ರಾಯಚೂರು | ಸಂಘ ಪರಿವಾರದ ವಿರುದ್ಧ ಹೋರಾಟಕ್ಕೆ ಸಮಾನ ಮನಸ್ಕರಿಂದ ಜನತಾ ರಂಗ ರಚನೆ
ರಾಯಚೂರು : ದೇಶದ ಹಲವೆಡೆ ದುಡಿಯುವ ವರ್ಗ ಹಾಗೂ ದಮನಿತ ಜನಾಂಗಗಳ ಮೇಲೆ ಸಂಘ ಪರಿವಾರದವರ ದಾಳಿಗಳನ್ನು ಎದುರಿಸಲು ಐಕ್ಯತೆಯಿಂದ ಹೋರಾಡಲು ಜಿಲ್ಲೆಯ ಸಮಾನ ಮನಸ್ಕರ ಸಂಘಟನೆಗಳಿಂದ ‘ಮನುವಾದಿ ಫ್ಯಾಸಿಸ್ಟ್ ವಿರೋಧಿ ಜನತಾರಂಗ ರಾಯಚೂರು’ ಅಸ್ತಿತ್ವಕ್ಕೆ ತರಲಾಯಿತು.
ಜಿಲ್ಲೆಯ ಸಮಾನ ಮನಸ್ಕ ಸಂಘಟನೆಗಳ ಮುಖಂಡರಿಂದ ನಗರದ ಸ್ಪಂದನ ಭವನದಲ್ಲಿ ಸಭೆ ನಡೆಸಿ ಪ್ಯಾಸಿಸ್ಟ್ ವ್ಯವಸ್ಥೆಯ ವಿರುದ್ಧ ಐಕ್ಯತೆಯ ಹೋರಾಟ ಹಾಗೂ ವೈಚಾರಿಕ ರಾಜಕೀಯ ಕಾರ್ಯತಂತ್ರದ ಬಗ್ಗೆ ಚರ್ಚೆ ಮಾಡಲಾಯಿತು.
ಸಭೆಯಲ್ಲಿ ಭಾಗವಹಿಸಿದ 14 ಸಂಘಟನೆಗಳ ಜೊತೆ ಇತರೆ ಸಮಾನ ಮನಸ್ಕ ಸಂಘ ಸಂಸ್ಥೆಗಳನ್ನು, ವ್ಯಕ್ತಿಗಳನ್ನು ಮುಂದಿನ ಸಭೆಯಲ್ಲಿ ಸೇರ್ಪಡೆ ಮಾಡಿಕೊಳ್ಳುವುದು ಜೊತೆಗೆ ಎಲ್ಲಾ ತಾಲೂಕುಗಳಲ್ಲೂ ಜನತಾರಂಗವನ್ನು ರಚಿಸುವುದು. ಮುಂಬರುವ ಜನವರಿ 1 ರಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರದರ್ಶನ ನಡೆಸಿ ರಾಷ್ಟ್ರಪತಿಗಳಿಗೆ ಒತ್ತಾಯ ಪತ್ರವನ್ನು ಕಳುಹಿಸುವುದು. ಅದೇ ದಿನ ಎರಡನೇ ಸುತ್ತಿನ ಸಭೆ ನಡೆಸಿ ಮನುವಾದಿ, ಫ್ಯಾಸಿಸ್ಟ್ ದಾಳಿಯ ವಿರುದ್ಧ ಜನ ಜಾಗೃತಿ ಮೂಡಿಸುವ ಪ್ರಚಾರಂದೋಲನದ ರೂಪ ರೇಷಗಳನ್ನು ಸಿದ್ಧಪಡಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.
ಸಭೆಯಲ್ಲಿ ಹೋರಾಟಗಾರ ಆರ್ ಮಾನಸಯ್ಯ, ಎ.ಆರ್ ಬೇರಿ, ಖಾಜಾ ಅಸ್ಲಂ ಮತ್ತಿತರರು ಮಾತನಾಡಿ, ಕೇಂದ್ರ ಸರ್ಕಾರದ ಒಂದೇ ದೇಶ, ಒಂದೇ ಚುನಾವಣೆ ಮಾಡುವ ಉದ್ದೇಶ ಖಂಡನೀಯ. ಹಿಂದೂ ರಾಷ್ಟ್ರ ನಿರ್ಮಾಣದ ವಿರುದ್ಧ ಐಕ್ಯಹೋರಾಟ ರೂಪಿಸಲು ತೀರ್ಮಾನಿಸಲಾಯಿತು. ಸಭೆಯಲ್ಲಿ ಅನೇಕರ ಅಭಿಪ್ರಾಯದ ಬಳಿಕ ಜಂಟಿ ವೇದಿಕೆಗೆ ‘ಮನುವಾದಿ ಫ್ಯಾಸಿಸ್ಟ್ ವಿರೋಧಿ ಜನತಾರಂಗ ರಾಯಚೂರು’ ಹೆಸರು ಇಡಲಾಯಿತು.
ಸಭೆಯಲ್ಲಿ ಸಂಯೋಜಕರಾದ ಎಂ.ಗಂಗಾಧರ, ಜಿ.ಅಮರೇಶ, ಜಾನ್ ವೆಸ್ಲಿ, ಆಂಜನೇಯ ಜಾಲಿಬೆಂಚಿ, ವಿಶ್ವನಾಥ ಪಟ್ಟಿ, ಶ್ರೀನಿವಾಸ ಕೊಪ್ಪರ, ಫೈಜುದ್ದೀನ್, ಜಮಾಲ್ ಮತ್ತಿತರರು ಉಪಸ್ಥಿತರಿದ್ದರು.