ಟೋ(ಕೋ)ಲು ಕೊಟ್ಟು ಪೆಟ್ಟು ತಿನ್ನಿ!

ಸರಕಾರಗಳು ಇರುವುದೇ ತೆರಿಗೆ ವಿಧಿಸುವುದಕ್ಕಾದ್ದರಿಂದ, ಒಂದಲ್ಲ ಒಂದು ಹಾದಿಯಲ್ಲಿ ಅವು ತೆರಿಗೆ ವಿಧಿಸುತ್ತವೆ. ಆದರೆ, ಅದನ್ನೂ ದಾಟಿ, ಪ್ರಜೆಗಳ ಖಾಸಗಿ ಬದುಕಿನ ಮೇಲೆ ನಿಗಾ ಇರಿಸುವಂತಹ ಈ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದು ಮತ್ತು ತನ್ನ ಉದ್ದೇಶಗಳನ್ನು ಪಾರದರ್ಶಕಗೊಳಿಸಿಕೊಳ್ಳದೆ ಸರಕಾರ ಈ ವ್ಯವಸ್ಥೆಯನ್ನು ಜಾರಿಗೆ ತರುವುದು ಅಪೇಕ್ಷಿತವಲ್ಲ. ಇಂತಹ ಬೆಳವಣಿಗೆಗಳನ್ನು ಪಕ್ಷ ರಾಜಕೀಯ ಮೀರಿ ಪ್ರಶ್ನಿಸಬೇಕಾದದ್ದು ಅನಿವಾರ್ಯ.

Update: 2024-02-24 06:11 GMT

Photo: freepik

‘‘ಕಳೆದ ವರ್ಷದಲ್ಲಿ (2023) ದೇಶದ ಹೆದ್ದಾರಿಗಳ ಟೋಲ್ ಪ್ಲಾಝಾಗಳಲ್ಲಿ ಸಂಗ್ರಹವಾದ ಒಟ್ಟು ಮೊತ್ತ 48,000 ಕೋಟಿ ರೂ.ಗಳಾಗಿದ್ದು, ಅದು ಇನ್ನು ಕೇವಲ 2-3 ವರ್ಷಗಳಲ್ಲಿ 1.40ಲಕ್ಷ ಕೋಟಿ ರೂ.ಗಳಿಗೆ ಏರಲಿದೆ.’’

***

‘‘ಟೋಲ್ ಪ್ಲಾಝಾಗಳಲ್ಲಿ ಉಂಟಾಗುತ್ತಿರುವ ಅನಗತ್ಯ ವಾಹನ ದಟ್ಟಣೆ ನಿವಾರಿಸಲು ಮತ್ತು ವಾಹನಗಳು ಹೆದ್ದಾರಿಗಳಲ್ಲಿ ಅಡಚಣೆ ರಹಿತವಾಗಿ ಸಾಗುವಂತಾಗಲು ಇನ್ನು ಮುಂದೆ ವಾಹನ ಚಲಿಸಿದಷ್ಟು ದೂರಕ್ಕೆ ಮಾತ್ರ ಜಿಎನ್‌ಎಸ್‌ಎಸ್ ವ್ಯವಸ್ಥೆಯ ಮೂಲಕ ಟೋಲ್ ಸಂಗ್ರಹಿಸಲಾಗುವುದು.’’

***

ಮೇಲಿನ ಎರಡೂ ಹೇಳಿಕೆಗಳು ತಮ್ಮ ತಮ್ಮ ನೆಲೆಯಲ್ಲಿ ಬಹಳ ತರ್ಕಬದ್ಧವಾಗಿ ನಿಲ್ಲುತ್ತವೆಯಾದರೂ, ರಸ್ತೆ ಬಳಕೆದಾರರಾಗಿ ನಮಗೆ ಆ ಎರಡು ಹೇಳಿಕೆಗಳ ನಡುವೆ ವೈರುಧ್ಯ ಗೋಚರಿಸಿದರೆ, ನಮ್ಮ ಯೋಚನಾಲಹರಿ ಸರಿಯಾದ ಹಾದಿಯಲ್ಲಿದೆ ಮತ್ತು ಆರೋಗ್ಯಕರವಾಗಿದೆ ಎಂಬ ತೀರ್ಮಾನಕ್ಕೆ ಬರಬಹುದು.

ಭಾರತ ಸರಕಾರವು ಈ ರಂಗೋಲಿಗೆ ಚುಕ್ಕೆಗಳನ್ನು ಇರಿಸಲಾರಂಭಿಸಿ ಹಲವು ವರ್ಷಗಳೇ ಕಳೆದಿವೆ. ಆದರೆ ಈವತ್ತಿಗೂ, ಈ ರಂಗೋಲಿಯ ಪೂರ್ಣ ಚಿತ್ರ ಜನರ ಕಣ್ಣಿಗೆ ಬೀಳದಂತೆ ಎಚ್ಚರ ವಹಿಸಲಾಗುತ್ತಿದೆ. ಹೆದ್ದಾರಿಗಳಿಗೆ ಟೋಲ್ ಸಂಗ್ರಹದ ಹಿನ್ನೆಲೆ-ಮುನ್ನೆಲೆಗಳನ್ನು ಈ ಹಿಂದೆ ಇಲ್ಲಿ ವಿವರವಾಗಿ ಚರ್ಚಿಸಿದ್ದೇನೆ. ಈಗ ಈ ಅಂಕಣದ ವ್ಯಾಪ್ತಿಯಲ್ಲಿ ಕೆಲವು ಹೊಸ ಬೆಳವಣಿಗೆಗಳನ್ನು ಮಾತ್ರ ಗಮನಿಸೋಣ.

ಕರ್ನಾಟಕ ಸರಕಾರ ಇತ್ತೀಚೆಗೆ ರಾಜ್ಯದಲ್ಲಿ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ (ಎಚ್‌ಎಸ್‌ಆರ್‌ಪಿ)ಗಳನ್ನು ಕಡ್ದಾಯಗೊಳಿಸಿದ್ದು ಮತ್ತು ಮೊನ್ನೆ ಅದರ ಅಂತಿಮ ದಿನಾಂಕದ ವಾಯಿದೆಯನ್ನು ವಿಸ್ತರಿಸಿದ್ದರ ಕುರಿತು ನಾವೆಲ್ಲ ಓದಿದ್ದೇವೆ. ಈ ಹೊಸ ನಂಬರ್ ಪ್ಲೇಟ್ ಯಾಕೆ? ಏನದರ ವೈಶಿಷ್ಟ್ಯ ಎಂದು ಎಲ್ಲಾದರೂ ಕೇಳಿದ್ದೀರಾ?

ಭಾರತ ಸರಕಾರವು ಶೀಘ್ರದಲ್ಲೇ ತನ್ನ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಳವಡಿಸಲಿರುವ ಸ್ವಯಂಚಾಲಿತವಾಗಿ ನಂಬರ್ ಪ್ಲೇಟ್ ಓದಬಲ್ಲ ಕ್ಯಾಮರಾಗಳು (ಎನ್‌ಪಿಆರ್) ಮತ್ತು 3ಜಿ ತಂತ್ರಜ್ಞಾನದೊಂದಿಗೆ ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ (ಜಿಎನ್‌ಎಸ್‌ಎಸ್) ತಂತ್ರಜ್ಞಾನವನ್ನು ಬಳಸಿಕೊಂಡು, ಒಂದು ವಾಹನ ಹೆದ್ದಾರಿಗೆ ಇಳಿದ ತಕ್ಷಣ ಅದನ್ನು ಗುರುತಿಸಿ, ಅದು ಚಲಿಸಿದಷ್ಟು ದೂರಕ್ಕೆ ರಸ್ತೆ ಟೋಲ್ ಮೊತ್ತವನ್ನು ಆ ವಾಹನ ಮಾಲಕರ ಖಾತೆಯಿಂದ ವಟಾಯಿಸಿಕೊಳ್ಳಲಿದೆ! ಹಾಗಾಗಿ, ಈ ಯೋಜನೆ ಕಾರ್ಯಗತ ಆದ ಬಳಿಕ, ವಾಹನ ಮಾಲಕರಿಗೆ ಟೋಲ್‌ಗಳಲ್ಲಿ ಕಾಯುವ ತೊಂದರೆಯೇ ಇರುವುದಿಲ್ಲ! ಮತ್ತು ಸರಕಾರದ ಟೋಲ್ ಸಂಗ್ರಹ ಮೂರರಿಂದ ನಾಲ್ಕು ಪಟ್ಟು ಹೆಚ್ಚಲಿದೆ!!

ಅಂದಹಾಗೆ, ಇನ್ನೆರಡು ತಿಂಗಳಲ್ಲಿ ಬರುವ ಲೋಕಸಭಾ ಚುನಾವಣೆಗಳಿಗೆ ಮೊದಲೇ ಬೆಂಗಳೂರು-ಮೈಸೂರು 10 ಲೇನ್‌ಗಳ ಹೊಸ ಹೆದ್ದಾರಿಯಲ್ಲಿ ಈ ಹೊಸ ವ್ಯವಸ್ಥೆ ಪ್ರಾಯೋಗಿಕವಾಗಿ ಜಾರಿಗೆ ಬರಲಿದೆ ಎಂದು ರಾಜ್ಯಸಭೆಯಲ್ಲಿ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು (ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ 57, ದಿನಾಂಕ 07-02-2024) ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಸಿರೋಹಿ ಅವರಿಗೆ ತಿಳಿಸಿದ್ದಾರೆ.

ಈ ಯೋಜನೆ ಇಷ್ಟೇ ಆಗಿದ್ದರೆ, ಹೋಗಲಿ ಬಿಡಿ ಹೇಗೂ ಸರಕಾರಗಳಿರುವುದೇ ಜನಸಾಮಾನ್ಯರ ಕಿಸೆಗೆ ತೆರಿಗೆ ಕತ್ತರಿ ಹಾಕಲು ಎಂದು ಶಪಿಸಿ ಸುಮ್ಮನಿರಬಹುದಿತ್ತು. ಆದರೆ, ಇದು ಇಷ್ಟಕ್ಕೇ ನಿಲ್ಲುವುದಿಲ್ಲ. ಒಂದು ವಾಹನ ಮನೆಯಿಂದ ರಸ್ತೆಗೆ ಇಳಿದ ತಕ್ಷಣ, ಅದು ಸರಕಾರದ ನಿಗಾ ವ್ಯವಸ್ಥೆಯ ಒಳಗೆ ಬರುತ್ತದೆ ಎಂದರೆ, ಪ್ರತಿಯೊಬ್ಬ ಪ್ರಜೆಯ ಪ್ರತಿಯೊಂದೂ ಚಲನವಲನಗಳ ಮೇಲೆ ನೇರ ನಿಗಾ ಸರಕಾರಕ್ಕೆ ಸಾಧ್ಯವಾಗಲಿದೆ. ಇಷ್ಟು ಮಾತ್ರವಲ್ಲ; ಈ ರೀತಿಯ ನಿಗಾ ವ್ಯವಸ್ಥೆಗಳಿಂದ ಹುಟ್ಟುವ ಮೆಟಾಡೇಟಾಗಳು, ಆಳುವವರಿಗೆ ನಮ್ಮ ಖಾಸಗಿ ಬದುಕಿನ ಮೇಲೆ, ನಮ್ಮ ಚಲನವಲನಗಳ ಮೇಲೆ ಹೆಕ್ಕಿಕೊಡುವ ಸೂಕ್ಷ್ಮ ವಿವರಗಳು ಮತ್ತದರ ಪರಿಣಾಮಗಳು ಅನೂಹ್ಯ. ಇನ್ನು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಅಳವಡಿಸಿದರಂತೂ, ಪ್ರತಿಯೊಬ್ಬ ಪ್ರಜೆಯ ಸಂಪೂರ್ಣ ಜಾತಕ ಆಳುವವರ ಕೈಯಲ್ಲಿ!

ಸ್ವತಃ ಭಾರತ ಸರಕಾರದ ಸಾರಿಗೆ, ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಇಲಾಖೆಗಳ ಕುರಿತಾಗಿರುವ ಸಂಸದೀಯ ಸ್ಥಾಯೀ ಸಮಿತಿಯು (ಅಧ್ಯಕ್ಷರು: ವಿ. ವಿಜಯಸಾಯಿ ರೆಡ್ಡಿ) ಇದೇ ಫೆಬ್ರವರಿ 08ರಂದು ಸಂಸತ್ತಿನ ಉಭಯಸದನಗಳಲ್ಲಿ ಮಂಡಿಸಿದ ತಮ್ಮ ವರದಿಯಲ್ಲಿ (ವರದಿ ಸಂಖ್ಯೆ: 367) ಈ ಹೊಸ ಟೋಲ್ ಪದ್ಧತಿಯಿಂದ ಪ್ರಜೆಗಳ ಖಾಸಗಿತನದ ಉಲ್ಲಂಘನೆ ಆಗುವ ಸಾಧ್ಯತೆಗಳಿರುವ ಬಗ್ಗೆ ಆತಂಕ ವ್ಯಕ್ತಪಡಿಸಿತ್ತು ಮತ್ತು ಜಿಪಿಎಸ್ ಆಧರಿತ ಟೋಲ್ ಸಂಗ್ರಹ ವ್ಯವಸ್ಥೆ ಜಾರಿಗೆ ತರುವ ಮುನ್ನ, ಅದು ಸೈಬರ್ ಸೆಕ್ಯುರಿಟಿ ಸಂಬಂಧಿತ ಸಂಭಾವ್ಯ ಅಪಾಯ ಸಾಧ್ಯತೆಗಳನ್ನು ವಿವರವಾಗಿ ಪರಿಶೀಲಿಸಿಕೊಳ್ಳಬೇಕು ಎಂದು ಶಿಫಾರಸು ಮಾಡಿತ್ತು. ಆದರೆ ಸರಕಾರ ಇದನ್ನು ಕಿವಿಗೆ ಹಾಕಿಕೊಂಡಂತಿಲ್ಲ. ಇದಲ್ಲದೆ ರಾಜ್ಯಗಳಲ್ಲಿ ಟೋಲ್ ತಪ್ಪಿಸುವುದು ವಾಹನ ಮಾಲಕರಿಗೆ ದಂಡನಾರ್ಹ ಅಪರಾಧವಾಗಬೇಕೆಂಬ ಹೊಸ ನಿಯಮವನ್ನು ತರಬೇಕೆಂದೂ ಸ್ಥಾಯೀಸಮಿತಿ ಶಿಫಾರಸು ಮಾಡಿದೆ.

ದೇಶದಲ್ಲಿಂದು 13 ಲಕ್ಷ ಕಿ.ಮೀ. ರಸ್ತೆಗಳಿದ್ದು, ಅವುಗಳಲ್ಲಿ ರಾಷ್ಟ್ರೀಯ ಹೆದ್ದಾರಿಯ ಪಾಲು ಕೇವಲ ಶೇ. 2. ಆದರೆ, ದೇಶದ ಶೇ. 40 ವಾಹನ ದಟ್ಟಣೆಯನ್ನು ಹೊರುತ್ತಿರುವುದು ಈ ಹೆದ್ದಾರಿಗಳೇ. ಸದ್ಯ ದೇಶದಲ್ಲಿ 920 ಟೋಲ್ ಪ್ಲಾಝಾಗಳಿದ್ದು, ಅವು 7.65 ಕೋಟಿ ಫಾಸ್ಟ್ಯಾಗ್‌ಗಳ ಮೂಲಕ ಟೋಲ್ ಸಂಗ್ರಹಿಸುತ್ತಿವೆ. ಆರಂಭದ ದಿನಗಳಲ್ಲಿ ವಾಹನಗಳು ಟೋಲ್ ಪ್ಲಾಝಾದಲ್ಲಿ ಟೋಲ್ ಕಟ್ಟಿ ಮುಂದುವರಿಯಲು ಸರಾಸರಿ 08 ನಿಮಿಷಗಳು ಬೇಕಾಗುತ್ತಿದ್ದರೆ, ಈಗ ಆ ಸರಾಸರಿಯು 47 ಸೆಕುಂಡುಗಳಿಗೆ ಇಳಿದಿದೆಯಂತೆ. ಪರಿಸ್ಥಿತಿಯನ್ನು ಇನ್ನೂ ಸುಧಾರಿಸಲು ಈ ಹೊಸ ಜಿಪಿಎಸ್ ಆಧರಿತ ಯೋಜನೆ.

ನ್ಯಾಷನಲ್ ಇಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ ಪ್ರೋಗ್ರಾಂ (ಎನ್‌ಇಟಿಸಿ) ಅಡಿಯಲ್ಲಿ ಇಲ್ಲಿಯ ತನಕ ರೇಡಿಯೊಫ್ರೀಕ್ವೆನ್ಸಿ ಐಡೆಂಟಿಫಿಕೇಷನ್ (ಆರ್‌ಎಫ್‌ಐಡಿ) ತಂತ್ರಜ್ಞಾನ ಬಳಸಿ, ಫಾಸ್ಟ್ಯಾಗ್‌ಗಳ ಮೂಲಕ ಟೋಲ್ ಸಂಗ್ರಹ ನಡೆಯುತ್ತಿತ್ತು. 60ಕಿ.ಮೀ.ಗೆ ಒಂದು ಟೋಲ್ ಪ್ಲಾಝಾ ಇರುವುದರಿಂದ, ಆ ಪ್ಲಾಝಾಗಳನ್ನು ದಾಟದೆ ಓಡಾಡುವ ವಾಹನಗಳಿಗೆ ಇಲ್ಲಿಯ ತನಕ ಸಂಚಾರ ಉಚಿತವಿತ್ತು. ಇನ್ನು ಜಿಪಿಎಸ್ ವ್ಯವಸ್ಥೆ ಬಂದ ಬಳಿಕ, ಮನೆಯಿಂದ ವಾಹನ ಹೊರಬಂದು ರಸ್ತೆಗೆ ಇಳಿದ ತಕ್ಷಣ ಟೋಲ್ ಪಾವತಿ ಮಾಡಬೇಕಾಗುತ್ತದೆ. ಇದ್ದರಸ್ತೆ ಕಿತ್ತುಕೊಂಡು, ಸರ್ವೀಸ್ ರಸ್ತೆಗಳ ಸೌಲಭ್ಯವನ್ನೇ ಒದಗಿಸದೆ, ಟೋಲ್ ಹೆದ್ದಾರಿಗಳನ್ನು ತೆರೆದಿರುವ ಈ ಅವೈಜ್ಞಾನಿಕ ವ್ಯವಸ್ಥೆಯಲ್ಲಿ, ಹೊಸ ಜಿಪಿಎಸ್ ಆಧರಿತ ವ್ಯವಸ್ಥೆ ತಂದರೆ, ಕರಾವಳಿಯಂತಹ ಹೆದ್ದಾರಿ ಆಧರಿತ ಬದುಕು ಬದುಕುತ್ತಿರುವ ಜನಸಮುದಾಯಗಳು ಅಪಾರ ನಷ್ಟ ಅನುಭವಿಸಲಿವೆ.

ನಾವು ವಾಹನ ಖರೀದಿಯ ವೇಳೆ ಅದರ ಜೀವಿತಾವಧಿಗೆ ರಸ್ತೆ ತೆರಿಗೆಯನ್ನು ಏಕಗಂಟಿನಲ್ಲಿ ಕಟ್ಟಿದ ಬಳಿಕ ಮತ್ತೆ ಟೋಲ್ ಕಟ್ಟುವುದು ‘‘ಡಬ್ಬಲ್ ತೆರಿಗೆ’’ ಆಗುವುದಿಲ್ಲವೇ? ಎಂದು ಕೇಳಿ ಅರ್ಜಿ ಸಲ್ಲಿಸಿದ್ದಕ್ಕೆ ತೆಲಂಗಾಣ ಹೈಕೋರ್ಟು, ಅವೆರಡೂ ಪ್ರತ್ಯೆಕ ತೆರಿಗೆಗಳು ಎಂದು ಹೇಳಿ, ಅರ್ಜಿಯನ್ನು ತಳ್ಳಿಹಾಕಿದೆ. ಹಾಗಾಗಿ, ಆ ವಾದಕ್ಕೆ ಈಗ ಬಲ ಇಲ್ಲ. ಸರಕಾರಗಳು ಇರುವುದೇ ತೆರಿಗೆ ವಿಧಿಸುವುದಕ್ಕಾದ್ದರಿಂದ, ಒಂದಲ್ಲ ಒಂದು ಹಾದಿಯಲ್ಲಿ ಅವು ತೆರಿಗೆ ವಿಧಿಸುತ್ತವೆ. ಆದರೆ, ಅದನ್ನೂ ದಾಟಿ, ಪ್ರಜೆಗಳ ಖಾಸಗಿ ಬದುಕಿನ ಮೇಲೆ ನಿಗಾ ಇರಿಸುವಂತಹ ಈ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದು ಮತ್ತು ತನ್ನ ಉದ್ದೇಶಗಳನ್ನು ಪಾರದರ್ಶಕಗೊಳಿಸಿಕೊಳ್ಳದೆ ಸರಕಾರ ಈ ವ್ಯವಸ್ಥೆಯನ್ನು ಜಾರಿಗೆ ತರುವುದು ಅಪೇಕ್ಷಿತವಲ್ಲ. ಇಂತಹ ಬೆಳವಣಿಗೆಗಳನ್ನು ಪಕ್ಷ ರಾಜಕೀಯ ಮೀರಿ ಪ್ರಶ್ನಿಸಬೇಕಾದದ್ದು ಅನಿವಾರ್ಯ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ರಾಜಾರಾಮ್ ತಲ್ಲೂರು

contributor

Similar News