ವಿರೋಧ ಪಕ್ಷದ ನಾಯಕರ ಮಾತನಾಡುವ ಮುಕ್ತ ಅವಕಾಶಕ್ಕೆ ನಿರಾಕರಣೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ: ಜಿ.ಕುಮಾರ ನಾಯಕ್

ಜಿ.ಕುಮಾರ ನಾಯಕ್
ರಾಯಚೂರು, ಮಾ 31-ಸಂಸತ್ತಿನ ಕಲಾಪದಲ್ಲಿ ದೇಶದ ಜನರ ಸಮಸ್ಯೆಗಳ ಬಗ್ಗೆ ವಿರೋಧ ಪಕ್ಷ ನಾಯಕರು ಮಾತನಾಡುವ ಅವಕಾಶ ನಿರಾಕರಿಸುವುದು ಇದು ಪ್ರಜಾಪ್ರಭುತ್ವ ವ್ಯವಸ್ಥೆ ಮಾರಕ ಎಂದು ಸಂಸದ ಜಿ.ಕುಮಾರ ನಾಯಕ ಅವರು ಕಳವಳ ವ್ಯಕ್ತಪಡಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕರು ಎದ್ದು ನಿಂತು ಮಾತನಾಡುವಾಗ ಸ್ಪೀಕರ್ ಅವರು ಅನುಮತಿ ನಿರಾಕರಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆ ಪೂರಕವಲ್ಲ. ಸ್ಪೀಕರ್ ಓಂ ಬಿರ್ಲಾ ಅವರು ಆಡಳಿತ ಪಕ್ಷಕ್ಕೆ ಮಾತ್ರ ಸೀಮಿತವಾಗಬಾರದು. ಎಲ್ಲ ಪಕ್ಷದ ನಾಯಕರಿಗೆ ಮಾತನಾಡುವ ಮುಕ್ತ ಅವಕಾಶ ಕಲ್ಪಿಸಬೇಕು. ಇದು ಪ್ರಜಾಪ್ರಭುತ್ವ ದೇಶ, ಇಲ್ಲಿ ಆಡಳಿತ ಪಕ್ಷದ ನಾಯಕರಿಗೆ ಮಾತ್ರ ಅವಕಾಶ ನೀಡಿದರೆ ದೇಶದ ಜನರ ಸಮಸ್ಯೆ ಚರ್ಚೆ ಮಾಡುವುದು ಹೇಗೆ ಎಂದು ಪ್ರಶ್ನಿಸಿದರು.
ಕಲಾಪ ಪ್ರಜಾಪ್ರಭುತ್ವದ ಹೆಬ್ಬಾಗಿಲು. ಇಲ್ಲಿ ಜನರ ಸಮಸ್ಯೆ ಬಗ್ಗೆ ಮಾತನಾಡಲು ಅವಕಾಶ ಕಲ್ಪಿಸಬೇಕು. ಆದರೆ ಸ್ಪೀಕರ್ ಓಂ ಬಿರ್ಲಾ ಅವರು ನಿರಾಕರಿಸಿದ್ದಾರೆ. ಕೇಂದ್ರ ಸರ್ಕಾರವು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ. 2019ರಿಂದ ಲೋಕಸಭೆಯ ಉಪ ಸಭಾಧ್ಯಕ್ಷರ ಹುದ್ದೆ ತುಂಬಿಲ್ಲ. ಸಂವಿಧಾನದ 93ನೇ ವಿಧಿ ಉಲ್ಲಂಘಿಸಲಾಗಿದೆ ಎಂದರು.
ಸಂಸತ್ತಿನ ಕೆಳಮನೆ ಸಾಂವಿಧಾನಿಕವಾಗಿ ಪ್ರಜಾಪ್ರಭುತ್ವದ ತತ್ವದಲ್ಲಿ ನಡೆಯಬೇಕು. ಸಂಸತ್ತು ಪ್ರಜಾಸತ್ತಾತ್ಮಕವಾಗಿ ನಡೆಯಬೇಕಾದರೆ, ಎಲ್ಲ ಜನಪ್ರತಿನಿಧಿಗಳಿಗೂ ಪಕ್ಷ ಭೇದವಿಲ್ಲದೆ ಸಮಾನ ಅವಕಾಶ ದೊರಕಬೇಕು. ಸದಸ್ಯರು ಸಾಂವಿಧಾನಿಕ ಕರ್ತವ್ಯ ನಿಭಾಯಿಸುವಂತಹ ವಾತಾವರಣ ಇರಬೇಕು. ಆದರೆ, ಇತ್ತೀಚಿನ ಕೆಲವು ಪ್ರವೃತ್ತಿಗಳು ಈ ವ್ಯವಸ್ಥೆಯ ಪಾವಿತ್ರ್ಯತೆಗೆ ಧಕ್ಕೆ ತಂದಿವೆ. ಪ್ರಜಾಪ್ರಭುತ್ವದ ಮೂಲ ತತ್ವಗಳನ್ನೇ ಅಪಹಾಸ್ಯ ಮಾಡುತ್ತಿವೆ.ಸದನದಲ್ಲಿ ಪ್ರತಿಪಕ್ಷದ ಸದಸ್ಯರಿಗೆ ಮಾತನಾಡಲು ಸೂಕ್ತ ಅವಕಾಶ ಕಲ್ಪಿಸದೆ, ಅವರ ಹಕ್ಕನ್ನೇ ಮೊಟಕುಗೊಳಿಸಲಾಗುತ್ತಿದೆ. ಇದು ಸಂಸದೀಯ ಕಲಾಪದ ಚರ್ಚೆಯ ಸ್ವರೂಪವನ್ನು ದುರ್ಬಲಗೊಳಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.ಪ್ರತಿಪಕ್ಷಗಳ ಸಂಸದರು ಪ್ರಮುಖ ವಿಚಾರಗಳನ್ನು ಪ್ರಸ್ತಾಪಿಸಿದಾಗ, ಅವರ ಮಾತುಗಳು ಕೇಳದ ರೀತಿಯಲ್ಲಿ ಮೈಕ್ರೋಫೋನ್ ಆಫ್ ಮಾಡಲಾಗುತ್ತಿದೆ. ಪ್ರತಿಪಕ್ಷ ಸದಸ್ಯರ ಧ್ವನಿಯನ್ನೇ ದಮನ ಮಾಡುವ ಅಪಾಯಕಾರಿ ಪ್ರವೃತ್ತಿ ಬೆಳೆಯುತ್ತಿದೆ. ಆದರೆ, ಆಡಳಿತ ಪಕ್ಷದ ಸದಸ್ಯರಿಗೆ ಮುಕ್ತ ಅವಕಾಶ ನೀಡಲಾಗುತ್ತಿದೆ. ಈ ತಾರತಮ್ಯ ಪ್ರವೃತ್ತಿ ಪ್ರಜಾಪ್ರಭುತ್ವಕ್ಕೆ ಮಾರಕ ಎಂದರು.
ವಿರೋಧ ಪಕ್ಷದ ನಾಯಕನಿಗೆ ಮಾತನಾಡಲು ಅವಕಾಶ ನೀಡಬೇಕು. ಆದರೆ ನಮ್ಮ ಪಕ್ಷದ ಎಲ್ಲ ಸಂಸದರನ್ನು ತಡೆಯಲಾಗುತ್ತಿದೆ. ನಾವು ಸುಮ್ಮನೇ ಕುಳಿತುಕೊಳ್ಳಬೇಕಾಯಿತು. ಇಲ್ಲಿ ಪ್ರಜಾಪ್ರಭುತ್ವಕ್ಕೆ ಅವಕಾಶವೇ ಇಲ್ಲ. ಮಹಾಕುಂಭಮೇಳ, ನಿರುದ್ಯೋಗದ ಬಗ್ಗೆ ನಾನು ಮಾತನಾಡಲು ಅವಕಾಶ ನೀಡುತ್ತಿಲ್ಲ. ವಿರೋಧ ಪಕ್ಷದ ನಾಯಕರ ಧ್ವನಿ ಪದೇ ಪದೇ ಹತ್ತಿಕ್ಕಲಾಗುತ್ತಿದೆ. ಈ ಹಿಂದಿನ ಸಂಸದೀಯ ಪದ್ಧತಿಗಳಿಗಿಂತ ಭಿನ್ನವಾಗಿದ್ದು, ಸಭೆಯಲ್ಲಿ ಸಮರ್ಪಕ ಚರ್ಚೆಗೆ ಅವಕಾಶ ನೀಡುವುದು ತೀರಾ ಕಡಿಮೆ ಆಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸದನದ ಘನತೆಯನ್ನು ಎತ್ತಿಹಿಡಿಯಲು ಸದಸ್ಯರು ಪಾಲಿಸಬೇಕಾದ ಕಾರ್ಯವಿಧಾನದ ನಿಯಮಗಳನ್ನು ಲೋಕಸಭೆ ವಿರೋಧ ಪಕ್ಷದ ನಾಯಕರು ಪಾಲಿಸಬೇಕು ಎಂದು ಹೇಳುವ ಸ್ಪೀಕರ್ ಓಂ ಬಿರ್ಲಾ ಅವರು ವಿರೋಧ ನಾಯಕರಿಗೆ ಮಾತನಾಡಲು ನಿರಾಕರಿಸುವುದೇಕೆ? ವಿರೋಧ ಪಕ್ಷದ ಸಂಸದರು ಪ್ರಶ್ನೆ ಎತ್ತಿದಾಗಲೆಲ್ಲಾ ಅವರ ಮೈಕ್ರೋಫೋನ್ ಆಫ್ ಮಾಡಲಾಗುತ್ತಿದೆ. ಆದರೆ ಆಡಳಿತ ಪಕ್ಷದ ಸದಸ್ಯರಿಗೆ ಮುಕ್ತ ಅವಕಾಶ ನೀಡಲಾಗುತ್ತಿದೆ ಇದು ಪ್ರಜಾಪ್ರಭುತ್ವದ ಚರ್ಚೆ ಮತ್ತು ನ್ಯಾಯಸಮ್ಮತತೆ ನೇರವಾಗಿ ಹಾನಿಗೊಳಿಸಲಾಗುತ್ತಿದೆ. ಬಿಜೆಪಿ ಕುತಂತ್ರ ಆಡಳಿತ ಮಾಡುತ್ತಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಸಚಿವ ಎನ್ ಎಸ್ ಬೋಸರಾಜು, ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಇಟಗಿ, ಶಾಸಕ ದದ್ದಲ್, ಜಯಣ್ಣ, ಶಾಂತಪ್ಪ ಅಮರೇಗೌಡ ಹಂಚಿನಾಳ ಸೇರಿದಂತೆ ಉಪಸ್ಥಿತರಿದ್ದರು.