18ನೇ ಲೋಕಸಭೆ ಮತ್ತು ಮೋದಿ ಕೀ ಗ್ಯಾರಂಟಿ

ನಾಡಿದ್ದು ರಾಷ್ಟ್ರಪತಿಗಳು ಜಂಟಿ ಸದನಕ್ಕೆ ತಮ್ಮ ಹೊಸ ಸರಕಾರದ ಕಾರ್ಯಕ್ರಮಗಳ ಬಗ್ಗೆ ವಿವರಿಸಿದ ಬೆನ್ನಿಗೇ ಸಂಸತ್ತಿನಲ್ಲಿ ಚರ್ಚೆಗೆ ಒಂದು ಚೌಕಟ್ಟು ದೊರಕಲಿದೆ. ಈಗ ಎದ್ದಿರುವ ನೀಟ್ ಪರೀಕ್ಷೆಗಳ ಕುರಿತ ವಿವಾದ, ಇವಿಎಂ ಬಗ್ಗೆ ಸಂಶಯಗಳು, ಹಳೆಯ ಎರಡು ಅವಧಿಗಳಲ್ಲಿನ ಸರಕಾರದ ಆಡಳಿತ ವೈಖರಿಯ ಸಂಗತಿಗಳೆಲ್ಲವೂ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಚರ್ಚೆಯ ವೇಳೆ ಕಿಡಿ ಮೂಡಿಸಲಿವೆ ಎಂಬುದರಲ್ಲಿ ಸಂಶಯವಿಲ್ಲ. ಹಾಗಾಗಿ ಮೋದಿ 3.0 ಸರಕಾರದ ಹನಿಮೂನ್ ಅವಧಿ, ಸದನದ ಮೂರೇ ದಿನಗಳಲ್ಲಿ ಮುಗಿದು, ‘ಸಂಸಾರ ತಾಪತ್ರಯಗಳು’ ಕಾಣಿಸಿ ಕೊಳ್ಳತೊಡಗಿದರೆ ಅಚ್ಚರಿ ಇಲ್ಲ!

Update: 2024-06-22 05:27 GMT

ಸೋಮವಾರ (ಜೂನ್ 24) ಬೆಳಗ್ಗೆ 11:00 ಗಂಟೆಗೆ 18ನೇ ಲೋಕಸಭೆ ಸಮಾವೇಶಗೊಳ್ಳಬೇಕು ಎಂದು ಭಾರತದ ರಾಷ್ಟ್ರಪತಿಗಳು ಆದೇಶ ನೀಡಿದ್ದಾರೆ. ಅಧಿವೇಶನದ ಮೊದಲ ಮೂರು ದಿನಗಳ ಕಾಲ ಹೊಸ ಸಂಸದರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಜೂನ್ 26ಕ್ಕೆ ಲೋಕಸಭೆ ಸ್ಪೀಕರ್ ಚುನಾವಣೆ ನಿಗದಿಯಾಗಿದೆ. ಜೂನ್ 27ರಂದು ರಾಷ್ಟ್ರಪತಿಗಳು ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ಮಾಡುವ ಸಾಂಪ್ರದಾಯಿಕ ಭಾಷಣದ ವೇಳೆ, ಹೊಸ ಸರಕಾರದ ಕಾರ್ಯಯೋಜನೆಗಳನ್ನು ಬಿಚ್ಚಿಡುವುದರೊಂದಿಗೆ ಮೋದಿ 3.0 ಸರಕಾರ ತನ್ನ ಹನಿಮೂನ್ ಅವಧಿ ಆರಂಭಿಸಲಿದೆ. ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಬಗ್ಗೆ ಚರ್ಚೆ ನಡೆದು, ಕೊನೆಯಲ್ಲಿ ಪ್ರಧಾನಮಂತ್ರಿಗಳು ಅದಕ್ಕೆ ಉತ್ತರಿಸಲಿದ್ದಾರೆ. ಜುಲೈ 3ಕ್ಕೆ 18ನೇ ಲೋಕಸಭೆಯ ಚೊಚ್ಚಲ ಅಧಿವೇಶನ ಮುಕ್ತಾಯಗೊಳ್ಳಲಿದೆ ಎಂದು ಲೋಕಸಭೆಯ ಸೆಕ್ರೆಟರಿಯೇಟ್ ಪ್ರಕಟಣೆ ಹೇಳಿದೆ.

ಸದನದಲ್ಲಿ 240 ಸೀಟುಗಳನ್ನು ಹೊಂದಿರುವ ಬಿಜೆಪಿ ಸೇರಿದಂತೆ ಎನ್‌ಡಿಎ ಒಟ್ಟು 293 ಸ್ಥಾನಗಳ ಬಲವನ್ನು ಹೊಂದಿದ್ದರೆ, 99 ಸೀಟುಗಳನ್ನು ಹೊಂದಿರುವ ಕಾಂಗ್ರೆಸ್‌ಸೇರಿದಂತೆ INDI ಅಲಯನ್ಸ್ ಒಟ್ಟು 234 ಸ್ಥಾನಗಳ ಬಲ ಹೊಂದಿದೆ. 17ನೇ ಲೋಕಸಭೆಯಲ್ಲಿ ಇದ್ದ ಸದಸ್ಯರ ಪೈಕಿ 216 ಮಂದಿ ಈ ಬಾರಿ ಮರು ಆಯ್ಕೆ ಆಗಿದ್ದು, ಅವರಲ್ಲಿ 5ಕ್ಕಿಂತ ಹೆಚ್ಚು ಅವಧಿಗೆ ಸಂಸತ್ ಸದಸ್ಯರಾಗಿ ಅನುಭವವಿರುವವರ ಸಂಖ್ಯೆ 19. ಈ ಸಂಸತ್ತಿನಲ್ಲಿ ರಾಷ್ಟ್ರೀಯ ಪಕ್ಷಗಳನ್ನು ಪ್ರತಿನಿಧಿಸುತ್ತಿರುವ ಸಂಸದರ ಸಂಖ್ಯೆ 346 (ಶೇ. 64) ಮತ್ತು ಪ್ರಾದೇಶಿಕ ಪಕ್ಷಗಳನ್ನು ಪ್ರತಿನಿಧಿಸುವ ಸದಸ್ಯರ ಸಂಖ್ಯೆ 179 (ಶೇ. 33). ಉಳಿದ 11 ಮಂದಿ ಸಣ್ಣ-ಪುಟ್ಟ ಪಕ್ಷಗಳವರು ಅಥವಾ ಪಕ್ಷೇತರರು. 18ನೇ ಲೋಕಸಭೆಯ ಸದಸ್ಯರ ಸರಾಸರಿ ಪ್ರಾಯ 56. ಹಿಂದಿನ ಲೋಕಸಭೆಯಲ್ಲಿ ಇದು 59 ಇತ್ತು. 74 ಮಂದಿ ಮಹಿಳಾ ಸಂಸದರು.

ಬಿಜೆಪಿಯ ಸಂಕಲ್ಪ ಪತ್ರ

ಚುನಾವಣೆಗೆ ಮುನ್ನ ಬಿಜೆಪಿ ಪ್ರಕಟಿಸಿದ್ದ ತನ್ನ ಸಂಕಲ್ಪ ಪತ್ರದಲ್ಲಿ, ಮುಂದಿನ ಐದು ವರ್ಷಗಳಲ್ಲಿ ದೇಶವನ್ನು ಜಗತ್ತಿನ ಅತಿದೊಡ್ಡ 3 ಆರ್ಥಿಕತೆಗಳಲ್ಲಿ ಒಂದನ್ನಾಗಿಸುವ ಬಗ್ಗೆ, ಬಡತನ-ಭ್ರಷ್ಟಾಚಾರಗಳ ವಿರುದ್ಧ ನಿರ್ಣಾಯಕ ಹೋರಾಟ ನಡೆಸುವ ಬಗ್ಗೆ, ಆರ್ಥಿಕ ಸುಧಾರಣೆಯ ಮುಂದಿನ ಹಂತಗಳನ್ನು ಆರಂಭಿಸುವ ಬಗ್ಗೆ ಹೇಳಿತ್ತು.

‘ಮೋದಿ ಕೀ ಗ್ಯಾರಂಟಿ’ ಎಂಬ ಹೆಸರಿನ ಈ ಚುನಾವಣಾ ಪ್ರಣಾಳಿಕೆಯಲ್ಲಿ, ಸಿಎಎ (ಪೌರತ್ವ ಕಾಯ್ದೆ ಅನುಷ್ಠಾನ), ಯುಸಿಸಿ (ಸಮಾನ ನಾಗರಿಕ ಸಂಹಿತೆ), ಒಂದು ದೇಶ-ಒಂದು ಚುನಾವಣೆಯಂತಹ ವಿವಾದಾತ್ಮಕ ಸಂಗತಿಗಳ ಜೊತೆಗೆ, ಈಗ ಚರ್ಚೆಯಾಗುತ್ತಿರುವ ಪರೀಕ್ಷಾ ವ್ಯವಸ್ಥೆ ಸುಧಾರಣೆ-ಪ್ರಶ್ನೆಪತ್ರಿಕೆಗಳು ಸೋರಿ ಹೋಗದಂತೆ ಬಿಗಿ ಕಾನೂನು, ಖಾಸಗಿಯವರ ಸಹಾಯದಿಂದ ಸ್ಲಂಗಳ ರೀಡೆವಲಪ್‌ಮೆಂಟ್ ಮೊದಲಾದ ಚರ್ಚಾಸ್ಪದ ಸಂಗತಿಗಳಿವೆ. ಜೊತೆಗೆ ತಾನು ಕಳೆದ 10 ವರ್ಷಗಳಲ್ಲಿ ಪ್ರೋತ್ಸಾಹಿಸುತ್ತಾ ಬಂದಿರುವ ಆಹಾರ ಸಂಸ್ಕರಣೆ, ಕೋರ್ ಇಂಡಸ್ಟ್ರಿಗಳು, ರಕ್ಷಣಾ ಉತ್ಪಾದನೆ, ರೈಲ್ವೆ ಉತ್ಪಾದನೆ, ಹಡಗು ಉತ್ಪಾದನೆ, ಫಾರ್ಮಸಿ, ಮೈಕ್ರೊಚಿಪ್, ವಿದ್ಯುತ್ ವಾಹನ, ಟೆಕ್ಸ್‌ಟೈಲ್ ಹಾಗೂ ಮಿನರಲ್ ಉದ್ಯಮಗಳಿಗೆ ಪ್ರೋತ್ಸಾಹ ನೀಡುವ ಮಾತುಗಳನ್ನು ಪ್ರಣಾಳಿಕೆಯಲ್ಲಿ ಹೇಳಲಾಗಿದೆ. ಇಲ್ಲಿ ಹೇಳದೇ ಉಳಿದಿರುವ, ಆದರೆ ಚರ್ಚೆಯಾಗುತ್ತಿರುವ ಒಂದು ಮಹತ್ವದ ಸಂಗತಿ ಎಂದರೆ ಕೇಂದ್ರ-ರಾಜ್ಯಗಳ ನಡುವಿನ ಸಂಬಂಧಗಳು. ಇವುಗಳಲ್ಲಿ ಯಾವೆಲ್ಲ ಸಂಗತಿಗಳು ರಾಷ್ಟ್ರಪತಿಗಳ ಭಾಷಣದಲ್ಲಿ ಕಾಣಿಸಿಕೊಳ್ಳಲಿವೆ ಎಂಬುದು ಕುತೂಹಲಕರ.

17ನೇ ಲೋಕಸಭೆಯ ಅವಧಿಯಲ್ಲಿ ಸಂಸತ್ತು 42 ಬಜೆಟ್ ಸಂಬಂಧಿ ಮಸೂದೆಗಳ ಸಹಿತ, 221 ಮಸೂದೆಗಳನ್ನು ಅಂಗೀಕರಿಸಿತ್ತು. ಸದನದ ಅವಧಿ ಮುಗಿಯುವ ಹೊತ್ತಿಗೆ, ಲೋಕಸಭೆಯಲ್ಲಿ ಅಂಗೀಕಾರವಾಗಿದ್ದು, ರಾಜ್ಯಸಭೆಯ ಅಂಗೀಕಾರ ಬಾಕಿ ಇರುವ 20 ಮಸೂದೆಗಳಿದ್ದವು. ನಾಲ್ಕು ಮಸೂದೆಗಳು ಸದನದಲ್ಲಿ ಮಂಡನೆ ಆದರೂ ಚರ್ಚೆ-ಅಂಗೀಕಾರ ದೊರೆಯದೇ ವಾಯಿದೆ ತೀರಿವೆ.

ಹೀಗೆ ವಾಯಿದೆ ತೀರಿಹೋಗಿರುವ ಮಸೂದೆಗಳಲ್ಲಿ ವಿದ್ಯುತ್ (ತಿದ್ದುಪಡಿ) ಮಸೂದೆ- 2022 ಅಥವಾ ವಿದ್ಯುತ್ ಖಾಸಗೀಕರಣ ಮಸೂದೆ ಕೂಡ ಸೇರಿದೆ. 18ನೇ ಲೋಕಸಭೆಯಲ್ಲಿ ಈ ಮಸೂದೆ ಮತ್ತೆ ಸದನಕ್ಕೆ ಬರಲಿದೆಯೇ ಎಂದು ಕಾದು ನೋಡಬೇಕಿದೆ. ಜೊತೆಗೆ, ಈಗಾಗಲೇ ಅಂಗೀಕಾರಗೊಂಡಿರುವ ಭಾರತೀಯ ನ್ಯಾಯಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, ಭಾರತೀಯ ಸಾಕ್ಷ್ಯ ಕಾಯ್ದೆಗಳ ಅನುಷ್ಠಾನದ ಸವಾಲು ಕೂಡ ಹೊಸ ಸರಕಾರದ ಮುಂದಿದೆ.

ಹಾದಿ ಸಲೀಸಿಲ್ಲ

ಕಳೆದ ಎರಡು ಅವಧಿಗಳನ್ನು ವಿರೋಧ ಪಕ್ಷಗಳ ಹಂಗಿಲ್ಲದೆ ಕಳೆದಿರುವ ನರೇಂದ್ರ ಮೋದಿ ಅವರ ಸರಕಾರಕ್ಕೆ ಈಗ ಮೂರನೇ ಅವಧಿ ಅಷ್ಟು ಸಲೀಸಿಲ್ಲ. ಚಂದ್ರಬಾಬು ನಾಯ್ಡು ಮತ್ತು ನಿತೀಶ್ ಕುಮಾರ್ ಎಂಬೆರಡು ಊರುಗೋಲುಗಳ ಸಹಾಯದಿಂದ ನಡೆಯಬೇಕಿರುವ ಈ ಸರಕಾರಕ್ಕೆ, ಜೂನ್ 26ರಂದು ನಡೆಯಲಿರುವ ಸ್ಪೀಕರ್ ಹುದ್ದೆಯ ಚುನಾವಣೆಯಿಂದಲೇ ಕತ್ತಿಯ ಮೇಲಿನ ನಡಿಗೆ ಆರಂಭಗೊಳ್ಳಲಿದೆ.

ಕಳೆದ ಐದು ವರ್ಷಗಳಲ್ಲಿ ಲೋಕಸಭೆಗೆ ಉಪ ಸ್ಪೀಕರ್ ಸ್ಥಾನವನ್ನು, ಅದು ಸಾಂವಿಧಾನಿಕ ಆವಶ್ಯಕತೆಯೇ ಆಗಿದ್ದರೂ ಭರ್ತಿ ಮಾಡಿರಲಿಲ್ಲ. ಏಕೆಂದರೆ ಆ ಸ್ಥಾನವನ್ನು ವಿರೋಧ ಪಕ್ಷಕ್ಕೆ ವಹಿಸಿಕೊಡುವುದು ಸತ್ಸಂಪ್ರದಾಯ! ಸಂಖ್ಯೆ ಕಡಿಮೆ ಇದ್ದ ಕಾರಣಕ್ಕೆ, ಅಧಿಕೃತ ವಿರೋಧ ಪಕ್ಷದ ಸ್ಥಾನವನ್ನೂ ಕಾಂಗ್ರೆಸ್‌ಗೆ ಕೊಟ್ಟಿರಲಿಲ್ಲ. 10 ವರ್ಷಗಳಿಂದ ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ(ಪಿಎಸಿ)ಗೆ ಕಾಂಗ್ರೆಸ್‌ನ ಅಧ್ಯಕ್ಷತೆ ಇದ್ದರೂ, ಅದರ ಮಹತ್ವವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿತ್ತು, ದಾಖಲೆ ಸಂಖ್ಯೆಯಲ್ಲಿ ವಿರೋಧ ಪಕ್ಷಗಳ ಸಂಸದರನ್ನು ಸಣ್ಣಪುಟ್ಟ ಕಾರಣಗಳಿಗಾಗಿ ಸದನದಿಂದ ಅಮಾನತು ಮಾಡಲಾಗಿತ್ತು. ಇದೆಲ್ಲ ಎಲ್ಲಿಯ ತನಕ ಹೋಗಿತ್ತೆಂದರೆ, ಕಡೆಗೆ ಸಂಸತ್ ಕಲಾಪಗಳನ್ನು ಸರಕಾರಿ ಟೆಲಿವಿಷನ್ ಚಾನೆಲ್‌ಗಳಲ್ಲಿ ತೋರಿಸುವಾಗಲೂ ವಿರೋಧಪಕ್ಷಗಳ ನಾಯಕರ ಭಾಷಣಗಳ ವೇಳೆ, ಅವರ ಮುಖದರ್ಶನಕ್ಕೆ ಅವಕಾಶ ಕಡಿಮೆ ಇತ್ತೆಂಬುದು ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್‌ನ ಆಪಾದನೆ ಆಗಿತ್ತು. ಹೀಗೆ, ಸಂಸದೀಯ ವ್ಯವಸ್ಥೆಯ ಒಳಗೆ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ, ಆಡಳಿತ ಪಕ್ಷದ ಬಹುಮತದ ಏಕಸ್ವಾಮ್ಯ ನಡೆಯುತ್ತಿತ್ತು. ಆದರೆ ಈ ಬಾರಿ ಅಂತಹ ಬುಲ್ಡೋಜಿಂಗ್ ಸುಲಭ ಸಾಧ್ಯವಿಲ್ಲ.

ನಾಡಿದ್ದು ರಾಷ್ಟ್ರಪತಿಗಳು ಜಂಟಿ ಸದನಕ್ಕೆ ತಮ್ಮ ಹೊಸ ಸರಕಾರದ ಕಾರ್ಯಕ್ರಮಗಳ ಬಗ್ಗೆ ವಿವರಿಸಿದ ಬೆನ್ನಿಗೇ ಸಂಸತ್ತಿನಲ್ಲಿ ಚರ್ಚೆಗೆ ಒಂದು ಚೌಕಟ್ಟು ದೊರಕಲಿದೆ. ಈಗ ಎದ್ದಿರುವ ನೀಟ್ ಪರೀಕ್ಷೆಗಳ ಕುರಿತ ವಿವಾದ, ಇವಿಎಂ ಬಗ್ಗೆ ಸಂಶಯಗಳು, ಹಳೆಯ ಎರಡು ಅವಧಿಗಳಲ್ಲಿನ ಸರಕಾರದ ಆಡಳಿತ ವೈಖರಿಯ ಸಂಗತಿಗಳೆಲ್ಲವೂ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಚರ್ಚೆಯ ವೇಳೆ ಕಿಡಿ ಮೂಡಿಸಲಿವೆ ಎಂಬುದರಲ್ಲಿ ಸಂಶಯವಿಲ್ಲ. ಹಾಗಾಗಿ ಮೋದಿ 3.0 ಸರಕಾರದ ಹನಿಮೂನ್ ಅವಧಿ, ಸದನದ ಮೂರೇ ದಿನಗಳಲ್ಲಿ ಮುಗಿದು, ‘ಸಂಸಾರ ತಾಪತ್ರಯಗಳು’ ಕಾಣಿಸಿ ಕೊಳ್ಳತೊಡಗಿದರೆ ಅಚ್ಚರಿ ಇಲ್ಲ!

ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರಿಗೇ ಈ ಕುರಿತು ಕಲ್ಪನೆ ಇರುವಂತಿದೆ. ಇಲ್ಲದಿದ್ದರೆ, ಚುನಾವಣೆಗೆ ಮುನ್ನವೇ 125 ದಿನಗಳ ಯೋಜನೆ ಸಿದ್ಧಪಡಿಸಿ, ಅಧಿಕಾರ ಸ್ವೀಕರಿಸಿದ ತಕ್ಷಣ ಏನೆಲ್ಲ ಪ್ರಕಟಣೆ ಮಾಡಬೇಕು ಎಂಬ ತನಕವೂ ಆಗಿದ್ದ ಯೋಜನೆಗಳು ಸಂಪೂರ್ಣ ನನೆಗುದಿಗೆ ಬಿದ್ದಂತಿವೆ. ಯಾಕೆಂದರೆ ಆ ನೂರು ದಿನಗಳಲ್ಲಿ ಎರಡು ವಾರಗಳು ಈಗಾಗಲೇ ಕಳೆದುಹೋಗಿವೆ. ಚುನಾವಣೆಯ ಕಾರಣಕ್ಕೆ ವಿಳಂಬವಾಗಿದ್ದ ಕೆಲವು ರುಟೀನ್ ಪ್ರಕಟಣೆಗಳನ್ನು ಹೊರತುಪಡಿಸಿದರೆ, ‘125 ದಿನಗಳ ವಿಶೇಷ ಪ್ಯಾಕೇಜ್’ ಯಾವುದನ್ನೂ ಹೊಸ ಸರಕಾರ ಎಂದಿನಂತೆ ಬಿಚ್ಚಿ ಮಾರ್ಕೆಟಿಂಗ್ ಮಾಡಿದಂತಿಲ್ಲ.

ಈ ಎಲ್ಲ ಕಾರಣಗಳಿಗಾಗಿ ಮತ್ತು ಹೊಸ ‘ಊರುಗೋಲು ಬಹುಮತದ’ ಸರಕಾರವನ್ನು ಪ್ರಧಾನಮಂತ್ರಿಗಳು ಹೇಗೆ ಸಂಭಾಳಿಸಲಿದ್ದಾರೆ ಎಂಬುದನ್ನು ಗಮನಿಸುವುದಕ್ಕಾಗಿ ಈ ಚೊಚ್ಚಲ ಅಧಿವೇಶನ ಮಹತ್ವದ್ದೆನ್ನಿಸಲಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ರಾಜಾರಾಂ ತಲ್ಲೂರು

contributor

Similar News