ದುಡುಕ ಮನ್ನಿಸು ಪ್ರಭುವೆ
ದೇಶದ ಪ್ರಧಾನಿ ಹುದ್ದೆಯಲ್ಲಿರುವ ನಾಯಕರೊಬ್ಬರು, ಮತದಾರ ಪ್ರಭು ಇನ್ನಷ್ಟೇ ಕೊಡಬೇಕಾಗಿರುವ ತೀರ್ಮಾನವನ್ನು ನಗಣ್ಯ ಗೊಳಿಸಿ, ತಾನೇ ಮತ್ತೆ ಅಧಿಕಾರಕ್ಕೆ ಬರಲಿದ್ದೇನೆ ಎಂದು ಹೇಳಿಕೊಳ್ಳುವುದು, ಸಾರ್ವಜನಿಕವಾಗಿ ಸೌಜನ್ಯಯುತ ಅನ್ನಿಸಿಕೊಳ್ಳುವುದಿಲ್ಲ. ಒಂದು ವೇಳೆ ಈ ರೀತಿಯ ಮಾತುಗಳು ರಾಜಕೀಯ ತಂತ್ರಗಾರಿಕೆಯ ಭಾಗ ಎಂದೇ ಇಟ್ಟುಕೊಂಡರೂ, ಭಾರತೀಯ ರಿಸರ್ವ್ ಬ್ಯಾಂಕಿನಂತಹ ಘನತೆಯ ಜಾಗವೊಂದರಲ್ಲಿ ಈ ರೀತಿಯ ದುಡುಕು ಮಾತುಗಳು ಬರುವುದು ಸತ್ಸಂಪ್ರದಾಯ ಅಲ್ಲ. ಅದು ಆಗಬಾರದಿತ್ತು.
ಇದೇ ಎಪ್ರಿಲ್ 01ರಂದು ಭಾರತೀಯ ರಿಸರ್ವ್ ಬ್ಯಾಂಕ್ 90 ವರ್ಷಗಳನ್ನು ಪೂರೈಸಿತು. 1935ರಲ್ಲಿ ಆರಂಭಗೊಂಡ, ದೇಶದ ಈ ಮಹತ್ವದ ಸಂಸ್ಥೆಯ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಭಾರತದ ಪ್ರಧಾನಮಂತ್ರಿ ನರೇಂದ್ರಮೋದಿಯವರು, ತನ್ನ ಭಾಷಣದ ಕೊನೆಯಲ್ಲಿ, ‘‘ಈ ನೂರು ದಿನಗಳ ಕಾಲ ನಾನು ಚುನಾವಣೆಯಲ್ಲಿ ವ್ಯಸ್ತನಿರುತ್ತೇನೆ. ನಿಮ್ಮ ಬಳಿ (ಆರ್‌ಬಿಐ ಅಧಿಕಾರಿಗಳ ಬಳಿ) ಭರಪೂರ ಸಮಯವಿರುತ್ತದೆ. ಹಾಗಾಗಿ (ಆ ಸಮಯದಲ್ಲಿ) ಯೋಚನೆ ಮಾಡಿ ಇಟ್ಟುಕೊಳ್ಳಿ. ಶಪಥ ಸ್ವೀಕರಿಸಿದ (ನಗು.. ಚಪ್ಪಾಳೆ) ಮರುದಿನವೇ ನಿಮಗೆ ಭರ್ಜರಿ ಕೆಲಸ ಕಾದಿರುತ್ತದೆ’’ ಎಂದು ಹೇಳಿದರು. ಅವರ ಮಾತಿಗೆ ದೇಶದ ಹಣಕಾಸು ಸಚಿವರಾದಿಯಾಗಿ ವೇದಿಕೆಯ ಮೇಲಿದ್ದ ಎಲ್ಲರೂ ಮೆಚ್ಚುಗೆಯ ಚಪ್ಪಾಳೆ ತಟ್ಟಿದರು.
ಭಾರತದ ಪ್ರಜಾತಾಂತ್ರಿಕ ವ್ಯವಸ್ಥೆಯ ಆತ್ಮವಾಗಿರುವ ಸೇನಾಪಡೆ, ರಿಸರ್ವ್ ಬ್ಯಾಂಕ್, ಚುನಾವಣಾ ಆಯೋಗ, ಸಿಎಜಿ, ನ್ಯಾಯಾಲಯಗಳಂತಹ ಸಂಸ್ಥೆಗಳು ಸಾಂಪ್ರದಾಯಿಕವಾಗಿ ರಾಜಕೀಯದಿಂದ ಮಾರುದೂರ ಮತ್ತು ಆ ಸಂಸ್ಥೆಗಳಿಗೆ ಅವುಗಳದೇ ಆದ ಒಂದು ಘನತೆಯ ಚರಿತ್ರೆ ಇದೆ. ಎಂತೆಂತಹವರೆಲ್ಲ ಈ ದೇಶದ ಆಡಳಿತ ನಡೆಸಿ ಹೋದರೂ, ಈ ಆತ್ಮಗಳ ಘನತೆಗೆ ಮುಕ್ಕಾಗುವ ಸನ್ನಿವೇಶಗಳು ಎದುರಾಗಿರಲಿಲ್ಲ.
ಮೊನ್ನೆ ರಿಸರ್ವ್ ಬ್ಯಾಂಕಿನಲ್ಲಿ, ಚುನಾವಣಾಸನ್ನ ಪ್ರಧಾನಮಂತ್ರಿಯವರ ಭಾಷಣ ಅವಾಕ್ಕಾಗುವಂತೆ ಮಾಡಿತು. ನಮ್ಮ ಮಾಧ್ಯಮಗಳು ಒಂದೋ ಇದನ್ನು ಗಮನಿಸಿಲ್ಲ ಅಥವಾ ಗಮನಿಸಿಯೂ ಕುರುಡಾಗಿ ಉಳಿದಿವೆ.
ಎರಡು ಅವಧಿಗಳನ್ನು ಪೂರೈಸಿ, ಮೂರನೇ ಅವಧಿಗಾಗಿ ಮತದಾರ ಪ್ರಭುವಿನ ಎದುರು ಮತಯಾಚನೆ ಮಾಡಬೇಕಿರುವ ಜನಪ್ರತಿನಿಧಿಯಾಗಿ, ನರೇಂದ್ರ ಮೋದಿಯವರು ಈಗ ಬಹುದೂರವನ್ನು ಕ್ರಮಿಸಿದ್ದಾರೆ. 2014ರ ಮೇ 20ರಂದು, ಬಿಜೆಪಿ ಪಕ್ಷದ ಸಂಸದೀಯ ಘಟಕದ ನಾಯಕನ ಆಯ್ಕೆಗಾಗಿ ಸಂಸತ್ ಭವನದಲ್ಲಿ ಸಭೆ ನಡೆದಿತ್ತು. ಆ ಸಭೆಯಲ್ಲಿ ಪಾಲ್ಗೊಳ್ಳಲು, ಎನ್‌ಡಿಎ ಕಡೆಯಿಂದ ಪ್ರಧಾನಮಂತ್ರಿ ಅಭ್ಯರ್ಥಿ ಆಗಿ ಬಿಂಬಿತರಾಗಿದ್ದ ನರೇಂದ್ರ ದಾಮೋದರದಾಸ್ ಮೋದಿ ಅವರು ಮೊತ್ತಮೊದಲ ಬಾರಿಗೆ ಸಂಸತ್ ಭವನಕ್ಕೆ ಆಗಮಿಸಿದ್ದರು. ಅವರು ಭವನವನ್ನು ಪ್ರವೇಶಿಸುವ ಮುನ್ನ, ಜಗತ್ತಿನಾದ್ಯಂತದ ಕ್ಯಾಮರಾಗಳ ಪ್ರಖರ ಬೆಳಕಿನಲ್ಲಿ ಸಂಸತ್ತಿನ ಮೆಟ್ಟಿಲುಗಳಿಗೆ ಶಿರಮುಟ್ಟಿಸಿ ನಮಸ್ಕಾರ ಮಾಡಿದ್ದರು. ಆ ಬಳಿಕ ಮಾತನಾಡಿದ ನರೇಂದ್ರ ಮೋದಿಯವರು ತಾನು ‘ಪ್ರಜಾತಂತ್ರದ ದೇಗುಲಕ್ಕೆ’ ನಮಿಸಿದ್ದಾಗಿ ಹೇಳಿದ್ದರು. ಅದಾದ ಬಳಿಕ ಪ್ರಧಾನಿಯಾಗಿ ಮೊದಲ ಬಾರಿಗೆ ಕೆಂಪುಕೋಟೆಯಿಂದ ಭಾಷಣ ಮಾಡಿದ ಅವರು, ಭಾಷಣದ ಆರಂಭದಲ್ಲೇ, ತಾನು ದೇಶದ ‘ಪ್ರಧಾನ ಸೇವಕ’ ಎಂದು ಹೇಳಿಕೊಂಡಿದ್ದರು. ಅವರ ಈ ಸಾಂಕೇತಿಕತೆ ಅವರ ಸಮರ್ಥಕರಿಗೆ ಪುಳಕ ತಂದಿತ್ತು.
ಆದರೆ ಈಗ, ಮೂರನೇ ಅವಧಿಗೆ ಚುನಾವಣೆ ಎದುರಿಸುವ ಮುನ್ನ, ಅವರ ಸಾಂಕೇತಿಕತೆ ಹೊಸ ಮಜಲನ್ನು ತಲುಪಿದಂತಿದೆ. ಕಳೆದ ಆರು ತಿಂಗಳಿನಲ್ಲಿ ಕನಿಷ್ಠ ಆರು ಬಾರಿ ಅವರು ಮೂರನೇ ಅವಧಿಗೆ ತಾನು ಪುನಃ ಪ್ರಧಾನಮಂತ್ರಿಯಾಗಿ ದೇಶವನ್ನು ಮುನ್ನಡೆಸಲಿದ್ದೇನೆ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.
ಕಳೆದ ಜುಲೈ ತಿಂಗಳಿನಲ್ಲಿ, ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ತನಗೆ 2024ರ ಜುಲೈ ತಿಂಗಳಿನಲ್ಲಿ ನಡೆಯಲಿರುವ ಹಲವು ಕಾರ್ಯಕ್ರಮಗಳಲ್ಲಿ ದೇಶದ ಮುಖ್ಯಸ್ಥನಾಗಿ ಪಾಲ್ಗೊಳ್ಳಲು ಹಲವು ದೇಶಗಳಿಂದ ಆಹ್ವಾನಗಳು ಬಂದಿವೆ ಎಂದು ಹೇಳಿಕೊಂಡಿದ್ದರು.
2023 ಆಗಸ್ಟ್ 15ರಂದು ಕೆಂಪುಕೋಟೆಯಿಂದ ಸ್ವಾತಂತ್ರ್ಯ ದಿನ ದೇಶಕ್ಕೆ ಸಂದೇಶ ನೀಡುವಾಗಲೂ ಅವರು, ಮುಂದಿನ ವರ್ಷದ ಸ್ವಾತಂತ್ರ್ಯ ದಿನದಂದು (ಆಗಸ್ಟ್ 15, 2024) ದೇಶದ ಸಾಧನೆಗಳನ್ನು ಕೆಂಪುಕೋಟೆಯಿಂದ ಜನತೆಯ ಮುಂದಿಡಲು ತಾನೇ ಬರಲಿದ್ದೇನೆ ಎಂದು ಹೇಳಿಕೊಂಡಿದ್ದರು.
2024 ಜನವರಿ 31ರಂದು, ಸಂಸತ್ತಿನಲ್ಲಿ ಬಜೆಟ್ ಅಧಿವೇಶನದ ಮುನ್ನ ಮಾಧ್ಯಮಗಳಿಗೆ ಔಪಚಾರಿಕ ಸಂದೇಶ ನೀಡುವಾಗ, ಈ ಅಧಿವೇಶನದಲ್ಲಿ ಓಟ್ ಆನ್ ಅಕೌಂಟ್ ಮಂಡಿಸುತ್ತಿರುವುದಾಗಿಯೂ, ಚುನಾವಣೆಗಳ ಬಳಿಕ ಪೂರ್ಣ ಪ್ರಮಾಣದ ಬಜೆಟನ್ನು ತನ್ನ ನೇತೃತ್ವದ ಸರಕಾರವೇ ಮಂಡಿಸಲಿದೆ ಎಂದೂ ಹೇಳಿದ್ದರು.
ಇದೇ ವರ್ಷ ಮಾರ್ಚ್ 04ರಂದು, ಪ್ರಧಾನಮಂತ್ರಿಗಳು ತಮ್ಮ ಸಚಿವ ಸಂಪುಟದ ಸದಸ್ಯರ ಸಭೆ ಕರೆದು, ತನ್ನ ಮೂರನೇ ಅವಧಿಗೆ (ಮೋದಿ 3.0) ಮೊದಲ ನೂರು ದಿನಗಳಲ್ಲಿ ಅನುಷ್ಠಾನಗೊಳಿಸಲು ಬೇಕಾದ ಕಾರ್ಯಕ್ರಮಗಳನ್ನು ರೂಪಿಸಲು ಮತ್ತು 2047ರ ‘ವಿಕಸಿತ ಭಾರತದ’ ಕನಸು ನನಸು ಮಾಡುವ ನಿಟ್ಟಿನಲ್ಲಿ ಕೆಲಸ ಆರಂಭಿಸಲು ಸೂಚಿಸಿದ್ದರು.
ಇದೇ ಮಾರ್ಚ್ 17ರಂದು, ‘ಇಂಡಿಯಾ ಟುಡೇ’ ಕಾನ್‌ಕ್ಲೇವ್‌ನಲ್ಲಿ ಮಾತನಾಡಿದ ಪ್ರಧಾನಮಂತ್ರಿಗಳು, ತಮ್ಮದೇ ಸರಕಾರ ಮೂರನೇ ಅವಧಿಗೆ ಅಧಿಕಾರಕ್ಕೆ ಮರಳಲಿದೆ ಎಂದು ಪುನರುಚ್ಚರಿಸಿದ್ದರು.
ಖಾಸಗಿ ಕಾರ್ಯಕ್ರಮಗಳಲ್ಲಿ, ಪಕ್ಷದ ಕಾರ್ಯಕ್ರಮಗಳಲ್ಲಿ, ರಾಜಕೀಯದ/ಚುನಾವಣಾ ಪ್ರಚಾರ ಸಭೆಗಳಲ್ಲಿ ಇಂತಹ ಮಾತುಗಳು ಸಹಜ. ತಂಡವೊಂದರ ನಾಯಕನಾಗಿ, ತಂಡದ ಸದಸ್ಯರನ್ನು ಪ್ರೇರಿಸುವ ಪ್ರಯತ್ನವಾಗಿಯೂ ಅದನ್ನು ಪರಿಗಣಿಸಬಹುದು. ಅದಲ್ಲ ಎಂದಾದರೆ, ಚುನಾವಣೆ ಪ್ರಚಾರ/ಗೆಲುವಿನ ತಂತ್ರದ ಭಾಗವಾಗಿಯೂ ಈ ಮಾತುಗಳನ್ನು ಹರಿಬಿಟ್ಟಿರಬಹುದು. ಅದರಲ್ಲಿ ತಪ್ಪೇನಿಲ್ಲ. ಆದರೆ ಈ ಮಾತುಗಳಿಗೆ ಇನ್ನೊಂದು ಮಗ್ಗುಲು ಕೂಡ ಇದೆ ಎಂಬುದನ್ನು, ಪ್ರಜಾತಂತ್ರ ವ್ಯವಸ್ಥೆಯೊಂದರಲ್ಲಿ ಸಂವಿಧಾನದ ಚೌಕಟ್ಟಿನೊಳಗೆ ಕೆಲಸ ಮಾಡುವ ಪ್ರತಿಜ್ಞೆ ಸ್ವೀಕರಿಸಿರುವ ಜನಪ್ರತಿನಿಧಿಗಳೆನ್ನಿಸಿಕೊಂಡವರು ಮರೆಯಬಾರದು.
ತೀರಾ ಇತ್ತೀಚೆಗಿನ ತನಕವೂ ರಾಜಕಾರಣಿಗಳು ತಮ್ಮ ಅಗ್ನಿಪರೀಕ್ಷೆ ಎಂದು ಪರಿಗಣಿಸುತ್ತಿದ್ದುದು, ಜನತಾ ಜನಾರ್ದನರ ನ್ಯಾಯಾಲಯದ ತೀರ್ಪನ್ನು; ಐದು ವರ್ಷಗಳಿಗೊಮ್ಮೆ ಮತದಾರ ಪ್ರಭು ಕೊಡುವ ಜನಮತ/ಆಶೀರ್ವಾದವನ್ನು. ಹಾಗಾಗಿ ಸಕ್ರಿಯ ಪ್ರಜಾಪ್ರಭುತ್ವವೊಂದರಲ್ಲಿ ಮತದಾರನೇ ಪ್ರಭು. ಬೆನ್ನಹಿಂದಿನ ಕುಟಿಲ ರಾಜಕಾರಣಗಳೇನೇ ಇದ್ದರೂ, ಬಹಿರಂಗದ ಕನಿಷ್ಠ ಸೌಜನ್ಯಕ್ಕಾಗಿಯಾದರೂ ರಾಜಕಾರಣಿಗಳು ಇದನ್ನು ಒಪ್ಪುತ್ತಿದ್ದರು. ಮತದಾರರ ತೀರ್ಮಾನ ಸರ್ವೋಚ್ಚ ಎಂಬ ಮಾತು ಎಷ್ಟೇ ಔಪಚಾರಿಕವಾದುದಾದರೂ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಕೊಡುವ ಗೌರವ ಅದಾಗಿತ್ತು. ಸಂವಿಧಾನದ 326ನೇ ವಿಧಿ ಪ್ರಜೆಗಳಿಗೆ ಮತದಾನದ ಹಕ್ಕು ನೀಡಿದೆ. ಮಾನವ ಹಕ್ಕುಗಳ ಜಾಗತಿಕ ಘೋಷಣೆ(1948) ಮತ್ತು ಅಂತರ್‌ರಾಷ್ಟ್ರೀಯ ನಾಗರಿಕ ಮತ್ತು ರಾಜಕೀಯ ಹಕ್ಕುಗಳ ಒಪ್ಪಂದ(1966)ಗಳು ಕೂಡ ಮತದಾನದ ಹಕ್ಕನ್ನು, ಅದು ಕೇವಲ ಸವಲತ್ತು ಅಲ್ಲ, ಬದಲಾಗಿ ಮೂಲಭೂತ ಮಾನವ ಹಕ್ಕು ಎಂದು ಪರಿಗಣಿಸಿವೆ. ಇದನ್ನು ಬೈಪಾಸ್ ಮಾಡುವ ಯಾವುದೇ ಪ್ರಯತ್ನಗಳನ್ನು ಸಂಶಯದಿಂದಲೇ ನೋಡಬೇಕಾದುದು ದೇಶದ ಬಗ್ಗೆ, ಪ್ರಜಾತಂತ್ರ ವ್ಯವಸ್ಥೆಯ ಬಗ್ಗೆ ಕಾಳಜಿ ಹೊಂದಿರುವ ಎಲ್ಲರ ಕರ್ತವ್ಯ.
ದೇಶದ ಪ್ರಧಾನಿ ಹುದ್ದೆಯಲ್ಲಿರುವ ನಾಯಕರೊಬ್ಬರು, ಮತದಾರ ಪ್ರಭು ಇನ್ನಷ್ಟೇ ಕೊಡಬೇಕಾಗಿರುವ ತೀರ್ಮಾನವನ್ನು ನಗಣ್ಯ ಗೊಳಿಸಿ, ತಾನೇ ಮತ್ತೆ ಅಧಿಕಾರಕ್ಕೆ ಬರಲಿದ್ದೇನೆ ಎಂದು ಹೇಳಿಕೊಳ್ಳುವುದು, ಸಾರ್ವಜನಿಕವಾಗಿ ಸೌಜನ್ಯಯುತ ಅನ್ನಿಸಿಕೊಳ್ಳುವುದಿಲ್ಲ. ಒಂದು ವೇಳೆ ಈ ರೀತಿಯ ಮಾತುಗಳು ರಾಜಕೀಯ ತಂತ್ರಗಾರಿಕೆಯ ಭಾಗ ಎಂದೇ ಇಟ್ಟುಕೊಂಡರೂ, ಭಾರತೀಯ ರಿಸರ್ವ್ ಬ್ಯಾಂಕಿನಂತಹ ಘನತೆಯ ಜಾಗವೊಂದರಲ್ಲಿ ಈ ರೀತಿಯ ದುಡುಕು ಮಾತುಗಳು ಬರುವುದು ಸತ್ಸಂಪ್ರದಾಯ ಅಲ್ಲ. ಅದು ಆಗಬಾರದಿತ್ತು.
(ರಿಸರ್ವ್ ಬ್ಯಾಂಕ್ ಕಾರ್ಯಕ್ರಮದ ವೀಡಿಯೊ ಇಲ್ಲಿದೆ: https://www.youtube.com/watch?v=-mG21cNAB-w)