ನಾವು ಮಾಡಿದರೆ ಸೇವೆ; ನೀವೆಲ್ಲ ಮಾಡುವುದು ದ್ರೋಹ
ಕಳೆದ 10 ವರ್ಷಗಳಲ್ಲಿ ತಮ್ಮ ಸಮರ್ಥಕರ ಮೂಲಕ ವ್ಯವಸ್ಥಿತವಾಗಿ ‘Occupy their space’ ಆಂದೋಲನ ನಿರತವಾಗಿರುವ ಸಂಘಪರಿವಾರವು ಸಾಹಿತ್ಯ, ಕಲೆ, ಸಂಸ್ಕೃತಿ, ಮಾಧ್ಯಮ, ಚರಿತ್ರೆ, ಶಿಕ್ಷಣ, ವ್ಯವಹಾರ ಮಾತ್ರವಲ್ಲದೆ ಈಗ ಥಿಂಕ್ ಟ್ಯಾಂಕ್, ಸ್ವಯಂಸೇವೆಗಳಂತಹ ರಂಗಗಳಲ್ಲೂ ತಮ್ಮವರನ್ನು ಭರ್ತಿಮಾಡಿ, ಆ ಜಾಗದಿಂದ ಅವರ ಚಿಂತನೆಗಳನ್ನು ಒಪ್ಪದವರನ್ನು ಬದಿಗೆ ಸರಿಸುವ ಯಾವತ್ತೂ ಪ್ರಯತ್ನಗಳಿಗೆ ವೇಗ ನೀಡುತ್ತಿದೆ. ಬೇರೆಲ್ಲ ರಂಗಗಳಲ್ಲಿ ಮಾಡಿದಂತೆ ಎನ್‌ಜಿಒಗಳಿಗೆ ಕೂಡ, ‘‘ಅವರು ದೇಶದ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಕಾರ್ಯಾಚರಿಸುವವರು’’ ಎಂಬ ನೆರೇಟಿವ್ ಅನ್ನು ಎಚ್ಚರಿಕೆಯಿಂದ ಕಟ್ಟಲಾಗುತ್ತಿದೆ.
ಇದು ನಾಲ್ಕು ಚುಕ್ಕಿಗಳ ರಂಗೋಲಿ. ಈ ಚುಕ್ಕಿಗಳನ್ನು ನಾನಿಲ್ಲಿ ಇರಿಸುತ್ತೇನೆ. ಅವುಗಳನ್ನು ಒಟ್ಟು ಸೇರಿಸಿದಾಗ ಬರುವ ರಂಗೋಲಿಯ ಚಿತ್ರವನ್ನು ಕೊನೆಯಲ್ಲಿ ಅಂದಾಜಿಸಿಕೊಳ್ಳುವುದು ಸುಲಭವಾಗುತ್ತದೆ ನೋಡಿ.
ಚುಕ್ಕಿ-1
ಕೆಲವು ಸ್ವಯಂಸೇವಾ ಸಂಸ್ಥೆಗಳು (ಎನ್‌ಜಿಒ) ವಿದೇಶೀ ಮೂಲಗಳಿಂದ ಅಪಾರ ಹಣ ಪಡೆದು, ಆ ಹಣವನ್ನು ದೇಶದೊಳಗೆ ಅಭಿವೃದ್ಧಿ ಯೋಜನೆಗಳನ್ನು (ಪರಿಸರ, ಇತ್ಯಾದಿ ಕಾರಣ ಕೊಟ್ಟು) ವಿರೋಧಿಸುವುದಕ್ಕೆ ಚಿತಾವಣೆಗಾಗಿ ವ್ಯಯಿಸುವ ಮೂಲಕ ದೇಶದ ಆರ್ಥಿಕ ಹಿತಾಸಕ್ತಿಗಳಿಗೆ ವಿರುದ್ಧವಾಗಿ ವರ್ತಿಸುತ್ತಿವೆ ಎಂಬ ಗಂಭೀರ ಸ್ವರೂಪದ ಆಪಾದನೆಯನ್ನು ಭಾರತದ ಆದಾಯತೆರಿಗೆ ಇಲಾಖೆಯು ಸೋಮವಾರ (ಎಪ್ರಿಲ್ 15) ಸುಪ್ರೀಂ ಕೋರ್ಟಿನಲ್ಲಿ ಸಲ್ಲಿಸಿರುವ ಅಫಿಡವಿಟ್‌ನಲ್ಲಿ (ಎನ್ವಿರಾನಿಕ್ಸ್ ಟ್ರಸ್ಟ್ v/s ಆದಾಯ ತೆರಿಗೆ ಡೆಪ್ಯುಟಿ ಕಮಿಷನರ್ ಪ್ರಕರಣ) ಮಾಡಿದೆ.
ಈಗಾಗಲೇ ವಿದೇಶದಿಂದ ನಿಧಿ ಪಡೆಯಲು FCRA ಅನುಮತಿ ನಿರಾಕೃತವಾಗಿರುವ ಎನ್ವಿರಾನಿಕ್ಸ್ ಟ್ರಸ್ಟ್, ಆಕ್ಸ್‌ಫಾಮ್ ಇಂಡಿಯಾ, CPR, LIFE, CISSD ಮೊದಲಾದ ದೇಶದ ಪ್ರಮುಖ, ಸಕ್ರಿಯ ಎನ್‌ಜಿಒಗಳನ್ನು ನ್ಯಾ. ಸಂಜೀವ್ ಖನ್ನಾ, ನ್ಯಾ. ದೀಪಂಕರ್ ದತ್ತಾ ಅವರ ನ್ಯಾಯಪೀಠದ ಎದುರು ಸಲ್ಲಿಸ ಲಾಗಿರುವ ಅಫಿಡವಿಟ್‌ನಲ್ಲಿ ಹೆಸರಿಸಲಾಗಿದ್ದು, ಈ ಎನ್‌ಜಿಒಗಳ ಮುಖ್ಯಸ್ಥರ ನಡುವೆ ಸಂಬಂಧಗಳಿವೆ. ಅವರು ತಮ್ಮ ಸಂಸ್ಥೆಗಳ ವ್ಯಾಪ್ತಿ ಮೀರಿ, ಪರಿಸರ ರಕ್ಷಣೆಯ ಹೆಸರಿನಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿ ಆಗುತ್ತಿ ದ್ದಾರೆ ಎಂದು ಅಫಿಡವಿಟ್‌ನಲ್ಲಿ ಹೇಳಲಾಗಿದೆ.
ಚುಕ್ಕಿ-2
2012ರಿಂದೀಚೆಗೆ ದೇಶದಲ್ಲಿ 20,721 ಎನ್‌ಜಿಒಗಳ ಈಅಖಂ ಅನುಮತಿ ರದ್ದಾಗಿದೆ. ನರೇಂದ್ರ ಮೋದಿಯವರ ಸರಕಾರ ಆಡಳಿತಕ್ಕೆ ಬಂದ ಬಳಿಕವಂತೂ ಇದು ಕ್ಷಿಪ್ರಗತಿ ಪಡೆದುಕೊಂಡಿದೆ.
2014ರಲ್ಲಿ 59; 2015ರಲ್ಲಿ 10,002; 2016ರಲ್ಲಿ 06; 2017ರಲ್ಲಿ 4,863; 2018ರಲ್ಲಿ 01; 2019ರಲ್ಲಿ 1,839; 2020ರಲ್ಲಿ 0; 2021ರಲ್ಲಿ 03; 2022ರಲ್ಲಿ 15 ಮತ್ತು 2023ರಲ್ಲಿ 04 ಎನ್‌ಜಿಒಗಳಿಗೆ ಕೇಂದ್ರ ಗೃಹಖಾತೆ ಈಅಖಂ ಅನುಮತಿ ರದ್ದುಮಾಡಿದೆ. ಆದರೆ, 2019-20ರಿಂದ 2021-22ರ ನಡುವೆ 3 ವರ್ಷಗಳಲ್ಲಿ, 13,520 ಎನ್‌ಜಿಒಗಳಿಗೆ 55,741.51 ಕೋಟಿ ರೂ.ಗಳ ವಿದೇಶಿ ಧನಸಹಾಯ ಬಂದಿದೆ ಎಂದು ಸಂಸತ್ತಿನಲ್ಲಿ ಸರಕಾರ ಹೇಳಿದೆ. ಹೀಗೆ ಅನುಮತಿ ರದ್ದಾದ ಎನ್‌ಜಿಒಗಳಲ್ಲಿ, ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತುತ್ತಿರುವ ಅPಖ, ಐIಈಇ, ಅಂಖಇ, ಔxಜಿಚಿm ಇತ್ಯಾದಿ ಹಲವು ಪ್ರಮುಖ ಎನ್‌ಜಿಒಗಳು, ಥಿಂಕ್-ಟ್ಯಾಂಕ್‌ಗಳು ಮಾತ್ರವಲ್ಲದೆ, ರಾಜೀವ್ ಗಾಂಧಿ ಫೌಂಡೇಷನ್‌ನಂತಹ ಕಾಂಗ್ರೆಸ್ ಪಕ್ಷದ ಪರ ಇರುವವರಿಗೆ ಸೇರಿದ ಎನ್‌ಜಿಒಗಳು ಕೂಡ ಸೇರಿವೆ.
ಚುಕ್ಕಿ-3
ಹಿಂಡನ್‌ಬರ್ಗ್ ಗದ್ದಲದ ಬಳಿಕ ಮುಕ್ಕಾಗಿರುವ ತನ್ನ ಇಮೇಜನ್ನು ಮತ್ತೆ ಬೆಳಗಿಕೊಳ್ಳುವ ಹಾದಿಯಲ್ಲಿರುವ ಅದಾನಿ ಬಳಗವು ಬೃಹತ್ ಗಾತ್ರದ ಥಿಂಕ್-ಟ್ಯಾಂಕ್ ಒಂದನ್ನು ಸ್ಥಾಪಿಸಲು ಉದ್ದೇಶಿಸಿರುವುದಾಗಿ ‘ಫೈನಾನ್ಷಿಯಲ್ ಟೈಮ್ಸ್’, ಮೊನ್ನೆ ಮಂಗಳವಾರ ವರದಿ ಮಾಡಿದೆ. ‘ಚಿಂತನ್ ರೀಸರ್ಚ್ ಫೌಂಡೇಷನ್’ ಎಂಬ ಹೆಸರಿನ ಈ ಥಿಂಕ್-ಟ್ಯಾಂಕ್ ‘ಗ್ಲೋಬಲ್ ಸೌತ್’ಗೆ ಆದ್ಯತೆ ನೀಡುವ ಹಾಲೀ ಸರಕಾರದ ಯೋಚನೆಗಳಿಗೆ ಪೂರಕವಾಗಿ ಕಾರ್ಯಾಚರಿಸಲಿದ್ದು, ಜಗತ್ತಿನಾದ್ಯಂತ ಪ್ರಮುಖ ನಗರಗಳಲ್ಲಿ ಕಚೇರಿ ಹೊಂದಲಿದೆ. ಹವಾಮಾನ ಬದಲಾವಣೆ, ಹೊಸ ಇಂಧನ ಮೂಲಗಳ ಚಿಂತನೆ, ಅಂತರ್‌ರಾಷ್ಟ್ರೀಯ ಜಿಯೊಪೊಲಿಟಿಕ್ಸ್ ಮತ್ತಿತರ ವಿಚಾರಗಳ ಬಗ್ಗೆ ಗಮನ ಹರಿಸಲಿರುವ ಈ ಥಿಂಕ್-ಟ್ಯಾಂಕಿಗೆ ಪರಿಣತರ ನೇಮಕಾತಿ ಪ್ರಕ್ರಿಯೆ ಆರಂಭಗೊಂಡಿದ್ದು, 100 ಕೋಟಿ ರೂ.ಗಳ ಬೀಜಧನವನ್ನು ಅದಾನಿ ಬಳಗ ಇದಕ್ಕಾಗಿ ತೆಗೆದಿರಿಸಿರುವುದಾಗಿ ‘ಫೈನಾನ್ಷಿಯಲ್ ಟೈಮ್ಸ್’ ವರದಿ ವಿವರಿಸಿದೆ.
ಅಂಬಾನಿಗಳಿಗೆ ಸೇರಿದ ‘ಅಬ್ಸರ್ವರ್ ರೀಸರ್ಚ್ ಫೌಂಡೇಷನ್’ ಈಗಾಗಲೇ ಕಾರ್ಯಾಚರಣೆ ಆರಂಭಿಸಿದ್ದು, ಭಾರತದ ವಿದೇಶಾಂಗ ಸಚಿವಾಲಯದ ಸಹಯೋಗದಲ್ಲಿ ‘ರೈಸಿನಾ ಡೈಲಾಗ್’ ಫೋರಂ ಮೂಲಕ ಜಿಯೊಪೊಲಿಟಿಕಲ್ ಸಂವಾದಗಳಿಗೆ ವೇದಿಕೆ ಒದಗಿಸುತ್ತಿದೆ.
ಚುಕ್ಕಿ-4
ಹಾಲೀ ನರೇಂದ್ರ ಮೋದಿಯವರ ಸರಕಾರ ಬಂದ ಬಳಿಕ ದೇಶದಿಂದ ಹೊರಗೆ ಕಾರ್ಯಾಚರಿಸುವ ಸಂಘ ಪರಿವಾರದ ಪರ ಸಹಾನುಭೂತಿ ಇರುವ ಸಂಸ್ಥೆಗಳು ಮತ್ತು ಸಹಸಂಸ್ಥೆಗಳು ನಿಧಿ ಸಂಗ್ರಹಕ್ಕೆ ಸಂಬಂಧಿಸಿ ಬಹಳ ಚುರುಕಾಗಿವೆ. ವಿದೇಶದಿಂದ ಹರಿದು ಬರುವ ಸಹಾಯ ನಿಧಿಗಳನ್ನು ತಮಗೆ ಬೇಕಾದಂತೆ ಚಾನಲೈಸ್ ಮಾಡಿಕೊಳ್ಳಲು ಹಾದಿಯನ್ನು ಅಲ್ಲಿ ಕೋವಿಡ್ ಕಾಲದಲ್ಲಿ ಸುಗಮಗೊಳಿಸಿಕೊಳ್ಳಲಾಗಿದೆ.
ತನ್ನ ಚಿಂತನೆಗಳ ಪರವಾಗಿರುವ ‘ಸೇವಾ ಇಂಟರ್‌ನ್ಯಾಷನಲ್’ ನಂತಹ ಎನ್‌ಜಿಒಗಳಿಂದ ಜಗತ್ತಿನಾದ್ಯಂತ ಇರುವ ಶಾಖೆಗಳ ಮೂಲಕ, ಅಪಾರ ಪ್ರಮಾಣದ ಹಣವನ್ನು ಸಂಘ ಪರಿವಾರದ ಸಹಸಂಸ್ಥೆಗಳಿಗೆ ಪಡೆಯಲಾಗುತ್ತಿದೆ. ಆ ವಿದೇಶಿ ಸಂಸ್ಥೆಗಳ ವಾರ್ಷಿಕ ಲೆಕ್ಕಪತ್ರಗಳಲ್ಲಿ ಈ ಬಗ್ಗೆ ವಿವರಗಳು ಲಭ್ಯವಿವೆ. ಸಣ್ಣ ಉದಾಹರಣೆ ಬೇಕೆಂದರೆ, ಸೇವಾ ಇಂಟರ್‌ನ್ಯಾಷನಲ್ ಸಂಸ್ಥೆ 2021-22ರಲ್ಲಿ 108.22 ಕೋಟಿ ರೂ. ಮತ್ತು 2022-23ನೇ ಸಾಲಿನಲ್ಲಿ 24.79 ಕೋಟಿ ರೂ. ಒಟ್ಟು ದೇಣಿಗೆ ಪಡೆದಿದೆ. ಅದೇ ಸಂಸ್ಥೆಯ ಅಮೆರಿಕ ಘಟಕ ವೊಂದೇ 2022ನೇ ಸಾಲಿನಲ್ಲಿ ಭಾರತಕ್ಕೆ ಸುಮಾರು 45 ಕೋಟಿ ರೂ. ಗಳನ್ನು ತನ್ನ ಚಟುವಟಿಕೆಗಳಿಗಾಗಿ ವ್ಯಯ ಮಾಡಿದೆ. ಆ ಸಂಸ್ಥೆಯ ಅಮೆರಿಕದ ಒಟ್ಟು ವಾರ್ಷಿಕ ಆದಾಯ, ಸುಮಾರು 75 ಕೋಟಿ ರೂ. ಈಗ ಜಗತ್ತಿನಾದ್ಯಂತ ಇರುವ ಪರಿವಾರದ ಈ ಸಹಯೋಗಿ ಸಂಸ್ಥೆಗಳ ಒಟ್ಟು ಆದಾಯ ಲೆಕ್ಕಾಚಾರ ಮಾಡಿದರೆ, ದೇಶಕ್ಕೆ ಕಳೆದ ಮೂರು ವರ್ಷಗಳಲ್ಲಿ ಬಂದಿರುವ ವಿದೇಶಿ ಸಹಾಯ ನಿಧಿಗಳ ಪೈಕಿ ಅರ್ಧಕ್ಕಿಂತ ಹೆಚ್ಚು ಪಾಲು, ಈ ಸಂಸ್ಥೆ ಗಳದೇ ಆಗಿರುತ್ತದೆ ಎಂಬುದರಲ್ಲಿ ಸಂಶಯ ಇಲ್ಲ.
ರಂಗೋಲಿ
ಈಗ, ಈ ನಾಲ್ಕು ಚುಕ್ಕಿಗಳನ್ನು ಸೇರಿಸಿ ಮೂಡಿರುವ ರಂಗೋಲಿ ಏನು ಹೇಳುತ್ತಿದೆ ಎಂದರೆ, ಕಳೆದ 10 ವರ್ಷಗಳಲ್ಲಿ ತಮ್ಮ ಸಮರ್ಥಕರ ಮೂಲಕ ವ್ಯವಸ್ಥಿತವಾಗಿ ‘Occupy their space’ ಆಂದೋಲನ ನಿರತವಾಗಿರುವ ಸಂಘಪರಿವಾರವು ಸಾಹಿತ್ಯ, ಕಲೆ, ಸಂಸ್ಕೃತಿ, ಮಾಧ್ಯಮ, ಚರಿತ್ರೆ, ಶಿಕ್ಷಣ, ವ್ಯವಹಾರ ಮಾತ್ರವಲ್ಲದೆ ಈಗ ಥಿಂಕ್ ಟ್ಯಾಂಕ್, ಸ್ವಯಂಸೇವೆಗಳಂತಹ ರಂಗಗಳಲ್ಲೂ ತಮ್ಮವರನ್ನು ಭರ್ತಿಮಾಡಿ, ಆ ಜಾಗದಿಂದ ಅವರ ಚಿಂತನೆಗಳನ್ನು ಒಪ್ಪದವರನ್ನು ಬದಿಗೆ ಸರಿಸುವ ಯಾವತ್ತೂ ಪ್ರಯತ್ನಗಳಿಗೆ ವೇಗ ನೀಡುತ್ತಿದೆ. ಬೇರೆಲ್ಲ ರಂಗಗಳಲ್ಲಿ ಮಾಡಿದಂತೆ ಎನ್‌ಜಿಒಗಳಿಗೆ ಕೂಡ, ‘‘ಅವರು ದೇಶದ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಕಾರ್ಯಾಚರಿಸುವವರು’’ ಎಂಬ ನೆರೇಟಿವ್ ಅನ್ನು ಎಚ್ಚರಿಕೆಯಿಂದ ಕಟ್ಟಲಾಗುತ್ತಿದೆ. ಮೊನ್ನೆ ಸುಪ್ರೀಂ ಕೋರ್ಟಿನಲ್ಲಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನ್ಯಾಯಪೀಠದ ಎದುರು ಸರಕಾರದ ಪರವಾಗಿ ಸಲ್ಲಿಸಿದ ಅಫಿಡವಿಟ್ ಕೂಡ ಇಂತಹದೇ ಸುಸಂರಚಿತ ‘ನೆರೇಟಿವ್ ಕಟ್ಟುವ’ ವ್ಯೂಹದ ಭಾಗವಾಗಿರಬಹುದು.