ಒಂದೆಡೆ ಬರದ ಬವಣೆ; ಇನ್ನೊಂದೆಡೆ ಜಾತಿ, ಮತದ ದಂಡಯಾತ್ರೆ

ಈಗ ಹೇಳಬಯಸುತ್ತಿರುವುದು ಈ ಪಕ್ಷಗಳ ಚಾಳಿಗಳನ್ನಲ್ಲ. ಆದರೆ ಬರಗಾಲದಿಂದ ತತ್ತರಿಸಿರುವ ರಾಜ್ಯದ ರೈತಾಪಿ ಜನರ ಕಡೆಗಣನೆಯ ಬಗ್ಗೆ. ಈ ರೈತರಲ್ಲಿ ಬಹುತೇಕ ಮಂದಿ ಹಿಂದೂಗಳು. ಇವರ ರಕ್ಷಣೆಗೆ ಬರಬೇಕಾದ ಬಿಜೆಪಿ ಮತ್ತು ಸಂಘಪರಿವಾರಗಳು ಯಾವ ಹಿಂದೂಗಳ ರಕ್ಷಣೆಗೆ ಹೊರಟಿವೆ? ಅಷ್ಟೇ ಅಲ್ಲ ಬರದಿಂದ ತತ್ತರಿಸಿರುವ ಬಹುತೇಕ ರೈತರು ವೀರಶೈವ, ಲಿಂಗಾಯತರು ಮತ್ತು ಕೆಲವೆಡೆ ಒಕ್ಕಲಿಗರು. ಈ ಲಿಂಗಾಯತ ರೈತರ ಬಗ್ಗೆ ಮಾತನಾಡದ ಶಾಮನೂರು ಶಿವಶಂಕರಪ್ಪನವರಿಗೆ ಉನ್ನತ ಸರಕಾರಿ ಹುದ್ದೆಗಳಲ್ಲಿ ಇರುವ ಲಿಂಗಾಯತ ಅಧಿಕಾರಿಗಳಿಗೆ ಆಯಕಟ್ಟಿನ ಜಾಗ ಬೇಕಾಗಿದೆ. ಈ ಆಯಕಟ್ಟಿನ ಜಾಗದ ಗುಟ್ಟು ಸಾಮಾನ್ಯವಾಗಿ ಸಾರ್ವಜನಿಕ ಜೀವನದಲ್ಲಿ ಓಡಾಡುವವರಿಗೆ ಗೊತ್ತಿಲ್ಲದೇ ಇರುವುದಿಲ್ಲ.

Update: 2023-10-09 08:59 GMT

ಮುಂಗಾರು ಮಳೆ ಕೈಕೊಟ್ಟ ಪರಿಣಾಮವಾಗಿ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಬರಗಾಲದ ಛಾಯೆ ಕವಿದಿದೆ. ಬರ ಪ್ರದೇಶಗಳ ಅಧ್ಯಯನಕ್ಕೆ ಬಂದಿರುವ ಕೇಂದ್ರ ತಂಡದ ಅಧಿಕಾರಿಗಳಿಗೆ ತಮ್ಮ ಹೊಲದ ಕಾಳಿಲ್ಲದ ಗಿಡ ಕಿತ್ತು ಅಧಿಕಾರಿಗೆ ತೋರಿಸುತ್ತಿದ್ದಾರೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಎಲ್ಲೆಡೆ ಒಣಗಿದ ಕಬ್ಬು, ರೋಗಕ್ಕೆ ತುತ್ತಾದ ತೊಗರಿ, ತೆನೆಯಾಗದ ಮೆಕ್ಕೆ ಜೋಳ, ನೆಲ ಬಿಟ್ಟು ಮೇಲೇಳದ ಮೆಣಸಿನಕಾಯಿ ಹೀಗೆ ಕಮರಿ ಹೋದ ಬೆಳೆಗಳು ಎಲ್ಲೆಡೆ ಗೋಚರಿಸುತ್ತಿವೆ.

ಒಕ್ಕಲುತನಕ್ಕೆ ಮಾಡಿರುವ ಸಾಲ ತೀರಿಸಲು ಅನೇಕ ಕಡೆ ರೈತರು ಮುಂಬೈ, ಗೋವಾಗಳಿಗೆ ಗಂಟು ಗದಡಿ ಕಟ್ಟಿಕೊಂಡು ಗುಳೆ ಹೋಗುವುದು ಅನಿವಾರ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.ಮುಂಬರುವ ದಿನಗಳಲ್ಲಿ ದನಗಳಿಗೆ ಕುಡಿಯುವ ನೀರು ಮತ್ತು ಮೇವಿನ ಅಭಾವ ಉಂಟಾಗುವ ಸೂಚನೆಗಳು ಗೋಚರಿಸುತ್ತಿವೆ.

ಇಂತಹ ಕಷ್ಟದ ಸಂದರ್ಭದಲ್ಲಿ ಮಣ್ಣಿನ ಮಕ್ಕಳ ನೆರವಿಗೆ ಧಾವಿಸಿಬರಬೇಕಾದ, ಸಂತೈಸಬೇಕಾದ ರಾಜಕಾರಣಿಗಳು ಏನು ಮಾಡುತ್ತಿದ್ದಾರೆ ಎಂದು ಹುಡುಕಲು ಹೊರಟರೆ ಈ ಭಾರತ ತಲುಪಿದ ದುರಂತ ಕಣ್ಣ ಮುಂದೆ ಬಂದು ನಿಲ್ಲುತ್ತದೆ. ಕಳೆದ ಒಂಭತ್ತು ವರ್ಷಗಳಿಂದ ಒಕ್ಕೂಟ ಸರಕಾರದ ಸೂತ್ರ ಹಿಡಿದಿರುವ ಪಕ್ಷದ 25 ಲೋಕಸಭಾ ಸದಸ್ಯರು ರಾಜ್ಯದಲ್ಲಿ ಇದ್ದಾರೆ. 66 ಶಾಸಕರಿದ್ದಾರೆ. ಜೆಡಿಎಸ್ ಎಂಬ ಇನ್ನೊಂದು ಪಕ್ಷವೂ ಇನ್ನೂ ಅಸ್ತಿತ್ವದಲ್ಲಿದೆ. ರಾಜ್ಯದ ಅಧಿಕಾರದ ಚುಕ್ಕಾಣಿ ಕಾಂಗ್ರೆಸ್ ಕೈಯಲ್ಲಿ ಇದೆ. ಈ ಪಕ್ಷಗಳಲ್ಲಿ ಯಾರ ಆದ್ಯತೆ ಯಾವುದು? ಎಂದು ಅವಲೋಕಿಸಿದರೆ ದಟ್ಟ ನಿರಾಸೆ ಉಂಟಾಗುತ್ತದೆ.

ವಿಧಾನಸಭೆಯಲ್ಲಿ ನಾಯಕನಿಲ್ಲದ ಮುಖ್ಯ ವಿರೋಧ ಪಕ್ಷವಾದ ಬಿಜೆಪಿಗೆ ಬರದಿಂದ ತತ್ತರಿಸಿದ ನೇಗಿಲಯೋಗಿಗಳ ರಕ್ಷಣೆ ಆದ್ಯತೆಯಾಗಿಲ್ಲ. ಮುಂದಿನ ವರ್ಷ ಲೋಕಸಭಾ ಚುನಾವಣೆ ನಡೆಯಲಿರುವುದರಿಂದ ಮತ್ತೆ ಗೆದ್ದು ಬರುವುದು ಬಿಜೆಪಿಯ ಆದ್ಯತೆಯಾಗಿದೆ. ಮತ್ತೆ ಅಧಿಕಾರ ಬಯಸುವುದು ತಪ್ಪಲ್ಲ, ಆದರೆ ಅದಕ್ಕಾಗಿ ಜನರ ಬಳಿ ಹೋಗಿ ತಮ್ಮ ಸರಕಾರದ ಸಾಧನೆಗಳನ್ನು ವಿವರಿಸಬೇಕಲ್ಲವೇ. ಕಳೆದ ಒಂಭತ್ತು ವರ್ಷಗಳಿಂದ ತಮ್ಮ ಸರಕಾರ ಭಾರತದ ಅಭಿವೃದ್ಧಿಗಾಗಿ, ಜನರ ಬದುಕಿನ ಉನ್ನತಿಗಾಗಿ ಕೈಗೊಂಡ ಕ್ರಮಗಳೇನು? ಬೆಲೆ ಏರಿಕೆ ಯಾಕೆ ನಿಯಂತ್ರಣಕ್ಕೆ ಬರಲಿಲ್ಲ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಯ ಭರವಸೆ ಏನಾಯಿತು? ಮಣಿಪುರದಲ್ಲಿ ಹಿಂಸಾಚಾರ ಯಾಕೆ ನಿಯಂತ್ರಣಕ್ಕೆ ಬರುತ್ತಿಲ್ಲ? ಚೀನಾ ಗಡಿಯಲ್ಲಿ ಏನು ನಡೆಯುತ್ತಿದೆ? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಬೇಕಲ್ಲವೇ?

ಜನರ ಬದುಕಿನ ಈ ಪ್ರಶ್ನೆಗಳಿಗೆ ಉತ್ತರಿಸಲಾಗದವರು ಈಗ ಹಿಂದೂಗಳ ರಕ್ಷಣೆಗೆ ಶೌರ್ಯ ಯಾತ್ರೆ ಹೊರಟಿದ್ದಾರೆ. ಹಿಂದೂಗಳಿಗೆ ಯಾರಿಂದ ಅಪಾಯವಿದೆ? ಯಾರ ಮೇಲೆ ಶೌರ್ಯವನ್ನು ತೋರಿಸಬೇಕು? ಎಂಬ ಪ್ರಶ್ನೆಗಳಿಗೆ ಅವರು ಉತ್ತರ ನೀಡಬೇಕಾಗಿದೆ.

ಬರಗಾಲದಿಂದ ತತ್ತರಿಸಿರುವ ರೈತರ ಬಳಿ ಹೋಗಿ ಸಂತೈಸಬೇಕಾದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ವಿಶ್ವ ಹಿಂದೂ ಪರಿಷತ್ತಿನ ಶೌರ್ಯ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಪಾಲ್ಗೊಳ್ಳುವದು ಮಾತ್ರವಲ್ಲ ತಾವು ಕೇಂದ್ರದ ಸಚಿವರೆಂಬುದನ್ನು ಮರೆತು, ಸಂವಿಧಾನಾತ್ಮಕ ಹೊಣೆಗಾರಿಕೆಯ ಅರಿವಿಲ್ಲದೆ ಪ್ರಚೋದನಾಕಾರಿಯಾಗಿ ಮಾತನಾಡುತ್ತಿದ್ದಾರೆ ಎಂಬುದು ಮಾಧ್ಯಮಗಳಲ್ಲೂ ವರದಿಯಾಗಿದೆ.

ಬಿಜೆಪಿಯ ಇನ್ನೊಬ್ಬ ನಾಯಕ ಮಾಜಿ ಮಂತ್ರಿ ಕೆ.ಎಸ್ .

ಈಶ್ವರಪ್ಪನವರು ಹಿಂದೂಗಳು ತಮ್ಮ ರಕ್ಷಣೆಗೆ ತಲವಾರುಗಳನ್ನು ಹಿಡಿಯಲು ಕರೆ ಕೊಡುತ್ತಿದ್ದಾರೆ. ಸಿ.ಟಿ.ರವಿ, ಅರುಣ ಕುಮಾರ್ ಪುತ್ತಿಲ ಸೇರಿದಂತೆ ಬಹುತೇಕ ಬಿಜೆಪಿ ನಾಯಕರು ತಲವಾರು, ಚಾಕು, ಚೂರಿಗಳ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಿದ್ದಾರೆ.

ಬಡವರ ಮಕ್ಕಳ ಕೈಗೆ ತಲವಾರು ಕೊಡುವ ಇವರ ಮಕ್ಕಳು ಎಲ್ಲಿದ್ದಾರೆ? ಎಂದು ಹುಡುಕಲು ಹೊರಟರೆ ಅವರು ನಿಮಗೆ ಇಲ್ಲಿ ಸಿಗುವುದಿಲ್ಲ. ಉನ್ನತ ವ್ಯಾಸಂಗಕ್ಕಾಗಿ ಅಮೆರಿಕ, ಇಂಗ್ಲ್ಲೆಂಡ್‌ನಂತಹ ದೇಶಗಳಿಗೆ ಹೋಗಿ ಅಲ್ಲೇ ನೆಲೆಸುತ್ತಾರೆ. ಇನ್ನು ಕೆಲವರು ದೇಶದೊಳಗೆ ರಿಯಲ್ ಎಸ್ಟೇಟ್, ಮೈನಿಂಗ್ ದಂಧೆ ಮಾಡುತ್ತಾ ಐಷಾರಾಮಿ ಜೀವನವನ್ನು ನಡೆಸುತ್ತಾರೆ. ಕೆಲವರ ಮಕ್ಕಳು ತಮ್ಮ ತಂದೆಯ ಉತ್ತರಾಧಿಕಾರಿಗಳಾಗಿ ರಾಜಕೀಯ ಪ್ರವೇಶ ಮಾಡಿದರೂ ಅವರು ವಿಧಾನಸಭೆ ಇಲ್ಲವೇ ಸಂಸತ್ ಸದಸ್ಯರಾಗಿ ಸೇವೆ ಸಲ್ಲಿಸಲು ಬಯಸುತ್ತಾರೆ. ತಲವಾರು ಹಿಡಿದು ಬೀದಿ ಹೆಣವಾಗುವವರು ಮತ್ತು ಜೈಲಿಗೆ ಹೋಗುವವರು ಮಾತ್ರ ಬಡ ಹಿಂದೂಗಳ ಮಕ್ಕಳು.ಇಂತಹ ಬಡವರ ಮಕ್ಕಳು ಸತ್ತರೆ ಅವರನ್ನು ಹುತಾತ್ಮರನ್ನಾಗಿ ಮಾಡಿ ಅವರ ಶವದ ಮೇಲೆ ಕಾಲಿಟ್ಟು ಸದನವನ್ನು ಪ್ರವೇಶಿಸಲು ಕೆಲವರು ಹಾತೊರೆಯುತ್ತಿರುತ್ತಾರೆ.

ಇದು ಬಿಜೆಪಿಯ ಕತೆಯಾದರೆ ಜೆಡಿಎಸ್‌ನ ಕುಮಾರಣ್ಣನದೂ ಇನ್ನೊಂದು ಕತೆ. ಕೇವಲ ನಾಲ್ಕು ತಿಂಗಳ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ಪ್ರಹ್ಲಾದ್ ಜೋಶಿಯವರನ್ನು ಪೇಶ್ವೆಗಳೆಂದು ಕರೆದಿದ್ದ, ಸಂಘ ಪರಿವಾರದ ವಿರುದ್ಧ ಕೆಂಡದ ಸುರಿಮಳೆ ಸುರಿಸಿದ್ದ ಕುಮಾರಸ್ವಾಮಿ ಅವರಿಗೆ ವಿಧಾನಸಭಾ ಚುನಾವಣೆ ನಂತರ ಜ್ಞಾನೋದಯವಾಗಿದೆ. ರಾಮನಗರದಲ್ಲಿ ತನ್ನ ಮಗ ನಿಖಿಲ್‌ನ ಸೋಲಿಗೆ ಮುಸಲ್ಮಾನರು ಕಾರಣ ಎಂಬ ಅಸಮಾಧಾನ ಅವರನ್ನು ಬಿಜೆಪಿಯ ಬಾಗಿಲಿಗೆ ತಂದು ನಿಲ್ಲಿಸಿದೆ. ತಮ್ಮ ಪಕ್ಷದ ಅಧ್ಯಕ್ಷರಿಗೂ ಗೊತ್ತಿಲ್ಲದೆ ಇವರು ದಿಲ್ಲಿಗೆ ಹೋಗಿ ಅಮಿತ್ ಶಾ ಮತ್ತು ನಡ್ಡಾ ಅವರನ್ನು ಗುಟ್ಟಾಗಿ ಕಂಡು ಎನ್‌ಡಿಎ ಕೂಟ ಸೇರುವ ತೀರ್ಮಾನವನ್ನು ಪ್ರಕಟಿಸಿದ್ದಾರೆ. ಈ ತೀರ್ಮಾನದಲ್ಲಿ ರಾಜ್ಯದ ಬಿಜೆಪಿ ನಾಯಕರನ್ನೂ ಅವರ ಪಕ್ಷದ ಕೇಂದ್ರೀಯ ನಾಯಕರು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ.ಇದು ಮಾಜಿ ಮುಖ್ಯಮಂತ್ರಿ ಸದಾನಂದ ಗೌಡರ ಇತ್ತೀಚಿನ ಹೇಳಿಕೆಯಿಂದ ಸ್ಪಷ್ಟವಾಗಿದೆ. ಬಿಜೆಪಿಯ ವರಿಷ್ಠ ನಾಯಕರು ಪಕ್ಷದ ರಾಜ್ಯ ನಾಯಕರನ್ನು ಮತ್ತು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಶೇ. 75 ರಷ್ಟು ಮಂದಿಗೆ ಇದು ಇಷ್ಟವಿಲ್ಲ ಎಂದು ಸದಾನಂದ ಗೌಡರು ಬಹಿರಂಗವಾಗಿ ಹೇಳಿದ್ದಾರೆ. ಸದಾನಂದ ಗೌಡರು ಮಾತ್ರವಲ್ಲ ಎಸ್. ಟಿ.ಸೋಮಶೇಖರ್, ಮುಂತಾದವರು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯಡಿಯೂರಪ್ಪನವರು ಬಹಿರಂಗವಾಗಿ ಹೇಳದಿದ್ದರೂ ಒಳಗೊಳಗೆ ಕುದಿಯುತ್ತಿದ ಬಿಜೆಪಿ ಹಿಂದಿನ ಲೋಕಸಭಾ ಚುನಾವಣೆಯಲ್ಲಿ 25 ಸ್ಥಾನಗಳನ್ನು ಗೆದ್ದಿತ್ತು, ಆಗ ಕೇವಲ ಒಂದು ಸ್ಥಾನ ಗೆದ್ದಿದ್ದ ಜೆಡಿಎಸ್ ಜೊತೆಗಿನ ಮೈತ್ರಿಯಿಂದ ಬಿಜೆಪಿಗೆ ಲಾಭವಿಲ್ಲ ಎಂದು ಸದಾನಂದಗೌಡರು ವ್ಯಕ್ತಪಡಿಸಿದ ಅಸಮಾಧಾನ ಬಿಜೆಪಿಯ ಬಹುತೇಕ ನಾಯಕರ ಮತ್ತು ಕಾರ್ಯಕರ್ತರ ಅಸಮಾಧಾನವಾಗಿದೆ. ಇನ್ನು ಜೆಡಿಎಸ್ ನ ಬಹುತೇಕ ಶಾಸಕರು ಬಿಜೆಪಿ ಜೊತೆಗಿನ ಮೈತ್ರಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.


ಕಾಂಗ್ರೆಸ್‌ನತ್ತ ಬಂದರೆ ಜನತೆಗೆ ಭರವಸೆ ನೀಡಿದ್ದ ಎಲ್ಲ ಗ್ಯಾರಂಟಿ ಕಾರ್ಯಕ್ರಮಗಳನ್ನು ಜಾರಿಗೆ ತಂದು ಮಾತು ಉಳಿಸಿಕೊಂಡ ಸಿದ್ಧರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರದ ಬಗ್ಗೆ ಅವರ ಪಕ್ಷದಲ್ಲೂ ಶಾಮನೂರು ಶಿವಶಂಕರಪ್ಪನವರಂತಹ ಹಿರಿಯ ನಾಯಕರಿಗೆ ಅಸಮಾಧಾನವಿದೆ. ಈ ಅಸಮಾಧಾನ ಬರಗಾಲ ಪರಿಹಾರಕ್ಕೆ ಸರಕಾರ ಕ್ರಮ ಕೈಗೊಂಡಿಲ್ಲವೆಂದು ಅಲ್ಲ, ಅವರ ಅಸಮಾಧಾನ ಸರಕಾರದಲ್ಲಿರುವ ಲಿಂಗಾಯತ ಉನ್ನತ ಅಧಿಕಾರಿಗಳಿಗೆ ಆಯಕಟ್ಟಿನ ಜಾಗ ಕೊಟ್ಟಿಲ್ಲ ಎಂಬುದಾಗಿದೆ.ಆದರೂ ಶಾಮನೂರು ಕಾಂಗ್ರೆಸ್ ಬಿಟ್ಟು ಹೋಗುವುದಿಲ್ಲ. ಅವರು ಪ್ರತಿನಿಧಿಸುವ ದಾವಣಗೆರೆ ವಿಧಾನಸಭಾ ಮತಕ್ಷೇತ್ರದಲ್ಲಿ ಶೇ. 60 ರಷ್ಟು ಮುಸ್ಲಿಮ್ ಮತದಾರರಿದ್ದಾರೆ. ಕೇವಲ ಶೇ.30ರಷ್ಟು ಲಿಂಗಾಯತ ಮತದಾರರಿದ್ದಾರೆ. ಹೀಗಾಗಿ ಅವರು ತಪ್ಪು ರಾಜಕೀಯ ತೀರ್ಮಾನಗಳನ್ನು ಎಂದೂ ತೆಗೆದುಕೊಳ್ಳುವುದಿಲ್ಲ. ಶಾಮನೂರು ಅವರನ್ನು ಬಿಟ್ಟರೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಕಾಂಗ್ರೆಸ್‌ನಲ್ಲೂ ಇವೆ. ಅದನ್ನು ನಿಭಾಯಿಸುವ ಸಾಮರ್ಥವೂ ಸಿದ್ಧರಾಮಯ್ಯನವರಿಗೆ ಇದೆ.

ಈಗ ಹೇಳಬಯಸುತ್ತಿರುವುದು ಈ ಪಕ್ಷಗಳ ಚಾಳಿಗಳನ್ನಲ್ಲ. ಆದರೆ ಬರಗಾಲದಿಂದ ತತ್ತರಿಸಿರುವ ರಾಜ್ಯದ ರೈತಾಪಿ ಜನರ ಕಡೆಗಣನೆಯ ಬಗ್ಗೆ. ಈ ರೈತರಲ್ಲಿ ಬಹುತೇಕ ಮಂದಿ ಹಿಂದೂಗಳು. ಇವರ ರಕ್ಷಣೆಗೆ ಬರಬೇಕಾದ ಬಿಜೆಪಿ ಮತ್ತು ಸಂಘಪರಿವಾರಗಳು ಯಾವ ಹಿಂದೂಗಳ ರಕ್ಷಣೆಗೆ ಹೊರಟಿವೆ? ಅಷ್ಟೇ ಅಲ್ಲ ಬರದಿಂದ ತತ್ತರಿಸಿರುವ ಬಹುತೇಕ ರೈತರು ವೀರಶೈವ, ಲಿಂಗಾಯತರು ಮತ್ತು ಕೆಲವೆಡೆ ಒಕ್ಕಲಿಗರು. ಈ ಲಿಂಗಾಯತ ರೈತರ ಬಗ್ಗೆ ಮಾತನಾಡದ ಶಾಮನೂರು ಶಿವಶಂಕರಪ್ಪನವರಿಗೆ ಉನ್ನತ ಸರಕಾರಿ ಹುದ್ದೆಗಳಲ್ಲಿ ಇರುವ ಲಿಂಗಾಯತ ಅಧಿಕಾರಿಗಳಿಗೆ ಆಯಕಟ್ಟಿನ ಜಾಗ ಬೇಕಾಗಿದೆ. ಈ ಆಯಕಟ್ಟಿನ ಜಾಗದ ಗುಟ್ಟು ಸಾಮಾನ್ಯವಾಗಿ ಸಾರ್ವಜನಿಕ ಜೀವನದಲ್ಲಿ ಓಡಾಡುವವರಿಗೆ ಗೊತ್ತಿಲ್ಲದೇ ಇರುವುದಿಲ್ಲ.

ಪ್ರಜಾಪ್ರಭುತ್ವದಲ್ಲಿ ಜನಸಾಮಾನ್ಯರು ಕೇವಲ ಮತದಾರರಾಗಿ ಮಾತ್ರ ಉಳಿದಾಗ ಇಂತಹ ಧರ್ಮ ರಕ್ಷಕರು, ಜಾತಿ ನಾಯಕರು ಹುಟ್ಟಿಕೊಳ್ಳುತ್ತಾರೆ. ಜೊತೆಗೂಡಿ ಬಾಳುವ ಜನರನ್ನು ಹಿಂದೂ ಮುಸ್ಲಿಮ್, ಕ್ರೈಸ್ತ, ಲಿಂಗಾಯತ, ಲಿಂಗಾಯತೇತರ ಎಂದು ವಿಭಜಿಸಲು ಯತ್ನಿಸುತ್ತಾರೆ. ದೇಶದ ಗಡಿಗೆ ಹೋಗಿ ಎಂದೂ ಯುದ್ಧ ಮಾಡದ ಇವರು ದೇಶದೊಳಗೆ ನಕಲಿ ಶೌರ್ಯ ಯಾತ್ರೆಗಳನ್ನು ಮಾಡುತ್ತ ಜನರ ಮನಸ್ಸು ಒಡೆಯಲು ಯತ್ನಿಸುತ್ತಾರೆ. ಇವರ ನಾಯಕನ ಬಾಯಿಯಿಂದಲೇ ಒಡಕಿನ ಮಾತುಗಳು ಬರುತ್ತಿರುವಾಗ ಇವರನ್ನು ಬೈದು ಏನು ಪ್ರಯೋಜನ?

ಕರ್ನಾಟಕಕ್ಕೆ ಸಂಬಂಧಿಸಿದಂತೆ ಇವರ ಆದ್ಯತೆಗಳೇನು? ರಾಜ್ಯದ ನೆಲ, ಜಲದ ಬಗ್ಗೆ, ಮಣ್ಣಿನ ಮಕ್ಕಳ ಎಂದೂ ಮಾತನಾಡದವರು ಈಗ ಧರ್ಮ ರಕ್ಷಣೆಗೆ ಹೊರಟಿದ್ದಾರೆ. ಕನ್ನಡದ ಅಸ್ಮಿತೆಯನ್ನಾದರೂ ಗೌರವಿಸುತ್ತಾರಾ? ಅದೂ ಇಲ್ಲ. ನವೆಂಬರ್ 1 ಕರ್ನಾಟಕ ರಾಜ್ಯೋತ್ಸವದ ದಿನದಂದು ಕನ್ನಡ ಧ್ವಜ ಹಾರಿಸಕೂಡದು, ರಾಷ್ಟ್ರಧ್ವಜ ಮಾತ್ರ ಹಾರಿಸಬೇಕೆಂದು ಕೇಂದ್ರ ಮಂತ್ರಿ ಪ್ರಹ್ಲಾದ್ ಜೋಶಿಯವರು ಅಪ್ಪಣೆಕೊಡಿಸಿದ್ದಾರೆ. ಹೀಗೆ ಸುಮ್ಮನಿದ್ದರೆ ಕನ್ನಡ ಭಾಷೆಗೂ ಆಪತ್ತು ಎದುರಾಗಲಿದೆ.

ಭಾರತಕ್ಕೆ ಇಂದು ಬೇಕಾಗಿರುವುದು ಭಾರತೀಯರನ್ನು ಜಾತಿ ಮತದ ಹೆಸರಿನಲ್ಲಿ ವಿಭಜಿಸುವ ನಾಯಕರು ಮತ್ತು ಸಿದ್ಧಾಂತಗಳಲ್ಲ. ಈಗ ಬೇಕಾಗಿರುವುದು ಜನರ ಮನಸ್ಸನ್ನು ಕಟ್ಟಬೇಕಾದ, ಬೆಸೆಯಬೇಕಾದ, ಒಂದು ಗೂಡಿಸಬೇಕಾದ ಜೀವಪರ, ಜನಪರ, ನಾಯಕರು ಮತ್ತು ಸಿದ್ಧಾಂತಗಳು. ಗಾಂಧಿ, ಅಂಬೇಡ್ಕರ್, ನೆಹರೂ, ಸುಭಾಷ್ ಬೋಸ್, ಭಗತ್ ಸಿಂಗ್ ಇಂತಹವರು ನೀಡಿದ, ನೀಡುತ್ತಿರುವ ಬೆಳಕು ಮಾತ್ರ ಬಹುತ್ವ ಭಾರತವನ್ನು ಮತ್ತು ಇಲ್ಲಿನ ದೇಶ ವಾಸಿಗಳನ್ನು ಕಾಪಾಡಬಲ್ಲದು.

Tags:    

Writer - ವಾರ್ತಾಭಾರತಿ

contributor

Editor - Safwan

contributor

Contributor - ಸನತ್ ಕುಮಾರ್ ಬೆಳಗಲಿ

contributor

Similar News