ರಾಯಚೂರು | ಅಮಿತ್ ಶಾ ಹೇಳಿಕೆ ಖಂಡಿಸಿ ಸಿಪಿಐ(ಎಂಎಲ್) ಲಿಬರೇಶನ್‌ನಿಂದ ಪ್ರತಿಭಟನೆ
ರಾಯಚೂರು : ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಖಂಡಿಸಿ ಸಿಪಿಐ(ಎಂಎಲ್) ಲಿಬರೇಶನ್ನಿಂದ ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ಪ್ರತಿಭಟನೆ ನಡೆಸಲಾಯಿತು.
ಬಳಿಕ ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾ ಕಾರ್ಯದರ್ಶಿ ನಾಗರಾಜ್ ಪೂಜಾರ್ ಮಾತನಾಡಿ, “ಅಂಬೇಡ್ಕರ್ ಹೆಸರು ಹೇಳುವುದು ಈಗ ಶೋಕಿ ಆಗಿಬಿಟ್ಟಿದೆ, ಇಷ್ಟೊಂದು ಬಾರಿ ದೇವರು ಹೆಸರು ಹೇಳಿದ್ದರೆ ಏಳು ಜನ್ಮಗಳವರೆಗೆ ಸ್ವರ್ಗ ಪ್ರಾಪ್ತಿ ಆಗುತ್ತಿತ್ತು” ಎಂದು ರಾಜ್ಯಸಭೆ ಕಲಾಪದಲ್ಲಿ ನಾಲಿಗೆ ಹರಿಬಿಟ್ಟು, ಬಾಬಾ ಸಾಹೇಬರಿಗೆ ಅವಮಾನ ಮಾಡುವ ಮೂಲಕ ರಾಷ್ಟ್ರದ್ರೋಹ ಕೃತ್ಯ ಎಸಗಿದ್ದಾರೆ. ಸಂವಿಧಾನದತ್ತವಾದ ಕೇಂದ್ರದ ಗೃಹಸಚಿವ ಸ್ಥಾನದಲ್ಲಿದ್ದುಕೊಂಡು ಸಂವಿಧಾನ ನಿರ್ಮಾತೃ ಅಂಬೇಡ್ಕರ್ ಅವರ ಬಗ್ಗೆಯೇ ಹೀನಾಯವಾಗಿ ಹೇಳಿಕೆ ನೀಡಿರುವುದು ಬಿಜೆಪಿಯವರಿಗೆ ಸಂವಿಧಾನದ ಬಗ್ಗೆ ಇರುವ ಸಿಟ್ಟನ್ನು ಹೊರಹಾಕಿದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆರ್ಎಸ್ಎಸ್ನ ಕೂಸಾದ ಬಿಜೆಪಿಯು ದೇಶದ ಜನರ ಮೇಲೆ ಮನುವಾದ ಹೇರಲು ಹೊರಟಿದೆ. ಅದರ ಭಾಗವಾಗಿ ಗೃಹ ಸಚಿವ ಅಮಿತ್ ಶಾ ಮಾತನಾಡಿದ್ದಾರೆ. ಈ ಹೇಳಿಕೆ ಖಂಡನಾರ್ಹವಾಗಿದ್ದು, ಈ ಕೂಡಲೇ ಗೃಹ ಸಚಿವ ಅಮಿತ್ ಶಾ ಕ್ಷಮೆಯಾಚಿಸಿ ಸಚಿವ ಸ್ಥಾನದಿಂದ ಕೆಳಗಿಳಿಯಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಬಸವರಾಜ ಅಕ್ಕರಕಿ, ಬಸವರಾಜ ಕೊಂಡೆ, ಬಸವರಾಜ ಬೆಳಗುರ್ಕಿ, ಶ್ರೀನಿವಾಸ ಬುಕ್ಕನಹಟ್ಟಿ, ರಾಘವೇಂದ್ರ ಉಪ್ಪಳ, ಹುಲುಗಪ್ಪ ಹುಲುಗುಂಚಿ, ಶೇಕ್ಷಾವಲಿ, ಮಂಜುನಾಥ, ಹನುಮಂತ ಬೂದಿವಾಳಕ್ಯಾಂಪ್, ಕಂಠೆಪ್ಪ ರೈತನಗರಕ್ಯಾಂಪ್, ಮಲ್ಲಿಕಾರ್ಜುನ ರೈತನಗರ ಸೇರಿದಂತೆ ಇನ್ನಿತರರು ಇದ್ದರು.