ಹಿಂಡನ್‌ಬರ್ಗ್ ಆರೋಪಗಳಿಗೆ ಉತ್ತರ ಕೊಡುವವರು ಯಾರು?

ಸೆಬಿ ಅಧ್ಯಕ್ಷರಾಗಿ ನೇಮಿಸುವಾಗ ಅವರ ಸಂಪೂರ್ಣ ವಿವರ ಸರಕಾರಕ್ಕೆ ತಲುಪುತ್ತದೆ. ಸೆಬಿ ಅಧ್ಯಕ್ಷೆ ಮಾಧವಿಯ ಈ ವಿದೇಶಿ ಹೂಡಿಕೆ ಬಗ್ಗೆ ಮೋದಿ ಸರಕಾರಕ್ಕೆ ಮಾಹಿತಿ ಇತ್ತೇ? ಅಥವಾ ಇರಲಿಲ್ಲವೇ ? ಮಾಹಿತಿ ಇತ್ತು ಎಂದಾದರೆ ಅದು ಅತ್ಯಂತ ಅಪಾಯಕಾರಿ. ಇಷ್ಟೆಲ್ಲಾ ಗೊತ್ತಿದ್ದೂ ಅವರನ್ನೇ ಯಾಕೆ ಅಧ್ಯಕ್ಷರಾಗಿ ನೇಮಿಸಲಾಯಿತು ಎಂಬ ಪ್ರಶ್ನೆ ಏಳುತ್ತದೆ. ಒಂದೊಮ್ಮೆ ಮಾಹಿತಿ ಇರಲಿಲ್ಲ ಅಂದರೂ ಅದು ಇನ್ನಷ್ಟು ಕಳವಳಕಾರಿ. ಇಂತಹ ಮಹತ್ವದ ಮಾಹಿತಿ ಅದೇಗೆ ಸರಕಾರದ ಅದೂ ಮೋದಿ ಸರಕಾರದ ಕಣ್ಣಿಂದ ತಪ್ಪಿ ಹೋಗುತ್ತದೆ? ಇದಕ್ಕಿಂತ ದೊಡ್ಡ ವೈಫಲ್ಯ ಬೇರೇನಿದೆ? ಸರಕಾರ ಸ್ಪಷ್ಟನೆ ನೀಡಬೇಕಾಗಿದೆ.

Update: 2024-08-13 08:35 GMT

ಮೊನ್ನೆ ಅಗಸ್ಟ್ 10. ಶನಿವಾರ ‘‘ಸಮ್‌ತಿಂಗ್ ಬಿಗ್ ಸೂನ್ ಇಂಡಿಯಾ’’ ಎಂದು ಅಮೆರಿಕದ ಶಾರ್ಟ್ ಸೆಲ್ಲಿಂಗ್ ಕಂಪೆನಿ ಹಿಂಡನ್ ಬರ್ಗ್ ಒಂದು ಟ್ವೀಟ್ ಮಾಡುತ್ತದೆ.

ಷೇರುಪೇಟೆಯ ವಾಸ್ತವಿಕ ಬೆಲೆಗಿಂತ ಕೃತಕ ಬೆಲೆಯಲ್ಲಿ ಅದಾನಿ ಸಮೂಹದ ಷೇರುಗಳು ಮಾರಾಟವಾಗುತ್ತಿವೆ ಎಂದು 2023ರ ಜನವರಿಯಲ್ಲಿ ಆರೋಪಿಸಿದ್ದ ಹಿಂಡನ್‌ಬರ್ಗ್ ಸಂಸ್ಥೆ ತಾನು ಮತ್ತೊಂದು ವರದಿಯನ್ನು ಬಿಡುಗಡೆ ಮಾಡಲಿದ್ದೇನೆ ಎಂದು ಹೇಳಿದಾಗ ಬಹುಶಃ ಈ ಬಾರಿ ಅಂಬಾನಿ ಮೇಲೆ ಗುರಿ ಇರಬೇಕೆಂದು ತುಂಬಾ ಜನ ಭಾವಿಸಿದ್ದರು.

ತನ್ನ ಒಂದು ವರದಿಯ ಮೂಲಕ ಅದಾನಿ ಗ್ರೂಪ್ ನ ಸಂಘಟಿತ ಮಾರುಕಟ್ಟೆ ಮೌಲ್ಯದಲ್ಲಿ 86 ಬಿಲಿಯನ್ ಡಾಲರ್ ಅಳಿಸಿಹಾಕಿದ್ದ ಹಿಂಡನ್‌ಬರ್ಗ್ ಈಗ ಯಾವ ಹೊಸ ವರದಿ ಹೊರ ತರಲಿದೆ ಎಂಬ ಕುತೂಹಲ ಎಲ್ಲರಲ್ಲೂ ಇತ್ತು.

ಆದರೆ ಏನೇ ವರದಿ ತಂದರೂ ಇಲ್ಲಿ ಆಗುವುದೇನಿದೆ ಎಂದೂ ಕೆಲವರು ಕೇಳಿದ್ದರು.

ಕಳೆದ ಬಾರಿ ಹಿಂಡನ್ ಬರ್ಗ್ ವರದಿ ಬಂದಾಗ ಅದಾನಿ ಗೆ ದೊಡ್ಡ ಮಟ್ಟದಲ್ಲಿ ನಷ್ಟವಾಯಿತಾದರೂ ಕೊನೆಗೆ ಸುಪ್ರೀಂ ಕೋರ್ಟ್ ಕ್ಲೀನ್ ಚಿಟ್ ನೀಡಿದೆ ಎಂದು ಪ್ರಕರಣ ಬಂದಾಗಿ ಬಿಟ್ಟಿತು. ಈ ಬಾರಿಯೂ ಏನಾದರೂ ಅದಾನಿ, ಅಂಬಾನಿ ಬಗ್ಗೆ ಬಂದರೂ ಈಗಿರುವ ವ್ಯವಸ್ಥೆಯಲ್ಲಿ ಇಲ್ಲಿ ಏನೂ ಆಗುವುದಿಲ್ಲ ಎಂಬ ಚರ್ಚೆ ನಡೆದಿದೆ.

ಆದರೆ ಹಿಂಡನ್‌ಬರ್ಗ್ ಪ್ರಕಟಿಸಿದ ವರದಿ ಭಾರತದ ಕಾರ್ಪೊರೇಟ್ ವ್ಯವಸ್ಥೆ ಮಾತ್ರವಲ್ಲ, ಇಡೀ ಸರಕಾರವನ್ನೇ ಅಲುಗಾಡಿಸಿ ಬಿಟ್ಟಿದೆ.

ಯಾರೂ ಊಹಿಸದ್ದು ಆಗಿ ಹೋಗಿದೆ ಎಂದು ಈ ಹೊಸ ವರದಿ ಹೇಳಿದೆ.

ದೇಶದಲ್ಲಿ ಷೇರು ಮಾರುಕಟ್ಟೆಯನ್ನು ನೋಡಿಕೊಳ್ಳಬೇಕಾದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ ಅಂದರೆ ಸೆಬಿಯ ಅಧ್ಯಕ್ಷೆ ಮತ್ತು ಅವರ ಪತಿಯೇ ಈ ವಿದೇಶೀ ಆಫ್ ಶೋರ್ ಕಂಪೆನಿಗಳಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ಹಿಂಡನ್‌ಬರ್ಗ್ ವರದಿ ಹೇಳಿದೆ.

ಆಫ್ ಶೋರ್ ಕಂಪೆನಿ ಅಂದರೆ ಸುಲಭವಾಗಿ, ಸರಳವಾಗಿ ಬೇನಾಮಿ ಕಂಪೆನಿ. ತೆರಿಗೆ ವಂಚಿಸಲು ಹಾಗೂ ಯಾರ ದುಡ್ಡು ಎಂದು ಬಯಲು ಮಾಡದೇ ಇರಲು ತೆರಿಗೆ ಸ್ವರ್ಗ ಎಂದು ಹೇಳಲಾಗುವ ವಿದೇಶಗಳಲ್ಲಿ ಸ್ಥಾಪಿಸುವ ಕಂಪೆನಿಗಳು ಅಥವಾ ಫಂಡ್‌ಗಳು ಇವು.

ಇವುಗಳ ಮಾಲಕರು ಯಾರು ಮತ್ತು ಇವುಗಳಲ್ಲಿ ಹೂಡಿಕೆ ಯಾರದ್ದು ಎಂಬುದು ಗೊತ್ತಾಗುವುದಿಲ್ಲ.

ಅದಾನಿ ಕಂಪೆನಿಗಳ ಷೇರ್‌ಗಳನ್ನು ಹೆಚ್ಚಿಸಲು ಉಪಯೋಗಿಸಲಾಗಿದೆ ಎನ್ನಲಾದ ಬರ್ಮುಡ ಮತ್ತು ಮಾರಿಶಸ್ ಮೂಲದ ಆಫ್ ಶೋರ್ ಫಂಡ್‌ಗಳಲ್ಲಿ ಸೆಬಿ ಅಧ್ಯಕ್ಷೆ ಮಾಧವಿ ಪುರಿ ಬುಚ್ ಮತ್ತು ಅವರ ಪತಿ ಧವಲ್ ಬುಚ್ ಪಾಲು ಹೊಂದಿದ್ದಾರೆ ಎಂದು ಹಿಂಡನ್ ಬರ್ಗ್ ದಾಖಲೆಗಳ ಸಹಿತ ಆರೋಪಿಸಿದೆ.

ಯಾರು ಷೇರು ಮಾರುಕಟ್ಟೆಯಲ್ಲಿ ಭ್ರಷ್ಟಾಚಾರ ನಿಲ್ಲಿಸಬೇಕಿತ್ತೋ ಅವರೇ ಭ್ರಷ್ಟರು ಎಂದು ಹಿಂಡನ್‌ಬರ್ಗ್ ಆರೋಪಿಸಿದೆ.

ಅಂದರೆ ಇದು ಬೇಲಿಯೇ ಎದ್ದು ಹೊಲ ಮೇಯ್ದ ಕತೆ.

ಇನ್ನೂ ಸುಲಭವಾಗಿ ಅರ್ಥ ಆಗಬೇಕು ಅಂದರೆ ‘‘ಚೌಕಿದಾರ್ ಹಿ ಚೋರ್ ಹೈ’’ ಎಂದು ಹಿಂಡನ್‌ಬರ್ಗ್ ಆರೋಪಿಸಿದೆ.

ಸೆಬಿ ಭಾರತ ಸರಕಾರದ ಅಧೀನ ಸಂಸ್ಥೆಯಾಗಿದ್ದು ಇದರ ಅಧ್ಯಕ್ಷರನ್ನು ಕೇಂದ್ರ ಸರಕಾರವೇ ನೇಮಿಸುತ್ತದೆ.

ದೇಶದಲ್ಲಿ ಕಾರ್ಪೊರೇಟ್ ಕ್ಷೇತ್ರ ಹಾಗೂ ಷೇರು ಮಾರುಕಟ್ಟೆ ಮೇಲೆ ನಿಗಾ ವಹಿಸುವ ಮತ್ತು ಅಕ್ರಮ ಕಂಡು ಬಂದಲ್ಲಿ ಕ್ರಮ ಜರುಗಿಸುವ ಅಧಿಕಾರ ಸೆಬಿಗೆ ಇದೆ.

ಹಿಂಡನ್‌ಬರ್ಗ್ ಹೊಸ ವರದಿ ಏನು ಹೇಳುತ್ತದೆ ಎಂಬುದರ ಕುರಿತಾಗಿ ವಿವರವಾಗಿ ಚರ್ಚಿಸುವ ಮುನ್ನ ಕೆಲವು ಮಹತ್ವದ ಪ್ರಶ್ನೆಗಳನ್ನು ಕೇಳಬೇಕಾಗುತ್ತದೆ.

ಸೆಬಿ ಅಧ್ಯಕ್ಷರೇ ಷೇರುಗಳ ಮೌಲ್ಯಗಳಲ್ಲಿ ಅಕ್ರಮವೆಸಗಿರುವ ಆರೋಪಕ್ಕೆ ಗುರಿಯಾಗಿರುವ ಅದಾನಿ ಸಮೂಹದ ವಿದೇಶದ ಫಂಡ್‌ಗಳಲ್ಲಿ ಪಾಲು ಹೊಂದಿದ್ದಾರೆ ಎಂದಾದರೆ ಅದಾನಿ ವಿರುದ್ಧ ಈವರೆಗೆ ನಡೆದ ತನಿಖೆ ಎಷ್ಟು ವಿಶ್ವಾಸಾರ್ಹ? ಅದಾನಿ ವಿರುದ್ಧ ಸೂಕ್ತ ಪ್ರಾಧಿಕಾರದಿಂದ ಮರು ತನಿಖೆ ನಡೆಯಬೇಕಲ್ಲವೇ?

ಅದಾನಿ ಅಕ್ರಮ ನಡೆಸಿದ ಆರೋಪ ಕೇಳಿ ಬಂದಾಗ ಅದರ ತನಿಖೆ ನಡೆಸಿದ್ದು ಸೆಬಿ. ಈಗ ಸಬಿ ಅಧ್ಯಕ್ಷರೇ ಅಕ್ರಮ ಎಸಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿರುವಾಗ ತನಿಖೆ ನಡೆಸುವುದು ಯಾರು? ಸೆಬಿ ಅಧ್ಯಕ್ಷರು ಈವರೆಗೂ ರಾಜೀನಾಮೆ ಯಾಕೆ ನೀಡಿಲ್ಲ? ಸರಕಾರ ಈವರೆಗೂ ಅವರ ವಿರುದ್ಧ ತನಿಖೆ ಯಾಕೆ ಪ್ರಾರಂಭಿಸಿಲ್ಲ.

ನನ್ನ ಜೀವನ ತೆರೆದ ಪುಸ್ತಕದಂತೆ ಎಂದು ಹೇಳಿ ಹಿಂಡನ್ ಬರ್ಗ್ ವರದಿಯನ್ನು ಸೆಬಿ ಅಧ್ಯಕ್ಷರು ಖಂಡಿಸುತ್ತಿರುವಾಗ ಕೇಂದ್ರ ಸರಕಾರ ಬೇಗನೇ ತೆರೆದ ಪುಸ್ತಕವನ್ನು ಓದಿ ಸ್ಪಷ್ಟೀಕರಣ ನೀಡಬೇಕಲ್ಲವೇ? ಇಷ್ಟು ವಿಳಂಬ ಯಾಕೆ?

‘‘ಹಿಂಡನ್ ಬರ್ಗ್ ವರದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ನಮ್ಮ ಬದುಕು ತೆರೆದ ಪುಸ್ತಕದಂತಿದೆ. ಅಗತ್ಯವಿರುವ ದಾಖಲೆಗಳನ್ನು ಹಲವಾರು ವರ್ಷಗಳಿಂದ ಸೆಬಿಗೆ ಒದಗಿಸುತ್ತಾ ಬರಲಾಗುತ್ತಿದೆ. ನಾವು ಖಾಸಗಿ ವ್ಯಕ್ತಿಗಳಾಗಿದ್ದಾಗಿನ ಅವಧಿಗೆ ಸಂಬಂಧಿಸಿದ ದಾಖಲೆಗಳಿಂದ ಹಿಡಿದು ಯಾವುದೇ ಮತ್ತು ಎಲ್ಲ ಆರ್ಥಿಕ ದಾಖಲೆಗಳನ್ನು ಯಾವುದೇ ಪ್ರಾಧಿಕಾರ ಬಯಸಿದರೂ, ಅದರ ಮುಂದೆ ಬಹಿರಂಗಪಡಿಸಲು ಸಿದ್ಧ’’ ಎಂದು ಮಾಧವಿ ಬುಚ್ ಹೇಳಿದ್ದಾರೆ.

ಹಾಗಾದರೆ ಈ ಪ್ರೈವೇಟ್ ಸಿಟಿಝನ್ ಅಥವಾ ಖಾಸಗಿ ವ್ಯಕ್ತಿ ಎಂದು ಮಾಧವಿ ಬುಚ್ ಹೇಳಿರುವುದು ಯಾವ ಅರ್ಥದಲ್ಲಿ?

ಇಲ್ಲಿ ಇನ್ನೂ ಒಂದು ಪ್ರಮುಖ ವಿಷಯವಿದೆ. ಸೆಬಿ ಅಧ್ಯಕ್ಷರಾಗಿ ನೇಮಿಸುವಾಗ ಅವರ ಸಂಪೂರ್ಣ ವಿವರ ಸರಕಾರಕ್ಕೆ ತಲುಪುತ್ತದೆ. ಸೆಬಿ ಅಧ್ಯಕ್ಷೆ ಮಾಧವಿಯ ಈ ವಿದೇಶಿ ಹೂಡಿಕೆ ಬಗ್ಗೆ ಮೋದಿ ಸರಕಾರಕ್ಕೆ ಮಾಹಿತಿ ಇತ್ತೇ? ಅಥವಾ ಇರಲಿಲ್ಲವೇ ? ಮಾಹಿತಿ ಇತ್ತು ಎಂದಾದರೆ ಅದು ಅತ್ಯಂತ ಅಪಾಯಕಾರಿ. ಇಷ್ಟೆಲ್ಲಾ ಗೊತ್ತಿದ್ದೂ ಅವರನ್ನೇ ಯಾಕೆ ಅಧ್ಯಕ್ಷರಾಗಿ ನೇಮಿಸಲಾಯಿತು ಎಂಬ ಪ್ರಶ್ನೆ ಏಳುತ್ತದೆ.

ಒಂದೊಮ್ಮೆ ಮಾಹಿತಿ ಇರಲಿಲ್ಲ ಅಂದರೂ ಅದು ಇನ್ನಷ್ಟು ಕಳವಳಕಾರಿ. ಇಂತಹ ಮಹತ್ವದ ಮಾಹಿತಿ ಅದೇಗೆ ಸರಕಾರದ ಅದೂ ಮೋದಿ ಸರಕಾರದ ಕಣ್ಣಿಂದ ತಪ್ಪಿ ಹೋಗುತ್ತದೆ? ಇದಕ್ಕಿಂತ ದೊಡ್ಡ ವೈಫಲ್ಯ ಬೇರೇನಿದೆ? ಸರಕಾರ ಸ್ಪಷ್ಟನೆ ನೀಡಬೇಕಾಗಿದೆ. ವಿಪಕ್ಷ ಬೇಡಿಕೆ ಇಟ್ಟಿರುವ ಹಾಗೆ ಜಂಟಿ ಸಂಸದೀಯ ಸಮಿತಿ ರಚನೆ ಆಗಬೇಕು ಮತ್ತು ಈ ಕುರಿತಾಗಿ ಕೂಲಂಕುಶ ತನಿಖೆ ನಡೆಯಬೇಕು.

ಇನ್ನು ವಿಷಯಕ್ಕೆ ಬರೋಣ.

ಹಿಂಡನ್ ಬರ್ಗ್ ವರದಿ ಪ್ರಕಾರ ಸೆಬಿ ಅಧ್ಯಕ್ಷೆ ಮಾಧವಿ ಪುರಿ ಬುಚ್ ಅವರು ಅದಾನಿ ಗ್ರೂಪ್ ತನ್ನ ಷೇರುಗಳ ಬೆಲೆಗಳನ್ನು ಕೃತಕವಾಗಿ ಹೆಚ್ಚಿಸಲು ಬಳಸುತ್ತಿದ್ದ ಬೇನಾಮಿ ವಿದೇಶಿ ನಿಧಿಗಳಲ್ಲಿ ಹೂಡಿಕೆಗಳನ್ನು ಹೊಂದಿದ್ದರು.

2015ರಲ್ಲಿ ಮಾಧವಿ ಪುರಿ ಬುಚ್ ಮತ್ತು ಅವರ ಪತಿ ಧವಲ್ ಬುಚ್ ವಿನೋದ್ ಅದಾನಿಯವರು ಭಾರತಕ್ಕೆ ಹಣ ತರಲು ಉಪಯೋಗಿಸಿರುವಂತಹ ಫಂಡಿನಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ವರದಿ ಹೇಳಿದೆ.

ಮಾರ್ಚ್ 2017ರಲ್ಲಿ ಸೆಬಿಯ ಪೂರ್ಣ ಅವಧಿಯ ಸದಸ್ಯರಾಗುವ ಎರಡು ವಾರ ಮುಂಚೆ ಫೆಬ್ರವರಿ 2017ರಲ್ಲಿ ಜಂಟಿಯಾಗಿದ್ದ ಎಲ್ಲಾ ಹೂಡಿಕೆಗಳನ್ನು ಮಾಧವಿ ಬುಚ್ ಸಂಪೂರ್ಣವಾಗಿ ತಮ್ಮ ಪತಿಯ ಖಾತೆಗೆ ಟ್ರಾನ್ಸ್‌ಫರ್ ಮಾಡಿದ್ದಾರೆ ಎಂದು ವರದಿ ಹೇಳಿದೆ.

ಅಷ್ಟೇ ಅಲ್ಲ ಎಪ್ರಿಲ್ 2019ರಲ್ಲಿ ಅಮೆರಿಕ ಮೂಲದ ಫರ್ಮ್ ಬ್ಲಾಕ್‌ಸ್ಟೋನ್ ಭಾರತದಲ್ಲಿ ಮೊಟ್ಟಮೊದಲ ರಿಯಲ್ ಎಸ್ಟೇಟ್ ಇನ್ವೆಸ್ಟ್‌ಮೆಂಟ್ ಟ್ರಸ್ಟ್ ಪ್ರಾರಂಭಿಸಲು ಅನುಮತಿ ಪಡೆಯುವುದರ ಹಿಂದೆ ಆಟ ನಡೆದಿದೆ ಎಂದು ಹಿಂಡನ್ ಬರ್ಗ್ ಆರೋಪಿಸಿದೆ.

ಈ ಅನುಮತಿಗೆ ಬದಲಾಗಿ ಜುಲೈ 2019ರಲ್ಲಿ ಮಾಧವಿ ಬುಚ್ ಅವರ ಪತಿ ಧವಲ್ ಬುಚ್ ಅವರನ್ನು ಬ್ಲಾಕ್ ಸ್ಟೋನ್ ತನ್ನ ಹಿರಿಯ ಸಲಹೆಗಾರರಾಗಿ ನೇಮಿಸಿದೆ ಎಂದು ಹಿಂಡನ್‌ಬರ್ಗ್ ವರದಿ ಹೇಳಿದೆ.

ಇನ್ನು ಮಾರ್ಚ್ 2022ರಲ್ಲಿ ಮಾಧವಿ ಬುಚ್ ಅವರನ್ನು ಸೆಬಿ ಅಧ್ಯಕ್ಷೆಯಾಗಿ ನೇಮಕ ಮಾಡುವುದರ ಹಿಂದೆಯೂ ರಾಜಕೀಯ ಇದೆ ಎಂದು ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಹೇಳಿದ್ದಾರೆ.

ಮಾರ್ಕೆಟ್‌ನಲ್ಲಿ ಈಗಿರುವ ಮಾತುಗಳ ಪ್ರಕಾರ ಮಾಧವಿ ಅವರ ಪತಿಯ ಸಂಬಂಧಿಯಾಗಿರುವ ಸುಧೀರ್ ಮಂಕಡ್ ಅವರ ಸಹಾಯದಿಂದ ಈ ಹುದ್ದೆ ಲಭಿಸಿತು.

ಸುಧೀರ್ ಮಂಕಡ್ ಪ್ರಧಾನಿ ಮೋದಿ ಗುಜರಾತಿನಲ್ಲಿ ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ಗುಜರಾತ್ ಸರಕಾರದ ಮುಖ್ಯ ಕಾರ್ಯದರ್ಶಿಯಾಗಿದ್ದವರು ಎಂದು ಮಹುವಾ ಹೇಳಿದ್ದಾರೆ.

ಇದು ಮಾಧವಿ ಮೇಲಿರುವ ಗಂಭೀರ ಆರೋಪಗಳ ಸಂಕ್ಷಿಪ್ತ ಸಾರ.

ಅದಾನಿ ಮೇಲೆ ಆರೋಪ ಕೇಳಿಬಂದಾಗ ಸರಿಯಾದ ತನಿಖೆ ನಡೆಯದ ಕಾರಣ ಅವರು ತಪ್ಪಿಸಿಕೊಂಡ ಹಾಗೆ ಈ ಬಾರಿ ಮಾಧವಿ ಅವರೂ ತಪ್ಪಿಸಿಕೊಳ್ಳುವರೇ ಎಂಬುದು ಮುಖ್ಯ ಪ್ರಶ್ನೆ.

ಹಿಂಡನ್‌ಬರ್ಗ್ ವರದಿಗಳನ್ನು ಹಣ ಮಾಡುವ ತಂತ್ರ ಎಂದು ಹೇಳಿ ನಿರ್ಲಕ್ಷಿಸಿ ಬಿಡುವ ಸೆಬಿ ಜರ್ಮನಿಯಿಂದ ಪಾಠ ಕಲಿಯಬೇಕಿದೆ.

ಜರ್ಮನಿಯಲ್ಲಿ ವೈರ್ ಕಾರ್ಡ್ ಹೆಸರಿನ ಕಂಪೆನಿ ಅಕ್ರಮ ನಡೆಸುತ್ತಿದೆ ಎಂದು ಝಟಾರ ಹೆಸರಿನ ಶಾರ್ಟ್ ಸೆಲ್ಲರ್ ಹಾಗೂ ಸಂಶೋಧನಾ ಸಂಸ್ಥೆಯೊಂದು ಆರೋಪಿಸುತ್ತದೆ.

ಜರ್ಮನಿಯ ಅಧಿಕಾರಿಗಳು ಸರಿಯಾದ ತನಿಖೆ ನಡೆಸಿದ ಕಾರಣ ಈ ಮಹಾ ಹಗರಣ ಹೊರ ಬರುತ್ತದೆ ಮತ್ತು ಕಂಪೆನಿ ತನ್ನನ್ನು ದಿವಾಳಿ ಎಂದು ಘೋಷಿಸಿ ಬಿಡುವ ಪರಿಸ್ಥಿತಿ ಸೃಷ್ಟಿಯಾಗುತ್ತದೆ.

ಆದರೆ ಭಾರತದಲ್ಲಿ ಈ ರೀತಿ ಗಂಭೀರ ಆರೋಪಗಳು ಕೇಳಿ ಬಂದಾಗ ವಿದೇಶಿ ಕೈಗಳು ಭಾರತದ ಆರ್ಥಿಕತೆಯನ್ನು ಹೊಡೆದು ಹಾಕಲು ಪ್ರಯತ್ನಿಸುತ್ತಿವೆ ಎಂಬ ಮಾತನ್ನು ಹೇಳಲಾಗುತ್ತದೆ.

‘‘ತಮ್ಮ ಅಧ್ಯಕ್ಷೆಯನ್ನು ಬಚಾವು ಮಾಡಲು ಅದಾನಿ ಹಗರಣದ ಬಗ್ಗೆ ಸೆಬಿ ಸರಿಯಾಗಿ ತನಿಖೆ ನಡೆಸಿಲ್ಲ ಎಂಬ ಆರೋಪ ನಿಜವೇ? ಹೂಡಿಕೆದಾರರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಕಳೆದುಕೊಂಡರೆ, ಯಾರು ಜವಾಬ್ದಾರರಾಗುತ್ತಾರೆ? ಪ್ರಧಾನಿ ಮೋದಿ, ಸೆಬಿ ಅಧ್ಯಕ್ಷೆ ಅಥವಾ ಗೌತಮ್ ಅದಾನಿಯೇ’’ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

ಈ ಪ್ರಶ್ನೆ ಸರಿಯಾಗಿಯೇ ಇದೆ. ಚೌಕಿದಾರ್ ಚೋರ್ ಆಗಿ ಬಿಟ್ಟರೆ ಮಾಡುವುದಾದರೂ ಏನು?

ಅಂದು ಅದಾನಿ ವಿರುದ್ಧದ ತನಿಖೆ ದಿಕ್ಕಿಲ್ಲದಂತಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ಸೆಬಿ ಹೇಳಿತ್ತು. ತನಿಖೆಯ ದಿಕ್ಕು ತಮ್ಮದೇ ಅಧ್ಯಕ್ಷೆಯ ಕಡೆಗಿರಬೇಕಾಗಿದ್ದದ್ದು ಎಂದು ಈಗ ಸೆಬಿ ಸುಪ್ರೀಂ ಕೋರ್ಟ್‌ಗೆ ಹೋಗಿ ಹೇಳುತ್ತದೆಯೇ?

ಲೋಕಸಭಾ ಚುನಾವಣೆಯಲ್ಲಿ ಎಕ್ಸಿಟ್ ಪೋಲ್ ಹೆಸರಲ್ಲಿ ಷೇರು ಮಾರುಕಟ್ಟೆಯಲ್ಲಿ ನಡೆದ ಬೃಹತ್ ಹಗರಣದ ಕುರಿತಾಗಿ ತನಿಖೆ ನಡೆಸದ ಸೆಬಿ ಈಗಲಾದರೂ ತನಿಖೆ ನಡೆಸುವುದೇ?

ಮುಖ್ಯಮಂತ್ರಿಗಳನ್ನು ಜೈಲಿನಲ್ಲಿಡುವ ಈ.ಡಿ., ಸಿಬಿಐಗೆ ಸಾಮಾನ್ಯ ಸಂಶೋಧನಾ ಸಂಸ್ಥೆಗಳು ಕಂಡು ಹಿಡಿದಿರುವುದನ್ನು ವರ್ಷಗಳಿಂದ ಕಂಡು ಹಿಡಿಯಲು ಸಾಧ್ಯವಾಗಿಲ್ಲ ಎಂಬುದು ಖೇದಕರ ಸಂಗತಿ.

‘‘ಇತ್ತೀಚೆಗೆ ಕೇಳಿ ಬಂದಿರುವ ಹೊಸ ಹಾಗೂ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ, ಈ ವಿಷಯವನ್ನು ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ಪರಿಶೀಲಿಸುತ್ತದೆಯೇ?’’ ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ಕೇಳಿದ್ದಾರೆ.

ಇದೆಲ್ಲದರ ನಡುವೆ ಸಂಸತ್ ಅಧಿವೇಶನ ಮುಂದೂಡಿದ್ದು ಭಾರೀ ಟೀಕೆಗೆ ಗ್ರಾಸವಾಗಿದೆ.

‘‘ಹಿಂಡೆನ್‌ಬರ್ಗ್ ವರದಿ ಬಹಿರಂಗ ಹಾಗೂ ನಿಗದಿತ ದಿನಾಂಕಕ್ಕಿಂತ ಎರಡು ದಿನ ಮೊದಲೇ ಸಂಸತ್ ಅಧಿವೇಶನವನ್ನು ಮುಂದೂಡಿರುವುದಕ್ಕೂ ಪರಸ್ಪರ ಸಂಬಂಧವಿದೆ’’ ಎಂದು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಸಂದೇಹ ವ್ಯಕ್ತಪಡಿಸಿದ್ದಾರೆ.

‘‘ಆಗಸ್ಟ್ 12ರ ಸಂಜೆಯವರೆಗೂ ಕಲಾಪ ನಡೆಸಬೇಕೆಂದು ಸಂಸತ್‌ಗೆ ಅಧಿಸೂಚನೆಯಿತ್ತು. ಆದರೆ ಹಠಾತ್ತನೆ ಆಗಸ್ಟ್ 9ರ ಮಧ್ಯಾಹ್ನದಂದೇ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಇದಕ್ಕೆ ಕಾರಣವೇನು ಎಂಬುದು ಈಗ ನಮಗೆ ಗೊತ್ತಾಗಿದೆ’’ ಎಂದವರು ಹೇಳಿದ್ದಾರೆ.

ಸರಕಾರ ಮುಂದೆ ಬಂದು ಜಂಟಿ ಸಂಸದೀಯ ಸಮಿತಿ ರಚಿಸಬೇಕು. ತನಿಖೆ ನಡೆಸಬೇಕು.

ಸತ್ಯ ಬಯಲಾಗಬೇಕು. ದೇಶದ ಮಧ್ಯಮ ವರ್ಗದವರು ಕಷ್ಟಪಟ್ಟು ಸಂಪಾದಿಸಿದ ಹಣದೊಂದಿಗೆ ಆಟವಾಡಲು ನೋಡಿದವರನ್ನು ಬಿಡಬಾರದು. ಕಠಿಣ ಕ್ರಮವಾಗಬೇಕು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News