ರಾಯಚೂರು: ಬಾಲಕಿ ಮೇಲೆ ಬೀದಿ ನಾಯಿಗಳ ದಾಳಿ; ಗಂಭೀರ ಗಾಯ
Update: 2025-03-29 11:15 IST

ಸಾಂದರ್ಭಿಕ ಚಿತ್ರ PC: shutterstock
ರಾಯಚೂರು: ಬೀದಿ ನಾಯಿಗಳ ದಂಡು ಬಾಲಕಿ ಮೇಲೆ ದಾಳಿಮಾಡಿದ್ದು ಗಂಭೀರವಾಗಿ ಗಾಯಗೊಂಡ ಬಾಲಕಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ತಾಲೂಕಿನ ಮರ್ಚೆಟಹಾಳ ಗ್ರಾಮದಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ.
ಗಾಯಗೊಂಡ ಬಾಲಕಿಯನ್ನು ಚೈತ್ರ (8) ಎಂದು ಗುರುತಿಸಲಾಗಿದೆ. ಬಾಲಕಿ ಇಂದು ಬೆಳಿಗ್ಗೆ ಸುಮಾರು 9.30 ರ ಹೊತ್ತಿಗೆ ತಮ್ಮ ಮನೆಯ ಬಳಿಯ ಬಯಲಿಗೆ ಬಹಿರ್ದೆಸೆಗೆ ಹೋಗುವಾಗ 15 ಬೀದಿನಾಯಿಗಳ ಹಿಂಡು ದಾಳಿ ಮಾಡಿವೆ ಎನ್ನಲಾಗಿದೆ.
ಘಟನೆಯಲ್ಲಿ ಬಾಲಕಿಯ ಕಿವಿ, ಕತ್ತು ಹಾಗೂ ಬೆನ್ನಿಗೆ ಗಂಭೀರವಾಗಿ ಗಾಯಗಳಾಗಿದ್ದು, ಬಾಲಕಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಪಂಚಾಯಿತಿ ಅಧಿಕಾರಿಗಳು ಬೀದಿ ನಾಯಿಗಳ ಕಾರ್ಯಾಚರಣೆ ಮಾಡದೇ ನಿರ್ಲಕ್ಷ್ಯ ವಹಿಸಿದ್ದರಿಂದ ಈ ಘಟನೆ ಸಂಭವಿಸಿದೆ. ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಾಲಕಿಯ ಪೋಷಕರು, ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದರು.