ರಾಯಚೂರು | ಅಮಿತ್ ಶಾ ವಿರುದ್ಧ ಅಂಬೇಡ್ಕರ್ ಸೇನೆ ಪ್ರತಿಭಟನೆ
ರಾಯಚೂರು : ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಅಪಮಾನ ಮಾಡಿದ ಕೇಂದ್ರ ಗೃಹಮಂತ್ರಿ ಅಮಿತ್ ಶಾ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಲು ಒತ್ತಾಯಿಸಿ ಅಂಬೇಡ್ಕರ್ ಸೇನೆಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಲಾಯಿತು.
ಅಮಿತ್ ಶಾ ವಿರುದ್ಧ ಘೋಷಣೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಸಂಘದ ಪದಾಧಿಕಾರಿಗಳು ಬಳಿಕ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
ಡಿ.18 ರಂದು ಸಂಸತ್ತಿನ ಚಳಿಗಾಲ ಅಧಿವೇಶನದಲ್ಲಿ ಅಂಬೇಡ್ಕರ್ ಹಾಗೂ ಸಂವಿಧಾನದ ಬಗ್ಗೆ ಚರ್ಚೆ ಮಾಡುವಾಗ ಗೃಹಮಂತ್ರಿ ಅಮಿತ್ ಶಾ ಅವರು, ‘ಅಂಬೇಡ್ಕರ್ ಎನ್ನುವುದು ಫ್ಯಾಷನ್ ಆಗಿ ಬಿಟ್ಟಿದೆ, ಅಂಬೇಡ್ಕರ್ ಬದಲು ದೇವರ ಹೆಸರು ಹೇಳಿದರೆ 7 ಜನ್ಮದಲ್ಲಿ ಸ್ಬರ್ಗ ಸಿಗುತ್ತಿತ್ತು’ ಎಂದು ಹೇಳಿ ಅಂಬೇಡ್ಕರ್ ಅವರಿಗೆ ಹಾಗೂ 130ಕೋಟಿ ಜನರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ದೂರಿದರು.
ಇಂತಹ ಪ್ರಚೋದನಕಾರಿ ಹೇಳಿಕೆಗಳಿಂದ ಗಲಭೆ, ಕೋಮು ಸೌಹಾರ್ದಕ್ಕೆ ಧಕ್ಕೆ ಯಾಗುತ್ತದೆ, ಹೀಗಾಗಿ ಅವರನ್ನು ಬಂಧಿಸಿ ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಮನವಿ ಮಾಡಿದರು.
ಅಂಬೇಡ್ಕರ್ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ವಿಶ್ವನಾಥ ಪಟ್ಟಿ, ಬಂದೆನವಾಜ್, ಮಹೇಶ ಕುಮಾರ, ಕುಮಾರಸ್ವಾಮಿ, ಅಂಬಾಜಿರಾವ್, ಮಂಜುನಾಥ ಉಪಸ್ಥಿತರಿದ್ದರು.