ರಾಯಚೂರು | ತೆಲಂಗಾಣ ರಾಜ್ಯಕ್ಕೆ ಭತ್ತ ಸಾಗಾಣಿಕೆ ನಿರ್ಬಂಧಕ್ಕೆ ವಿರೋಧ; ರೈತರಿಂದ ರಸ್ತೆ ತಡೆದು ಪ್ರತಿಭಟನೆ

Update: 2024-12-19 09:19 GMT

ರಾಯಚೂರು: ಕರ್ನಾಟಕ ರಾಜ್ಯದಿಂದ ತೆಲಂಗಾಣ ರಾಜ್ಯಕ್ಕೆ ಭತ್ತ ಸಾಗಾಣಿಕೆ ನಿರ್ಬಂಧಿಸಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ, ಜಿಲ್ಲಾ ಘಟಕದ ಪದಾಧಿಕಾರಿಗಳು ಗುರುವಾರ ತಾಲ್ಲೂಕಿನ ಕೃಷ್ಣ ಮೇಲ್ಸೇತುವೆ(ಬ್ರಿಜ್) ಬಳಿ ರಸ್ತೆ ತಡೆ ಪ್ರತಿಭಟನೆ ನಡೆಸಿದರು.

ರಾಯಚೂರು ಹಾಗೂ ಯಾದಗಿರಿ ಜಿಲ್ಲೆಯಿಂದ ಭತ್ತದ ವ್ಯಾಪಾರಿಗಳು ತೆಲಂಗಾಣ ರಾಜ್ಯಕ್ಕೆ ಹೋಗುವಾಗ ಶಕ್ತಿನಗರ ಚೆಕ್‌ಪೋಸ್ಟ್ ನಲ್ಲಿ ಹಾಗೂ ಯಾದಗಿರಿ ಜಿಲ್ಲೆಯ ಜಲಾಲ್‌ಪುರ ಚೆಕ್ ಪೋಸ್ಟ್ ನಲ್ಲಿ ಭತ್ತದ ಲಾರಿಗಳನ್ನು ತಡೆದು ನಿಲ್ಲಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.

ಬೆಳಿಗ್ಗೆಯೇ ರೈತರು ರಸ್ತೆ ತಡೆ ಮಾಡಿದ್ದರಿಂದ ರಸ್ತೆ ಸಂಚಾರ ವ್ಯತ್ಯಯವಾಯಿತು. 50ಕ್ಕೂ ಹೆಚ್ಚು ತೆಲಂಗಾಣದ ಭತ್ತದ ವಾಹನಗಳನ್ನು ತಡೆದು ವಾಪಸ್ ಕಳಿಸಿದರು. ಪ್ರತಿಭಟನೆಯ ಮಾಹಿತಿ ಪಡೆದು ರಾಯಚೂರು ಎಪಿಎಂಸಿ ಕಾರ್ಯದರ್ಶಿ ಆದೆಪ್ಪಗೌಡ ಸ್ಥಳಕ್ಕೆ ಆಗಮಿಸಿ, ಸಮಸ್ಯೆಯ ಕುರಿತು ತೆಲಂಗಾಣ ಸರ್ಕಾರದ ಜೊತೆ ಮಾತನಾಡಿ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ರೈತರು ಪ್ರತಿಭಟನೆ ಹಿಂಪಡೆದರು.

ಪ್ರತಿದಿನ ತೆಲಂಗಾಣ ರಾಜ್ಯದಿಂದ ರಾಯಚೂರು ಮಾರುಕಟ್ಟೆಗೆ 30ರಿಂದ 40 ಸಾವಿರ ಟನ್ ಭತ್ತ ಯಾವುದೇ ನಿರ್ಬಂಧವಿಲ್ಲದೆ ಆಮದಾಗುತ್ತಿವೆ. ಇದರಿಂದ ಸ್ಥಳೀಯ ಮಾರುಕಟ್ಟೆಯ ಭತ್ತದ ದರ ಕಡಿಮೆಯಾಗಿ ರೈತರಿಗೆ ನಷ್ಟವಾಗುತ್ತಿದೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಚಾಮರಸ ಮಾಲಿ ಪಾಟೀಲ ಸಮಸ್ಯೆ ವಿವರಿಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪ್ರಭಾಕರ ಪಾಟೀಲ, ಕಾರ್ಯಾಧ್ಯಕ್ಷ ಬಸವರಾಜ ಪಾಟೀಲ, ಪದಾಧಿಕಾರಿಗಳಾದ ಮಲ್ಲಣ್ಣ ಗೌಡೂರು, ಮಲ್ಲಿಕಾರ್ಜುನರಾವ್, ರೈತ ಮುಖಂಡರು, ವ್ಯಾಪಾರಿ ವೆಂಕಟೇಶ ಉಪಸ್ಥಿತರಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News