ರಾಯಚೂರು | ಬಾಣಂತಿ ರೇಖಾಳ ಸಾವು ಪ್ರಕರಣ : ಲೋಕಾಯುಕ್ತರಿಗೆ ದೂರು
ರಾಯಚೂರು : ದೇವದುರ್ಗ ತಾಲ್ಲೂಕಿನ ಜಾಡಲದಿನ್ನಿ ಗ್ರಾಮದ ಬಾಣಂತಿ ರೇಖಾಳ ಸಾವಿಗೆ ವೈದ್ಯಾಧಿಕಾರಿ ಶಿವಾನಂದ ಹಾಗೂ ಸ್ಟಾಫ್ ನರ್ಸ್ ಜ್ಯೋತಿ, ಲಕ್ಷ್ಮೀ ಅವರೇ ಕಾರಣರಾಗಿದ್ದು, ಅವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ಕುಟುಂಬಸ್ಥರಿಗೆ ಪರಿಹಾರ ನೀಡಬೇಕು ಎಂದು ದಲಿತಪರ ಹೋರಾಟಗಾರ ಹನುಮಂತಪ್ಪ ಕಾಕರಗಲ್ ಒತ್ತಾಯಿಸಿದರು.
ಈ ಕುರಿತು ಕುಟುಂಬಸ್ಥರೊಂದಿಗೆ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ನ.12 ರಂದು ಮಧ್ಯಾಹ್ನ 3ಕ್ಕೆ ಹೆರಿಗೆ ನೋವು ಕಾಣಿಸಿಕೊಂಡ ಕಾರಣ ರೇಖಾಳನ್ನು ದೇವದುರ್ಗದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸರಿಯಾಗಿ ಚಿಕಿತ್ಸೆ ನೀಡದೇ ಖಾಸಗಿ ಆಸ್ಪತ್ರೆಗೆ ರವಾನಿಸಲು ಹೇಳಿದ್ದರು. ಆರ್ಥಿಕವಾಗಿ ಸಬಲರಾಗಿಲ್ಲ ಎಂದು ಹೇಳಿದಾಗ ಸರಿಯಾಗಿ ಚಿಕಿತ್ಸೆ ನೀಡದ ಕಾರಣ ತೀವ್ರ ನರಳಾಡಿ ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಿದರು.
ರೇಖಾಳ ಸಾವಿನ ಕುರಿತು ಲೋಕಾಯುಕ್ತ ಕಚೇರಿಯಲ್ಲಿ ದೂರು ದಾಖಲಿಸಿದ್ದು, ಸಮಗ್ರ ತನಿಖೆ ನಡೆಸಿ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದರು.
ಕುಟುಂಬ ಸದಸ್ಯರಾದ ರಂಗಪ್ಪ ದೇವತಗಲ್, ಶಿವಪ್ಪ, ಮಲ್ಲಪ್ಪ, ಬಸ್ಸಮ್ಮ, ಲಕ್ಷ್ಮೀ ಉಪಸ್ಥಿತರಿದ್ದರು.