ರಾಯಚೂರು | ಜೀತ ಪದ್ಧತಿಯ ನಿರ್ಮೂಲನೆಗೆ ಕೈ ಜೋಡಿಸಿ : ನ್ಯಾ.ಎಚ್.ಎ.ಸಾತ್ವಿಕ್

Update: 2025-03-27 20:14 IST
ರಾಯಚೂರು | ಜೀತ ಪದ್ಧತಿಯ ನಿರ್ಮೂಲನೆಗೆ ಕೈ ಜೋಡಿಸಿ : ನ್ಯಾ.ಎಚ್.ಎ.ಸಾತ್ವಿಕ್
  • whatsapp icon

ರಾಯಚೂರು : ಪ್ರಪಂಚದ ವಿವಿಧ ದೇಶಗಳಲ್ಲಿ ಕಂಡುಬರುವ ಅನಿಷ್ಠ ಜೀತ ಪದ್ಧತಿಯ ನಿರ್ಮೂಲನೆಗೆ ಸಮಾಜದ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ಗೌರವಾನ್ವಿತ ಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಎಚ್.ಎ.ಸಾತ್ವಿಕ್ ಅವರು ಹೇಳಿದರು.

ಮಾ.27ರ ಗುರುವಾರ ನಗರದ ನೂತನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ ಮತ್ತು ಕಾರ್ಮಿಕ ಇಲಾಖೆ ರಾಯಚೂರು ಇವರ ಸಂಯುಕಾಶ್ರಯದಲ್ಲಿ ಹಮ್ಮಿಕೊಳ್ಳಲಾದ ಜೀತ ಪದ್ದತಿ ನಿರ್ಮೂಲನಾ ದಿನಾಚರಣೆ-2025ರ ಅಂಗವಾಗಿ ಜಿಲ್ಲಾ ಮಟ್ಟದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಮಾಜದಲ್ಲಿನ ಅನೇಕ ಸಮಸ್ಯೆಗಳಲ್ಲಿ ಜೀತಪದ್ಧತಿಯೂ ಒಂದು. ಇದು ಮಾನವೀಯತೆಗೆ ಕಳಂಕ, ಶಾಪವಾಗಿ ಪರಿಣಮಿಸಿದೆ. ಜೀತ ಪದ್ಧತಿ (ರದ್ಧತಿ) ಕಾಯ್ದೆ 1976 ರನ್ವಯ ಕಾರ್ಮಿಕರನ್ನು ಜೀತಕ್ಕೆ ಬಳಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಹೇಳಿದರು.

ನಮ್ಮ ಸಂವಿಧಾನವು ನಾಗರಿಕರಿಗೆ ಗೌರವಯುತ ಜೀವನ ನಡೆಸಲು ಹಕ್ಕು ಮತ್ತು ಕರ್ತವ್ಯಗಳನ್ನು ನೀಡಿದೆ. ಮಾನವನ ಗೌರವಯುತ ಜೀವನಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಜೀತ ಪದ್ಧತಿಯ ನಿಯಂತ್ರಣವನ್ನು ಒಂದು ಸಾಮಾಜಿಕ ಬದ್ಧತೆಯನ್ನಾಗಿ ತೆಗೆದುಕೊಂಡು ಅನಿಷ್ಠ ಪದ್ಧತಿ ನಿರ್ಮೂಲನೆಗೆ ಪ್ರತಿಯೊಬ್ಬರು ಕೈ ಜೋಡಿಸುವ ಅಗತ್ಯವಿದೆ. ಅದಕ್ಕಾಗಿ ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದ್ದು, ಕಾರ್ಯಾಗಾರದ ಸದುಪಯೋಗ ಪಡೆದುಕೊಂಡು ಅಧಿಕಾರಿಗಳು ಜೀತ ಪದ್ಧತಿ ನಿರ್ಮೂಲನೆಗೆ ಶ್ರಮಿಸಬೇಕೆಂದು ಹೇಳಿದರು.

ಜೀತ ಪದ್ಧತಿ ಕಾನೂನಿನ್ವಯ ನಿಷೇಧವಿದೆ. ಈ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅರಿವು ಮೂಡಿಸಬೇಕು. ಜೀತ ಪದ್ಧತಿ ನಿರ್ಮೂಲನೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಅಧಿಕಾರಿಗಳು ಈ ಅನಿಷ್ಠ ಪದ್ಧತಿ ನಿರ್ಮೂಲನೆಗೆ ಸಮನ್ವಯದಿಂದ ಕಾರ್ಯನಿರ್ವಹಿಸಿ ಶ್ರಮಿಸಬೇಕು ಎಂದರು.

ಈ ವೇಳೆ ರಾಯಚೂರು ಡಿವೈಎಸ್ಪಿ ಶಾಂತಮೂರ್ತಿ ಅವರು ಮಾತನಾಡಿ, ಆರ್ಥಿಕವಾಗಿ ಸೋತಾಗ ಜೀತ ಪದ್ಧತಿಯು ಉಲ್ಬಣಗೊಳ್ಳುತ್ತದೆ. ಪೂರ್ವಜರ ಕಾಲದಲ್ಲಿ ಜೀತ ಪದ್ದತಿಯು ಆಳವಾಗಿ ಬೇರೂರಿತ್ತು. ಸ್ವಾತಂತ್ರ‍್ಯ ನಂತರ ಗಣನೀಯವಾಗಿ ಕಡಿಮೆಯಾಗಿದೆ. 14 ವರ್ಷದೊಳಗಿನ ಮಕ್ಕಳನ್ನು ದುಡಿಮೆಗೆ ಬಳಸಿಕೊಳ್ಳುವುದು ಕಾನೂನುಬಾಹಿರ. ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಶಿಕ್ಷಣದಿಂದ ಮಾತ್ರ ಜೀತ ಪದ್ಧತಿ ಸಂಪೂರ್ಣ ನಿರ್ಮೂಲನೆ ಮಾಡಲು ಸಾಧ್ಯ ಎಂದರು.

ಈ ವೇಳೆ ಸಂಪನ್ಮೂಲ ವ್ಯಕ್ತಿಗಳಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪೆನಾಲ್ ವಕೀಲರಾದ ಶಿವಕುಮಾರ್ ಮ್ಯಾಗಳಮನಿ ಅವರು ಮಾತನಾಡಿ, ದೇಶದಲ್ಲಿ ನಾಲ್ಕು ಸಾವಿರಕ್ಕೂ ಅಧಿಕ ಕಾನೂನುಗಳು ಜಾರಿಯಲ್ಲಿವೆ. ಇವುಗಳು ಸಮಾಜವನ್ನು ಸರಿ ದಾರಿಗೆ ತರಲು ಸಹಕಾರಿಯಾಗಿದೆ. ಜೀತ ಪದ್ಧತಿ ವ್ಯವಸ್ಥೆಯು ವಿಶ್ವಕ್ಕೆ ಅಟ್ಟಿಕೊಂಡ ದೊಡ್ಡ ಪಿಡುಗಾಗಿದೆ. ಜೀತ ಪದ್ಧತಿ ನಿರ್ಮೂಲನೆಗಾಗಿ 27 ಕಾಲಂಗಳ ಜೀತಪದ್ಧತಿ ನಿರ್ಮೂಲನೆ ಕಾಯ್ದೆ ಜಾರಿಗೆ ಬಂದಿದೆ. ವ್ಯಕ್ತಿಯನ್ನು ಬಲವಂತವಾಗಿ ದುಡಿಸಿಕೊಳ್ಳಲು ಕಾನೂನಿನಲ್ಲಿ ಅವಕಾಶವಿಲ್ಲ. ಆ ರೀತಿ ಮಾಡಿದ್ದಲ್ಲಿ ಜೀತ ಪದ್ಧತಿಯಾಗುತ್ತದೆ ಎಂದರು.

ಜೀತ ಪದ್ಧತಿ ನಿರ್ಮೂಲನೆಗಾಗಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳ ಒಳಗೊಂಡ ಸಮಿತಿ ರಚನೆ ಮಾಡಿ ಕಾರ್ಯನಿರ್ವಹಣೆ ಮಾಡುತ್ತದೆ. ಜೀತ ಪದ್ಧತಿಯಿಂದ ಬಿಡುಗಡೆಯಾದವರಿಗೆ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ಅಲ್ಲದೆ ನರೇಗಾ ಸೇರಿದಂತೆ ಇತರೆ ಯೋಜನೆಗಳಲ್ಲಿ ಕೆಲಸವನ್ನು ನೀಡಬೇಕೆಂದು ಕಾಯ್ದೆಯು ತಿಳಿಸುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳಾದ ಶಶಿಕಾಂತ್ ಶಿವಪೂರ, ಜಿಲ್ಲಾ ಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕರಾದ ಮಂಜುನಾಥ ರೆಡ್ಡಿ, ಜಿಲ್ಲಾ ಕಾರ್ಮಿಕ ಅಧಿಕಾರಿ ಆರತಿ, ದೇವದುರ್ಗದ ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ, ಸಿಂಧನೂರು ತಹಶೀಲ್ದಾರ್ ಅರುಣ್ ಕುಮಾರ್ ದೇಸಾಯಿ, ಯುವಜನ ಮತ್ತು ಕ್ರೀಡೆ ಇಲಾಖೆಯ ಸಹಾಯಕ ನಿರ್ದೇಶಕರಾದ ವೀರೇಶ ನಾಯಕ, ಸಿಡಾಕ್ ನಿರ್ದೇಶಕರಾದ ಜಿ.ಯು.ಹುಡೇದ್, ಜಿಲ್ಲಾ ಕೈಗಾರಿಕಾ ಅಧಿಕಾರಿಯಾದ ಬಸವರಾಜ ಯರಕಂಚಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ. ಸುರೇಂದ್ರಬಾಬು, ಜಿಲ್ಲಾ ಉದ್ಯೋಗಾಧಿಕಾರಿ ನವೀನ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಚಿದಾನಂದ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಅಶೋಕ, ಕಾರ್ಮಿಕ ನಿರೀಕ್ಷಕರಾದ ಮುಹಮ್ಮದ್ ಉಮರ್ ಘನಿ, ಪ್ರಿಯಾಂಕ ಬಿ., ಶಾಂತಮೂರ್ತಿ, ಮಲ್ಲಪ್ಪ, ವಿಜಯಲಕ್ಷ್ಮೀ ಸೇರಿದಂತೆ ಇತರರು ಇದ್ದರು.

 

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News