ಕರಾವಳಿಯ ಅಗ್ನಿಕುಂಡದಲ್ಲಿನ್ನು ಖಾಸಗಿಯವರ ಮರ್ಜಿ: ISPR ಕಥೆ

ಪ್ರಶ್ನೆ ಎಂದರೆ, ಸರಕಾರ ಇಲ್ಲಿ ತೈಲ ಸಂಗ್ರಹಿಸಿಡಲು ಉತ್ಸುಕವಾಗಿಲ್ಲ ಎಂದಮೇಲೆ, ಇಲ್ಲಿನ ತೈಲಾಗಾರಗಳ ಸಾಮರ್ಥ್ಯ ವಿಸ್ತರಣೆಯ ಬಗ್ಗೆ ಸರಕಾರದ ಅತಿಉತ್ಸಾಹದ ಹಿಂದಿರುವ ಉದ್ದೇಶ ಏನು? ಸರಕಾರಿ ಬೊಕ್ಕಸದ ಖರ್ಚಿನಲ್ಲಿ ಖಾಸಗಿಯವರಿಗೆ ಮೂಲ ಸೌಕರ್ಯಗಳನ್ನು ಉಚಿತವಾಗಿ ಕಟ್ಟಿಸಿಕೊಡುವ ಹುನ್ನಾರ ಏಕೆ? ಕರಾವಳಿಯ ಬಂದರುಗಳು, ನೆಲ, ಜಲ, ಆಕಾಶಗಳನ್ನು ಒಂದೊಂದಾಗಿ ಖಾಸಗಿಯವರ ರಂಗೋಲಿಗೆ ಚುಕ್ಕಿಗಳನ್ನಾಗಿ ಸರಕಾರಿ ಖರ್ಚಿನಲ್ಲಿ ಒದಗಿಸಿಕೊಡುವ ಹೊಸ ಸಂಪ್ರದಾಯದ ಮುಂದುವರಿಕೆ ಇದು ಅನ್ನಿಸುವುದಿಲ್ಲವೆ?

Update: 2024-02-10 05:11 GMT

ಗೋವಾದಲ್ಲಿ ನಡೆದಿರುವ ಭಾರತ ಎನರ್ಜಿ ಸಪ್ತಾಹ- 2024 ಮೊನ್ನೆ ಮುಗಿದಿದೆ. ಅಲ್ಲಿ ಪಾಲ್ಗೊಂಡಿದ್ದ ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ಸ್ ಲಿಮಿಟೆಡ್ (ISPRL) ಆಡಳಿತ ನಿರ್ದೇಶಕ, ಎಲ್. ಆರ್. ಜೈನ್ ಅವರು, ತಮ್ಮ ಸಂಸ್ಥೆಯ ಭೂಗರ್ಭ ತೈಲ ಸಂಗ್ರಹಾಗಾರ ಸಾಮರ್ಥ್ಯದ ಪೈಕಿ, ಖಾಲಿ ಬಿದ್ದಿರುವ ಇನ್ನೂ 10 ಲಕ್ಷ ಟನ್ ಸ್ಥಳಾವಕಾಶವನ್ನು ಭಾರತೀಯ ಮತ್ತು ವಿದೇಶಿ ಖಾಸಗಿ ಕಂಪೆನಿಗಳಿಗೆ ಗುತ್ತಿಗೆ ನೀಡಲಾಗುವುದು ಎಂದು ಪ್ರಕಟಿಸಿದ್ದಾರೆ. ಈ ಭೂಗರ್ಭ ತೈಲ ಸಂಗ್ರಹಾಗಾರದ ಬಹುಪಾಲು ಇರುವುದು ಉಡುಪಿ ಜಿಲ್ಲೆಯ ಪಾದೂರು ಮತ್ತು ಮಂಗಳೂರಿನ ಪೆರ್ಮುದೆ ಬಳಿ.

ಜನನಿಬಿಡ ಜಿಲ್ಲೆಗಳಾಗಿರುವ ಉಡುಪಿ-ಮಂಗಳೂರುಗಳಿಗೆ ಇದೊಂದು ಆತಂಕಕಾರಿ ಬೆಳವಣಿಗೆ ಆಗಬೇಕಿತ್ತು. ಆದರೆ ಹಾಗಾಗಿಲ್ಲ ಎಂಬುದು ಕೌತುಕದ ಸಂಗತಿ. ಈ ಭೂಗರ್ಭ ತೈಲ ಸಂಗ್ರಹಾಗಾರದ ಸಂಗತಿ ಯಾವಾಗ ಮತ್ತು ಎಲ್ಲಿ ಹುಟ್ಟಿತು, ಯಾವ ಹಾದಿಯಲ್ಲಿ ಎಲ್ಲಿಗೆ ತಲುಪಿತು ಎಂದು ಅರ್ಥಮಾಡಿಕೊಳ್ಳುವುದು ಅಗತ್ಯವಿದೆ. ಪಶ್ಚಿಮ ಕರಾವಳಿಯ ಪ್ರಮುಖ ಬಂದರುಗಳಲ್ಲಿ ಒಂದಾದ ನವಮಂಗಳೂರು ಬಂದರನ್ನು ಕೇಂದ್ರವಾಗಿರಿಸಿಕೊಂಡು ಕಳೆದ 35 ವರ್ಷಗಳಲ್ಲಿ ನಡೆದಿರುವ ‘ಅಭಿವೃದ್ಧಿ’ಗಳನ್ನು ಸಮಗ್ರವಾಗಿ ಗಮನಿಸಿದರೆ, ಕರಾವಳಿ ಯಾಕಿಂದು ಅಗ್ನಿಕುಂಡ ಎಂಬುದು ಅರ್ಥವಾಗುತ್ತದೆ. ಆದರೆ ಈ ಬರಹ ಇಲ್ಲಿನ ಭೂಗರ್ಭ ತೈಲ ಸಂಗ್ರಹಾಗಾರಕ್ಕೆ ಸೀಮಿತವಾಗಿದೆ.

1998ರಲ್ಲಿ ಗಲ್ಫ್ ಕದನದ ಕಾರಣಕ್ಕೆ ತೈಲಮಾರುಕಟ್ಟೆಯಲ್ಲಿ ಸಂಕಟ ಕಾಣಿಸಿಕೊಂಡಾಗ, ದೇಶದ ಭದ್ರತೆಯ ನಿಟ್ಟಿನಲ್ಲಿ ತೈಲ ಸಂಗ್ರಹಿಸಿಟ್ಟುಕೊಳ್ಳಬೇಕು ಎಂಬ ಚಿಂತನೆ ಮೊದಲ ಬಾರಿಗೆ ಹುಟ್ಟಿಕೊಂಡಿತು. ಆಗ ಪ್ರಧಾನಿ ಆಗಿದ್ದವರು ವಾಜಪೇಯಿ. ಆ ಹಿನ್ನೆಲೆಯಲ್ಲಿ, ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ)ನ ಉಪಸಂಸ್ಥೆಯಾಗಿ ಈ ISPRL ಎಂಬ ವಿಶೇಷೋದ್ದೇಶ ಸಂಸ್ಥೆ (ಎಸ್‌ಪಿವಿ) ರೂಪುಗೊಂಡಿತ್ತು. ಬಳಿಕ 2006 ಮೇ ತಿಂಗಳಲ್ಲಿ ತೈಲೋದ್ಯಮ ಅಭಿವೃದ್ಧಿ ಮಂಡಳಿಯ (ಒಐಡಿಬಿ) ಉಪಸಂಸ್ಥೆಯಾಗಿ ಇದನ್ನು ಪರಿವರ್ತಿಸಲಾಗಿತ್ತು. ಸಂಸ್ಥೆಯ ಉದ್ದೇಶ ಇದ್ದುದು, ದೇಶದ ಒಳಗೆ 5.03ಎಂಎಂಟಿ (50.30ಲಕ್ಷ ಮೆಟ್ರಿಕ್ ಟನ್) ಸಾಮರ್ಥ್ಯದ ತೈಲ ಸಂಗ್ರಹಣಾಗಾರಗಳನ್ನು ರೂಪಿಸುವುದು.

ಪೆಟ್ರೋಲಿಯಂ ಸಂಗ್ರಹ ನಿಯಮಗಳು, 1976 ದಹನಶೀಲವಾದ ಪೆಟ್ರೋಲಿಯಂ ಮತ್ತಿತರ ಉತ್ಪನ್ನಗಳನ್ನು ಎಲ್ಲಿ ಮತ್ತು ಹೇಗೆ ಸುರಕ್ಷಿತವಾಗಿ ಸಂಗ್ರಹಿಸಬೇಕೆಂದು ವಿಧಿಸುತ್ತದೆ. ಜನನಿಬಿಡ ಸ್ಥಳಗಳಲ್ಲಿ ಅವನ್ನು ಸಂಗ್ರಹಿಸುವುದು ನಿಷಿದ್ಧ. ಆದರೆ, ಮಂಗಳೂರಿನಲ್ಲೇ ಎಂಆರ್‌ಪಿಎಲ್ ತೈಲ ಶುದ್ಧೀಕರಣಗಾರ ಇರುವುದು ಮತ್ತು ಸಮೀಪದಲ್ಲೇ ಬಂದರು ಇರುವುದು ಕಾನೂನು-ನಿಯಮಗಳನ್ನೆಲ್ಲ ಬದಿಗಿರಿಸಿತು. ಮಂಗಳೂರಿನಲ್ಲಿ 0.75 ಎಂಎಂಟಿ ಸಾಮರ್ಥ್ಯದ ಎರಡು ಭೂಗರ್ಭ ಸಂಗ್ರಹಾಗಾರಗಳು ಎಸ್‌ಇಝಡ್ ವಲಯದಲ್ಲಿ ಸ್ಥಾಪನೆಗೊಂಡವು. ಉಡುಪಿ ಜಿಲ್ಲೆಯ ಪಾದೂರಿನಲ್ಲಿ, ದೇಶದ ಭದ್ರತೆ-ರಾಷ್ಟ್ರಭಕ್ತಿ-ಸ್ಥಳೀಯರಿಗೆ ಉದ್ಯೋಗಾವಕಾಶ ಮತ್ತಿತರ ಭರವಸೆಗಳನ್ನಿತ್ತು, 179.21 ಎಕ್ರೆ ಭೂಮಿಯನ್ನು ಕೆಐಎಡಿಬಿ ಮೂಲಕ ಸ್ವಾಧೀನಪಡಿಸಿಕೊಳ್ಳಲಾಯಿತು. (ಇದರಲ್ಲಿ 120 ಎಕ್ರೆ ಕೃಷಿ ಭೂಮಿ, 20 ಎಕ್ರೆ ವಸತಿ ಇತ್ಯಾದಿ ಪರಿವರ್ತಿತ ಭೂಮಿ ಮತ್ತು ಉಳಿದುದು ಸರಕಾರಿ ಭೂಮಿ). ಅಲ್ಲಿ ಈಗ 2.5 ಎಂಎಂಟಿ ಸಾಮರ್ಥ್ಯದ ಭೂಗರ್ಭ ತೈಲ ಸಂಗ್ರಹಾಗಾರ ಕಾರ್ಯಾಚರಿಸುತ್ತಿದೆ. ಅದಕ್ಕೆ ಸರಕಾರಿ ಬೊಕ್ಕಸದಿಂದ 1,693 ಕೋಟಿ ರೂ. ವೆಚ್ಚ ಬಿದ್ದಿದೆ. 2010 ಮೇ ತಿಂಗಳಿನಲ್ಲಿ ಆರಂಭಗೊಂಡ ಈ ಸಂಗ್ರಹಾಗಾರವು 2018ರಿಂದಲೇ ಕಾರ್ಯಾಚರಿಸುತ್ತಿದ್ದು, ಪ್ರಧಾನಮಂತ್ರಿ ಮೋದಿಯವರು 2019 ಫೆಬ್ರವರಿ 10ರಂದು ದೇಶದ ಈ ಸಂಗ್ರಹಾಗಾರಗಳನ್ನು ಔಪಚಾರಿಕವಾಗಿ ಉದ್ಘಾಟಿಸಿದ್ದರು. ಈ ಎರಡೂ ಸಂಗ್ರಹಾಗಾರಗಳ ನಡುವೆ ಪೈಪ್‌ಲೈನ್ ಸಂಪರ್ಕ ಕೂಡ ಇದೆ.

ಸ್ಥಳೀಯರಿಗೆ ಉದ್ಯೋಗದಂತಹ ಭರವಸೆಗಳು ಈಡೇರಿಲ್ಲವಾದರೂ, ಪಾದೂರಿನಲ್ಲಿ ಎರಡನೇ ಹಂತದ ಯೋಜನೆಗಾಗಿ ಮತ್ತೆ 214.19 ಎಕ್ರೆ ಗಾತ್ರದ ಭೂಮಿಯನ್ನು ಪಾದೂರು, ಶಿರ್ವ, ಕಳತ್ತೂರು ಗ್ರಾಮಗಳಲ್ಲಿ (ಇದರಲ್ಲಿ, 210 ಎಕ್ರೆ ಕೃಷಿ ಭೂಮಿ, 25 ಎಕ್ರೆ ಪರಿವರ್ತಿತ ಭೂಮಿ ಮತ್ತು ಉಳಿದುದು ಸರಕಾರಿ ಭೂಮಿ) ಕೆಐಡಿಎಬಿ ಮೂಲಕ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, 2024 ಮಾರ್ಚ್ ಹೊತ್ತಿಗೆ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆ ಇದೆಯಂತೆ.

ಅದೇ ರೀತಿ, ಮಂಗಳೂರಿನಲ್ಲೂ ಮೊದಲ ಹಂತದ ವಿಸ್ತರಣೆಗಾಗಿ (ಮತ್ತೆ 1.5/2 ಎಂಎಂಟಿ ಸಾಮರ್ಥ್ಯ) ಮತ್ತೆ 154.9 ಎಕ್ರೆ ಭೂಮಿ ಸ್ವಾಧೀನಕ್ಕಾಗಿ MSEZL ಜೊತೆ 2023 ಮಾರ್ಚ್ 17ರಂದು ಒಪ್ಪಂದ ಏರ್ಪಟ್ಟಿದೆ; ಯೋಜನೆ ಅನುಷ್ಠಾನಕ್ಕಾಗಿ ಪೂರ್ವಭಾವಿ ಅಧ್ಯಯನಗಳು ಆರಂಭಗೊಂಡಿವೆ.

ಕರಾವಳಿ ಜಿಲ್ಲೆಗಳಲ್ಲಿ ದೇಶಭಕ್ತಿ, ದೇಶದ ಭದ್ರತೆಯ ಹೆಸರಿನಲ್ಲಿ ಜನರನ್ನು ನಂಬಿಸಿ, ನಿಮಗೇನೇ ಸಮಸ್ಯೆ ಆದರೂ ನಾವಿದ್ದೇವೆ ಎಂಬ ಭರವಸೆ ಇತ್ತು, ಸ್ಥಳೀಯರಿಗೆ ನೂರಾರು ಉದ್ಯೋಗಾವಕಾಶಗಳಿಗೆ ಬಾಗಿಲು ತೆರೆಯಲಿದೆ ಎಂದು ಮುಂಗೈಗೆ ಬೆಲ್ಲ ಮೆತ್ತಿಸಿ, ಈ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ/ಗುತ್ತಿದೆ. ಜನ ಭವಿಷ್ಯದ ಸಂಭಾವ್ಯ ಅಪಾಯಗಳ ಪರಿವೆ ಇಲ್ಲದೆ, ದೇಶಕ್ಕಾಗಿ ತಮ್ಮ ಭೂಮಿ ತ್ಯಾಗ ಮಾಡಿದ್ದಾರೆ. ಉದ್ಯೋಗಾವಕಾಶಗಳು ಸಿಗದಿದ್ದಾಗಲೂ ಅಲ್ಲೇ ಸಣ್ಣಪುಟ್ಟ ಮುಸಿಮುಸಿ ಧ್ವನಿ ಬಿಟ್ಟರೆ ದೊಡ್ಡ ಧ್ವನಿ ಎದ್ದದ್ದಿಲ್ಲ. ಜನಪ್ರತಿನಿಧಿಗಳೂ ಸಂತ್ರಸ್ತರ ಅಹವಾಲುಗಳಿಗೆ ನೆಲಕಚ್ಚಿ ಸ್ಪಂದಿಸಿದ ಉದಾಹರಣೆಗಳಿಲ್ಲ. ಸ್ಥಳೀಯ ನೀರಿನ ಮೂಲಗಳೂ ಕೂಡ ದೊಡ್ಡ ಪ್ರಮಾಣದಲ್ಲಿ ಅಲ್ಲಿಗೆ ಬಳಕೆಯಲ್ಲಿವೆ. ಹೀಗೆಲ್ಲ ಇರುವಾಗ, ಸ್ಥಳೀಯರಿಗೇ ತಗಾದೆ ಇಲ್ಲ ಎಂದಾದ ಮೇಲೆ, ನಿಮ್ಮದೇನು ತಗಾದೆ ಎಂಬ ಪ್ರಶ್ನೆ ಏಳುವುದು ಸಹಜ. ಆದರೆ ಕೆಲವು ವಾಸ್ತವಗಳು ಸಾರ್ವಜನಿಕರಿಗೆ ಗೊತ್ತಾಗಬೇಕು.

ಈ ಯೋಜನೆ ಆರಂಭಗೊಂಡಾಗ, ಅಲ್ಲಿನ ತೈಲ ಸಂಗ್ರಹ ಮತ್ತು ಯೋಜನೆಯ ನಿರ್ವಹಣೆಯ ಜವಾಬ್ದಾರಿಗಳನ್ನು ಭಾರತ ಸರಕಾರ ಹೊಂದಿತ್ತು. ಆದರೆ ಯೋಜನೆ ಕಾರ್ಯರೂಪಕ್ಕೆ ಬರುವ ಮೊದಲೇ, ಅಂದರೆ 2017 ಜನವರಿ ಹೊತ್ತಿಗಾಗಲೇ, ಮೂಲಸೌಕರ್ಯಗಳ ಸಂಪುಟ ಸಮಿತಿ (ಸಿಸಿಐ) ಅಲ್ಲಿ ತೈಲ ತುಂಬಿಸುವ ಖರ್ಚು ಭರಿಸಲು ಪರ್ಯಾಯ ಹಾದಿಗಳನ್ನು ಹುಡುಕಲು ಹೇಳಿತು. ಅದರಂತೆ, ಸೌದಿಯ ADNOC ಸಂಸ್ಥೆ ಮಂಗಳೂರಿನ ಒಂದು ಸಂಗ್ರಹಾಗಾರ (0.75ಎಂಎಂಟಿ)ದಲ್ಲಿ ತನ್ನ ತೈಲ ತುಂಬಿಸಿಕೊಂಡಿತು. ಈ ತೈಲದಲ್ಲಿ ಶೇ. 50 ಭಾಗ ಭಾರತಕ್ಕೆ ಭದ್ರತೆಯ ದೃಷ್ಟಿಯಿಂದ ಯಾವಾಗಲೂ ಲಭ್ಯ ಇರಬೇಕೆಂಬುದು ಈ ಒಪ್ಪಂದದ ಭಾಗ.

ಇದಾದ ಬಳಿಕ, 2021ರ ಮೇ ತಿಂಗಳಿನಲ್ಲಿ ಸರಕಾರ ತನ್ನ ತೈಲ ಸಂಗ್ರಹ ನೀತಿಯಲ್ಲೇ ಬದಲಾವಣೆ ಮಾಡಿಕೊಂಡು, ಪಿಪಿಪಿ ಆಧಾರದಲ್ಲಿ ಖಾಸಗಿಯವರಿಗೆ ಈ ತೈಲ ಸಂಗ್ರಹಾಗಾರಗಳನ್ನು ಗುತ್ತಿಗೆ ನೀಡಬೇಕೆಂಬ ತೀರ್ಮಾನ ತೆಗೆದುಕೊಂಡಿತ್ತು.

ಸದ್ಯ, ಒಟ್ಟು 5.33 ಎಂಎಂಟಿ ಸಾಮರ್ಥ್ಯದಲ್ಲಿ, ADNOC ಸಂಸ್ಥೆ 2 ಎಂಎಂಟಿ ( ಪಾದೂರಿನಲ್ಲಿ 1.25 ಎಂಎಂಟಿ ಮತ್ತು ಮಂಗಳೂರಿನಲ್ಲಿ 0.75 ಎಂಎಂಟಿ) ಜಾಗದಲ್ಲಿ ತನ್ನ ತೈಲ ಸಂಗ್ರಹಿಸಿಟ್ಟುಕೊಂಡಿದೆ. ISPRL ಕಡೆಯಿಂದ ಪಾದೂರಿನಲ್ಲಿ 1.25ಎಂಎಂಟಿ ತೈಲ ಸಂಗ್ರಹವಿದ್ದು, ಮಂಗಳೂರಿನ 0.75ಎಂಎಂಟಿ ಸಾಮರ್ಥ್ಯದ ಸಂಗ್ರಹಾಗಾರ ಖಾಲಿ ಇದೆಯಂತೆ. ಭಾರತ ಸರಕಾರ, 2023-24ರ ಬಜೆಟ್‌ನಲ್ಲಿ, ಇಲ್ಲಿ ತೈಲಸಂಗ್ರಹಕ್ಕೆ 5,000 ಕೋಟಿ ರೂ. ಮೀಸಲಿರಿಸಿತ್ತು. ಆದರೆ ಆ ಹಣವನ್ನು ISPRL ಕೊಡಲಿಲ್ಲ. ಈ ಬಾರಿ, 2024-25ರ ಬಜೆಟ್‌ನಲ್ಲಿ, ISPRL ಹಣ ಒದಗಿಸುವ ಸೊಲ್ಲೇ ಇಲ್ಲ! ಈ ಹಿನ್ನೆಲೆಯಲ್ಲಿ, ತನ್ನ ಹಾದಿ ತಾನು ನೋಡಿಕೊಳ್ಳಬೇಕಾಗಿರುವ ISPRL, ಹೆಚ್ಚುವರಿ 1ಎಂಎಂಟಿ ಸಾಮರ್ಥ್ಯವನ್ನು ಖಾಸಗಿಯವರಿಗೆ ಲೀಸ್ ಕೊಡಲು ತೀರ್ಮಾನಿಸಿದೆ.

ಈಗ ಪ್ರಶ್ನೆ ಎಂದರೆ, ಸರಕಾರ ಇಲ್ಲಿ ತೈಲ ಸಂಗ್ರಹಿಸಿಡಲು ಉತ್ಸುಕವಾಗಿಲ್ಲ ಎಂದಮೇಲೆ, ಇಲ್ಲಿನ ತೈಲಾಗಾರಗಳ ಸಾಮರ್ಥ್ಯ ವಿಸ್ತರಣೆಯ ಬಗ್ಗೆ ಸರಕಾರದ ಅತಿಉತ್ಸಾಹದ ಹಿಂದಿರುವ ಉದ್ದೇಶ ಏನು? ಸರಕಾರಿ ಬೊಕ್ಕಸದ ಖರ್ಚಿನಲ್ಲಿ ಖಾಸಗಿಯವರಿಗೆ ಮೂಲ ಸೌಕರ್ಯಗಳನ್ನು ಉಚಿತವಾಗಿ ಕಟ್ಟಿಸಿಕೊಡುವ ಹುನ್ನಾರ ಏಕೆ? ಕರಾವಳಿಯ ಬಂದರುಗಳು, ನೆಲ, ಜಲ, ಆಕಾಶಗಳನ್ನು ಒಂದೊಂದಾಗಿ ಖಾಸಗಿಯವರ ರಂಗೋಲಿಗೆ ಚುಕ್ಕಿಗಳನ್ನಾಗಿ ಸರಕಾರಿ ಖರ್ಚಿನಲ್ಲಿ ಒದಗಿಸಿಕೊಡುವ ಹೊಸ ಸಂಪ್ರದಾಯದ ಮುಂದುವರಿಕೆ ಇದು ಅನ್ನಿಸುವುದಿಲ್ಲವೆ?

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ರಾಜಾರಾಂ ತಲ್ಲೂರು

contributor

Similar News