ರಾಯಚೂರು | ಪೇಜಾವರ ಶ್ರೀ ಸ್ವಾಮೀಜಿ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲು ಒತ್ತಾಯ
ರಾಯಚೂರು : ಪೇಜಾವರ ಮಠದ ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿಗಳು ತಮ್ಮನ್ನು ಗೌರವಿಸದ ಸಂವಿಧಾನ ಬೇಕು ಎಂದು ಹೇಳುವ ಮೂಲಕ ಸಂವಿಧಾನ ವಿರೋಧಿ ಹೇಳಿಕೆಯನ್ನು ನೀಡಿದ್ದು ಕೂಡಲೇ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಬಹುಜನ ಸಮಾಜ ಪಕ್ಷದ ಜಿಲ್ಲಾ ಉಸ್ತುವಾರಿ ಎಂ.ಆರ್.ಭೇರಿ ಆಗ್ರಹಿಸಿದ್ದಾರೆ.
ರವಿವಾರ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಒಡನಾಟ ಸಮಿತಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪೇಜಾವರ ಶ್ರೀಗಳು ತಮ್ಮನ್ನು ಗೌರವಿಸುವ ಸಂವಿಧಾನ ಬೇಕು ಎಂದು ಹೇಳಿದ್ದಾರೆ. ಸಂವಿಧಾನದಲ್ಲಿರುವ ಲೋಪವಾದರೂ ಏನು ಎಂದು ಹೇಳಬೇಕಿತ್ತು. ಶ್ರೇಣಿಕೃತ ಸಮಾಜವನ್ನು ಆರಾಧಿಸುತ್ತಿರುವ ಪೇಜಾವರ ಶ್ರೀಗಳು ಸಮ ಸಮಾಜದ ಸಂವಿಧಾನವನ್ನು ಒಪ್ಪುತ್ತಿಲ್ಲ ಎಂಬದು ಸ್ಪಷ್ಟ. ತಮ್ಮನ್ನು ಗೌರವಿಸುವ ಸಂವಿಧಾನವೇ ಬೇಕಿದ್ದರೆ ಪ್ರತ್ಯೇಕ ದೇಶವನ್ನು ಕಟ್ಟಿಕೊಂಡು ರೂಪಿಸಲಿ. ಹೊರತು ಸಂವಿಧಾನ ಅಗೌರವಿಸುವ ಹೇಳಿಕೆ ನೀಡಿ ಪ್ರಚೋದಿಸುವ ಮಾತುಗಳನ್ನು ಆಡಬಾರದು ಎಂದರು.
ರಾಷ್ಟಧ್ವಜವನ್ನು ಗೌರವಿಸದ ಇರುವ ಆರೆಸ್ಸೆಸ್ ಸಂಘಟನೆ ಇಂದಿಗೂ ಸಂವಿಧಾನವನ್ನು ಗೌರವಿಸುತ್ತಿಲ್ಲ. ರಾಷ್ಟಧ್ವಜ, ರಾಷ್ಟಲಾಂಛನ, ರಾಷ್ಟಗೀತೆಯನ್ನು ಗೌರವಿಸುವುದು ಸಂವಿಧಾನ ಒಪ್ಪಿರುವ ಎಲ್ಲರ ಕರ್ತವ್ಯ. ಆದ ಕಾರಣ ಸಂವಿಧಾನ ವಿರೋಧಿ ಹೇಳಿಕೆಯನ್ನು ರಾಷ್ಟದ್ರೋಹಿ ಎಂದು ಪರಿಗಣಿಸಬೇಕೆಂದು ಆಗ್ರಹಿಸಿದರು.
ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಬಸವರಾಜ ಭಂಡಾರಿ ಮಾತನಾಡಿ, ಸಂವಿಧಾನ ವಿರೋಧಿಸುವುದು ಮನುವಾದಿಗಳ ಮನಸ್ಥಿತಿಯಲ್ಲಿರುವುದರಿಂದ ನಡೆಯುತ್ತಿದೆ. ಸಂವಿಧಾನದ ಮೇಲೆ ನಂಬಿಕೆ ಇಲ್ಲದೇ ಇದ್ದರೆ ನಿತ್ಯಾನಂದ ಸ್ವಾಮಿಯಂತೆ ಪ್ರತ್ಯೇಕ ದೇಶ ಕಟ್ಟಿಕೊಳ್ಳಬಹುದು. ಸಂವಿಧಾನಕ್ಕ ಅಗೌರವಿಸುವುದು ದೇಶದ್ರೋಹ ಕೆಲಸವಾಗಿದೆ ಎಂದರು.
ಈ ಸಂದರ್ಭದಲ್ಲಿ ಬಿಎಸ್‌ಪಿ ಜಿಲ್ಲಾಧ್ಯಕ್ಷ ಜೈ.ಭೀಮ, ರಾಜ್ಯ ಕಾರ್ಯದರ್ಶಿ ಹನುಮಂತಪ್ಪ ಅತ್ತನೂರು, ಬುಡ್ಡಪ್ಪ.ಕೆ, ಸೈಯದ್ ಅಬ್ದುಲ್ ಉಪಸ್ಥಿತರಿದ್ದರು.