ನೀನೊಂದು ಜಟಿಲ ಕಗ್ಗಂಟು

Update: 2024-02-16 06:43 GMT

‘ಶಹೆನ್ ಶಾಹೆ ಖವ್ವಾಲಿ’ ಅಥವಾ ‘ಸುಲ್ತಾನೆ ಖವ್ವಾಲಿ’ ಎಂದೇ ಖ್ಯಾತರಾಗಿರುವ ನುಸ್ರತ್ ಫತೇಹ್ ಅಲಿ ಖಾನ್ (1948-1997) ಈ ಲೋಕದಿಂದ ತೆರಳಿ 26 ವರ್ಷಗಳು ಕಳೆದವು. ಆದರೆ ಅವರ ಗಗನಚುಂಬಿ ಧ್ವನಿ ಈಗಲೂ ಸಂಗೀತಲೋಕದಲ್ಲಿ ಮಾರ್ದನಿಸುತ್ತಲೇ ಇದೆ. ಗಾಯನವನ್ನು ಸದಾ ಸೌಮ್ಯ ಧ್ವನಿಯಲ್ಲೇ ನಿರೀಕ್ಷಿಸುವವರು ಮತ್ತು ಮೃದುವಾದ ಧ್ವನಿಯ ಹಾಡುಗಳಿಗೆ ಮಾತ್ರ ಒಗ್ಗಿಹೋದವರು ನುಸ್ರತ್‌ರ ಸಿಡಿಲಬ್ಬರದ ಹಾಡುಗಳನ್ನು ಕೇಳಿದರೆ ಬೆಚ್ಚಿ ಬೀಳುವುದು ಖಚಿತ. ಏಕೆಂದರೆ ಅವರ ಹಾಡುಗಳ ಹೆಚ್ಚಿನ ಭಾಗ ಅಬ್ಬರ, ಆರ್ಭಟಗಳ ರೂಪದಲ್ಲಿರುತ್ತದೆ. ಹಾಡಿಗೆ ಆರ್ಭಟವೆಂಬ ಒಂದು ಆಯಾಮವೂ ಇದೆ ಎಂಬುದನ್ನು ನುಸ್ರತ್‌ಗೆ ಮುಂಚೆ ಹಲವು ಖವ್ವಾಲಿ ಕಲಾವಿದರು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಆದರೆ ಆರ್ಭಟ ಸ್ವರೂಪದ ಹಾಡಿಗೆ ಪೂರ್ವ ಪಶ್ಚಿಮಗಳ ಸಂಗೀತಾಭಿಮಾನಿಗಳಿಂದ ಮನ್ನಣೆ ಕೊಡಿಸಿದ ಶ್ರೇಯ ನುಸ್ರತ್ ಫತೇಹ್ ಅಲಿ ಖಾನ್‌ರಿಗೆ ಸಲ್ಲುತ್ತದೆ. ಉಪಭೂಖಂಡದಲ್ಲಂತೂ ನುಸ್ರತ್‌ರಿಗೆ ಕೋಟ್ಯಂತರ ಅಭಿಮಾನಿಗಳು ಮೊದಲೇ ಇದ್ದರು. ಅವರ ಬದುಕಿನ ಕೊನೆಯ ದಶಕದಲ್ಲಿ ಯುರೋಪಿಯನ್ ದೇಶಗಳಲ್ಲಿ ಮತ್ತು ಅಮೆರಿಕದಲ್ಲಿ ಅವರ ‘ಲೈವ್ ಕನ್ಸರ್ಟ್’ಗಳು ನಡೆದಾಗ ಅಲ್ಲೂ ಭಾರೀ ಸಂಖ್ಯೆಯಲ್ಲಿ ಶ್ರೋತೃಗಳು ಅವರ ಆರ್ಭಟದ ಅಭಿಮಾನಿಗಳಾದರು.

ಸಂಗೀತ ಪರಂಪರೆಯಲ್ಲಿ 600 ವರ್ಷಗಳ ದೀರ್ಘ ಚರಿತ್ರೆ ಇರುವ ‘ಪಾಟಿಯಾಲಾ ಘರಾನಾ’ ವಂಶಸ್ಥರಾಗಿದ್ದ ನುಸ್ರತ್ ಸಾಹೇಬರು ಹಾಡಲು ಆರಿಸಿಕೊಂಡ ಗಾನಗಳ ವೈವಿಧ್ಯ ಗಮನಾರ್ಹವಾಗಿತ್ತು. ಕೇವಲ ಮನರಂಜನೆ ಒದಗಿಸುವ ಕಮರ್ಷಿಯಲ್ ಗಾನಗಳು, ಪ್ರೇಮಗೀತೆಗಳು, ಭಗ್ನ ಪ್ರೇಮಿಯ ನೋವನ್ನು ವರ್ಣಿಸುವ ಕವಿತೆಗಳು, ಆಧ್ಯಾತ್ಮಿಕ ಸ್ಫೂರ್ತಿ ತುಂಬುವ ಸೂಫಿ ಹಾಡುಗಳು, ಮಹಾಪುರುಷರ ಮಹಿಮೆ ವರ್ಣಿಸುವ ಕವಿತೆಗಳು, ಪ್ರವಾದಿ ಮುಹಮ್ಮದ್ (ಸ)ರನ್ನು ಪರಿಚಯಿಸುವ ‘ನಅತ್’ಗಳು, ಇಮಾಮ್ ಹುಸೈನ್(ರ) ಮತ್ತವರ ಕುಟುಂಬದ ತ್ಯಾಗದ ವೃತ್ತಾಂತ -ಹೀಗೆ ತೀರಾ ಭಿನ್ನ ವಿಷಯಗಳನ್ನು ಆವರಿಸುವ ರಚನೆಗಳನ್ನು ಅವರು ಆಯ್ದುಕೊಳ್ಳುತ್ತಿದ್ದರು. ಖವ್ವಾಲಿ ಕಾರ್ಯಕ್ರಮಗಳಲ್ಲಿ ನುಸ್ರತ್ ಹಾಡತೊಡಗಿದರೆಂದರೆ ಅವರ ನೇರ ಶ್ರೋತೃಗಳು ಸಂಪೂರ್ಣ ಮಂತ್ರಮುಗ್ಧರಾಗಿ ಮೈಮರೆಯುತ್ತಿದ್ದರು. ಅವರು ಹಾಡಿದ ಹಲವು ಹಾಡುಗಳು ಜಾಗತಿಕ ಮಟ್ಟದಲ್ಲಿ ಅಪಾರ ಜನಪ್ರಿಯತೆ ಪಡೆದಿವೆ. ಆ ಪೈಕಿ ಅತ್ಯಂತ ಜನಪ್ರಿಯ ಎನ್ನಬಹುದಾದ ಹಾಡುಗಳ ಸಾಲಲ್ಲಿದೆ - ‘ತುಮ್ ಎಕ್ ಗೋರಖ್ ಧಂದಾ ಹೋ’. ಸುಮಾರು 30 ನಿಮಿಷಗಳಷ್ಟು ದೀರ್ಘವಾಗಿರುವ ಈ ಹಾಡನ್ನು ಕೇವಲ ಯೂಟ್ಯೂಬ್ ನಲ್ಲೇ ಹಲವು ಕೋಟಿ ಮಂದಿ ವೀಕ್ಷಿಸಿದ್ದಾರೆ.

‘ತುಮ್ ಎಕ್ ಗೋರಖ್ ಧಂದಾ ಹೋ’ ಹಾಡನ್ನು ರಚಿಸಿದವರು ಮುಹಮ್ಮದ್ ಸಿದ್ದೀಕ್ (1947-2010). ಆದರೆ ಅವರು ‘ನಾಜ್ಹ್ ಖಯಾಲ್ವಿ’ ಎಂಬ ತಮ್ಮ ಕಾವ್ಯನಾಮದಿಂದಲೇ ಹೆಚ್ಚು ಪರಿಚಿತರು. ಈ ಹಾಡಿನ ಧಾಟಿ ಅಲ್ಲಾಮಾ ಸರ್ ಮುಹಮ್ಮದ್ ಇಕ್ಬಾಲ್ ಅವರ ಜಗದ್ವಿಖ್ಯಾತ ‘ಶಿಕ್ವಾ’ ಹಾಡಿಗೆ ಹೋಲುತ್ತದೆ. ವಿವಿಧ ಸನ್ನಿವೇಶಗಳಲ್ಲಿ ಒಬ್ಬ ಭಾವುಕ ದೇವಭಕ್ತ, ಸತ್ಯಶೋಧಕನ ಮನದಲ್ಲಿ ಮೂಡುವ ಆವೇಶ, ಸಂದೇಹ, ಆಕ್ರೋಶ, ಗೊಂದಲ, ಹತಾಶೆ ಇತ್ಯಾದಿ ವಿಭಿನ್ನ ಭಾವನೆಗಳಿಗೆ ಇಲ್ಲಿ ಅಭಿವ್ಯಕ್ತಿ ನೀಡಲಾಗಿದೆ. ದೇವರ ಸ್ವರೂಪ ಮತ್ತು ಅವನ ಕ್ರಮಗಳ ಕುರಿತು ಮುಗ್ಧಮನದಲ್ಲಿ ಮೂಡುವ ಪ್ರಶ್ನೆಗಳ ಸರಮಾಲೆಗೆ ಇಲ್ಲಿ ಧ್ವನಿ ಒದಗಿಸಲಾಗಿದೆ. ತೀಕ್ಷ್ಣ ಪ್ರಶ್ನೆಗಳ ಈ ದೀರ್ಘ ಸರಣಿ ಅಂತಿಮವಾಗಿ ದೇವರ ಮಹಿಮೆ, ಅವನ ಅನನ್ಯತೆ ಮತ್ತು ಅನುಪಮ ಸ್ವರೂಪವನ್ನು ಅಂಗೀಕರಿಸುವುದರೊಂದಿಗೆ ಕೊನೆಗೊಳ್ಳುತ್ತದೆ. ಪ್ರಸ್ತುತ ಹಾಡಿನಲ್ಲಿರುವ, ಸವಿಸ್ತಾರ ವ್ಯಾಖ್ಯಾನವಿಲ್ಲದೆ ಅರ್ಥವಾಗಲಾರದ ಕೆಲವು ಸಂಕೀರ್ಣ ಭಾಗಗಳನ್ನು ಬಿಟ್ಟು ಉಳಿದ ಭಾಗಗಳ ಸರಳ ಸಾರಾನುವಾದ ಇಲ್ಲಿದೆ:

ನಿನ್ನನರಸುತ್ತಾ ಇಲ್ಲೆಲ್ಲಾ ತಿರುಗಾಡಿದೆ, ಅಲ್ಲೆಲ್ಲಾ ಅಲೆದಾಡಿದೆ

ನಿನ್ನ ದರ್ಶನ ಬಯಸಿ ಎಲ್ಲೆಲ್ಲಿ ತಲುಪಿಲ್ಲ ನಾನು!

ಬಡಪಾಯಿಗಳು ಸುಸ್ತಾದರು, ಅಳಿದು ಹೋದರು, ಆದರೆ

ನಿನ್ನ ಸುಳಿವು ಮಾತ್ರ ಸಿಗಲೇ ಇಲ್ಲ ಯಾರಿಗೂ

ನೀನು, ನೀನೊಂದು ಜಟಿಲ ಕಗ್ಗಂಟು.

ಎಲ್ಲೂ ನೀನಿಲ್ಲ ಎಂಬುದೂ ನಿಜ,

ಎಲ್ಲೆಲ್ಲೂ ನೀನೇ ನೀನೆಂಬುದೂ ನಿಜ

ಕಣಕಣದಲೂ ಮೆರೆದಿದೆ ನಿನ್ನ ಭವ್ಯ ಮಹಿಮೆ,

ಹುಡುಕ ಹೊರಟವರಿಗೆ ಮಾತ್ರ ಸಿಗಲೊಲ್ಲೆ ನೀನು

ನೀನು, ನೀನೊಂದು ಜಟಿಲ ಕಗ್ಗಂಟು.

ಬುದ್ಧಿ ದಣಿದಿದೆ, ನೀನೇನು, ಹೇಗಿರುವೆ ಎಂಬ ಚಿಂತೆಯಲಿ

ಮಂದಿರ-ಮಸೀದಿಗಳನು ಜಾಲಾಡಿದೆ, ಸಿಗಲಿಲ್ಲ ನೀನು,

ಮನದೊಳಗೆ ಮಾತ್ರ ಮೆರೆಯುತ್ತಾ ಕಂಡುಬಂದೆ ನೀನು

ನೀನಲ್ಲದೆ ಅನ್ಯರಿಲ್ಲವಾದರೆ ಮತ್ತೇಕೆ ಈ ತೆರೆಮರೆ?

ನೀನು, ನೀನೊಂದು ಜಟಿಲ ಕಗ್ಗಂಟು.

ನಿನ್ನ ಪ್ರೀತಿಯಲಿ ಕಳೆದುಹೋದರು ಹಲವರು

ಒಂದಿಷ್ಟು ಸುಳಿವನು ಅವರಿಗೆ ಮಾತ್ರ ನೀಡಿರುವೆ ನೀನು,

ಭಗ್ನ ಮನಗಳಲಿ ಮಾತ್ರ ನೆಲೆಸುವುದು ಹೇಗೆ?

ವಿಗ್ರಹಾಲಯಗಳಲಿ, ಕಅಬಾದಲಿ ಕಾಣಸಿಗದ ನೀನು?

ನೀನು, ನೀನೊಂದು ಜಟಿಲ ಕಗ್ಗಂಟು.

ಗ್ರಹಿಕೆ ಮೀರಿ ಎಲ್ಲೋ ಅಡಗಿರುವೆ ‘ನಾಸ್ತಿ’ಯಾಗಿ ನೀನು

‘ಅಸ್ತಿ’ಯಾಗಿ ಕೆಲವೆಡೆ ಕಾಣಿಸಿರುವೆ ನೀನು

ನಿರಾಕರಣೆಯ ಆರೋಪವೇಕೆ, ಇಲ್ಲವಾಗಿದ್ದರೆ ನೀನು?

ನಿರಾಕರಣೆಯೂ ನಿನ್ನ ಅಸ್ತಿತ್ವದ ಸುಳಿವಲ್ಲವೇನು?

ನೀನು, ನೀನೊಂದು ಜಟಿಲ ಕಗ್ಗಂಟು.

‘ನಾನು’ ಎಂದು ನಾನು ಗುರುತಿಸುವವನು,

ನೀನಲ್ಲವಾದರೆ, ಮತ್ತಾರು ಅವನು?

ಊಹೆಗೆ ನಿಲುಕದವನು ನೀನಾಗಿದ್ದರೆ,

ದೇವರು ನೀನೆಂದು ಹೇಗರಿತೆ ನಾನು?

ನೀನು, ನೀನೊಂದು ಜಟಿಲ ಕಗ್ಗಂಟು.

ಯಾರು ನೀನು? ವಿಸ್ಮಿತನಾಗಿರುವೆ ನಾನು,

ಎಂಥವನು ನೀನು? ಗೊಂದಲದಲಿರುವೆ ನಾನು

ಸಿಕ್ಕರೆ ಕೈಗೆ, ಕೇವಲ ವಿಗ್ರಹ ನೀನು

ಕೈಗೆಟುಕದಿದ್ದರೆ ಸಾಕ್ಷಾತ್ ದೇವರು ನೀನು

ನೀನು, ನೀನೊಂದು ಜಟಿಲ ಕಗ್ಗಂಟು.

ಗ್ರಹಿಕೆಗೆ ಸಿಕ್ಕವನು ದೇವರಲ್ಲವೆನ್ನುವರು

ಅರ್ಥವೇ ಆಗದವನು ಅದೆಂತಹ ದೇವರು ನೀನು?

ಸಂವಾದದಲ್ಲಿ ಸಿಕ್ಕಿಲ್ಲ ದಾರ್ಶನಿಕನಿಗೆ ನೀನು

ಗಂಟು ಬಿಡಿಸುವುದೆಂತು? ದಾರದ ಕೊನೆ ಬಚ್ಚಿಟ್ಟಿರುವೆ ನೀನು

ನೀನು, ನೀನೊಂದು ಜಟಿಲ ಕಗ್ಗಂಟು.

ಅಡಗಿರುವುದೂ ಇಲ್ಲ, ಪ್ರಕಟನಾಗುವುದೂ ಇಲ್ಲ

ಮೆರೆದು ವೈಭವ, ಮರೆಯಾಗುವವನು ನೀನು

ಅಳಿಸುತ್ತಿಲ್ಲ, ಮಂದಿರ-ಮಸೀದಿಗಳ ಜಗಳವನು

ಸತ್ಯಸಂಗತಿ ಏನು? ತಿಳಿಸುತ್ತಿಲ್ಲ ನೀನು,

ನೀನು, ನೀನೊಂದು ಜಟಿಲ ಕಗ್ಗಂಟು.

ಮನವು ನಿನ್ನ ಮನೆಯಾಗುವುದು ಹೇಗೆ? ದಂಗಾಗಿರುವೆ ನಾನು

ಸರ್ವಲೋಕಗಳ ವ್ಯಾಪ್ತಿ ಮೀರಿದವನಲ್ಲವೇ ನೀನು?

ಏತಕ್ಕೆ ಈ ಮಂದಿರ, ಮಸೀದಿ, ಚರ್ಚುಗಳೆಲ್ಲಾ?

ಎಲ್ಲೂ ಕಾಣಸಿಗದ ಸರ್ವವ್ಯಾಪಿಯಲ್ಲವೇ ನೀನು?

ನೀನು, ನೀನೊಂದು ಜಟಿಲ ಕಗ್ಗಂಟು.

ನಿತ್ಯ ಹಲವು ಹೊಸ ಚಿತ್ರಗಳನ್ನು ಬಿಡಿಸಿ, ಅಳಿಸುವೆ

ಏನನ್ನು ಬಯಸಿದ ತಪ್ಪಿಗಾಗಿ ದಂಡಿಸುತ್ತಿರುವೆ ನೀನು?

ಕೆಲವೆಡೆ ಯಕಶ್ಚಿತ್ ಕಣಗಳನು ವಜ್ರದ ಗಣಿಗಳಾಗಿಸುವೆ

ಕೆಲವೊಮ್ಮೆ ವಜ್ರವನು ಮಣ್ಣುಗೂಡಿಸಿ ಬಿಡುವೆ ನೀನು

ನೀನು, ನೀನೊಂದು ಜಟಿಲ ಕಗ್ಗಂಟು.

ಜೀವ ನೀಡಿದ್ದರು ಎಷ್ಟೋ ಶವಗಳಿಗೆ ಅವರು

ಆ ಮಸೀಹರನ್ನೇ ಶಿಲುಬೆಯ ಅಲಂಕಾರವಾಗಿಸಿದೆ ನೀನು(1)

ನಿನ್ನ ದರ್ಶನಕೆ ಕಾತರಿಸಿದ್ದರೊಬ್ಬರು,‘ತೂರ್’ ಬೆಟ್ಟದ ತಪ್ಪಲಲಿ(2)

ಅಷ್ಟಕ್ಕೇ, ಮಿಂಚು ಹರಿಸಿ ’ತೂರ್’ ಅನ್ನೇ ಸುಟ್ಟು ಬಿಟ್ಟೆ ನೀನು

ನೀನು, ನೀನೊಂದು ಜಟಿಲ ಕಗ್ಗಂಟು.

ನಿನ್ನ ಆಪ್ತ ಖಲೀಲ್‌ರನ್ನೇ ನಮ್ರೂದನ ಅಗ್ನಿಕುಂಡಕ್ಕೆ ಬೀಳಿಸಿದೆ(3)

ಮತ್ತೆ ಅದೇ ಅಗ್ನಿಕುಂಡವನು ರಮ್ಯ ಹೂದೋಟವಾಗಿಸಿದೆ ನೀನು

ಕನಾನ್‌ನ ಚಂದಿರನನ್ನು ಪಾಳುಬಾವಿಗೆ ಸೇರಿಸಿದೆ(4)

ಯಾಕೂಬರ ಕಣ್ಣುಗಳ ದೀಪ ಆರಿಸಿದೆ ನೀನು(5)

ನೀನು, ನೀನೊಂದು ಜಟಿಲ ಕಗ್ಗಂಟು.

ಈಜಿಪ್ಟಿನ ಪೇಟೆಯಲ್ಲಿ ಮಾರುವ ಸರಕಾಗಿಸಿದೆ ಯೂಸುಫರನ್ನು(6)

ಕೊನೆಗೆ ಅವರನ್ನೇ ಈಜಿಪ್ಟಿನ ದೊರೆಯಾಗಿಸಿದೆ ನೀನು

ನೀನು, ನೀನೊಂದು ಜಟಿಲ ಕಗ್ಗಂಟು.

ಭಕ್ತಿಯ ಉನ್ಮಾದದಲಿ ಮೈಮರೆಯುವ ಮಜಲಲ್ಲಿ ಇದ್ದರೊಬ್ಬರು,

ಅವರ ಮನದೊಳಗಿಂದ ‘ನಾನೇ ಸತ್ಯ’ ಎಂಬ ಕರೆ ಮೊಳಗಿಸಿದೆ ನೀನು

ಮತ್ತೆ ನೀನೇ, ಧರ್ಮದ್ರೋಹಿ ಎಂಬ ಬಿರುದನ್ನು ಕೊಡಿಸಿದೆ ಅವರಿಗೆ

ಕೊನೆಗೆ ಊರವರ ಕೈಯಲ್ಲಿ ಮನ್ಸೂರರನ್ನು ಗಲ್ಲಿಗೇರಿಸಿದೆ ನೀನು(7)

ನೀನು, ನೀನೊಂದು ಜಟಿಲ ಕಗ್ಗಂಟು.

ತನ್ನದೇ ಅಸ್ತಿತ್ವ ಮರೆತು ಬಿಡುತ್ತಾನೆ, ಒಂದು ದಿನ ನಿನ್ನ ಭಕ್ತ

ಆ ಮಟ್ಟಿಗೆ ನಿನ್ನ ದರ್ಶನದ ಹುಚ್ಚು ಬಿತ್ತುವೆ ಅವನಲ್ಲಿ ನೀನು

ನಿನ್ನನು ಅರಸುತ್ತಾ ಹೊರಟಿದ್ದನೊಬ್ಬ ರಾಂಝಾ(8)

ಝಾಂಗ್‌ನ ಚಿತೆಯಲ್ಲಿ ಅವನನ್ನು ಭಸ್ಮಗೊಳಿಸಿದೆ ನೀನು.

ನೀನು, ನೀನೊಂದು ಜಟಿಲ ಕಗ್ಗಂಟು.

ನಿನ್ನನು ಹುಡುಕುತ್ತಾ ಅಲೆಮಾರಿಯಾಗಿದ್ದನೊಬ್ಬ ಖೈಸ್(9)

ಅವನನ್ನು ಲೈಲಾಳ ‘ಮಜನೂ’ ಆಗಿಸಿ ಬಿಟ್ಟೆ ನೀನು

ಸಸ್ಸೀಯ ಮನದಲ್ಲಿ ನಿನ್ನ ದೀಪ ಬೆಳಗಿದಾಗ(10)

ಮರುಭೂಮಿಯ ತಾಪದಲ್ಲಿ ಅವಳನ್ನು ಬೇಯಿಸಿದೆ ನೀನು

ನೀನು, ನೀನೊಂದು ಜಟಿಲ ಕಗ್ಗಂಟು.

ಮಹಿವಾಲ್‌ನಲ್ಲಿ ನಿನ್ನನ್ನು ಕಂಡಿದ್ದಳು ಸೋಹ್ನಿ (11)

ಅವಳನ್ನು ನಡುನದಿಯ ಅಲೆಗಳಲಿ ಮುಳುಗಿಸಿದೆ ನೀನು

ಇಷ್ಟವಾದರೆ ನಿನ್ನ ಮಿತ್ರನನು, ವಿಶ್ವಪೀಠದ ಬಳಿಗೆ ಕರೆಸಿ

ಬ್ರಹ್ಮಾಂಡದ ಪ್ರವಾಸ ಮಾಡಿಸುವೆ ಒಂದೇ ಇರುಳಲ್ಲಿ ನೀನು(12)

ನೀನು, ನೀನೊಂದು ಜಟಿಲ ಕಗ್ಗಂಟು.

ಚಕಿತವಾಗಿದೆ ಮನ, ದಿಕ್ಕಿಲ್ಲದಾಗಿದೆ

ಇದೆಂತಹ ಅಸ್ಪಷ್ಟ ಚಿತ್ರ ಬಿಡಿಸಿರುವೆ ನೀನು,

ಸಮಾಚಾರವೇನಿದು? ತೋಚುತ್ತಿಲ್ಲ ಏನೂ

ಆದಿಯಿಂದಲೇ ಆಡುತಿರುವೆ ಇದಾವ ಆಟ ನೀನು?

ನೀನು, ನೀನೊಂದು ಜಟಿಲ ಕಗ್ಗಂಟು.

ಶರೀರವೆಂಬ ಪಂಜರದಲಿ ಕಟ್ಟಿಟ್ಟಿರುವೆ ಆತ್ಮವನು

ಕಾವಲಿಗೆ ಮರಣವೆಂಬ ಭಟನನ್ನು ಕೂರಿಸಿರುವೆ ನೀನು

ಬಿಟ್ಟಿರುವೆ ಎಲ್ಲೆಡೆ ಹಾರಾಡಲು ಸಾಧನೆ ಎಂಬ ಪಕ್ಷಿಯನು

ವಿಧಿ ಎಂಬ ಜಾಲವನೂ ಎಲ್ಲೆಡೆ ಹರಡಿಟ್ಟಿರುವೆ ನೀನು

ನೀನು, ನೀನೊಂದು ಜಟಿಲ ಕಗ್ಗಂಟು.

ಸಹಸ್ರಮಾನಗಳ ಕಾಲ ಬ್ರಹ್ಮಾಂಡವನು ಶೃಂಗರಿಸಿ,

ಅದರ ಸರ್ವನಾಶಕ್ಕೂ ಯೋಜನೆ ರೂಪಿಸಿರುವೆ ನೀನು

ಅನಿಕೇತನ ನೀನೆಂದು ನೀನೇ ಹೇಳಿಕೊಂಡಿರುವೆ

‘ಜೀವಕ್ಕಿಂತ ನಿಕಟನಿದ್ದೇನೆ’ ಎಂದೂ ಸಾರಿರುವೆ ನೀನು(13)

ನೀನು, ನೀನೊಂದು ಜಟಿಲ ಕಗ್ಗಂಟು.

ಈ ಕೆಡುಕು, ಆ ಒಳಿತು, ಈ ಜೀವ, ಆ ಸ್ವರ್ಗ

ಈ ಸತತ ಪಲ್ಲಟದಲ್ಲೇನು ಅಡಗಿದೆ, ಹೇಳು ನೀನು

ತಪ್ಪು ಆದಮರದ್ದು, ಶಿಕ್ಷೆ ಪುತ್ರರಿಗೆ, (14)

ಏನನ್ನು ನ್ಯಾಯದ ಮಾಪಕವಾಗಿಸಿರುವೆ ನೀನು?

ನೀನು, ನೀನೊಂದು ಜಟಿಲ ಕಗ್ಗಂಟು.

ನಿನ್ನ ರಾಯಭಾರಿಯಾಗಿಸಿ ಮಾನವನನು ಭುವಿಯಲಿ(15)

ಅದೆಂತಹ ನಾಟಕ ರಚಿಸಿರುವೆ ಜಗದಲಿ ನೀನು?

ನಿನ್ನ ಗುರುತಿಸಲೆಂದು ಎಲ್ಲರನು ಸೃಷ್ಟಿಸಿದೆ,

ಮತ್ತೆ ಎಲ್ಲರ ದೃಷ್ಟಿಯಿಂದ ಅವಿತಿರುವೆಯೇಕೆ ನೀನು?

ನೀನು, ನೀನೊಂದು ಜಟಿಲ ಕಗ್ಗಂಟು.

ಈ ಮಸೀದಿಗಳು, ಮಂದಿರಗಳು, ಮಧುಶಾಲೆಗಳು

ಕೆಲವರಿಗೆ ಇಲ್ಲಿ, ಕೆಲವರಿಗೆ ಅಲ್ಲಿ ಕಾಣಿಸುವೆ ನೀನು

ನಿನ್ನದೇ ನೆಚ್ಚಿನ ನೆಲೆಗಳು ಎಲ್ಲವೂ,

ನಿರ್ದಿಷ್ಟ ನಿವಾಸ ಬೇಡದವನು ನೀನು

ನೀನು, ನೀನೊಂದು ಜಟಿಲ ಕಗ್ಗಂಟು.

ನೀನೊಬ್ಬನೇ ಅನ್ನುವರು ಕೆಲವರು

ನೀನಿಲ್ಲವೆಂದು ಕೆಲವರು ದಿಟವಾಗಿರುವರು

ಕೆಲವರಿಗೆ ಇಲ್ಲಿ ನಂಬಿಕೆ, ಕೆಲವರಿಗೆ ಅಲ್ಲಿ ಶ್ರದ್ಧೆ

ನಿಜವೇನು? ಬಲ್ಲವನು, ಏಕಮಾತ್ರನು ನೀನು

ನೀನು, ನೀನೊಂದು ಜಟಿಲ ಕಗ್ಗಂಟು.

ಸೃಷ್ಟಿಯಲ್ಲೇ ನಿನ್ನ ಕಾಣುವ ತವಕ ಕೆಲವರಿಗೆ

ನೀನು ಸಂಪೂರ್ಣ ಭಿನ್ನ, ಅನನ್ಯ ಎನ್ನುವರು ಹಲವರು,

ಇಬ್ಬರೂ ನಿನ್ನ ಭಕ್ತಾಭಿಮಾನಿಗಳು

ಕೆಲವರು ಹೀಗೆಂದು ನಂಬುವರು, ಕೆಲವರು ಹಾಗಲ್ಲ ಎನ್ನುವರು

ನೀನು, ನೀನೊಂದು ಜಟಿಲ ಕಗ್ಗಂಟು.

ಅರಸುತ್ತಿರುವುದು ಎಲ್ಲರೂ ನಿನ್ನನೇ

ಶಿವಾಲಯದಲೂ ನೀನೇ, ಮಕ್ಕಾದಲೂ ನೀನೇ

ವಿಶ್ವ ಪೀಠದಲೂ ನೀನೇ, ಭುವಿಯಲೂ ನೀನೇ

ಮತ್ತೇಕೋ ಈ ರಾಮ ರಹೀಮರ ಕದನ?

ನೀನು, ನೀನೊಂದು ಜಟಿಲ ಕಗ್ಗಂಟು.

ಯಾರು ಎಲ್ಲಿಗೆ ತಲುಪಬಲ್ಲರೋ ಅವರಿಗಲ್ಲೇ ಸಿಗುವೆ ನೀನು

ಒಂದೊಂದು ರಂಗಿನಲೂ ಅನನ್ಯನು, ಅನುಪಮನು ನೀನು

ನೀನು, ನೀನೊಂದು ಜಟಿಲ ಕಗ್ಗಂಟು.

ಎಲ್ಲ ಕಂಪುಗಳಲಿ ನೀನು, ಎಲ್ಲ ಬಣ್ಣಗಳಲಿ ನೀನು,

ಎಲ್ಲೆಡೆಯೂ ನಿನ್ನದೇ ವೈಭವ, ಎಲ್ಲೆಲ್ಲೂ ನೀನೇ ನೀನು

ಯಾವೆತ್ತರದಲೂ ನೀನಲ್ಲದೆ ಅನ್ಯರಿಲ್ಲ, ಎಲ್ಲ ಶೋಧಗಳ ಗುರಿ ನೀನು,

ಭಾರೀ ಮನಮೋಹಕ ನೀನು, ತುಂಬಾ ಸುಂದರ ನೀನು,

ನೀನು, ನೀನೊಂದು ಜಟಿಲ ಕಗ್ಗಂಟು.

ದಿವ್ಯ ಪೀಠದ ತೇಜಸ್ಸು ನೀನು, ಈ ನೆಲದ ಮಾನ ನೀನು

ಸರ್ವಲೋಕಗಳು ಅರಸುವ ಧ್ಯೇಯ ನೀನು

ಸ್ವಚ್ಛವಾಗಿವೆ ಕಣ್ಣುಗಳು, ಅಶ್ರುಸ್ನಾನದ ಬಳಿಕ,

ಇನ್ನಾದರೂ ದಯಪಾಲಿಸು, ಒಂದು ಕ್ಷಿಪ್ರ ದರ್ಶನ

ನೀನು, ನೀನೊಂದು ಜಟಿಲ ಕಗ್ಗಂಟು.

ತೆರೆಮರೆಯಿಂದ ಸರಿದು ಕಣ್ಣುಗಳಿಗೆ ಕಾಣಿಸು,

ಘಳಿಗೆಯ ಮಿಲನ, ಕ್ಷಣಮಾತ್ರದ ಮಾತುಕತೆ ಸಾಕು

ನಾಜ್ಹ್ ಜಪಿಸುತಲಿರುವನು ಎಂದೆಂದೂ ಎಲ್ಲೆಲ್ಲೂ ಹೀಗೆಂದು: (16)

ಅವನೊಬ್ಬನೇ, ಅವನೊಬ್ಬನೇ, ಅವನೊಬ್ಬನೇ,

ಅನುಪಮನು, ಅನುಪಮನು, ಅನುಪಮನು

ನೀನು, ನೀನೊಂದು ಜಟಿಲ ಕಗ್ಗಂಟು.

ನೀನು, ನೀನೊಂದು ಜಟಿಲ ಕಗ್ಗಂಟು.

ಟಿಪ್ಪಣಿಗಳು:

(1) ಮಸೀಹ್ ಅಥವಾ ಏಸುಕ್ರಿಸ್ತರು, ಮಾನವಕುಲದ ಪಾಪಗಳಿಗೆ ಪರಿಹಾರವಾಗಿ ಶಿಲುಬೆಗೇರಿದ್ದರು ಎಂಬುದು ಕ್ರೈಸ್ತ ಮತಸ್ಥರ ನಂಬಿಕೆ. ಇಸ್ಲಾಮ್ ಧರ್ಮದಲ್ಲಿ ಈ ನಂಬಿಕೆಯನ್ನು ನಿರಾಕರಿಸಲಾಗಿದ್ದು, ಪ್ರತಿಯೊಬ್ಬರೂ ತಮ್ಮ ಕರ್ಮಗಳಿಗೆ ತಾವೇ ಹೊಣೆಗಾರರು ಎಂದು ಪ್ರತಿಪಾದಿಸಲಾಗಿದೆ.

(2) ಮೂಸಾ (ಅ) ಕ್ರಿ.ಪೂ. 13ನೇ ಶತಮಾನದ ವ್ಯಕ್ತಿ. ಕುರ್‌ಆನ್‌ನಲ್ಲಿ ಅವರ ಸವಿಸ್ತಾರ ಪ್ರಸ್ತಾಪವಿದೆ. ಅವರು ದೇವದೂತರಾಗಿದ್ದರು ಮತ್ತು ಬನೀ ಇಸ್ರಾಈಲ್ ಜನಾಂಗದ ವಿಮೋಚಕರಾಗಿದ್ದರೆಂದು ಯಹೂದಿ, ಕ್ರೈಸ್ತ ಮತ್ತು ಮುಸ್ಲಿಮ್ ಸಮಾಜದವರು ನಂಬುತ್ತಾರೆ.

ಈಜಿಪ್ಟ್‌ನ ಅತ್ತೂರ್ ಅಥವಾ ಸಿನಾಯ್ ಬೆಟ್ಟದ ಬಳಿ ಅವರಿಗೆ ಪ್ರಥಮ ದೇವವಾಣಿ ಪ್ರಾಪ್ತವಾಗಿತ್ತೆಂಬುದು ಅವರ ಅನುಯಾಯಿಗಳ ನಂಬಿಕೆ.

(3) ಖಲೀಲ್ ಎಂಬುದು ಸುಮಾರು ಕ್ರಿ.ಪೂ 20ನೇ ಶತಮಾನದಲ್ಲಿ ಬದುಕಿದ್ದ ಇಬ್ರಾಹೀಮ್ (ಅ) ಅವರ ಬಿರುದು. ಇಬ್ರಾಹೀಮ್ ಅಥವಾ ಅಬ್ರಹಾಂರನ್ನು ಯಹೂದಿ, ಕ್ರೈಸ್ತ ಮತ್ತು ಇಸ್ಲಾಮ್ ಧರ್ಮ ಎಂಬ ಮೂರು ಸೆಮೆಟಿಕ್ ಧರ್ಮಗಳ ಪಿತಾಮಹನೆಂದು ಗುರುತಿಸಲಾಗುತ್ತದೆ. ಅವರು ತಮ್ಮ ಕಾಲದ ದೊರೆ ನಂರೂದ್ (ಅಥವಾ ನಿಮ್ರೋದ್)ನ ವಿರುದ್ಧ ಬಂಡೆದ್ದು ಅವನೆದುರು ಏಕದೇವತ್ವವನ್ನು ಪ್ರತಿಪಾದಿಸಿದ್ದರು. ಇದಕ್ಕೆ ಶಿಕ್ಷೆಯಾಗಿ ನಂರೂದನು ಅವರನ್ನು ಅಗ್ನಿಕುಂಡಕ್ಕೆ ಎಸೆದಿದ್ದನು. ಕುರ್‌ಆನ್‌ನ ಪ್ರಕಾರ, ದೇವರು ಆ ಅಗ್ನಿಕುಂಡವನ್ನೇ ಅವರ ಪಾಲಿಗೆ ಸುಂದರ ಹೂದೋಟವಾಗಿ ಪರಿವರ್ತಿಸಿದ್ದನು.

(4) ಪ್ರವಾದಿ ಯೂಸುಫ್ ತಮ್ಮ ಸೌಂದರ್ಯಕ್ಕಾಗಿ ಪ್ರಖ್ಯಾತರಾಗಿದ್ದರು. ಅವರನ್ನು ಕನ್‌ಆನ್‌ನ ಚಂದ್ರ ಎಂದು ವರ್ಣಿಸಲಾಗುತ್ತದೆ. ಕುರ್ ಆನ್ ಪ್ರಕಾರ, ಅವರ ಬಾಲ್ಯದಲ್ಲಿ ಅವರ ಸಹೋದರರು, ಅಸೂಯೆಯಿಂದ ಅವರನ್ನು ಒಂದು ಪಾಳು ಬಾವಿಗೆ ಎಸೆದಿದ್ದರು.

(5) ಯೂಸುಫ್ ಅವರ ತಂದೆಯ ಹೆಸರು ಯಾಕೂಬ್. ಯೂಸುಫ್ ಕಣ್ಮರೆಯಾದಾಗ ಯಾಕೂಬರು ತೀವ್ರ ದುಃಖಿತರಾಗಿದ್ದರು. ಹಲವು ವರ್ಷಗಳ ಕಾಲ ಯೂಸುಫ್‌ರನ್ನು ಸ್ಮರಿಸಿ ಕಣ್ಣೀರು ಸುರಿಸುತ್ತಾ ಕ್ರಮೇಣ ಅವರು ತಮ್ಮ ದೃಷ್ಟಿಯನ್ನು ಕಳೆದುಕೊಂಡಿದ್ದರು.

(6) ಪ್ರಯಾಣಿಕರ ತಂಡವೊಂದು ಪಾಳುಬಾವಿಯಲ್ಲಿ ಬಿದ್ದಿದ್ದ ಬಾಲಕ ಯೂಸುಫ್‌ರನ್ನು ಅಲ್ಲಿಂದ ಹೊರತೆಗೆದು ಈಜಿಪ್ಟ್‌ನ ಪೇಟೆಯಲ್ಲಿ ಅವರನ್ನು ಮಾರಿದ್ದರು.

(7) ಮನ್ಸೂರ್ ಹಲ್ಲಾಜ್ (ಕ್ರಿ.ಶ 858-913) ಬಾಗ್ದಾದ್ ನ ಒಬ್ಬ ಸೂಫಿ ಚಿಂತಕರಾಗಿದ್ದರು. ಬಾಲ್ಯದಿಂದಲೇ ತಮ್ಮ ಹಿರಿಯರೊಡನೆ ಚಿತ್ರ ವಿಚಿತ್ರ ಪ್ರಶ್ನೆಗಳನ್ನು ಕೇಳಿ ವಿವಾದಕ್ಕೊಳಗಾಗಿದ್ದರು. ಅವರ ನಂಬಿಕೆಗಳು ಅದ್ವೈತಕ್ಕೆ ಹೋಲುತ್ತಿದ್ದವು. ಅವರು ‘ಅನಲ್ ಹಕ್’ (ನಾನೇ ಸತ್ಯ) ಎಂಬ ಘೋಷಣೆ ಮೊಳಗಿಸಿದಾಗ ಜನರು ಅದನ್ನು ತಪ್ಪಾಗಿ ಗ್ರಹಿಸಿ, ನಾನೇ ದೇವರೆಂದು ಮನ್ಸೂರ್ ವಾದಿಸುತ್ತಿದ್ದಾರೆ ಎಂದು ಆರೋಪಿಸಿದರು. ನಿಜವಾಗಿ ಈ ಹಿಂದೆ ‘‘ನಾನೇ ನಿಮ್ಮ ಅತಿದೊಡ್ಡ ದೇವರು’’ ಎಂದು ಈಜಿಪ್ಟ್‌ನ ದೊರೆ ಫಿರೌನ್ ಘೋಷಿಸಿದ್ದ. ಆದರೆ ಅದು ಶುದ್ಧ ಅಹಂಕಾರದ ಘೋಷಣೆಯಾಗಿತ್ತು. ಇತ್ತ ಮನ್ಸೂರ್‌ರ ಘೋಷಣೆಯು, ನಾನು ಎಂಬ ಪ್ರತ್ಯೇಕ ಅಸ್ತಿತ್ವವೇ ಇಲ್ಲ, ದೇವರೇ ಆತ್ಮದ ಮೂಲ. ಆದ್ದರಿಂದ ಎಲ್ಲ ಆತ್ಮಗಳೂ ದೇವತ್ವದ ಅವಿಭಾಜ್ಯ ಭಾಗಗಳು ಎಂಬ ನಂಬಿಕೆಯ ಫಲಶ್ರುತಿಯಾಗಿತ್ತು. ಅವರ ಈ ನಂಬಿಕೆ ‘‘ಅಹಂ ಬ್ರಹ್ಮಾಸ್ಮಿ’’ ಎಂಬ ಮಹಾವಾಕ್ಯವನ್ನು ಹೋಲುತ್ತಿತ್ತು. ಆದರೆ ಅವರ ಕಾಲದ ದೊರೆ ಮತ್ತು ಕೆಲವು ವಿದ್ವಾಂಸರು ಮನ್ಸೂರ್‌ರನ್ನು ಧರ್ಮಧಿಕ್ಕಾರಿ ಎಂದು ಘೋಷಿಸಿ ಅವರಿಗೆ ಮರಣದಂಡನೆ ವಿಧಿಸಿದರು.

(8) ದುರಂತದಲ್ಲಿ ಕೊನೆಗೊಳ್ಳುವ 17ನೇ ಶತಮಾನದ, ಹೀರ್ ಮತ್ತು ರಾಂಝಾ ನಡುವಣ ಪ್ರೇಮಕಥೆ ಪಂಜಾಬಿಗಳ ನಡುವೆ ಬಹಳ ಜನಪ್ರಿಯ. ಶ್ರೀಮಂತ ಬುಡಕಟ್ಟೊಂದರ ಅಸಾಮಾನ್ಯ ಸುಂದರಿ ಹೀರ್ ಮತ್ತು ರೈತ ಕುಟುಂಬದ ಹುಡುಗ ರಾಂಝಾ ನಡುವೆ ಪ್ರೇಮಾಂಕುರವಾಗುತ್ತದೆ. ಹೀರ್ ಕುಟುಂಬ ಮತ್ತು ಸಮಾಜ ಇವರ ಪ್ರೇಮವನ್ನು ವಿರೋಧಿಸುತ್ತದೆ. ಇವರ ಮಿಲನವನ್ನು ತಡೆಯುತ್ತದೆ. ಭಗ್ನಹೃದಯಿಯಾದ ರಾಂಝಾ ಅಲೆಮಾರಿಯಾಗಿ ದಿಕ್ಕಿಲ್ಲದೆ ನಾಡೆಲ್ಲಾ ಅಲೆಯತೊಡಗುತ್ತಾನೆ. ಹಲವಾರು ವರ್ಷಗಳ ಅಲೆದಾಟದ ಬಳಿಕ ಆತ ಮತ್ತೆ ಹೀರ್‌ಳ ಊರನ್ನು ತಲುಪುತ್ತಾನೆ. ಅಲ್ಲಿ ಮತ್ತೆ ಅವರಿಬ್ಬರ ಮಿಲನವಾಗುತ್ತದೆನ್ನುವಷ್ಟರಲ್ಲಿ ಹೀರ್‌ಳ ಮಾವನೊಬ್ಬ ವಿಷವುಣಿಸಿ ಆಕೆಯನ್ನು ಕೊಲ್ಲುತ್ತಾನೆ. ರಾಂಝಾ ಅದೇ ವಿಷದ ಉಳಿದಭಾಗವನ್ನು ತಿಂದು ತಾನೂ ಸಾಯುತ್ತಾನೆ. ಇಬ್ಬರನ್ನೂ ಒಂದೇ ಚಿತೆಯಲ್ಲಿ ಸುಡಲಾಗುತ್ತದೆ.

(9) ಖೈಸ್ 7ನೇ ಶತಮಾನದ ಅರಬಿ ಸಾಹಿತ್ಯದಲ್ಲಿ ಮೂಡಿದ ಪ್ರಖ್ಯಾತ ಲೈಲಾ ಮಜನೂ ಪ್ರೇಮಕಥೆಯ ನಾಯಕ. ಈ ಕಥೆ ಬಹುಬೇಗನೆ ಏಶ್ಯದೆಲ್ಲೆಡೆ ಜನಪ್ರಿಯವಾಗಿಬಿಟ್ಟಿತು. ಖೈಸ್ ಮತ್ತು ಲೈಲಾ ಬಾಲ್ಯದಿಂದಲೇ ಸ್ನೇಹಿತರಾಗಿದ್ದು ಕ್ರಮೇಣ ಪರಸ್ಪರ ಗಾಢ ಪ್ರೇಮದಲ್ಲಿ ಮುಳುಗಿದವರು. ಅವರಿಬ್ಬರನ್ನು ಬಲವಂತವಾಗಿ ಪ್ರತ್ಯೇಕಿಸಲಾದಾಗ ಖೈಸ್ ಬದುಕಿನ ಬಗ್ಗೆ ನಿರಾಸಕ್ತಿ ತೋರತೊಡಗುತ್ತಾನೆ. ಜನರು ಅವನನ್ನು ಮಜನೂ ಅಥವಾ ಹುಚ್ಚನೆಂದು ಕರೆಯತೊಡಗುತ್ತಾರೆ. ಹಲವು ವರ್ಷ ಏಕಾಂತದಲ್ಲಿ ನರಳಿದ ಲೈಲಾ ವಿರಹವೇದನೆಯಲ್ಲೇ ಸಾಯುತ್ತಾಳೆ. ಆಕೆಯ ಸಾವಿನ ಸುದ್ದಿ ಅರಿತು ಮಜನೂ ಬಹುದೂರ ಪ್ರಯಾಣಿಸಿ ಆಕೆಯ ಗೋರಿಯ ಬಳಿಗೆ ತಲುಪುತ್ತಾನೆ ಮತ್ತು ಅಲ್ಲೇ ದುಃಖಿಸುತ್ತಾ ಪ್ರಾಣತ್ಯಾಗ ಮಾಡುತ್ತಾನೆ.

(10) ಸಸ್ಸೀ ಮತ್ತು ಪುನ್ನೂ ಪ್ರೇಮಕಥೆ 12ನೇ ಶತಮಾನದ ಸಿಂಧೀ ಜಾನಪದದ ಭಾಗವಾಗಿದೆ. ಬಲೂಚಿಸ್ತಾನದ ಕಡೆ ತುಂಬಾ ಜನಪ್ರಿಯವಾಗಿದೆ. ಜೊತೆಗಿದ್ದು ವಿವಾಹವಾಗಲಿದ್ದ ಸಸ್ಸೀ ಮತ್ತು ಪುನ್ನೂರನ್ನು ಕೆಲವರು ಮೋಸದಿಂದ ಪ್ರತ್ಯೇಕಿಸಿ ಪುನ್ನೂನನ್ನು ಅವನ ಊರಿಗೆ ಒಯ್ಯುತ್ತಾರೆ. ಅವನ ಹಾಗೂ ಸಸ್ಸೀಯ ಊರ ನಡುವೆ ಒಂದು ವಿಶಾಲ ಮರುಭೂಮಿಯಿದೆ. ಇತ್ತ ಸಸ್ಸೀ ‘‘ಪುನ್ನೂ ಪುನ್ನೂ’’ ಎಂದು ಕಿರುಚುತ್ತಾ ಬರಿಗಾಲಲ್ಲಿ ಮರುಭೂಮಿಯಲ್ಲಿ ಪುನ್ನೂನ ಊರೆಡೆಗೆ ಓಡತೊಡಗುತ್ತಾಳೆ. ಅತ್ತ ಪುನ್ನೂ ಸಸ್ಸೀ ಯನ್ನು ಕಾಣಲು ಅದೇ ಮರುಭೂಮಿಯಲ್ಲಿ ‘‘ಸಸ್ಸೀ ಸಸ್ಸೀ’’ ಎನ್ನುತ್ತಾ ಆಕೆಯ ಊರಿನೆಡೆಗೆ ಓಡತೊಡಗುತ್ತಾನೆ. ಕೊನೆಗೆ ಇಬ್ಬರೂ ಪರಸ್ಪರರನ್ನು ಅರಸುತ್ತಾ ಅದೇ ಮರುಭೂಮಿಯಲ್ಲಿ, ಒಬ್ಬರನ್ನೊಬ್ಬರು ಕಾಣುವ ಮುನ್ನವೇ ಜೀವ ಕಳೆದುಕೊಳ್ಳುತ್ತಾರೆ.

(11) ಸೊಹ್ನಿ-ಮಹಿವಾಲ್‌ರ ಪ್ರೇಮಕಥೆ ಮೊದಲು ಕೇಳಿಬಂದಿದ್ದು 10ನೇ ಶತಮಾನದ ಸಿಂಧ್‌ನಲ್ಲಿ. ಕ್ರಮೇಣ ಈ ಕಥೆ ವಿವಿಧ ಪ್ರಾಂತಗಳಲ್ಲಿ ಬೇರೆ ಬೇರೆ ರೂಪಗಳನ್ನು ತಾಳಿತು. ಪರಸ್ಪರ ಅಪಾರ ಪ್ರೇಮಬಂಧನದಲ್ಲಿದ್ದ ಸೊಹ್ನಿ ಮತ್ತು ಮಹಿವಾಲ್ ಎರಡು ಪ್ರತ್ಯೇಕ ಊರುಗಳಲ್ಲಿರುತ್ತಿದ್ದರು. ಆ ಎರಡು ಊರುಗಳ ನಡುವೆ ಒಂದು ನದಿ ಇತ್ತು. ಸೊಹ್ನಿ ನಿತ್ಯ ರಾತ್ರಿ ಮಹಿವಾಲ್‌ನನ್ನು ಕಾಣಲು ನದಿದಾಟಿ ಆತನ ಊರಿಗೆ ಹೋಗುತ್ತಿದ್ದಳು. ಬರಿಗೈಯಲ್ಲಿ ಅಷ್ಟು ದೂರ ಈಜಲು ಸಾಧ್ಯವಿರಲಿಲ್ಲ. ಆದ್ದರಿಂದ ಆಕೆ ಕೈಯಲ್ಲೊಂದು ಖಾಲಿ ಮಡಿಕೆ ಇಟ್ಟುಕೊಳ್ಳುತ್ತಿದ್ದಳು. ಒಂದು ದಿನ ಆಕೆಯ ಈ ಚಟುವಟಿಕೆ ಇಷ್ಟವಿಲ್ಲದ ಆಕೆಯ ಕೆಲವು ಬಂಧುಗಳು, ಆಕೆಯ ಮಡಿಕೆಯ ಜಾಗದಲ್ಲಿ ಇನ್ನೂ ಸರಿಯಾಗಿ ಒಣಗಿಲ್ಲದ ಒಂದು ಮಡಿಕೆಯನ್ನು ಇಟ್ಟುಬಿಟ್ಟರು. ಸೊಹ್ನಿ ಆ ಹಸಿ ಮಡಿಕೆಯನ್ನು ನಂಬಿ ನದಿ ದಾಟಲು ಹೊರಟಾಗ ನಡುನದಿಯಲ್ಲಿ ಮಡಿಕೆ ಕರಗಿ, ಆಕೆ ನದಿಯ ಪಾಲಾಗಿ ಬಿಟ್ಟಳು. ನದಿಯ ಇನ್ನೊಂದು ದಡದಲ್ಲಿ ಆಕೆಗಾಗಿ ಕಾಯುತ್ತಿದ್ದ ಮಹಿವಾಲ್ ಆಕೆಯನ್ನು ರಕ್ಷಿಸಲು ನದಿಗಿಳಿದ. ಕೊನೆಗೆ ಅವನೂ ನೀರುಪಾಲಾದ.

(12) ದೇವರು ತನ್ನ ನೆಚ್ಚಿನ ದೂತರಾಗಿದ್ದ ಪ್ರವಾದಿ ಮುಹಮ್ಮದ್ (ಸ)ರಿಗೆ ಒಂದೇ ರಾತ್ರಿಯಲ್ಲಿ ಭೂಲೋಕ ಮತ್ತು ಸ್ವರ್ಗಲೋಕದ ಪ್ರಯಾಣ ಮಾಡಿಸಿದ್ದನೆಂದು ಮುಸ್ಲಿಮರು ನಂಬುತ್ತಾರೆ. ಘಟನೆಯ ಆಂಶಿಕ ವಿವರ ಕುರ್ ಆನ್‌ನಲ್ಲಿದೆ ಮತ್ತು ಹೆಚ್ಚಿನ ವಿವರಗಳು ಹದೀಸ್ ಗ್ರಂಥಗಳಲ್ಲಿ ಸಿಗುತ್ತವೆ. ಘಟನೆ ವಾಸ್ತವದಲ್ಲಿ ನಡೆದಿತ್ತೋ ಸ್ವಪ್ನದಲ್ಲಿ ನಡೆದಿತ್ತೋ ಎಂಬ ಕುರಿತು ಭಿನ್ನಾಭಿಪ್ರಾಯಗಳಿವೆ.

(13) ‘‘ನಿಜವಾಗಿ ನಾವು ಅವನ ಜೀವನಾಡಿಗಿಂತಲೂ ಅವನಿಗೆ ಹತ್ತಿರವಾಗಿರುವೆವು’’ ಎಂದು ಮಾನವನ ಕುರಿತು ಕುರ್ ಆನ್‌ನಲ್ಲಿ ಹೇಳಲಾಗಿದೆ. (50:16)

(14) ಪ್ರಥಮ ಮಾನವ ಆದಮ್ ಸ್ವರ್ಗದಲ್ಲಿ ಮಾಡಿದ ತಪ್ಪಿನ ಹೊರೆ ಅವರ ಎಲ್ಲ ಸಂತತಿಗಳ ಮೇಲೂ ಇದೆ ಎಂಬುದು ಕ್ರೈಸ್ತರ ನಂಬಿಕೆ. ಸ್ವರ್ಗದಲ್ಲಿ ಆದಮ್ ರಿಂದ ತಪ್ಪು ಸಂಭವಿಸಿತ್ತೆಂಬುದನ್ನು ಮುಸ್ಲಿಮರೂ ನಂಬುತ್ತಾರೆ ಆದರೆ ಅವರ ತಪ್ಪನ್ನು ಆಗಲೇ ಕ್ಷಮಿಸಲಾಗಿತ್ತು ಮತ್ತು ಒಬ್ಬರ ತಪ್ಪಿಗೆ ಇನ್ನೊಬ್ಬರು ಹೊಣೆಗಾರರಾಗುವುದಿಲ್ಲವಾದ್ದರಿಂದ ಆದಮರ ತಪ್ಪಿನ ಹೊರೆಯನ್ನು ಅವರ ಸಂತತಿ ಹೊರಬೇಕಾಗಿಲ್ಲ ಎಂಬುದು ಮುಸ್ಲಿಮರ ನಂಬಿಕೆ.

(15) ‘‘ಅವನೇ ಭೂಮಿಯಲ್ಲಿ ನಿಮ್ಮನ್ನು ಪ್ರತಿನಿಧಿಯಾಗಿ ಕಳಿಸಿದವನು.’’ (ಕುರ್ ಆನ್ 6:165)

(16) ನಾಜ್ಹ್ ಖಯಾಲ್ವಿ ಎಂಬುದು ಕವಿಯ ಕಾವ್ಯನಾಮ. ಅವರ ಮೂಲ ಹೆಸರು ಮುಹಮ್ಮದ್ ಸಿದ್ದೀಕ್

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ನಾಜ್ಹ್ ಖಯಾಲ್ವಿ, ಸಾರಾನುವಾದ: ರೂಹೀ ಪುತ್ತಿಗೆ

contributor

Similar News