ಕಲಾಕ್ಷೇತ್ರದ ಕ್ಯಾಂಟೀನಿಗೆ ಕಾರಂತ ವಿದಾಯ
ಎಲ್ಲ ವಯೋಮಾನದವರೊಂದಿಗೆ ಬೆರೆಯುವ, ಎಲ್ಲರ ಕಷ್ಟಸುಖಗಳನ್ನು ಕೇಳುವ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಗುಟ್ಟಿನ ಸಂಗತಿಗಳನ್ನು ಮೆಲ್ಲಗೆ ತಿಳಿಸುವ ಕಾರಂತರೆಂದರೆ ಎಲ್ಲರಿಗೂ ಅಚ್ಚುಮೆಚ್ಚು. ಇಂಥ ಕಾರಂತರು ಇದೇ ತಿಂಗಳ 26ರಿಂದ ಕ್ಯಾಂಟೀನ್ ಬಂದ್ ಮಾಡಲಿದ್ದಾರೆ. ಹೀಗೆಂದು ತಮ್ಮ ಕ್ಯಾಂಟೀನ್ ಆವರಣದಲ್ಲಿ ಬ್ಯಾನರ್ ಕೂಡಾ ಹಾಕಿದ್ದಾರೆ.
‘ಎಲ್ಲಿದ್ದೀಯಾ?’
‘ರವೀಂದ್ರ ಕಲಾಕ್ಷೇತ್ರದಲ್ಲಿ’
‘ಅಲ್ಲಿ ಎಲ್ಲಿ?’
‘ಕಾರಂತರ ಕ್ಯಾಂಟೀನ್’
ಹೀಗೆ ಗೆಳೆಯರ, ಗೆಳತಿಯರ ನಡುವೆ ಸಾಮಾನ್ಯವಾದ ಸಂಭಾಷಣೆ. ಉತ್ತರ ಕರ್ನಾಟಕ, ಹೈದ್ರಾಬಾದ್ ಕರ್ನಾಟಕ, ಕರಾವಳಿ, ಮೈಸೂರು ಕಡೆಯಿಂದ ಯಾರೇ ಬಂದರೂ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿರುವ ಕಾರಂತರ ಕ್ಯಾಂಟೀನಿನಲ್ಲಿ ತಿಂಡಿ ತಿಂದೋ ಇಲ್ಲವೆ ಕಾಫಿ/ಚಹಾ ಸೇವಿಸಿಯೇ ಮುಂದುವರಿಯುವುದು ಅಸಂಖ್ಯರ ರೂಢಿ. ಎಲ್ಲರಿಗೂ ಅದು ಅಡ್ಡೆ. ಬೇರೆಡೆ ಚಹಾ-ಕಾಫಿ ಕುಡಿದಿದ್ದರೂ ಕಾರಂತರ ಕ್ಯಾಂಟೀನಿಗೆ ಹೋಗಿ ಅವರನ್ನು ಮಾತನಾಡಿಸಿ, ಚಹಾ-ಕಾಫಿ ಕುಡಿದು ಮುಂದುವರಿಯುವುದು ಅನೇಕರಿಗೆ ಅಭ್ಯಾಸ. ದೂರದ ಊರುಗಳಿಂದ ರವೀಂದ್ರ ಕಲಾಕ್ಷೇತ್ರಕ್ಕೆ ಬಂದ ರಂಗಕರ್ಮಿಗಳು, ಲೇಖಕರು, ಸಂಘಟಕರು ಯಾರೇ ಬಂದರೂ ಬೆಳಗ್ಗೆಯಿರಲಿ, ಸಂಜೆಯಿರಲಿ ತಿಂಡಿ ತಿನ್ನುವುದು ಕಡ್ಡಾಯ. ಮಧ್ಯಾಹ್ನವಾದರೆ ಊಟಕ್ಕೆ ಸೈ ಎನ್ನುತ್ತಾರೆ. ಶುಚಿ-ರುಚಿ ಜೊತೆಗೆ ಕಡಿಮೆ ಬೆಲೆ ಕಾರಣಗಳ ಜೊತೆಗೆ ಕಾರಂತರು ವಿಶ್ವಾಸದಿಂದ ಮಾತನಾಡಿಸುತ್ತಾರೆ ಎನ್ನುವ ಕಾರಣ ಹಾಗೂ ಅಲ್ಲಿ ಪರಿಚಿತರು, ಗೆಳೆಯರು ಸಿಗುತ್ತಾರೆನ್ನುವುದು ಬಲವಾದ ಕಾರಣ.
ಎಲ್ಲ ವಯೋಮಾನದವರೊಂದಿಗೆ ಬೆರೆಯುವ, ಎಲ್ಲರ ಕಷ್ಟಸುಖಗಳನ್ನು ಕೇಳುವ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಗುಟ್ಟಿನ ಸಂಗತಿಗಳನ್ನು ಮೆಲ್ಲಗೆ ತಿಳಿಸುವ ಕಾರಂತರೆಂದರೆ ಎಲ್ಲರಿಗೂ ಅಚ್ಚುಮೆಚ್ಚು.
ಇಂಥ ಕಾರಂತರು ಇದೇ ತಿಂಗಳ 26ರಿಂದ ಕ್ಯಾಂಟೀನ್ ಬಂದ್ ಮಾಡಲಿದ್ದಾರೆ. ಹೀಗೆಂದು ತಮ್ಮ ಕ್ಯಾಂಟೀನ್ ಆವರಣದಲ್ಲಿ ಬ್ಯಾನರ್ ಕೂಡಾ ಹಾಕಿದ್ದಾರೆ.
ಕಾರಂತರು ಉಡುಪಿ ಜಿಲ್ಲೆಯ ಸಾಸ್ತಾನದವರು. ಅನಂತಪದ್ಮನಾಭ ಕಾರಂತ ಅವರು ಎ.ಪಿ.ಕಾರಂತರಾದರು. ಸಾಸ್ತಾನದಲ್ಲಿ ಪಿಯುಸಿವರೆಗೆ ಓದಿದ್ದು. ಅವರ ತಂದೆ ಶೇಷಪ್ಪಯ್ಯ ಕಾರಂತ, ತಾಯಿ ವಿಶಾಲಾಕ್ಷಿ ಅವರಿಗೆ ಮೂವರು ಪುತ್ರರು, ಆರು ಪುತ್ರಿಯರು. ಈ ಕಾರಂತರೇ ಹಿರಿಯ ಪುತ್ರ. ಪ್ರಾಥಮಿಕ ಶಾಲೆಯಲ್ಲಿದ್ದಾಗ ಯಕ್ಷಗಾನ ನೋಡುವ ಹುಚ್ಚು. ಪ್ರೌಢಶಾಲೆಯಲ್ಲಿದ್ದಾಗ ವಾರಕ್ಕೆರಡು ಯಕ್ಷಗಾನದ ಪಾಠ. ಅವರಿಗೆ ಹಿಂದಿ ಪಂಡಿತರೂ ಯಕ್ಷಗಾನ ಗುರುಗಳೂ ಆದ ಪಿ.ಶ್ರೀಧರ್ ಹಂದೆ ಯಕ್ಷಗಾನ ಕಲಿಸಿದರು. ಹೀಗೆಯೇ ಪಿಯುಸಿವರೆಗೆ ಯಕ್ಷಗಾನಕ್ಕೆ ಹೆಜ್ಜೆ ಹಾಕುವಾಗ ಅವರ ತಂದೆ, ಯಕ್ಷಗಾನದಲ್ಲೇ ಮುಂದುವರಿದಾನು ಎಂದು ಆತಂಕಪಟ್ಟರು. ಇದರ ಪರಿಣಾಮ ತಮ್ಮ ಊರು ಬಿಟ್ಟು ಬೆಂಗಳೂರಿಗೆ ಕಾಲಿಟ್ಟರು ಕಾರಂತರು. ತಮ್ಮ ಸಂಬಂಧಿಕರ ಹೋಟೆಲಿನಲ್ಲಿ ಕ್ಯಾಷಿಯರ್ ಎಂದು ನಾಲ್ಕು ವರ್ಷಗಳವರೆಗೆ ದುಡಿದು 1985ರ ಜನವರಿ 1ರಂದು ರವೀಂದ್ರ ಕಲಾಕ್ಷೇತ್ರದ ಅಂಗಳದಲ್ಲಿ ಕ್ಯಾಂಟೀನ್ ಆರಂಭಿಸಿದರು. ಅವರ ಸೋದರ ಸದಾನಂದ ಅವರು ಕ್ಯಾಂಟೀನ್ ನೋಡಿಕೊಂಡರೆ, ಈ ಕಾರಂತರು ಮಾಸ್ಟರ್ ಹಿರಣ್ಣಯ್ಯ ಅವರ ‘ಲಂಚಾವತಾರ’ ನಾಟಕದ 150 ಪ್ರಯೋಗಗಳನ್ನು ಸಂಘಟಿಸಿದರು. ಮಾಸ್ಟರ್ ಹಿರಣ್ಣಯ್ಯ ಅವರದೇ ‘ಭ್ರಷ್ಟಾಚಾರ’, ‘ಮಕ್ಮಲ್ ಟೋಪಿ’ ನಾಟಕಗಳನ್ನೂ ಆಡಿಸಿದರು. ಹೀಗೆಯೇ ನಟ ಶಂಕರ್ ನಾಗ್ ಅವರ ‘ನೋಡಿ ಸ್ವಾಮಿ ನಾವಿರೋದೆ ಹೀಗೆ’ ಹಾಗೂ ‘ನಾಗಮಂಡಲ’ ನಾಟಕಗಳ ಉತ್ಸವವನ್ನು ಅಂದರೆ ಎರಡೂ ನಾಟಕಗಳ ಮೂರು ದಿನಗಳ ಪ್ರದರ್ಶನಗಳನ್ನು ರವೀಂದ್ರ ಕಲಾಕ್ಷೇತ್ರದ ಸಂಸ ಬಯಲು ರಂಗಮಂದಿರದಲ್ಲಿ ಆಯೋಜಿಸಿದರು. ಜೂನ್ ತಿಂಗಳಿಂದ ಅಕ್ಟೋಬರ್‌ವರೆಗೆ ಯಕ್ಷಗಾನಗಳನ್ನೂ ಆಡಿಸಿದರು. ಆಗೆಲ್ಲ ಬೆಳಗ್ಗೆಯವರೆಗೂ ಯಕ್ಷಗಾನ ನಡೆಯುತ್ತಿದ್ದುದರಿಂದ ಕ್ಯಾಂಟೀನ್ ಕೂಡಾ ಮುಂಜಾನೆಯವರೆಗೂ ತೆರೆದರು. ‘ಆಗ ವರ್ಷಕ್ಕೆ 127 ಯಕ್ಷಗಾನ ಪ್ರಸಂಗಗಳ ಪ್ರದರ್ಶನಗಳಾಗುತ್ತಿದ್ದವು. ಈಗ 25-30 ಪ್ರದರ್ಶನಗಳು ಮಾತ್ರ’ ಎನ್ನುವ ಬೇಸರ ಕಾರಂತ ಅವರದು.
ಶ್ರೀನಿವಾಸ್ ಜಿ.ಕಪ್ಪಣ್ಣ ಅವರ ನಟರಂಗ ತಂಡದ ‘ತುಘಲಕ್’, ‘ಕಾಕನಕೋಟೆ’ ನಾಟಕಗಳನ್ನು ಆಡಿಸಿದರು. ಡಾ.ಬಿ.ವಿ.ರಾಜಾರಾಂ ಅವರ ಕಲಾಗಂಗೋತ್ರಿ ತಂಡದಿಂದ ’ಮುಖ್ಯಮಂತ್ರಿ’, ನಾಗರಾಜಮೂರ್ತಿ ಅವರ ಪ್ರಯೋಗರಂಗ ತಂಡದಿಂದ ‘ಮಂಟೇಸ್ವಾಮಿ ಕಥಾಪ್ರಸಂಗ’, ನಾಗಾಭರಣ ಅವರ ಬೆನಕ ತಂಡದಿಂದ ‘ಜೋಕುಮಾರಸ್ವಾಮಿ’ ಹಾಗೂ ‘ಸತ್ತವರ ನೆರಳು’ ನಾಟಕಗಳು, ಬಿ.ಜಯಶ್ರೀ ಅವರ ಸ್ಪಂದನ ತಂಡದಿಂದ ‘ಕರಿಮಾಯಿ’, ಪ್ರಭಾತ್ ಕಲಾವಿದರಿಂದ ‘ಸಿಂಡ್ರೆಲಾ’ ಹಾಗೂ ‘ಕೃಷ್ಣ ವೈಜಯಂತಿ’, ಯಶಸ್ವಿ ಕಲಾವಿದರ ‘ಸಂಸಾರ ಸರಿಗಮ’, ಸಿ.ಆರ್.ಸಿಂಹ ಅವರ ವೇದಿಕೆ ತಂಡದಿಂದ ‘ಟಿಪಿಕಲ್ ಟಿ.ಪಿ.ಕೈಲಾಸಂ’, ರಂಗಸಂಪದ ತಂಡದ ಉಮಾಶ್ರೀ ಅವರು ಅಭಿನಯಿಸಿದ ‘ಒಡಲಾಳ’, ಸಮುದಾಯದ ‘ತಾಯಿ’ ಹೀಗೆ ಅವರು ಆಡಿಸಿದ ನಾಟಕಗಳ ಪಟ್ಟಿ ದೊಡ್ಡದಿದೆ. ಹೀಗೆ ನಾಟಕ ಆಡಿಸುತ್ತ, ಕ್ಯಾಂಟೀನ್ ನಡೆಸುತ್ತ ವೈಯಕ್ತಿಕ ಬದುಕನ್ನೂ ಕಟ್ಟಿಕೊಂಡಿದ್ದಾರೆ. ಅವರ ಪತ್ನಿ ರೇಖಾ. ಇಬ್ಬರು ಪುತ್ರಿಯರಾದ ಮೇಘಾ ಹಾಗೂ ವರ್ಷಾ ಸಾಫ್ಟ್‌ವೇರ್ ಇಂಜಿನಿಯರ್‌ಗಳು.
ನಿತ್ಯ ಬೆಳಗ್ಗೆ ಒಂಭತ್ತು ಗಂಟೆಗೆ ಕ್ಯಾಂಟೀನ್ ತೆರೆಯುವ ಕಾರಂತರು ರಾತ್ರಿ ಎಂಟು ಗಂಟೆಯವರೆಗೂ ನಡೆಸುತ್ತಾರೆ. ನಾಟಕ ತಂಡಗಳಿಗೆ ಊಟ, ತಿಂಡಿ ಪೂರೈಸುವ ಅವರು ಉದ್ರಿಯನ್ನೂ ಕೊಡುತ್ತಾರೆ. ಆ ತಂಡಗಳು ಕೊಟ್ಟಾಗ ಪಡೆಯುವ ಅವರು ಕಡಿಮೆ ಕೊಟ್ಟಿದ್ದೂ ಇದೆ. ಕೊಡದೇ ಇದ್ದುದೂ ಇದೆ. ಹೀಗೆಯೇ ನಿತ್ಯ ಕಾಫಿ/ಚಹಾವನ್ನು ಉಚಿತವಾಗಿ ಅನೇಕರಿಗೆ ಕುಡಿಸುತ್ತಾರೆ.
ಇಂಥ ಕಾರಂತರ ಕ್ಯಾಂಟೀನ್ ಎಂದರೆ ರಂಗಭೂಮಿ ಕಲಾವಿದರು ಸೇರುವ, ಸಭೆ ನಡೆಸುವ, ನಾಟಕ ಕುರಿತು ಚರ್ಚಿಸುವ ಜಾಗ. ಹಿಂದೆ ಧಾರಾವಾಹಿಗಳವರು ಕಲಾವಿದರಿಗೆ ಚೆಕ್ ಕೊಡಲೆಂದು ಕಾರಂತರ ಬಳಿ ಕೊಡುತ್ತಿದ್ದರು. ಮುಖ್ಯವಾಗಿ ನಾಟಕಗಳ, ಯಕ್ಷಗಾನಗಳ ಪ್ರದರ್ಶನ ಕುರಿತು ಕರಪತ್ರ, ಭಿತ್ತಿಪತ್ರ ಹಂಚುವ ಜಾಗವೂ ಕ್ಯಾಂಟೀನಿನದು.
ಹೀಗೆ ನಾಲ್ಕು ದಶಕಗಳ ಒಡನಾಟದಲ್ಲಿ ಮಧ್ಯೆ ಮೂರು ವರ್ಷಗಳಲ್ಲಿ ಈ ಕ್ಯಾಂಟೀನನ್ನು ಪ್ರವಾಸೋದ್ಯಮ ಇಲಾಖೆಯವರು ಪಡೆದು, ನಡೆಸಲಾಗದೆ ಬಿಟ್ಟಾಗ ಮತ್ತೆ ಇದೇ ಕಾರಂತರು ಮುನ್ನಡೆಸಿದರು. ‘ಎಂಬತ್ತರ ದಶಕದಲ್ಲಿ ರವೀಂದ್ರ ಕಲಾಕ್ಷೇತ್ರದಲ್ಲಿ ಯಕ್ಷಗಾನ, ನಾಟಕಗಳು ಹೌಸ್‌ಫುಲ್ ಆಗುತ್ತಿದ್ದವು. ಹೌಸ್‌ಫುಲ್ ಎಂದರೆ ಈಗಿನ 100-150 ಪ್ರೇಕ್ಷಕರಲ್ಲ. 800 ಪ್ರೇಕ್ಷಕರು ಸೇರುತ್ತಿದ್ದರು. ಈಗ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗಿದೆ. ಟ್ರಾಫಿಕ್ ಸಮಸ್ಯೆ, ಅತಿಯಾದ ಮೊಬೈಲ್ ಫೋನ್ ಬಳಕೆ, ಹೊಸ ತಲೆಮಾರಿನ ಹುಡುಗರಿಗೆ ಕಡಿಮೆ ಆಸಕ್ತಿಯಿಂದಾಗಿ ರವೀಂದ್ರ ಕಲಾಕ್ಷೇತ್ರದಲ್ಲಿ ಕಡಿಮೆ ಪ್ರೇಕ್ಷಕರು ಸೇರುತ್ತಿದ್ದಾರೆ’ ಎನ್ನುವ ಕಾರಂತರಿಗೆ ಈಗ 64 ವರ್ಷ ವಯಸ್ಸು.
ನಾಲ್ಕು ದಶಕಗಳ ಒಡನಾಟದ ರವೀಂದ್ರ ಕಲಾಕ್ಷೇತ್ರ ಮತ್ತು ಕ್ಯಾಂಟೀನನ್ನು ಅನಿವಾರ್ಯವಾಗಿ ಅವರು ತೊರೆಯಬೇಕಾಗಿದೆ. ಏಕೆಂದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕರೆದ ಟೆಂಡರಲ್ಲಿ ಅವರು ಭಾಗವಹಿಸಲಿಲ್ಲ. ಸದ್ಯ ಅವರು ಕ್ಯಾಂಟೀನಿಗೆ ಕೊಡುತ್ತಿರುವ ಬಾಡಿಗೆ ತಿಂಗಳಿಗೆ ಏಳು ಸಾವಿರ ರೂಪಾಯಿ ಮಾತ್ರ. ಹೊಸ ಟೆಂಡರಲ್ಲಿ ಜಿಎಸ್‌ಟಿ ಸೇರಿ 59 ಸಾವಿರ ರೂಪಾಯಿ ಆಗಿದೆ! ಹೀಗಿದ್ದಾಗ ಅಷ್ಟೊಂದು ದುಡ್ಡು ಕೊಟ್ಟು ಕ್ಯಾಂಟೀನ್ ನಡೆಸುವುದು ಕಷ್ಟ ಎಂದರಿತ ಅವರು, ಟೆಂಡರಲ್ಲಿ ಭಾಗವಹಿಸಲಿಲ್ಲ.
ಇನ್ನು ಮುಂದೆ ಕೇಟರಿಂಗ್ ನಡೆಸುವ ಯೋಜನೆಯಲ್ಲಿರುವ ಅವರಿಗೆ ನಾಟಕ ಆಡಿಸುವ ಉತ್ಸಾಹವಿದೆ. ಆದರೆ ಪ್ರೇಕ್ಷಕರು ಕಡಿಮೆ ಬರುತ್ತಿದ್ದಾರೆನ್ನುವ ಕೊರಗು. ‘ಆಗೆಲ್ಲ ಹುಡುಗನಿದ್ದೆ, ಬಿಸಿರಕ್ತ. ನಾಟಕ ಆಡಿಸುವ ಉಮೇದೂ ಇತ್ತು. ಪ್ರೇಕ್ಷಕರೂ ಬರುತ್ತಿದ್ದರು. ಈಗ ವಯಸ್ಸಾಯ್ತಲ್ಲ’ ಎಂದು ನಗುತ್ತಾರೆ.