ಈ ಬಾರಿ ಬಿಜೆಪಿ ಪ್ರಾಬಲ್ಯವನ್ನು ಕಾಂಗ್ರೆಸ್ ಮುರಿಯಲಿದೆಯೇ?
ಬೆಂಗಳೂರಿನ ಲೋಕಸಭಾ ಕ್ಷೇತ್ರಗಳ ಪೈಕಿ ಗಮನ ಸೆಳೆಯುವ ಕ್ಷೇತ್ರಗಳಲ್ಲಿ ಬೆಂಗಳೂರು ಸೆಂಟ್ರಲ್ ಕೂಡ ಸೇರಿದೆ. ಕ್ಷೇತ್ರ ರಚನೆಯಾದಾಗಿನಿಂದಲೂ ಬಿಜೆಪಿಯೇ ಇಲ್ಲಿ ಪ್ರಾಬಲ್ಯ ಸಾಧಿಸಿದೆ. ಈ ಬಾರಿ ಈ ಕ್ಷೇತ್ರವನ್ನು ಗೆಲ್ಲಲೇಬೇಕು ಎಂದು ಕಾಂಗ್ರೆಸ್ ಹಠ ತೊಟ್ಟಿದೆ. ಅಭ್ಯರ್ಥಿ ಆಯ್ಕೆ ಸವಾಲನ್ನು ದಾಟಿ ಎರಡೂ ಪ್ರಮುಖ ಪಕ್ಷಗಳು ಅಖಾಡಕ್ಕೆ ಇಳಿದಿವೆ. ಈ ಕ್ಷೇತ್ರವನ್ನು ತಮ್ಮದಾಗಿಸಿಕೊಳ್ಳಲು ಎರಡೂ ಪಕ್ಷಗಳು ಶತಪ್ರಯತ್ನ ಪಡುತ್ತಿವೆ. ಈ ಜಿದ್ದಾಜಿದ್ದಿಯಲ್ಲಿ ಗೆಲುವು ಯಾರದ್ದೆಂದು ಕಾದುನೋಡಬೇಕಾಗಿದೆ.
ಸರಣಿ- 28
ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳು:
ಸರ್ವಜ್ಞನಗರ, ಸಿ.ವಿ. ರಾಮನ್ ನಗರ, ಶಿವಾಜಿನಗರ, ಶಾಂತಿನಗರ, ಗಾಂಧಿನಗರ, ರಾಜಾಜಿನಗರ, ಚಾಮರಾಜಪೇಟೆ, ಮಹದೇವಪುರ
ಇವುಗಳಲ್ಲಿ ಸರ್ವಜ್ಞನಗರ, ಶಿವಾಜಿನಗರ, ಶಾಂತಿನಗರ, ಗಾಂಧಿನಗರ ಮತ್ತು ಚಾಮರಾಜಪೇಟೆಯಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ.ಸಿವಿ ರಾಮನ್ ನಗರ, ರಾಜಾಜಿನಗರ ಮತ್ತು ಮಹದೇವಪುರ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ.
ಈ ವಿಧಾನಸಭಾ ಕ್ಷೇತ್ರಗಳ ಪೈಕಿ ಮಹದೇವಪುರ ವಿಧಾನಸಭಾ ಕ್ಷೇತ್ರ ಭೌಗೋಳಿಕವಾಗಿ ಹೆಚ್ಚು ವಿಸ್ತೀರ್ಣ ಹೊಂದಿದೆ.
ಈ ಕ್ಷೇತ್ರವು ನಗರ ಹಾಗೂ ಗ್ರಾಮೀಣ ಪ್ರದೇಶ ಎರಡನ್ನೂ ಒಳಗೊಂಡಿದ್ದು, ರಾಜ್ಯದಲ್ಲೇ ಅತೀ ಹೆಚ್ಚು ಮತದಾರರನ್ನು ಹೊಂದಿರುವ ವಿಧಾನ ಸಭಾ ಕ್ಷೇತ್ರ.
ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರವನ್ನು ಇಂಧನ ಸಚಿವ ಕೆ.ಜೆ.ಜಾರ್ಜ್(ಕಾಂಗ್ರೆಸ್), ಸಿ.ವಿ.ರಾಮನ್ ನಗರ ಕ್ಷೇತ್ರವನ್ನು ಎಸ್.ರಘು(ಬಿಜೆಪಿ), ಶಿವಾಜಿನಗರ ಕ್ಷೇತ್ರವನ್ನು ರಿಝ್ವಾನ್ ಅರ್ಶದ್(ಕಾಂಗ್ರೆಸ್), ಶಾಂತಿನಗರ ಕ್ಷೇತ್ರವನ್ನು ಎನ್.ಎ. ಹ್ಯಾರಿಸ್(ಕಾಂಗ್ರೆಸ್), ಗಾಂಧಿನಗರ ಕ್ಷೇತ್ರವನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್(ಕಾಂಗ್ರೆಸ್), ರಾಜಾಜಿನಗರ ಕ್ಷೇತ್ರವನ್ನು ಎಸ್.ಸುರೇಶ್ ಕುಮಾರ್(ಬಿಜೆಪಿ), ಚಾಮರಾಜಪೇಟೆ ಕ್ಷೇತ್ರವನ್ನು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಝಮೀರ್ ಅಹ್ಮದ್ ಖಾನ್(ಕಾಂಗ್ರೆಸ್) ಹಾಗೂ ಮಹದೇವಪುರ ಕ್ಷೇತ್ರವನ್ನು ಮಂಜುಳಾ ಅರವಿಂದ ಲಿಂಬಾವಳಿ(ಬಿಜೆಪಿ) ಪ್ರತಿನಿಧಿಸುತ್ತಿದ್ದಾರೆ.
ಬೆಂಗಳೂರು ಲೋಕಸಭಾ ಕ್ಷೇತ್ರದ ಒಟ್ಟು ಮತದಾರರು:
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರವು ಒಟ್ಟು 23,89,761 ಮತದಾರರನ್ನು ಹೊಂದಿದೆ. ಅವುಗಳಲ್ಲಿ ಪುರುಷ ಮತದಾರರು 12,34,786, ಮಹಿಳಾ ಮತದಾರರು 11,54,511 ಮತ್ತು ಇತರರು 464.
ಭಾಷಾ ಹಾಗೂ ಧಾರ್ಮಿಕ ಅಲ್ಪಸಂಖ್ಯಾತರ ಬಾಹುಳ್ಯವಿರುವ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಯಾವುದೇ ಅಭ್ಯರ್ಥಿ ಗೆಲುವು ಸಾಧಿಸಬೇಕಾದರೂ ಇವರ ಬೆಂಬಲ ಅಗತ್ಯ.
ಇಲ್ಲಿನ ಒಟ್ಟು ಮತಗಟ್ಟೆಗಳು 2,125
ರಾಜಧಾನಿ ಬೆಂಗಳೂರಿನ ನಾಲ್ಕು ಲೋಕಸಭಾ ಕ್ಷೇತ್ರಗಳ ಪೈಕಿ ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರ ಗಮನ ಸೆಳೆದ ಕ್ಷೇತ್ರಗಳಲ್ಲಿ ಒಂದು.
2008ರಲ್ಲಿ ಕ್ಷೇತ್ರ ಪುನರ್ ವಿಂಗಡನೆ ವೇಳೆ ಬೆಂಗಳೂರು ಉತ್ತರ ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಗಳಿಂದ ಬೇರ್ಪಟ್ಟು ರಚನೆಯಾದ ಕ್ಷೇತ್ರ ಬೆಂಗಳೂರು ಸೆಂಟ್ರಲ್
2009ರಲ್ಲಿ ಮೊದಲ ಬಾರಿ ಈ ಲೋಕಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್, ಕಾಂಗ್ರೆಸ್ ಅಭ್ಯರ್ಥಿ ಎಚ್.ಟಿ. ಸಾಂಗ್ಲಿಯಾನ ವಿರುದ್ಧ ಜಯಗಳಿಸಿದರು.
ಆನಂತರ, 2014 ಹಾಗೂ 2019ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಿಝ್ವಾನ್ ಅರ್ಶದ್ ಎದುರು ಜಯ ಗಳಿಸುವ ಮೂಲಕ ಹ್ಯಾಟ್ರಿಕ್ ಗೆಲುವು ದಾಖಲಿಸಿದರು.
ಲೋಕಸಭಾ ಚುನಾವಣೆಯ ಕಣಕ್ಕೆ ಇಳಿಯುವ ಮುನ್ನ ಪಿ.ಸಿ.ಮೋಹನ್, 1999 ಹಾಗೂ 2004ರಲ್ಲಿ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ವಿಧಾನಸಭೆ ಪ್ರವೇಶಿಸಿದ್ದರು.
ಆದರೆ, 2008 ಹಾಗೂ 2013ರಲ್ಲಿ ಗಾಂಧಿನಗರ ವಿಧಾನಸಭಾ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದ ಪಿ.ಸಿ.ಮೋಹನ್ ಸತತ ಎರಡು ಬಾರಿ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಗುಂಡೂರಾವ್ ಎದುರು ಪರಾಭವಗೊಂಡಿದ್ದರು.
ಕಳೆದ ಮೂರೂ ಚುನಾವಣೆಗಳಲ್ಲಿನ ಮತಗಳ ಹಂಚಿಕೆ ವಿವರವನ್ನು ಗಮನಿಸುವುದಾದರೆ,
2019ರ ಲೋಕಸಭಾ ಚುನಾವಣೆಯಲ್ಲಿ ಚಲಾವಣೆಯಾದ ಒಟ್ಟು ಮತಗಳು - 11,97,687
ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್ ಪಡೆದ ಮತಗಳು-6,02,853 (ಶೇ.50.35).
ಕಾಂಗ್ರೆಸ್ ಅಭ್ಯರ್ಥಿ ರಿಝ್ವಾನ್ ಅರ್ಶದ್- 5,31,885 (ಶೇ.44.43).
ಪಕ್ಷೇತರ ಅಭ್ಯರ್ಥಿ, ನಟ ಪ್ರಕಾಶ್ ರೈ- 28,906.
10,760 ನೋಟಾ ಮತಗಳು ಚಲಾವಣೆಯಾದವು
ಬಿಜೆಪಿ ಅಭ್ಯರ್ಥಿಯ ಗೆಲುವಿನ ಅಂತರ 70,968 ಮತಗಳು.
2014ರ ಚುನಾವಣೆಯಲ್ಲಿ,
ಪಿ.ಸಿ. ಮೋಹನ್ (ಬಿಜೆಪಿ) ಪಡೆದ ಮತಗಳು 5,57,130 (ಶೇ.51.85)
ರಿಝ್ವಾನ್ ಅರ್ಷದ್ (ಕಾಂಗ್ರೆಸ್) 4,19,630 (ಶೇ.39.05)
ವಿ. ಬಾಲಕೃಷ್ಣನ್ (ಎಎಪಿ) 39,869
ನಂದಿನಿ ಆಳ್ವ (ಜೆಡಿಎಸ್) 20,387
ನೋಟಾ ಮತಗಳು 8,449
2009ರ ಚುನಾವಣೆಯಲ್ಲಿ
ಪಿ.ಸಿ. ಮೋಹನ್ (ಬಿಜೆಪಿ) 3,40,162 (ಶೇ.40.16)
ಎಚ್.ಟಿ. ಸಾಂಗ್ಲಿಯಾನಾ (ಕಾಂಗ್ರೆಸ್) 3,04,944 (ಶೇ.36)
ಝಮೀರ್ ಅಹ್ಮದ್ ಖಾನ್ (ಜೆಡಿಎಸ್) 1,62,552 (ಶೇ.19.19)
ಕ್ಷೇತ್ರದ ಹೆಚ್ಚುಗಾರಿಕೆ
ಬೆಂಗಳೂರು ಭಾರತದ ಸಿಲಿಕಾನ್ ವ್ಯಾಲಿ ಎಂದು ಖ್ಯಾತಿಗಳಿಸಲು ಕಾರಣವಾಗಿರುವ ಇಂಟರ್ ನ್ಯಾಷನಲ್ ಟೆಕ್ ಪಾರ್ಕ್ ಇದೇ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ.
ಸುಮಾರು 2,000ಕ್ಕೂ ಅಧಿಕ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನದ ಕಂಪೆನಿಗಳು ಇಲ್ಲಿನ ಮಹದೇವಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿವೆ. ಜೊತೆಗೆ, ಎಚ್‌ಎಎಲ್ ವಿಮಾನ ನಿಲ್ದಾಣ, ಎಚ್‌ಎಎಲ್ ಕಾರ್ಖಾನೆ, ಡಿಆರ್‌ಡಿಒ ಸಂಶೋಧನಾ ಕೇಂದ್ರ ಇಲ್ಲಿದೆ.
ಬಿಜೆಪಿಯಿಂದ ಮತ್ತೆ ಪಿ.ಸಿ. ಮೋಹನ್
ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಲೋಕಸಭಾ ಚುನಾವಣೆಗೆ ಮೈತ್ರಿ ಮಾಡಿಕೊಂಡಿದ್ದು, ಈಗಾಗಲೇ ಸತತ ಮೂರು ಬಾರಿ ಗೆಲುವು ದಾಖಲಿಸಿರುವ ಪಿ.ಸಿ.ಮೋಹನ್ ನಾಲ್ಕನೇ ಬಾರಿಯೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಕೇಂದ್ರ ಸಚಿವರಾಗಿರುವ ನಿರ್ಮಲಾ ಸೀತಾರಾಮನ್ ಹಾಗೂ ರಾಜೀವ್ ಚಂದ್ರಶೇಖರ್ ಹೆಸರು ಸಹ ಈ ಕ್ಷೇತ್ರಕ್ಕೆ ಕೇಳಿಬರುತ್ತಿತ್ತು. ಆದರೆ ಮತ್ತೊಮ್ಮೆ ಟಿಕೆಟ್ ಪಡೆಯುವಲ್ಲಿ ಪಿ.ಸಿ. ಮೋಹನ್ ಯಶಸ್ವಿಯಾಗಿದ್ದಾರೆ.
ಹಾಲಿ ಸಂಸದ ಪಿ.ಸಿ.ಮೋಹನ್ ಸ್ಥಳೀಯ ಬಿಜೆಪಿ ಶಾಸಕರ ಛಾಯೆಯಲ್ಲೇ ಕೆಲಸ ಮಾಡುತ್ತಾರೆ ಎಂಬ ಆಪಾದನೆ ಇದೆ.
ಕೇವಲ ಪಕ್ಷದ ಸಭೆ, ಸಮಾರಂಭಗಳಿಗಷ್ಟೇ ಸೀಮಿತವಾಗಿರುವ ಅವರು ವೈಯಕ್ತಿಕವಾಗಿ ಕ್ಷೇತ್ರದಲ್ಲಿ ತಮ್ಮ ವರ್ಚಸ್ಸು ವೃದ್ಧಿಸಿಕೊಳ್ಳುವಲ್ಲಿ ಹಿಂದುಳಿದಿದ್ದಾರೆ ಎನ್ನಬಹುದು.
ಸಂಸದರ ಪ್ರದೇಶಾಭಿವೃದ್ಧಿ ನಿಧಿಯನ್ನು ಆಯ್ದ ಕ್ಷೇತ್ರಗಳಿಗಷ್ಟೆ ಬಳಕೆ ಮಾಡುತ್ತಾರೆ ಎಂಬ ಆಪಾದನೆಯೂ ಇದೆ.
ಅಲ್ಲದೆ, ಇಡೀ ದೇಶದ ಗಮನ ಸೆಳೆದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಕೆಂಗಣ್ಣಿಗೆ ಗುರಿಯಾಗಿರುವ ಬೆಳ್ಳಂದೂರು ಕೆರೆಯ ಅಭಿವೃದ್ಧಿಯಲ್ಲಿ ನಿರ್ಲಕ್ಷ್ಯ, ಮೂಲಸೌಕರ್ಯಗಳ ಕೊರತೆ, ಮೆಟ್ರೋ ರೈಲು ಮಾರ್ಗ ವಿಸ್ತರಣೆಯಲ್ಲಿ ಆಗುತ್ತಿರುವ ವಿಳಂಬ ಸೇರಿದಂತೆ ಇನ್ನಿತರ ಹಲವು ಸಮಸ್ಯೆಗಳು ಈ ಕ್ಷೇತ್ರದ ವ್ಯಾಪ್ತಿಯಲ್ಲಿವೆ.
ಗೆಲ್ಲುವ ಹವಣಿಕೆಯಲ್ಲಿ ಕಾಂಗ್ರೆಸ್
ಕಾಂಗ್ರೆಸ್ ಪಕ್ಷವು ಈ ಬಾರಿ ಶತಾಯಗತಾಯ ಈ ಕ್ಷೇತ್ರವನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಹವಣಿಸುತ್ತಿದೆ.
ಕಾಂಗ್ರೆಸ್ ಪಕ್ಷದಿಂದ ಎಐಸಿಸಿ ಕಾರ್ಯದರ್ಶಿ ಮನ್ಸೂರ್ ಅಲಿ ಖಾನ್ ಅಭ್ಯರ್ಥಿಯಾಗಿದ್ದಾರೆ. ಇವರು ಮಾಜಿ ಕೇಂದ್ರ ಸಚಿವ ಹಾಗೂ ಮಾಜಿ ರಾಜ್ಯಸಭಾ ಉಪ ಸಭಾಪತಿ ಕೆ. ರೆಹ್ಮಾನ್ ಖಾನ್ ಅವರ ಪುತ್ರ.
ಪಿ.ಸಿ. ಮೋಹನ್ ಸತತ ಮೂರು ಬಾರಿ ಸಂಸದರಾದರೂ, ಆ ಪೈಕಿ ಎರಡು ಅವಧಿಗೆ ಅವರದೇ ಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿದ್ದರೂ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿಯನ್ನೂ ಮಾಡಿಲ್ಲ, ರಾಜಕೀಯವಾಗಿಯೂ ವರ್ಚಸ್ಸು ಬೆಳೆಸಿಕೊಂಡಿಲ್ಲ. ಅವರದೇನಿದ್ದರೂ ಮೋದಿ ವರ್ಚಸ್ಸು, ಬಿಜೆಪಿ ಸಂಘಟನಾ ಶಕ್ತಿ ಹಾಗೂ ಜಾತಿ ಬಲದ ಮೇಲೆ ಗೆದ್ದು ಬರುವ ರಾಜಕೀಯ.
ಈ ಬಾರಿ ಕ್ಷೇತ್ರದಲ್ಲಿರುವ ಅಹಿಂದ ಮತಗಳ ಕ್ರೋಡೀಕರಣ, ಐದು ಕಾಂಗ್ರೆಸ್ ಶಾಸಕರು ಹಾಗೂ ರಾಜ್ಯದಲ್ಲೂ ಕಾಂಗ್ರೆಸ್ ಆಡಳಿತದಲ್ಲಿ ಇರುವುದನ್ನು ಸರಿಯಾಗಿಯೇ ಬಳಸಿಕೊಂಡು ಗೆಲ್ಲಲೇ ಬೇಕು ಎಂದು ಕಾಂಗ್ರೆಸ್ ಹೊರಟಿದೆ.
ರಾಜ್ಯದಲ್ಲಿ ಈವರೆಗೆ ಪ್ರಕಟವಾಗಿರುವ ಕಾಂಗ್ರೆಸ್ ಅಭ್ಯರ್ಥಿಗಳಲ್ಲಿ ಮನ್ಸೂರ್ ಖಾನ್ ಒಬ್ಬರೇ ಮುಸ್ಲಿಮ್ ಅಭ್ಯರ್ಥಿ. ಇನ್ನುಳಿದ ಕ್ಷೇತ್ರಗಳಲ್ಲೂ ಮುಸ್ಲಿಮರಿಗೆ ಪ್ರಾತಿನಿಧ್ಯ ಸಿಗುವ ಸಾಧ್ಯತೆ ಇಲ್ಲ. ಹಾಗಾಗಿ ಟಿಕೆಟ್ ಕೊಟ್ಟ ಒಬ್ನನೇ ಒಬ್ಬ ಮುಸ್ಲಿಮ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವುದು ಕಾಂಗ್ರೆಸ್‌ಗೂ ರಾಜಕೀಯವಾಗಿ ಬಹಳ ಮುಖ್ಯ.