ಕಳಚಿ ಬಿದ್ದ ಇನ್ನೊಬ್ಬ ಬಾಬಾನ ಮುಖವಾಡ
ಮಕ್ಕಳನ್ನು ಲೈಂಗಿಕ ಹಿಂಸೆಗೆ ಗುರಿ ಪಡಿಸಿದ ಮಠೋದ್ಯಮಿಯೊಬ್ಬನನ್ನು ರಕ್ಷಿಸಲು ಸರಕಾರ ನಡೆಸಿದ ಕಸರತ್ತು ಎಲ್ಲರಿಗೂ ಗೊತ್ತಿದೆ. ಬಾಬಾ ರಾಮ್‌ದೇವ್ ಉದ್ಯಮದ ಬಾನಗಡಿಗಳಿಗೂ ಯಾರ ರಕ್ಷಾ ಕವಚ ಇದೆ ಎಂಬುದು ಎಲ್ಲರಿಗೂ ತಿಳಿದಿದೆ. ಜಗತ್ತಿನಲ್ಲಿ ಮುಂದೆ ನಡೆಯುವುದನ್ನು ಹೇಳುವ ಭಕ್ತರನ್ನು ಎಚ್ಚರಿಸುವ ದಿವ್ಯದೃಷ್ಟಿ ಈ ದೇವ ಮಾನವರಲ್ಲಿ ಇರುತ್ತದೆ ಎಂದು ಹೇಳುತ್ತಾರೆ. ಇದೇ ಸಾಲಿಗೆ ನಮ್ಮ ಹೈಟೆಕ್ ಜ್ಯೋತಿಷಿಗಳೂ ಸೇರಿದ್ದಾರೆ. ಆದರೆ, ಇವರಲ್ಲಿ ಯಾರೂ ಕೊರೋನಾ ಎಂಬ ಸಾಂಕ್ರಾಮಿಕ ಬರುತ್ತದೆ. ಕಣ್ಣಿಗೆ ಕಾಣದ ವೈರಾಣು ಸಾವಿರಾರು ಜನರನ್ನು ಸಾಯಿಸುತ್ತದೆ ಎಂದು ಮುಂಚಿತವಾಗಿ ಯಾಕೆ ಹೇಳಲಿಲ್ಲ ಎಂಬ ಪ್ರಶ್ನೆಗೆ ಈ ಧರ್ವೋದ್ಯಮಿಗಳ ಬಳಿ ಉತ್ತರವಿಲ್ಲ.
ಆಧುನಿಕ ಭಾರತದ ಮುನ್ನಡೆಗೆ ಮುಖ್ಯ ಅಡ್ಡಿಯಾಗಿರುವವರು ದೇವರು, ಧರ್ಮದ ಸೋಗು ಹಾಕಿದ ನಕಲಿ ಪವಾಡ ಪುರುಷರು ಮತ್ತು ಡೋಂಗಿ ಬಾಬಾಗಳು. ದೇಶದಲ್ಲಿ ತೊಂಬತ್ತರ ದಶಕದ ನಂತರ ಇಂಥ ಧಾರ್ಮಿಕ ದಂಗೆಕೋರರ ಹಾವಳಿ ವಿಪರೀತವಾಗಿದೆ. ಇದಕ್ಕೆ ಕಾರಣ ಇವರಿಗೆ ಅಡ್ಡ ಬಿದ್ದು ಪೋಷಿಸುವ ಅಧಿಕಾರಸ್ಥ ರಾಜಕಾರಣಿಗಳು. ಬಹುತೇಕ ರಾಜಕಾರಣಿಗಳ ಕಪ್ಪು ಹಣ ಈ ಧರ್ಮೋದ್ಯಮಿಗಳ ತಿಜೋರಿಯಲ್ಲಿ ಗುಪ್ತವಾಗಿಟ್ಟಿರುವುದರಿಂದ ಇದು ಪರಸ್ಪರ ಹೊಂದಾಣಿಕೆಯ ವ್ಯವಹಾರ. ಇದೀಗ ಉತ್ತರ ಪ್ರದೇಶದ ಹಾಥರಸ್ ಜಿಲ್ಲೆಯಲ್ಲಿ ಇಂಥ ನಕಲಿ ಬಾಬಾವೊಬ್ಬ ಸತ್ಸಂಗ ನಡೆಸಿದಾಗ ನಡೆದ ನೂಕು ನುಗ್ಗಲು ಮತ್ತು ಕಾಲ್ತುಳಿತದಲ್ಲಿ 121ಕ್ಕೂ ಹೆಚ್ಚು ಮಂದಿ ದುರಂತ ಸಾವಿಗೀಡಾಗಿದ್ದಾರೆ
ಹಾಥರಸ್‌ನ ಈ ದುರಂತಕ್ಕೆ ಕಾರಣನಾದವನು ಸೂರಜ್ ಸಿಂಗ್ ಎಂಬ ಮಾಜಿ ಪೊಲೀಸ್ ಪೇದೆ. ಹಿಂದೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೈಲು ಸೇರಿದ್ದ ಈತ ಶಿಕ್ಷೆ ಅನುಭವಿಸಿ ಹೊರಗೆ ಬಂದ ನಂತರ ತನ್ನ ಹೆಸರನ್ನು’ ಸಾಕಾರ ವಿಶ್ವಹರಿ ಬಾಬಾ (ಭೋಲೆ ಬಾಬಾ) ಎಂದು ಬದಲಿಸಿಕೊಂಡು ಸತ್ಸಂಗಗಳನ್ನು ಆಯೋಜಿಸತೊಡಗಿದ
ಹಾಥರಸ್‌ನಲ್ಲಿ ದುರಂತ ನಡೆದ ಜಾಗದಲ್ಲಿ ಭೋಲೆ ಬಾಬಾನ ಭಾಷಣ ಕೇಳಲು ಎರಡು ಲಕ್ಷಕ್ಕೂ ಹೆಚ್ಚು ಜನರು ಬಂದಿದ್ದರು. ಇಷ್ಟೊಂದು ಜನರು ಸೇರುವಷ್ಟು ಸ್ಥಳಾವಕಾಶ ಅಲ್ಲಿರಲಿಲ್ಲ. ಇದರಿಂದಾಗಿ ಅತ್ತಿತ್ತ ನಡೆದಾಡಲಾಗದಂಥ ಪರಿಸ್ಥಿತಿ ಇತ್ತು ಹೀಗಾಗಿ ನೂಕು ನುಗ್ಗಲು ಉಂಟಾಗಿ ಮಕ್ಕಳು ಮರಿ ಸೇರಿದಂತೆ 121 ಜನ ಸಾವಿಗೀಡಾದರು
ಈ ದೇಶಕ್ಕೆ ಇಂಥ ಬಾಬಾಗಳು, ನಕಲಿ ದೇವ ಮಾನವರು, ರಾಜಕಾರಣಿಗಳ ಕಪ್ಪು ಹಣದ ಖಜಾನೆಗಳಾದ ಮಠಾಧೀಶರು ಮಾಡಿದಷ್ಟು ಹಾನಿಯನ್ನು ಇನ್ಯಾರೂ ಮಾಡಿಲ್ಲ. ಇಂಥವರ ವಿರುದ್ಧ ಪೆರಿಯಾರ್‌ಮಾದರಿಯಲ್ಲಿ ದೊಡ್ಡ ಜನಾಂದೋಲನ ನಡೆಯಬೇಕಾಗಿದೆ.
ದೇವರನ್ನು, ಧರ್ಮವನ್ನು ವ್ಯಾಪಾರಕ್ಕಿಟ್ಟ ಇಂಥವರನ್ನು ಏನೆಂದು ಕರೆಯಬೇಕು. ಆಧ್ಯಾತ್ಮಿಕ ಚಿಂತನೆಯನ್ನು ಗಾಳಿಗೆ ತೂರಿದ ಇವರು ತಮ್ಮದೇ ಕಾರ್ಖಾನೆಗಳನ್ನು ಹೊಂದಿದ್ದಾರೆ. ನಕಲಿ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ.
ಇತ್ತೀಚಿನ ಎರಡು ದಶಕಗಳಿಂದ ಇವರು ಭಾರತದಲ್ಲಿ ವಿಜೃಂಭಿಸುತ್ತಿದ್ದಾರೆ. ‘ಇಹದ ಜಂಜಡಗಳಿಂದ ದೂರವಾಗಿ ಪರಮಾತ್ಮನ ನಾಮಸ್ಮರಣೆ ಮಾಡಿ’ ಎಂದು ಭಕ್ತರಿಗೆ ಧಾರಾಳವಾಗಿ ಉಪದೇಶಿಸುವ ಇವರು ಮಾತ್ರ ತಮ್ಮದೇ ಆದ ಜಂಜಡದಲ್ಲಿ ಮುಳುಗಿ ಮಜಾ ಮಾಡುತ್ತಾರೆ. ಸಂಸಾರಿಕರಿಗೆ ಮತ್ತು ಇವರಿಗೆ ಒಂದೇ ವ್ಯತ್ಯಾಸ: ಇವರದು ಜವಾಬ್ದಾರಿಯಿಲ್ಲದ ಜಂಜಡ, ಕಷ್ಟವಿಲ್ಲದ ಸುಖ.
ಹಿಂದೆ ಮಠ ಎಂದರೆ ಸಿದ್ಧಾರೂಢರು, ಶಿಶುನಾಳ ಶರೀಫಸಾಹೇಬರು, ರಾಮಕೃಷ್ಣ ಪರಮಹಂಸರ ಮಠ ನೆನಪಿಗೆ ಬರುತ್ತಿತ್ತು. ಸನ್ಯಾಸಿಯೆಂದರೆ ಸ್ವಾಮಿ ವಿವೇಕಾನಂದರು ಕಣ್ಣ ಮುಂದೆ ಬರುತ್ತಿದ್ದರು. ಅವರ ಬಳಿ ಹೋದರೆ ಜನರಿಗೆ ಮಾನಸಿಕ ನೆಮ್ಮದಿ ಸಿಗುತ್ತಿತ್ತು. ತಮ್ಮದೆನ್ನುವ ಏನೂ ಇಲ್ಲದ ಇವರಿಗೆ ಯಾರೋ ಊಟ ಕೊಡುತ್ತಿದ್ದರು. ಇನ್ಯಾರೋ ಬಟ್ಟೆ ತಂದು ಕೊಡುತ್ತಿದ್ದರು. ಆಗಿನ ಧರ್ಮಗುರುಗಳು ಜನರನ್ನು ಪರಸ್ಪರ ಪ್ರೀತಿಸಲು, ಗೌರವಿಸಲು ಉಪದೇಶ ಮಾಡುತ್ತಿದ್ದರು. ಅವರಿಗೆ ಜಾತಿ, ಮತದ ಹಂಗಿರಲಿಲ್ಲ. ಆದರೆ, ಈಗ ಎಲ್ಲ ಬದಲಾಗಿದೆ. ಅಂಥ ಸಂತರು ಎಲ್ಲಿದ್ದಾರೆಂದು ಹುಡುಕಬೇಕಿದೆ. ಈಗ ಏನಿದ್ದರೂ ಧಾರ್ಮಿಕ ವ್ಯಾಪಾರಿಗಳ ಕಾಲ
ಧರ್ಮ ಅಥವಾ ಅಧ್ಯಾತ್ಮ ಎಂಬುದು ಈಗ ಬಂಡವಾಳ ಹೂಡಿ, ಹೂಡಿದ ಬಂಡವಾಳಕ್ಕೆ ನೂರಾರು ಪಟ್ಟು ಲಾಭ ಮಾಡಿಕೊಳ್ಳುವ ವ್ಯಾಪಾರವಾಗಿದೆ. ಇದು ಇತ್ತೀಚಿನ ದಿನಗಳಲ್ಲಿ ವೇಗವಾಗಿ ಆಗುತ್ತಿರುವ ಬೆಳವಣಿಗೆ.
ಮುಂಚೆಯೆಂದರೆ, 70ರ ದಶಕದವರೆಗೆ ಬಂಡವಾಳಗಾರರೆಂದರೆ ಟಾಟಾ, ಬಿರ್ಲಾ ದಾಲ್ಮಿಯಾ ಎಂದು ಹೇಳುತ್ತಿದ್ದೆವು. ಹುಬ್ಬಳ್ಳಿಯ ಎ.ಜೆ ಮುಧೋಳ ಮತ್ತು ಕಲಬುರಗಿಯ ಗಂಗಾಧರ ನಮೋಶಿಯವರಂಥ ಕಮ್ಯುನಿಸ್ಟ್ ನಾಯಕರಿಗೆ ಈ ಟಾಟಾ, ಬಿರ್ಲಾ ಮುಂತಾದ 75 ಬಂಡವಾಳಗಾರರ ಹೆಸರು ನಾಲಿಗೆ ತುದಿಯ ಮೇಲಿರುತ್ತಿತ್ತು. ಪ್ರತಿ ಭಾಷಣದಲ್ಲಿ ಅವರ ಹೆಸರನ್ನು ಪಟ್ಟಿ ಮಾಡಿ ಹೇಳುತ್ತಿದ್ದರು. ನಂತರ ಅಂಬಾನಿ, ಅದಾನಿ ಮುಂತಾದವರು ಬಂದರು.
ಈಗ ಹೃಷಿಕೇಶದ ಬಾಬಾರಾಮ್‌ದೇವ್ ಬೆಂಗಳೂರಿನ ಕನಕಪುರ ರಸ್ತೆಯ ರವಿಶಂಕರ್ ಗುರೂಜಿ ಉದ್ಯಮ ರಂಗಕ್ಕೆ ಇಳಿದಿದ್ದಾರೆ. ಯೋಗ ಮಾರಾಟಕ್ಕಿಟ್ಟ ನಂತರ ಆಯುರ್ವೇದ ಔಷಧಿಗಳನ್ನು ಉತ್ಪಾದಿಸಿ ವ್ಯಾಪಾರಕ್ಕೆ ಇಳಿದರು. ಈಗಂತೂ ಸಾಬೂನು, ಶಾಂಪು, ಕೂದಲಿಗೆ ಹಚ್ಚುವ ಬಣ್ಣ, ಬಿಸ್ಕತ್ತು ಸೇರಿದಂತೆ ಎಲ್ಲವನ್ನೂ ಉತ್ಪಾದಿಸಿ ಮಾರುವಲ್ಲ್ ರವಿಶಂಕರ್ ಗುರೂಜಿಗೂ ರಾಮ್‌ದೇವ್‌ಗೂ ಪೈಪೋಟಿ ನಡೆದಿದೆ.
ಕೋವಿಡ್‌ಗೆ ಔಷಧಿ ಕಂಡು ಹಿಡಿದಿದ್ದಾಗಿ ರೈಲು ಬಿಟ್ಟ ರಾಮ್‌ದೇವ್‌ಆಲೋಪಥಿ ಔಷಧಿಯನ್ನು ಟೀಕಿಸಲು ಹೋಗಿ, ಕೇಸನ್ನು ಮೈಮೇಲೆ ಎಳೆದುಕೊಂಡು, ಕೋರ್ಟಿನಲ್ಲಿ ಕ್ಷಮಾಪಣೆ ಕೇಳಿ ಹೊರಗೆ ಬಂದರು.
ಮಠಾಧೀಶರು ಶಾಲಾಕಾಲೇಜು ನಡೆಸುವುದು ಹಳೆಯ ಸುದ್ದಿ. 70 ವರ್ಷಗಳ ಹಿಂದೆ ಬೀದರ್ ಜಿಲ್ಲೆಯ ಭಾಲ್ಕಿಯ ಪಟ್ಟದ ಗುರುಗಳು ಬಡ ಮಕ್ಕಳಿಗೆ ಅಕ್ಷರ ನೀಡಲು ಶಾಲೆ ನಡೆಸುತ್ತಿದ್ದರು. ಆದರೆ, ಈಗ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕಾಲೇಜುಗಳೆಂಬ ಅಂಗಡಿಗಳನ್ನು ತೆರೆದ ಕೆಲ ಮಠಾಧೀಶರು ಡೊನೇಶನ್, ಕ್ಯಾಪಿಟೇಶನ್ ಶುಲ್ಕ ವಸೂಲಿಯ ದಂಧೆಗೆ ಇಳಿದಿದ್ದಾರೆ. ಇಂಥ ಕೆಲ ಕಾಲೇಜುಗಳಲ್ಲಿ ರಾಜಕಾರಣಿಗಳ ಪಾಲೂ ಇರುತ್ತದೆ.
ಇನ್ನು ಕೆಲ ಮಠಾಧೀಶರು ರಾಜಕಾರಣಿಗಳ ಕಪ್ಪು ಹಣವನ್ನು ಜೋಪಾನವಾಗಿ ಇಡುವ ಸ್ವಿಸ್ ಬ್ಯಾಂಕುಗಳಾಗಿದ್ದಾರೆ. ಅಂತಲೇ ಹಿಂದೆಂದೂ ಕಂಡರಿಯದಷ್ಟು ಮಠಗಳ ಹಸ್ತಕ್ಷೇಪ ರಾಜಕೀಯದಲ್ಲಿ ನಡೆದಿದೆ. ಹಿಂದೆ ರಾಜಕಾರಣಿಗಳು ಓಟಿಗಾಗಿ ಮಠ, ಮಂದಿರಗಳಿಗೆ ದರ್ಶನ ನೀಡುತ್ತಿದ್ದರು. ಈಗ ಮಂತ್ರಿ ಸೀಟಿಗಾಗಿ ವಶೀಲಿ ಹಚ್ಚಲು ಮಠಾಧೀಶರ ಬಳಿ ಎಡತಾಕುತ್ತಿದ್ದಾರೆ.
ಹಿಂದೆ ಗೌತಮ ಬುದ್ಧ ಸತ್ಯವನ್ನು ಹುಡುಕಿಕೊಂಡು ಅರಮನೆ ತೊರೆದು ಕಾಡಿಗೆ ಹೋದ. ಆದರೆ, ಇಂದಿನ ಆಧುನಿಕ ಕಾರ್ಪೊರೇಟ್ ಗುರುಗಳು ಕಾಡಿನ ಉಸಾಬರಿ ಬೇಡವೆಂದು ಅರಮನೆಯಂಥ ಆಶ್ರಮಗಳನ್ನು ಕಟ್ಟಿಕೊಂಡಿದ್ದಾರೆ. ಅಲ್ಲಿ ಬದುಕುವ ಮಾರ್ಗ ಕಲಿಯಲು ದೇಶ ವಿದೇಶಗಳಿಂದ ಕೋಟ್ಯಧಿಪತಿಗಳು ಬರುತ್ತಾರೆ.
ಜಗತ್ತಿನಲ್ಲಿ ಹೇಗೋ ಏನೋ? ಭಾರತದಲ್ಲಂತೂ ದೇವರು, ಧರ್ಮ ಮತ್ತು ಆಧ್ಯಾತ್ಮಿಕತೆಗೆ ದೊಡ್ಡ ಮಾರುಕಟ್ಟೆ ನಿರ್ಮಾಣ ವಾಗಿದೆ. ವಿಶ್ವದಲ್ಲಂತೂ ಮಾದಕ ಪದಾರ್ಥ, ಶಸ್ತ್ರಾಸ್ತ್ರ ಮತ್ತು ಆಧ್ಯಾತ್ಮಿಕತೆ ಮೂರು ದೊಡ್ಡ ಉದ್ದಿಮೆಗಳಾಗಿ ಬೆಳೆದಿವೆ.
ಅಧ್ಯಾತ್ಮ ಎಂದರೆ ಏನು? ಎಲ್ಲವನ್ನೂ ಎಂದರೆ ಜಾತಿ, ಮತ ನೋಡದೆ ಎಲ್ಲರನ್ನೂ ಸಮಾನವಾಗಿ ಪ್ರೀತಿಸುವುದು, ಸಮಾನವಾಗಿ ಕಾಣುವುದು ಮಾತ್ರವಲ್ಲ, ಗಿಡ, ಮರ, ನದಿ, ಪ್ರಾಣಿ, ಪಕ್ಷಿಗಳನ್ನು ಪ್ರೀತಿಸುವುದು ನಿಜವಾದ ಅಧ್ಯಾತ್ಮ. ಅಂತಲೇ, ಗುರುಗೋವಿಂದ ಭಟ್ಟರು ಶಿಶುನಾಳ ಶರೀಫರಿಗೆ ಶಿಷ್ಯತ್ವ ನೀಡಿ ವಿದ್ಯೆ ಕಲಿಸಿದರು.
ಆದರೆ, ಈಗ ಜಗ್ಗಿ ವಾಸುದೇವ ಎಂಬ ಕಾರ್ಪೊರೇಟ್ ಗುರು ಈ ನೆಲದ ಗಿಡ ಮರಗಳಲ್ಲಿ, ನದಿ, ಬಾವಿಗಳಲ್ಲಿ ಹಿಂದುತ್ವ ಕಾಣುತ್ತಿದ್ದಾರೆ. ಎಲ್ಲರಲ್ಲೂ ದೇವರನ್ನು ಕಂಡ ಹಿಂದಿನವರೆಲ್ಲಿ, ಎಲ್ಲದರಲ್ಲೂ ಜಾತಿ ಮತವನ್ನು ಕಾಣುವ ಈ ಕ್ಷುದ್ರ ಜೀವಿಗಳೆಲ್ಲಿ?
ವಾಸ್ತವವಾಗಿ ಧರ್ಮ ಮತ್ತು ಅಧ್ಯಾತ್ಮ ಒಂದೇ ಅಲ್ಲ. ಬಹುತೇಕ ಧರ್ಮ ಗುರುಗಳು ಅಧ್ಯಾತ್ಮವನ್ನು ತಮ್ಮ ರಕ್ಷಾ ಕವಚವಾಗಿ ಬಳಸಿಕೊಳ್ಳುತ್ತ ಬಂದಿದ್ದಾರೆ. ಕಾರ್ಲ್ ಮಾರ್ಕ್ಸ್ ಧರ್ಮವನ್ನು ‘ಅಫೀಮು, ಬಡವರ ನಿಟ್ಟುಸಿರು’ ಎಂದು ಕರೆದರು. ಆದರೆ, ಇಂದು ಧರ್ಮ ಎಂಬುದು ಕಾರ್ಪೊರೇಟ್ ಬಂಡವಾಳಶಾಹಿಗಳ ಅನಸ್ತೇಶಿಯಾ ಆಗಿ ಬಳಕೆಯಾಗುತ್ತಿದೆ. ಅಂತಲೇ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ನೂರರ ಗಡಿ ದಾಟಿದರೂ ಅದರ ಅರಿವಿಲ್ಲದ ಮಧ್ಯಮ ವರ್ಗದ ಜನ ಮತಧರ್ಮದ ಮತ್ತೇರಿಸಿಕೊಂಡು ಮಂದಿರ, ಮಸೀದಿ ವಿವಾದದಲ್ಲ್ ಮುಳುಗಿದ್ದಾರೆ.
ಆಧ್ಯಾತ್ಮಿಕತೆಯನ್ನು ಬಂಡವಾಳ ಮಾಡಿಕೊಂಡ ಧರ್ಮಗುರುಗಳು ಮತ್ತು ಮಠಾಧೀಶರು ಭಕ್ತರಿಗೆ ಕ್ಷಣಿಕ ಸುಖ ಎಂದು ಬೋಧಿಸುವ ಎಲ್ಲವನ್ನೂ ಅನುಭವಿಸುತ್ತಾರೆ. ಇಂಥವರ ಬಳಿ ಸಿರಿವಂತ ಭಕ್ತರು ಬರುತ್ತಾರೆ. ಬದುಕಿನಲ್ಲಿ ಎಲ್ಲವೂ ಇರುವ ಇವರಿಗೆ ಮಾನಸಿಕ ನೆಮ್ಮದಿ ಇರುವುದಿಲ್ಲ.
ಅಂಥವರಿಗೆ ‘ಈ ಜಗತ್ತು ಮಾಯೆ, ನೀನೊಬ್ಬ ಪಾತ್ರಧಾರಿ ಮಾತ್ರ. ಎಲ್ಲವನ್ನೂ ಮೇಲಿನವನು ಆಡಿಸುತ್ತಾನೆ. ನಿನಗೆ ಅಂತಿಮ ಸತ್ಯ ಬೇಕಾಗಿದೆ. ವ್ಯಾಪಾರ ದಂಧೆಯಿಂದ ನಿನ್ನ ಕೈಗಳು ಹೊಲಸಾಗಿರಬಹುದು. ಆದರೆ, ಆತ್ಮ ಶುದ್ಧವಾಗಿದೆ’ ಎಂದು ಭ್ರಮೆ ಮೂಡಿಸುತ್ತಾರೆ. ಇದರಿಂದ ಉಬ್ಬಿ ಹೋಗುವ ಉದ್ಯಮಿ ವಾರದ 6 ದಿನ ಇತರರ ಶೋಷಣೆ ಮಾಡಿ, ಏಳನೇ ದಿನ ರವಿಶಂಕರ್‌ರಂಥ ಗುರುವಿನ ಪಾದದ ಬಳಿ ಬಂದು ಬೀಳುತ್ತಾನೆ.
ನಮ್ಮ ದೇಶದಲ್ಲಿ ಬಾಬಾ ರಾಮ್‌ದೇವ್, ರವಿಶಂಕರ್, ಜಗ್ಗಿ ವಾಸುದೇವ, ಅಸಾರಾಮ ಬಾಪು ಹೀಗೆ ಗುರುಗಳ, ಕಾರ್ಪೋರೇಟ್ ಧರ್ಮೋದ್ಯಮಿಗಳ ಹೊಸ ತಳಿ ಹುಟ್ಟಿಕೊಂಡಿದೆ. ಜಾತ್ಯತೀತ ಭಾರತವನ್ನು ಮನುವಾದಿ ಹಿಂದೂ ರಾಷ್ಟ್ರವನ್ನಾಗಿ ಮಾಡಲು ಹೊರಟಿರುವ ಸಂವಿಧಾನೇತರ ಶಕ್ತಿ ಕೇಂದ್ರಗಳು ಹಾಗೂ ಅವರ ನಿಯಂತ್ರಣದಲ್ಲಿ ಇರುವ ಒಕ್ಕೂಟ ಸರಕಾರ ಈ ಹೊಸ ತಳಿಯ ಧರ್ಮೋದ್ಯಮಿಗಳ ಜೊತೆ ನಿಕಟ ಸಂಬಂಧ ಹೊಂದಿದೆ.
ಅಂತಲೇ ಮಕ್ಕಳನ್ನು ಲೈಂಗಿಕ ಹಿಂಸೆಗೆ ಗುರಿ ಪಡಿಸಿದ ಮಠೋದ್ಯಮಿಯೊಬ್ಬನನ್ನು ರಕ್ಷಿಸಲು ಸರಕಾರ ನಡೆಸಿದ ಕಸರತ್ತು ಎಲ್ಲರಿಗೂ ಗೊತ್ತಿದೆ. ಬಾಬಾ ರಾಮ್‌ದೇವ್ ಉದ್ಯಮದ ಬಾನಗಡಿಗಳಿಗೂ ಯಾರ ರಕ್ಷಾ ಕವಚ ಇದೆ ಎಂಬುದು ಎಲ್ಲರಿಗೂ ತಿಳಿದಿದೆ.
ಜಗತ್ತಿನಲ್ಲಿ ಮುಂದೆ ನಡೆಯುವುದನ್ನು ಹೇಳುವ ಭಕ್ತರನ್ನು ಎಚ್ಚರಿಸುವ ದಿವ್ಯದೃಷ್ಟಿ ಈ ದೇವ ಮಾನವರಲ್ಲಿ ಇರುತ್ತದೆ ಎಂದು ಹೇಳುತ್ತಾರೆ. ಇದೇ ಸಾಲಿಗೆ ನಮ್ಮ ಹೈಟೆಕ್ ಜ್ಯೋತಿಷಿಗಳೂ ಸೇರಿದ್ದಾರೆ. ಆದರೆ, ಇವರಲ್ಲಿ ಯಾರೂ ಕೊರೋನಾ ಎಂಬ ಸಾಂಕ್ರಾಮಿಕ ಬರುತ್ತದೆ. ಕಣ್ಣಿಗೆ ಕಾಣದ ವೈರಾಣು ಸಾವಿರಾರು ಜನರನ್ನು ಸಾಯಿಸುತ್ತದೆ ಎಂದು ಮುಂಚಿತವಾಗಿ ಯಾಕೆ ಹೇಳಲಿಲ್ಲ ಎಂಬ ಪ್ರಶ್ನೆಗೆ ಈ ಧರ್ವೋದ್ಯಮಿಗಳ ಬಳಿ ಉತ್ತರವಿಲ್ಲ.
ಭಾರತ ಮಾತ್ರವಲ್ಲ ಜಗತ್ತಿನ ಶೋಷಕ ವರ್ಗ, ದುಡಿಯುವ ಜನರು, ಇತರ ಜನ ವರ್ಗಗಳನ್ನು ಶೋಷಣೆ ಮಾಡಲು ರಕ್ಷಾ ಕವಚವಾಗಿ ಬಳಸಿಕೊಳ್ಳುವ ಈ ದೇವರು ಮತ್ತು ಧರ್ಮವನ್ನು ದುರ್ಬಳಕೆ ಮಾಡಿಕೊಳ್ಳುವ ಮತೀಯ ದಗಾಕೋರರು ಮತ್ತು ಧರ್ವೋದ್ಯಮಿಗಳ ವಿರುದ್ಧ ಜನರಲ್ಲಿ ಅರಿವು ಮೂಡುವವರೆಗೆ ಈ ವಂಚನೆಯಿಂದ ಮುಕ್ತಿ ಇಲ್ಲ. ಜನಪರ ಮತ್ತು ಪ್ರಗತಿಪರ ಸಂಘಟನೆಗಳ ಹೋರಾಟದ ಮೊದಲ ಆದ್ಯತೆ ಈ ಧಾರ್ಮಿಕ ವಂಚಕರ ಮುಖವಾಡವನ್ನು ಬಯಲಿಗೆ ಎಳೆಯುವುದಾಗಿರಬೇಕು.