ರಾಯಚೂರು | ಆರ್ಟಿಪಿಎಸ್ ಭೂ ಸಂತ್ರಸ್ತರ ಪ್ರತಿಭಟನೆ
ರಾಯಚೂರು : ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ ರಾಯಚೂರು ಬೃಹತ್ ಶಾಖೋತ್ಪನ್ನ ವಿದ್ಯುತ್ಸ್ಥಾವರ (ಆರ್ಟಿಪಿಎಸ್) ಸ್ಥಾಪನೆಗಾಗಿ ಭೂಮಿ ಹಾಗೂ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿ ತಾಲ್ಲೂಕಿನ ಶಕ್ತಿನಗರದ ಆರ್ಟಿಪಿಎಸ್ ಮುಂಭಾದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಾಲ್ಕು ದಶಕಗಳ ಹಿಂದೆ ಸ್ಥಾಪನೆಗೊಂಡ ಆರ್ಟಿಪಿಎಸ್ ಗಾಗಿ ದೇವಸುಗೂರು, ಚಿಕ್ಕಸುಗೂರು, ಹೆಗ್ಗಸನಹಳ್ಳಿ, ಯದ್ಲಾಪುರ ಸೇರಿದಂತೆ ಸುತ್ತ-ಮುತ್ತಲಿನ ಹಳ್ಳಿಗಳ ನೂರಾರು ಜನರು ಸಾವಿರಾರು ಎಕರೆ ಜಮೀನನ್ನು ನೀಡಿದ್ದು, ಅವರಿಗೆ ಉದ್ಯೋಗ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದ್ದ ಕೆಪಿಸಿಎಲ್ ಅಧಿಕಾರಿಗಳು ವಿವಿಧ ಕಾರಣಗಳನ್ನು ಮುಂದಿಟ್ಟುಕೊಂಡು ಅನ್ಯಾಯ ಮಾಡುತ್ತಲೇ ಬಂದಿದ್ದಾರೆ ಎಂದು ಆರೋಪಿಸಿದರು.
ಕೆಪಿಸಿಎಲ್ ರಲ್ಲಿ ಉದ್ಯೋಗಕ್ಕಾಗಿ ನೋಟಿಫಿಕೇಶ್ ಹೊರಡಿಸಿತ್ತು, ಅದರಂತೆ 554 ಜನರು ಅರ್ಜಿ ಸಲ್ಲಿಸಿದ್ದರು ಆದರೆ ಅವರಲ್ಲಿ ಕೇವಲ 199 ಜನರ ಅರ್ಹತಾ ಪಟ್ಟಿಯನ್ನು ಏಕಪಕ್ಷಿಯವಾಗಿ ಸಿದ್ಧ ಪಡಿಸಿದ ಅಧಿಕಾರಿಗಳು ಇಲ್ಲಿತನಕ 76 ಜನರಿಗೆ ಮಾತ್ರ ಕೆಲಸ ನೀಡಿದ್ದು, ಉಳಿದ ಕುಟುಂಬಸ್ಥರು, ಉದ್ಯೋಗಾಕಾಂಕ್ಷಿಗಳಿಗೆ ಅನರ್ಹರೆಂದು ತಿಳಿಸಿ ಅವರನ್ನು ಆಯ್ಕೆಯಿಂದ ದೂರವಿಟ್ಟು ತೀವ್ರ ಅನ್ಯಾಯ ಮಾಡಿದ್ದಾರೆ ಈ ಕುರಿತು ನ್ಯಾಯಾಲಯದ ಮೊರೆ ಹೋಗಿದ್ದು, ಅರ್ಹರನ್ನು ಉದ್ಯೋಗಕ್ಕೆ ಪಡೆಯಬಹುದು ಎಂದು ಕೋರ್ಟ್ ಆದೇಶವಿದ್ದರು ಸಹ ಇಲ್ಲಿತನಕ ನೇಮಕಾತಿ ಮಾಡಿಕೊಂಡಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ಆರ್ಟಿಪಿಎಸ್ ಗಾಗಿ ಭೂಮಿ ಮತ್ತು ಮನೆಗಳನ್ನು ಕಳೆದುಕೊಂಡವರಿಗೆ ನ್ಯಾಯ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಹಿಡಿದು, ಸಚಿವರು, ಶಾಸಕರು, ಸಂಸದರು, ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ದಶಕಗಳು ಕಳೆಯುತ್ತಿದ್ದರು ಸಂತ್ರಸ್ತರ ಕುಟುಂಬಸ್ಥರಿಗೆ, ವಾರಸುದಾರರಿಗೆ ಉದ್ಯೋಗವಿಲ್ಲದಂತಾಗಿದ್ದು, ತಕ್ಷಣ ಉದ್ಯೋಗ ನೀಡುವುದರ ಕುರಿತು ಸ್ಪಷ್ಟತೆಯನ್ನು ಅಧಿಕಾರಿಗಳು ಕೊಡಬೇಕು, ಅನರ್ಹರೆಂದು ದೂರವಿಟ್ಟಿರುವ ಪಟ್ಟಿಯನ್ನು ಬಹಿರಂಗಗೊಳಿಸುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಂಘದ ಅಧ್ಯಕ್ಷ ಪಿ.ಸೂಗಪ್ಪ, ಪ್ರಧಾನ ಕಾರ್ಯದರ್ಶಿ ಬಸವರಾಜ ಸ್ವಾಮಿ, ಪದಾಧಿಕಾರಿಗಳಾದ ಸುರೇಶಗೌಡ, ಶರಣಪ್ಪ, ಮಾರೆಪ್ಪ, ಡೋಣಿ ರಾಮಪ್ಪ, ಹನುಮಂತಪ್ಪ,ಆಂಜನೇಯ, ಹನುಮಂತ ಸೇರಿ ಸಂತ್ರಸ್ತರು, ಕುಟುಂಬಸ್ಥರು, ವಿವಿಧ ಸಂಘಟನೆಗಳ ಸದಸ್ಯರು, ಗ್ರಾಮಸ್ಥರು ಇದ್ದರು.