ಜನಪ್ರತಿನಿಧಿಗಳು ಹೇಗಿರಬೇಕು? ಹೇಗಿರಬಾರದು?
ವೇದವ್ಯಾಸ ಕಾಮತ್ ಅವರಿಗಾಗಲಿ, ಭರತಶೆಟ್ಟಿಯವರಿಗಾಗಲಿ ಜನಪ್ರತಿನಿಧಿಗಳಾಗುವ ಅಪೂರ್ವ ಅವಕಾಶ ದೊರಕಿದೆ. ಅವರು ಮನಸ್ಸು ಮಾಡಿದರೆ ಇನ್ನೂ ಎತ್ತರಕ್ಕೆ ಬೆಳೆಯಬಹುದು. ಮಂಗಳೂರಿನಲ್ಲಿ ಇದೇ ಪರಿಸ್ಥಿತಿ ನಿರಂತರವಾಗಿ ಇರುವುದಿಲ್ಲ. ಹಿಂದೆ ಕಮ್ಯುನಿಸ್ಟರಾದ ಬಿ.ವಿ.ಕಕ್ಕಿಲ್ಲಾಯರು, ಪಿ.ರಾಮಚಂದ್ರರಾಯರು, ಕೃಷ್ಣ ಶೆಟ್ಟಿ ಅವರು ಇದೇ ಜಿಲ್ಲೆಯಿಂದ ಚುನಾಯಿತರಾಗಿ ಬಂದಿದ್ದರು. ಕಮ್ಯುನಿಸ್ಟ್ ನಾಯಕ ಶಾಂತಾರಾಮ ಪೈ ಜನನಾಯಕರಾಗಿ ಬಹು ಎತ್ತರಕ್ಕೆ ಬೆಳೆದು ನಿಂತಿದ್ದರು. ವೈಕುಂಠ ಬಾಳಿಗಾ, ಡಾ.ನಾಗಪ್ಪಆಳ್ವಾ, ಬಿ.ಎಂ.ಇದಿನಬ್ಬ, ಬಿ.ಎ.ಮೊಹಿದಿನ್, ಜನಾರ್ದನ ಪೂಜಾರಿ, ವೀರಪ್ಪ ಮೊಯ್ಲಿ ಅವರನ್ನು ನಾಡಿಗೆ ನೀಡಿದ ಜಿಲ್ಲೆಯಿದು. ಮೇಲ್ಕಂಡವರಂತೆ ನೀವೂ ಬೆಳೆಯಬೇಕು. ಶಾಲೆಗೆ ನುಗ್ಗಿ ಜೈ ಶ್ರೀ ರಾಮ್ ಎಂದು ಅರಚಾಡಿದರೆ ಆ ಮರ್ಯಾದಾ ಪುರುಷೋತ್ತಮನೂ ಒಪ್ಪಿಕೊಳ್ಳುವುದಿಲ್ಲ.
ಜನರ ಮತ ಪಡೆದು ಚುನಾಯಿತರಾಗುವ ಶಾಸಕರು ಅಥವಾ ಸಂಸದರು ಹೇಗಿರಬೇಕು? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರು ನಿರ್ವಹಿಸಬೇಕಾದ ಹೊಣೆಗಾರಿಕೆ ಯಾವುವು? ಈ ಬಗ್ಗೆ ಸಾರ್ವಜನಿಕ ಜೀವನದಲ್ಲಿ ಸಂವಾದವೇ ನಿಂತು ಹೋಗಿದೆ? ಜನ ಅಂದರೆ ಮತದಾರರು ಐದು ವರ್ಷಕ್ಕೊಮ್ಮೆ ಮತ ಹಾಕಿ ತಮ್ಮ ಪಾಡಿಗೆ ತಾವಿದ್ದು ಬಿಡುತ್ತಾರೆ. ಮತ ಹಾಕಿಸಿಕೊಂಡವರು ತಾವು ಗೆದ್ದು ಬಂದಿರುವುದೇ ಸಾರ್ವಜನಿಕ ಸಂಪತ್ತು ಕಬಳಿಸಲು ಎಂಬಂತೆ ತಲೆಮಾರುಗಳಿಗಾಗುವಷ್ಟು ಲೂಟಿ ಮಾಡುತ್ತಾರೆ. ಅಷ್ಟೇ ಅಲ್ಲ, ತಮ್ಮ ಉತ್ತರಾಧಿಕಾರಿಗಳನ್ನಾಗಿ ತಮ್ಮ ಮಕ್ಕಳನ್ನು ತಯಾರು ಮಾಡುತ್ತಾರೆ. ಹೊಟ್ಟೆ ಬಿರಿಯುವಂತೆ ತಿನ್ನುವುದೇ ಅವರ ದಂಧೆಯಾಗುತ್ತದೆ.
ಈ ರೀತಿ ತಿನ್ನಬಾರದ್ದನ್ನು ತಿನ್ನಬಾರದಷ್ಟು ತಿಂದು ಅಜೀರ್ಣವಾದಾಗ ಹಳ್ಳ ಹಿಡಿದ ತಮ್ಮ ಇಮೇಜು ಉಳಿಸಿಕೊಳ್ಳಲು ದೇವರು, ಧರ್ಮಗಳ ಮೊರೆ ಹೋಗುತ್ತಾರೆ. ಸಾಮೂಹಿಕ ಮದುವೆಗಳನ್ನು ಮಾಡಿಸುತ್ತಾರೆ. ಈಗಂತೂ ದೇವರು ಮತ್ತು ಧರ್ಮದ ಹೆಸರಿನಲ್ಲಿ ಜನಸಾಮಾನ್ಯರನ್ನು ದಾರಿ ತಪ್ಪಿಸುವುದು ಅತ್ಯಂತ ಸುಲಭದ ಸಂಗತಿಯಾಗಿದೆ. ಹೀಗಾಗಿ ತಮ್ಮನ್ನು ಚುನಾಯಿಸಿದ ಜನರನ್ನು ದಿಕ್ಕು ತಪ್ಪಿಸಿ, ಸದನದ ಅಧಿವೇಶನಗಳಿಗೂ ಹೋಗದೆ ಮಜಾ ಉಡಾಯಿಸುತ್ತಾರೆ.
ನಾನು ಕಳೆದ ಐವತ್ತು ವರ್ಷಗಳಲ್ಲಿ, ತಿಳುವಳಿಕೆ ಬಂದಾಗಿನಿಂದ ಕರ್ನಾಟಕ ವಿಧಾನ ಮಂಡಲದ ಕಲಾಪಗಳನ್ನು ಅನೇಕ ಸಲ ನೋಡಿದ್ದೇನೆ. ಸಂಸದೀಯ ವ್ಯವಸ್ಥೆಯ ಕಲಾಪಗಳ ಬಗ್ಗೆ ತಿಳಿದುಕೊಂಡಿದ್ದೇನೆ. ಸದನದಲ್ಲಿ ಚರ್ಚೆಯಾಗುವ ವಿಷಯಗಳು, ಚುಕ್ಕೆ ಗುರುತಿನ ಪ್ರಶ್ನೆಗಳು, ನಿಲುವಳಿ ಸೂಚನೆಗಳು, ಕ್ರಿಯಾಲೋಪಗಳು, ಹೀಗೆ ಹಲವಾರು ವಿಷಯಗಳ ಮೂಲಕ ನನ್ನ ಅರಿವಿನ ವ್ಯಾಪ್ತಿ ವಿಸ್ತಾರಗೊಂಡಿದೆ. ಮೊದಲ ಬಾರಿ ನೋಡಿದ್ದು 1971-72 ರಲ್ಲಿ. ಅದಕ್ಕಿಂತ ಮೊದಲು 1967-69ರ ಕಾಲಾವಧಿಯಲ್ಲಿ ವೀರೇಂದ್ರ ಪಾಟೀಲರು ಮುಖ್ಯಮಂತ್ರಿ ಆಗಿದ್ದಾಗ, ಸೋಷಲಿಸ್ಟ್ ನಾಯಕ ಶಾಂತವೇರಿ ಗೋಪಾಲಗೌಡರು, ಕಮ್ಯುನಿಸ್ಟ್ ಪಕ್ಷದ ಗಂಗಾಧರ ನಮೋಶಿ, ಪ್ರಜಾ ಸೋಷಲಿಸ್ಟ್ ಪಕ್ಷದ ಎಸ್.ಶಿವಪ್ಪ ಅವರ ಭಾಷಣಗಳನ್ನು ಪತ್ರಿಕೆಗಳಲ್ಲಿ ಓದಿ ತಿಳಿದುಕೊಂಡಿದ್ದೆ. ನಂತರ ಮೊದಲ ಬಾರಿ ಬೆಂಗಳೂರಿಗೆ ಬಂದಾಗ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ಕುತೂಹಲದಿಂದ ಜನಪ್ರತಿನಿಧಿಗಳ ವಿದ್ವತ್‌ಪೂರ್ಣ ಮಾತುಗಳನ್ನು ಕೇಳುತ್ತಿದ್ದೆ. ಆಗ ಮುಖ್ಯಮಂತ್ರಿ ದೇವರಾಜ ಅರಸು. ದೇವೇಗೌಡ ಪ್ರತಿಪಕ್ಷ ನಾಯಕ. ಬಿ.ಬಸವಲಿಂಗಪ್ಪ, ಬಂಗಾರಪ್ಪ, ಕೆ.ಎಚ್.ರಂಗನಾಥ, ಎಲ್.ಜಿ.ಹಾವನೂರು, ಕಾಗೋಡು ತಿಮ್ಮಪ್ಪ, ಎಂ.ಎಸ್.ಕೃಷ್ಣನ್, ಬಿ.ವಿ.ಕಕ್ಕಿಲ್ಲಾಯ, ವಿ.ಎನ್.ಪಾಟೀಲ್ ಒಬ್ಬರಿಗಿಂತ ಒಬ್ಬರು ವಿದ್ವತ್ ಪಟುಗಳು. ನಂತರ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿ ಆಗಿದ್ದಾಗ ಪತ್ರಿಕಾ ವೃತ್ತಿ ಸೇರಿದ್ದೆ. ‘ಸಂಯುಕ್ತ ಕರ್ನಾಟಕ’ ಪ್ರತಿನಿಧಿಯಾಗಿ ಅನೇಕ ಬಾರಿ ಸದನಕ್ಕೆ ಹೋಗಿರುವೆ. ಆಗಲೂ ಶಾಸಕಾಂಗ ಕಲಾಪಗಳ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಯಿತು. ಆದರೆ ಈಗ ಎಲ್ಲ ಬದಲಾಗುತ್ತಿದೆ. ‘ಕೋತಿಗೆ ಹೆಂಡ ಕುಡಿಸಿದಂತೆ’ ಎಗರಾಡುವ ಶಾಸಕರು, ಶಾಲಾ ಮಕ್ಕಳಿಗೆ ಕೋಮು ಪ್ರಚೋದಕ ದುರ್ಬೋಧನೆ ಮಾಡುವ ಶಾಸಕರು ಕಾಣಿಸಿಕೊಳ್ಳುತ್ತಿದ್ದಾರೆ. ಸದನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡಿಸುತ್ತಾರೆ. ಆದರೆ, ಅದನ್ನು ಓದಿ ಚರ್ಚಿಸುವ ಶಾಸಕರೆಲ್ಲಿ? ಬಿಜೆಪಿ ಶಾಸಕರಿಗಂತೂ ಜೈ ಶ್ರೀರಾಮ್ ಎಂಬ ಘೋಷಣೆ ಬಿಟ್ಟರೆ ಬೇರೇನೂ ಗೊತ್ತಿಲ್ಲ. ತಾವೇನೆಂದು ತಮಗೇ ಗೊತ್ತಿಲ್ಲ.
ಮಂಗಳೂರಿನ ಜೆರೋಸಾ ಶಾಲೆಯ ಶಿಕ್ಷಕಿಯ ವಜಾ ಘಟನೆ ಮತ್ತು ಅಲ್ಲಿ ಸ್ಥಳೀಯ ಶಾಸಕರು ಮಾಡಿರುವ ಅವಾಂತರವನ್ನು ಗಮನಿಸಿದಾಗ ಈ ಭಾರತದ ಪ್ರಜಾಪ್ರಭುತ್ವ ದ ಭವಿಷ್ಯದ ಬಗ್ಗೆ ಆತಂಕ ಉಂಟಾಗುತ್ತದೆ. ಸಂವಿಧಾನಕ್ಕೆ ನಿಷ್ಠೆಯಿಂದ ಇರುವುದಾಗಿ ಪ್ರಮಾಣ ವಚನ ಸ್ವೀಕರಿಸಿದವರು ಜಾತಿ, ಮತವೆನ್ನದೆ ಎಲ್ಲ ಸಮುದಾಯಗಳನ್ನು ಪ್ರತಿನಿಧಿಸಬೇಕಾದವರು ಶಾಲೆಯ ಆವರಣದೊಳಗೆ ನುಗ್ಗಿ ಹತ್ತು, ಹನ್ನೆರಡು ದಾಟದ ಪುಟ್ಟ ಮಕ್ಕಳನ್ನು ಪ್ರಚೋದಿಸಿ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿಸಿದವರಿಂದ ನಾವು ಏನನ್ನು ನಿರೀಕ್ಷಿಸಲು ಸಾಧ್ಯ? ಇವರು ಏನನ್ನು ಮಾಡಲು ಹೊರಟಿದ್ದಾರೆ? ಆ ಶಿಕ್ಷಕಿಯೇ ತಪ್ಪುಮಾಡಿದ್ದಾಳೆ ಎಂದು ಅಂದುಕೊಂಡರೂ ಶಾಸಕರಾದವರು ಶಾಲಾ ಮುಖ್ಯಸ್ಥರನ್ನು, ಮುಖ್ಯಾಧ್ಯಾಪಕರನ್ನು ಕರೆಯಿಸಿ ಸಂಪೂರ್ಣ ವಿವರ ಸಂಗ್ರಹಿಸಿ ಶಾಂತಿಯುತವಾಗಿ ಈ ಸಣ್ಣ ಸಮಸ್ಯೆ ಪರಿಹರಿಸಬಹುದಿತ್ತಲ್ಲ. ಯಾಕೆ ಹಾಗೆ ಮಾಡಿದರು?
ಯಾಕೆ ಹಾಗೆ ಮಾಡಿದರೆಂದರೆ ಶಾಂತಿಯುತ ಪರಿಹಾರ ಕಂಡು ಹಿಡಿಯುವುದು ಇವರ ಸಿದ್ಧಾಂತಕ್ಕೆ ವಿರೋಧ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದ್ವೀತಿಯ ಸರಸಂಘಚಾಲಕ ಮಾಧವ ಸದಾಶಿವ ಗೋಳ್ವಲ್ಕರ್ ಅವರ ಪ್ರಕಾರ ಮುಸಲ್ಮಾನರು, ಕ್ರೈಸ್ತರು ಮತ್ತು ಕಮ್ಯುನಿಸ್ಟರು ಅವರ ಮೊದಲ ಶತ್ರುಗಳು. ಮುಸಲ್ಮಾನರ ನಂತರ ಕ್ರೈಸ್ತರು ಅವರ ಟಾರ್ಗೆಟ್. ಇದರಿಂದ ಯಾವ ಕೆಲಸ ಮಾಡದೆಯೂ ಮತ್ತೆ ಚುನಾಯಿತರಾಗಿ ಬರಲು ಅನುಕೂಲವಾಗುತ್ತದೆ. ಶಾಸಕರಾದವರು ಈಗಲಾದರೂ ತಪ್ಪು ತಿದ್ದಿಕೊಳ್ಳಲಿ. ಅವರಿಗೆ ಮಾಡಲು ಬೇಕಾದಷ್ಟು ಕೆಲಸಗಳಿವೆ. ಇಂಥ ಸಣ್ಣ ವಿಷಯಕ್ಕೆ ಶಾಲೆಗೆ ನುಗ್ಗಿ ಗಲಾಟೆ ಮಾಡುವ ಅವರು ಅಂಗನವಾಡಿ ಶಿಕ್ಷಕಿಯರ ಸಮಸ್ಯೆಗಳ ಬಗ್ಗೆ, ಸಂಬಳ ಸಾಲುವುದಿಲ್ಲ ಎನ್ನುವ ಬಿಸಿಯೂಟದ ಮಹಿಳೆಯರ ಕುರಿತು, ಅತಿಥಿ ಶಿಕ್ಷಕರ ಅತಂತ್ರ ಬದುಕಿನ ಬಗ್ಗೆ ಹಾಗೂ ಸರಕಾರಿ ಶಾಲಾ ಮಕ್ಕಳ ಸಮಸ್ಯೆಗಳ ಬಗ್ಗೆ ಎಂದಾದರೂ ಮಾತಾಡಿದ್ದಾರೆಯೇ?
ರವೀಂದ್ರನಾಥ ಟ್ಯಾಗೋರ್ ಅವರ ಪದ್ಯವನ್ನು ಪಾಠ ಮಾಡಿದ್ದಕ್ಕೆ ಶಿಕ್ಷಕಿಯೊಬ್ಬರು ಅಮಾನತು ಆಗುವ ರಾಜ್ಯದಲ್ಲಿ ನಾವಿದ್ದೇವೆ! ರಾಜಕಾರಣಿಗಳು ಮತ್ತು ಮಡಿಲ ಮಾಧ್ಯಮಗಳು ಒಟ್ಟಾಗಿ ಪ್ರಜಾಪ್ರಭುತ್ವವನ್ನು ಸೋಲಿಸಲು ಹೊರಟಿವೆ. ಈ ಘಟನೆಯೂ ಅದರ ಭಾಗವೇ. ಇದರ ವಿರುದ್ಧ ಬಲವಾದ ಪ್ರತಿಭಟನೆಗಳನ್ನು ದಾಖಲಿಸಬೇಕು. ಅಮಾನತಾಗಿರುವ ಶಿಕ್ಷಕಿಯ ಜೊತೆಗೆ ನಾವೆಲ್ಲರೂ ನಿಲ್ಲಬೇಕು. ಅವರ ಅಮಾನತು ರದ್ದಾಗುವುದನ್ನು ಖಾತರಿಪಡಿಸಿಕೊಳ್ಳುವುದು ಪ್ರಜಾಪ್ರಭುತ್ವವನ್ನು ರಕ್ಷಿಸುವ ಕ್ರಿಯೆ ಎಂಬುದನ್ನು ಮರೆಯದಿರೋಣ.
ಸೈಂಟ್ ಜೆರೋಸಾ ಶಾಲೆಯಲ್ಲಿ ಶಾಸಕನ ಪಿತ್ತ ನೆತ್ತಿಗೇರಿಸಿದ ಶಿಕ್ಷಕಿ ಮಾಡಿದ ಪಾಠವಾದರೂ ಏನು? ಕವಿ ರವೀಂದ್ರನಾಥ ಟ್ಯಾಗೋರ್ ಅವರ Woಡಿಞ is Woಡಿshiಠಿ ಎಂಬ ಪದ್ಯವನ್ನು ಕರ್ನಾಟಕ ಸರಕಾರದ ಶಿಕ್ಷಣ ಇಲಾಖೆ ಪಠ್ಯಪುಸ್ತಕದಲ್ಲಿ ಸೇರಿಸಿದೆ. ಈ ಇಂಗ್ಲಿಷ್ ಪದ್ಯವನ್ನು ಇಂಗ್ಲಿಷ್ ಭಾಷಾ ಶಿಕ್ಷಕಿ ತರಗತಿಯಲ್ಲಿ ಇಂಗ್ಲಿಷ್ ನಲ್ಲಿ ಬೋಧಿಸುತ್ತಿದ್ದರು. ಈ ಪದ್ಯದಲ್ಲಿ ದೇವರೆಂದರೆ ಏನು, ದೇವರನ್ನು ಕಾಣುವ ಬಗೆ, ಆರಾಧನೆ ಹೇಗೆ ಎಂಬ ಬಗ್ಗೆ ಟ್ಯಾಗೋರ್ ವಿವರಿಸಿದ್ದಾರೆ.
‘‘ತೊರೆದು ಬಿಡು ಆ ನಿನ್ನ ಮಂತ್ರ ಪಠಣಗಳನ್ನು ಸುಮ್ಮನೆ ಕುಳಿತುಕೊಳ್ಳಬೇಡ. ದೇವರು ಗುಡಿ, ಚರ್ಚ್, ಮಸೀದಿಗಳಲ್ಲಿ ಇಲ್ಲ. ಕಣ್ಣನ್ನು ತೆರೆದು ನೋಡು, ಶ್ರಮಜೀವಿಯಲ್ಲಿ ದೇವರಿದ್ದಾನೆ, ಮಡಿ, ಮಡಿ ಎಂದು ಸ್ನಾನ ಮಾಡಿಕೊಳ್ಳುವವನಲ್ಲಿ ಇಲ್ಲ, ಮೂಢ ಸಂಪ್ರದಾಯದಲ್ಲಿ ಇಲ್ಲ, ಇಳಿದು ಬಾ ಧೂಳಿನ ನೆಲಕೆ ದುಡಿದರೆ ದೇವರು ಒಲಿಯುತ್ತಾನೆ.’’ ಈ ಭಾವಾರ್ಥ ಇರುವ ಪದ್ಯವನ್ನು ಬೋಧಿಸುವ ಶಿಕ್ಷಕಿಗೆ ಅದನ್ನು ಮಕ್ಕಳಿಗೆ ತಿಳಿಯುವಂತೆ ಬೋಧಿಸುವ ಸ್ವಾತಂತ್ರ್ಯವಿದೆ.
ದೇವರು ನಮ್ಮ ಹೃದಯದಲ್ಲಿದ್ದಾನೆ ಇನ್ನೊಬ್ಬರನ್ನು ಹಿಂಸಿಸಬಾರದು ಎಂದೆಲ್ಲ ಸರಳವಾಗಿ ಪಾಠ ಮಾಡಿದ್ದಾರೆ. ಇದನ್ನು ಕೆಲವು ಸಂಘಟನೆಗಳು ವಿವಾದ ಮಾಡಿ ಶಾಸಕ ವೇದವ್ಯಾಸ ಕಾಮತ್ ಶಾಲೆಯೊಳಗೆ ನುಗ್ಗಿ ಕೂಗಾಡುತ್ತಾರೆ. ಶಿಕ್ಷಕಿಯ ಅಮಾನತು ಮಾಡಲು ಒತ್ತಾಯಿಸುತ್ತಾರೆ. ಯಾವುದೇ ವಿಚಾರಣೆ ಇಲ್ಲದೆ ಶಿಕ್ಷಣಾಧಿಕಾರಿ, ಪೊಲೀಸ್ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳು ಬಿಜೆಪಿ ಶಾಸಕನ ಒತ್ತಡಕ್ಕೆ ಮಣಿದು ಶಾಲಾ ಆಡಳಿತ ಮಂಡಳಿಗೆ ಬೆದರಿಸಿ ಶಿಕ್ಷಕಿಯ ಅಮಾನತು ಮಾಡಿಸುತ್ತಾರೆ. ಈ ಶಿಕ್ಷಕಿ ಬಗ್ಗೆ ಶಾಲೆಯ ಯಾವುದೇ ವಿದ್ಯಾರ್ಥಿಗಳು, ಪೋಷಕರಾಗಲಿ ದೂರು ನೀಡಿಲ್ಲ.ಆದರೂ ಅಮಾನತು ಆಗುತ್ತದೆ.
ನಮ್ಮ ನೆಲದ ಬಹುತೇಕ ಮಹಾ ಚೇತನಗಳ ಸಾಹಿತ್ಯ ಕೃತಿಗಳು ಮಾನವೀಯ ಅಂತಃಕರಣವನ್ನು ವ್ಯಕ್ತಪಡಿಸುತ್ತವೆ. ಮನುಷ್ಯರನ್ನು ಕೋಮು ಮತ್ತು ಜಾತಿ ಆಧಾರದಲ್ಲಿ ವಿಭಜಿಸುವ ಜನರಿಗೆ ಇವು ಇಷ್ಟವಾಗುವುದಿಲ್ಲ. ಈಗ ರವೀಂದ್ರನಾಥ್ ಟ್ಯಾಗೋರರ ಪಠ್ಯಕ್ಕೆ ತಕರಾರು ತೆಗೆದವರು ನಾಳೆ ಬಸವಣ್ಣನವರ ಕಾಯಕವೇ ಕೈಲಾಸ ಮತ್ತು ದಯವೇ ಧರ್ಮದ ಮೂಲ ಹಾಗೂ ದೇಹವೇ ದೇಗುಲ ವಚನಗಳ ಪಾಠ ಮಾಡುವ ಶಿಕ್ಷಕರನ್ನು ಹೆದರಿಸಲು ದೊಣ್ಣೆ ಹಿಡಿದುಕೊಂಡು ಬಂದರೆ ಏನು ಮಾಡುವುದು? ಅಣು ರೇಣು ತ್ರಣಕಾಷ್ಟದಟದಲ್ಲಿ ದೇವರನ್ನು ಕಂಡ ದೇಶ ನಮ್ಮದು. ಆದರೆ, ದೇವಾಲಯ ಕಟ್ಟಿ ಕಾಸು ಮಾಡಿಕೊಳ್ಳಲು ಹೊರಟವರಿಗೆ ಈ ಅತ್ಯುನ್ನತ ಆಧ್ಯಾತ್ಮಿಕ ಅನುಭೂತಿ ಅರ್ಥವಾಗುವುದಿಲ್ಲ.
ಅದು ಹೋಗಲಿ ಆಧುನಿಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಪ್ಪಿಕೊಂಡ ದೇಶ ನಮ್ಮದು. ಇಲ್ಲಿ ಶಾಸನಗಳನ್ನು ಮಾಡುವ ಮಹತ್ತರ ಹೊಣೆಗಾರಿಕೆಯನ್ನು ಹೊತ್ತುಕೊಂಡವರೇ ತಮ್ಮ ಮಹತ್ವ ವನ್ನು ತಾವೇ ಕಡೆಗಣಿಸಿಕೊಂಡು ಬೀದಿ ರೌಡಿಗಳಂತೆ ವರ್ತಿಸುವುದು ಸರಿಯಲ್ಲ.
ವೇದವ್ಯಾಸ ಕಾಮತ್ ಅವರಿಗಾಗಲಿ, ಭರತಶೆಟ್ಟಿಯವರಿಗಾಗಲಿ ಜನಪ್ರತಿನಿಧಿಗಳಾಗುವ ಅಪೂರ್ವ ಅವಕಾಶ ದೊರಕಿದೆ. ಅವರು ಮನಸ್ಸು ಮಾಡಿದರೆ ಇನ್ನೂ ಎತ್ತರಕ್ಕೆ ಬೆಳೆಯಬಹುದು. ಮಂಗಳೂರಿನಲ್ಲಿ ಇದೇ ಪರಿಸ್ಥಿತಿ ನಿರಂತರವಾಗಿ ಇರುವುದಿಲ್ಲ. ಹಿಂದೆ ಕಮ್ಯುನಿಸ್ಟರಾದ ಬಿ.ವಿ.ಕಕ್ಕಿಲ್ಲಾಯರು, ಪಿ.ರಾಮಚಂದ್ರರಾಯರು, ಕೃಷ್ಣ ಶೆಟ್ಟಿ ಅವರು ಇದೇ ಜಿಲ್ಲೆಯಿಂದ ಚುನಾಯಿತರಾಗಿ ಬಂದಿದ್ದರು. ಕಮ್ಯುನಿಸ್ಟ್ ನಾಯಕ ಶಾಂತಾರಾಮ ಪೈ ಜನನಾಯಕರಾಗಿ ಬಹು ಎತ್ತರಕ್ಕೆ ಬೆಳೆದು ನಿಂತಿದ್ದರು. ವೈಕುಂಠ ಬಾಳಿಗಾ, ಡಾ.ನಾಗಪ್ಪಆಳ್ವಾ, ಬಿ.ಎಂ.ಇದಿನಬ್ಬ, ಬಿ.ಎ.ಮೊಹಿದಿನ್, ಜನಾರ್ದನ ಪೂಜಾರಿ, ವೀರಪ್ಪ ಮೊಯ್ಲಿ ಅವರನ್ನು ನಾಡಿಗೆ ನೀಡಿದ ಜಿಲ್ಲೆಯಿದು. ಮೇಲ್ಕಂಡವರಂತೆ ನೀವೂ ಬೆಳೆಯಬೇಕು. ಶಾಲೆಗೆ ನುಗ್ಗಿ ಜೈ ಶ್ರೀ ರಾಮ್ ಎಂದು ಅರಚಾಡಿದರೆ ಆ ಮರ್ಯಾದಾ ಪುರುಷೋತ್ತಮನೂ ಒಪ್ಪಿಕೊಳ್ಳುವುದಿಲ್ಲ.
ಕರ್ನಾಟಕ ವಿಧಾನ ಮಂಡಲದಲ್ಲಿ ಅತ್ಯಂತ ಉನ್ನತ ಗ್ರಂಥಾಲಯವಿದೆ. ಬೇರೆಲ್ಲೂ ಸಿಗದ ಪುಸ್ತಕಗಳು ಅಲ್ಲಿ ಸಿಗುತ್ತವೆ. ನಾನು ಅಲ್ಲಿಗೆ ಕೆಲವು ಸಲ ಹೋದಾಗ ಕಾಗೋಡು ತಿಮ್ಮಪ್ಪ, ಬಂಗಾರಪ್ಪ, ರಮೇಶ್ ಕುಮಾರ್, ರಾಮಕೃಷ್ಣ ಹೆಗಡೆಯವರು ಅಲ್ಲಿ ಬಂದು ಓದುತ್ತ ಕೂತಿರುವುದನ್ನು ನೋಡಿದ್ದೇನೆ. ನೀವೂ ಅಲ್ಲಿ ಹೋಗಿ ಪುಸ್ತಕಗಳನ್ನು ಓದುವ ಅಭಿರುಚಿ ಬೆಳೆಸಿಕೊಂಡರೆ ನಿಮಗೆ ಉತ್ತಮ ಭವಿಷ್ಯವಿದೆ. ಹಿಂದೂಗಳ ತೆರಿಗೆ ಹಣ ಹಿಂದೂಗಳಿಗೆ ಖರ್ಚು ಮಾಡಿ ಎಂದು ಅವಿವೇಕಿಗಳಂತೆ ಹೇಳಿಕೆ ನೀಡಿದರೆ ರಾಜ್ಯದ ಬೇರೆ ಜಿಲ್ಲೆಗಳ ಜನ ಗೇಲಿ ಮಾಡಿ ನಗುತ್ತಾರೆ. ಕೊನೆಗೆ ನಿಮ್ಮನ್ನು ಚುನಾಯಿಸಿದ ಜನತೆಗೆ ಭಾರವಾಗುತ್ತೀರಿ. ಎಚ್ಚರವಿರಲಿ.