ಅಪೂರ್ಣ ಕಟ್ಟಡದೊಳಗೆ ರಾಮನ ಮೂರ್ತಿ ಪ್ರತಿಷ್ಠೆಗೆ ವಿರೋಧವೇ ಹೊರತು ರಾಮ ಮಂದಿರ ನಿರ್ಮಾಣಕ್ಕಲ್ಲ: ಕಾಂಗ್ರೆಸ್
ಕಾರ್ಕಳ : ಹಿಂದೂ ಧರ್ಮಸಂಸ್ಕೃತಿಯನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಅಪೂರ್ಣ ವಾಸ್ತುವಿನ ಕಟ್ಟಡದೊಳಗೆ ರಾಮನ ಮೂರ್ತಿ ಪ್ರತಿಷ್ಠೆಯನ್ನು ಕಾಂಗ್ರೆಸ್ ವಿರೋಧಿಸುತ್ತದೆಯೇ ಹೊರತು ರಾಮ ಮಂದಿರ ನಿರ್ಮಾಣವನ್ನಲ್ಲ. ಅಷ್ಟಕ್ಕೂ ಅಯೋಧ್ಯೆಯಲ್ಲಿ ರಾಮನ ದೇಗುಲಕ್ಕೆ ಶಿಲಾನ್ಯಾಸಗೈದದ್ದೇ ಕಾಂಗ್ರೆಸ್ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹೇಳಿದೆ.
ದೇಗುಲ ನಿರ್ಮಾಣ ಪೂರ್ಣವಾಗದ ಗರ್ಭಗುಡಿಯಲ್ಲಿ ದೇವರ ಪ್ರತಿಷ್ಠೆ, ಪ್ರಾಣ ಪ್ರತಿಷ್ಠೆ, ಶಿಖರ ಪ್ರತಿಷ್ಠೆಯೂ ಸೇರಿ ಯಾವುದೇ ವಿಧಿವಿಧಾನಗಳನ್ನು ಹಿಂದೂ ಧರ್ಮ ಒಪ್ಪುವುದಿಲ್ಲ. ಆಗಮಾದಿ ವಾಸ್ತು ಧರ್ಮ ಶಾಸ್ತ್ರಗಳಿಗೆ ವಿರುದ್ಧವಾಗಿ ಅವಸರವಸರವಾಗಿ ದೇವರ ಪ್ರತಿಷ್ಠೆ ದೇಶಕ್ಕೆ ಗಂಡಾಂತರ ತಂದೀತು ಎಂದು ಈಗಾಗಲೇ ದೇಶದ ಹಲವೊಂದು ಪ್ರಮುಖ ಮಠಾಧಿಪತಿಗಳು, ಸಂತರು , ಧಾರ್ಮಿಕ ಚಿಂತಕರು ರಾಮಮಂದಿರ ನಿರ್ಮಾಣ ಸಮಿತಿಯನ್ನು ಎಚ್ಚರಿಸಿದ್ದಾರೆ. ಆದರೂ ಹಿಂದೂ ಧರ್ಮದ ವಕ್ತಾರರೆಂದು ತಮ್ಮನ್ನು ತಾವು ಬಿಂಬಿಸಿಕೊಳ್ಳುವ ಬಿಜೆಪಿಗರು ಅಯೋಧ್ಯೆಯಲ್ಲಿ ರಾಮ ದೇವರ ಮೂರ್ತಿ ಪ್ರತಿಷ್ಠೆ ಆಗುವ ಮೊದಲೇ ಮನೆಮನೆಗೆ ಹೋಗಿ ಅಕ್ಷತೆ ಹಂಚುತ್ತಿರುವುದು ತಮಾಷೆಯಾಗಿದೆ. ಅಕ್ಷತೆಗೆ ಅದರದ್ದೇ ಆದ ಧಾರ್ಮಿಕ ಮಹತ್ವವಿದ್ದು ಬಿಜೆಪಿ ತನ್ನ ಕಾರ್ಯಕರ್ತರ ಮೂಲಕ ರಾಜಕೀಯ ಸಂಘಟನೆಗಾಗಿ ಪವಿತ್ರ ಅಕ್ಷತೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಇವರಿಗೆ ದೇವರ ಭಯವಿಲ್ಲ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ.
ಕಾಂಗ್ರೆಸ್ ಪಕ್ಷದ್ದು ಕಪಟ ಭಕ್ತಿಯೂ ಅಲ್ಲ. ಡೋಂಗಿ ಹಿಂದುತ್ವವೂ ಅಲ್ಲ. ಅದು "ಈಶಾವಾಸ್ಯಮಿದಂ ಸರ್ವಂ" ತತ್ವ. ಶತಮಾನಗಳಿಂದ ಬೀಗ ಜಡಿದು ಹಿಂದೂಗಳಿಗೆ ಪೂಜೆ ಮಾಡಲು ಅವಕಾಶವೇ ಇಲ್ಲದಿದ್ದ ರಾಮಲಲ್ಲಾನ ಗುಡಿಯ ಬೀಗ ತೆಗೆಸಿ ಹಿಂದೂ ಗಳಿಗೆ ಪೂಜೆಗೆ ಅವಕಾಶ ಮಾಡಿಕೊಡುವ ಮೂಲಕ ರಾಮಮಂದಿರ ನಿರ್ಮಾಣದ ಕನಸನ್ನು ಜನರ ಮನಸ್ಸಿನಲ್ಲಿ ಬಿತ್ತಿದವರೇ ಕಾಂಗ್ರೆಸ್ಸಿನವರು. ಅಲಹಾಬಾದ್ ನ್ಯಾಯಪೀಠದ ಆದೇಶದ ಹೊರತಾಗಿಯೂ ಗುಡಿಯ ಬೀಗ ತೆಗೆಸಿದ್ದು ಮತ್ತು 1989ರಲ್ಲಿ ವಿಶ್ವಹಿಂದೂ ಪರಿಷತ್ ನವರಿಗೆ ಸ್ವತ: ನಿಂತು ಅಯೋಧ್ಯೆಯಲ್ಲಿ ರಾಮಮಂದಿರ ಶಿಲಾನ್ಯಾಸಕ್ಕೆ ಅವಕಾಶ ಮಾಡಿಕೊಟ್ಟದ್ದೇ ಅಂದಿನ ಪ್ರಧಾನಿ ದಿ.ರಾಜೀವ್ ಗಾಂಧಿ. ಕಾಂಗ್ರೆಸ್ ನಂಬಿ ನೆಚ್ಚಿಕೊಂಡು ಬಂದಿರುವ ಹಿಂದುತ್ವ ಅದು ಮಹಾತ್ಮ ಗಾಂಧೀಜಿ ಪ್ರತಿಪಾದಿಸಿದ ರಾಮನ ಸ್ವಾಮಿತ್ವದ ಹಿಂದುತ್ವ. ಬಹುಶ ಅಂತಹ ರಾಮಭಕ್ತ ಗಾಂಧಿಯನ್ನೇ ಕೊಂದವರಿಗೆ ಇದು ಅರ್ಥ ಆಗಲು ಸಾಧ್ಯವಿಲ್ಲ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್ ಚಂದ್ರ ಪಾಲ್ ನಕ್ರೆ ಕಾರ್ಕಳ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.