ಕೊಂಕಣ ರೈಲ್ವೆಯಿಂದ ಯಾರಿಗೆ ಉಪಯೋಗ?

Update: 2023-12-05 09:59 GMT

Photo: freepik

ಕೊಂಕಣ ರೈಲ್ವೆ ಯೋಜನೆಗೆ ಮಹಾರಾಷ್ಟ್ರ ಸರಕಾರ ಶೇ. 22, ಕರ್ನಾಟಕ ಸರಕಾರ ಶೇ.15, ಗೋವಾ ಸರಕಾರ ಶೇ. 6 ಮತ್ತು ಕೇಂದ್ರ ಸರಕಾರ ಶೇ. 51 ಮೊತ್ತ ವೆಚ್ಚವನ್ನು ನೀಡಿದ್ದವು. ಆದರೆ ಕೊಂಕಣ ರೈಲ್ವೆ ಯೋಜನೆ ಪೂರ್ಣಗೊಂಡು 25 ವರ್ಷಗಳು ಕಳೆದರೂ ಕರ್ನಾಟಕ ರಾಜ್ಯದ ಧಾರವಾಡ, ಹುಬ್ಬಳ್ಳಿ, ಗದಗ, ಕೊಪ್ಪಳ, ಬಳ್ಳಾರಿ, ರಾಯಚೂರು, ಬಾಗಲಕೋಟೆ, ವಿಜಯಪುರ, ಸೊಲ್ಲಾಪುರ, ಕಲಬುರಗಿ ಮತ್ತು ಬೀದರ್ ಜಿಲ್ಲೆಗಳಿಂದ ಗೋವಾ, ಕರ್ನಾಟಕದ ಕರಾವಳಿ ಭಾಗದ ಕಾರವಾರ, ಅಂಕೋಲಾ, ಗೋಕರ್ಣ, ಕುಮಟ, ಹೊನ್ನಾವರ, ಮುರುಡೇಶ್ವರ, ಭಟ್ಕಳ, ಕುಂದಾಪುರ, ಉಡುಪಿ ಮತ್ತು ಮಂಗಳೂರಿಗೆ ಪ್ರಯಾಣಿಸಲು ಕೊಂಕಣ ರೈಲ್ವೆ ಮಾರ್ಗದ ಮೂಲಕ ರೈಲು ಸೌಕರ್ಯ ಇರುವುದಿಲ್ಲ. ಅಲ್ಲದೆ ಕರ್ನಾಟಕ ರಾಜ್ಯದ ಧಾರವಾಡ, ಹುಬ್ಬಳ್ಳಿ, ಹಾವೇರಿ, ಚಿತ್ರದುರ್ಗ, ಬಳ್ಳಾರಿ, ಗದಗ, ದಾವಣಗೆರೆ, ಶಿವಮೊಗ್ಗ, ಹಾಸನ, ಮೈಸೂರು ಗಳಿಂದ ಗೋವಾ, ಮಹಾರಾಷ್ಟ್ರ ಕರಾವಳಿ ಭಾಗದ ಕುಡಾಲ, ಸಾವಂತ್‌ವಾಡಿ, ಸಿಂಧುದುರ್ಗ, ರತ್ನಗಿರಿ, ಚಿಪ್ಲೂನ್, ಪನ್ವೇಲ್ ಮತ್ತು ಮುಂಬೈಗೆ ಪ್ರಯಾಣಿಸಲು ಕೊಂಕಣ ರೈಲ್ವೆ ಮಾರ್ಗದ ಮೂಲಕ ರೈಲು ಸೌಕರ್ಯ ಇರುವುದಿಲ್ಲ.

ಆದರೆ ಯಾವುದೇ ವೆಚ್ಚ ಭರಿಸದ ಕೇರಳ ರಾಜ್ಯಕ್ಕೆ ಸಿಂಹಪಾಲು ರೈಲು ಸೌಕರ್ಯವನ್ನು ಕೇಂದ್ರ ಸರಕಾರ ಒದಗಿಸಿದೆ. ಕೇರಳದಿಂದ ದಿಲ್ಲಿಯ ಕಡೆಗೆ ಹೋಗುವ ಕೆಲವೊಂದು ರೈಲುಗಳು ನಮ್ಮ ರಾಜ್ಯದ ಜಿಲ್ಲಾ ಕೇಂದ್ರಗಳಾದ ಉಡುಪಿ ಮತ್ತು ಕಾರವಾರ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ. ಕೊಂಕಣ ರೈಲ್ವ್ವೆೆ ಯೋಜನೆಯಿಂದ ನಮ್ಮ ರಾಜ್ಯದ ಮಂಗಳೂರು, ಉಡುಪಿ ಮತ್ತು ಕಾರವಾರ ಜಿಲ್ಲೆಗಳ ಜನರು ಈ ರಾಜ್ಯದ ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಮತ್ತು ಮೈಸೂರು ಕರ್ನಾಟಕದ ಪ್ರದೇಶಗಳಿಗೆ ಪ್ರಯಾಣಿಸಲು ಅನುಕೂಲ ಆಗುತ್ತದೆ ಎಂದು ಈ ಕೊಂಕಣ ರೈಲ್ವೆ ಯೋಜನೆಗೆ ತಮ್ಮ ಅಮೂಲ್ಯವಾದ ಜಮೀನುಗಳನ್ನು ಸರಕಾರಕ್ಕೆ ಬರೆದು ಕೊಟ್ಟರು. ಆದರೆ ಈ ಯೋಜನೆ ಪೂರ್ಣಗೊಂಡು 25 ವರ್ಷಗಳು ಕಳೆದರೂ ರೈಲು ಸೌಕರ್ಯವನ್ನು ಕೇಂದ್ರ ಸರಕಾರ ಕಲ್ಪಿಸುತ್ತಿಲ್ಲ. ‘ಮನೆಗೆ ಮಾರಿ ಊರಿಗೆ ಉಪಕಾರಿ’ ಎಂಬ ಗಾದೆ ಮಾತಿನಂತೆ ರಾಜ್ಯದ ಜನರ ಪರಿಸ್ಥಿತಿ ಆಗಿದೆ. ಈ ಕೊಂಕಣ ರೈಲ್ವೆ ಯೋಜನೆಯಿಂದ ರಾಜ್ಯದ ಜನರಿಗೆ ಹೆಚ್ಚಿನ ಉಪಯೋಗ ಆಗಿಲ್ಲದಿದ್ದರೂ ಬೇರೆ ರಾಜ್ಯ (ಕೇರಳ) ದವರಿಗೆ ತುಂಬಾ ಅನುಕೂಲ ಆಗಿದೆ.

ರಾಜ್ಯಕ್ಕೆ ಸಮರ್ಪಕ ರೈಲು ಸೌಕರ್ಯ ಕಲ್ಪಿಸಲು ಕೇಂದ್ರ ಸರಕಾರಕ್ಕೆ ಸಾಕಷ್ಟು ಸಲ ಮನವಿ ಸಲ್ಲಿಸಿದರೂ, ಕೇಂದ್ರ ಸರಕಾರ ಸ್ಪಂದಿಸುತ್ತಿಲ್ಲ. ನಮ್ಮ ರಾಜ್ಯದ ಸಂಸದರು ಕೂಡಾ ರೈಲು ಸೌಕರ್ಯ ಕಲ್ಪಿಸಲು ಆಸಕ್ತಿ ತೋರಿಸುತ್ತಿಲ್ಲ. ಕೇರಳ ರಾಜ್ಯದ ಸಂಸದರು ಯಾವುದೇ ಪಕ್ಷದವರಾಗಿದ್ದರೂ ತಮ್ಮ ರಾಜ್ಯದ ಜನರಿಗೆ ರೈಲು ಸೌಕರ್ಯ ಕಲ್ಪಿಸಲು ಯಶಸ್ವಿಯಾಗಿದ್ದಾರೆ.

ಹಾಗಾಗಿ ಈ ವರ್ಷ 2023 ಕರ್ನಾಟಕ ರಾಜ್ಯೋತ್ಸವ ಸುವರ್ಣ ಮಹೋತ್ಸವದ ವರ್ಷಾಚರಣೆಯ ಅಂಗವಾಗಿಯಾದರೂ ಕೊಂಕಣ ರೈಲ್ವೆ ಮಾರ್ಗದಲ್ಲಿ ರಾಜ್ಯದ ಜನರಿಗೆ ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಮತ್ತು ಮೈಸೂರು ಕರ್ನಾಟಕದ ಪ್ರದೇಶಗಳಿಗೆ ಪ್ರಯಾಣಿಸಲು ರೈಲು ಸೌಕರ್ಯ ಕಲ್ಪಿಸಬೇಕು. ಮೊದಲ ಹಂತವಾಗಿ ಮಂಗಳೂರಿನಿಂದ ಮೂರು ರೈಲುಗಳನ್ನು ಹುಬ್ಬಳ್ಳಿ, ಕಲಬುರಗಿ ಮತ್ತು ರಾಯಚೂರಿಗೆ ಹಾಗೂ ಮುಂಬೈನಿಂದ ಮೂರು ರೈಲುಗಳನ್ನು ಹುಬ್ಬಳ್ಳಿ, ಮೈಸೂರು ಮತ್ತು ಶಿವಮೊಗ್ಗಕ್ಕೆ ತುರ್ತಾಗಿ ಕಲ್ಪಿಸಿ ರಾಜ್ಯದ ಜನರ ಬಹುದಿನಗಳ ಕನಸು ಈಡೇರುವಂತಾಗಲಿ.

Writer - ವಾರ್ತಾಭಾರತಿ

contributor

Editor - jafar sadik

contributor

Contributor - ವಿಜಯಲಕ್ಷ್ಮೀ ಬಿ.ಬಿ

contributor

Similar News