ಮಂಗಳೂರಿನ ರೈಲು ಪ್ರಯಾಣಿಕರಿಗೆ ಸೀಟು ನಷ್ಟವಾದೀತೇ?
ಅಂತೂ ಮಂಗಳೂರು-ಮೈಸೂರು ರೈಲಿಗೆ ಮುರುಡೇಶ್ವರಕ್ಕೆ ಹೋಗುವ ಯೋಗ ಕೂಡಿ ಬಂದಿದೆ! ಹಾಗೆಯೇ ಈ ರೈಲು ವಿಸ್ತರಣೆ ಆದ ಮೇಲೆ ಹಾಲಿ ಸಂಚರಿಸುತ್ತಿರುವ ಸಾಪ್ತಾಹಿಕ ಯಶವಂತಪುರ-ಮುರುಡೇಶ್ವರ ರೈಲು ಇತಿಹಾಸ ಸೇರಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ಮಂಗಳೂರಿನಲ್ಲಿ ಪ್ರಯಾಣ ಕೊನೆಯಾಗುತ್ತಿದ್ದ ರೈಲುಗಳ ಪೈಕಿ ಈಗ 3ನೇ ರೈಲಿನ ವಿಸ್ತರಣೆ ಕೊಂಕಣ ಭಾಗಕ್ಕೆ ಆಗಿದೆ. ಈ ಹಿಂದೆ ಮಂಗಳೂರುವರೆಗೆ ಮಾತ್ರ ಸಂಚರಿಸುತ್ತಿದ್ದ ಮಂಗಳೂರು-ಬೆಂಗಳೂರು ರಾತ್ರಿ ರೈಲು ಹಾಗೂ ಮಂಗಳೂರು - ಯಶವಂತಪುರ ಹಗಲು ರೈಲು ಮಂಗಳೂರಿನಿಂದ ಕಾರವಾರಕ್ಕೆ ವಿಸ್ತರಣೆಯಾಗಿತ್ತು.
ಮಂಗಳೂರಿಗರು ತಮ್ಮ ನೆರೆಯ ಜಿಲ್ಲೆಯವರಿಗೆ ಅನುಕೂಲ ಆಗಲಿ ಎಂದು ಈ ರೈಲುಗಳನ್ನು ವಿಸ್ತರಣೆ ಮಾಡಲು ಸಹಕಾರ ನೀಡಿದ್ದಾರೆ. ಹೋರಾಟ ಮಾಡಿದ್ದಾರೆ. ಆದರೆ ಈಗ ಅವರಿಗೆ ಸಿಗುವ ಸೀಟುಗಳಿಗೆ ಸಂಚಕಾರ ಬರುತ್ತದೆಯೇ ಎಂಬ ಅನುಮಾನ ಕಾಡುತ್ತಿದೆ.
ಈ ಹಿಂದೆ ಮಂಗಳೂರು-ಬೆಂಗಳೂರು ರಾತ್ರಿ ರೈಲು ಕಾರವಾರಕ್ಕೆ ವಿಸ್ತರಣೆ ಆದ ಬಳಿಕ (ಸಂಖ್ಯೆ 16523/24) ಮಂಗಳೂರು ಪ್ರಯಾಣಿಕರಿಗೆ ಈ ರೈಲಿನಲ್ಲಿ ವಿಸ್ತರಣೆಗೂ ಮುನ್ನಾ ಲಭ್ಯ ಇದ್ದ ಜನರಲ್ ಕೋಟಾ ಅಡಿಯಲ್ಲಿ ಟಿಕೆಟ್ ಹಂಚಿಕೆಯನ್ನು ಕಾರವಾರ-ಉಡುಪಿ ಭಾಗದವರಿಗೆ ವರ್ಗಾಯಿಸಿ, ಮಂಗಳೂರು - ಸುಬ್ರಹ್ಮಣ್ಯ ಪ್ರಯಾಣಿಕರಿಗೆ ಕೆಲವೇ ಸೀಟ್‌ಗಳು ಲಭ್ಯ ಇರುವ ‘ರೋಡ್ ಸೈಡ್ ರಿಮೋಟ್ ಕೋಟಾ’ ಅಡಿಯಲ್ಲಿ ರಿಸರ್ವೇಶನ್ ಟಿಕೆಟ್ ನೀಡುವ ವ್ಯವಸ್ಥೆ ತರಲಾಯಿತು.
ಇದರಿಂದಾಗಿ ಈ ಭಾಗದ ಜನತೆಗೆ ಈ ರೈಲಲ್ಲಿ ಪ್ರಯಾಣಿಸಲು ಟಿಕೆಟ್ ಸಿಗದೆ, ದುಬಾರಿ ದರದ ತತ್ಕಾಲ್ ಟಿಕೆಟ್ ಖರೀದಿಸಿ ಹೋಗಬೇಕಾದ ಅನಿವಾರ್ಯತೆ ಬಂದಿತ್ತು.
ಈ ಹಿಂದೆ, ಬೆಂಗಳೂರು-ಮಂಗಳೂರು ರೈಲು ಕಣ್ಣೂರಿಗೆ ವಿಸ್ತರಣೆ ಆದ ತರುವಾಯ ಮಂಗಳೂರು ಭಾಗದ ಪ್ರಯಾಣಿಕರಿಗೆ ಈ ರೈಲಿನ ರಿಸರ್ವೇಶನ್‌ನ ಸೀಟು ಹಂಚಿಕೆಯಲ್ಲಿ ವ್ಯತ್ಯಯವಾಗಿ ಈ ರೈಲಿನ ವಿಸ್ತರಣಾಪೂರ್ವ ಕಾಲದಲ್ಲಿ ಸಿಗುತ್ತಿದ್ದ ಸೀಟುಗಳ ಸಂಖ್ಯೆಯಲ್ಲಿ ಭಾರೀ ಕಡಿತವಾಗಿದೆ. ಇನ್ನು ಇದೇ ಸಮಸ್ಯೆ ಮಂಗಳೂರು-ಮೈಸೂರು ರೈಲಿನ ವಿಸ್ತರಣೆ ಆದ ಬಳಿಕ ತಲೆ ದೋರಬಹುದು ಎಂಬ ಆತಂಕ ಇಲ್ಲಿಯ ಪ್ರಯಾಣಿಕರಿಗೆ ಇದೆ.
ಈಗ 19 ಬೋಗಿಗಳನ್ನು ಹೊಂದಿರುವ ಮೈಸೂರು -ಮಂಗಳೂರು ರೈಲಿಗೆ ಇನ್ನೂ ಹೆಚ್ಚುವರಿ 4 ಬೋಗಿಗಳನ್ನು ಸೇರಿಸುತ್ತೇವೆ ಎಂಬ ಆಶ್ವಾಸನೆ ನೀಡಿದರೂ, ರಿಸರ್ವೇಶನಿನಲ್ಲಿ ಮಂಗಳೂರು ಭಾಗದವರಿಗೆ ಈಗಿರುವ ‘ಜನರಲ್ ಕೋಟಾ’ ಬದಲು ‘ರೋಡ್ ಸೈಡ್ ಕೋಟಾ’ ಎಂದು ಬದಲಾಯಿಸಿದರೆ ಈಗ ಲಭ್ಯ ಇರುವ ಸೀಟುಗಳ ಸಂಖ್ಯೆಯಲ್ಲಿ ಗಣನೀಯ ಕಡಿತ ಆಗಲಿದೆ. ಹೆಚ್ಚುವರಿ ಬೋಗಿಗಳನ್ನು ಅಳವಡಿಸಿದರೂ, ಇದರ ಪ್ರಯೋಜನ ಇಲ್ಲಿಯವರಿಗೆ ಆಗುವುದಿಲ್ಲ. ಬೋಗಿಗಳ ಸಂಖ್ಯೆ ಹೆಚ್ಚಾದಷ್ಟೂ ರೈಲಿನ ವೇಗದಲ್ಲಿ ಇಳಿತ ಉಂಟಾಗುತ್ತದೆ.
ಹೀಗಾಗಿ ಈ ರೈಲಿನಲ್ಲಿ ಈಗಿರುವ ಸೀಟ್‌ಗಳ ಕೋಟ ಉಳಿಸಿಕೊಳ್ಳುವುದರ ಜೊತೆಗೆ, ಈಗ ನಿರ್ಧಾರವಾದಂತೆ ಈ ರೈಲು ಮಂಗಳೂರು ನಗರ ಪ್ರವೇಶಿಸಿ ಮುರುಡೇಶ್ವರದವರೆಗೆ ಸಂಚರಿಸುವುದನ್ನು ಮುಂದುವರಿಸುವುದು ಮುಂದಿನ ದಿನಗಳಲ್ಲಿ ಮಂಗಳೂರು - ಸುಬ್ರಹ್ಮಣ್ಯ ಭಾಗದ ಜನತೆಗೆ ಒಂದು ಸವಾಲಾಗದಿರಲಿ.