ರಾಯಚೂರು | ಜಿಲ್ಲೆಯಲ್ಲಿ ಅಕ್ರಮ ಮರಳುಗಣಿಗಾರಿಕೆ ದಂಧೆಗೆ ಜನಪ್ರತಿನಿಧಿಗಳ ಬೆಂಬಲವಿದೆ : ರಾಘವೇಂದ್ರ ಕುಷ್ಟಗಿ ಆರೋಪ

Update: 2025-03-29 20:32 IST
Photo of Press meet
  • whatsapp icon

ರಾಯಚೂರು : ಜಿಲ್ಲೆಯಲ್ಲಿ ಅಕ್ರಮ ಮರಳುಗಣಿಗಾರಿಕೆ ಎಗ್ಗಿಲ್ಲದೇ‌ ನಡೆಯುತ್ತಿದ್ದು, ಇದರಲ್ಲಿ‌ ಜನಪ್ರತಿನಿಧಿಗಳು ಶಾಮೀಲಾಗಿದ್ದಾರೆ‌ ಎಂದು ಜನಸಂಗ್ರಾಮ ಪರಿಷತ್ ಸಂಸ್ಥಾಪಕ ಅಧ್ಯಕ್ಷ ರಾಘವೇಂದ್ರ ಕುಷ್ಟಗಿ ಆರೋಪಿಸಿದ್ದಾರೆ.

ಅವರು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ಕೃಷ್ಣಾ ಹಾಗೂ ತುಂಗಭದ್ರಾ ನದಿಗಳಲ್ಲಿ ಕಳೆದ 20 ವರ್ಷಗಳಲ್ಲಿ ಸುಮಾರು 10 ಸಾವಿರ ಕೋಟಿ ರೂ. ಗಳ ಅಕ್ರಮವಾಗಿ ಮರಳು ಸಾಗಿಸಿರುವ ಬಗ್ಗೆ ತಜ್ಞರು ಮಾಹಿತಿ ನೀಡಿದ್ದಾರೆ. 15 ಟನ್ ಮರಳು ಸಾಗಾಣಿಕೆಯ ರಾಯಲ್ಟಿ ಪಾವತಿಸಿ ಪರವಾನಗಿ ಪಡೆದುಕೊಂಡು ಸುಮಾರು 40ರಿಂದ 50 ಮೆಟ್ರಿಕ್ ಟನ್ ಮರಳು ಸಾಗಿಸುತ್ತಾರೆ. ಇದರಲ್ಲಿ ರಾಜಕಾರಣಿಗಳು, ಜನಪ್ರತಿನಿಧಿಗಳು ಶಾಮೀಲಾಗಿದ್ದಾರೆ ಎಂದು ದೂರಿದರು.

ಜಿಲ್ಲೆಯ ಕೃಷ್ಣಾ ಹಾಗೂ ತುಂಗಭದ್ರಾ ನದಿಗಳಲ್ಲಿ ಗುರುತಿಸಿರುವ 65 ಬ್ಲಾಕ್‍ಗಳನ್ನು ಐದು ವರ್ಷಗಳ ಅವಧಿಗೆ ಗುತ್ತಿಗೆ ನೀಡಲು ಜಿಲ್ಲಾ ಮರಳು ಸಮಿತಿಯ ನಿರ್ಣಯ ತೆಗೆದುಕೊಂಡಿದ್ದು, ಕೂಡಲೇ ಮರು ಪರಿಶೀಲನೆ ಮಾಡಬೇಕು ಹಾಗೂ ಟೆಂಡರ್ ಪ್ರಕ್ರಿಯೆಯನ್ನು ಮುಂದೂಡಬೇಕು. ಆರ್ ಟಿಒ, ಪೊಲೀಸ್ ಅಧಿಕಾರಿಗಳು ಅಕ್ರಮ ಮರಳು ಗಣಿಗಾರಿಕೆಯ ಫಲಾನುಭವಿಗಳಾಗಿದ್ದಾರೆ. ಅಕ್ರಮ ಮರಳು ನಿಯಂತ್ರಿಸುವ ನಿಟ್ಟಿನಲ್ಲಿ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ನದಿಗಳಲ್ಲಿ ಅಕ್ರಮ ಮರಳು ಸಾಗಿಸುವವರು ಉತ್ತಮ ರಸ್ತೆಯನ್ನು ನಿರ್ಮಾಣ ಮಾಡಿದ್ದಾರೆ. ಮರಳು ಸಾಗಿಸುವ ಲಾರಿಗಳಿಗೆ ಜಿಪಿಎಸ್ ಅಳವಡಿಸಿ ಹೆಚ್ಚಿನ ನಿಗಾವಹಿಸಬೇಕು. ಆದರೆ, ಆ ಕಾರ್ಯ ನಡೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯ ಕೃಷ್ಣಾ ಹಾಗೂ ತುಂಗಭದ್ರಾ ನದಿಯಲ್ಲಿ ಮರಳು ಗುತ್ತಿಗೆ ಪಡೆದವರು ಹುಬ್ಬಳ್ಳಿ ಸೇರಿದಂತೆ ದೂರದ ಜಿಲ್ಲೆಯವರಾಗಿದ್ದಾರೆ. ಆದರೆ, ಮರಳು ಗಣಿಗಾರಿಕೆಯನ್ನು ಜಿಲ್ಲೆಯ ಜನಪ್ರತಿನಿಧಿಗಳ ಬೆಂಬಲಿಗರಿಗೆ ಹಾಗೂ ಹಿಂಬಾಲಕರಿಗೆ ವಹಿಸಿಕೊಡಲಾಗಿದೆ ಎಂದು ದೂರಿದರು.

ಕೂಡಲೇ ಜಿಲ್ಲೆಯ ಕೃಷ್ಣಾ ಹಾಗೂ ತುಂಗಭದ್ರಾ ನದಿಗಳಲ್ಲಿ 65 ಬ್ಲಾಕ್‍ಗಳ ಐದು ವರ್ಷಗಳ ಅವಧಿಯ ಮರಳು ಗುತ್ತಿಗೆ ಟೆಂಡರ್ ಪ್ರಕ್ರಿಯೆಯನ್ನು ಕೂಡಲೇ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಪರಿಷತ್ತಿನ ಸದಸ್ಯರಾದ ಭೀಮರಾಯ ನಾಯಕ ಜರದ ಬಂಡಿ, ಖಾಜಾ ಅಸ್ಲಾಂ ಅಹಮ್ಮದ್, ಜಾನ್ ವೆಸ್ಲಿ ,ಪರಪ್ಪ ನಾಗೋಲಿ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News