ರಾಯಚೂರು | ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಲೋಕಾಯುಕ್ತ ಬಲೆಗೆ
ರಾಯಚೂರು : ವಸತಿ ನಿಲಯ ನಡೆಸಲು ಬಾಡಿಗೆ ಪಡೆದಿದ್ದ ಕಟ್ಟಡದ ಮಾಲಕರಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮಾನ್ವಿ ಪ್ರಭಾರ ಅಧಿಕಾರಿ ಸಂಗನಬಸಪ್ಪ ಬಿರಾದಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಜಿಲ್ಲಾ ಕಚೇರಿಯಲ್ಲಿ ವ್ಯವಸ್ಥಾಪಕರಾಗಿರುವ ಇವರಿಗೆ ಮಾನ್ವಿಯ ಕಚೇರಿಯ ಪ್ರಭಾರ ಜವಾಬ್ದಾರಿ ನೀಡಲಾಗಿತ್ತು. ಮಾನ್ವಿಯಲ್ಲಿ ವಿದ್ಯಾರ್ಥಿನಿಯರ ವಸತಿ ನಿಲಯ ನಡೆಸಲು ಕಟ್ಟಡವೊಂದನ್ನು ಬಾಡಿಗೆ ಪಡೆಯಲಾಗಿತ್ತು. ತಿಂಗಳಿಗೆ 60 ಸಾವಿರ ರೂ. ಬಾಡಿಗೆಯಂತೆ 11 ತಿಂಗಳ ಹಣ ಬಾಕಿ ಉಳಿದಿತ್ತು. ಆ ಹಣವನ್ನು ಮಂಜೂರು ಮಾಡಿಸಲು ಕಟ್ಟಡ ಮಾಲಕರಿಂದ 15 ಸಾವಿರ ರೂ. ಲಂಚಕ್ಕೆ ಬೇಟಿಕೆಯಿಟ್ಟಿದ್ದ. ಕಟ್ಟಡ ಮಾಲಕ ತಿಪ್ಪಯ್ಯ ಶೆಟ್ಟಿ ಈ ಕುರಿತು ಮಂಗಳವಾರ ಲೋಕಾಯುಕ್ತರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿತ್ತು.
ಬುಧವಾರ ದಾಳಿ ನಡೆಸಿದ ಅಧಿಕಾರಿಗಳು ಅಧಿಕಾರಿಯನ್ನು ವಶಕ್ಕೆ ಪಡೆದಿದ್ದಾರೆ. ಲೋಕಾಯುಕ್ತ ಎಸ್ಪಿ ಎಂ.ಎನ್.ಶಶಿಧರ, ಇನ್‌ಸ್ಪೆಕ್ಟರ್‌ಗಳಾದ ಕಾಳಪ್ಪ ಬಡಿಗೇರ್, ರವಿ ಪುರುಷೋತ್ತಮ್, ಮುಖ್ಯಪೇದೆಗಳಾದ ಶಿವರಾಮ ಸ್ವಾಮಿ, ಏಕಾಂಬರನಾಥ, ಸಿಬ್ಬಂದಿಯಾದ ಗೋಪಾಲರಾವ್ ಪವಾರ್, ಅಶೋಕ, ರವಿ, ಬಸವರಾಜ್, ಬಸಯ್ಯ, ಗೋಪಾಲ್, ಶರಣಬಸವ, ಅಜಿತ್ ದಾಳಿ ತಂಡದಲ್ಲಿದ್ದರು.