ನರೇಗಾ ಮಾನವ ದಿನಗಳ ಸೃಜನೆಯಲ್ಲಿ ರಾಯಚೂರು ಪ್ರಥಮ ಸ್ಥಾನ
ರಾಯಚೂರು : ಜಿಲ್ಲೆಯಲ್ಲಿ ಬೇಸಿಗೆ ಅವಧಿಯಲ್ಲಿ ಗ್ರಾಮೀಣ ಪ್ರದೇಶದ ಜನರ ಗುಳೆ ಹೋಗುವುದನ್ನು ತಡೆಯಲು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಜಿಲ್ಲೆಯಲ್ಲಿ ಕೂಲಿ ಕಾರ್ಮಿಕರಿಗೆ ಕೆಲಸ ನೀಡುವುದಲ್ಲದೇ, ಮಾನವ ದಿನಗಳನ್ನು ಸೃಜನೆ ಮಾಡುವಲ್ಲಿ ರಾಯಚೂರು ಜಿಲ್ಲೆಯು ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ.
ಜಿಲ್ಲೆಗೆ 1 ಕೋಟಿ 10 ಲಕ್ಷ ಮಾನವ ದಿನಗಳ ಗುರಿ ನೀಡಿದ್ದು, ಪ್ರಸ್ತುತ ಏಪ್ರಿಲ್ ನಿಂದ ಡಿಸೆಂಬರ್ ತಿಂಗಳವರೆಗೆ 1,00,04,059 ಮಾನವ ದಿನಗಳ ಸೃಜಿಸಿ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ. ಇನ್ನೂ ಬೆಳಗಾವಿ 79,94,524 (ದ್ವಿತೀಯ ಸ್ಥಾನ), ಕೊಪ್ಪಳ 66,67,166 (ತೃತೀಯ ಸ್ಥಾನ), ಬಳ್ಳಾರಿ 59,29,693 (ನಾಲ್ಕನೇ ಸ್ಥಾನ), ವಿಜಯನಗರ 51,93,456 (ಐದನೇ ಸ್ಥಾನ)ದಲ್ಲಿದೆ ಎಂದು ರಾಯಚೂರು ಜಿಲ್ಲಾ ಪಂಚಾಯತ್ ಕಚೇರಿಯ ಪ್ರಕಟಣೆ ತಿಳಿಸಿದೆ.
ಗುಳೆ ತಡೆಯುವಲ್ಲಿ ಯಶಸ್ವಿ:
ಪ್ರತಿ ವರ್ಷ ಬೇಸಿಗೆ ಅವಧಿಯಲ್ಲಿ ರಾಯಚೂರು ಜಿಲ್ಲೆಯ ಗ್ರಾಮೀಣ ಪ್ರದೇಶದ ಜನರಿಗೆ ತಮ್ಮ ಊರಲ್ಲಿ ಕೆಲಸವಿಲ್ಲದ ಕಾರಣದಿಂದಾಗಿ ನಗರ ಪ್ರದೇಶಗಳಿಗೆ ಗುಳೆ ಹೋಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ನರೇಗಾ ಯೋಜನೆಯಡಿ ಈ ಬಾರಿ ಐಇಸಿ ಚಟುವಟಿಕೆಯಡಿ ಹೆಚ್ಚು ಪ್ರಚಾರ ಕಾರ್ಯಕ್ರಮಗಳನ್ನು ಮಾಡಿ ಕೂಲಿಕಾರರಿಗೆ ನರೇಗಾದಿಂದ ಸಿಗುವ ಅಗತ್ಯ ಮಾಹಿತಿ ಒದಗಿಸಲಾಯಿತು. ಜೊತೆಗೆ 2024ರ ಏಪ್ರಿಲ್ 1ರಿಂದ ಕೇಂದ್ರ ಸರಕಾರವು ನರೇಗಾ ಕೂಲಿ ಮೊತ್ತವನ್ನು 316 ರಿಂದ 349ರೂ.ಗೆ ಹೆಚ್ಚಳ ಮಾಡಿದೆ. ಈ ಬಗ್ಗೆ ಕೂಲಿಕಾರರಿಗೆ ಅರಿವು ಮೂಡಿಸಿ ಯೋಜನೆಯತ್ತ ಕರೆತಂದು ಎಲ್ಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೆಲಸ ನೀಡಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಸಿಇಒ ರಾಹುಲ್ ತುಕಾರಾಂ ಪಾಂಡ್ವೆ ತಿಳಿಸಿದ್ದಾರೆ.
ಬೆಳಗಾವಿ ಹಾಗೂ ಕಲಬುರಗಿ ವಿಭಾಗ ವ್ಯಾಪ್ತಿಯ ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ಹೆಚ್ಚಳ ಹಿನ್ನೆಲೆಯಲ್ಲಿ ನರೇಗಾ ಕೆಲಸದಲ್ಲಿ ಶೇ.30ರಷ್ಟು ರಿಯಾಯತಿ ಸೌಲಭ್ಯವನ್ನು ರಾಜ್ಯ ಸರಕಾರ ನೀಡಿದೆ. ಈ ಬಗ್ಗೆ ರಾಯಚೂರು ಜಿಲ್ಲೆಯ ಕೂಲಿಕಾರರಿಗೆ ಹೆಚ್ಚು ಮಾಹಿತಿ ನೀಡಿದ್ದರಿಂದ ಜನ ಗುಳೆ ಹೋಗುವುದನ್ನು ಬಿಟ್ಟು ನರೇಗಾದಡಿ ಇದ್ದೂರಲ್ಲೇ ಕೆಲಸ ಮಾಡಿಕೊಂಡು ನೆಮ್ಮದಿಯ ಬದುಕು ಕಟ್ಟಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಮಹಿಳಾ ಸಬಲೀಕರಣ ಅಭಿಯಾನದಲ್ಲಿ ಮಹಿಳಾ ಭಾಗವಹಿಸುವಿಕೆ ಹೆಚ್ಚಿಸಲು ಜಿಲ್ಲೆಯಾದ್ಯಂತ ಗ್ರಾಮ ಪಂಚಾಯತ್ ಮಟ್ಟದಲ್ಲಿ ಐಇಸಿ ಚಟುವಟಿಕೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪ್ರತಿಶತ ಶೇ.51.81 ಮಹಿಳೆಯರಿಗೆ ನರೇಗಾ ಯೋಜನೆಯಡಿ ಉದ್ಯೋಗ ನೀಡುವಲ್ಲಿ ಯಶಸ್ವಿಯಾಗಿದೆ. ಲಿಂಗತ್ವ ಅಲ್ಪಸಂಖ್ಯಾತರಿಗೆ ಹೊಸ ಉದ್ಯೋಗ ಚೀಟಿ (24), ಅಂಗವಿಕರಿಗೆ (1060) ಹೊಸ ಉದ್ಯೋಗ ಚೀಟಿ ನೀಡಿ ಸ್ವಾಲಂಬಿಯಾಗಿ ಕೆಲಸ ನಿರ್ವಹಿಸಲು ಇದು ಸಹಕಾರಿಯಾಗಿದೆ ಎಂದು ರಾಹುಲ್ ತುಕಾರಾಂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.