ಸೂರ್ಯಂಗೇ ಟಾರ್ಚ್ ಹಿಡಿದ ‘ಡಿಯರ್ ಮೀಡಿಯಾ’
ಬಹುತೇಕ ಪತ್ರಕರ್ತ ಗಢಣ ಇಂದು ಪ್ರಧಾನಮಂತ್ರಿಗಳ ‘ಅಭಿಮಾನಿ ಬಳಗ’ ಆಗಿ ಕುಳಿತುಬಿಟ್ಟಿದೆ. ಇಂತಹದೊಂದು ಅಭಿಮಾನಿಗಳ ಪಡೆ, ಈ ಬಾರಿ ಪ್ರಧಾನಮಂತ್ರಿಗಳ ಚುನಾವಣಾ ಪ್ರಚಾರದ ಜವಾಬ್ದಾರಿಯನ್ನು ಹೇಗೆ ಶಿರಸಾವಹಿಸಿ ನೆರವೇರಿಸಿಕೊಟ್ಟವು ಎಂಬುದನ್ನು ನೋಡುವ ಪ್ರಯತ್ನವಿದು.
ಚುನಾವಣಾ ಆಯೋಗವು 2024ರ ಮಾರ್ಚ್ ಕೊನೆಯ ವಾರದ ಹೊತ್ತಿಗೆ, ತನ್ನ ಚುನಾವಣೆ ತಯಾರಿಗಳ ಭಾಗವಾಗಿ, ಸರಕಾರಿ ಚಾನೆಲ್ ದೂರದರ್ಶನ (ಡಿಡಿ), ಆಕಾಶವಾಣಿ (AIR)ಗಳಲ್ಲಿ ಮತ್ತು ಅವುಗಳ ಪ್ರಾದೇಶಿಕ ಅವತರಣಿಕೆಗಳಲ್ಲಿ, ಚುನಾವಣಾ ಪ್ರಚಾರಕ್ಕಾಗಿ ಆರು ರಾಷ್ಟ್ರೀಯ ಪಕ್ಷಗಳಿಗೆ ಸಮಯ ಸ್ಲಾಟ್ ನಿಗದಿ ಮಾಡಿ ನಿರ್ದೇಶನ ಹೊರಡಿಸಿತ್ತು. 2019ರ ತನಕವೂ ಈ ಸ್ಲಾಟ್ ಬಗ್ಗೆ, ಅಲ್ಲಿ ಆಗಿರುವ ತಾರತಮ್ಯಗಳ ಬಗ್ಗೆ ಭಾರೀ ರಾಜಕೀಯ ಚರ್ಚೆ ನಡೆಯುತ್ತಿತ್ತು. ಈ ಬಾರಿ ಅದರ ಸದ್ದೇ ಇಲ್ಲ.
ತನ್ನ ಮೂರನೇ ಅವಧಿಗೆ ಹಾದಿ ತೆರೆಯಲಿರುವ ಚುನಾವಣೆಗೆ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಪ್ರಚಾರದ ಹೊಸದೊಂದು ಹಾದಿಯ ಪ್ರಯೋಗ ಮಾಡಿದ್ದಾರೆ. ಇದರ ಫಲವಾಗಿ, ದೂರದರ್ಶನ-AIRಗಳಲ್ಲಿ ಈ ಬಾರಿ, ರಾಜಕೀಯ ಪಕ್ಷಗಳ ಚುನಾವಣಾ ಪ್ರಚಾರವೇನಾದರೂ ನಡೆದಿತ್ತೇ ಎಂದು ಬ್ಯಾಟರಿ ಹಿಡಿದು ಹುಡುಕಬೇಕಾದ ಸ್ಥಿತಿ ಬಂದಿದೆ. ಭಾರತದ ಖಾಸಗಿ ಚಾನೆಲ್‌ಗಳು ಸೂರ್ಯನಿಗೇ ಟಾರ್ಚ್ ಹಿಡಿದುಬಿಟ್ಟಿವೆ!
ದೇಶದ ಬಹುತೇಕ ಮೇನ್‌ಸ್ಟ್ರೀಮ್ ಮಾಧ್ಯಮಗಳು ಇಂದು ದೇಶದ ಬೃಹತ್ ಉದ್ಯಮಪತಿಗಳ ಕೈಗೊಂಬೆಗಳಾಗಿವೆ ಮತ್ತು ಸರಕಾರಿ ಟೆಲಿವಿಷನ್/ರೇಡಿಯೊ ಚಾನೆಲ್‌ಗಳೂ ನಾಚುವ ಮಟ್ಟಕ್ಕೆ ಸರಕಾರದ ತುತ್ತೂರಿಗಳಾಗಿ ವರ್ತಿಸುತ್ತಿವೆ ಎಂಬುದೀಗ ಗುಟ್ಟಿನ ಸಂಗತಿಯೇ ಅಲ್ಲ. ಅದಕ್ಕಿಂತ ಹೆಚ್ಚಾಗಿ, ಅಲ್ಲಿನ ಬಹುತೇಕ ಪತ್ರಕರ್ತ ಗಢಣ ಇಂದು ಪ್ರಧಾನಮಂತ್ರಿಗಳ ‘ಅಭಿಮಾನಿ ಬಳಗ’ ಆಗಿ ಕುಳಿತುಬಿಟ್ಟಿದೆ. ಇಂತಹದೊಂದು ಅಭಿಮಾನಿಗಳ ಪಡೆ, ಈ ಬಾರಿ ಪ್ರಧಾನಮಂತ್ರಿಗಳ ಚುನಾವಣಾ ಪ್ರಚಾರದ ಜವಾಬ್ದಾರಿಯನ್ನು ಹೇಗೆ ಶಿರಸಾವಹಿಸಿ ನೆರವೇರಿಸಿಕೊಟ್ಟವು ಎಂಬುದನ್ನು ನೋಡುವ ಪ್ರಯತ್ನವಿದು.
ವಿದೇಶೀ ಪತ್ರಿಕಾಸಂಸ್ಥೆ ನ್ಯೂಸ್‌ವೀಕ್‌ಗೆ ಇದೇ ಎಪ್ರಿಲ್ ತಿಂಗಳಿನಲ್ಲಿ ನೀಡಿದ ಸಂದರ್ಶನದ ವೇಳೆ, ಪ್ರಧಾನಮಂತ್ರಿಯವರು ‘‘ಭಾರತದಲ್ಲಿ ಫೀಡ್‌ಬ್ಯಾಕ್ ಮೆಕ್ಯಾನಿಸಂ ಬಲಿಷ್ಠವಾಗಿರುವುದರಿಂದ, ಪ್ರಜಾತಂತ್ರ ಜೀವಂತವಾಗಿ ಮುನ್ನಡೆಯುತ್ತಿದೆ. ಇದರಲ್ಲಿ ಭಾರತದ ಮಾಧ್ಯಮಗಳ ಪಾತ್ರ ಬಲುದೊಡ್ಡದು. ಹಾಗಾಗಿ ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯ ಕುಗ್ಗುತ್ತಿದೆ ಎಂಬ ವರದಿಗಳೆಲ್ಲ ನಂಬಲರ್ಹವಲ್ಲ’’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಪ್ರಧಾನಮಂತ್ರಿ ಸರಿಯಾಗಿಯೇ ಹೇಳಿದ್ದಾರೆ. ಭಾರತದ ಮೇನ್‌ಸ್ಟ್ರೀಮ್ ಮಾಧ್ಯಮಗಳು ಪ್ರಧಾನಮಂತ್ರಿಯವರ ‘ಫೀಡ್‌ಬ್ಯಾಕ್’ ವ್ಯವಸ್ಥೆ ಮಾತ್ರವಲ್ಲದೇ ‘ರಕ್ಷಣಾ ವ್ಯವಸ್ಥೆ’ ಆಗಿಯೂ ಕಾರ್ಯ ನಿರ್ವಹಿಸುತ್ತಿವೆ. ಪತ್ರಿಕಾ ಸ್ವಾತಂತ್ರ್ಯವೇನಾದರೂ ಕುಗ್ಗಿದ್ದಿದ್ದರೆ ಅದು ಭಾರತದ ಪರ್ಯಾಯ ಮಾಧ್ಯಮಗಳದ್ದು. ಸದ್ಯಕ್ಕೆ ಅವು ಆಟಕ್ಕುಂಟು-ಲೆಕ್ಕಕ್ಕಿಲ್ಲ. ಪರ್ಯಾಯ ಮಾಧ್ಯಮಗಳ ಸತ್ವ ಪರೀಕ್ಷೆಯ ಫಲಿತಾಂಶ ಇನ್ನೆರಡು ದಿನಗಳಲ್ಲಿ (ಜೂನ್ 4) ಹೊರಬೀಳಲಿದೆ.
ಈ ಬಾರಿ ಆಡಳಿತ ಪಕ್ಷಕ್ಕಿಂತಲೂ ಹೆಚ್ಚು ಮುತುವರ್ಜಿಯಿಂದ ಮೋದಿಯವರ ಚುನಾವಣಾ ಪ್ರಚಾರ ನಡೆಸಿದ್ದು ಮೇನ್‌ಸ್ಟ್ರೀಮ್ ಮಾಧ್ಯಮಗಳು. ಈ ಚುನಾವಣೆಗೆ 20 ರಾಜ್ಯಗಳಲ್ಲಿ 150ಕ್ಕೂ ಮಿಕ್ಕಿ ಚುನಾವಣಾ ಪ್ರಚಾರ ಸಭೆಗಳನ್ನು, ರೋಡ್ ಶೋಗಳನ್ನು ನಡೆಸಿರುವ ನರೇಂದ್ರ ಮೋದಿಯವರು, ಕಳೆದ ಇಪ್ಪತ್ತೈದೂ ಚಿಲ್ಲರೆ ವರ್ಷಗಳ ತಮ್ಮ ರಾಜಕೀಯ ಜೀವನದಲ್ಲಿ ಮೇನ್‌ಸ್ಟ್ರೀಮ್ ಮಾಧ್ಯಮಗಳಿಗೆ ಕೊಟ್ಟಿರಬಹುದಾದ ಒಟ್ಟು ಸಂದರ್ಶನಗಳಿಗಿಂತ ಹೆಚ್ಚು ಸಂದರ್ಶನಗಳನ್ನು ಕಳೆದ 60 ದಿನಗಳಲ್ಲಿ ಕೊಟ್ಟಂತಿದೆ. ಬಹುತೇಕ ಸರಕಾರದ ಪರ ಪ್ರಚಾರವೇ ಆಗಿರುವ ಈ ಎಲ್ಲ ಸಂದರ್ಶನಗಳ ಟೈಮಿಂಗ್ ಮತ್ತು ಕಂಟೆಂಟ್ ಗಮನಿಸಿದರೆ, ಇದು ‘ಸುಯೋಜಿತ’ ಎಂಬುದು ಸ್ಪಷ್ಟ. ಪ್ರಧಾನಿ ಅವರನ್ನು ಹೊರತುಪಡಿಸಿದರೆ, ಇಂತಹ ಸಂದರ್ಶನಗಳನ್ನು ಸರಕಾರದ ಪರವಾಗಿ ನೀಡಿದವರ ಕಿರುಪಟ್ಟಿಯಲ್ಲಿ ಗೃಹಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೆಸರುಗಳು ಕಾಣಿಸುತ್ತವೆ. ಆದರೆ, ಈ ಬಾರಿ ಆಡಳಿತ ಪಕ್ಷದ ಮಟ್ಟಿಗೆ ಇದು, ಪ್ರಧಾನಿ ಮೋದಿ ಅವರ ಹೆಸರಲ್ಲೇ ನಡೆದ ಚುನಾವಣೆ ಆಗಿರುವುದರಿಂದ, ಈ ಬೆರಳೆಣಿಕೆಯ ಸಚಿವರ ಯಾವುದೇ ಸಂದರ್ಶನ ಎದ್ದು ಕಾಣಿಸಲಿಲ್ಲ. ಪ್ರಧಾನಿಯವರ ಮ್ಯಾರಥಾನ್ ಸಂದರ್ಶನಗಳ ಸರಣಿಯತ್ತ ಒಮ್ಮೆ ಗಮನ ಹರಿಸಿ:
ಚುನಾವಣೆ ಘೋಷಣೆಗೆ ಮುನ್ನ
ಫೆಬ್ರವರಿ 02: ನ್ಯೂಸ್ 9 ಗ್ಲೋಬಲ್ ಸಮಿಟ್
ಮಾರ್ಚ್ 16: ಇಂಡಿಯಾ ಟುಡೇ ಕಾನ್‌ಕ್ಲೇವ್
ಚುನಾವಣೆ ಘೋಷಣೆಯ ಬಳಿಕ
ಎಪ್ರಿಲ್ 15: ಎಎನ್‌ಐ ಸುದ್ದಿಸಂಸ್ಥೆ
ಚುನಾವಣೆ ಮೊದಲ ಹಂತ (ಎಪ್ರಿಲ್ 19)
ಎಪ್ರಿಲ್ 20: ಏಶ್ಯಾನೆಟ್ ಸಮೂಹ
ಚುನಾವಣೆ ಎರಡನೇ ಹಂತ (ಎಪ್ರಿಲ್ 26)
ಎಪ್ರಿಲ್ 29: ನ್ಯೂಸ್ 18
ಮೇ 02: ಟಿವಿ 9 ನೆಟ್‌ವರ್ಕ್
ಮೇ 06: ಟೈಮ್ಸ್ ನೌ
ಚುನಾವಣೆ ಮೂರನೇ ಹಂತ (ಮೇ 07)
ಮೇ 10: ರಿಪಬ್ಲಿಕ್ ಟಿವಿ
ಮೇ 12: ಹಿಂದೂಸ್ಥಾನ್ ಟೈಮ್ಸ್/ಲೋಕಮತ್
ಚುನಾವಣೆ ನಾಲ್ಕನೇ ಹಂತ (ಮೇ 13)
ಮೇ 13: ನ್ಯೂಸ್18/ಇಂಡಿಯಾ ಟಿವಿ/ ಆಜ್ ತಕ್/ಎನ್‌ಟಿವಿ/ದೈನಿಕ್ ಭಾಸ್ಕರ್
ಮೇ 15: ಟಿವಿ 9 ನೆಟ್‌ವರ್ಕ್
ಮೇ 16: ಆಜ್‌ತಕ್/ಪುಢಾರಿ ಟಿವಿ
ಮೇ 19: ಎನ್‌ಡಿಟಿವಿ/ಭಾರತ್ ಟಿವಿ/ನ್ಯೂಸ್ ನೇಷನ್
ಚುನಾವಣೆ ಐದನೇ ಹಂತ (ಮೇ 20)
ಮೇ 20: ಪಿಟಿಐ ಸುದ್ದಿಸಂಸ್ಥೆ/ಭಾರತ್ 24
ಮೇ 21: ನ್ಯೂಸ್ ಘಿ/ ನ್ಯೂಸ್ 24
ಮೇ 22: ಎಕನಾಮಿಕ್ ಟೈಮ್ಸ್/ ಭಾರತ್ ಸಮಾಚಾರ್/ಪಂಜಾಬ್ ಕೇಸರಿ/ಸಂವಾದ್
ಮೇ 23: ಎನ್‌ಬಿಟಿ/ಇಂಡಿಯಾ ಟಿವಿ/ದಿ ನ್ಯೂ ಇಂಡಿಯನ್
ಮೇ 24: ಎನ್‌ಡಿಟಿವಿ ಇಂಡಿಯಾ/ಸ್ಟೇಟ್ಸ್‌ಮನ್
ಚುನಾವಣೆ ಆರನೇ ಹಂತ (ಮೇ 25)
ಮೇ 25: ಡಿಡಿ ನ್ಯೂಸ್/ನ್ಯೂಸ್ 18
ಮೇ 27: IANS ಸುದ್ದಿಸಂಸ್ಥೆ /ದೈನಿಕ್ ಜಾಗರಣ್/ಟ್ರಿಬ್ಯೂನ್
ಮೇ 28: ಎಎನ್‌ಐ ಸುದ್ದಿಸಂಸ್ಥೆ/ನ್ಯೂಸ್ ನೇಷನ್/ಎಬಿಪಿ ನ್ಯೂಸ್/ಅಜಿತ್ ಸಮಾಚಾರ್
ಮೇ 29: OPEN ಮ್ಯಾಗಜಿನ್
ಚುನಾವಣೆ ಏಳನೇ ಹಂತ (ಜೂನ್ 01)
(ಗಮನಿಸಿ: ಈ ಪಟ್ಟಿಯಲ್ಲಿ ರೋಡ್ ಶೋ ವೇಳೆ ಕೊಟ್ಟ ಸ್ಪಾಟ್ ಸಂದರ್ಶನಗಳಿಲ್ಲ. ಎಲ್ಲವೂ ಸ್ಟುಡಿಯೋ ಸಂದರ್ಶನಗಳೇ)
ಈ ಸಂದರ್ಶನಗಳ ಮ್ಯಾರಥಾನ್ ಅನ್ನು ಸೂಕ್ಷ್ಮವಾಗಿ ಗಮನಿಸಿದರೆ, ಇದು ಎಲ್ಲಿ ತಕ್ಷಣ ಚುನಾವಣೆಗಳಿವೆಯೋ, ಆ ಪ್ರದೇಶದಲ್ಲಿ ಅಲ್ಲಿಗೆ ತಟ್ಟುವ ಸಂಗತಿಗಳನ್ನು ಎತ್ತಿಕೊಡುವ ‘ಕಾರ್ಪೆಟ್ ಬಾಂಬಿಂಗ್’ ಪ್ರಚಾರದ ಭಾಗ ಎಂಬುದು ಸ್ಪಷ್ಟವಾಗಿ ಕಾಣಿಸುತ್ತದೆ. ದಕ್ಷಿಣದ ಚುನಾವಣೆಗಳಿರುವಾಗ ಇಂಗ್ಲಿಷ್ ಚಾನೆಲ್‌ಗಳಾದರೆ, ಉತ್ತರದ ಚುನಾವಣೆಗಳಿಗೆ ಹಿಂದಿ ಪ್ರಾದೇಶಿಕ ಚಾನೆಲ್‌ಗಳು.
ಭಾರತದ ಚುನಾವಣಾ ಆಯೋಗ ಈ ರೀತಿಯ ಪ್ರಚಾರವನ್ನು ಹೇಗೆ ಪರಿಗಣಿಸಬಹುದು ಎಂಬುದು, ಈ ಚುನಾವಣೆಯಲ್ಲಿ ಆಯೋಗದ ನಡವಳಿಕೆಯ ಕಾರಣದಿಂದಾಗಿ, ಈಗ ಆಸಕ್ತಿಯ ಸರಕಾಗಿ ಉಳಿದಿಲ್ಲ. ಆದರೆ, ಇಂತಹದೊಂದು ಪೂರ್ವೋದಾಹರಣೆ, ಮುಂದಿನ ದಿನಗಳಲ್ಲಿ ರಾಜ್ಯಗಳಲ್ಲಿ ಮತ್ತು ಕೇಂದ್ರದಲ್ಲಿ ‘ಕಾಸಿಗಾಗಿ/ಲೇಸಿಗಾಗಿ ಸುದ್ದಿ’ಯ ಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸುವುದು ನಿಶ್ಚಿತ. ಪತ್ರಿಕಾ ‘ಉದ್ಯಮ’ಕ್ಕೆ ಹೊಸತೊಂದು ಮಾರುಕಟ್ಟೆ ಸಿಕ್ಕಿದಂತಾಗಿದೆ!
ಪ್ರಧಾನಿಯವರ ಈ ಎಲ್ಲ ಸಂದರ್ಶನಗಳ ಗುಣಮಟ್ಟದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಮೀಮ್‌ಗಳು, ರೀಲ್‌ಗಳು ಬಹಳಷ್ಟು ಹೇಳುತ್ತಿವೆ. 2007ರಲ್ಲಿ ಮೋದಿಯವರು ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ, ಅವರ (ಈಗ ಪ್ರಸಿದ್ಧವಾಗಿರುವ) ಸಂದರ್ಶನ ನಡೆಸಿದ್ದ ಕರಣ್ ಥಾಪರ್, ತಾನು ಪ್ರಧಾನಮಂತ್ರಿಗಳ ಸಂದರ್ಶನ ನಡೆಸಿದರೆ ಯಾವ ಪ್ರಶ್ನೆಗಳನ್ನು ಕೇಳುವೆನೆಂದು ಬಹಿರಂಗಪಡಿಸಿದ್ದೂ ಆಯಿತು. ಇನ್ನು ನೋಡಲು ಬಾಕಿ ಇರುವುದು, ಈ ಕಾರ್ಪೆಟ್ ಬಾಂಬಿಂಗ್ ಪ್ರಚಾರ, ಎಷ್ಟು ಸಂಸತ್ ಸ್ಥಾನಗಳನ್ನು ಗೆದ್ದು ಕೊಡಲಿದೆ ಎಂದು.
ಒಟ್ಟಿನಲ್ಲಿ, ಇಷ್ಟೆಲ್ಲ ಸಂದರ್ಶನಗಳ ಹೊರತಾಗಿಯೂ, ತನ್ನ ಎರಡು ಅವಧಿಗಳ ಆಡಳಿತದ ಉದ್ದಕ್ಕೂ, ಪ್ರಧಾನಿ ನರೇಂದ್ರ ಮೋದಿಯವರು ಒಂದೇ ಒಂದು ಪತ್ರಿಕಾಗೋಷ್ಠಿ ನಡೆಸಿ, ಹಾಜರಿರುವ ಪತ್ರಕರ್ತರ ಪ್ರಶ್ನೆಗಳಿಗೆ ಮುಕ್ತವಾಗಿ ಉತ್ತರಿಸಲಿಲ್ಲ ಎಂಬುದು ಈಗ ಚರಿತ್ರೆಯ ಭಾಗ.