ಜಾಗತೀಕರಣದ ಹೆಸರಲ್ಲಿ ಸಮುದ್ರ ಖಾಲಿ!

ದೇಶದ ಆಹಾರ ಭದ್ರತೆ, ಸಾಂಪ್ರದಾಯಿಕ ಮೀನುಗಾರರ ಜೀವನೋಪಾಯಗಳ ಸಂರಕ್ಷಣೆ ಸರಕಾರದ ಆದ್ಯತೆ ಆಗಬೇಕು. ಅಂತರ್‌ರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದ ಕಡೆಯಿಂದ ವಾದ ಈ ಹಾದಿಯಲ್ಲೇ ಮಂಡಿತವಾಗುತ್ತಿದೆ. ಅಲ್ಲಿ ಮಾಡಿ ಬಂದಿರುವ ವಾದವನ್ನು ಇಲ್ಲಿ ಅನುಷ್ಠಾನಕ್ಕೆ ತರುವಲ್ಲೂ ಭಾರತ ಸರಕಾರದ ಕಡೆಯಿಂದ ಅದೇ ದರ್ಜೆಯ ಬದ್ಧತೆ ವ್ಯಕ್ತಗೊಳ್ಳಬೇಕಾಗಿದೆ. ಕರ್ನಾಟಕದ, ದೇಶದ ಕರಾವಳಿಯನ್ನು ಇಂಚಿಂಚಾಗಿ ವಾಣಿಜ್ಯೋದ್ಯಮಿಗಳ ತೆಕ್ಕೆಗೆ ಒಪ್ಪಿಸುವ ಕೆಲಸ ನಿಲ್ಲಬೇಕು ಮತ್ತು ದೇಶದ ಕರಾವಳಿಯುದ್ದಕ್ಕೂ ಸಾಂಪ್ರದಾಯಿಕ ಮೀನುಗಾರರ ಹಿತಾಸಕ್ತಿಗಳು ಆದ್ಯತೆ ಪಡೆಯಬೇಕು.

Update: 2024-03-02 05:33 GMT

ಅಬುಧಾಬಿಯಲ್ಲಿ ಮೀನುಗಾರಿಕೆ ಸಬ್ಸಿಡಿಗಳಿಗೆ ಸಂಬಂಧಿಸಿದಂತೆ ದೇಶಗಳ ನಡುವೆ ಒಂದು ಒಪ್ಪಂದಕ್ಕೆ ತಲುಪಲು ಸಚಿವ ಮಟ್ಟದ 13ನೇ ಸಮ್ಮೇಳನ (ಎಂಸಿ 13) ಇನ್ನೇನು ಮುಗಿಯುವ ಹಂತದಲ್ಲಿದೆ. ಆದರೆ ಅವರು ಒಪ್ಪಂದದ ಕರಡನ್ನು ಸರ್ವಮಾನ್ಯಗೊಳಿಸಿಕೊಳ್ಳಲು ಇನ್ನೂ ಸಾಧ್ಯ ಆದಂತಿಲ್ಲ.

ಕರ್ನಾಟಕ ಕರಾವಳಿಯಲ್ಲಿ ಬುಲ್‌ಟ್ರಾಲ್‌ಗಳು, ಲೈಟ್ ಫಿಷಿಂಗ್ ಮತ್ತು ನಿಷಿದ್ಧ ಸೀಸನ್‌ನಲ್ಲೂ ಅಕ್ರಮ ಮೀನುಗಾರಿಕೆಗಳ ಕಾರಣಕ್ಕೆ ಮೀನಿನ ಕ್ಷಾಮ ತಲೆದೋರಿದೆ ಎಂದು ಆತಂಕದಿಂದ ಕುಳಿತಿದ್ದೇವೆ. ನಮ್ಮ ಆತಂಕದ್ದು ಮೈಕ್ರೊ ಮುಖ ಆದರೆ, ಈ ಸಮಸ್ಯೆಗೆ ಒಂದು ಮ್ಯಾಕ್ರೊ ಮುಖ ಕೂಡ ಇದೆ.

ಮೀನುಗಾರಿಕೆ ಉದ್ಯಮವು ಜಾಗತೀಕರಣಗೊಂಡಿರುವ ಹಿನ್ನೆಲೆಯಲ್ಲಿ, ಬಲಾಢ್ಯ ದೇಶಗಳು ಸಬ್ಸಿಡಿಗಳನ್ನು ಒದಗಿಸುವ ಮೂಲಕ ತಮ್ಮ ಮೀನುಗಾರಿಕೆ ಸಾಮರ್ಥ್ಯವನ್ನು ಅಮಾನುಷವಾಗಿ ಹೆಚ್ಚಿಸಿಕೊಂಡು, ಸಮುದ್ರಕ್ಕೇ ಜರಡಿ ಹಿಡಿದು ಬಿಡುವ ಆತುರದಲ್ಲಿವೆ. ಈ ಸನ್ನಿವೇಶ ಎಷ್ಟು ಘಾತಕವಾಗಿದೆ ಎಂದು ಅರ್ಥಮಾಡಿಕೊಳ್ಳಲು ಒಂದೆರಡು ಅಂಕಿ ಸಂಖ್ಯೆಗಳನ್ನು ನೀಡಬೇಕು. ಅಭಿವೃದ್ಧಿ ಹೊಂದಿರುವ ದೇಶಗಳು ತಮ್ಮ ಮೀನುಗಾರಿಕೆ ಸಾಮರ್ಥ್ಯ ವೃದ್ಧಿಗೆ ಯಾವ ಪ್ರಮಾಣದಲ್ಲಿ ಸಬ್ಸಿಡಿಗಳನ್ನು ಒದಗಿಸುತ್ತಿವೆ ಎಂಬುದಕ್ಕೆ ಒಂದು ಹೋಲಿಕೆ ಬೇಕೆಂದರೆ, ಅವು ತಮ್ಮ ಮೀನುಗಾರ ಕುಟುಂಬಗಳಿಗೆ ವಾರ್ಷಿಕ ಸರಾಸರಿ 75,000 ಡಾಲರ್‌ಗಳ (ಅಂದಾಜು 60 ಲಕ್ಷ ರೂ.) ಸಬ್ಸಿಡಿ ಒದಗಿಸುತ್ತಿದ್ದರೆ, ಅಭಿವೃದ್ಧಿಶೀಲ ದೇಶವಾದ ಭಾರತದಲ್ಲಿ ಒಂದು ಮೀನುಗಾರ ಕುಟುಂಬಕ್ಕೆ ಸಿಗುವ ಸರಾಸರಿ ವಾರ್ಷಿಕ ಸಬ್ಸಿಡಿ ಕೇವಲ 15 ಡಾಲರ್ (ಅಂದಾಜು 1,200 ರೂ.). ಚೀನಾ, ಯುರೋಪಿಯನ್ ಒಕ್ಕೂಟ, ಅಮೆರಿಕ, ದ.ಕೊರಿಯಾ ಮತ್ತು ಜಪಾನ್ - ಕೇವಲ ಈ ಐದು ಭೂಭಾಗಗಳು ಒಟ್ಟಾಗಿ ಪ್ರತೀ ವರ್ಷ ಜಗತ್ತು ಮೀನುಗಾರಿಕೆಗೆ ನೀಡುವ ಸಬ್ಸಿಡಿಯ ಶೇ. 58 ಭಾಗವನ್ನು ತಾವೇ ತಮ್ಮ ಮೀನುಗಾರರಿಗೆ ನೀಡುತ್ತಿವೆ. 2018ರಲ್ಲಿ ಜಗತ್ತಿನ ಮೀನುಗಾರಿಕೆ ಸಬ್ಸಿಡಿಯ ಬಾಬ್ತು 854 ಬಿಲಿಯ ಡಾಲರ್ (ಅಂದಾಜು 71 ಲಕ್ಷ ಕೋಟಿ ರೂ.). ಅದರಲ್ಲಿ ಬಹುಪಾಲು ಮೀನುಗಾರಿಕೆ ಸಾಮರ್ಥ್ಯದ ವೃದ್ಧಿಗೆ ಹೋಗುತ್ತಿದೆ. ಹೀಗೆ, ಅತಿ ಸಾಮರ್ಥ್ಯ ಹೊಂದಿರುವವರ ಅತಿ ಮೀನುಗಾರಿಕೆಯ ಫಲವಾಗಿ, ಬೇಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಸಮುದ್ರೋತ್ಪನ್ನಗಳನ್ನು ದೋಚಲಾಗುತ್ತಿದೆ. ಇದರ ಒಂದು ಸಣ್ಣ ಮುನ್ನಂದಾಜು ಬೇಕೆಂದರೆ, 2031ರ ಹೊತ್ತಿಗೆ ನಿರೀಕ್ಷಿತ ಜಾಗತಿಕ ಸಾಗರೋತ್ಪನ್ನ ಉತ್ಪಾದನೆಯ ಪ್ರಮಾಣ 20.30 ಕೋಟಿ ಮೆಟ್ರಿಕ್ ಟನ್ ಇದ್ದರೆ, ಬೇಡಿಕೆ ಅಂದಾಜು 18.30 ಕೋಟಿ ಮೆಟ್ರಿಕ್ ಟನ್ ಇರಲಿದೆ. ಹೆಚ್ಚಿನ ಕಡೆ ಪರಿಣಾಮಕಾರಿಯಾದ ಸಾಗರೋತ್ಪನ್ನ ಸಂಗ್ರಹ-ಸಾಗಾಟ-ಮಾರಾಟ ವ್ಯವಸ್ಥೆಗಳಿಲ್ಲದ ಕಾರಣಕ್ಕೆ, ಆಗಿರುವ ಅತಿ ಸಂಗ್ರಹದಲ್ಲಿ, ಶೇ. 35ರಷ್ಟು ಪಾಲು ಸಾಗರೋತ್ಪನ್ನಗಳು ಯಾರೂ ಬಳಸದೆ ಹಾಳಾಗಿ ಹೋಗುತ್ತಿವೆ ಎಂದು FAOನ 2022ರ ವರದಿ ಗುರುತಿಸಿದೆ.

ಜಗತ್ತಿನಾದ್ಯಂತ 26 ಕೋಟಿ ಮಂದಿ ಮೀನುಗಾರಿಕೆಯನ್ನು ಅವಲಂಬಿಸಿದ್ದು, ಸಾಗರಗಳು ಮೀನುಗಾರಿಕೆಯ ಹೆಸರಲ್ಲಿ ಶೇ. 50ರಷ್ಟು ಅತಿ ಬಳಕೆ ಆಗುತ್ತಿವೆ. ಈ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯು ಸುಸ್ಥಿರ ಜಾಗತಿಕ ಅಭಿವೃದ್ಧಿಯ ಗುರಿ ಹಾಕಿಕೊಂಡಿದ್ದು, ಅದರ ಗುರಿ ನಂ.14, ನೀರಿನಡಿಯ ಜೀವಗಳ ಸುಸ್ಥಿರ ಅಭಿವೃದ್ಧಿಯ ಬಗ್ಗೆ ಇದೆ. ಈ ಪ್ರಯತ್ನಗಳ ಭಾಗವಾಗಿ ಜೂನ್ 2022ರಲ್ಲಿ ಮೀನುಗಾರಿಕಾ ಸಬ್ಸಿಡಿಗಳಿಗೆ ಸಂಬಂಧಿಸಿ ಅಂತರ್‌ರಾಷ್ಟ್ರೀಯ ಒಪ್ಪಂದವೊಂದು ಏರ್ಪಟ್ಟಿದ್ದು, ಅದರಲ್ಲಿ ಮೀನುಗಾರಿಕೆಯ ಸಾಮರ್ಥ್ಯ ವೃದ್ಧಿಯ ಹೆಸರಿನಲ್ಲಿ ನೀಡುವ ಸಬ್ಸಿಡಿಗಳ ಪ್ರಮಾಣವನ್ನು ಗಮನಾರ್ಹವಾಗಿ ನಿಯಂತ್ರಿಸಬೇಕು ಮತ್ತು ಮೀನುಗಾರಿಕೆಯ ಸುಸ್ಥಿರ ನಿರ್ವಹಣೆಗೆ ಅನುವಾಗುವಂತೆ ನಿಗಾ-ನಿಯಂತ್ರಣ - ಕಣ್ಗಾವಲು (ಎಂಸಿಎಸ್) ವ್ಯವಸ್ಥೆಯನ್ನು ರೂಪಿಸಬೇಕು ಎಂದು ನಿರ್ಧರಿಸಲಾಗಿದೆ.

ಭಾರತದ ನಿಲುವು

ಅಬುಧಾಬಿಯಲ್ಲಿ ನಡೆದಿರುವ ಈ ಮಾತುಕತೆಗಳಲ್ಲಿ ಭಾರತ ಕೂಡ ಪಾಲ್ಗೊಳ್ಳುತ್ತಿದೆ. ಇನ್ನೂ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿ ಭಾರತವು, ತಮ್ಮ ಇಇಝಡ್ ವಲಯಕ್ಕಿಂತ (ಇಇಝಡ್ ಎಂದರೆ ದೇಶದ ಸುತ್ತ 200 ನಾಟಿಕಲ್ ಮೈಲಿಯಷ್ಟು ವಿಸ್ತಾರದ ಸಮುದ್ರ ಪ್ರದೇಶ) ಹೊರಗೆ ಮೀನುಗಾರಿಕೆ ಮಾಡುತ್ತಿರುವ ಬಲಾಢ್ಯ ದೇಶಗಳಿಗೆ ಮುಂದಿನ 25 ವರ್ಷಗಳ ಕಾಲ ಅಂತಹ ಮೀನುಗಾರಿಕೆಯನ್ನು ನಿಷೇಧಿಸಬೇಕು ಎಂದು ವಾದ ಮಂಡಿಸುತ್ತಿದೆ. ಜೊತೆಗೆ, ಇಂತಹ ಯಾವುದೇ ಒಪ್ಪಂದಗಳು ಸಮುದ್ರ ಸಂಪನ್ಮೂಲಗಳನ್ನೇ ಆಧಾರವಾಗಿಟ್ಟುಕೊಂಡು ಬದುಕುತ್ತಿರುವ ಸಾಂಪ್ರದಾಯಿಕ ಸಣ್ಣ ಮೀನುಗಾರರ ಹಿತಾಸಕ್ತಿಗಳನ್ನು ಪರಿಗಣಿಸಬೇಕು. ಅಭಿವೃದ್ಧಿಶೀಲ ದೇಶಗಳಲ್ಲಿ ಆಹಾರ ಭದ್ರತೆ, ಮೀನುಗಾರರ ಬದುಕಿನ ಭದ್ರತೆಗೆ ಇದು ಮುಖ್ಯ. ಹಾಗಾಗಿ ಈ ವಿಚಾರದಲ್ಲಿ ಜವಾಬ್ದಾರಿಗಳು ಅವರವರ ಸಾಮರ್ಥ್ಯಗಳಿಗೆ ಅನುಗುಣವಾಗಿ ಭಿನ್ನವಾಗಿರಬೇಕು ಎಂದು ಹೇಳುತ್ತಿದೆ. (PIB ReleaseID-2009551)

ಸ್ಥಳೀಯ ದೃಷ್ಟಿಕೋನ

ಜಾಗತಿಕವಾಗಿ ಸಾಂಪ್ರದಾಯಿಕ, ಸಣ್ಣ ಮೀನುಗಾರರ ಹಿತಾಸಕ್ತಿಗಳನ್ನು ಗಮನದಲ್ಲಿರಿಸಿಕೊಂಡು ಮುನ್ನಡೆಯಬೇಕು ಎಂದು ಹೇಳುವ ಭಾರತ ಸರಕಾರ, ದೇಶದ ಒಳಗೆ ಬೇರೆಯೇ ಹಾದಿಯನ್ನು ತುಳಿಯುತ್ತಿದೆ.

ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ (ಪಿಎಂಎಂಎಸ್‌ವೈ) ಅಡಿಯಲ್ಲಿ 2018-19ರಲ್ಲಿ 13.75 ಎಂಎಂಟಿ ಇದ್ದ ಮೀನು ಉತ್ಪಾದನೆ 2024-25ರ ಹೊತ್ತಿಗೆ 22 ಎಂಎಂಟಿಗೆ ಏರಬೇಕು, ಕೃಷಿ-ಜಿವಿಎಯಲ್ಲಿ ಹಾಲಿ 7.28ರಷ್ಟು ಇರುವ ಮೀನುಗಾರಿಕೆಯ ಪಾಲು 2024-25ರ ಹೊತ್ತಿಗೆ ಶೇ. 9ಕ್ಕೆ ಏರಬೇಕು. 2018-19ರಲ್ಲಿ 46,589 ಕೋಟಿ ರೂ. ಇದ್ದ ದೇಶದ ವಾರ್ಷಿಕ ಸಾಗರೋತ್ಪನ್ನ ರಫ್ತು ಸಾಮರ್ಥ್ಯವನ್ನು 2024-25ರ ಹೊತ್ತಿಗೆ ಒಂದು ಲಕ್ಷ ಕೋಟಿ ರೂ. ಗಳಿಗೆ ಏರಿಸಬೇಕು ಎಂಬ ಮಹತ್ವಾಕಾಂಕ್ಷಿ ಯೋಜನೆ ಗಳನ್ನು ಹಾಕಿಕೊಂಡಿದೆ. ಅದಕ್ಕಾಗಿ, ಕೃಷಿ ಕ್ಷೇತ್ರದಲ್ಲಿ ಉತ್ಪಾದನೆ ದುಪ್ಪಟ್ಟು ಮಾಡಲು ಯೋಜಿಸಿರುವ ರೀತಿಯಲ್ಲೇ, ಮೀನುಗಾರಿಕೆಯನ್ನು ಸಾಂಪ್ರ ದಾಯಿಕ ಮೀನುಗಾರರ ಕೈಯಿಂದ ಹಂತಹಂತವಾಗಿ ಕಳಚಿ, ಕಾರ್ಪೊರೇಟ್ ವಲಯದ ಕೈಗೆ ನೀಡುವ, ಅವರ ಸಂಗ್ರಹ-ಸಂಸ್ಕರಣೆ-ರಫ್ತು ಇತ್ಯಾದಿ ಲಾಜಿಸ್ಟಿಕ್ ಸಾಮರ್ಥ್ಯಗಳನ್ನು ಹೆಚ್ಚಿಸುವಲ್ಲಿ ಭಾರತ ಸರಕಾರದ ಚಿಂತನೆಗಳು ಮುನ್ನಡೆದಿವೆ.

ಈ ಉತ್ಪಾದನೆ ಹೆಚ್ಚಿಸಬೇಕೆಂಬ ಒತ್ತಡದ ಹಿನ್ನೆಲೆಯಲ್ಲಿ ಬುಲ್‌ಟ್ರಾಲ್‌ಗಳು, ಡೀಪ್ ಸೀ ಫಿಷಿಂಗ್‌ನಂತಹ ಅಕ್ರಮ ಮೀನುಗಾರಿಕಾ ವಿಧಾನಗಳು ದೇಶದ ಒಳಗೆ ಅಗಾಧ ಪ್ರಮಾಣದಲ್ಲಿ ನಡೆಯತೊಡಗಿವೆ. ಪರಿಸರ ಸ್ನೇಹಿ ಸಾಂಪ್ರದಾಯಿಕ ಮೀನುಗಾರರು ಮೀನುಗಾರಿಕೆಗೆ ರಜೆ ಘೋಷಿಸಿದ ಅವಧಿಯಲ್ಲೂ ಅಕ್ರಮವಾಗಿ ಆಳಸಮುದ್ರದ ಮೀನುಗಾರಿಕೆ ನಡೆದು, ಅಪ್ರಾಪ್ತ ಪ್ರಾಯದ ಮೀನುಮರಿಗಳನ್ನು ಹಿಡಿದು ನಾಶಪಡಿಸಲಾಗುತ್ತಿದೆ. ಇದು ಜಲಜೀವ ಜಗತ್ತಿನಲ್ಲಿ ಅಸಮತೋಲನಗಳಿಗೆ ಹಾದಿ ಮಾಡಿಕೊಡುತ್ತಿದೆ. ಇದರ ದುಷ್ಪರಿಣಾಮಗಳು ಈಗಲೇ ಎದ್ದು ಕಾಣಿಸಹತ್ತಿವೆ; ಮತ್ಸ್ಯಕ್ಷಾಮದ ಸುದ್ದಿ ಕರ್ನಾಟಕದ ಕರಾವಳಿಯ ಉದ್ದಗಲಕ್ಕೆ ಹರಿದಾಡುತ್ತಿದೆ.

ತಳಮಟ್ಟದಲ್ಲಿರುವ ಈ ವ್ಯತಿರಿಕ್ತ ಪರಿಸ್ಥಿತಿ ಏನನ್ನು ಸೂಚಿಸುತ್ತಿದೆ ಎಂದರೆ, ಜಗತ್ತು ಸಮುದ್ರ ಸಂಪನ್ಮೂಲಗಳ ಸಂರಕ್ಷಣೆಯ ಬಗ್ಗೆ ಎಚ್ಚೆತ್ತಿರುವುದು ತಡವಾಗಿದೆ. ಶ್ರೀಮಂತ ದೇಶಗಳು ಸಿಕ್ಕಿದ್ದು ಸೀರುಂಡೆ ಎಂದು ದೋಚುತ್ತಿದ್ದರೆ, ಅಭಿವೃದ್ಧಿಶೀಲ ದೇಶಗಳು ದಂಗಾಗಿ ಕಣ್ಣುಬಾಯಿ ಬಿಟ್ಟು ನೋಡುತ್ತಿರುವಾಗಲೇ ಸಮುದ್ರ ಖಾಲಿ ಆಗತೊಡಗಿದೆ. ಇಂತಹ ಸನ್ನಿವೇಶದಲ್ಲಿ, ದೇಶದ ಆಹಾರ ಭದ್ರತೆ, ಸಾಂಪ್ರದಾಯಿಕ ಮೀನುಗಾರರ ಜೀವನೋಪಾಯಗಳ ಸಂರಕ್ಷಣೆ ಸರಕಾರದ ಆದ್ಯತೆ ಆಗಬೇಕು. ಅಂತರ್‌ರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದ ಕಡೆಯಿಂದ ವಾದ ಈ ಹಾದಿಯಲ್ಲೇ ಮಂಡಿತವಾಗುತ್ತಿದೆ. ಅಲ್ಲಿ ಮಾಡಿ ಬಂದಿರುವ ವಾದವನ್ನು ಇಲ್ಲಿ ಅನುಷ್ಠಾನಕ್ಕೆ ತರುವಲ್ಲೂ ಭಾರತ ಸರಕಾರದ ಕಡೆಯಿಂದ ಅದೇ ದರ್ಜೆಯ ಬದ್ಧತೆ ವ್ಯಕ್ತಗೊಳ್ಳಬೇಕಾಗಿದೆ. ಕರ್ನಾಟಕದ, ದೇಶದ ಕರಾವಳಿಯನ್ನು ಇಂಚಿಂಚಾಗಿ ವಾಣಿಜ್ಯೋದ್ಯಮಿಗಳ ತೆಕ್ಕೆಗೆ ಒಪ್ಪಿಸುವ ಕೆಲಸ ನಿಲ್ಲಬೇಕು ಮತ್ತು ದೇಶದ ಕರಾವಳಿಯುದ್ದಕ್ಕೂ ಸಾಂಪ್ರದಾಯಿಕ ಮೀನುಗಾರರ ಹಿತಾಸಕ್ತಿಗಳು ಆದ್ಯತೆ ಪಡೆಯಬೇಕು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ರಾಜಾರಾಂ ತಲ್ಲೂರು

contributor

Similar News