ಸಾಳುಂಕೆ ಸ್ಮರಿಸದ ನಾಟಕ ಕಂಪೆನಿಗಳು
ಈಗಲೂ ಸಾಳುಂಕೆ ಅವರ ನಾಟಕಗಳನ್ನು ಆಡದ ಕಂಪೆನಿಗಳೇ ಇಲ್ಲ. ಆದರೆ ಕೆ.ಎನ್. ಸಾಳುಂಕೆ ಅವರ ಹೆಸರನ್ನು ಹಾಕದೆ, ಅವರ ನಾಟಕಗಳನ್ನು ಕಂಪೆನಿಗಳು ಆಡುತ್ತಿವೆ. ಮುಖ್ಯವಾಗಿ ಅವರ ನಾಟಕದ ಹೆಸರುಗಳನ್ನೇ ಬದಲಾಯಿಸಿ ಆಡುತ್ತಿವೆ.
42ನೇ ವಯಸ್ಸಿಗೇ ತೀರಿಕೊಂಡ ಕವಿ (ವೃತ್ತಿ ರಂಗಭೂಮಿಯಲ್ಲಿ ನಾಟಕಕಾರರಿಗೆ ಕವಿಗಳೆನ್ನುತ್ತಾರೆ) ಕೆ.ಎನ್. ಸಾಳುಂಕೆ ಅವರ ಅಂತ್ಯಕ್ರಿಯೆಗಾಗಿ ಅವರ ಊರವರೇ ಪಟ್ಟಿ ಅಂದರೆ ದುಡ್ಡು ಕೂಡಿಸಿ ನೆರವೇರಿಸುತ್ತಾರೆ. ಇದು ಅವರ ಬಡತನಕ್ಕೆ ಸಾಕ್ಷಿ. ಉಡಲು, ಉಣ್ಣಲು ಕೊರತೆಯಿದ್ದರೂ ಕಂಪೆನಿ ನಾಟಕಗಳಿದ್ದಲ್ಲಿಗೇ ಹೋಗಿ ಹೊಸ ನಾಟಕ ಕೂಡಿಸಿ ಅಂದರೆ ನಿರ್ದೇಶಿಸಿ ಮತ್ತೊಂದು ಕಂಪೆನಿಗೆ ಹೊರಡುತ್ತಿದ್ದರು. ಹೀಗೆ ಇಡೀ ಬದುಕನ್ನು ರಂಗಭೂಮಿಗೆ ತೇಯ್ದ ಕೇದಾರನಾಥ ನಾರಾಯಣ ಸಾಳುಂಕೆ ಅವರು ಕೆ.ಎನ್.ಸಾಳುಂಕೆ ಎಂದೇ ಪ್ರಸಿದ್ಧರು. 1936ರಲ್ಲಿ ಶಿವರಾತ್ರಿಯಂದು ವಿಜಾಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಗುಣದಾಳದಲ್ಲಿ ಜನಿಸಿದ ಅವರು ಬದುಕಿದ್ದರೆ ಇಂದು 88 ವರ್ಷ ವಯಸ್ಸು ಪೂರೈಸಿ 89ನೇ ವಯಸ್ಸಿಗೆ ಕಾಲಿಡುತ್ತಿದ್ದರು. ಆದರೆ ಅವರ ಪತ್ನಿ ಪ್ರಮೀಳಾ ಅವರ ನಿಧನದ ನಂತರ ಕುಡಿತದ ಚಟಕ್ಕೆ ಬಿದ್ದ ಪರಿಣಾಮ ಸಣ್ಣ ವಯಸ್ಸಿನಲ್ಲಿಯೇ ಇನ್ನಿಲ್ಲವಾದರು. ಅವರ ಅಂತ್ಯಕ್ರಿಯೆ ದಿನವೂ ನಾಟಕವಾಡಿದ ಕಂಪೆನಿಗಳು ದುಡ್ಡು ಸಂಗ್ರಹಿಸಿ ಕೊಡಬಹುದಿತ್ತು. ಆಮೇಲೂ ಅವರ ಕುಟುಂಬಗಳಿಗೆ ನೆರವಾಗಬಹುದಿತ್ತು. ಆದರೆ ಆಗಲಿಲ್ಲ; ಈಗಲೂ ಸಾಳುಂಕೆ ಅವರ ನಾಟಕಗಳನ್ನು ಆಡದ ಕಂಪೆನಿಗಳೇ ಇಲ್ಲ. ಆದರೆ ಕೆ.ಎನ್. ಸಾಳುಂಕೆ ಅವರ ಹೆಸರನ್ನು ಹಾಕದೆ, ಅವರ ನಾಟಕಗಳನ್ನು ಕಂಪೆನಿಗಳು ಆಡುತ್ತಿವೆ. ಮುಖ್ಯವಾಗಿ ಅವರ ನಾಟಕದ ಹೆಸರುಗಳನ್ನೇ ಕಂಪೆನಿಗಳು ಬದಲಾಯಿಸಿ ಆಡುತ್ತಿವೆ. ಇದಕ್ಕೆ ಕಂಪೆನಿಗಳು ಕೊಡುವ ಕಾರಣವೆಂದರೆ; ಹಳೆಯ ಮಾದರಿಯ ನಾಟಕಗಳೆಂದು, ಹೊಸ ಬಗೆಯ ಹಾಸ್ಯದ, ಈಗಿನ ಟ್ರೆಂಡಿಗೆ ಅನುಗುಣವಾಗಿ ಅವರ ನಾಟಕಗಳ ಹೆಸರುಗಳನ್ನು ಬದಲಾಯಿಸಿ ಆಡುವುದು ಸಾಮಾನ್ಯವಾಗುತ್ತಿದೆ. ಆದರೆ ಅವರ ಕುಟುಂಬಗಳಿಗೂ ತಿಳಿಸದೆ ನಾಟಕ ಆಡುತ್ತಿವೆ. ಇನ್ನು ನಾಟಕದ ಸಂಭಾವನೆ ಕೊಡುವುದು ದೂರದ ಮಾತು.
ರಂಗಭೂಮಿಗೆ ಸಾಳುಂಕೆ ಎಷ್ಟೊಂದು ಬದ್ಧರಾಗಿದ್ದರೆಂದರೆ, ಅವರ ಪತ್ನಿ ಪ್ರಮೀಳಾ ಅವರು ಕ್ಯಾನ್ಸರ್ನಿಂದಾಗಿ ಮಹಾರಾಷ್ಟ್ರದ ಮೀರಜ್ನ ಮಿಷನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಆದರೆ ಔಷಧಿಗಾಗಿ ದುಡ್ಡಿನ ಅಗತ್ಯವಿರುತ್ತದೆ. ಇದಕ್ಕಾಗಿ ಅವರು ಸಾಳುಂಕೆ ಅವರಿಗೆ ಪತ್ರ ಬರೆಯುತ್ತಾರೆ. ಇದಕ್ಕೆ ಉತ್ತರವಾಗಿ ಸಾಳುಂಕೆ ಅವರು ಬರೆದ ಪತ್ರ; ಕಂಪೆನಿಯಲ್ಲಿದ್ದ ಕಲಾವಿದರು ಕೈ ಕೊಟ್ಟ ಕಾರಣ ಅನಿವಾರ್ಯವಾಗಿ ಪಾತ್ರ ಮಾಡಬೇಕಾಗಿದೆ. ಸಂಘಕ್ಕೆ ತೊಂದರೆಯ ಕಾಲ. ವೈಯಕ್ತಿಕ ತೊಂದರೆಗಳು ಏನೇ ಇದ್ದರೂ ಸಂಘದ ಕೆಲಸ ಹೆಚ್ಚಿನದು. ಪಾತ್ರ ಮಾಡುವವರು ಸಿಕ್ಕರೆ ತಕ್ಷಣ ಹೊರಡುವೆ ಎಂದು. ಹೀಗೆ 1969ರಲ್ಲಿ ಬರೆದ ಪತ್ರವಿದು. 1971ರಲ್ಲಿ ಪ್ರಮೀಳಾ ಅವರು ನಿಧನರಾಗುವ ಮೂಲಕ ತಮ್ಮ ಮಕ್ಕಳನ್ನು ಅನಾಥರನ್ನಾಗಿಸಿದರು. ಜೊತೆಗೆ ಎಂದೂ ಮದ್ಯ ಮುಟ್ಟದ ಸಾಳುಂಕೆ ಅದರ ದಾಸರಾದರು.
ಅವರ ನಾಟಕ ಪ್ರದರ್ಶನಕ್ಕೆ ಕೊಡುತ್ತಿದ್ದ ಪಾಸುಗಳು
ಇದಕ್ಕೂ ಮೊದಲು ಅವರು ತಮ್ಮ ಸಂಸಾರವನ್ನು ಕಟ್ಟಿಕೊಂಡು ಕಂಪೆನಿಗಳಿಂದ ಕಂಪೆನಿಗೆ ಅಲೆದರು. ಕಂಪೆನಿಗಳ ಮಾಲಕರಿಗೆ, ಕಲಾವಿದರಿಗೆ ಕಂಪೆನಿಯಲ್ಲಿ ಉಳಿಯಲು ವ್ಯವಸ್ಥೆ ಇರುತ್ತದೆ. ಆದರೆ ನಾಟಕ ನಿರ್ದೇಶಿಸುವ ಸಾಳುಂಕೆ ಅವರಿಗೆ ಉಳಿದುಕೊಳ್ಳಲು ಸರಿಯಾದ ವ್ಯವಸ್ಥೆ ಇರಲಿಲ್ಲ. ತಿಂಗಳೊಂದರಲ್ಲಿ ಕಂಪೆನಿಯಿಂದ ಕಂಪೆನಿಗಳಿಗೆ ಅಲೆಯುತ್ತಿದ್ದ ಅವರು ಸಂಸಾರವನ್ನು ಬಿಟ್ಟು ತೆರಳಬೇಕಾಗಿತ್ತು. ಟ್ರಂಕಿನ ಮೇಲೆ ಮಲಗಿಸುತ್ತಿದ್ದರು ಎಂದು ಅವರ ಪುತ್ರ ಬಾಲಕೃಷ್ಣ ನೆನಪಿಸಿಕೊಳ್ಳುತ್ತಾರೆ. ಎಸೆಸೆಲ್ಸಿ ಪರೀಕ್ಷೆ ಮುಗಿಸಿದ್ದ ಬಾಲಕೃಷ್ಣ ಅವರು ತಮ್ಮ ತಂದೆಯ ಜೊತೆಗೆ ವಿಜಾಪುರದಿಂದ ಚಾಮರಾಜನಗರಕ್ಕೆ ಹೊರಡುತ್ತಾರೆ. ಆದರೆ ಬಾಗಲಕೋಟೆ ತಲುಪುವುಷ್ಟರಲ್ಲಿ ಸಾಳುಂಕೆ ಅವರಿಗೆ ಅನಾರೋಗ್ಯ ಹೆಚ್ಚುತ್ತದೆ. ತಿಂಗಳವರೆಗೆ ಗದಗ, ಹುಬ್ಬಳ್ಳಿ, ನ್ಯಾಮತಿ, ಸವಳಂಗ, ದಾವಣಗೆರೆ ಮೊದಲಾದ ಕಡೆ ಕಂಪೆನಿಗಳಿಂದ ಕಂಪೆನಿಗೆ ಅಲೆಯುತ್ತಾರೆ. ‘‘ಚಹಾ ಕುಡಿಯಾಕೂ ರೊಕ್ಕಾ ಇರಲಿಲ್ರಿ. ಹೊಸ ಪೈಜಾಮ ಹೊಲಿಸಿಕೊಳ್ಳಾಕ ಖರೀದಿ ಮಾಡಿದ್ದ ಬಟ್ಟೆಯನ್ನ ತಳ್ಳುಗಾಡಿಯವನಿಗೆ ಸ್ವಲ್ಪ ರೊಕ್ಕಕ್ಕ ಮಾರಿ ಚಹಾ ಕುಡದ್ವಿ’’ ಎಂದು ಬಾಲಕೃಷ್ಣ ಹೇಳುವಾಗ ಅವರ ಧ್ವನಿ ಗದ್ಗದಿತವಾಗುತ್ತದೆ. ಅವರು ಗುಣದಾಳ ತಲುಪುವಷ್ಟರಲಿ ಸಾಳುಂಕೆ ಅವರ ಆರೋಗ್ಯ ಬಿಗಡಾಯಿಸಿತ್ತು. ಅವರನ್ನು ಹೇಗೋ ಗುಣಪಡಿಸಿಕೊಂಡು ಗುಣದಾಳಿಗೆ ಕರೆದುಕೊಂಡು ಹೋಗಬೇಕೆಂಬ ಬಾಲಕೃಷ್ಣರ ಬಯಕೆ ಈಡೇರುವುದಿಲ್ಲ. ಸಾಳುಂಕೆ ಅವರು 1978ರ ಡಿಸೆಂಬರ್ 11ರಂದು ನಿಧನರಾದರು.
ಇಂಥ ಸಾಳುಂಕೆ ಅವರು ಗುಣದಾಳದಲ್ಲಿ ಏಳನೆಯ ತರಗತಿಯವರೆಗೆ ಮಾತ್ರ ಓದಿದ ಅವರು, ಮತ್ತೆ ಓದಲಿಲ್ಲ. ಕಲಿಯುವಾಗಲೇ ತನ್ನ ಗೆಳೆಯರನ್ನು ಕೂಡಿಸಿಕೊಂಡು ಕಥೆಗಳನ್ನು ಹೇಳಿದರು. ಹಕ್ಕಿಗಳಿಗೆ ಬಣ್ಣ ಬಳಿದವನು ತಾನೇ ಎಂದು ತನ್ನ ಅವ್ವನಿಗೆ ಹೇಳಿ ತಿನ್ನಲು ಏನಾದರೂ ತಿಂಡಿ ಪಡೆಯುತ್ತಿದ್ದ ಕೇದಾರನಾಥ, ಕೊಳಲು ನುಡಿಸಲು ಕಲಿತರು. ಇದ್ದ ಒಬ್ಬನೇ ಮಗನಿಗೆ ವಿದ್ಯೆ ಹತ್ತಲಿಲ್ಲವೆಂದು ಅವರ ತಂದೆ ನಾರಾಯಣ ಹಾಗೂ ತಾಯಿ ಕಾಶೀಬಾಯಿ ಅವರಿಗೆ ಚಿಂತೆಯಾಯಿತು. ಇರುವ ಸ್ವಲ್ಪ ಜಮೀನಿನ ಒಕ್ಕಲುತನ ಮಾಡಲೆಂಬ ಹೆತ್ತವರ ಬಯಕೆಯಂತೆ ಹೊಲದಲ್ಲಿನ ಕುಸುಬಿ, ಜೋಳ ಕಿತ್ತಲು ಹಚ್ಚಿದರೆ ಕೈ ತುಂಬಾ ಗುಳ್ಳೆಗಳೆದ್ದವು. ಇದು ಬೇಡವೆಂದು ಕಿರಾಣಿ ಅಂಗಡಿ ಇಟ್ಟುಕೊಟ್ಟರೆ ತಿಂಗಳೊಪ್ಪತ್ತಿನಲ್ಲಿ ಮುಚ್ಚಿತು. ಏಕೆಂದರೆ ಕಂಡವರಿಗೆಲ್ಲ ಉದ್ರಿ ಕೊಟ್ಟ ಪರಿಣಾಮ ಅಂಗಡಿಯಲ್ಲಿದ್ದ ವಸ್ತುಗಳೆಲ್ಲ ಖಾಲಿಯಾದವು. ಬಳಿಕ ಚಹಾದಂಗಡಿ ತೆರೆದರೆ, ಅವರ ಗೆಳೆಯರು ದುರುಪಯೋಗಪಡಿಸಿಕೊಂಡರು. ಇದೆಲ್ಲದರ ನಡುವೆ ಅವರ ಓದುವ ಹುಚ್ಚು ಹೆಚ್ಚಿತು. ಡಿವಿಜಿ ಅವರ ಮಂಕುತಿಮ್ಮನ ಕಗ್ಗ, ಕಂದಗಲ್ ಹನುಮಂತರಾಯರ ಹಾಗೂ ಟಿ.ಪಿ.ಕೈಲಾಸಂ ಅವರ ನಾಟಕಗಳು, ಬೀಚಿ ಅವರ ಸಾಹಿತ್ಯ, ವಚನಗಳು, ರಾಮಾಯಣ-ಮಹಾಭಾರತ ಪ್ರಭಾವ ಬೀರಿದವು. ಇದರ ಪರಿಣಾಮ ‘ಪ್ರೇಮ ವಿವಾಹ’ ಅರ್ಥಾತ್ ‘ಗಂಗಾಗೌರಿ’ ನಾಟಕ ರಚಿಸಿದರು. ನಂತರ ತಮ್ಮೂರಿನ ಗೆಳೆಯರನ್ನು ಸೇರಿಸಿಕೊಂಡು ಲೋಕಪ್ರಿಯ ನಾಟ್ಯ ಸಂಘ ಕಟ್ಟಿಕೊಂಡು ತಮ್ಮದೇ ನಾಟಕ ಆಡಿಸುತ್ತಾರೆ. ಊರವರೆಲ್ಲ ಮೆಚ್ಚುಗೆ ವ್ಯಕ್ತಪಡಿಸಿದರೆ, ಅವರ ಗುರುಗಳಾದ ಗೋ.ಬಾ.ನಿಡೋಣಿ ಹಾಗೂ ರಾ.ಮ.ಮಠಪತಿ ಅವರು ಪ್ರೋತ್ಸಾಹಿಸುತ್ತಾರೆ. ಹೀಗಿದ್ದಾಗ ಜಮಖಂಡಿಯ ಪಟವರ್ಧನ್ ಸಂಸ್ಥಾನಿಕರು ನಾಟಕ ಆಡಲು ಆಹ್ವಾನಿಸುತ್ತಾರೆ. ಮುಂದೆ ನಾಟಕಕಾರ ಪಿ.ಬಿ.ಧುತ್ತರಗಿ ಅವರನ್ನು ಭೇಟಿಯಾಗಿ ತಮ್ಮ ಮೊದಲ ನಾಟಕವನ್ನು ತೋರಿಸಿ ಸಲಹೆ ಪಡೆಯುತ್ತಾರೆ. ಅಲ್ಲಿಂದ ನಾಟಕಗಳನ್ನು ರಚಿಸುವುದನ್ನೇ ಉದ್ಯೋಗ ಮಾಡಿಕೊಂಡ ಅವರು, ಪಡೆಸೂರಿನ ಶ್ರೀ ಸಿದ್ಧಲಿಂಗೇಶ್ವರ ನಾಟ್ಯ ಸಂಘವನ್ನು ಆಶ್ರಯಿಸುತ್ತಾರೆ. ಇದರ ಸಂಘದೊಡೆಯರಾದ ಬಿ.ಬಸವರಾಜು ನೆರವು ನೀಡುತ್ತಾರೆ. ವಿಜಾಪುರದ ಬಾರಾ ಕಮಾನಿನ ಹತ್ತಿರ ಸಿದ್ಧಲಿಂಗೇಶ್ವರ ನಾಟ್ಯ ಸಂಘವು ಹಾಕಿದ ಥಿಯೇಟರಿನಲ್ಲಿ ಸಾಳುಂಕೆ ಅವರು ಬರೆದ ‘ಹೊಸಬಾಳು’ ನಾಟಕ ಆರಂಭವಾಗುತ್ತದೆ. ನಂತರ ಸಾಳುಂಕೆ ರಚಿಸಿದ ‘ವಿಷಕನ್ಯೆ’, ‘ಭಕ್ತ ಮಾರ್ಕಂಡೇಯ’, ‘ಅನ್ಯಾಯ’, ‘ಬೊಂಬಾಯಿ’, ‘ತಂಗಿಯ ಮನೆ’, ‘ಕಲಾಕಾರ’, ‘ಋತು ಕೋಗಿಲೆ’ ನಾಟಕಗಳನ್ನು ಸಿದ್ಧಲಿಂಗೇಶ್ವರ ನಾಟ್ಯ ಸಂಘವು ರಾಜ್ಯದ ವಿವಿಧೆಡೆ ಆಡುತ್ತದೆ. ಆಮೇಲೆ ಅರ್ಜುನಸಾ ನಾಕೋಡ ಅವರು ತಮ್ಮ ಜಗದಂಬಾ ನಾಟ್ಯ ಸಂಘದಿಂದ ಸಾಳುಂಕೆ ಅವರ ನಾಟಕಗಳನ್ನು ಪ್ರದರ್ಶಿಸುತ್ತಾರೆ. ಹೀಗಿದ್ದಾಗ ಬಾಗಲಕೋಟೆಯ ಜಿ.ಎಸ್.ಚೆನ್ನಪ್ಪ ಆ್ಯಂಡ್ ಬುಕ್ ಸೆಲ್ಲರ್ಸ್, ಸಾಳುಂಕೆ ಅವರ ತಂಗಿಯ ಮನೆ ನಾಟಕವನ್ನು ಪ್ರಕಟಿಸುತ್ತಾರೆ.
ಸಾಳುಂಕೆ ಅವರ ರಂಗಪಯಣ ಮುಂದುವರಿದು ಶ್ರೀ ಕುಮಾರ ವಿಜಯ ನಾಟ್ಯ ಸಂಘ ಚಿತ್ತರಗಿ, ಶ್ರೀ ರೇಣುಕಾ ನಾಟ್ಯ ಸಂಘ ಬೈಲಹೊಂಗಲ, ಶ್ರೀ ವೀರೇಶ್ವರ ನಾಟ್ಯ ಸಂಘ ಗದಗ, ಭಾರತಿ ನಾಟ್ಯ ಸಂಘ ಸೂಡಿ, ಶ್ರೀ ಸಂಗಮೇಶ್ವರ ನಾಟ್ಯ ಸಂಘ ಗುಡಗೇರಿ, ರಾಜರಾಜೇಶ್ವರಿ ನಾಟ್ಯ ಸಂಘ ಇಲಕಲ್ಲ, ವಿಜಯಕುಮಾರ ನಾಟ್ಯ ಸಂಘ ನರೇಗಲ್, ಶ್ರೀ ಹುಚ್ಚೇಶ್ವರ ನಾಟ್ಯ ಸಂಘ ಕಮತಗಿ, ಕೆಬಿಆರ್ ಡ್ರಾಮಾ ಕಂಪೆನಿ ದಾವಣಗೆರೆ ಮೊದಲಾದ ಕಂಪೆನಿಗಳಿಗೆ ‘ವಿಷಕನ್ಯೆ’, ‘ಭಕ್ತ ಮಾರ್ಕಂಡೇಯ’, ‘ತಂಗಿಯ ಮನೆ’, ‘ಹೊಸಬಾಳು’, ‘ಮನೆ ಕಟ್ಟಿ ನೋಡು’, ‘ದಾರಿ ದೀಪ’, ‘ಕೊಲೆಗಾರ ಯಾರು?’, ‘ಹುಚ್ಚ’, ‘ಹೂವಿನ ಅಂಗಡಿ’, ‘ಬದುಕು ಬಂಗಾರವಾಯಿತು’, ‘ತಾಳಿಯ ತಕರಾರು’ ಇದನ್ನು ‘ಕಿವುಡ ಮಾಡಿದ ಕಿತಾಪತಿ’ ನಾಟಕವಾಗಿ ಆಡಲಾಗುತ್ತಿದೆ. ‘ನೀನೂ ಸಾಹುಕಾರನಾಗು’, ‘ಗುಣ ನೋಡಿ ಹೆಣ್ಣು ಕೊಡು’, ‘ದೇವರಿಗೆ ನೆನಪಿಲ್ಲ’, ‘ಕಣ್ಣಿದ್ದರೂ ಬುದ್ಧಿ ಬೇಕು’, ‘ಭಾಗ್ಯ ಬಂತು ಬುದ್ಧಿ ಹೋಯ್ತು’, ‘ವರ ನೋಡಿ ಹೆಣ್ಣು ಕೊಡು’, ‘ದೇವರೇ ಗತಿ’, ‘ಒಲಿದು ಬಂದ ಹೆಂಡತಿ’, ‘ಬೆನ್ನತ್ತಿದ ಭಾಗ್ಯ’, ‘ನಕಲಿ ಸಂಪನ್ನರು’, ‘ರಾಜ ಮೆಚ್ಚಿದ ದಾಸಿ’, ‘ಅನಿವಾರ್ಯ ಪತಿವ್ರತೆ’, ಕಾಲು ಕೆದರಿದ ಹೆಣ್ಣು ಹೀಗೆ ಒಟ್ಟು ಸಾಮಾಜಿಕ, ಪತ್ತೇದಾರಿ ಸೇರಿದಂತೆ 34 ನಾಟಕಗಳನ್ನು ಅವರು ರಚಿಸಿದರು.
ಇವುಗಳಲ್ಲಿ ‘ಬದುಕು ಬಂಗಾರವಾಯಿತು’ ಹಾಗೂ ‘ಗುಣ ನೋಡಿ ಹೆಣ್ಣು ಕೊಡು’ ನಾಟಕಗಳು ಸಿನೆಮಾಗಳಾಗಿ ಜನಪ್ರಿಯವಾಗಿವೆ. ಅಲ್ಲದೆ ‘ಬದುಕು ಬಂಗಾರವಾಯಿತು’, ‘ಹೂವಿನ ಅಂಗಡಿ’ ನಾಟಕಗಳು ವಿಜಾಪುರದಲ್ಲಿ ದಾಖಲೆ ಪ್ರದರ್ಶನ ಕಂಡಿವೆ. ಹುಬ್ಬಳ್ಳಿಯಲ್ಲಿ ‘ವರ ನೋಡಿ ಹೆಣ್ಣು ಕೊಡು’ ನಾಟಕವು 450ಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ. ‘ಕಾಲು ಕೆದರಿದ ಹೆಣ್ಣು’ ನಾಟಕವು ಬೆಂಗಳೂರಿನ ಗುಬ್ಬಿ ವೀರಣ್ಣ ರಂಗಮಮಂದಿರದಲ್ಲಿ 350ಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ. ಸುವರ್ಣ ಕರ್ನಾಟಕ ವರ್ಷಾಚರಣೆಯ ಅಂಗವಾಗಿ ಕರ್ನಾಟಕ ನಾಟಕ ಅಕಾಡಮಿಯು ‘ವರ ನೋಡಿ ಹೆಣ್ಣು ಕೊಡು’ ನಾಟಕವನ್ನು ಪ್ರಕಟಿಸಿದೆ.
ಅವರಿಗೆ ಅಂಜನಾ, ಬಾಲಕೃಷ್ಣ, ಮಂಜುನಾಥ ಹಾಗೂ ನಾರಾಯಣ ಮಕ್ಕಳು. ಇವರಲ್ಲಿ ಬಾಲಕೃಷ್ಣ ಅವರು ಗುಣದಾಳದ ನ್ಯೂ ಹೈಸ್ಕೂಲಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ನಿವೃತ್ತರಾದರು. ವಿದ್ಯಾರ್ಥಿಯಾಗಿದ್ದಾಗಲೇ ನಾಟಕಗಳಲ್ಲಿ ಅಭಿನಯಿಸುವುದರ ಜೊತೆಗೆ ನಾಟಕ ರಚನೆಯಲ್ಲೂ ತೊಡಗಿಕೊಂಡಿದ್ದಾರೆ. ಬೇಸಿಗೆ ರಜೆಯಲ್ಲಿ ರಂಗ ತರಬೇತಿ ನಡೆಸುತ್ತಾರೆ. ಕೆ.ಎನ್.ಸಾಳುಂಕೆ ಅಭಿಮಾನಿಗಳ ಸಂಘ ಕಟ್ಟಿಕೊಂಡಿರುವ ಅವರು, ಸಾಳುಂಕೆ ಅವರ ನಾಟಕಗಳನ್ನು ಬಾಲಕೃಷ್ಣ ನಿರ್ದೇಶಿಸುತ್ತಾರೆ ಜೊತೆಗೆ ವಿಜಾಪುರ ಹತ್ತಿರದ ಚಿಕ್ಕಲಕಿಯಲ್ಲಿ ನೇತಾಜಿ ಸುಭಾಷ್‌ಚಂದ್ರ ಬೋಸ್ ಪ್ರಾಥಮಿಕ ಶಾಲೆ ಕಟ್ಟಿದ್ದು, ತಮ್ಮ ಮಕ್ಕಳಾದ ಕೇದಾರನಾಥ ಹಾಗೂ ಅಕ್ಷರ ಅವರೊಂದಿಗೆ ನಡೆಸುತ್ತಿದ್ದಾರೆ. ಹೊಸ ಕೊಠಡಿಗಳನ್ನು ಕಟ್ಟಬೇಕೆಂದಿರುವ ಅವರು, ಬಯಲು ರಂಗಮಂದಿರ ಕಟ್ಟಿ ಅದಕ್ಕೆ ಕೆ.ಎನ್.ಸಾಳುಂಕೆ ಅವರ ಹೆಸರಿಡಲು ನಿರ್ಧರಿಸಿದ್ದಾರೆ. ಆದರೆ ನಾಟಕ ಕಂಪೆನಿಗಳು ಸಾಳುಂಕೆ ಅವರನ್ನು ಮರೆತವೆ?