ಟೀಕೆಗಳು ಸಾಯುತ್ತವೆ, ಜನರಿಗೆ ಮಾಡಿದ ಸಹಾಯ ಮಾತ್ರ ಶಾಶ್ವತ : ಡಿ.ಕೆ.ಶಿವಕುಮಾರ್
ಚನ್ನಪಟ್ಟಣ : ಯಾರೇ ಬರಲಿ, ಯಾರೇ ಹೋಗಲಿ, ಏನೇ ಟೀಕೆ ಮಾಡಲಿ, ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ. ಜನರಿಗೆ ಸಹಾಯ ಮಾಡಿದ್ದು ಮಾತ್ರ ಶಾಶ್ವತ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಮಂಗಳವಾರ ಬೈರಾಪಟ್ಟಣ ಹಾಗೂ ಹೊಂಗನೂರಿನ ಬಳಿ ಸುಣ್ಣಘಟ್ಟದಲ್ಲಿ ನಡೆದ ‘ಬಾಗಿಲಿಗೆ ಬಂತು ಸರಕಾರ, ಸೇವೆಗೆ ಇರಲಿ ಸಹಕಾರ' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾರು ಏನೇ ಹೇಳಿದರು ನನಗೆ ಜನ ಸೇವೆ ಮುಖ್ಯ. ನಾನು ನಿಮ್ಮ ಮನೆ ಮಗ, ಸೇವಕ. ಚನ್ನಪಟ್ಟಣ ತಾಲೂಕಿನ ಜನತೆಗೆ ಶಿವಕುಮಾರ್ ಮನೆ ಬಾಗಿಲು ಸದಾ ತೆರೆದಿರುತ್ತದೆ ಎಂದರು.
ಈಗ ಬಂದಿದ್ದಾರೆ ಚುನಾವಣೆ ಆದ ನಂತರ ಹೋಗುತ್ತಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಅಧಿಕಾರ ಇದ್ದಾಗ ಜನರ ಕೆಲಸ ಮಾಡಬೇಕಿತ್ತು. ಬಡವರ ಕೆಲಸ ಮಾಡಬೇಡಿ ಎಂದು ಕುಮಾರಣ್ಣ ಮತ್ತು ಯೋಗೇಶ್ವರ್ ಗೆ ಯಾರಾದರೂ ಹೇಳಿದ್ರಾ?. ನಾವು ಈಗ ನಮ್ಮದೇ ಶೈಲಿಯಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಉಪ ಮುಖ್ಯಮಂತ್ರಿ ತಿರುಗೇಟು ನೀಡಿದರು.
ಚನ್ನಪಟ್ಟಣ ತಾಲೂಕು ಅಭಿವೃದ್ಧಿಗೆ ನೀರಾವರಿ ಇಲಾಖೆಯಿಂದ 167 ಕೋಟಿ ರೂ.ಅನುದಾನ ನೀಡಲಾಗಿದೆ. ಮುಖ್ಯಮಂತ್ರಿ 100 ಕೋಟಿ ರೂ.ವಿಶೇಷ ಅನುದಾನ ನೀಡುವುದಾಗಿ ಹೇಳಿದ್ದಾರೆ. ಅಲ್ಲದೆ, ರೈಲ್ವೆ ಸೇತುವೆ ಕಾಮಗಾರಿ, ಆನೆ ದಾಳಿ ತಡೆಯಲು ಬ್ಯಾರಿಕೇಡ್ ಕಾಮಗಾರಿ. ರಸ್ತೆ, ಚರಂಡಿ ದುರಸ್ಥಿ ಕಾಮಗಾರಿಗೆ ಚನ್ನಪಟ್ಟಣಕ್ಕೆ 70ಕೋಟಿ ರೂ. ನೀಡಲಾಗಿದೆ ಎಂದು ಅವರು ಹೇಳಿದರು.
50 ಕೋಟಿ ರೂ.ವೆಚ್ಚದಲ್ಲಿ ಕಣ್ವ ನದಿಗೆ ಅಡ್ಡಾಲಹಳ್ಳಿ ಬಳಿ ಬ್ಯಾರೇಜ್ ಕಾಮಗಾರಿ, ಗರಕನಹಳ್ಳಿ ಏತ ನೀರಾವರಿ ಯೋಜನೆಯ ಉನ್ನತೀಕರಣ ಮತ್ತು ಕೋಡಂಬಳ್ಳಿ ಏರು ಕೊಳವೆ ಶಾಖೆಯ ಸಾಮರ್ಥ್ಯ ವೃದ್ಧಿಗಾಗಿ 40 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಗೆ ಶಂಕುಸ್ಥಾಪನೆ ಮಾಡಲಾಗಿದೆ. 540 ಕೋಟಿ ವೆಚ್ಚದಲ್ಲಿ ಸತ್ತೇಗಾಲದಲ್ಲಿ ನೀರಾವರಿ ಕಾಮಗಾರಿ ನಡೆಯುತ್ತಿದೆ ಎಂದು ಶಿವಕುಮಾರ್ ಮಾಹಿತಿ ನೀಡಿದರು.
ನಿವೇಶನಕ್ಕಾಗಿ 2500 ಮತ್ತು ಮನೆಗಾಗಿ 1,121 ಜನರು ಅರ್ಜಿ ಸಲ್ಲಿಸಿದ್ದಾರೆ. ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಅವಶ್ಯಕತೆ ಇದ್ದವರಿಗೆ ಹಂಚಿಕೆ ಮಾಡಲಾಗುವುದು. ಕನಕಪುರದಲ್ಲಿ 100 ಎಕರೆಯಲ್ಲಿ ಹೊಸ ಬಡಾವಣೆ ಮಾಡಲಾಗಿದ್ದು ಇದೇ ಮಾದರಿಯಲ್ಲಿ ಚನ್ನಪಟ್ಟಣ ಮತ್ತು ರಾಮನಗರದಲ್ಲಿ ಯೋಜನೆ ರೂಪಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.
ಕಳೆದ 5 ಕಾರ್ಯಕ್ರಮಗಳಲ್ಲಿ ಅರ್ಜಿ ಸಲ್ಲಿಸಲು ಆಗದೆ ಇರುವವರಿಗೆ ತಾಲ್ಲೂಕು ಕಚೇರಿಯಲ್ಲಿ ಪ್ರತ್ಯೇಕ ಕೌಂಟರ್ ತೆರೆಯಲಾಗುವುದು. ಈ ಸೌಲಭ್ಯವನ್ನು ಎಲ್ಲರೂ ಉಪಯೋಗಿಸಿಕೊಳ್ಳಬೇಕು. ಅಧಿಕಾರಿಗಳು ಯಾವ ರೀತಿಯ ವ್ಯವಸ್ಥೆ ಮಾಡಿದ್ದಾರೆ ಎಂದು ಪರಿಶೀಲನೆ ನಡೆಸುತ್ತೇನೆ ಎಂದು ಶಿವಕುಮಾರ್ ಹೇಳಿದರು.
ರಾಮನಗರ ಜಿಲ್ಲೆಯಲ್ಲಿ ಶೇ.96ರಷ್ಟು ಜನರಿಗೆ ಗ್ಯಾರಂಟಿ ಯೋಜನೆಗಳು ತಲುಪಿವೆ. ಗ್ಯಾರಂಟಿಯಿಂದ ಜನರ ಅಭಿವೃದ್ಧಿ ಮಾಡಿದ್ದೇವೆ. ರಾಮನಗರಕ್ಕೆ 100 ಹೊಸ ಕೆಎಸ್ಸಾರ್ಟಿಸಿ ಬಸ್ ಗಳನ್ನು ಬಿಟ್ಟಿದ್ದೇವೆ. ಇಲ್ಲಿಂದ ಮಂಡ್ಯಕ್ಕೆ ಬಸ್ ಬೇಕು ಎಂದು ಮನವಿ ಸಲ್ಲಿಸಲಾಗಿದ್ದು, ಅದನ್ನು ಆದಷ್ಟು ಬೇಗ ಪರಿಹಾರಿಸಲಾಗುವುದು ಎಂದು ಅವರು ಹೇಳಿದರು.
‘ಲಂಚ’ ಅಧಿಕಾರಿ ಅಮಾನತಿಗೆ ಸೂಚನೆ: ನಾಡ ಕಚೇರಿಯಲ್ಲಿ ಪಿಂಚಣಿ ಮಾಡಿಕೊಡಲು ಹರ್ಷಿತಾ ಎನ್ನುವ ನೌಕರಳು 50 ಸಾವಿರ ರೂ. ಲಂಚ ಕೇಳುತ್ತಾ ಇದ್ದಾರೆ ಎಂದು ದೊಡ್ಡ ಮಳೂರು ಗ್ರಾಮದ 70 ವರ್ಷದ ಯಶೋಧಮ್ಮ ದೂರು ನೀಡಿದಾಗ ಸಿಟ್ಟಾದ ಉಪಮುಖ್ಯಮಂತ್ರಿ, ಜಿಲ್ಲಾಧಿಕಾರಿಯನ್ನು ಕರೆದು ‘ಕೂಡಲೇ ಇದರ ಬಗ್ಗೆ ತನಿಖೆ ಮಾಡಬೇಕು. ತಪ್ಪು ಸಾಬೀತಾದರೆ ಈ ಅಧಿಕಾರಿಯನ್ನು ಅಮಾನತು ಮಾಡಬೇಕು’ ಎಂದು ಸೂಚನೆ ನೀಡಿದರು.
ಪಡಿತರ ವಿತರಣೆ ಮಾಡುವಲ್ಲಿ ಜನರಿಗೆ ಕಷ್ಟ ಕೊಡುತ್ತಿರುವ ವಿತರಕರ ಲೈಸೆನ್ಸ್ ರದ್ದು ಮಾಡಿ. ತಂತ್ರಜ್ಞಾನ ಮುಂದುವರೆದರು ಬಳಸಿಕೊಳ್ಳಲು ನಿಮಗೆ ಏನು ತೊಂದರೆ. ಜನರ ಕಷ್ಟ ನಿಮಗೆ ಅರ್ಥ ಆಗುವುದಿಲ್ಲವೇ? ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳನ್ನು ಉಪ ಮುಖ್ಯಮಂತ್ರಿ ತರಾಟೆಗೆ ತೆಗೆದುಕೊಂಡರು.