ಮಹಿಳಾ ಸಾಹಿತ್ಯವೇ ಇಂದು ಮುಂಚೂಣಿಯಲ್ಲಿದೆ: ಡಾ. ವಸುಂಧರಾ ಭೂಪತಿ

ವಿಮರ್ಶಾ ಲೋಕ ಕೂಡ, ಮಹಿಳಾ ಸಾಹಿತ್ಯವನ್ನು ಗಣನೆಗಿಟ್ಟುಕೊಂಡೇ ವಿಮರ್ಶಿಸಬೇಕು. ಅಂತಹ ಸ್ಥಿತಿಯನ್ನು ನಮ್ಮ ಲೇಖಕಿಯರು ಸೃಷ್ಟಿ ಮಾಡಿದ್ದಾರೆ. ಮಹಿಳೆ ತನ್ನ ಅರಿವನ್ನು ವಿಸ್ತರಿಸಿಕೊಳ್ಳುತ್ತಾ ಅದರ ಭಿನ್ನತೆಯನ್ನು ಪುರುಷ ಜಗತ್ತಿಗೆ ಹೇಳುವಂತಹ ಹಂತದಲ್ಲಿ ಕೆಲವು ಸಮಸ್ಯೆಗಳು, ಸವಾಲುಗಳು ಆರಂಭದಲ್ಲಿ ಕಾಡಿದ್ದು ನಿಜ. ಆದರೆ ಅವೆಲ್ಲವನ್ನೂ ಮೀರಿ ಇಂದು ಬರೆಯುತ್ತಿದ್ದಾರೆ.

Update: 2024-02-02 06:51 GMT

ಡಾ. ವಸುಂಧರಾ ಭೂಪತಿಯವರು ವೈದ್ಯೆಯಾಗಿ, ಸಾಹಿತಿಯಾಗಿ, ಸಂಘಟಕಿಯಾಗಿ, ಸಾಮಾಜಿಕ ಹೋರಾಟಗಾರ್ತಿಯಾಗಿ ಪ್ರಸಿದ್ಧರು. ವೈದ್ಯಸಾಹಿತ್ಯ, ಕತೆ, ನಾಟಕ, ಕವನ, ಗ್ರಂಥ ಸಂಪಾದನೆ ಪ್ರಕಾರಗಳಲ್ಲಿ ಇವರ 75ಕ್ಕೂ ಹೆಚ್ಚು ಕೃತಿಗಳು ಪ್ರಕಟಗೊಂಡಿವೆ. ಕನ್ನಡ ಪುಸ್ತಕ ಪ್ರಾಧಿಕಾರದ ಮೊದಲ ಮಹಿಳಾ ಅಧ್ಯಕ್ಷರು. ಸತತ ಎರಡು ಅವಧಿಗೆ ಚುನಾಯಿತರಾಗಿ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾಗಿ ಹಾಗೂ ರಾಜ್ಯ ವಿಜ್ಞಾನ ಪರಿಷತ್‌ನ ಗೌರವ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಹೀಗೆ ಬಹುಮುಖ ಪ್ರತಿಭೆಯ ಡಾ. ವಸುಂಧರಾ ಭೂಪತಿಯವರಿಗೆ ರಾಜ್ಯ ಸರಕಾರ ಕೊಡಮಾಡುವ 2023ನೇ ಸಾಲಿನ ಅಕ್ಕಮಹಾದೇವಿ ಪ್ರಶಸ್ತಿ ಲಭಿಸಿದೆ. ಈ ಹಿನ್ನೆಲೆಯಲ್ಲಿ ಅವರೊಂದಿಗೆ ಆತ್ಮೀಯ ಮಾತುಕತೆ.

► ರಾಜ್ಯ ಸರಕಾರದ ಅಕ್ಕಮಹಾದೇವಿ ಪ್ರಶಸ್ತಿ ಲಭಿಸಿರುವುದಕ್ಕೆ ಅಭಿನಂದನೆಗಳು ಮೇಡಂ. ಅಕ್ಕಮಹಾದೇವಿ ಮಹಿಳಾ ಲೋಕ ಕಂಡ ಅತ್ಯಂತ ದೊಡ್ಡ ಸ್ತ್ರೀವಾದಿ ಚಿಂತಕಿ. ಜೊತೆಗೆ ಜಾತಿ, ಮತಗಳನ್ನು ಮೀರಿ ಮುನ್ನಡೆದವಳು. ಅವಳ ಹೆಸರಿನ ಪ್ರಶಸ್ತಿ ಅಂದರೆ ಅದು ನಿಜಕ್ಕೂ ಹೆಮ್ಮೆ ತರುವ ವಿಷಯ. ಈ ಹಿನ್ನೆಲೆಯಲ್ಲಿ ನಿಮ್ಮ ಚಿಂತನೆಗಳು, ಬದುಕು ಬರಹಗಳನ್ನು ಯಾವ ಥರ ವ್ಯಾಖ್ಯಾನಿಸುತ್ತೀರಿ?

ಡಾ.ವ.ಭೂ.: ಅಕ್ಕಮಹಾದೇವಿ ಪ್ರಶಸ್ತಿ ಸಾಹಿತ್ಯಕ, ಸಾಮಾಜಿಕ, ಸಾಂಸ್ಕೃತಿಕವಾಗಿ ತೊಡಗಿಕೊಂಡಿರುವವರಿಗೆ ಕೊಡುವಂತಹ ಪ್ರಶಸ್ತಿ. ಈ ಪ್ರಶಸ್ತಿ ನನಗೆ ಬಂದಿರುವುದು ಸಂತೋಷ ಹೆಚ್ಚಿದೆ. ಹಾಗೆಯೇ ಜವಾಬ್ದಾರಿಯನ್ನೂ ಹೆಚ್ಚಿಸಿದೆ. ಇದೊಂದು ಮಹಿಳಾ ಅಸ್ಮಿತೆಯ ಪ್ರಶಸ್ತಿ. ಮಹಿಳಾ ಹೋರಾಟವೆಂದರೆ ಎಲ್ಲರೂ ಸೇರಿ ಜೊತೆಯಾಗಿ ಮಾಡಿದ ಹೋರಾಟವಿದು. ನನ್ನ ಮೂಲಕ ಮಹಿಳಾ ಹೋರಾಟದಲ್ಲಿ ತೊಡಗಿಸಿಕೊಂಡ ಎಲ್ಲ ಮಹಿಳೆಯರಿಗೆ ಸಲ್ಲತಕ್ಕಂತಹ ಗೌರವ ಇದು ಎಂದು ನಾನು ಭಾವಿಸುತ್ತೇನೆ.

ಅಕ್ಕ ನನ್ನ ಮೇಲೆ ಎಲ್ಲ ರೀತಿಯಿಂದಲೂ ಪ್ರಭಾವಿಸಿದ ಮಹಿಳೆ. ೧೨ನೇ ಶತಮಾನದ ಶರಣ ಚಳವಳಿ ಆರ್ಥಿಕ ತಾರತಮ್ಯವಿಲ್ಲದೆ, ಜಾತಿಭೇದವಿಲ್ಲದೆ ಕಲ್ಯಾಣ ಸಮಾಜದ ನಿರ್ಮಾಣ ಮಾಡುವಲ್ಲಿ ಎಲ್ಲ ವಚನಕಾರರು ವಚನಕಾರ್ತಿಯರು ಶ್ರಮಿಸಿದ್ದರು. ಅಕ್ಕ ಆ ಕಾಲಕ್ಕೇ ಲಿಂಗ ಸಮಾನತೆಯ ಕನಸು ಕಂಡವಳು. ಆ ನಿಟ್ಟಿನಲ್ಲಿ ಬರೆದಳು. ಹಾಗಾಗಿಯೇ ಅವಳು,

‘ಗಂಡು ಗಂಡಾದೆಡೆ ಹೆಣ್ಣಿನ ಸೂತಕ

ಹೆಣ್ಣು ಹೆಣ್ಣಾದೆಡೆ ಗಂಡಿನ ಸೂತಕ

ಮನದ ಸೂತಕ ಹಿಂಗಿದೆಡೆ

ತನುವಿನ ಸೂತಕಕ್ಕೆ ತೆರಹುಂಟೆ

ಮುನ್ನಿಲ್ಲದ ಸೂತಕಕ್ಕೆ ಜನ ಮರುಳಾಯಿತು

ನೋಡಾ ಚೆನ್ನ ಮಲ್ಲಿಕಾರ್ಜುನ’

ಗಂಡು ಹೆಣ್ಣು ಇಬ್ಬರಲ್ಲೂ ಜೈವಿಕ ಲಕ್ಷಣದಿಂದಾಗಿ ಭಿನ್ನತೆ ಇರುತ್ತದೆಯೇ ಹೊರತು ಅದು ತಾರತಮ್ಯ ಅಲ್ಲ. ಪ್ರಕೃತಿಯ ನಿರಂತರ ಚಲನೆಗೆ ಹೆಣ್ಣು ಗಂಡು ಎಂಬ ವೈವಿಧ್ಯ ಅನಿವಾರ್ಯ, ಅವಶ್ಯಕ ಎಂಬುದನ್ನು ಪ್ರತಿಪಾದಿಸಿದವಳು.

ಇಂತಹ ಅವಳ ವಚನಗಳನ್ನು ಓದುತ್ತಾ ಕೇಳುತ್ತಾ ಬೆಳೆದವಳು ನಾನು. ಅಕ್ಕ, ಕೇವಲ ಜಾತಿ, ಮತ ಮಾತ್ರ ಅಲ್ಲ, ಪರಿಸರದ ಬಗ್ಗೆನೂ ಮಾತಾಡಿದ್ದಳು. ಇವತ್ತು ಇಡೀ ಜಗತ್ತು ಹವಾಮಾನ ವೈಪರೀತ್ಯದ ಕುರಿತು, ಪರಿಸರ ಸಂರಕ್ಷಣೆ ಕುರಿತು ಚಿಂತನೆ ನಡೆಸುತ್ತಿದೆ. ಆದರೆ ಅಕ್ಕ ೧೨ನೇ ಶತಮಾನದಲ್ಲಿಯೇ ಪರಿಸರದ ಕುರಿತು ಕಾಳಜಿಯುಳ್ಳವಳಾಗಿದ್ದಳು. ಜೊತೆಗೆ ಆರೋಗ್ಯದ ಕುರಿತಾಗಿಯೂ ಅವಳ ಚಿಂತನೆ ಇತ್ತು. ಆಹಾರದಲ್ಲಿ ಮಿತಿ ಹಾಕಿಕೊಳ್ಳಿ ಅಂತ ನಾವು ಈಗ ಹೇಳುತ್ತಿರುತ್ತೇವೆ. ಆದರೆ ಅಕ್ಕ ಆಹಾರವ ಕಿರಿದು ಮಾಡಿರಣ್ಣ ಅಂತ ವಚನವನ್ನೇ ಬರೆದಿದ್ದಳು. ಹೀಗೆ ಆರೋಗ್ಯ ಸಾಹಿತ್ಯ, ಪರಿಸರ ಸಾಹಿತ್ಯ, ಮಹಿಳಾ ಸಂವೇದನೆ ಇವೆಲ್ಲವನ್ನೂ ಒಳಗೊಂಡಿರುವಂತಹ ಸಾಹಿತ್ಯವನ್ನು ಆ ಕಾಲಕ್ಕೇ ಅವಳು ರಚಿಸಿದ್ದಳು. ಹೀಗಾಗಿ ಅಕ್ಕನ ಹೆಸರಿನ ಪ್ರಶಸ್ತಿ ಸಿಕ್ಕಿರುವುದು ಬಹುದೊಡ್ಡ ಗೌರವ ನನಗೆ.

► ಈಗಿನ ನಮ್ಮ ಮಹಿಳಾ ಸಾಹಿತ್ಯ ಹೇಗಿದೆ ಎಂದು ನಿಮಗೆ ಅನಿಸುತ್ತದೆ.?

ಡಾ.ವ.ಭೂ.: ಈಗ ನಿಜಕ್ಕೂ ಮಹಿಳಾ ಸಾಹಿತ್ಯವೇ ಮುಂಚೂಣಿಯಲ್ಲಿದೆ. ಇಂದಿನ ಲೇಖಕಿಯರು ತುಂಬ ಸ್ಪಷ್ಟವಾಗಿ ತಮ್ಮ ಆಲೋಚನೆಗಳನ್ನು ಅಭಿವ್ಯಕ್ತಿಗೊಳಿಸುತ್ತಿದ್ದಾರೆ. ಕಥೆ, ಕಾವ್ಯ, ಕಾದಂಬರಿಗಳ ಜೊತೆ ಕನ್ನಡದಲ್ಲಿ ಬರುತ್ತಿರುವ ಆತ್ಮಕಥನಗಳನ್ನೇ ಉದಾಹರಣೆಯಾಗಿ ಹೇಳಬಹುದು. ಖ್ಯಾತ ನಾಮರಷ್ಟೇ ಅಲ್ಲ, ಬೇರೆಬೇರೆ ಕ್ಷೇತ್ರದಲ್ಲಿರುವಂತಹ ಸಾಮಾನ್ಯ ಮಹಿಳೆಯರೂ ಇಂದು ಆತ್ಮಕಥನ ಬರೆಯುತ್ತಿರುವುದು ಈ ಶತಮಾನದ ಬಹುದೊಡ್ಡ ಕೊಡುಗೆ ಅನ್ನಬಹುದು.

ಜಗತ್ತಿನ ಮಹಿಳಾ ಲೋಕವಿನ್ನೂ ಅಕ್ಷರ ಲೋಕಕ್ಕೆ ತೆರೆದುಕೊಳ್ಳದೆ ಇರುವ ಸಂದರ್ಭದಲ್ಲಿ ೧೨ನೇ ಶತಮಾನದಲ್ಲೇ ನಮ್ಮ ವಚನಕಾರ್ತಿಯರು ಗಟ್ಟಿ ಧ್ವನಿಯಲ್ಲಿ ವಚನಗಳನ್ನು ರಚಿಸಿದ್ದು ಹೆಮ್ಮೆ ತರುವ ವಿಷಯ.

ಮಹಿಳೆಯರು ಹಂತಹಂತವಾಗಿ ತೆರೆದುಕೊಳ್ಳುತ್ತಾ ಹೋಗಿದ್ದನ್ನು ನಾವು ಕಾಣಬಹುದು. ಅದೆಂದರೆ ಅಕ್ಷರ ಜ್ಞಾನ, ಅರಿವು, ಆತ್ಮ ಪ್ರತ್ಯಯಗಳನ್ನೊಳಗೊಂಡಂತಹ ಪರಿವರ್ತನೆಗಳ ನೆಲೆಗಳ ಮುಖಾಂತರ ಬೆಳೆಯುತ್ತ ಬಂದರು. ನೆಲೆಯನ್ನು ಕಂಡುಕೊಂಡರು. ಇದನ್ನೇ ನಾವು ಇಂದಿನ ಮಹಿಳಾ ಸಾಹಿತ್ಯದಲ್ಲಿ ಕಾಣಬಹುದು. ಜಾಗತಿಕ ಮಟ್ಟದಲ್ಲೂ ಕನ್ನಡದ ಮಹಿಳಾ ಸಾಹಿತ್ಯವನ್ನು ಗುರುತಿಸುವಂತಾಗಿರುವುದು ಸಂತೋಷದ ಸಂಗತಿ.

ಇನ್ನು ವಿಮರ್ಶಾ ಲೋಕ ಕೂಡ, ಮಹಿಳಾ ಸಾಹಿತ್ಯವನ್ನು ಗಣನೆಗಿಟ್ಟುಕೊಂಡೇ ವಿಮರ್ಶಿಸಬೇಕು. ಅಂತಹ ಸ್ಥಿತಿಯನ್ನು ನಮ್ಮ ಲೇಖಕಿಯರು ಸೃಷ್ಟಿ ಮಾಡಿದ್ದಾರೆ. ಮಹಿಳೆ ತನ್ನ ಅರಿವನ್ನು ವಿಸ್ತರಿಸಿಕೊಳ್ಳುತ್ತಾ ಅದರ ಭಿನ್ನತೆಯನ್ನು ಪುರುಷ ಜಗತ್ತಿಗೆ ಹೇಳುವಂತಹ ಹಂತದಲ್ಲಿ ಕೆಲವು ಸಮಸ್ಯೆಗಳು, ಸವಾಲುಗಳು ಆರಂಭದಲ್ಲಿ ಕಾಡಿದ್ದು ನಿಜ. ಆದರೆ ಅವೆಲ್ಲವನ್ನೂ ಮೀರಿ ಇಂದು ಬರೆಯುತ್ತಿದ್ದಾರೆ.

► ಸಮಕಾಲೀನ ಜಗತ್ತಿನಲ್ಲಿ ಹಲವಾರು ತಲ್ಲಣಗಳನ್ನು ಎದುರಿಸಬೇಕಾದ ಸಂದರ್ಭದಲ್ಲಿ ನಮ್ಮತನವನ್ನು ಕಾಯ್ದುಕೊಂಡು ಬರವಣಿಗೆಯಲ್ಲಿ ತೊಡಗಿಕೊಳ್ಳುವುದು ಹೇಗೆ?

ಡಾ.ವ.ಭೂ.: ಈಗ ನೋಡುತ್ತಿರುವ ವರ್ತಮಾನದ ತಲ್ಲಣಗಳು ಯಾರನ್ನೂ ಬಿಟ್ಟಿಲ್ಲ. ಇಂದು ಸಾಮಾಜಿಕ ವ್ಯವಸ್ಥೆ ಹಿಮ್ಮುಖ ಚಲನೆಯಾಗುತ್ತಿದೆಯೆಂದು ಅನಿಸುತ್ತಿದೆ. ಮಹಿಳೆ, ದಲಿತರ ವಿಷಯದಲ್ಲಿ ಇದು ಸ್ಪಷ್ಟವಾಗಿ ಕಂಡುಬರುತ್ತಿದೆ. ಮಹಿಳೆಯ ಮೇಲಿನ ದೌರ್ಜನ್ಯ ವಿಪರೀತ ಅನ್ನುವಷ್ಟು ಹೆಚ್ಚಿದೆ. ಬಸವಣ್ಣನವರು ಅಂತರ್ಜಾತಿ ವಿವಾಹವನ್ನು ೧೨ನೇ ಶತಮಾನದಲ್ಲೇ ಮಾಡಿಸಿದ್ದರು. ಆದರೆ ಈಗ ಮರ್ಯಾದಾ ಹೀನ ಹತ್ಯೆಗಳು ನಮ್ಮ ಅಕ್ಕಪಕ್ಕದಲ್ಲೇ ನಡೆಯುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಬಹಳ ಎಚ್ಚರದಿಂದ ನಮ್ಮ ಬರಹಗಳಲ್ಲಿ, ಮಾತುಗಳಲ್ಲಿ ಅನಿಷ್ಠಗಳನ್ನು ವಿರೋಧಿಸುತ್ತಲೇ ಇರಬೇಕು. ಇವುಗಳ ಕುರಿತು ಪದೇಪದೇ ಹೇಳುತ್ತಲೇ ಇರಬೇಕು. ಸಮಾಜವನ್ನು ತಿದ್ದುವಂತಹ ಕೆಲಸ ಆಗಬೇಕು. ಶರಣ ಚಳವಳಿಯಂತಹ ಚಳವಳಿ ಮತ್ತೆ ಆಗಬೇಕು.

ಬಹಳ ಮುಖ್ಯವಾಗಿ ಶಿಕ್ಷಣದಲ್ಲಿ, ಪಠ್ಯದಲ್ಲಿ, ಧರ್ಮದಲ್ಲಿ, ಸರಕಾರ, ಕಾನೂನು ಹೀಗೆ ಪ್ರತಿಯೊಂದರಲ್ಲೂ ಮಹಿಳಾ ಪ್ರಜ್ಞೆಯನ್ನು ಮೂಡಿಸುವಂತಹ ತುರ್ತು ಇಂದಿದೆ.

► ನೀವೊಬ್ಬ ಡಾಕ್ಟರ್. ಜೊತೆಗೆ ಹೋರಾಟಗಾರ್ತಿ. ಈ ಕಾರ್ಯಗಳಲ್ಲಿ ತೊಡಗಿಕೊಂಡಾಗ ನಿಮಗೆ ಬಂದಿರುವಂಥ ಸವಾಲುಗಳೇನು?

ಡಾ.ವ.ಭೂ.: ಸಂಘಟನೆಯಲ್ಲಿರುವಾಗ ಬಹಳಷ್ಟು ಸವಾಲುಗಳು ಬಂದೇ ಬರುತ್ತವೆ. ಮಹಿಳೆ ಆಗಿರುವ ಕಾರಣಕ್ಕೇ ತೊಂದರೆಗಳು ಅನೇಕ ಇರತ್ತವೆ. ಅವುಗಳನ್ನು ಸರಿಪಡಿಸಿಕೊಂಡು ಮುನ್ನಡೆಯಬೇಕು. ನನಗೆ ಕುಟುಂಬದ ಸಂಪೂರ್ಣ ಸಹಕಾರ ಸಿಕ್ಕಿದೆ. ನನ್ನ ಆಯ್ಕೆಯ ಮದುವೆಯಾಗಿದ್ದರಿಂದ, ಪತಿ ಭೂಪತಿಯವರ ಸಹಕಾರ ತುಂಬಾ ಇತ್ತು. ನನ್ನೆಲ್ಲ ಕೆಲಸಗಳಿಗೂ ಅವರು ಜೊತೆಯಾಗಿ ನಿಂತಿದ್ದರು. ಈಗ ಮಕ್ಕಳ ಸಹಕಾರವೂ ಇದೆ. ಪಠ್ಯ ಪುಸ್ತಕ ಪರಿಷ್ಕರಣೆಯ ವಿರೋಧಿ ಹೋರಾಟ ಮತ್ತು ಹೆಣ್ಣು ಭ್ರೂಣಹತ್ಯೆ ನಿಷೇಧ ಸಮಿತಿಯ ಸದಸ್ಯೆಯಾಗಿರುವಾಗ ಅನೇಕ ರೀತಿಯ ಬೆದರಿಕೆ ಪತ್ರಗಳು ಬಂದಿದ್ದವು. ವ್ಯವಸ್ಥೆಯನ್ನು ಪ್ರಶ್ನಿಸುತ್ತೇವೆ ಎಂದಾದಾಗ ಇಂಥವೆಲ್ಲ ಸಾಮಾನ್ಯ. ಅವನ್ನೆಲ್ಲ ಮೆಟ್ಟಿ ನಿಲ್ಲುವಂತಹ ಆತ್ಮವಿಶ್ವಾಸವನ್ನು ನಾವೂ ಬೆಳೆಸಿಕೊಳ್ಳಬೇಕಾಗುತ್ತದೆ.

ನ್ನನ್ನೆಲ್ಲಾ ಚಟುವಟಿಕೆಗಳಲ್ಲಿ ನನ್ನ ಜೊತೆ ಇರುವ ಕುಟುಂಬದ ಎಲ್ಲ ಸದಸ್ಯರಿಗೂ, ಸ್ನೇಹಿತರಿಗೂ ಈ ಸಂದರ್ಭದಲ್ಲಿ ಕೃತಜ್ಞತೆಗಳು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಭಾರತಿ ಹೆಗಡೆ

contributor

Similar News