ವೈವಿಧ್ಯ ಪಾತ್ರಗಳ ನೇಯ್ದ ರಂಗ ನೇಕಾರ
ತಮ್ಮ ಗೆಳೆಯ ಖಾಜಾಸಾಬ್ ಜಂಗಿ ಕುರಿತು ರಾಜು ತಾಳಿಕೋಟಿಯವರು ‘‘ವೃತ್ತಿ ರಂಗಭೂಮಿಯಲ್ಲಿ ಅಣ್ಣತಮ್ಮಂದಿರಂಗ ಇದ್ವಿ. ನಮಗ ರಾಮ್ ಔರ್ ಶ್ಯಾಮ್ ಅಂತಿದ್ರು ಸ್ವಾಭಿಮಾನಿ, ಕಲಾವಿದರಿಗೆ ಅಗತ್ಯವಾದ ಶಿಸ್ತಿತ್ತು. ಸುಳ್ಳು ಹೇಳುತ್ತಿರಲಿಲ್ಲ’’ ಎನ್ನುತ್ತಾರೆ.
ನೇಯ್ಗೆ ಕಾಯಕ ಕೈಗೊಂಡಿದ್ದ ಹುಡುಗ, ರಂಗಭೂಮಿ ಸೆಳೆತಕ್ಕೆ ಸಿಲುಕಿ ರಂಗ ನೇಕಾರನಾಗಿ ಪ್ರಸಿದ್ಧಿಯಾಗಿ ಕಣ್ಮರೆಯಾದವರು ಖಾಜಾಸಾಬ್ ಜಂಗಿ.
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ನನ್ನೂರು ಅಮೀನಗಡದವರಾದ ಖಾಜಾಸಾಬ್ ಅವರ ತಾತ ಲಾಡಸಾಹೇಬ್ ಅಮೀನಗಡ ಅವರು ವೃತ್ತಿ ರಂಗಭೂಮಿಯಲ್ಲಿ ದೊಡ್ಡ ಕಲಾವಿದರಾಗಿ ಹೆಸರಾಗಿದ್ದರು. ಖಾಜಾಸಾಬ್ ತಂದೆ ನಬಿಸಾಬ್ ಅವರು ಪಿ.ಬಿ.ಧುತ್ತರಗಿ ಅವರ ‘ಸಂಪತ್ತಿಗೆ ಸವಾಲ್’ ನಾಟಕದಲ್ಲಿ ಭದ್ರನ ಪಾತ್ರದ ಮೂಲಕ ಹೆಸರಾಗಿದ್ದರು. ಇಂಥ ರಂಗಭೂಮಿಯ ವಾತಾವರಣದಲ್ಲಿ ಬೆಳೆದ ಖಾಜಾಸಾಬ್ ಅವರಿಗೆ ಅಕ್ಷರಗಳು ತಲೆಗೆ ಹತ್ತಲಿಲ್ಲ. ಹೀಗಾಗಿ ಶಾಲೆಯ ಕಟ್ಟೆ ಹತ್ತಿದ್ದು ಕಡಿಮೆ. ಅವರ ಚಿಕ್ಕವಯಸ್ಸಿನಲ್ಲಿಯೇ ನಬಿಸಾಬ್ ನಿಧನರಾದ ನಂತರ ತಾಯಿ ಜಹೀರಾಬಿ ಆರೈಕೆಯಲ್ಲಿ ಬೆಳೆದರು. ಹೊಟ್ಟೆಪಾಡಿಗೆ ನೇಯ್ಗೆ ಕಾಯಕಕ್ಕೆ ಮುಂದಾಗುತ್ತಾರೆ. ಆದರೆ ರಂಗಭೂಮಿ ಸೆಳೆತ ಬಿಟ್ಟಿರಲಿಲ್ಲ. ಅಮೀನಗಡದ ಜಾತ್ರೆಯ ಅಂಗವಾಗಿ ಶ್ರೀ ಶಕ್ತಿ ಸೇವಾ ನಾಟ್ಯ ಸಂಘದ ವತಿಯಿಂದ ‘ಸೂಳೆಮಗ’ ನಾಟಕದಲ್ಲಿ ಚನ್ನಪ್ಪಗೌಡನ ಪಾತ್ರಕ್ಕೆ ಬಣ್ಣ ಹಚ್ಚುವ ಮೂಲಕ ರಂಗಭೂಮಿ ಪ್ರವೇಶಿಸಿದರು. ಆಮೇಲೆ ‘ಭಲೆ ಮಗಳೆ’ ಸೇರಿದಂತೆ ಇತರ ನಾಟಕಗಳಲ್ಲೂ ಅಭಿನಯಿಸುವಾಗ ನಾಟಕ ಕಂಪೆನಿಗಳ ಕಣ್ಣಿಗೆ ಬೀಳುತ್ತಾರೆ. ಇದರ ಪರಿಣಾಮ; ಅವರ ಗೆಳೆಯರಾದ ರುದ್ರೇಶ ಮುದ್ದೇಬಿಹಾಳ ಅವರೊಂದಿಗೆ ರಾಮದುರ್ಗದ ಶ್ರೀ ಶಕ್ತಿ ಕಲಾ ನಾಟ್ಯ ಸಂಘವು ಅಮೀನಗಡ ಪಕ್ಕದ ಸೂಳೆಬಾವಿಯಲ್ಲಿ ಮೊಕ್ಕಾಂ ಹೂಡಿದ್ದಾಗ ಕಲಾವಿದರಾದ ಲಕ್ಷ್ಮಣ ಹುಣಶ್ಯಾಳ ಹಾಗೂ ಮುರಳಿ ಪತ್ತಾರ ಅವರ ಸಹಕಾರದಿಂದ ಕಂಪೆನಿ ಸೇರಿದರು. ಆದರೆ ಕೆಲ ದಿನಗಳಲ್ಲಿಯೇ ಖಾಜಾಸಾಬ್ ಮನೆಯವರು ಕಂಪೆನಿಯಿಂದ ಬಿಡಿಸಿಕೊಂಡು ಮನೆಗೆ ಕರೆದೊಯ್ದರು. ಹೊಟ್ಟೆಪಾಡಿಗೆ ಮತ್ತೆ ನೇಕಾರರಾದರು. ಆಗಾಗ ಹವ್ಯಾಸಿ ಕಲಾವಿದರಾಗಿ ಬಣ್ಣ ಹಚ್ಚುವುದು ಬಿಡಲಿಲ್ಲ. 1984ರಲ್ಲಿ ಯಮನಪ್ಪ ಮೆದಿಕೇರಿ ಹಾಗೂ ‘ಚಿತ್ರಲತಾ’ ಸಿನೆಮಾ ಪತ್ರಿಕೆಯ ಸಂಪಾದಕರಾಗಿದ್ದ ಎಸ್.ಎಸ್.ಜೋಶಿ ಅವರು ಪಾಲುದಾರಿಕೆಯಲ್ಲಿ ಆರಂಭಿಸಿದ ಇಲಕಲ್ಲದ ಚಾಮುಂಡೇಶ್ವರಿ ನಾಟ್ಯ ಸಂಘಕ್ಕೆ ಸೇರಿಸಿಕೊಂಡರು. ಇಲ್ಲಿಂದ ಹಿಂದಿರುಗಿ ನೋಡದ ಖಾಜಾಸಾಬ್ ಅವರು ಮೈಂದರಗಿಯ ರೇಣುಕಾಚಾರ್ಯ ಕಂಪೆನಿ, ಚಿತ್ತರಗಿಯ ಶ್ರೀ ಕುಮಾರ ವಿಜಯ ನಾಟ್ಯ ಸಂಘದ ನಂತರ ಕಮತಗಿಯ ಹುಚ್ಚೇಶ್ವರ ನಾಟ್ಯ ಸಂಘಕ್ಕೆ ರಾಜು ತಾಳಿಕೋಟಿ ಅವರೊಂದಿಗೆ ಸೇರುತ್ತಾರೆ. ಇಲ್ಲಿಂದ ರಾಜು ತಾಳಿಕೋಟಿ ಅವರ ಖಾಸ್ಗತೇಶ್ವರ ನಾಟ್ಯ ಸಂಘದಲ್ಲಿ ಏಳೆಂಟು ವರ್ಷಗಳವರೆಗೆ ಇರುತ್ತಾರೆ. ಆಮೇಲೆ ಶೇಕ್ ಮಾಸ್ತರರ ಹಾನಗಲ್ ಶ್ರೀ ಕುಮಾರೇಶ್ವರ ನಾಟ್ಯ ಸಂಘದಲ್ಲಿ 12 ವರ್ಷಗಳವರೆಗೆ ಇದ್ದರು. ಕೊನೆಗೆ ಗದುಗಿನ ವೀರೇಶ್ವರ ಪುಣ್ಯಾಶ್ರಮದ ಪಂಚಾಕ್ಷರ ಗವಾಯಿಗಳ ನಾಟ್ಯ ಸಂಘದಲ್ಲಿದ್ದರು.
ಕೆಲವು ಸಮಯದ ಹಿಂದೆ ಅವರ ಕಾಲಿಗೆ ಸಣ್ಣ ಗಾಯವಾಗಿದ್ದು, ಊದಿಕೊಂಡಿತ್ತು. ಆಮೇಲೆ ಬುಧವಾರ ರಕ್ತದೊತ್ತಡ ಕಡಿಮೆಯಾಗಿ (ಲೋ ಬಿಪಿ) ಗದಗದಲ್ಲಿ ನಿಧನರಾದರು. ಅವರಿಗೆ 62 ವರ್ಷ ವಯಸ್ಸಷ್ಟೇ. ಅವರ ಪತ್ನಿ ಹಫೀಝಾ ಬೇಗಂ ರಂಗ ಕಲಾವಿದೆ. ಅವರಿಗೆ ಪುತ್ರ, ಪುತ್ರಿ ಇದ್ದಾರೆ.
‘‘ವೃತ್ತಿ ರಂಗಭೂಮಿಯಲ್ಲಿ ಅಣ್ಣತಮ್ಮಂದಿರಂಗ ಇದ್ವಿ. ನಮಗ ರಾಮ್ ಔರ್ ಶ್ಯಾಮ್ ಅಂತಿದ್ರು’’ ಎಂದು ಇಲಕಲ್ಲದಲ್ಲಿ ಖಾಜಾಸಾಬ್ ಅಂತ್ಯಕ್ರಿಯೆಗೆ ಹಾಜರಾಗಿದ್ದ ರಾಜು ತಾಳಿಕೋಟಿ ಸ್ಮರಿಸಿಕೊಂಡರು. ಅಂತ್ಯಕ್ರಿಯೆಗೆಂದೇ ಕಲುಬುರಗಿಯಿಂದ ಇಲಕಲ್ಲಕ್ಕೆ ತೆರಳಿದ ಮಲ್ಲಪ್ಪ ಜಿಳ್ಳಿ ಅವರು ‘‘ಖಾಜಾಸಾಬ್ ಅವರ ಕಟ್ಟಾ ಅಭಿಮಾನಿ ನಾನು. ಅವರ ‘ನಾಯಿಗಳಿವೆ ಎಚ್ಚರಿಕೆ’ ನಾಟಕದಲ್ಲಿ ಬಳ್ಳಾರಿ ನಾಗ ಎಂಬ ಖಳನಾಯಕ ಪಾತ್ರ ನೋಡಿ ಅಭಿಮಾನಿಯಾದೆ. ನನ್ನ ಸೋದರ, ನನ್ನ ಮಗ ಇದ್ದಂಗ. ಒಳ್ಳೆ ಕಲಾವಿದ. 16 ವರ್ಷಗಳ ಒಡನಾಡಿ’’ ಎಂದು ಸ್ಮರಿಸಿದರು. ಮಲ್ಲಪ್ಪ ಅವರು ಲೆಕ್ಕಪತ್ರ ಇಲಾಖೆಯಲ್ಲಿ ಲೆಕ್ಕ ಅಧೀಕ್ಷಕರಾಗಿ ನಿವೃತ್ತರಾಗಿದ್ದು, 78 ವರ್ಷ ವಯಸ್ಸಾದರೂ ಅಂತ್ಯಕ್ರಿಯೆಗೆ ಹಾಜರಾದರು. ಹೀಗೆಯೇ ಕಲಬುರಗಿಯಿಂದ ಬಂಗಾರ ಅಂಗಡಿಯ ಮಾಲಕರಾದ ಸಂಜಯಕುಮಾರ್ ರೇವಣಕರ್, ಬಟ್ಟೆ ಅಂಗಡಿಯ ಮಾಲಕ ಕವಿರಾಜ ಹತ್ತಿ, ಹೊಟೇಲ್ ಮಾಲಕರಾದ ಸಿದ್ರಾಮಪ್ಪ ಜೀವಣಗಿ, ದಾಲ್ ಮಿಲ್ ಮಾಲಕರಾದ ಶರಣಪ್ಪ ಕುಂಬಾರ, ತರಕಾರಿ ಹಾಗೂ ಹಣ್ಣಿನ ವ್ಯಾಪಾರಿ ಟೈಗರ್ ನಾಗು ಅವರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ‘‘ಪಾತ್ರಕ್ಕೆ ಜೀವ ತುಂಬುತ್ತಿದ್ದ ಕಲಾವಿದ ಖಾಜಾಸಾಬ್. ಬಹಳ ಹಚ್ಚಿಕೊಳ್ಳುತ್ತಿದ್ದರು. ಇಲಕಲ್ಲದಲ್ಲಿ ಅವರ ಗೃಹಪ್ರವೇಶಕ್ಕೆ ಬಂದಿದ್ದೆ. ಅವರ ಮಗನ ಲಗ್ನಕ್ಕೆ ಬಂದಿದ್ದೆ. ಮನೆಯ ಸದಸ್ಯರೇ ಆಗಿದ್ದರು’’ ಎಂದು ಟೈಗರ್ ನಾಗು ದುಃಖಿತರಾದರು.
ನಾಯಕ, ಖಳನಾಯಕ, ಹಾಸ್ಯಪಾತ್ರಗಳಿಗೆ ಹೆಸರಾಗಿದ್ದ ಖಾಜಾಸಾಬ್ ಅವರು ತುಟಿಯ ತುದಿಗೆ ಸಿಗರೇಟ್ ಹಚ್ಚಿಕೊಂಡು, ಹೊಗೆ ಉಗುಳಿ ಸಂಭಾಷಣೆ ಹೇಳಿದರೆ ಪ್ರೇಕ್ಷಕರಿಂದ ಚಪ್ಪಾಳೆ ಗ್ಯಾರಂಟಿ. ಹೀಗೆ ರಂಗದ ಮೇಲೆ ಶಿಸ್ತಿನ ಕಲಾವಿದರಾಗಿದ್ದರು. ‘‘ಸ್ವಾಭಿಮಾನಿ, ಕಲಾವಿದರಿಗೆ ಅಗತ್ಯವಾದ ಶಿಸ್ತಿತ್ತು. ಸುಳ್ಳು ಹೇಳುತ್ತಿರಲಿಲ್ಲ’’ ಎಂದು ತಮ್ಮ ಗೆಳೆಯರ ಕುರಿತು ರಾಜು ತಾಳಿಕೋಟಿ ಹೇಳಿಕೊಂಡರು.
‘‘ಆಲ್ ರೌಂಡ್ ನಟ. ಯಾವುದೇ ಪಾತ್ರ ಕೊಟ್ಟರೂ ನೀಗಿಸುತ್ತಿದ್ದರು. ಎಲ್.ಬಿ.ಕೆ.ಹಾಲ್ದಾಳ ಅವರ ರಚನೆಯ ‘ಹಾರಕೂಡ ಚನ್ನಬಸವೇಶ್ವರ ಮಹಾತ್ಮೆ’ ನಾಟಕದಲ್ಲಿ ಚನ್ನಬಸವೇಶ್ವರ ಪಾತ್ರವನ್ನು ಅದ್ಭುತವಾಗಿ ಮಾಡುತ್ತಿದ್ದರು. ಮಹಾದೇವಯ್ಯ ರಚನೆಯ ‘ನಾಯಿಗಳಿವೆ ಎಚ್ಚರಿಕೆ’ ನಾಟಕದಲ್ಲಿ ವಿಲನ್ ಕಮ್ ಕಾಮಿಡಿ ಪಾತ್ರ ಬಳ್ಳಾರಿ ನಾಗ. ಕಣ್ಣಿಗೆ ಕಟ್ಟಿದ ಪಾತ್ರ ಅವರದು. ನಮ್ಮ ಕಂಪೆನಿಯಲ್ಲಿ 12 ವರ್ಷಗಳವರೆಗೆ ಇದ್ದರು. ಮಹಾದೇವ ಹೊಸೂರು ಅವರ ರಚನೆಯ ‘ಗಡಿಗಿ ಜ್ವಾಕಿ ತಂಗಿ’ ನಾಟಕದಲ್ಲಿ ಇಮಾಂಸಾಹೇಬ್ ಪಾತ್ರವನ್ನು ಬಹಳ ಅದ್ಭುತವಾಗಿ ಖಾಜಾಸಾಬ್ ನಿರ್ವಹಿಸಿದರು. ಇಡೀ ನಾಟಕವನ್ನು ತಮ್ಮ ಪಾತ್ರದ ಮೂಲಕ ತೂಗಿಸಿಕೊಂಡು ಹೋಗುತ್ತಿದ್ದರು’’ ಎನ್ನುವ ವಿವರಣೆ ಶೇಕ್ ಮಾಸ್ತರರದು.
ಶ್ರೀ ಕುಮಾರೇಶ್ವರ ಕೃಪಾ ಪೋಷಿತ ಪಂಡಿತ ಪಂಚಾಕ್ಷರ ಗವಾಯಿಗಳ ನಾಟ್ಯ ಸಂಘವನ್ನು ಮುನ್ನಡೆಸಿಕೊಂಡು ಹೊರಟಿರುವ ಮಹಾದೇವ ಹೊಸೂರು ಅವರು ‘‘ಐದು ವರ್ಷಗಳಿಂದ ನಮ್ಮ ಕಂಪೆನಿಯಲ್ಲಿದ್ದರು. ಎಲ್ಲ ತರಹದ ಪಾತ್ರಗಳನ್ನು ಮಾಡಿದರು. ಯಾವುದೇ ಪಾತ್ರ ಕೊಟ್ಟರೂ ಮನಸಾರೆ, ನಿಷ್ಠೆಯಿಂದ ಮಾಡುತ್ತಿದ್ದರು. ಇಷ್ಟಪಟ್ಟು ಪಾತ್ರ ಕಲಿತು, ಜೀವ ತುಂಬುತ್ತಿದ್ದರು. ‘ಹೇಮರಡ್ಡಿ ಮಲ್ಲಮ್ಮ’ ನಾಟಕದಲ್ಲಿ ವೇಮಣ್ಣ, ‘ಅಕ್ಕಮಹಾದೇವಿ’ ನಾಟಕದಲ್ಲಿ ಕೌಶಿಕ ಮಹಾರಾಜ ಪಾತ್ರಗಳಿಗೆ ಸೈ ಎನ್ನಿಸಿಕೊಂಡರು. ನಾನೇ ಬರೆದ ‘ಮತ್ತೊಮ್ಮೆ ಬಾ ಮುತ್ತೈದೆಯಾಗಿ’ ನಾಟಕದಲ್ಲಿ ಶಿವಪ್ಪ ಎಂಬ ನಾಯಕಿಯ ತಂದೆಯ ಪಾತ್ರಕ್ಕೆ ಜೀವ ತುಂಬುತ್ತಿದ್ದರು. ಎರಡೇ ಸನ್ನಿವೇಶಗಳಲ್ಲಿ ಪ್ರೇಕ್ಷಕರನ್ನು ಅಳು ತರಿಸುತ್ತಿದ್ದರು. ಇದೇ ನಾಟಕದಲ್ಲಿ ಡಾಕ್ಟರ್ ಸುಧಾಕರ ಪಾತ್ರವನ್ನೂ ಮಾಡುತ್ತಿದ್ದರು. ಎರಡೂ ಪಾತ್ರಗಳು ಭಿನ್ನ. ಅವರು ಬಹಳ ಚೆಂದಾಗಿ ಪಾತ್ರ ಮಾಡೋರು. ಶಿವಪ್ಪನೇ ಬೇರೆ, ಡಾಕ್ಟರ್ ಬೇರೆ ಎಂದು ಪ್ರೇಕ್ಷಕರು ತಿಳಿದು ಕೊಳ್ಳುತ್ತಿದ್ದರು. ಅವರ ಹಾಗೆ ಜೀವ ತುಂಬಿ ಪಾತ್ರ ಮಾಡೋರು ಅಪರೂಪ. ನನ್ನದೇ ಇನ್ನೊಂದು ನಾಟಕ ‘ಗಡಿಗಿ ಜ್ವಾಕಿ ತಂಗಿ’ ನಾಟಕದಲ್ಲಿ ಇಮಾಂಸಾಹೇಬ್ ಪಾತ್ರವನ್ನು ಅದ್ಭುತವಾಗಿ, ಮನ ಮುಟ್ಟುವ ಹಾಗೆ ಮಾಡುತ್ತಿದ್ದರು. ಅವರ ಹಾಗೆ ಪಾತ್ರ ಮಾಡೋರು ಎಲ್ಲಿ ಸಿಗ್ತಾರ?’’ ಎಂದು ಬೇಸರ ವ್ಯಕ್ತಪಡಿಸಿದರು.
ರಂಗದ ಮೇಲಷ್ಟೇ ಅಲ್ಲ, ಬದುಕಿನಲ್ಲೂ ಶಿಸ್ತು ರೂಢಿಸಿ ಕೊಂಡಿದ್ದ ಖಾಜಾಸಾಬ್ ಬಾಗಲಕೋಟೆ ಜಿಲ್ಲೆಯ ಇಲಕಲ್ಲದಲ್ಲಿ ಮನೆ ಕಟ್ಟಿಸಿದರು, ಮಕ್ಕಳ ಮದುವೆ ನೆರವೇರಿಸಿದರು. ‘ರಂಗಭೂಮಿ ಎಲ್ಲಾ ಕೊಟ್ಟಿದೆ’ ಎಂದೇ ಸದಾ ಸ್ಮರಿಸುತ್ತಿದ್ದ ಅವರು 2018-19ನೇ ಸಾಲಿನ ಕರ್ನಾಟಕ ನಾಟಕ ಅಕಾಡಮಿಯ ಪ್ರಶಸ್ತಿ ಪುರಸ್ಕತರಾಗಿದ್ದರು. ಒಳ್ಳೆಯ ಕಲಾವಿದರಾಗಿದ್ದ ಅವರು ಇನ್ನಷ್ಟು ವರ್ಷ ಇರಬೇಕಿತ್ತು.