ವಿದೇಶಾಂಗ ನೀತಿಯ ‘ವಾಟ್ಸ್‌ಆ್ಯಪ್ ಆವೃತ್ತಿ’

ಮಾರ್ನಿಂಗ್ ಕನ್ಸಲ್ಟ್‌ನಂತಹ ಸಂಶಯಾಸ್ಪದ ಖಾಸಗಿ ಸಂಸ್ಥೆಗಳು ಒದಗಿಸುವ ಕ್ಷುಲ್ಲಕ ಅಪ್ರೂವಲ್ ರೇಟಿಂಗ್‌ಗಳನ್ನು ಮುಂದಿಟ್ಟುಕೊಂಡು, ಭಾರತ ವಿಶ್ವಗುರು ಆಗಿಬಿಟ್ಟಿದೆ ಎಂದು ದೇಶದ ಒಳಗೆ ಪ್ರತೀ ಎರಡು-ಮೂರು ತಿಂಗಳಿಗೊಮ್ಮೆ ಸುದ್ದಿ ಮಾಡುವ ತಂತ್ರಗಳು ದೇಶದ ಒಳಗಿನ ತುರಿಕೆಯನ್ನು ಶಮನ ಮಾಡಿಯಾವೇ ಹೊರತು, ದೇಶದ ಗೌರವವನ್ನು ದೇಶದಿಂದ ಹೊರಗೆ ಹೆಚ್ಚಿಸಲಾರವು. ಈ ಒಣಕಲು ಜಂಬವನ್ನು ಬಳಸಿಕೊಂಡು ಸರಕಾರದ ಸಮರ್ಥಕರು ಬೇರೆ ದೇಶಗಳನ್ನು ಹೀಯಾಳಿಸುವ, ಟ್ರೋಲ್ ಮಾಡುವ ಚಟುವಟಿಕೆಗಳಲ್ಲಿ ತೊಡಗಿಕೊಂಡರೆ, ‘ಗುಸ್‌ಕೇ ಮಾರೇಂಗೆ’ ಎಂದು ಚೀರಿದರೆ, ಈ ಇಂಟರ್ನೆಟ್ ಯುಗದಲ್ಲಿ ಅದರಿಂದ ಹಾನಿಯೇ ಹೆಚ್ಚು.

Update: 2024-03-30 05:25 GMT

ಒಂದು ಸಾರ್ವಭೌಮ ದೇಶವು ತನ್ನ ಆಂತರಿಕ ನಿಲುವುಗಳ ಬಗ್ಗೆ ದೇಶದ ಹೊರಗಿನಿಂದ ಯಾವುದೇ ಕಾಮೆಂಟ್‌ಗಳು ಬಂದಾಗ, ತನ್ನ ನಿಲುವಿನ ಕುರಿತು, ಅಗತ್ಯ ಬಿದ್ದಲ್ಲಿ ಆ ದೇಶಕ್ಕೆ ಸ್ಪಷ್ಟನೆ/ಸಮರ್ಥನೆ ಒದಗಿಸುವುದು ಸಂಪ್ರದಾಯ. ಅದಕ್ಕಾಗಿ ಆ ನಿರ್ದಿಷ್ಟ ದೇಶದ ರಾಯಭಾರ ಕಚೇರಿಯ ಅಧಿಕಾರಿಗಳನ್ನು ಸೌತ್ ಬ್ಲಾಕಿನಲ್ಲಿರುವ ವಿದೇಶಾಂಗ ವ್ಯವಹಾರಗಳ ಮುಖ್ಯಾಲಯಕ್ಕೆ ಕರೆಸುವುದು ಹೊಸದೇನಲ್ಲ. ಆದರೆ ಹಾಲಿ ಭಾರತ ಸರಕಾರ ಹೊಸದೊಂದು ಪದ್ಧತಿಯನ್ನು ಆರಂಭಿಸಿದೆ.

ಅದೇನೆಂದರೆ, ಹೀಗೆ ರಾಯಭಾರ ಕಚೇರಿಯ ಅಧಿಕಾರಿಗಳು ಬರುತ್ತಿರುವ ಸುದ್ದಿಯನ್ನು ಸರಕಾರದ ಪರ ಇರುವ ಮಾಧ್ಯಮಗಳಿಗೆ ತಲುಪಿಸುವುದು; ಆ ಮಾಧ್ಯಮ ಸೇನೆ ವಿದೇಶಿ ರಾಯಭಾರ ಕಚೇರಿಯ ಅಧಿಕಾರಿಗಳು ಸೌತ್ ಬ್ಲಾಕ್ ಪ್ರವೇಶಿಸುವಾಗ ಮತ್ತು ಹೊರಬರುವಾಗ ಅಲ್ಲಿ ಕಾದುನಿಂತು, ಅದರ ವೀಡಿಯೊ ಮಾಡುವುದು ಮತ್ತು ಆಳುವ ಪಕ್ಷದ ಸೋಷಿಯಲ್ ಮೀಡಿಯಾ ಟ್ರೋಲ್‌ಗಳು ಅದನ್ನು ತಮ್ಮ ಪುಟಗಳಲ್ಲಿ ಹಾಕಿಕೊಂಡು, ‘ನೋಡಿ ಒಳಹೋಗುವಾಗ ಅಧಿಕಾರಿಗಳ ಮುಖ-ಭಂಗಿ ಹೀಗಿತ್ತು, ಈಗ ಹೀಗಾಗಿದೆ’ ಎಂದು ‘ಬಿಫೋರ್-ಆಫ್ಟರ್’ ಚಿತ್ರಣ ನೀಡಿ, ವಿಕೃತ ಆನಂದ ಅನುಭವಿಸುವುದು. ಇಂತಹ ಚೀಪ್ ತಂತ್ರಗಳು, ದೇಶದ ಒಳಗೆ ತಮ್ಮ ಪಕ್ಷದ ಸಮರ್ಥಕರಿಗೆ ಭಾರತ ಹೇಗೆ ‘ವಿಶ್ವಗುರುವಾಗಿಬಿಟ್ಟಿದೆ’ ಎಂಬುದರ ‘ದರ್ಶನ’ ನೀಡುವ ಉದ್ದೇಶದವಾಗಿವೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು. ಆದರೆ, ಇಂದಿನ ಇಂಟರ್ನೆಟ್ ಯುಗದಲ್ಲಿ, ಇಂತಹ ಸಂಗತಿಗಳು ಜಗತ್ತಿನಾದ್ಯಂತ ವೈರಲ್ ಆದರೆ, ಅದು ದೇಶಕ್ಕೆ ತರಬಹುದಾದ ಮುಜುಗರಗಳ ಬಗ್ಗೆ ಇವರಿಗೆ ಕಲ್ಪನೆ ಇದ್ದಂತಿಲ್ಲ.

ಕಳೆದ ಒಂದು ವರ್ಷದಿಂದೀಚೆಗೆ, ಕೆನಡಾ, ಮಾಲ್ದೀವ್ಸ್ ಮಾತ್ರವಲ್ಲದೆ, ಈ ವಾರದಲ್ಲೇ ಜರ್ಮನಿ, ಅಮೆರಿಕ ದೇಶಗಳ ರಾಯಭಾರಿಗಳು ಈ ರೀತಿಯ ಟ್ರೀಟ್‌ಮೆಂಟಿಗೆ ಒಳಗಾಗಿದ್ದಾರೆ. ಜಗತ್ತಿನಾದ್ಯಂತ ನಡೆದಿರುವ ಚಟುವಟಿಕೆಗಳ ಬಗ್ಗೆ ಅಮೆರಿಕದಲ್ಲಿ ವಿದೇಶಾಂಗ ಅಧಿಕಾರಿಗಳ ಮಟ್ಟದಲ್ಲಿ ದೈನಂದಿನ ಪತ್ರಿಕಾ ಹೇಳಿಕೆಗಳನ್ನು ಬಿಡುಗಡೆ ಮಾಡುವುದು ಒಂದು ಸಾಮಾನ್ಯ ಚಟುವಟಿಕೆ. ಮೊನ್ನೆ ದಿಲ್ಲಿ ಮುಖ್ಯಮಂತ್ರಿಗಳನ್ನು ಅನುಷ್ಠಾನ ನಿರ್ದೇಶನಾಲಯ (ಈ.ಡಿ.) ಬಂಧಿಸಿದ ಹಿನ್ನೆಲೆಯಲ್ಲಿ, ‘‘ಭಾರತ ಸರಕಾರವು ದಿಲ್ಲಿ ಮುಖ್ಯಮಂತ್ರಿಗಳ ವಿರುದ್ಧ ತೆಗೆದುಕೊಳ್ಳುತ್ತಿರುವ ಕಾನೂನು ಕ್ರಮಗಳು ನ್ಯಾಯಯುತವಾಗಿ, ಪಾರದರ್ಶಕವಾಗಿ ಮತ್ತು ಸಕಾಲಿಕವಾಗಿರಲಿ’’ ಎಂಬ ಅಭಿಪ್ರಾಯವನ್ನು ಅಮೆರಿಕದ ವಿದೇಶಾಂಗ ಇಲಾಖೆಯ ಅಧಿಕಾರಿಯೊಬ್ಬರು ವ್ಯಕ್ತಪಡಿಸಿದ್ದರು. ಇದಾದ ಮರುದಿನವೇ ಭಾರತದಲ್ಲಿ ಅಮೆರಿಕದ ರಾಯಭಾರಿ ಕಚೇರಿಯ ಅಧಿಕಾರಿಗಳು ಸೌತ್ ಬ್ಲಾಕಿಗೆ ಭೇಟಿ ನೀಡಿದ್ದರು. ಈ ಭೇಟಿಯ ವಿವರಗಳ ಬಗ್ಗೆ ವಿದೇಶಾಂಗ ಇಲಾಖೆ ಅಧಿಕೃತವಾಗಿ ಏನನ್ನಾದರೂ ಹೇಳುವ ಮುನ್ನವೇ ಮಾಧ್ಯಮಗಳು, ಸೋಷಿಯಲ್ ಮೀಡಿಯಾ ಹ್ಯಾಂಡಲ್‌ಗಳು ಈ ಕುರಿತು ತಮ್ಮ ‘ವೀರರೋದನ’ ಶುರುಹಚ್ಚಿಕೊಂಡಿವೆ. ಇಂತಹ ಬೆಳವಣಿಗೆಗಳಿಂದಾಗಿ ಲಾಭಕ್ಕಿಂತ ನಷ್ಟವೇ ಹೆಚ್ಚು.

1982ರಿಂದಲೂ ಅಮೆರಿಕ, ಶ್ರೀಲಂಕಾ, ಜಪಾನ್ ದೇಶಗಳ ಭಾರತೀಯ ದೂತಾವಾಸಗಳಲ್ಲಿ ಮತ್ತು ಆ ಬಳಿಕ ವಿದೇಶಾಂಗ ಸಚಿವಾಲಯದಲ್ಲಿ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿರುವ ಭಾರತದ ಹಾಲಿ ವಿದೇಶಾಂಗ ಸಚಿವ ಸುಬ್ರಹ್ಮಣ್ಯಂ ಜೈಶಂಕರ್ ಅವರಿಗೆ ದೂತಾವಾಸಗಳಾಗಲೀ, ಭಾರತದ ಸುದೀರ್ಘವಾದ ವಿದೇಶಾಂಗ ಸಂಬಂಧಗಳಾಗಲೀ ಹೊಸದಲ್ಲ. ಆದರೆ, ಎನ್‌ಡಿಎ ಸರಕಾರ ಬಂದ ಬಳಿಕ 2015-2018ರ ನಡುವೆ ವಿದೇಶಾಂಗ ಕಾರ್ಯದರ್ಶಿಯಾಗಿ ಮತ್ತು 2019ರಲ್ಲಿ ನರೇಂದ್ರ ಮೋದಿಯವರ ಎರಡನೇ ಆವಧಿಗೆ ವಿದೇಶಾಂಗ ಸಚಿವರಾಗಿ ರಾಜಕೀಯಕ್ಕೆ ಇಳಿದಿರುವ ಅವರು, ಹಾಲೀ ಎನ್‌ಡಿಎ ಸರಕಾರದ ವಿದೇಶ ನೀತಿಗಳನ್ನು ರೂಪಿಸುವಲ್ಲಿ ತಾಯಿಬೇರಾಗಿದ್ದರು ಎಂಬುದನ್ನು ಅಲ್ಲಗಳೆಯುವಂತಿಲ್ಲ.

2014ರ ತನಕವೂ, ಸರಕಾರಗಳು ಬದಲಾದರೂ ದೇಶದ ವಿದೇಶಾಂಗ ನೀತಿಗಳಲ್ಲಿ ಒಂದು ಸಾತತ್ಯ ಇತ್ತು. 120 ದೇಶಗಳ ಅಲಿಪ್ತ ಕೂಟ (NAM), ದಕ್ಷಿಣ ಏಶ್ಯದ ಸಾರ್ಕ್ ಸಂಘಟನೆಗಳ ಮೂಲಕ ಭಾರತಕ್ಕೆ ಅದರದೇ ಆದ ಒಂದು ಪ್ರಾದೇಶಿಕ ಮತ್ತು ಜಾಗತಿಕ ಮಹತ್ವ ಇತ್ತು. 1947-1991ರ ವರೆಗಿನ ಅಮೆರಿಕ-USSಖ ಶೀತಲ ಸಮರದ ಕಾಲದಲ್ಲಾಗಲೀ, 1991-2008ರ ನಡುವಿನ ಉದಾರೀಕರಣದ ಅವಧಿಯಲ್ಲಾಗಲೀ ಅಲ್ಲಿಂದೀಚೆಗಿನ ಹೊಸ ಜಾಗತಿಕ ಸಮೀಕರಣಗಳ ಅವಧಿಯಲ್ಲಾಗಲೀ ಭಾರತದ ನಿಲುವುಗಳಲ್ಲಿ ದೊಡ್ಡ ಬದಲಾವಣೆಗಳೇನೂ ಇರಲಿಲ್ಲ. ಆದರೆ 2014ರಲ್ಲಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನರೇಂದ್ರ ಮೋದಿಯವರು ತಮ್ಮದು ಐooಞ ಇಚಿsಣ ನೀತಿ ಎಂದರು. ಈ ಹೊಸ ಚಿಂತನೆಯ ಭಾಗವಾಗಿ, ಅಲಿಪ್ತ ನೀತಿ ಅಡಿಗೆ ಬಿದ್ದಿತು; ಸಾರ್ಕ್ ಮರೆತುಹೋಯಿತು. ಚೀನಾದ ಅಧ್ಯಕ್ಷರ ಜೊತೆ ಮಾಮಲ್ಲಪುರಂ ಭೇಟಿ (2019), ಅಮೆರಿಕ ಅಧ್ಯಕ್ಷ ಟ್ರಂಪ್ ಜೊತೆ ನಮಸ್ತೇ ಟ್ರಂಪ್ (2020)ಗಳೆಲ್ಲ ಅದ್ದೂರಿಯಾಗಿಯೇ ನಡೆದವು. ಆರಂಭ ಅಬ್ಬರತಾಳದಲ್ಲೇ ಇತ್ತು.

ಇಂದು ನರೇಂದ್ರ ಮೋದಿಯವರ ಆಡಳಿತದ ಒಂದು ದಶಕದ ಬಳಿಕ, ಭಾರತ ತನ್ನ ವಿದೇಶಾಂಗ ನೀತಿಗಳೊಂದಿಗೆ ಎಲ್ಲಿ ನಿಂತಿದೆ? ಮಹತ್ವಾಕಾಂಕ್ಷೆಯ ಚೀನಾ ಇಂದು ಭಾರತದ ಸುತ್ತಣ ಎಲ್ಲ ನೆರೆಹೊರೆಗಳನ್ನು ಬೇರೆಬೇರೆ ತಂತ್ರಗಾರಿಕೆಗಳನ್ನು ಬಳಸಿ, ತನ್ನ ಬುಟ್ಟಿಯಲ್ಲಿರಿಸಿಕೊಳ್ಳುವ ಪ್ರಯತ್ನದಲ್ಲಿ ಯಶಸ್ಸು ಸಾಧಿಸಿದಂತಿದೆ. ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ನೇಪಾಳ, ಮಾಲ್ದೀವ್ಸ್, ಮ್ಯಾನ್ಮಾರ್, ಮಾರಿಷಸ್ ಸೇರಿದಂತೆ ಎಲ್ಲ ನೆರೆಹೊರೆಯ ದೇಶಗಳು ಭಾರತದ ಜೊತೆ ಹಿಂದಿನ ಭಾವನಾತ್ಮಕ ಸಂಬಂಧಗಳನ್ನು ಹೊಂದಿಲ್ಲ. ಚೀನಾದ ಹಸ್ತಕ್ಷೇಪಗಳ ಎದುರು ಸಂತುಲನ ಸಾಧಿಸಲು ಭಾರತವು ಕಿUಂಆ 4 (ಭಾರತ, ಅಮೆರಿಕ, ಆಸ್ಟ್ರೇಲಿಯ, ಜಪಾನ್)ನ್ನು ಅವಲಂಬಿಸಿಕೊಂಡಂತಿದೆ. ಕಳೆದ ಜೂನ್ ತಿಂಗಳಿನಲ್ಲಿ ಕೆನಡಾದ ಜೊತೆ ಭಾರತದ ಸಂಬಂಧಗಳಲ್ಲಿ ಸಂಭವಿಸಿದ ಅನಪೇಕ್ಷಿತ ಬೆಳವಣಿಗೆಗಳ ಹಿನ್ನೆಲೆಯಲ್ಲಿ (ವಿವರಗಳಿಗೆ ‘ಅಂತರ್‌ರಾಷ್ಟ್ರೀಯ ಸಂಬಂಧಗಳ ಕತ್ತಿಯಂಚಿನ ನಡಿಗೆ’; ಡಿಸೆಂಬರ್ 9, 2023 ಪಿಟ್ಕಾಯಣ ನೋಡಿ) ಭಾರತದ ಕುರಿತು ಅಂತರ್‌ರಾಷ್ಟ್ರೀಯ ಅಭಿಪ್ರಾಯಗಳಲ್ಲಿ ಮಹತ್ವದ ಪಲ್ಲಟಗಳು ಸಂಭವಿಸಿವೆ. ಇದರ ದೂರಗಾಮಿ ಪರಿಣಾಮಗಳನ್ನು ಇನ್ನಷ್ಟೇ ಕಾದು ನೋಡಬೇಕಿದೆ. ಆವರ್ತನದ ಮೇರೆಗೆ ಬಂದಿರುವ ಜಿ20 ಅಧ್ಯಕ್ಷತೆಯನ್ನು ಕೂಡ ಜಾಗತಿಕ ದೃಷ್ಟಿಕೋನದಿಂದ ನೋಡುವ ಬದಲು ದೇಶದೊಳಗಿನ ಲಾಭಗಳಿಗೇ ಸೀಮಿತಗೊಳಿಸಿಕೊಂಡಂತೆ ಕಾಣಿಸುತ್ತಿದೆ.

ಈಗ ಬದಲಾಗುತ್ತಿರುವ ಆರ್ಥಿಕ ಸಾಮರ್ಥ್ಯಗಳ ಜಾಗತಿಕ ಚೌಕಟ್ಟಿನಲ್ಲಿ, ಭಾರತ ತಾನೇನೋ ಮಹತ್ವದ ಪಾತ್ರ ವಹಿಸಲಿದ್ದೇನೆ ಎಂಬ ಊಹೆಯೊಂದಿಗೆ ಕಾರ್ಯಾಚರಿಸುತ್ತಿದೆ. ಆದರೆ, ಇನ್ನೂ ಭಾರತವನ್ನು ಜಗತ್ತು ನೋಡುತ್ತಿರುವುದು ‘ಸಸ್ತಾ’ ಮಾನವ ಸಂಪನ್ಮೂಲ ಸಿಗುವ ಜಾಗವಾಗಿಯೇ ಹೊರತು ಆರ್ಥಿಕ ಶಕ್ತಿಯಾಗಿ ಅಲ್ಲ. ಜೊತೆಗೆ, 140 ಕೋಟಿ ಜನರಿರುವ ಭಾರತ, ಜಾಗತಿಕ ಉತ್ಪಾದಕರುಗಳಿಗೆ ಒಳ್ಳೆಯ ಮಾರುಕಟ್ಟೆ ಎಂಬ ವಾಸ್ತವ ಕೂಡ ಅವರ ಗಮನದಲ್ಲಿದೆ. ತನ್ನ ಈ ‘ಶಕ್ತಿ’ಗಳನ್ನು ಪರಿಣಾಮಕಾರಿಯಾಗಿ, ಬುದ್ಧಿವಂತಿಕೆಯಿಂದ ಬಳಸಿಕೊಳ್ಳುವ ಬದಲು, ಸುಖಾಸುಮ್ಮನೇ ನೆರೆಹೊರೆಯ ದೇಶಗಳೆದುರು ಮಲೆತು ನಿಲ್ಲುವುದು ದೀರ್ಘಕಾಲಿಕ ನೆಲೆಯಲ್ಲಿ ಭಾರತವನ್ನು ಏಕಾಂಗಿಯಾಗಿಸಲಿದೆ.

ಮಾರ್ನಿಂಗ್ ಕನ್ಸಲ್ಟ್‌ನಂತಹ ಸಂಶಯಾಸ್ಪದ ಖಾಸಗಿ ಸಂಸ್ಥೆಗಳು ಒದಗಿಸುವ ಕ್ಷುಲ್ಲಕ ಅಪ್ರೂವಲ್ ರೇಟಿಂಗ್‌ಗಳನ್ನು ಮುಂದಿಟ್ಟುಕೊಂಡು, ಭಾರತ ವಿಶ್ವಗುರು ಆಗಿಬಿಟ್ಟಿದೆ ಎಂದು ದೇಶದ ಒಳಗೆ ಪ್ರತೀ ಎರಡು-ಮೂರು ತಿಂಗಳಿಗೊಮ್ಮೆ ಸುದ್ದಿ ಮಾಡುವ ತಂತ್ರಗಳು ದೇಶದ ಒಳಗಿನ ತುರಿಕೆಯನ್ನು ಶಮನ ಮಾಡಿಯಾವೇ ಹೊರತು, ದೇಶದ ಗೌರವವನ್ನು ದೇಶದಿಂದ ಹೊರಗೆ ಹೆಚ್ಚಿಸಲಾರವು. ಈ ಒಣಕಲು ಜಂಬವನ್ನು ಬಳಸಿಕೊಂಡು ಸರಕಾರದ ಸಮರ್ಥಕರು ಬೇರೆ ದೇಶಗಳನ್ನು ಹೀಯಾಳಿಸುವ, ಟ್ರೋಲ್ ಮಾಡುವ ಚಟುವಟಿಕೆಗಳಲ್ಲಿ ತೊಡಗಿಕೊಂಡರೆ, ‘ಗುಸ್‌ಕೇ ಮಾರೇಂಗೆ’ ಎಂದು ಚೀರಿದರೆ, ಈ ಇಂಟರ್ನೆಟ್ ಯುಗದಲ್ಲಿ ಅದರಿಂದ ಹಾನಿಯೇ ಹೆಚ್ಚು. ಇಷ್ಟನ್ನು ಸರಕಾರದ ಸಮರ್ಥಕರು ಅರ್ಥ ಮಾಡಿಕೊಂಡರೂ, ಸದ್ಯದ ಮಟ್ಟಿಗೆ ಅದು ಒಳ್ಳೆಯ ವಿದೇಶಾಂಗ ನೀತಿಯೇ!

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ರಾಜಾರಾಂ ತಲ್ಲೂರು

contributor

Similar News