ಶರಣರ ತತ್ವ ಪ್ರಸಾರಕ್ಕೆ ರಂಗಭೂಮಿ ಪ್ರಸಾದವಾಗಿಸಿದ ಪಂಡಿತಾರಾಧ್ಯ ಶ್ರೀ

ಇತರ ಸ್ವಾಮೀಜಿಗಳ ಹಾಗಾಗದ ಪಂಡಿತಾರಾಧ್ಯ ಸ್ವಾಮೀಜಿ ಅವರು ತಮ್ಮ ಮಠಕ್ಕೆ ವಿಚಾರವಾದಿಗಳನ್ನು, ಲೇಖಕರನ್ನು, ಪ್ರಗತಿಪರರನ್ನು ಆಹ್ವಾನಿಸಿದರು. ಇದು ಅವರಿಗೆ ಸಾಧ್ಯವಾಗಿದ್ದು ಅವರೂ ಪ್ರಗತಿಪರರಾದ ಪರಿಣಾಮ. ತಮ್ಮ ಮಠವನ್ನು ಸದಾ ರಂಗಭೂಮಿ ಚಟುವಟಿಕೆಗಳ ನೆಲೆಯಾಗಿಸಿದ, ರಂಗ ಪರಂಪರೆಯನ್ನು ಹುಟ್ಟುಹಾಕುವ ಮೂಲಕ ರಂಗಸಂಸ್ಕಾರವನ್ನು ನೀಡುವುದರ ಜೊತೆಗೆ ರಂಗ ಚಳವಳಿಯನ್ನು ದಾಖಲಿಸಿದ ಹೆಗ್ಗಳಿಕೆ ಅವರದು.

Update: 2023-10-27 06:10 GMT

ಸಾಣಿಹಳ್ಳಿಯ ಬಯಲು ರಂಗಮಂದಿರ

ಈಗಲೂ ನೆನಪಿದೆ.

ಅದು 2000 ವರ್ಷ. ಆಗ ಕರ್ನಾಟಕ ನಾಟಕ ಅಕಾಡಮಿ ಅಧ್ಯಕ್ಷರಾಗಿದ್ದ ಸಿಜಿಕೆ (ಸಿ.ಜಿ.ಕೃಷ್ಣಸ್ವಾಮಿ) ಅವರು ‘‘ಸಾಣೇಹಳ್ಳಿಗೆ ಬನ್ನಿ’’ ಎಂದು ಕರೆದರು. ಯಾಕೆಂದು ಕೇಳಿದಾಗ ‘‘ಅಲ್ಲಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ನೀವು ಬರಬೇಕು’’ ಎಂದು ಒತ್ತಾಯಿಸಿದರು. ಅದುವರೆಗೆ ರಂಗ ಗೆಳೆಯರೆಲ್ಲ ಸಿಜಿಕೆ ಅವರು ಸಾಣೇಹಳ್ಳಿಗೆ ಸಂಚರಿಸುತ್ತ ಸ್ವಾಮೀಜಿ ಆಗುವವರಿದ್ದಾರೆ ಎಂದು ತಮಾಷೆ ಮಾಡಿಕೊಳ್ಳುತ್ತಿದ್ದರು. ಅವರ ಒತ್ತಾಯಕ್ಕೆ ಮಣಿದು ಬೆಂಗಳೂರಿನಿಂದ ಹೊಸದುರ್ಗಕ್ಕೆ ಬಸ್ಸಲ್ಲಿ ಹೋಗಿ, ಅಲ್ಲಿಂದ ಸಾಣೇಹಳ್ಳಿ ತಲುಪಿ, ಅಲ್ಲಿನ ರಂಗಚಟುವಟಿಕೆ ಗಳನ್ನು ಕಂಡು ಬಂದಿದ್ದೆ. ಅಲ್ಲಿ ಪಾದಗಳಿಗೆ ನಮಸ್ಕರಿಸಿಕೊಳ್ಳದೆ ಕೈ ಕುಲುಕಿದ ಪಂಡಿತಾರಾಧ್ಯ ಸ್ವಾಮೀಜಿ ಅವರನ್ನು ಕಂಡು ಖುಷಿಯಾಯಿತು.

ಮರುವರ್ಷ 2001ರ ಮಾರ್ಚ್ ತಿಂಗಳಲ್ಲಿ ರಂಗಭೂಮಿಗೆ ದುಡಿದ, ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತರ ಸಮ್ಮಿಲನವಿತ್ತು. ಗಿರೀಶ್ ಕಾರ್ನಾಡ್ ಅವರನ್ನು ಹೊರತುಪಡಿಸಿ (ಆಗ ಅವರು ಇಂಗ್ಲೆಂಡಿನಲ್ಲಿದ್ದರು) ಏಣಗಿ ಬಾಳಪ್ಪ, ಬಿ.ವಿ.ಕಾರಂತ, ಯೋಗಾನರಸಿಂಹ, ಮಾಸ್ಟರ್ ಹಿರಣ್ಣಯ್ಯ, ಪಿ.ಬಿ.ಧುತ್ತರಗಿ ಹಾಗೂ ಎಚ್.ಎನ್.ಹೂಗಾರ ಅವರನ್ನು ಟ್ರ್ಯಾಕ್ಟರಲ್ಲಿ ಕೂಡಿಸಿದ ನಂತರ ಮೆರವಣಿಗೆ ಹೊರಟಾಗ ಸಂಜೆಯಾಗಿತ್ತು. ಅವರ ಮೆರವಣಿಗೆಗೆ ಇಡೀ ಗ್ರಾಮವೇ ಸಿಂಗಾರಗೊಂಡಿತ್ತು. ಬಳಿಕ ನಡೆದ ಸಮಾರಂಭದಲ್ಲಿ ಬೆಳ್ಳಿ ಹಿಡಿಕೆಯ ಬೆತ್ತದ ಕೋಲುಗಳನ್ನು ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತರಿಗೆ ಕಾಣಿಕೆಯಾಗಿ ನೀಡಲಾಯಿತು.

ಸಾಣೇಹಳ್ಳಿ ಎಂಬ ಪುಟ್ಟ ಗ್ರಾಮವೀಗ ರಂಗಗ್ರಾಮವಾಗಿದೆ. ಇದೆಲ್ಲ ಸಾಧ್ಯವಾಗಿದ್ದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರಿಂದ. ಅವರ ಮಠ ಸಿರಿಗೆರೆಯ ತರಳಬಾಳು ಬೃಹನ್ಮಠದ ಶಾಖಾಮಠ. ಇದೆಲ್ಲ ಒಮ್ಮೆಲೇ ಸಾಧ್ಯವಾಗಿದ್ದಲ್ಲ; ಸಿಜಿಕೆ ಅವರ ಒತ್ತಾಯದ ಮೇರೆಗೆ ಮಠಗಳನ್ನು ವಿರೋಧಿಸುತ್ತಿದ್ದವರೆಲ್ಲ ಅಲ್ಲಿ ನಡೆಯುವ ವಿಚಾರ ಸಂಕಿರಣ, ಉಪನ್ಯಾಸ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಹೀಗೆಯೇ ಒಮ್ಮೆ ಸಿಜಿಕೆ ಅವರು ರಂಗಕರ್ಮಿ ಸಿ.ಬಸವಲಿಂಗಯ್ಯ ಅವರನ್ನು ನಾಟಕ ನಿರ್ದೇಶಿಸಲು ಕರೆದಾಗ ‘‘ಯಾವ ಸ್ವಾಮಿಗಳಿಗೂ ನಮಸ್ಕರಿಸಿಲ್ಲ, ನಾಟಕ ನಿರ್ದೇಶಿಸಲ್ಲ’’ ಎಂದರು. ಆಗ ಸಿಜಿಕೆ ಅವರು ‘‘ನಾನೇ ಕಮ್ಯುನಿಸ್ಟ್. ನಾನೇ ಬಂದಿದ್ದೀನಿ. ನೀನೊಮ್ಮೆ ಬಂದುಹೋಗು’’ ಎಂದರು. ಹಾಗೆ 1998ರಲ್ಲಿ ಅಲ್ಲಿಗೆ ಭೇಟಿ ನೀಡಿದ ಸಿ.ಬಸವಲಿಂಗಯ್ಯ ಅವರು ರಂಗ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿ ‘ದೊರೆ ಈಡಿಪಸ್’ ನಾಟಕ ನಿರ್ದೇಶಿಸುವುದಾಗಿ ಹೇಳಿದರು. ಅದು ‘ತಾಯಿಗೇ ಮಗ ಗಂಡನಾಗುವ’ ನಾಟಕ. ಆಗ ಸ್ವಾಮಿಗಳು ಒಪ್ಪಲಿಕ್ಕಿಲ್ಲ, ತಪ್ಪಿಸಿಕೊಳ್ಳಬಹುದು ಎಂದು ಬಸವಲಿಂಗಯ್ಯ ಅಂದುಕೊಂಡಿದ್ದರು. ಆದರೆ ಸ್ವಾಮೀಜಿ ಅದೇ ನಾಟಕ ನಿರ್ದೇಶಿಸಲು ಒಪ್ಪಿದರು. ಅಲ್ಲಿಂದ ಇದುವರೆಗೆ ಅನೇಕ ನಾಟಕಗಳನ್ನು ಬಸವಲಿಂಗಯ್ಯ ನಿರ್ದೇಶಿಸಿದ್ದಾರೆ. ಅವರು ಈ ವರ್ಷದ ‘ಶಿವಸಂಚಾರ’ ತಿರುಗಾಟಕ್ಕೆ ನಟರಾಜ ಬೂದಾಳು ಅವರ ‘ಕಲ್ಯಾಣದ ಬಾಗಿಲು’ ನಾಟಕವನ್ನು ನಿರ್ದೇಶಿಸಿದ್ದಾರೆ.

ಇವರ ಹಾಗೆಯೇ ಮಠಗಳನ್ನು ವಿರೋಧಿಸುತ್ತಿದ್ದ ಪ್ರೊ. ರಾಮದಾಸ್ ಅವರು ಮಠವು ಆಯೋಜಿಸಿದ್ದ ವಿಚಾರಗೋಷ್ಠಿಗೆ ಹೋದವರು, ಎಲ್ಲ ಚಟುವಟಿಕೆಗಳನ್ನು ಗಮನಿಸಿ ‘‘ಪ್ರಗತಿಪರರು, ಬಂಡಾಯದವರು ನಾವು. ಬಂಡಾಯದವರಿಗಿಂತ ಹೆಚ್ಚು ಬಂಡಾಯ ಮಾಡುವ ಸ್ವಾಮೀಜಿ ಪಂಡಿತಾರಾಧ್ಯರು’’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದರಿಂದ ಪಂಡಿತಾರಾಧ್ಯ ಸ್ವಾಮೀಜಿ ಅವರಿಗೆ ಲಾಭವಾಯಿತು. ಹೇಗೆಂದು ಅವರು ಹೇಳುತ್ತಾರೆ ‘‘ಸಮಾಜದ ಸಂಘಟನೆಗೆ, ಅರಿವಿನಪ್ರಜ್ಞೆ ಮೂಡಿಸಲು ಅನುಕೂಲವಾಯಿತು, ಜನಜಾಗೃತಿವಾಯಿತು’’. ಇದಕ್ಕೊಂದು ಉದಾಹರಣೆ; ‘ಮತ್ತೆ ಕಲ್ಯಾಣ’ ಎಂಬ ವಿಶಿಷ್ಟ ಅಭಿಯಾನ. 12ನೇ ಶತಮಾನದಲ್ಲಿ ನಡೆದ ಕ್ರಾಂತಿಯನ್ನು ಜನರಲ್ಲಿ ಮತ್ತೆ ಜಾಗೃತಿ ಮೂಡಿಸಲು 2019ರಲ್ಲಿ ರಾಜಕಾರಣಿಗಳನ್ನು ಹೊರತುಪಡಿಸಿ ಮಠಾಧೀಶರನ್ನು, ಸಾಹಿತಿಗಳನ್ನು ಸೇರಿಸಿದರು. ಇದು 31 ಜಿಲ್ಲೆಗಳಲ್ಲಿ ನಡೆಯಿತು. ಶರಣರ ಕುರಿತ ಪುಸ್ತಕಗಳನ್ನು ಮೊದಲಿಗೆ ಕಾಲೇಜು ವಿದ್ಯಾರ್ಥಿಗಳಿಗೆ ನೀಡಲಾಗಿತ್ತು. ನಂತರ ಪಂಡಿತಾರಾಧ್ಯ ಸ್ವಾಮೀಜಿ ಅವರು 31 ಜಿಲ್ಲಾಕೇಂದ್ರಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಇದಕ್ಕೂ ಮೊದಲು ಲೇಖಕರ ಉಪನ್ಯಾಸವೂ ಇರುತ್ತಿತ್ತು. ಸಂಜೆ ಪ್ರಮುಖ ರಸ್ತೆಗಳಲ್ಲಿ ಪಾದಯಾತ್ರೆ ನಂತರ ಸಭಾಕಾರ್ಯಕ್ರಮ ಆಯೋಜಿಸಲಾಗುತ್ತಿತ್ತು. ಮತ್ತೆ ಲೇಖಕರ ಉಪನ್ಯಾಸ ಬಳಿಕ ಶಿವಸಂಚಾರದ ‘ಮೋಳಿಗೆ ಮಾರಯ್ಯ’ ನಾಟಕ ಪ್ರದರ್ಶನ ಏರ್ಪಡಿಸಲಾಗಿತ್ತು. ಇದಾದ ನಂತರ ‘ಮತ್ತೆ ಕಲ್ಯಾಣ’ ಎಂಬ ಶೀರ್ಷಿಕೆಯ ಆರು ಪುಸ್ತಕಗಳು ಮಠದಿಂದ ಪ್ರಕಟಗೊಂಡಿವೆ. ಮೂರು ಪುಸ್ತಕಗಳು ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದದ ದಾಖಲೆಯಾದರೆ, ಉಳಿದ ಮೂರು ಪುಸ್ತಕಗಳು ಲೇಖಕರು ನೀಡಿದ ಉಪನ್ಯಾಸಗಳನ್ನು ಒಳಗೊಂಡಿವೆ. ಇದರೊಂದಿಗೆ ಹೇಳಲೇಬೇಕಾದುದು ವಚನ ಸಂಸ್ಕೃತಿ ಅಭಿಯಾನ. 44 ವಚನಗಳನ್ನು ಹಿಂದಿಗೆ ಅನುವಾದಿಸಿ, ಸಿ.ಅಶ್ವಥ್ ಅವರ ಸಂಗೀತ ಬಳಸಿಕೊಂಡು, ಹಿಂದಿ ಬಲ್ಲ ಸಂಗೀತಗಾರರಿಂದ ಧ್ವನಿಮುದ್ರಿಸಿಕೊಂಡು ಸಜ್ಜುಗೊಳಿಸಲಾಯಿತು. ಆಮೇಲೆ 24 ಶಾಸ್ತ್ರೀಯ ನೃತ್ಯಗಾರರನ್ನು ಆಯ್ಕೆಗೊಳಿಸಿ, ಶಿವಸಂಚಾರದ ಬಸ್ಸಲ್ಲೇ ಎರಡು ತಿಂಗಳವರೆಗೆ 14 ರಾಜ್ಯಗಳಲ್ಲಿ 52 ಪ್ರದರ್ಶನಗಳನ್ನು ನೀಡಲಾಯಿತು. ಇದು ದಾಖಲೆ ಮತ್ತು ಸಂಚಲನ ಉಂಟುಮಾಡಿದೆ. ಇದಕ್ಕೆ ಹಿರಿಯ ರಂಗಕರ್ಮಿ ಶ್ರೀನಿವಾಸ್ ಕಪ್ಪಣ್ಣ ಸಂಚಾಲಕರು.

ಇದಕ್ಕೂ ಮೊದಲು 2007ರಲ್ಲಿ ‘ಭಾರತ ರಂಗಸಂಚಾರ’ ಎಂಬ ಹೆಸರಿನಡಿ ಜಂಗಮದೆಡೆಗೆ, ‘ತಲೆದಂಡ’ ಹಾಗೂ ‘ಸಂಕ್ರಾಂತಿ’ ನಾಟಕಗಳನ್ನು ಹಿಂದಿಗೆ ಅನುವಾದಗೊಳಿಸಿ ದೇಶದ 21 ಪ್ರಮುಖ ನಗರಗಳಲ್ಲಿ 45 ಪ್ರದರ್ಶನಗಳನ್ನು ಕಂಡಿವೆ. 2013ರಲ್ಲಿ ಮರಣವೇ ಮಹಾನವಮಿ, ಶರಣಸತಿ ಲಿಂಗಪತಿ ನಾಟಕಗಳು ಹಿಂದಿಯಲ್ಲಿ ದೇಶದ 18 ರಾಜ್ಯಗಳಲ್ಲಿ 60ಕ್ಕಿಂತ ಹೆಚ್ಚು ಪ್ರದರ್ಶನಗಳಾಗಿವೆ. ಅಲ್ಲದೆ 2012ರ ವರ್ಷದುದ್ದಕ್ಕೂ ಮರಣವೇ ಮಹಾನವಮಿ ನಾಟಕದ 373 ಪ್ರದರ್ಶನಗಳಾಗಿವೆ. ಇವುಗಳೊಂದಿಗೆ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ರಂಗತರಬೇತಿ ಶಿಬಿರಗಳು ನಿರಂತರವಾಗಿ ನಡೆಯುತ್ತವೆ. 2016ರಲ್ಲಿ ಉದ್ಘಾಟನೆಗೊಂಡ ಎಸ್.ಎಸ್. ರಂಗಮಂದಿರದಲ್ಲಿ ನಾಟಕಗಳಾಗುತ್ತಿವೆ.

ಮುಖ್ಯವಾಗಿ ರಂಗಭೂಮಿಗಾಗಿ ದುಡಿದವರನ್ನು ಗುರುತಿಸಿ, ಪುರಸ್ಕರಿಸಬೇಕೆಂದು 2004ರಿಂದ ಶ್ರೀ ಶಿವಕುಮಾರ ಪ್ರಶಸ್ತಿ ಪ್ರದಾನವಾಗುತ್ತಿದೆ. 2023ನೇ ಸಾಲಿಗೆ ರಂಗಕರ್ಮಿ ಶಶಿಧರ ಅಡಪ ಅವರಿಗೆ ನೀಡಲಾಗುತ್ತಿದೆ.

ವಿದ್ಯಾರ್ಥಿಯಾಗಿದ್ದಾಗ ಒಲವು

ಪಂಡಿತಾರಾಧ್ಯ ಸ್ವಾಮೀಜಿ ಅವರಿಗೆ ವಿದ್ಯಾರ್ಥಿಯಾಗಿದ್ದಾಗಲೇ ರಂಗಭೂಮಿಯ ಒಲವಿತ್ತು. ಅವರು ಹುಟ್ಟಿದ್ದು ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಹೆಡಿಯಾಲ ಗ್ರಾಮದಲ್ಲಿ. ಇಲ್ಲಿಯೇ ಏಳನೆಯ ತರಗತಿಯವರೆಗೆ ಓದಿದ ಅವರು ನಂತರ ಅವರ ಗ್ರಾಮದ ಪಕ್ಕದ ಸುಣಕಲ್ಲಬಿದರಿಯಲ್ಲಿ ಹೈಸ್ಕೂಲಿನವರೆಗೆ ವಿದ್ಯಾಭ್ಯಾಸ ಕೈಗೊಂಡರು. ಸಿರಿಗೆರೆಯಲ್ಲಿ ಪಿಯು, ಬಿ.ಎ. ಪದವಿ ಪಡೆದ ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ತತ್ವಶಾಸ್ತ್ರ ಎಂ.ಎ. ಪದವಿ ಪಡೆದರು. ಇದು ವಿದ್ಯಾಭ್ಯಾಸದ ವಿವರವಾದರೆ ರಂಗಭೂಮಿ ನಂಟು ಶುರುವಾಗಿದ್ದು ಪಿಯು ಓದುವಾಗ. ಸಿರಿಗೆರೆ ಮಠದ ಹಿರಿಯರಾದ ಶಿವಕುಮಾರ ಸ್ವಾಮೀಜಿ, ಶರಣರ ತತ್ವಗಳನ್ನು ಪ್ರಸಾರ ಮಾಡಲು ರಂಗಭೂಮಿ ಸುವರ್ಣ ಮಾಧ್ಯಮ ಎಂದು ಭಾವಿಸಿಕೊಂಡು ನಾಟಕಗಳನ್ನು ರಚಿಸಿದರು. ‘ಮರಣವೇ ಮಹಾನವಮಿ’, ಅಕ್ಕಮಹಾದೇವಿ ಕುರಿತ ‘ಶರಣಸತಿ ಲಿಂಗಪತಿ’, ‘ವಿಶ್ವಬಂಧು ಮರುಳಸಿದ್ಧ’, ಮಾದಾರ ಚೆನ್ನಯ್ಯಗೆ ಸಂಬಂಧಿಸಿದ ‘ಶಿವಕುಲ’ ಮೊದಲಾದ ನಾಟಕಗಳನ್ನು ರಚಿಸಿ, ತಂಡ ಸಂಘಟಿಸಿ, ನಿರ್ದೇಶಿಸಿದರು. ಹೀಗೆ 1950ರಿಂದ ನಾಟಕವಾಡಲು ಶುರುವಾಗಿ 1992ರವರೆಗೆ ಅಂದರೆ ಅವರು ಜೀವಂತವಿರುವವರೆಗೂ ಮುಂದುವರಿಯಿತು. ಇದು ಪಂಡಿತಾರಾಧ್ಯ ಸ್ವಾಮೀಜಿ ಮೇಲೆ ಪ್ರಭಾವ ಬೀರಿತು. ಅವರ ನಾಟಕಗಳಲ್ಲಿ ಸಣ್ಣಪುಟ್ಟ ಪಾತ್ರಗಳಿಗೆ ಬಣ್ಣ ಹಚ್ಚಿದರು. ಆಮೇಲೆ ಸಾಣೇಹಳ್ಳಿ ಮಠಕ್ಕೆ ಮಠಾಧೀಶರಾದ ಮೇಲೆ 1987ರಲ್ಲಿ ಶ್ರೀ ಶಿವಕುಮಾರ ಕಲಾಸಂಘ ಆರಂಭಿಸಿದರು. ಅವರ ಶಾಲೆಯ ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಊರವರು ಸೇರಿ ಆಧುನಿಕ ತಂತ್ರಗಳ ನಾಟಕಗಳನ್ನು ಆಡಿಸಿದರು. ಇದುವರೆಗೆ ಸುಮಾರು 75 ನಾಟಕಗಳ ಸಾವಿರಾರು ಪ್ರದರ್ಶನಗಳಾಗಿವೆ. ಹತ್ತು ವರ್ಷಗಳ ನಂತರ 1997ರಲ್ಲಿ ಸಿಜಿಕೆ ಅವರ ಪರಿಕಲ್ಪನೆಯಲ್ಲಿ ಶಿವಸಂಚಾರ ಶುರುವಾಗಿ 78 ನಾಟಕಗಳ 3,500ಕ್ಕೂ ಅಧಿಕ ಪ್ರದರ್ಶನಗಳಾಗಿವೆ. 2003ರಲ್ಲಿ ಶ್ರೀ ಶಿವಕುಮಾರ ಬಯಲು ರಂಗಮಂದಿರ ನಿರ್ಮಾಣವಾಯಿತು. ಗ್ರಾಮೀಣ ಭಾರತದಲ್ಲೇ ಅಪರೂಪದ, ಗ್ರೀಕ್ ಮಾದರಿಯ ಈ ರಂಗಮಂದಿರದಲ್ಲಿ ಐದು ಸಾವಿರ ಪ್ರೇಕ್ಷಕರು ಕೂತು ನಾಟಕ ನೋಡಬಹುದು. ಇದರ ಪಕ್ಕದಲ್ಲೇ ಸಿಜಿಕೆ ಅವರ ಸಮಾಧಿಯಿದೆ. ಇಲ್ಲಿ ಸಿಜಿಕೆ ಅವರನ್ನು ಹುಗಿದಿಲ್ಲ; ಬಿತ್ತಿದ್ದಾರೆ. ಅವರ ಬಿತ್ತಿದ ರಂಗಬೀಜಗಳು ಈಗ ಮರವಾಗಿ, ನಾಡಿನ ಎಲ್ಲೆಡೆ ರಂಗಚಟುವಟಿಕೆಗಳಲ್ಲಿ ತೊಡಗಿಕೊಂಡಿವೆ.

ಶಿವಕುಮಾರ ರಂಗಪ್ರಯೋಗ ಶಾಲೆ

‘ಶಿವಸಂಚಾರ’ ಎಂಬ ನಾಟಕಗಳಿಗೆ ಆಸಕ್ತರನ್ನು ಆಹ್ವಾನಿಸಿ ನಾಟಕ ಪ್ರದರ್ಶಿಸಲಾಗುತ್ತಿತ್ತು. 2008ರಲ್ಲಿ ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆ ಶುರುವಾಯಿತು. ಪ್ರತೀ ವರ್ಷ 20 ಕಲಾವಿದರನ್ನು ಆಯ್ಕೆ ಮಾಡಿಕೊಂಡು ತರಬೇತಿ ನೀಡಲಾಗುವುದು. ಮರುವರ್ಷ ‘ಶಿವಸಂಚಾರ’ ತಿರುಗಾಟದಲ್ಲಿ ಕಲಾವಿದರು ಪಾಲ್ಗೊಳ್ಳುತ್ತಾರೆ. ಹೀಗೆ ‘ಶಿವಸಂಚಾರ’ ಆರಂಭಿಸಿದಾಗ ನಾಡಿನ ಸ್ವಾಮಿಗಳು, ಕೆಲ ಭಕ್ತರು, ಹೊರಗಿನ ಜನರು ‘‘ಪಂಡಿತಾರಾಧ್ಯ ಸ್ವಾಮಿಗಳು ದಾರಿ ಬಿಟ್ರು’’ ಎಂದು ಆಡಿಕೊಂಡರು. ‘‘ಸುಮ್ಮನೆ ಹಣ ಖರ್ಚು ಮಾಡ್ತಾರೆ, ಇದರಿಂದ ಏನು ಸಾಧನೆ ಮಾಡ್ತಾರೆ?’’ ಎನ್ನುವ ಆಪಾದನೆಗಳೂ ಬಂದವು. ತಿರುಗಾಟ ಯಶಸ್ವಿಯಾದ ಮೇಲೆ ಟೀಕಿಸಿದವರು ಗೌರವಿಸಿದರು. ಪ್ರತೀ ವರ್ಷ ಶಿವಸಂಚಾರ ತಿರುಗಾಟಕ್ಕಾಗಿ ಮೂರು ನಾಟಕಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ಇವುಗಳಲ್ಲಿ ಶರಣರ ಕುರಿತ ನಾಟಕವೊಂದು ಕಡ್ಡಾಯವಿರುತ್ತದೆ. ಇನ್ನೆರಡು ನಾಟಕಗಳು; ಸ್ವದೇಶಿ, ವಿದೇಶಿ ಹಾಗೂ ಕಂಪೆನಿ ನಾಟಕಗಳು.

ಸಾಮಾನ್ಯವಾಗಿ ಸ್ವಾಮೀಜಿಗಳು ನಾಟಕಗಳನ್ನು ನೋಡುವುದಿಲ್ಲ. ಆದರೆ ಶಿವಸಂಚಾರ ಶುರುವಾದ ಮೇಲೆ ಉತ್ತರ ಕರ್ನಾಟಕದ ಅನೇಕ ಸ್ವಾಮಿಗಳು ನಾಟಕ ನೋಡಿ ರಂಗಭೂಮಿಯ ಒಲವು ಬೆಳೆಸಿಕೊಂಡರು. ಇದರ ಪರಿಣಾಮ; ಉತ್ತರ ಕರ್ನಾಟಕದ ಅನೇಕ ಮಠಗಳು ಶಿವಸಂಚಾರದ ನಾಟಕಗಳನ್ನು ಆಹ್ವಾನಿಸುತ್ತವೆ. ಹಾಗೆ ಆಹ್ವಾನಿಸಿದ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಸ್ವಾಮೀಜಿ, ಕಲಾವಿದರಿಗೆ ಊಟ ಬಡಿಸುತ್ತಾರೆ, ಸ್ನಾನಕ್ಕೆಂದು ನೀರು ಕಾಯಿಸಿ ಕೊಡುತ್ತಾರೆ. ಹೀಗೆ ಕಲಾವಿದರನ್ನು ಬಹಳ ಗೌರವದಿಂದ ಕಾಣುತ್ತಾರೆ.

ಇದೆಲ್ಲ ದಾಖಲಿಸಲು ಕಾರಣವಿದೆ; 1997ರಿಂದ ನವೆಂಬರ್ 2ರಿಂದ 8ರ ವರೆಗೆ ಪ್ರತೀ ವರ್ಷ ರಾಷ್ಟ್ರೀಯ ನಾಟಕೋತ್ಸವವನ್ನು ಪಂಡಿತಾರಾಧ್ಯ ಸ್ವಾಮೀಜಿ ಆಯೋಜಿಸುತ್ತಾರೆ. ಇದರಲ್ಲಿ ರಾಜ್ಯದ ಅಲ್ಲದೆ ವಿವಿಧ ರಾಜ್ಯಗಳ ನಾಟಕಗಳೂ ಪ್ರದರ್ಶನಗೊಳ್ಳುತ್ತವೆ. ಇದು ಕೇವಲ ನಾಟಕೋತ್ಸವವಲ್ಲ; ಶಿವಸಂಚಾರದ ಹಿರಿಕಿರಿಯ ವಿದ್ಯಾರ್ಥಿಗಳ ಸಮ್ಮಿಲನವೂ ಹೌದು. ಗಮನಾರ್ಹವೆಂದರೆ ಕೇವಲ ಮೂರು ಸಾವಿರದಷ್ಟು ಜನಸಂಖ್ಯೆಯಿರುವ (ಇದರಲ್ಲಿ ಒಂದು ಸಾವಿರ ವಿದ್ಯಾರ್ಥಿಗಳು ಮಠದ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ) ಪುಟ್ಟ ಗ್ರಾಮದವರಲ್ಲದೆ ಸುತ್ತಲಿನ ಗ್ರಾಮ, ಪಟ್ಟಣಗಳಲ್ಲದೆ ಚಿತ್ರದುರ್ಗ, ಹಾಸನ, ಚಿಕ್ಕಮಗಳೂರು, ದಾವಣಗೆರೆ ಜಿಲ್ಲೆಗಳಿಂದಲೂ ನಾಟಕೋತ್ಸವಕ್ಕೆ ಬರುತ್ತಾರೆ. ಜೊತೆಗೆ ಬೆಳಗ್ಗೆ ಉಪನ್ಯಾಸಗಳು, ವಿಚಾರಗೋಷ್ಠಿಗಳೂ ನಡೆಯುತ್ತವೆ.

ಇದನ್ನೆಲ್ಲ ಸಾಧ್ಯವಾಗಿಸಿದ್ದು ಪಂಡಿತಾರಾಧ್ಯ ಸ್ವಾಮೀಜಿ. ಸಾಮಾನ್ಯವಾಗಿ ವಚನಗಳ ಸಾರ ಹೇಳುತ್ತ, ಬಂದ ಭಕ್ತರಿಗೆ ಕಲ್ಲುಸಕ್ಕರೆ ಕೊಟ್ಟು ಆಶೀರ್ವಾದ ಮಾಡುವ ಇತರ ಸ್ವಾಮೀಜಿಗಳ ಹಾಗಾಗದ ಅವರು ತಮ್ಮ ಮಠಕ್ಕೆ ವಿಚಾರವಾದಿಗಳನ್ನು, ಲೇಖಕರನ್ನು, ಪ್ರಗತಿಪರರನ್ನು ಆಹ್ವಾನಿಸಿದರು. ಇದು ಅವರಿಗೆ ಸಾಧ್ಯವಾಗಿದ್ದು ಅವರೂ ಪ್ರಗತಿಪರರಾದ ಪರಿಣಾಮ. ತಮ್ಮ ಮಠವನ್ನು ಸದಾ ರಂಗಭೂಮಿ ಚಟುವಟಿಕೆಗಳ ನೆಲೆಯಾಗಿಸಿದ, ರಂಗ ಪರಂಪರೆಯನ್ನು ಹುಟ್ಟುಹಾಕುವ ಮೂಲಕ ರಂಗಸಂಸ್ಕಾರವನ್ನು ನೀಡುವುದರ ಜೊತೆಗೆ ರಂಗ ಚಳವಳಿಯನ್ನು ದಾಖಲಿಸಿದ ಹೆಗ್ಗಳಿಕೆ ಅವರದು. ಅವರಿಗೆ 73 ವರ್ಷ ವಯಸ್ಸು. ದಣಿವರಿಯದ ಅವರ ರಂಗಕಾಯಕಕ್ಕೆ ಶರಣು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಗಣೇಶ ಅಮೀನಗಡ

contributor

Similar News