ರಾಯಚೂರು | ವಿದ್ಯುತ್ ದರ ಏರಿಕೆ ವಿರೋಧಿಸಿ ವಿದ್ಯುತ್ ಮೀಟರ್ ಹಿಡಿದು ಪ್ರತಿಭಟನೆ

Update: 2025-03-29 13:39 IST
ರಾಯಚೂರು | ವಿದ್ಯುತ್ ದರ ಏರಿಕೆ ವಿರೋಧಿಸಿ ವಿದ್ಯುತ್ ಮೀಟರ್ ಹಿಡಿದು ಪ್ರತಿಭಟನೆ
  • whatsapp icon

ರಾಯಚೂರು : ವಿದ್ಯುತ್ ದರ ಏರಿಕೆ ವಿರೋಧಿಸಿ ಸಿಪಿಐಎಂಎಲ್ ಲಿಬರೇಶನ್ ಪಕ್ಷದ ವತಿಯಿಂದ ನಗರದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ವಿದ್ಯುತ್ ಮೀಟರ್ ಹಿಡಿದು ಪ್ರತಿಭಟನೆ ನಡೆಸಲಾಯಿತು.

ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗೆ ಹಣ ಹೊಂದಿಸಲು ಸಾಧ್ಯವಾಗದೇ ಸಾಮಾನ್ಯ ಜನರ ಮೇಲೆ ಹೊರೆ ಹಾಕುತ್ತಿದೆ. ಅದರ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ವಿದ್ಯುತ್ ದರವನ್ನು ಪ್ರತಿ ಯೂನಿಟ್‌ಗೆ 36 ಪೈಸೆ ಹೆಚ್ಚಿಸಿದೆ. ಸದ್ಯ ಗೃಹಬಳಕೆ (ಎಲ್‌ಟಿ–1) ವಿದ್ಯುತ್‌ ಸಂಪರ್ಕದಲ್ಲಿ ಪ್ರತಿ ಕೆ.ವಿಗೆ 120 ರೂ. ನಿಗದಿತ ಶುಲ್ಕ ವಿಧಿಸಲಾಗುತ್ತಿತ್ತು. ಇದನ್ನು 145 ರೂ.ಗೆ ಹೆಚ್ಚಿಸಲಾಗಿದೆ. ಈ ಸರ್ಕಾರ ಒಂದು ಕಡೆ ಉಚಿತ ವಿದ್ಯುತ್‌ ನೀಡುವುದಾಗಿ ಘೋಷಿಸಿದೆ. ಇನ್ನೊಂದೆಡೆ ಸರ್ಕಾರದ ಇಲಾಖೆಗಳೇ 6,000 ಕೋಟಿ ರೂ.ನಷ್ಟು ವಿದ್ಯುತ್ ಬಿಲ್‌ ಬಾಕಿ ಉಳಿಸಿಕೊಂಡಿವೆ. ಬೆಲೆ ಏರಿಕೆಯೊಂದನ್ನೇ ಗ್ಯಾರಂಟಿಯಾಗಿ ಕೊಡುತ್ತಿದೆ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಎಲ್ಲ ಶಾಸಕರು ಪಕ್ಷಾತೀತವಾಗಿ ತಮ್ಮ ಸಂಬಳ ಮತ್ತು ಭತ್ಯೆ ಹೆಚ್ಚಿಸಿಕೊಂಡಿದ್ದಾರೆ. ರಾಜ್ಯದ ವಿದ್ಯಾರ್ಥಿ, ಯುವಜನರು, ಸೇರಿದಂತೆ ರೈತ ಕಾರ್ಮಿಕರಾದಿಯಾಗಿ ಎಲ್ಲರೂ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಸರ್ಕಾರದ ಈ ನಡೆಯು ಪ್ರಜಾತಂತ್ರವನ್ನು ನಗೆಪಾಟಗೀಡು ಮಾಡಿದೆ ಎಂದು ಪ್ರತಿಭಟನಾನಿರತರು ಅಸಮಾಧಾನ ಹೊರಹಾಕಿದರು.

ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಮುಖಂಡರಾದ ಅಝೀಝ್ ಜಾಗೀರ್ದಾರ್, ಆಂಜನೇಯ ಕುರುಬರ ದೊಡ್ಡಿ, ರವಿಚಂದ್ರ, ಹನೀಫ್ ಅಬಕಾರಿ, ಜಿಲಾನಿ ಯರಗೇರಾ, ಮುಹಮ್ಮದ್ ಶಾಲಂ, ಮಹೇಂದ್ರ, ಆನಂದ್ ಕುಮಾರ್ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News