ರಾಯಚೂರು | ನಿಯಮ ಮೀರಿ 94 ಜೆಸ್ಕಾಂ ನೌಕರರ ಪದೋನ್ನತಿ ರದ್ದು: ಮೂಲ ಹುದ್ದೆಗೆ ಹಾಜರಾಗಲು ಸೂಚನೆ
ರಾಯಚೂರು : ಜೆಸ್ಕಾಂನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಾಪಕ ಓದುಗ, ಮೇಲ್ವಿಚಾರಕ, ಆಪರೇಟರ್, ಉಗ್ರಾಣ ಪಾಲಕ ಹುದ್ದೆಗಳಿಗೆ ಸ್ವತಂತ್ರ ಪ್ರಭಾರ ನೀಡಿ ಮುಂಬಡ್ತಿ ನೀಡಿದ್ದ 94 ಜನ ನೌಕರರ ಪದೋನ್ನತಿ ಆದೇಶವನ್ನು ಕಲಬುರಗಿ ಹೈಕೋರ್ಟ್ ರದ್ದುಗೊಳಿಸಿದ್ದರಿಂದ ಜೆಸ್ಕಾಂ ಸ್ವ ಹುದ್ದೆಗಳಿಗೆ ಮರಳುವಂತೆ ಆದೇಶ ನೀಡಿದೆ.
2020 ಎಪ್ರಿಲ್ 29 ರಂದು ಕಲಬುರಗಿ ವಿದ್ಯುತ್ ಸರಬರಾಜು ಕಂಪನಿಯಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ನೌಕರರ ಮುಂಬಡ್ತಿ ನೀಡಲು ಆದೇಶಿಸಲಾಗಿತ್ತು. ಜೆಸ್ಕಾಂ ವ್ಯವಸ್ಥಾಪಕರು 2022 ರಂದು 94 ಜನರಿಗೆ ಸ್ವತಂತ್ರ ಪ್ರಭಾರ ನೀಡಿರುವ ಆದೇಶವನ್ನು ಹಿಂಪಡೆಯುವಂತೆ ಸೂಚಿಸಿದ್ದರೂ ಹಿಂಪಡೆದಿರಲಿಲ್ಲ. ನಿಯಮ ಮೀರಿ ಮುಂಬಡ್ತಿ ನೀಡಿರುವುದನ್ನು ಪ್ರಶ್ನಿಸಿ ಗುರುರಾಜ ಮತ್ತು ಶರಣಬಸಯ್ಯ ಎಂಬುವವರು ಪ್ರತ್ಯೇಕವಾಗಿ ಕಲಬುರಗಿ ಸಂಚಾರಿ ಪೀಠದಲ್ಲಿ ದಾವೆ ಹೂಡಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಕಳೆದ ಸಪ್ಟೆಂಬರ್ 10 ರಂದು ಅಂತಿಮ ಆದೇಶ ನೀಡಿ ಮುಂಬಡ್ತಿ ರದ್ದುಗೊಳಿಸಿ ಆದೇಶಿಸಿತ್ತು.
ಕಳೆದ ನಾಲ್ಕು ವರ್ಷಗಳಿಂದ ಲೈನ್ ಮ್ಯಾಕನಿಕ್ ದರ್ಜೆ-2 ಹಾಗೂ ಮಾರ್ಗದಾಳು ಹುದ್ದೆಯಿಂದ ಮಾಪಕ ಓದುಗ, ಮೇಲ್ವಿಚಾರಕ, ಆಪರೇಟ್, ಸಹಾಯಕ ಉಗ್ರಾಣ ಪಾಲಕ ಹುದ್ದೆಗಳಿಗೆ ಸ್ವತಂತ್ರ ಪ್ರಭಾರ ನೀಡಿ ಪದೋನ್ನತಿ ನೀಡಿರುವುದು ರದ್ದುಗೊಂಡಿದೆ. ಹೈಕೋರ್ಟ್ ಆದೇಶದ ಹಿನ್ನಲೆಯಲ್ಲಿ ಜೆಸ್ಕಾಂ ಅಧೀಕ್ಷಕ ಅಭಿಯಂತರರು ಪದೋನ್ನತಿ ಹುದ್ದೆಯಿಂದ ಮೂಲ ಹುದ್ದೆಗಳಿಗೆ ಹಾಜರಾಗುವಂತೆ ರಾಯಚೂರು ಗ್ರಾಮೀಣ, ರಾಯಚೂರು, ಸಿಂಧನೂರು, ಲಿಂಗಸೂಗೂರು ಕಾರ್ಯಪಾಲಕ ಅಭಿಯಂತರರಿಗೆ ಸೂಚಿಸಲಾಗಿದೆ.