ರಾಯಚೂರು | ಕಲ್ಮಲಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಡಿಎಚ್ಒ ಭೇಟಿ, ಪರಿಶೀಲನೆ
ರಾಯಚೂರು : ತಾಲ್ಲೂಕಿನ ಕಲ್ಮಲಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುರೇಂದ್ರ ಬಾಬು ಅವರು ಭೇಟಿ ನೀಡಿ, ಬಾಣಂತಿಯರ ಆರೋಗ್ಯವನ್ನು ವಿಚಾರಿಸಿ, ಆಸ್ಪತ್ರೆಯ ವಿವಿಧ ಸೌಲಭ್ಯಗಳನ್ನು ಪರಿಶೀಲಿಸಿದರು.
ಬಾಣಂತಿ ಮಹಿಳೆಯರು ಹೆರಿಗೆಯಾದ ನಂತರ ತಮ್ಮ ಆರೋಗ್ಯ ಬಗ್ಗೆ ಹೆಚ್ಚಿನ ಗಮನಹರಿಸಬೇಕು. ಚಳಿಗಾಲ ಇರುವ ಕಾರಣ ಸಣ್ಣಮಕ್ಕಳನ್ನು ಸಹ ಬೆಚ್ಚನೆಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ಏನಾದರೂ ತೊಂದರೆ ಉಂಟಾದಲಿ ಕೂಡಲೇ ವೈದ್ಯರನ್ನು ಭೇಟಿಯಾಗಬೇಕು. ಅಲ್ಲದೆ ಆಸ್ಪತ್ರೆಗೆ ಬರುವ ಸಾರ್ವಜನಿಕರು, ಗರ್ಭಿಣಿ, ಬಾಣಂತಿ ಮತ್ತು ನವಜಾತ ಶಿಶುಗಳಿಗೆ ಉತ್ತಮ ಚಿಕಿತ್ಸೆ ನೀಡುವ ಮೂಲಕ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಸ್ಥಳದಲ್ಲಿದ ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಗಣೇಶ ಸೇರಿದಂತೆ ಕಲ್ಮಲಾ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.