ಮೇ ಸಾಹಿತ್ಯ ಮೇಳಕ್ಕೆ ದಶಕದ ಸಂಭ್ರಮ

ಬಂಡಾಯ ಸಾಹಿತ್ಯ ಚಳವಳಿ ಮೊದಲಿನಷ್ಟು ಅಲ್ಲವಾದರೂ ಈಗಲೂ ಬರಗೂರು ರಾಮಚಂದ್ರಪ್ಪನವರು ಮತ್ತು ಆರ್.ಜಿ.ಹಳ್ಳಿ ನಾಗರಾಜರ ನೇತೃತ್ವದಲ್ಲಿ ಕ್ರಿಯಾಶೀಲವಾಗಿದೆ. ಈ ನಡುವೆ 10 ವರ್ಷಗಳಿಂದ ಎಲ್ಲ ಪ್ರಗತಿಪರ ಮನಸ್ಸುಗಳು ಸೇರಿ ರೂಪಿಸಿಕೊಂಡ ಮೇ ಸಾಹಿತ್ಯ ಮೇಳ ಹೊಸ ಪೀಳಿಗೆಯ ತರುಣರನ್ನು ಆಕರ್ಷಿಸುವಲ್ಲಿ ಸಫಲವಾಗಿದೆ.

Update: 2024-06-03 05:29 GMT

ಸಮಾನತೆಯಲ್ಲಿ ನಂಬಿಕೆ ಹೊಂದಿರುವ ಮತ್ತು ವಿಭಿನ್ನ ಆಲೋಚನಾಕ್ರಮಗಳ ದಾರಿಯಲ್ಲಿ ಸಾಗುವ ಸಮಾನ ಮನಸ್ಕರನ್ನು ಅದರಲ್ಲೂ ಸಾಂಸ್ಕೃತಿಕ ರಂಗದ ಕ್ರಿಯಾಶೀಲರನ್ನು ಒಂದೇ ವೇದಿಕೆಗೆ ತಂದ ಶ್ರೇಯಸ್ಸು ಮೇ ಸಾಹಿತ್ಯ ಮೇಳಕ್ಕೆ ಸಲ್ಲುತ್ತದೆ. ಈ ಸಲ ಮೇ 25 ಮತ್ತು 26ರಂದು ಕೊಪ್ಪಳದಲ್ಲಿ ನಡೆದ ಈ ಸಮ್ಮೇಳನ ಅನೇಕ ಹಿರಿಯ ಸ್ನೇಹಿತರ ಜೊತೆಗೆ ಹೊಸ ರಕ್ತದ ಮೂವತ್ತರೊಳಗಿನ ಯುವಕರನ್ನು ಒಳಗೊಂಡಿತ್ತು. ಸಾಹಿತ್ಯ ವೇದಿಕೆಗಳು ಬರೀ ಸಾಹಿತ್ಯದ ವಿಷಯಗಳಿಗೆ ಸೀಮಿತಗೊಳ್ಳದೇ ಸಾಹಿತ್ಯೇತರ ಜ್ವಲಂತ ಪ್ರಶ್ನೆಗಳಿಗೂ ಸ್ಪಂದಿಸಬೇಕು ಎಂಬುದಕ್ಕೆ ಈ ಸಲದ ಕೊಪ್ಪಳದ ಸಮ್ಮೇಳನ ಒಂದು ಉದಾಹರಣೆಯಾಯಿತು.

ನನಗೆ 70ರ ದಶಕದಿಂದ ಸಾಹಿತ್ಯಲೋಕದ ಒಡನಾಟವಿದೆ. 1975ರಲ್ಲಿ ದಾವಣಗೆರೆಯಲ್ಲಿ ನಡೆದ ಪ್ರಗತಿಪಂಥ ಸಾಹಿತ್ಯ ಸಮ್ಮೇಳನವನ್ನು ನಾವೇ ಸಮಾನ ಮನಸ್ಕರು ಸೇರಿ ಸಂಘಟಿಸಿದ್ದೆವು. ಅದಕ್ಕೆ ಹೆಸರಾಂತ ಹಿಂದಿ ಮತ್ತು ಉರ್ದು ಲೇಖಕ ಭೀಷ್ಮ ಸಹಾನಿ, ಅಂದಿನ ಸೋವಿಯತ್ ರಶ್ಯದ ಕನ್ನಡ ಬಲ್ಲ ಸಾಹಿತಿ ದೆಷ್ಕೊ ಮೊದಲಾದವರು ಬಂದಿದ್ದರು.ಕನ್ನಡದ ಖ್ಯಾತ ಕಾದಂಬರಿಕಾರ ಬಸವರಾಜ ಕಟ್ಟೀಮನಿ ಮತ್ತು ‘ಚಿರಸ್ಮರಣೆ’ ಖ್ಯಾತಿಯ ನಿರಂಜನ ಅವರ ಮಾರ್ಗದರ್ಶನದಲ್ಲಿ ನಾವು ನಡೆಸಿದ ಈ ಸಮ್ಮೇಳನ ಪ್ರಗತಿಶೀಲ ಸಾಹಿತ್ಯ ಚಳವಳಿಗೆ ಪುನಶ್ಚೇತನ ನೀಡುವ ಒಂದು ಪ್ರಯತ್ನವಾಗಿತ್ತು. ದಾವಣಗೆರೆ ನಂತರ ಮಹಾಲಿಂಗಪುರ ಮತ್ತು ಪುತ್ತೂರುಗಳಲ್ಲಿ ಎರಡು ಬಾರಿ ಪ್ರಗತಿಪಂಥ ಸಮ್ಮೇಳನ ನಡೆದವು. ಆದರೆ ಕಾರಣಾಂತರಗಳಿಂದ ನಂತರದ ವರ್ಷಗಳಲ್ಲಿ ಇದು ಸ್ಥಗಿತಗೊಂಡಿತು.

ಅದೇ ಸಮಯದಲ್ಲಿ ಮೈಸೂರಿನಲ್ಲಿ ಸಮಾಜವಾದಿ ಗೆಳೆಯರು ಮುಖ್ಯವಾಗಿ ಪೂರ್ಣಚಂದ್ರ ತೇಜಸ್ವಿ, ಪಿ.ಲಂಕೇಶ್, ಕೆ.ರಾಮದಾಸ, ಪ್ರೊ. ಎಂ.ಡಿ.ನಂಜುಂಡಸ್ವಾಮಿ ಹಾಗೂ ಚಂಪಾ ಸೇರಿ ಕೆಲವರು ಬರಹಗಾರರ, ಕಲಾವಿದರ ಒಕ್ಕೂಟವೊಂದಕ್ಕೆ ಚಾಲನೆ ನೀಡಿದರು. ಹಿರಿಯ ಸಾಹಿತಿ ಕುವೆಂಪು ಈ ಸಮ್ಮೇಳನ ಉದ್ಘಾಟಿಸಿದರು. ಆದರೆ, ನಂತರ ಇದೂ ನಿಷ್ಕ್ರಿಯವಾಯಿತು.

ಇವೆರಡೂ ಪ್ರಯೋಗಗಳು ಮುಗಿದ ನಂತರ 80ರ ದಶಕದ ಆರಂಭದಲ್ಲೂ ಬಂಡಾಯ ಸಾಹಿತ್ಯ ಸಂಘಟನೆ ಉದಯವಾಯಿತು. ಬೆಂಗಳೂರಿನಲ್ಲಿ ಒಂದು ಸಮ್ಮೇಳನವೂ ನಡೆಯಿತು. ಬರಗೂರು ರಾಮಚಂದ್ರಪ್ಪ, ಚಂಪಾ, ಡಿ.ಆರ್.ನಾಗರಾಜ, ಕವಿ ಸಿದ್ಧಲಿಂಗಯ್ಯ ಮೊದಲಾದವರು ಇದರ ಸಾರಥ್ಯ ವಹಿಸಿದ್ದರು. ಇದು ಹಿಂದಿನ ಎರಡು ಸಾಹಿತ್ಯ ಚಳವಳಿಗಳಿಗಿಂತ ವಿಭಿನ್ನವಾಗಿತ್ತು. ಹಿಂದಿನ ಪ್ರಗತಿಪಂಥ ಹಾಗೂ ಒಕ್ಕೂಟ ಗಳು ಅನುಕ್ರಮವಾಗಿ ಮಾರ್ಕ್ಸ್‌ವಾದಿ ಗಳು ಹಾಗೂ ಲೋಹಿಯಾವಾದಿಗಳು ಕಟ್ಟಿದ ಸಂಘಟನೆಗಳಾಗಿದ್ದವು. ಆದರೆ ಬಂಡಾಯ ಸಾಹಿತ್ಯ ಚಳವಳಿ ಮಾರ್ಕ್ಸ್‌ವಾದಿಗಳು, ಲೋಹಿಯಾವಾದಿಗಳು, ಅಂಬೇಡ್ಕರ್‌ವಾದಿಗಳು ಒಂದಾಗಿ ಕಟ್ಟಿದ ಸಂಘಟನೆ ಎಂದು ಹೆಸರಾಯಿತು.

ಬಂಡಾಯ ಸಾಹಿತ್ಯ ಚಳವಳಿ ಮೊದಲಿನಷ್ಟು ಅಲ್ಲವಾದರೂ ಈಗಲೂ ಬರಗೂರು ರಾಮಚಂದ್ರಪ್ಪನವರು ಮತ್ತು ಆರ್.ಜಿ.ಹಳ್ಳಿ ನಾಗರಾಜರ ನೇತೃತ್ವದಲ್ಲಿ ಕ್ರಿಯಾಶೀಲವಾಗಿದೆ. ಈ ನಡುವೆ 10 ವರ್ಷಗಳಿಂದ ಎಲ್ಲ ಪ್ರಗತಿಪರ ಮನಸ್ಸುಗಳು ಸೇರಿ ರೂಪಿಸಿಕೊಂಡ ಮೇ ಸಾಹಿತ್ಯ ಮೇಳ ಹೊಸ ಪೀಳಿಗೆಯ ತರುಣರನ್ನು ಆಕರ್ಷಿಸುವಲ್ಲಿ ಸಫಲವಾಗಿದೆ.

ಕಾರ್ಪೊರೇಟ್ ಕೃಪಾಪೋಷಿತ ಧಾರವಾಡ ಸಂಭ್ರಮದ ಸಂದರ್ಭದಲ್ಲಿ ಸಮಾನ ಮನಸ್ಕ ಮಿತ್ರರು ನಡೆಸಿದ ಜನಸಾಹಿತ್ಯ ಸಮ್ಮೇಳನ ನಂತರದ ದಿನಗಳಲ್ಲಿ ಬಸವರಾಜ ಸೂಳಿಬಾವಿ ಮತ್ತು ಕವಲಕ್ಕಿಯ ಲೇಖಕಿ ಡಾ. ಎಚ್.ಎಸ್. ಅನುಪಮಾ ಅವರ ನೇತೃತ್ವದಲ್ಲಿ ಮೇ ಸಾಹಿತ್ಯ ಸಮ್ಮೇಳನದ ರೂಪ ತಾಳಿ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ. ಇದರಲ್ಲೂ ಮಾರ್ಕ್ಸ್‌ವಾದಿ ಗಳು,ಲೋಹಿಯಾವಾದಿಗಳು , ಅಂಬೇಡ್ಕರ್‌ವಾದಿಗಳು ಮತ್ತು ಯಾವುದೇ ಗುಂಪಿಗೆ ಸೇರದ ಬಿಸಿ ರಕ್ತದ ಯುವಕರು ವರ್ಷಕ್ಕೊಮ್ಮೆ ಸೇರಿ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಚರ್ಚಿಸುತ್ತಾರೆ.ಇದು ಯಾವುದೇ ಕಾರ್ಪೊರೇಟ್ ಮೂಲ, ಬಂಡವಾಳಶಾಹಿಗಳಿಂದ ಹಣ ಪಡೆಯುವುದಿಲ್ಲ. ಸಮಾನ ಮನಸ್ಕ ಮಿತ್ರರಿಂದ ಐವತ್ತರಿಂದ ಐದು ಸಾವಿರ ಹಾಗೂ ಅದಕ್ಕೂ ಹೆಚ್ಚು ಹಣ ಸಂಗ್ರಹಿಸಿ ಮೇ ಸಾಹಿತ್ಯ ಮೇಳ ನಡೆಸಲಾಗುತ್ತದೆ. ಹಣ ಮಾತ್ರವಲ್ಲ ಸಮ್ಮೇಳನ ನಡೆಯುವ ಜಿಲ್ಲೆಯ ಜನ ಅಕ್ಕಿ,ಗೋಧಿ, ಬೆಲ್ಲ ಸಂಗ್ರಹಿಸಿ ಕೊಡುತ್ತಾರೆ. ಉತ್ತರ ಕರ್ನಾಟಕದ ಅನೇಕ ಕಡೆ ಜೋಳದ ರೊಟ್ಟಿ,ಸಜ್ಜೆ ರೊಟ್ಟಿ, ಶೇಂಗಾದ ಹೋಳಿಗೆಗಳನ್ನು ಜನ ಸಾಮಾನ್ಯರು ತಮ್ಮ, ತಮ್ಮ ಮನೆಗಳಲ್ಲಿ ಮಾಡಿ ತಂದು ಕೊಡುತ್ತಾರೆ. ಸಮ್ಮೇಳನ ಮುಗಿದ ನಂತರ ಬಸೂ ಅವರು ಮೇಳಕ್ಕೆ ಬಂದ ಹಣ ಹಾಗೂ ಖರ್ಚು ವೆಚ್ಚದ ಪಟ್ಟಿಯನ್ನು ಜಾಲತಾಣದ ಮೂಲಕ ಪ್ರಕಟಿಸುತ್ತಾರೆ. ಈ ಪಾರದರ್ಶಕತೆ ನಾಡಿನ ಸಾರಸ್ವತ ಲೋಕದ ಬಹುತೇಕ ಜನರಿಗೆ ಇಷ್ಟವಾಗಿದೆ.ಹೀಗಾಗಿ ಬಸೂ ಅವರು ಜಾಲತಾಣದಲ್ಲಿ ಒಂದು ಮನವಿ ಮಾಡಿಕೊಂಡರೆ ಸಾಕು ಹಣ ಹೊಳೆಯಂತೆ ಹರಿದು ಬರುತ್ತದೆ.

ಮೇ ಸಾಹಿತ್ಯ ಮೇಳದ ವಿಶೇಷವೆಂದರೆ ಇದು ಯಾವುದೇ ಸಾಂಸ್ಥಿಕ ರೂಪ ಪಡೆದಿಲ್ಲ.ಇದಕ್ಕೆ ಪದಾಧಿಕಾರಿಗಳಿಲ್ಲ. ಸರಕಾರ ಅಥವಾ ಮಠ, ಪೀಠಗಳಿಂದ ಹಣ ಪಡೆಯುವುದಿಲ್ಲ. ಪ್ರತಿವರ್ಷ ಮೇ ತಿಂಗಳ ಯಾವುದಾದರೂ ಒಂದು ದಿನ ಕರ್ನಾಟಕದ ಒಂದೆಡೆ ಮೇ ಸಾಹಿತ್ಯ ಮೇಳ ನಡೆಯುತ್ತದೆ. ಇದರಲ್ಲಿ ಸಾಹಿತ್ಯ ಮಾತ್ರವಲ್ಲ ಸಾಹಿತ್ಯೇತರ ವಿಷಯಗಳೂ ಚರ್ಚೆಗೆ ಬರುತ್ತವೆ. ಕರ್ನಾಟಕದ ಮಾತ್ರವಲ್ಲ ರಾಷ್ಟ್ರೀಯ ಮಟ್ಟದ ಹೋರಾಟಗಾರರು. ಚಿಂತಕರು, ಲೇಖಕರು ಇದರಲ್ಲಿ ಮುಖ್ಯ ಭಾಷಣಕಾರರಾಗಿ ಬರುತ್ತಾರೆ. ಈ ಸಲ ಕೊಪ್ಪಳದಲ್ಲಿ ನಡೆದ ಮೇ ಸಾಹಿತ್ಯ ಮೇಳದಲ್ಲಿ ದಿಲ್ಲಿಯ ರೈತ ಆಂದೋಲನದ ನಾಯಕ ರಾಕೇಶ್‌ಟಿಕಾಯತ್ ದಿಕ್ಸೂಚಿ ಭಾಷಣಕಾರರಾಗಿ ಬಂದಿದ್ದರು. ಕೇರಳದ ಕವಿ ನಾಗಭೂಷಣ ಭಾಗವಹಿಸಿದ್ದರು.

ಭಾರತದ ಜ್ವಲಂತ ಪ್ರಶ್ನೆಗಳ ಬಗ್ಗೆ ಈ ಸಲ ನಾಡಿನ ಅನೇಕ ಚಿಂತಕರು ಮಾತಾಡಿದರು. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿದ್ದ ವಿ.ಗೋಪಾಲಗೌಡರು ಹಾಗೂ ನ್ಯಾಯವಾದಿ ಮೋಹನ ಕಾತರಕಿ, ಹೈಕೋರ್ಟ್ ವಕೀಲರಾದ ಬಾಲನ್, ಬಿ.ಟಿ.ವೆಂಕಟೇಶ, ಶಿಕ್ಷಣ ತಜ್ಞ ನಿರಂಜನಾರಾಧ್ಯ, ಚಿಂತಕ ಮತ್ತು ಹೋರಾಟಗಾರರಾದ ಶಿವಸುಂದರ ಮತ್ತು ಫಣಿರಾಜ್ ಈ ಸಲ ತಮ್ಮ ವಿಚಾರಗಳನ್ನು ಹಂಚಿಕೊಂಡರು.

ಮೇ ಸಾಹಿತ್ಯ ಮೇಳದ ಗೋಷ್ಠಿಗಳು ವಿಚಾರ ಅಭಿವ್ಯಕ್ತಿಗೆ ಮುಕ್ತವಾಗಿ ಇರುತ್ತವೆ.ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈ ಬಾರಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವಕ್ಕೆ ಎದುರಾಗಿರುವ ಅಪಾಯಗಳ ಬಗ್ಗೆ ಈ ಸಲ ಬಿಸಿಬಿಸಿ ಚರ್ಚೆಗಳು ನಡೆದವು. ಲೇಖಕ ಕೆ.ಫಣಿರಾಜರ ಮಾತುಗಳು ಆತ್ಮಾವಲೋಕನಕ್ಕೆ ಆದ್ಯತೆ ನೀಡಿದವು. ಸಂಘಪರಿವಾರದ ಕೋಮುವಾದಿ ಹಿಂದುತ್ವ ಸಾಮಾಜಿಕ ಜೀವನದ ಎಲ್ಲೆಡೆ ವ್ಯಾಪಿಸಿದೆ. ಆದರೆ, ದಶಕಗಳಿಂದ ನಡೆದುಕೊಂಡು ಬಂದ ಪ್ರಗತಿಪರ ಶಕ್ತಿಗಳು ಮತ್ತು ಚಳವಳಿಗಳು ಎಲ್ಲಿವೆ? ತಮ್ಮ ಹಿಂದಿನ ಚೈತನ್ಯವನ್ನು ಅವು ಯಾಕೆ ಉಳಿಸಿಕೊಂಡಿಲ್ಲ ಎಂಬ ಫಣಿರಾಜರ ಆತಂಕಭರಿತ ಪ್ರಶ್ನೆಗೆ ಉತ್ತರ ಕೊಡುವುದು ಸುಲಭವಲ್ಲ. 1925ರಲ್ಲಿ ಸ್ಥಾಪನೆಯಾದ ಆರೆಸ್ಸೆಸ್‌2025ರಲ್ಲಿ ಭಾರತದ ಸಂವಿಧಾನವನ್ನು ಬದಲಿಸಿ ‘ಹಿಂದು ರಾಷ್ಟ್ರ’ ವನ್ನಾಗಿ ಮಾಡುವ ಗುರಿ ಹೊಂದಿದೆ.ಅದು 75 ಸಂಘಟನೆಗಳನ್ನು ಕಟ್ಟಿಕೊಂಡಿದೆ. ಎಬಿವಿಪಿಯಿಂದ ಬಂದವರು ನ್ಯಾಯಾಲಯಗಳ, ಅಧಿಕಾರ ಕೇಂದ್ರಗಳ ಉನ್ನತ ಸ್ಥಾನಗಳಲ್ಲಿ ಇದ್ದಾರೆ. ಮುಸಲ್ಮಾನರು ಮತ್ತು ಕ್ರೈಸ್ತರನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿ ಮಾಡುವ ಹುನ್ನಾರ ನಡೆದಿದೆ ,ಇದನ್ನು ತಡೆಯುವುದು ಹೇಗೆ ಎಂದು ಫಣಿರಾಜ್ ಪ್ರಶ್ನಿಸಿದರು.

‘ನಾವು ಮತ್ತು ನಾಳೆ’ ಗೋಷ್ಠಿಯಲ್ಲಿ ಚಿಂತಕ ಶಿವಸುಂದರ್ ಮಾತನಾಡಿ ‘ಲೋಕಸಭಾ ಚುನಾವಣೆ ಫಲಿತಾಂಶದ ನಂತರ ಬಿಜೆಪಿ ನೇತೃತ್ವದ ಎನ್ ಡಿ ಎ ಗೆ ಬಹುಮತ ಸಿಗದಿದ್ದರೆ ಅಧಿಕಾರ ಹಸ್ತಾಂತರ ಸುಲಭವಾಗಿ ಆಗುವುದಿಲ್ಲ. ಬಹುರಾಷ್ಟ್ರೀಯ ಕಾರ್ಪೊರೇಟ್ ಕಂಪೆನಿಗಳು ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಶತಾಯಗತಾಯ ಯತ್ನಿಸುತ್ತವೆ’ ಎಂದರು. ‘ಹಿಂದೂ ಬಹುಸಂಖ್ಯಾತರಲ್ಲಿ ಕೋಮು ಉನ್ಮಾದ ಕೆರಳಿಸಿ ಅಧಿಕಾರಕ್ಕೆ ಬಂದ ಬಿಜೆಪಿ ಸುಲಭವಾಗಿ ಅಧಿಕಾರವನ್ನು ಬಿಟ್ಟುಕೊಡುವುದಿಲ್ಲ. ಕಾಂಗ್ರೆಸ್ ನಾಯಕತ್ವದ ಇಂಡಿಯಾ ಒಕ್ಕೂಟ ಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬರುವ ಸಾಧ್ಯತೆ ಇದ್ದರೆ ಅದನ್ನು ತಡೆಯಲು ಬಿಜೆಪಿ ನಾನಾ ಕುತಂತ್ರಗಳನ್ನು ಮಾಡುತ್ತದೆ’ ಎಂದರು.

ಇಂದಿನ ನ್ಯಾಯಾಲಯಗಳ ತೀರ್ಪುಗಳ ಬಗ್ಗೆ ವಿಶ್ಲೇಷಣೆ ಮಾಡಿದ ಹಿರಿಯ ನ್ಯಾಯವಾದಿ ಬಾಲನ್ ಅವರು, ‘ಅಯೋಧ್ಯೆಯ ಪ್ರಕರಣದಲ್ಲಿ ನ್ಯಾಯಾಧೀಶರು ಸಂವಿಧಾನದ ಪ್ರಕಾರ ತೀರ್ಪು ನೀಡಲಿಲ್ಲ. ಜನರ ನಂಬಿಕೆಯ ಆಧಾರದ ತೀರ್ಪು ನೀಡಿದರು.ತೀರ್ಪು ನೀಡುವಾಗ ಅನೇಕ ನ್ಯಾಯಾಧೀಶರು ವೇದ, ಶ್ರುತಿ, ರಾಮಾಯಣ, ಮಹಾಭಾರತದ ಆಧಾರದಲ್ಲಿ ತೀರ್ಪು ನೀಡುತ್ತಿದ್ದಾರೆ’ ಎಂದರು. ಸುಪ್ರೀಂ ಕೋರ್ಟ್ ನ್ಯಾಯವಾದಿ ಮೋಹನ್ ಕಾತರಕಿ ಮಾತನಾಡಿ ‘ಬಿಜೆಪಿಗೆ ಹಿಂದೂ ಧರ್ಮದ ಬಗ್ಗೆ ನಿಜವಾದ ಆಸಕ್ತಿ ಇಲ್ಲ. ಮತ ಗಳಿಕೆಗಾಗಿ ಹಿಂದುತ್ವದ ವೇಷ ಹಾಕಿದೆ’ ಎಂದರು.

ದಿಲ್ಲಿಯಿಂದ ಬಂದಿದ್ದ ಜೆಎನ್ ಯು ವಿದ್ಯಾರ್ಥಿ ಒಕ್ಕೂಟದ ಉಪಾಧ್ಯಕ್ಷ ಅವಿಜಿತ್ ಘೋಷ್ ಮಾತನಾಡಿ, ‘ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣವಾಗಿ ಖಾಸಗಿಯವರಿಗೆ ಒಪ್ಪಿಸುವ ಮಸಲತ್ತು ನಡೆದಿದೆ’ಎಂದರು.

ಈ ಸಲದ ಮೇಳದಲ್ಲಿ ಮೈಸೂರಿನ ಕ್ರಾಂತಿಕಾರಿ ಹಾಡುಗಾರ ಜನಾರ್ದನ (ಜನ್ನಿ) ಮತ್ತು ಗಂಗಾವತಿಯ ರಮೇಶ ಗಬ್ಬೂರ ಮತ್ತು ಅವರ ತಂಡದ ಹಾಡುಗಳು ಸ್ಫೂರ್ತಿ ತುಂಬಿದವು. ಎಸ್.ಆರ್.ಹಿರೇಮಠರು ಸೇರಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಮಾಡಿ ಪ್ರಶಸ್ತಿಗಳನ್ನು ನೀಡಲಾಯಿತು.

ಮೇ ಸಾಹಿತ್ಯ ಸಮ್ಮೇಳನಕ್ಕೆ ಬಂದವರೆಲ್ಲ ತಾವೇ ಪ್ರಯಾಣದ ಖರ್ಚು, ವೆಚ್ಚ ಭರಿಸಿಕೊಂಡು ಬಂದಿದ್ದರು.ಅವರಲ್ಲಿ ಬಹುತೇಕರು ಯುವಕರು. ಆದರೆ, ಒಂದೊಂದು ಗೋಷ್ಠಿಯಲ್ಲಿ ನಾಲ್ಕೈದು ಮಂದಿ ಭಾಷಣಕಾರರು ಇದ್ದುದರಿಂದ ಸಂವಾದಕ್ಕೆ ಹೆಚ್ಚು ಅವಕಾಶ ಸಿಗಲಿಲ್ಲ. ಈ ಅಭಿಪ್ರಾಯವನ್ನು ನನ್ನ ಮುಂದೆ ವ್ಯಕ್ತಪಡಿಸಿದ ಸನ್ಮಾನಿತರಾದ ಹಿರಿಯ ಪತ್ರಕರ್ತ ಇಂದೂಧರ ಹೊನ್ನಾಪುರ ಅವರು ಭಾಷಣಕಾರರ ಸಂಖ್ಯೆ ಕಡಿಮೆ ಮಾಡಿ ಸಂವಾದಕ್ಕೆ ಹೆಚ್ಚು ಅವಕಾಶ ನೀಡಬೇಕಾಗಿತ್ತು ಎಂದು ಹೇಳಿದ ಮಾತು ನನಗೂ ಸೂಕ್ತವೆನಿಸಿತು. ಒಟ್ಟಾರೆ ಸಮಾನ ಮನಸ್ಕರ ವಿಶೇಷವಾಗಿ ಲಡಾಯಿ ಪ್ರಕಾಶನದ ಬಸೂ ಮತ್ತು ಡಾ. ಅನುಪಮಾ ಅವರ ಆಸಕ್ತಿ ಮತ್ತು ಪರಿಶ್ರಮದಿಂದ ನಿರಂತರವಾಗಿ ನಡೆದುಕೊಂಡು ಬಂದ ಮೇ ಸಾಹಿತ್ಯ ಮೇಳ ಈ ಸಲ ಬಿಸಿಲು ನಾಡು ಕೊಪ್ಪಳದಲ್ಲಿ ಸ್ಥಳೀಯ ಗೆಳೆಯರ ಒಳಗೊಳ್ಳುವಿಕೆಯಿಂದ ಚೆನ್ನಾಗಿ ನಡೆಯಿತು. ಸದಾ ಕೆಂಡದಂತಿರುತ್ತಿದ್ದ ಕೊಪ್ಪಳ ವರ್ಷಧಾರೆಯಿಂದಾಗಿ ಊಟಿಯಂತಾಗಿದೆ ಎಂದು ವಕೀಲ ಮಿತ್ರ ವೆಂಕಟೇಶ ಹೇಳಿದ ಮಾತಿಗೆ ನಾನೂ ಸಹಮತ ವ್ಯಕ್ತಪಡಿಸಿದೆ.ಮೇ ಸಾಹಿತ್ಯ ಮೇಳ ಎಂಬ ಭರವಸೆಯ ಬೆಳಕು ನಿರಂತರವಾಗಿರಲಿ ಎಂಬುದು ಪಾಲ್ಗೊಂಡ ಅನೇಕರ ಹಾರೈಕೆಯಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Contributor - ಸನತ್ ಕುಮಾರ್ ಬೆಳಗಲಿ

contributor

Similar News