ಗೆ ಚರ್ಚೆಗಳು ನಡೆದಿದ್ದು ಅದು ಅನುಷ್ಠಾನವಾದರೆ ಹೆಚ್ಚು ಅನುಕೂಲವಾಗಬಹುದು. ವಿದ್ಯಾರ್ಥಿಗಳಲ್ಲಿ ಆಸಕ್ತಿ, ಏಕಾಗ್ರತೆ, ಮಾನಸಿಕ ದೃಢತೆ ಮೂಡಿಸಲು, ಸಮಸ್ಯೆಗಳ ನಿವಾರಣೆಗೆ ಪರಿಣಿತ ಆಪ್ತ ಸಮಾಲೋಚಕರನ್ನು ನೇಮಿಸಬೇಕು. ತಕ್ಷಣಕ್ಕೆ ಶಿಕ್ಷಕರು/ಉಪನ್ಯಾಸಕರನ್ನು ತರಬೇತಿ ನೀಡಿ ಸನ್ನದ್ಧಗೊಳಿಸಬಹುದು. ಆ ಮೂಲಕ ಮಾನಸಿಕ ಖಿನ್ನತೆಗೆ ಒಳಗಾದ ಮಕ್ಕಳಿಗೆ ಬೆಂಬಲ ನೀಡಬಹುದು.

Update: 2024-01-16 04:23 GMT

Photo: freepik

ಇತ್ತೀಚೆಗೆ ಮಧ್ಯಮಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಯಲು, ಒತ್ತಡ ಕಡಿಮೆ ಮಾಡಲು ಉನ್ನತ ಶಿಕ್ಷಣದಲ್ಲಿ ‘ಓಪನ್ ಬುಕ್’ ಪರೀಕ್ಷೆ ಪರಿಚಯಿಸಬೇಕು ಎಂದು ತಜ್ಞರ ಸಮಿತಿ ಶಿಫಾರಸು ಮಾಡಿದ್ದು ಮುಖಪುಟಗಳ ಸುದ್ದಿಯಾಗಿತ್ತು. ೨೦೨೩ರ ಜುಲೈನಲ್ಲಿ ಪಿಇಎಸ್ ವಿಶ್ವವಿದ್ಯಾನಿಲಯದ ಬಿ.ಟೆಕ್ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದನು. ಅದಕ್ಕಾಗಿ ಬೆಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎಸ್.ಎಂ. ಜಯಕರ ನೇತೃತ್ವದಲ್ಲಿ, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿನ ಶೈಕ್ಷಣಿಕ ಒತ್ತಡ ಕುರಿತು ಅಧ್ಯಯನ ಮಾಡಿ, ವರದಿ ನೀಡಲು ಸರಕಾರ ಸಮಿತಿ ರಚಿಸಿದ್ದು, ಅದು ತನ್ನ ವರದಿಯನ್ನು ಇತ್ತೀಚೆಗೆ ಸರಕಾರಕ್ಕೆ ಸಲ್ಲಿಸಿದೆ.

ಇದರ ಜೊತೆಗೆ ಕಳೆದ ಕೆಲ ದಿನಗಳ ಹಿಂದೆ ಮಾಧ್ಯಮಗಳಲ್ಲಿ ‘ಮಕ್ಕಳ ಆತ್ಮಹತ್ಯೆಗೆ ಪಾಲಕರ ಒತ್ತಡ ಕಾರಣ’ ಎನ್ನುವ ಶೀರ್ಷಿಕೆ ಅಡಿಯಲ್ಲಿ ಸುಪ್ರಿಂಕೋರ್ಟ್ ಕಳವಳವನ್ನು ಪ್ರಕಟಿಸಲಾಗಿತ್ತು. ಮಕ್ಕಳ ಈ ದುರಂತ ಅಂತ್ಯಕ್ಕೆ ಬಹು ಮುಖ್ಯವಾಗಿ ತೀವ್ರವಾದ ಪೈಪೋಟಿ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗಬೇಕಿರುವುದು. ಆ ಮಕ್ಕಳ ಮೇಲೆ ಪಾಲಕರು ಹೇರುವ ಒತ್ತಡ ದೇಶದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಹೆಚ್ಚಲು ಪ್ರಮುಖ ಕಾರಣಗಳು ಎನ್ನುವ ವಿಷಯವನ್ನು ಘನ ನ್ಯಾಯಾಲಯ ಪ್ರಸ್ತಾಪಿಸಿದ್ದು, ಇದು ಅಕ್ಷರಶಃ ಸತ್ಯವಾಗಿದೆ.

ಇಂದು ಈ ದುರಂತದ ಕರಾಳ ಹಸ್ತವು ಬರೀ ಉನ್ನತ ಶಿಕ್ಷಣವನ್ನು ಮಾತ್ರ ಆವರಿಸದೆ, ಶಿಕ್ಷಣದ ಎಲ್ಲಾ ಹಂತದಲ್ಲಿಯೂ ವ್ಯಾಪಿಸುತ್ತಿರುವುದು ಕಳವಳಕಾರಿಯಾದ ಅಂಶವಾಗಿದೆ. ಇದಕ್ಕೆ ಪೂರಕವಾಗಿ ಅಂಕಿ ಅಂಶಗಳ ಒಂದು ಉದಾಹರಣೆಯನ್ನು ಗಮನಿಸಬಹುದು. ಐಐಟಿ ಮತ್ತು ಜೆಇಇ ಪ್ರವೇಶ ಪರೀಕ್ಷೆಗೆ ಐದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಕುಳಿತುಕೊಳ್ಳುತ್ತಾರೆ. ಆದರೆ ಅದರಲ್ಲಿರುವ ಒಟ್ಟು ಸೀಟುಗಳು ೨೦ ಸಾವಿರ ಮಾತ್ರ. ಅದರಲ್ಲಿ ಎಲ್ಲ ರೀತಿಯಲ್ಲೂ ಸಮರ್ಪಕವಾಗಿರುವವು ೧೦ ಸಾವಿರ ಮಾತ್ರ. ಅದರಲ್ಲಿ ಮಕ್ಕಳ ಅಪೇಕ್ಷೆಯಂತೆ ಬೇಕಾದ ತಾಂತ್ರಿಕ ವಿಭಾಗದಲ್ಲಿ ದೊರೆವ ಪ್ರವೇಶಗಳು ಒಂದು ಸಾವಿರ ಮಾತ್ರ. ಐಐಟಿ ಬಾಂಬೆಯಲ್ಲಿ ಓದುವ ಅಭಿಲಾಷೆಯುಳ್ಳವರ ಸಂಖ್ಯೆ ಹೆಚ್ಚು. ಅಲ್ಲಿರುವ ಸೀಟುಗಳು ೭೦೦ ಮಾತ್ರ. ಹೀಗೆ ವಿಭಾಗಿಸುತ್ತಾ ಹೋದರೆ ಕೊನೆಗೆ ದೊರೆವ ಸರಾಸರಿ ಒಂದು ಸೀಟಿಗೆ ೫೦೦ ಮಕ್ಕಳು ಸ್ಪರ್ಧೆ ಮಾಡುತ್ತಾರೆ. ಈ ಸಂಖ್ಯೆ ಮತ್ತು ಅಂತರ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಹೋಗುತ್ತದೆ. ಮಕ್ಕಳು ಐಐಟಿ ತಮ್ಮ ಭವಿಷ್ಯ ಅಥವಾ ವೃತ್ತಿ ಎಂದು ಭಾವಿಸುವಂತಹ ವಾತಾವರಣ ನಿರ್ಮಿಸಲಾಗುತ್ತಿದೆ.

ಕೆಲವು ಪೋಷಕರು ಐಐಟಿಯಲ್ಲಿ ಪ್ರವೇಶ ಗಿಟ್ಟಿಸಬೇಕೆಂದು ಮಕ್ಕಳ ಮೇಲೆ ಹೆಚ್ಚಿನ ಒತ್ತಡ ಹಾಕುತ್ತಾರೆ. ಅದಕ್ಕೆ ಕೆಲವು ಕಡೆ ಎಂಟನೇ ತರಗತಿಯಿಂದಲೇ ಮಕ್ಕಳನ್ನು ಕೋಚಿಂಗ್‌ಗೆ ಕಳುಹಿಸುತ್ತಾರೆ. ಇತ್ತೀಚೆಗೆ ಆರನೇ ತರಗತಿಯಿಂದಲೇ ಈ ಕೋಚಿಂಗ್‌ಗೆ ಕಳುಹಿಸುತ್ತಿರುವುದನ್ನು ಕಾಣಬಹುದು. ಏನೂ ಅರಿಯದ ಆ ಮುಗ್ಧ ಮಕ್ಕಳು ಐದು ವರ್ಷಗಳ ಕಾಲ ನಿರಂತರ ತರಬೇತಿ ಪಡೆಯುತ್ತಾರೆೆ. ಅವರಲ್ಲಿ ಬಹುತೇಕರು ಶೇ.೯೦ಕ್ಕಿಂತ ಹೆಚ್ಚು ಅಂಕಗಳು ಬಂದೇ ಬರುತ್ತವೆ ಎಂದು ನಂಬಿರುತ್ತಾರೆ. ಯಾವುದೇ ಕಾರಣಕ್ಕೂ ಕಡಿಮೆ ಬರಲಾರದು. ತನಗೆ ಐಐಟಿಯಲ್ಲಿ ಪ್ರವೇಶ ಸಿಕ್ಕೇ ಸಿಗುತ್ತದೆ ಎಂಬುದನ್ನು ತಲೆ ತುಂಬಾ ತುಂಬಿಕೊಂಡಿರುತ್ತಾರೆ. ಒಂದು ಪಕ್ಷ ಕಡಿಮೆ ಫಲಿತಾಂಶ ಬಂದಾಗ ನೀರಿನಿಂದ ಹೊರತೆಗೆದ ಮೀನಿನಂತೆ ಒದ್ದಾಡುತ್ತಾರೆ. ಅಷ್ಟು ವರ್ಷಗಳಿಂದ ಕಲಿತಾಗ ಆ ವಿದ್ಯಾರ್ಥಿಗೆ ಸೀಟು ದೊರೆಯದಿದ್ದರೆ ಆಗುವ ಮಾನಸಿಕ ಹಿಂಸೆಯನ್ನು ವರ್ಣಿಸಲು ಸಾಧ್ಯವಿಲ್ಲ. ಜೊತೆಗೆ ಮನೆಯವರಿಂದ ತಿರಸ್ಕಾರಕ್ಕೆ ಒಳಗಾಗಿ ಅದು ಪರ್ಯಾಯ ಮಾರ್ಗವಿಲ್ಲ ಎಂದು ಆತ್ಮಹತ್ಯೆಯಂತಹ ದುರಂತ ಅಂತ್ಯಕ್ಕೆ ಮುಂದಾಗುತ್ತಾರೆ. ಅದಕ್ಕೆ ಬದಲಾಗಿ ಕಡಿಮೆ ಫಲಿತಾಂಶ ಬಂದಾಗ ಅದರ ಹಿಂದಿರುವ ಕಾರಣ ತಮ್ಮ ವ್ಯಾಪ್ತಿಗೆ ಮೀರಿದ್ದು ಎಂದುಕೊಂಡು ಸ್ವೀಕರಿಸುವ ಮನೋಭಾವದ ಬಗ್ಗೆ ಮಕ್ಕಳಲ್ಲಿ ಜಾಗೃತ ಮೂಡಿಸುವುದು ಶಿಕ್ಷಕರು, ಪಾಲಕರಾದಿಯಾಗಿ ಎಲ್ಲರ ಜವಾಬ್ದಾರಿಯಾಗಬೇಕಿದೆ.

ಇನ್ನಾದರೂ ನಮ್ಮ ಪೋಷಕರು ಮತ್ತು ವಿದ್ಯಾರ್ಥಿಗಳು ಎಚ್ಚೆತ್ತುಕೊಳ್ಳಬೇಕು. ಪ್ರತಿಷ್ಠಿತ ಕಾಲೇಜು ಮುಖ್ಯವಲ್ಲ ಮಗುವಿನಲ್ಲಿರುವ ಕೌಶಲ ಮಹತ್ವ ಪಡೆಯುತ್ತದೆ ಎನ್ನುವುದು ಅನೇಕ ಉದಾಹರಣೆಗಳ ಮೂಲಕ ಈಗಾಗಲೇ ಸಾಬೀತಾಗಿದೆ. ಅದನ್ನು ಪಾಲಕರು ಇಂದಿಗೂ ಪರಿಗಣಿಸದಿರುವುದು ಅಚ್ಚರಿಯ ಸಂಗತಿ. ಜೊತೆಗೆ ಪ್ರತಿಷ್ಠಿತ ಕಾಲೇಜಿನಲ್ಲಿ ಪ್ರವೇಶ ಪಡೆದವರೆಲ್ಲರೂ ಸಂತೃಪ್ತಿ ಹೊಂದಿದ್ದಾರೆ ಎನ್ನಲಾಗದು. ಅದರಲ್ಲೂ ಅವುಗಳ ಮಾಯಾಜಾಲಕ್ಕೆ ಮರುಳಾಗಿ ನಂತರ ನಿರಾಶೆ ಹೊಂದಿದವರನ್ನೂ ಕಾಣಬಹುದು.

ಪೋಷಕರು ಮಕ್ಕಳ ಜೊತೆಯಲ್ಲಿ ಸಾಧ್ಯವಾದಷ್ಟು ಹೆಚ್ಚಿನ ಸಮಯವನ್ನು ಕಳೆಯುತ್ತಾ ಸಮರ್ಪಕ ಮಾರ್ಗದರ್ಶನ ಮಾಡಬೇಕು. ಅದರಲ್ಲೂ ಪರೀಕ್ಷೆ ಮುಗಿದ ನಂತರ ಫಲಿತಾಂಶ ಬರುವ ನಡುವಿನ ವಿಶ್ರಾಂತಿ ಅವಧಿಯಲ್ಲಿ ಮುಂದೆ ಸಾಗಬೇಕಾದ ಮಾರ್ಗ, ನಿರೀಕ್ಷಿಸಿದ್ದು ಸಿಗದಿದ್ದಾಗ ಬೇರೆ ಯಾವುದರ ಕಡೆ ಗಮನ ಕೊಡಬೇಕು? ಇತ್ಯಾದಿಗಳನ್ನು ಮುಕ್ತವಾಗಿ ಚರ್ಚೆ ಮಾಡಬೇಕು. ಅದರ ಜೊತೆಗೆ ಫಲಿತಾಂಶ ಹೇಗಾದರೂ ಬರಲಿ ಅದನ್ನು ಬದಲಿಸಲು ಸಾಧ್ಯವಿಲ್ಲ ಎಂಬ ಭಾವನೆ ತಾಳುವ ಮನೋಭಾವ ಬೆಳೆಸಬೇಕು. ನಿರೀಕ್ಷಿತ ಅಂಕ ಪಡೆಯದಿದ್ದರೆ ಅದನ್ನು ಸ್ವೀಕರಿಸುವ ಸಾಮರ್ಥ್ಯ ಮಗುವಿನಲ್ಲಿ ಬೆಳೆಸಿಕೊಳ್ಳಬೇಕು. ಈ ಒಂದು ಪರೀಕ್ಷೆಯ ಫಲಿತಾಂಶವೇ ಜೀವನದ ಅಂತಿಮ ಅವಕಾಶವಲ್ಲ. ಅದರ ಆಚೆಗೂ ಬದುಕಿದೆ ಎಂಬುದನ್ನು ಸ್ಪಷ್ಟವಾಗಿ ಮನದಟ್ಟು ಮಾಡಿಕೊಡಬೇಕು.

ಪಾಲಕರ ಜೊತೆಗೆ ವಿದ್ಯಾರ್ಥಿಗಳು ಮೊತ್ತಮೊದಲಿಗೆ ಆ ಒತ್ತಡದಿಂದ ಹೊರಬರಬೇಕು. ಫಲಿತಾಂಶ ಬರುವುದಕ್ಕಿಂತ ಮುಂಚೆ ಪ್ರಮುಖ ಆಯ್ಕೆಗಳನ್ನು ಗುರುತಿಸುತ್ತಾ, ಪರ್ಯಾಯ ಆಯ್ಕೆಗಳನ್ನು ಗುರುತಿಸಿಕೊಳ್ಳಬೇಕು. ನಿರ್ದಿಷ್ಟವಾಗಿ ಒಂದು ಕೋರ್ಸ್ ಮತ್ತು ಕಾಲೇಜನ್ನು ಆಯ್ಕೆ ಮಾಡಿಕೊಳ್ಳುವುದರ ಜೊತೆಗೆ ಬೇರೆ ಬೇರೆ ಯೋಜನೆಗಳನ್ನೂ ಸಿದ್ಧಪಡಿಸಿಕೊಂಡಿರಬೇಕು. ಪ್ರಪಂಚದಲ್ಲಿ ಪ್ರಸಿದ್ಧರಾದ ವ್ಯಕ್ತಿಗಳೆಲ್ಲರೂ ಬೇರೆ ಬೇರೆ ಯೋಜನೆ ರೂಪಿಸಿಕೊಂಡಿದ್ದವರೇ ಆಗಿದ್ದಾರೆ. ಆದರೆ ಇಂದಿನ ಮಕ್ಕಳು ಒಂದೇ ಕಡೆ ಕೇಂದ್ರೀಕೃತವಾಗುತ್ತಾರೆ. ಅದರಲ್ಲಿ ಯಶಸ್ಸು ಗಳಿಸಲಾಗದಾಗ ಚಿಂತೆಯಲ್ಲಿ ಬೀಳುತ್ತಾರೆ. ಅದಕ್ಕೆ ಬದಲಾಗಿ ಬೇರೆ ಅವಕಾಶಗಳತ್ತ ಮುನ್ನುಗ್ಗುವ ಛಾತಿಯು, ಅವರು ಒಂದೇ ಜೇಡರ ಬಲೆಯಲ್ಲಿ ಸಿಕ್ಕಿಹಾಕಿಕೊಂಡಿಲ್ಲ ಎಂಬುದನ್ನು ನಿರೂಪಿಸುತ್ತದೆ.

ಸರಕಾರ ಮತ್ತು ಶಿಕ್ಷಣ ಸಂಸ್ಥೆಗಳು ಈಗಿನ ಪರೀಕ್ಷಾ ಪದ್ಧತಿಯಲ್ಲಿ ಇರುವ ಅಂಕಗಳ ನೀಡುವಿಕೆ, ರ್ಯಾಂಕ್ ವ್ಯವಸ್ಥೆ ಕುರಿತು ಗಂಭೀರವಾಗಿ ಚಿಂತಿಸಬೇಕಿವೆ. ಅಂಕಗಳ ಆಧಾರದಲ್ಲಿ ಅಥವಾ ಕಲಿಕೆಯ ಆಧಾರದಲ್ಲಿ ಗ್ರೇಡ್ ನೀಡುವ ವ್ಯವಸ್ಥೆ ಬಗ್ಗೆ ಚರ್ಚೆಗಳು ನಡೆದಿದ್ದು ಅದು ಅನುಷ್ಠಾನವಾದರೆ ಹೆಚ್ಚು ಅನುಕೂಲವಾಗಬಹುದು. ವಿದ್ಯಾರ್ಥಿಗಳಲ್ಲಿ ಆಸಕ್ತಿ, ಏಕಾಗ್ರತೆ, ಮಾನಸಿಕ ದೃಢತೆ ಮೂಡಿಸಲು, ಸಮಸ್ಯೆಗಳ ನಿವಾರಣೆಗೆ ಪರಿಣಿತ ಆಪ್ತ ಸಮಾಲೋಚಕರನ್ನು ನೇಮಿಸಬೇಕು. ತಕ್ಷಣಕ್ಕೆ ಶಿಕ್ಷಕರು/ಉಪನ್ಯಾಸಕರನ್ನು ತರಬೇತಿ ನೀಡಿ ಸನ್ನದ್ಧಗೊಳಿಸಬಹುದು. ಆ ಮೂಲಕ ಮಾನಸಿಕ ಖಿನ್ನತೆಗೆ ಒಳಗಾದ ಮಕ್ಕಳಿಗೆ ಬೆಂಬಲ ನೀಡಬಹುದು.

ಈ ರೀತಿಯ ಬೆಳವಣಿಗೆಯು ಮಕ್ಕಳ ಮೇಲಿನ ಒತ್ತಡ ಕಡಿಮೆ ಮಾಡುತ್ತದೆ. ಅದಕ್ಕೆ ಅವರು ಬೇರೆ ಬೇರೆ ರಂಗದಲ್ಲಿನ ಮಾಹಿತಿಯನ್ನು ಸಂಗ್ರಹಿಸಿಕೊಳ್ಳಬೇಕು. ಅವುಗಳಲ್ಲಿ ತಮ್ಮ ವ್ಯಾಪ್ತಿಗೆ ಸರಿಹೊಂದುವಂತಹವುಗಳನ್ನು ಪ್ರಾಶಸ್ತ್ಯವಾರು ಪಟ್ಟಿ ಮಾಡಿ, ಎಷ್ಟೆಷ್ಟು ಅಂಕ ಬಂದರೆ ಯಾವ ಯಾವ ಸಂಸ್ಥೆಗಳು ಯಾವ ಯಾವ ಕೋರ್ಸ್ ಗೆ ಪ್ರವೇಶ ನೀಡುತ್ತವೆ ಎಂಬುದನ್ನು ಇಲ್ಲಿ ಪರಿಗಣಿಸಬೇಕಾಗುತ್ತದೆ. ಇದು ನಿಧಾನವಾದ ಪ್ರಕ್ರಿಯೆಯಾಗಿದ್ದರೂ ಖಚಿತವಾಗಿ ಧನಾತ್ಮಕ ಪರಿಣಾಮ ಬೀರುತ್ತದೆ. ಮುಂದಿನ ಜೀವನವನ್ನು ಅದು ಹಂತಹಂತವಾಗಿ ಗಟ್ಟಿಗೊಳಿಸುತ್ತದೆ. ಅದರಿಂದ ಯಶಸ್ಸಿನ ಜೊತೆಗೆ ಪ್ರಭಾವಿ ವೃತ್ತಿಯನ್ನು ಪಡೆಯಬಹುದಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಡಾ. ಪರಮೇಶ್ವರಯ್ಯ ಸೊಪ್ಪಿಮಠ

contributor

Similar News