ರಾಯಚೂರು ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ಹೆಚ್ಚಳ : 41.4 ಡಿಗ್ರಿ ಸೆಲ್ಸಿಯಸ್ ದಾಖಲು

Update: 2025-03-11 14:16 IST
ರಾಯಚೂರು ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ಹೆಚ್ಚಳ : 41.4 ಡಿಗ್ರಿ ಸೆಲ್ಸಿಯಸ್ ದಾಖಲು
  • whatsapp icon

ರಾಯಚೂರು : ದಿನದಿಂದ‌ ದಿನಕ್ಕೆ ಜಿಲ್ಲೆಯಲ್ಲಿ ಬಿಸಿಲಿನ ಪ್ರಖರತೆ ಹೆಚ್ಚಾಗಿದ್ದು, ರಾಯಚೂರಿನಲ್ಲಿ ಗರಿಷ್ಠ 41.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿ ಜನರಿಗೆ ಹೈರಾಣಾಗಿಸಿದೆ.

ನಗರ ಸೇರಿದಂತೆ ಜಿಲ್ಲೆಯಾದ್ಯಂತ ಬೇಸಿಗೆಯ ತಾಪ ಜಾಸ್ತಿಯಾಗುತ್ತಿದ್ದು, ಪ್ರಸಕ್ತ ಸಾಲಿನ ಬೇಸಿಗೆ ಆರಂಭದಲ್ಲಿಯೇ 41.4 ಡಿಗ್ರಿ ಸೆಲ್ಸಿಯ್ಸ್‌ ಗರಿಷ್ಠ ತಾಪಮಾನ ದಾಖಲಾಗಿರುವುದರಿಂದ ಬಿಸಿಲನಾಡಿನ ಜನ ಅಕ್ಷರಶಃ ತತ್ತರಿಸಿ ಹೋಗುತ್ತಿದ್ದಾರೆ.

ಸೋಮವಾರ ಪ್ರಕಟಗೊಂಡ ಹವಮಾನ ವರದಿಯಲ್ಲಿ ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿಯೇ ಅತೀ ಹೆಚ್ಚು 41.4 ಡಿ.ಸೆ ಗರಿಷ್ಠ ಅದೇ ರೀತಿ 19 ಡಿ.ಸೆ. ಕನಿಷ್ಠ ತಾಪಮಾನ ರಾಯಚೂರು ಜಿಲ್ಲೆಯಲ್ಲಿ ದಾಖಲಾಗಿದ್ದು ,ಉಳಿದಂತೆ ಪಕ್ಕದ ಜಿಲ್ಲೆ ಕೊಪ್ಪಳ 40.7 ಡಿ.ಸೆ, ಉತ್ತರ ಕನ್ನಡ ಮತ್ತು ಧಾರವಾಡ 40.5 ಡಿ.ಸೆ, ಕಲಬುರಗಿ 40.4 ಡಿ.ಸೆ ಹಾಗೂ ಬಾಗಲಕೋಟೆ 40.1 ಡಿ.ಸೆ ದಾಖಲಾಗಿದ್ದು, ರಾಜ್ಯದ ಆರು ಜಿಲ್ಲೆಗಳಲ್ಲಿ‌ ಬೇಸಿಗೆಯ ತಾಪಮಾನ ಗರಿಷ್ಠ 40 ಡಿ.ಸೆ ದಾಟಿದೆ.

ಹೈರಾಣಾದ‌‌ ಕಾರ್ಮಿಕರು:

ಗರಿಷ್ಠ ತಾಪಮಾನದಿಂದಾಗಿ ಜನರ ತಲೆ ಸುಡುತ್ತಿದೆ. ಜಿಲ್ಲೆಯ ಹಲವೆಡೆ ಕಟ್ಟಡ ಹಾಗೂ‌ ಇತರೆ ನಿರ್ಮಾಣದ ಕಾರ್ಮಿಕರು, ನರೇಗ ಕೂಲಿ ಕಾರ್ಮಿಕರು ರಣ ಬಿಸಿಲಿನಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಬೆಳಿಗ್ಗೆ 10 ಗಂಟೆಯಿಂದಲೇ ಬಿಸಿಲಿನ ಬೇಗೆ ಶುರುವಾಗುತ್ತಿದ್ದು, ಸಂಜೆ 5 ಗಂಟೆಯಾದರೂ ಬಿಸಿಲಿನ‌ ಝಳ ಕಡಿಮೆಯಾಗುತ್ತಿಲ್ಲ ಇದರಿಂದ ಜನರು ತೀವ್ರ ಪರದಾಡುವಂತಾಗಿದೆ.

ಬಿಸಿಲಿನ‌ ಅಬ್ಬರವನ್ನು ಅರಿತ ಅನೇಕರು ಮಾರುಕಟ್ಟೆಗೆ, ಕಿರಾಣಿ ಸಾಮಾನು ತರಲು ಹಾಗೂ ಇತರೆ ದಿನ ನಿತ್ಯದ ಕೆಲಸಗಳನ್ನು‌ ಬೆಳಿಗ್ಗೆಯೇ ಮಾಡಿಕೊಳ್ಳುತ್ತಿದ್ದು, ಮಧ್ಯಾಹ್ನದ ವೇಳೆ ಹೆಚ್ಚು ಬಿಸಿಲು ಇರುವುದರಿಂದ ಹೊರಗೆ ಬರಲು ಹಿಂಜರಿಯುತ್ತಿದ್ದಾರೆ. ಹೊರಗೆ ಬಂದಾಗ ಸಾರ್ವಜನಿಕರು ಸೂರ್ಯನ ಬಿಸಿಯಿಂದ ತಪ್ಪಿಸಿಕೊಳ್ಳಲು ನೆರಳನ್ನು ಹುಡುಕುತ್ತಿದ್ದು, ಈ‌ ಹಿಂದೆ ಬೇಸಿಗೆಯಲ್ಲಿ ವಾಹನ ಸವಾರರಿಗೆ ಕಡ್ಡಾಯ ಹೆಲ್ಮೆಟ್‌ ಧರಿಸುವುದನ್ನು ಪೊಲೀಸ್ ಇಲಾಖೆ ವಿನಾಯಿತಿ ನೀಡಿತ್ತು. ಈ ಬಾರಿ ಕಡ್ಡಾಯಗೊಳಿಸಿದ್ದರಿಂದ ವಾಹನ ಸವಾರರು ಬೆವರು ಸುರಿಸುತ್ತಾ ಹೆಲ್ಮೆಟ್ ಧರಿಸುವಂತಾಗಿದೆ. ಅನೇಕರು ಹೆಲ್ಮೆಟ್ ಧರಿಸಿ ಬಿಸಿಲಿನಿಂದ ತಲೆಯನ್ನು ರಕ್ಷಣೆ ಮಾಡಿಕೊಳ್ಳುತ್ತಿದ್ದಾರೆ. ಬಿಸಿಲಿನ ಝಳದಿಂದ ಬಳಲುತ್ತಿರುವ ಅನೇಕರು ಎಳನೀರು ಹಾಗೂ ಇತರೆ ತಂಪು ಪಾನೀಯ ಸೇವನೆ ಮಾಡುತ್ತಿದ್ದಾರೆ, ಪಾದಾಚಾರಿಗಳು ಕೊಡೆ(ಛತ್ರಿ) ಹಿಡಿದು ಹಾಗೂ ತಲೆಗೆ ಕ್ಯಾಪ್‌ ಧರಿಸಿ ಸಂಚರಿಸುತ್ತಿದ್ದಾರೆ.

ಏಪ್ರಿಲ್, ಮೇ ನಲ್ಲಿ ಮತ್ತಷ್ಟು ಸಂಕಟ:

ಈ‌ ಬಾರಿ ಬಿಸಿಲಿನ ಧಗೆ ಫೆಬ್ರವರಿಯಿಂದಲೇ ಶುರುವಾಗಿದೆ. ಮಾರ್ಚ್ ಆರಂಭದಲ್ಲಿಯೇ 40 ಡಿ.ಸೆ ತಾಪಮಾನ ಗಡಿದಾಟಿದೆ. ಏಪ್ರಿಲ್‌ ಹಾಗೂ ಮೇ ನಲ್ಲಿ ಇನ್ನಷ್ಟು ಬಿಸಿಲಿನ ತಾಪಮಾನ‌ ಹೆಚ್ಚಾಗುತ್ತದೆ. ಬೇಸಿಗೆಯ ತಾಪಮಾನಕ್ಕೆ ಜನರ ಆರೋಗ್ಯದಲ್ಲಿ ಏರುಪೇರು ಉಂಟಾಗುವ ಲಕ್ಷಣಗಳು ಶುರುವಾಗಿವೆ. ಜನರೇ ಸ್ವಯಂ ಪ್ರೇರಿತವಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News