ರಾಯಚೂರು | ಗರ್ಭಿಣಿ, ಬಾಣಂತಿಯರ ಮನೆಗಳಿಗೆ ಜಿ.ಪಂ ಸಿಇಒ ಭೇಟಿ : ಫಲಾನುಭವಿಗಳಿಂದ ಮಾಹಿತಿ
ರಾಯಚೂರು : ತಾಲ್ಲೂಕಿನ ಚಿಕ್ಕಸೂಗುರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಗರ್ಭಿಣಿಯರ ಮನೆಗಳಿಗೆ ಜಿಲ್ಲಾ ಪಂಚಾಯತ್ ಸಿಇಒ ರಾಹುಲ್ ತುಕಾರಾಂ ಪಾಂಡ್ವೆ ಭೇಟಿ ನೀಡಿ ಅಂಗನವಾಡಿ ಕೇಂದ್ರಗಳಿಂದ ನೀಡುವ ಪೌಷ್ಠಿಕ ಆಹಾರ ಪದಾರ್ಥಗಳ ಸರಬರಾಜು ಮಾಡುವ ಕುರಿತು ಫಲಾನುಭವಿಗಳಿಂದ ಮಾಹಿತಿ ಪಡೆದರು.
ಅಂಗನವಾಡಿ ಕೇಂದ್ರಗಳಿಂದ ಮಾತೃ ಪೂರ್ಣ ಯೋಜನೆಯಡಿ ನೀಡುವ ಹಸಿರು ಕಾಳು, ಮೊಟ್ಟೆ, ಹಾಲು, ಶೇಂಗಾ, ಚಿಕ್ಕಿ, ಹಕ್ಕಿ, ರವಾ ಇನ್ನೂ ಮುಂತಾದ ಪೌಷ್ಟಿಕ ಆಹಾರ ದೊರೆಯುವ ಬಗ್ಗೆ ಮಾಹಿತಿ ಪಡೆದುಕೊಂಡರು. ಫಲಾನುಭವಿಗಳು ಸರ್ಕಾರದ ಯೋಜನೆಗಳ ಸದುಪಯೋಗ ಪಡಿಸಿಕೊಂಡು ತಾಯಿ ಮಕ್ಕಳ ಆರೋಗ್ಯ ಕಾಪಾಡಿಕೊಳ್ಳಲು ಸಲಹೆ ನೀಡಿದರು.
ನಂತರ ಗ್ರಾಮದ ಅಗಸೆ ಹತ್ತಿರ ಸ್ಥಾಪಿಸಲಾದ ಪುಸ್ತಕ ಗೂಡನ್ನು ವೀಕ್ಷಿಸಿದರು. ಸಲಹಾ ಪೆಟ್ಟಿಗೆ ಇಡುವಂತೆ ಕಾರ್ಯದರ್ಶಿಗೆ ತಿಳಿಸಿದರು. ಗ್ರಂಥಾಲಯಕ್ಕೆ ಭೇಟಿ ನೀಡಿ ನೊಂದಣಿ ಪುಸ್ತಕ, ಎಷ್ಟು ಮಕ್ಕಳು ಸೌಲಭ್ಯ ಪಡೆಯುತ್ತಿದ್ದಾರೆಂದು ತಿಳಿದುಕೊಂಡರು.
ಬಳಿಕ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ನರೇಗಾ ಯೋಜನೆಯಡಿ ನಡೆಯುತ್ತಿರುವ ಶಾಲಾ ಕಾಂಪೌಂಡ್, ಜೆಜೆಎಂ ಯೋಜನೆಯಡಿ ಕುಡಿಯುವ ನೀರಿನ ಕಾಮಗಾರಿಗಳನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರು ನವೀನ್ ಕುಮಾರ್, ರಾಯಚೂರು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಪವಾರ್, ಸಹಾಯಕ ನಿರ್ದೇಶಕ ಹನುಮಂತ, ಶಿವಪ್ಪ, ಸಿಡಿಪಿ ಮಹೇಶ ನಾಯಕ, ವಲಯ ಅರಣ್ಯ ಅಧಿಕಾರಿ ನಾಗರಾಜ, ಸಾಲಾರ್, ದೇವರಾಜ, ಪಿಡಿಒ, ತಾಂತ್ರಿಕ ಸಿಬ್ಬಂದಿಯವರು ಹಾಗೂ ಗ್ರಾ.ಪಂ ಸಿಬ್ಬಂದಿ ಉಪಸ್ಥಿತರಿದ್ದರು.