ಅಮಿತ್ ಮಾಲವೀಯ ವಿರುದ್ಧ ಬಿಜೆಪಿ ಕ್ರಮ ಕೈಗೊಂಡೀತೇ?
ಈಬಾರಿ ಬಿಜೆಪಿ ಬಹುಮತದಿಂದ ಕುಸಿದು ಕೆಳಗೆ ಬಂದು ನಿಂತ ಬೆನ್ನಿಗೇ ಆ ಪಕ್ಷದೊಳಗೆ ತಳಮಳ ತಂದಿರುವ ರಾಜ್ಯಗಳಲ್ಲಿ ಪ್ರಮುಖವಾದುದು ಪಶ್ಚಿಮ ಬಂಗಾಳ.
ಅಲ್ಲಿ ಕಳೆದ ಬಾರಿಯ 18 ಸೀಟುಗಳ ದಾಖಲೆಯನ್ನು ಈ ಬಾರಿ ಮುರಿಯುವುದು ಖಚಿತ ಎಂಬ ಅತಿ ಆತ್ಮವಿಶ್ವಾಸದಲ್ಲಿದ್ದ ಬಿಜೆಪಿಗೆ ಭಾರೀ ಹಿನ್ನಡೆಯಾಗಿದೆ.
ಅಲ್ಲಿ ಬಿಜೆಪಿ 18 ರಿಂದ 12ಕ್ಕೆ ಇಳಿದಿದೆ.
ಇದರ ಬೆನ್ನಿಗೇ ಪಕ್ಷದೊಳಗೆ ಅಲ್ಲಿ ಅತ್ಯಂತ ಹೆಚ್ಚು ವಿರೋಧ ಎದುರಿಸುತ್ತಿರುವ ವ್ಯಕ್ತಿ ಅಮಿತ್ ಮಾಲವೀಯ.
ಕಳೆದ ಒಂದು ದಶಕದಲ್ಲಿ ಭಾರತದಲ್ಲಿ ಸುಳ್ಳು ಮತ್ತು ದ್ವೇಷಗಳನ್ನು ಭಯಾನಕ ಪ್ರಮಾಣದಲ್ಲಿ ಹರಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ ವ್ಯಕ್ತಿ ಈತ.
ಅಧಿಕಾರದಲ್ಲಿರುವ ಬಿಜೆಪಿಯ ಪ್ರಭಾವ, ಅದರ ದುಡ್ಡಿನ ಬಲ, ಮೋದಿ-ಶಾ ಜೋಡಿಯ ಕೃಪೆ, ದೇಶಾದ್ಯಂತ ಇರುವ ಸಂಘ ಪರಿವಾರದ ಜಾಲ- ಇವೆಲ್ಲವುಗಳನ್ನು ಯಥೇಚ್ಛವಾಗಿ ಬಳಸಿಕೊಂಡು ಈ ವ್ಯಕ್ತಿ ದೇಶದ ಸಾಮಾಜಿಕ ಸಂರಚನೆಗೆ ಮಾಡಿರುವ ಹಾನಿ ಬಹಳ ದೊಡ್ಡದು.
ಬರೀ ಸುಳ್ಳು, ದ್ವೇಷ ಹರಡುವ ಸಾಮರ್ಥ್ಯವನ್ನೇ ನೆಚ್ಚಿಕೊಂಡು ಈತನಿಗೆ ಪಶ್ಚಿಮ ಬಂಗಾಳದಲ್ಲಿ ಪಕ್ಷದ ಸಹ ಉಸ್ತುವಾರಿ ಸ್ಥಾನ ನೀಡಲಾಯಿತು.
ಅತ್ತ ಚುನಾಯಿತ ಜನಪ್ರನಿಧಿಯೂ ಅಲ್ಲದ, ಇತ್ತ ಪಕ್ಷದ ತಳಮಟ್ಟದ ಸಂಘಟನೆಯಿಂದಲೂ ಬಾರದ ಅಮಿತ್ ಮಾಲವೀಯಗೆ ಪಕ್ಷದಲ್ಲಿ ಇಷ್ಟೊಂದು ಪ್ರಾಮುಖ್ಯತೆ ಬಂದಿರುವುದೇ ಆತನ ಸುಳ್ಳು ಹರಡುವ ಪ್ರತಿಭೆಯಿಂದ.
ಮೋದಿ ಮೂರನೇ ಅವಧಿಗೆ ಪ್ರಧಾನಿಯಾಗಿರುವ ಬೆನ್ನಲ್ಲೇ ಅವರದೇ ಪಕ್ಷದ ಈ ಪ್ರಭಾವೀ ನಾಯಕ ಅಮಿತ್ ಮಾಲವೀಯ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದೆ. ಅಚ್ಚರಿಯೆಂದರೆ, ಮಾಲವೀಯ ವಿರುದ್ಧ ಈ ಗಂಭೀರ ಆರೋಪ ಮಾಡಿರುವುದು ಆರೆಸ್ಸೆಸ್‌ನ ಶಂತನು ಸಿನ್ಹಾ.
ಬಿಜೆಪಿಯ ಪ್ರಭಾವಿ ಸ್ಥಾನದಲ್ಲಿರುವ ಮಾಲವೀಯರನ್ನು ಕಿತ್ತುಹಾಕುವಂತೆಯೂ ಕಾಂಗ್ರೆಸ್ ಒತ್ತಾಯಿಸಿದೆ. ಮಾಲವೀಯ ವಿರುದ್ಧ ಸ್ವತಂತ್ರ ತನಿಖೆಗೂ ಆಗ್ರಹಿಸಲಾಗಿದೆ.
ಮಾಲವೀಯ ನೀಚ ಕೃತ್ಯಗಳಲ್ಲಿ ತೊಡಗಿದ್ದಾರೆ. ಪಂಚತಾರಾ ಹೊಟೇಲ್‌ಗಳಲ್ಲಿ ಮಾತ್ರವಲ್ಲ, ಪಶ್ಚಿಮ ಬಂಗಾಳದ ಬಿಜೆಪಿ ಕಚೇರಿಯಲ್ಲಿಯೂ ಮಹಿಳೆಯರ ಮೇಲೆ ದೌರ್ಜನ್ಯವೆಸಗಿದ್ದಾರೆ ಎಂದು ಶಂತನು ಸಿನ್ಹಾ ಆರೋಪಿಸಿದ್ದಾರೆಂದು ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರಿನೇತ್ ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಮಹಿಳೆಯೊಬ್ಬರಿಗೆ ಅಮಿತ್ ಮಾಲವೀಯ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಶಂತನು ಸಿನ್ಹಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು.
ಸಿನ್ಹಾ ವಿರುದ್ಧ ಈಗ ಮಾಲವೀಯ ಮಾನನಷ್ಟ ಮೊಕದ್ದಮೆ ದಾಖಲಿಸಿರುವುದಾಗಿ ವರದಿಯಾಗಿದೆ. ಆರೋಪ ಮಾಡಲಾಗಿರುವ ಪೋಸ್ಟ್ ತೆಗೆದುಹಾಕುವಂತೆ ಸಿನ್ಹಾಗೆ ಲೀಗಲ್ ನೋಟಿಸ್ ಕಳಿಸಿದ್ಧಾರೆ.
ಮಾಲವೀಯ ವಿರುದ್ಧದ ಈ ಆರೋಪಗಳು ಪಶ್ಚಿಮ ಬಂಗಾಳ ಬಿಜೆಪಿಯಲ್ಲಿನ ಹುಳುಕುಗಳನ್ನೂ ಎತ್ತಿ ತೋರಿಸುತ್ತಿವೆ ಮತ್ತು ಮಾಲವೀಯ ವಿರುದ್ಧ ಅವರದೇ ಪಕ್ಷದ ನಾಯಕರು ತಿರುಗಿ ಬಿದ್ದಿದ್ದಾರೆ ಎಂಬುದು ಬಯಲಾಗಿದೆ.
ಆದರೆ ಸುಪ್ರಿಯಾ ಶ್ರಿನೇತ್ ಅವರು ಹೇಳುವಂತೆ ಸಿನ್ಹಾ ಸಾಧಾರಣ ವ್ಯಕ್ತಿಯಲ್ಲ. ಆರೆಸ್ಸೆಸ್ ಕಾರ್ಯಕರ್ತರಾಗಿದ್ದ ಅವರ ಆರೋಪಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ.
ಈ ಅಮಿತ್ ಮಾಲವೀಯ ರಾಜಕೀಯವಾಗಿ ಉದ್ದಕ್ಕೂ ಮಾಡಿಕೊಂಡು ಬಂದಿರುವುದು ಸುಳ್ಳುಗಳನ್ನು ಮತ್ತು ಆ ಮೂಲಕ ದ್ವೇಷವನ್ನು ಹರಡುವ ಅತ್ಯಂತ ಹೀನ ಕೆಲಸ.
ಬಿಜೆಪಿ ಐಟಿ ಸೆಲ್ ಮೂಲಕ ಅತ್ಯಂತ ವ್ಯವಸ್ಥಿತವಾಗಿ ಸುಳ್ಳುಗಳನ್ನು ಹೇಳುತ್ತಲೇ ಕೋಟಿಗಟ್ಟಲೆ ಜನರ ಹಾದಿ ತಪ್ಪಿಸಿದವರು. ಅವರು ಉದ್ದಕ್ಕೂ ಮಾಡುತ್ತ ಬಂದಿರುವುದು ಫೇಕ್ ನ್ಯೂಸ್ ಹರಡುವ ಕೆಲಸವನ್ನೇ.
‘ಸ್ಕ್ರಾಲ್’ ಸುದ್ದಿ ಪೋರ್ಟಲ್ ಮಾಲವೀಯ ಹಬ್ಬಿಸಿದ ಹಲವು ಸುಳ್ಳುಗಳ ಪಟ್ಟಿಯನ್ನೇ ಮಾಡಿದ್ದಿದೆ.
ಶಾಹೀನ್ ಬಾಗ್ ಪ್ರತಿಭಟನೆ ಪ್ರಾಯೋಜಿತ ಎನ್ನುವುದು,
ಏನೇ ತಪ್ಪು ನಡೆದರೂ ಅದರ ಹಿಂದೆ ಕಾಂಗ್ರೆಸ್ ಕೈವಾಡ ಇದೆ ಅನ್ನುವುದು, ಶಾಹೀನ್ ಬಾಗ್‌ನಲ್ಲಿ ಪ್ರತಿಭಟನೆಗೆ ಕೂತವರಿಗೆ ಬಿರ್ಯಾನಿ ಹಂಚಲಾಯಿತು ಎನ್ನುವುದು,
ಸಿಎಎ ವಿರೋಧಿ ಪ್ರತಿಭಟನಾಕಾರರ ವಿರುದ್ಧ ಅಪಪ್ರಚಾರದ ಭಾಗವಾಗಿ, ಲಕ್ನೊದಲ್ಲಿ ಪ್ರತಿಭಟನಾಕಾರರು ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದರು ಎನ್ನುವುದು,
ಸೋಮನಾಥ ದೇವಾಲಯದಲ್ಲಿನ ರಿಜಿಸ್ಟರ್‌ನಲ್ಲಿ ರಾಹುಲ್ ಗಾಂಧಿ ತಾವು ಹಿಂದೂಯೇತರ ಎಂದು ಸಹಿ ಹಾಕಿದ್ದಾರೆ ಎನ್ನುವುದು,
ಈ ಕಡೆ ಆಲೂ ಹಾಕಿದರೆ ಆ ಕಡೆ ಚಿನ್ನ ಉದುರುತ್ತದೆ ಎಂದು ಬಿಜೆಪಿಯವರ ಬೋಗಸ್ ಬಯಲು ಮಾಡಲು ರಾಹುಲ್ ಗಾಂಧಿ ಹೇಳಿದ್ದನ್ನೇ ರಾಹುಲ್‌ರನ್ನು ವಿಡಂಬಿಸಲು ತಿರುಚಿ ಬಳಸುವುದು....
ಇಂಥವನ್ನೇ ಅಮಿತ್ ಮಾಲವೀಯ ಮಾಡಿಕೊಂಡು ಬಂದಿರುವುದು ಕಣ್ಣೆದುರೇ ಇರುವ ವಾಸ್ತವ.
ಈ ಸಲದ ಚುನಾವಣೆ ವೇಳೆ ತೃಣಮೂಲ ಕಾಂಗ್ರೆಸ್ ಮುಖಂಡ ಶಹಜಹಾನ್ ಶೇಕ್ ಮತ್ತು ಆತನ ಸಹಚರರ ವಿರುದ್ಧ ಪಶ್ಚಿಮ ಬಂಗಾಳದ ಸಂದೇಶ್ ಖಾಲಿ ಎಂಬಲ್ಲಿನ ಅನೇಕ ಮಹಿಳೆಯರು ಗಂಭೀರ ಆರೋಪಗಳನ್ನು ಮಾಡಿದ್ದರು. ಭೂಮಿ ಕಬಳಿಸಿದ್ದು ಹಾಗೂ ಲೈಂಗಿಕ ದೌರ್ಜನ್ಯ ಎಸಗಿದ ಗಂಭೀರ ಆರೋಪ ಶಹಜಹಾನ್ ಶೇಕ್ ವಿರುದ್ಧ ಇದೆ.
ಈ ಪ್ರಕರಣವನ್ನು ಕೂಡ ಬಿಜೆಪಿಯ ಚುನಾವಣಾ ಲಾಭಕ್ಕೆ ಬಳಸಲು ಯತ್ನಿಸಿದ ಮಾಲವೀಯ ಸುಳ್ಳು ಸುದ್ದಿ ಹರಡುತ್ತಿರುವುದಾಗಿ ಕಾಂಗ್ರೆಸ್ ಮತ್ತು ಟಿಎಂಸಿ ಎರಡೂ ಆರೋಪ ಮಾಡಿದ್ದವು.
ಉದ್ದಕ್ಕೂ ಸುಳ್ಳು ಸುದ್ದಿ ಮತ್ತು ತಪ್ಪು ಮಾಹಿತಿಯನ್ನೇ ಅಸ್ತ್ರವಾಗಿಸಿಕೊಳ್ಳುತ್ತ ಬಂದಿರುವ ಮಾಲವೀಯ ಹಾಗಾಗಿಯೇ ಮೋದಿಗೆ ಅಚ್ಚುಮೆಚ್ಚಾಗಿದ್ದಿರಬೇಕು ಎನ್ನುವ ಸಂದೇಹ ಪಕ್ಷಾತೀತವಾಗಿ ಹಲವರಿಗಿದೆ.
ಮಾಲವೀಯ ಪಶ್ಚಿಮ ಬಂಗಾಳದ ಸಹ ಉಸ್ತುವಾರಿ ಹುದ್ದೆಗೇರಿದ್ದು ಕೂಡ ಈ ಸುಳ್ಳು ಹಬ್ಬಿಸುವ ಚಾಣಾಕ್ಷತೆಯಿಂದಾಗಿಯೇ.
ಶಾಹೀನ್ ಬಾಗ್ ಪ್ರತಿಭಟನೆ ವಿರುದ್ಧ ಸುಳ್ಳು ಹರಡಿಯೇ ಬಿಜೆಪಿಯಲ್ಲಿ ಗಮನ ಸೆಳೆದ ಅವರನ್ನೇ ಬಂಗಾಳಕ್ಕೆ ತಂದು ಚುನಾವಣಾ ರಾಜಕೀಯದಲ್ಲಿ ಲಾಭ ಮಾಡಿಕೊಳ್ಳಲು ಬಿಜೆಪಿ ನಾಯಕರು ಮುಂದಾಗಿದ್ದರು.
2020ರ ನವೆಂಬರ್‌ನಲ್ಲಿ ಮಾಲವೀಯ ಅಲ್ಲಿ ಉಸ್ತುವಾರಿ ವಹಿಸಿಕೊಂಡಿ ದ್ದರು. 2021ರಲ್ಲಿ ವಿಧಾನಸಭೆ ಚುನಾವಣೆ ಎದುರಿಸಲು ಆಗಿದ್ದ ಈ ನೇಮಕ, ಸಾಮಾಜಿಕ ಜಾಲತಾಣದಲ್ಲಿನ ಪ್ರಚಾರಕ್ಕೆ ಒತ್ತು ಕೊಡುವ ಉದ್ದೇಶದ್ದೇ ಆಗಿತ್ತು.
ಅಂದರೆ ಸುಳ್ಳುಗಳನ್ನು ಹರಡುವ ಮೂಲಕ ಬಂಗಾಳದಲ್ಲಿ ಲಾಭ ಮಾಡಿಕೊಳ್ಳುವ ಬಿಜೆಪಿ ತಂತ್ರವೇ ಆಗಿತ್ತು. ಯಾಕೆಂದರೆ ಅದಕ್ಕೂ ಮುಂಚೆ ಐದು ವರ್ಷಗಳಿಂದ ಮಾಲವೀಯ ಬಿಜೆಪಿ ಐಟಿ ಸೆಲ್ ಮುಖ್ಯಸ್ಥರಾಗಿ ತಪ್ಪು ಅಥವಾ ತಿರುಚಿದ ಮಾಹಿತಿ ಹಬ್ಬಿಸುವುದರಿಂದಲೇ ಪ್ರತೀ ಬಾರಿ ಸುದ್ದಿಯಾಗುತ್ತಿದ್ದರು.
ಮಾಲವೀಯ ಟ್ವೀಟ್‌ಗಳಲ್ಲಿ ಸುಳ್ಳುಗಳೇ ತುಂಬಿರುತ್ತಿದ್ದವು. ಬಿಜೆಪಿ ನಾಯಕರೆಲ್ಲ ಅವರ ಟ್ವೀಟ್‌ಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದರು. ದೊಡ್ಡ ಮಟ್ಟದಲ್ಲಿ ತಪ್ಪು ಮಾಹಿತಿ ಹರಡುವುದಕ್ಕೆ ಅದು ಹಾದಿಯಾಗುತ್ತಿತ್ತು.
ಹೇಗೆ ಮಾಲವೀಯ ಸುಳ್ಳುಗಳ ಮೂಲಕ ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯನ್ನು ಟಾರ್ಗೆಟ್ ಮಾಡುತ್ತಿದ್ದರೆಂಬುದಕ್ಕೆ ಒಂದು ಉದಾಹರಣೆ ನೋಡಬಹುದು.
2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಉತ್ತರ ಕೋಲ್ಕತಾದಲ್ಲಿ ಅಮಿತ್ ಶಾ ರ್ಯಾಲಿ ವೇಳೆ ಹಿಂಸಾಚಾರ ನಡೆದಿತ್ತು. ವಿದ್ಯಾಸಾಗರ್ ಕಾಲೇಜು ಕ್ಯಾಂಪಸ್‌ನಲ್ಲಿ ಭುಗಿಲೆದ್ದ ಹಿಂಸಾಚಾರದ ಬಗ್ಗೆ ಅದನ್ನು ಕಣ್ಣಾರೆ ಕಂಡ ವಿದ್ಯಾರ್ಥಿ ಹೇಳಿದ್ದೆಂದು ಒಂದು ಸುಳ್ಳನ್ನು ಮಾಲವೀಯ ಪೋಸ್ಟ್ ಮಾಡಿದ್ದರು. ಕ್ಯಾಂಪಸ್‌ನಲ್ಲಿ ಈಶ್ವರಚಂದ್ರ ವಿದ್ಯಾಸಾಗರ್ ಅವರ ಪ್ರತಿಮೆ ಧ್ವಂಸಗೊಳಿಸಿದ್ದು ಟಿಎಂಸಿ ಎಂದು ಆ ವಿದ್ಯಾರ್ಥಿ ಹೇಳಿದ್ದುದಾಗಿ ಸುಳ್ಳು ಸುದ್ದಿ ಹಬ್ಬಿಸಲಾಯಿತು.
ಸುಳ್ಳು ಹಬ್ಬಿಸುವ ಯಾವ ಅವಕಾಶವನ್ನೂ ಮಾಲವೀಯ ಟೀಂ ಬಿಡುವುದಿಲ್ಲ. ಟಿಎಂಸಿ ವಿರುದ್ಧ ಪ್ರಚಾರಕ್ಕೆ ಸೋಷಿಯಲ್ ಮೀಡಿಯಾ ಪ್ರಚಾರವನ್ನು ದೊಡ್ಡ ಅಸ್ತ್ರವಾಗಿ ಬಳಸಲಾಯಿತು.
ಈ ರೀತಿ ತಿರುಚಿದ ಮಾಹಿತಿಗಳನ್ನು ಪ್ರಸಾರ ಮಾಡಲು ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ಜೊತೆಗೆ ಪಶ್ಚಿಮ ಬಂಗಾಳ ಒಂದರಲ್ಲೇ 70,000 ವಾಟ್ಸ್‌ಆ್ಯಪ್ ಗುಂಪುಗಳನ್ನು ಕೂಡ ಬಳಸಲಾಗುತ್ತಿದ್ದ ಬಗ್ಗೆ ‘ದಿ ವೈರ್’ ವರದಿ ಮಾಡಿತ್ತು.
ಗುಂಪೊಂದು ‘ಜೈಶ್ರೀರಾಮ್’ ಎಂದು ಕೂಗಿದಾಗ ಅವರ ವಿರುದ್ಧ ಮಮತಾ ಬ್ಯಾನರ್ಜಿ ಸಿಟ್ಟಾಗುವುದನ್ನು ತೋರಿಸುವ ವೀಡಿಯೊವನ್ನು 2019ರ ಲೋಕಸಭೆ ಚುನಾವಣೆ ವೇಳೆ ಹೇಗೆ ಬಳಸಿಕೊಳ್ಳಲಾಗಿತ್ತೆಂದರೆ, ಮಮತಾ ಪಾಲಿಗೆ ಸಾಕಷ್ಟು ನಷ್ಟವಾಗಿತ್ತು ಮತ್ತದರ ಲಾಭವನ್ನು ಬಿಜೆಪಿ ಪಡೆದಿತ್ತು. ಆ ಚುನಾವಣೆಯಲ್ಲಿ 18 ಸ್ಥಾನಗಳನ್ನು ಬಿಜೆಪಿ ಗೆದ್ದಿತು ಮತ್ತದು ಬಿಜೆಪಿ ಅಲ್ಲಿವರೆಗೂ ಆ ರಾಜ್ಯದಲ್ಲಿ ಗೆದ್ದ ಅತ್ಯಧಿಕ ಸ್ಥಾನವಾಗಿತ್ತು.
ಪ್ರತೀ ಬಾರಿ ಮಾಲವೀಯ ಏನಾದರೂ ಸುಳ್ಳು ಟ್ವೀಟ್ ಮಾಡಿದ ಕೂಡಲೇ ಅದನ್ನೇ ಭಟ್ಟಂಗಿ ಚಾನೆಲ್‌ಗಳು ಎತ್ತಿಕೊಂಡು ಪ್ರೈಮ್ ಟೈಮ್ ನ್ಯೂಸ್ ಮಾಡಿ ಬಿಡುತ್ತವೆ.
ಮಾಲವೀಯ ಹರಡಿದ ಸುಳ್ಳಿನ ಆಧಾರದಲ್ಲೇ ಈ ಮಡಿಲ ಮೀಡಿಯಾಗಳಲ್ಲಿ ಗಂಟೆಗಟ್ಟಲೆ ಡಿಬೇಟ್, ಬೊಬ್ಬೆ, ಅರಚಾಟ ನಡೆಯುತ್ತದೆ.
ನೂರಾರು ಕೋಟಿ ಬಂಡವಾಳ ಹಾಕಿರುವ ಚಾನಲ್‌ಗಳು ಈ ಮಾಲವೀಯನ ಐಟಿ ಸೆಲ್ ಹರಡಿರುವ ಸುಳ್ಳುಗಳನ್ನೇ ಬ್ರೇಕಿಂಗ್ ನ್ಯೂಸ್ ಮಾಡುತ್ತವೆ.
ವಿಪಕ್ಷ ನಾಯಕರನ್ನು ಹಿಂದೂ ವಿರೋಧಿಗಳು, ಮುಸ್ಲಿಮರ ತುಷ್ಟೀಕರಣ ಮಾಡುವವರು ಎಂದು ಬಿಂಬಿಸುವುದು,
ನೆಹರೂ ಹಿಂದೂ ವಿರೋಧಿಯಾಗಿದ್ದರು, ಅವರ ನೀತಿಗಳಿಂದಾಗಿಯೇ ಇವತ್ತು ದೇಶದಲ್ಲಿ ಹಿಂದೂಗಳಿಗೆ ಸಮಸ್ಯೆಯಾಗಿದೆ ಎಂದು ಪ್ರಚಾರ ಮಾಡುವುದು,
ಏನೇ ಘಟನೆ ನಡೆದರೂ ಅದನ್ನು ಹಿಂದೂ-ಮುಸ್ಲಿಮ್ ಎಂಬ ರೀತಿಯಲ್ಲೇ ಪ್ರಚಾರ ಮಾಡುವುದು ಈ ಮಾಲವೀಯ ನೇತೃತ್ವದ ಐಟಿ ಸೆಲ್ ಬಹಳ ದೊಡ್ಡ ಪ್ರಮಾಣದಲ್ಲಿ ಮಾಡಿಕೊಂಡು ಬಂದಿದೆ.
ಆದರೆ 2019ರಲ್ಲಿ ನಡೆದ ಮಾಲವೀಯ ಆಟ 2021ರ ವಿಧಾನ ಸಭಾ ಚುನಾವಣೆಯಲ್ಲಿ ನಡೆಯಲಿಲ್ಲ.
ಮೊದಲೇ ತಳಮಟ್ಟದಲ್ಲಿ ಗಟ್ಟಿ ಸಂಘಟನೆ ಇರುವ ಮಮತಾ ಅವರ ಪಕ್ಷ ಬಿಜೆಪಿ ವಿರುದ್ಧ ತನ್ನ ಸೋಷಿಯಲ್ ಮೀಡಿಯಾ ಸ್ಟ್ರಾಟಜಿಯನ್ನು ಸಂಪೂರ್ಣ ಬದಲಾಯಿಸಿ ತಿರುಗೇಟು ನೀಡಿತು.
ಬಿಜೆಪಿ ಹಾಗೂ ಮಾಲವೀಯ ಟೀಮ್ ಮಮತಾ ಹಾಗೂ ಅವರ ಪಕ್ಷದ ವಿರುದ್ಧ ಅದೆಷ್ಟು ಸುಳ್ಳು ಹರಡಿದರೂ ಮಮತಾ ಪಕ್ಷವೇ ಭರ್ಜರಿ ಬಹುಮತ ಪಡೆದು ಸರಕಾರ ರಚಿಸಿತು.
ಹೀಗೆ ಸುಳ್ಳುಗಳನ್ನೇ ಹರಡುತ್ತ, ದ್ವೇಷವನ್ನೇ ಹರಡುತ್ತ ಗೆಲ್ಲುವ ತಂತ್ರ ಅನುಸರಿಸಿದ ಬಿಜೆಪಿಗೆ ಈ ಸಲವೂ ಹಿನ್ನಡೆಯಾಗಿದೆ.
ಹಿಂದೂ ಮುಸ್ಲಿಮರ ನಡುವೆ ದ್ವೇಷ ಮೂಡಿಸಲು ಯಾವ ಪ್ರಕರಣವನ್ನು ಬಿಜೆಪಿ ಬಳಸಿಕೊಳ್ಳಲು ನೋಡಿತ್ತೋ ಆ ಸಂದೇಶ್ ಖಾಲಿಯಲ್ಲಿ ಕೂಡ ಬಿಜೆಪಿ ಆಟಕ್ಕೆ ಮತದಾರರು ಮಣಿಯಲಿಲ್ಲ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಈ ಸಲ ವಿಫಲವಾದ ಬೆನ್ನಲ್ಲೇ ಸುಳ್ಳುಗಳ ಸರದಾರನ ವಿರುದ್ಧ ಈಗ ಗಂಭೀರ ಆರೋಪವೂ ಕೇಳಿಬಂದಿದೆ.
ಬಿಜೆಪಿಯಲ್ಲಿ ಇಂತಹ ಹಲವು ನಾಯಕರಿದ್ದಾರೆ ಎಂಬ ಆರೋಪಗಳನ್ನು ವಿಪಕ್ಷಗಳೂ ಮಾಡುತ್ತಿವೆ.
‘ಮೋದಿ ಕಿ ಪರಿವಾರ್’ನಿಂದ ಬೇಟಿಗಳನ್ನು ಬಚಾವ್ ಮಾಡಿ ಎಂದು ವ್ಯಂಗ್ಯ ಮಾಡಲಾಗುತ್ತಿದೆ.
ಆದರೆ ಸುಳ್ಳು ಹಾಗೂ ದ್ವೇಷ ಹರಡುವ ಮೂಲಕ ಪಕ್ಷಕ್ಕೆ ಬಹಳ ದೊಡ್ಡ ಲಾಭ ತಂದಿರುವ ಅಮಿತ್ ಮಾಲವೀಯ ವಿರುದ್ಧ ಬಿಜೆಪಿ ಯಾವುದೇ ಕ್ರಮ ಕೈಗೊಳ್ಳುವ ಭರವಸೆ ಇಲ್ಲಿ ಯಾರಿಗೂ ಇಲ್ಲ.
ಈ ನಡುವೆ ಮಂಗಳವಾರ ಶಂತನು ಸಿನ್ಹಾ ಅವರು ಹೇಳಿಕೆಯೊಂದನ್ನು ಬಿಡುಗಡೆ ಮಾಡಿ ‘‘ನಾನು ಮಾಳವೀಯ ವಿರುದ್ಧ ಆ ಅರ್ಥದಲ್ಲಿ ಹೇಳಿದ್ದೇ ಅಲ್ಲ. ಇದೆಲ್ಲ ಕಾಂಗ್ರೆಸ್‌ನ ಅಪಪ್ರಚಾರ. ನಾನು ಹನಿಟ್ರಾಪ್ ಬಗ್ಗೆ ಜಾಗರೂಕರಾಗಿರಬೇಕು ಎಂದಷ್ಟೇ ಹೇಳಿದ್ದು. ನನ್ನ ಹೇಳಿಕೆಯಿಂದ ಮಾಳವಿಯ ಅವರಿಗೆ ನೋವಾಗಿದ್ದರೆ ವಿಷಾದಿಸುತ್ತೇನೆ’’ ಎಂದು ಹೇಳಿದ್ದಾರೆ.