ಕನ್ನಡ- ಸಂಸ್ಕೃತಿ ಇಲಾಖೆಯಲ್ಲಿ ಪ್ರಾದೇಶಿಕ ತಾರತಮ್ಯ

ಕಲ್ಯಾಣ ಕರ್ನಾಟಕದವರನ್ನು, ಅದರಲ್ಲೂ ಮಹಿಳೆ ಮತ್ತು ದಲಿತರನ್ನು ಸಂಪೂರ್ಣ ಕಡೆಗಣಿಸುತ್ತಾ ಬರಲಾಗಿದೆ. ಮುಂಬೈ ಕರ್ನಾಟಕದವರು ಉತ್ತರ ಕರ್ನಾಟಕದ ಪ್ರತ್ಯೇಕ ರಾಜ್ಯದ ಕೂಗು ಹಾಕುತ್ತಲೇ ಸಾಕಷ್ಟು ನ್ಯಾಯ ಪಡೆದುಕೊಂಡಿದ್ದಾರೆ. ಪ್ರಾದೇಶಿಕ ನ್ಯಾಯ, ಸಾಮಾಜಿಕ ನ್ಯಾಯ, ಮಹಿಳಾ ನ್ಯಾಯದ ಮಾತುಗಳು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮಾತ್ರ ಅರ್ಥವಾಗಬಲ್ಲವು. ಅವರೇ ಮಧ್ಯಪ್ರವೇಶ ಮಾಡಿ ನ್ಯಾಯ ಕೊಡಿಸಬೇಕು. ಇಲ್ಲದಿದ್ದರೆ ಕರ್ನಾಟಕ ಏಕೀಕರಣದ ಒಟ್ಟಾಶಯಕ್ಕೆ, ಭಾರತದ ಸಂವಿಧಾನಕ್ಕೆ ಅಪಮಾನ ಮಾಡಿದಂತೆ.

Update: 2023-12-23 03:44 GMT

Photo: kannadasiri.karnataka.gov.in

ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ 76 ವರ್ಷಗಳು ಗತಿಸಿದವು. ನ್ಯಾಯಮೂರ್ತಿ ಫಝಲ್ ಅಲಿ ನೇತೃತ್ವದ ರಾಜ್ಯ ಪುನರ್ ವಿಂಗಡಣಾ ಆಯೋಗ ಭಾಷಾವಾರು ಪ್ರಾಂತಗಳ ರಚನೆಗೆ ಶಿಫಾರಸು ಮಾಡಿತ್ತು. ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ಈಗಿನ ರಾಜ್ಯ-ಕರ್ನಾಟಕ; ಮೈಸೂರು, ಮುಂಬೈ ಮತ್ತು ಹೈದರಾಬಾದ್ ರಾಜ್ಯಗಳಲ್ಲಿ ಹಂಚಿಹೋಗಿತ್ತು. ಕರ್ನಾಟಕ ಏಕೀಕರಣಕ್ಕಾಗಿ ಬಹುದೊಡ್ಡ ಜನಾಂದೋಲನವೇ ರೂಪುಗೊಂಡಿತ್ತು. ರಾಷ್ಟ್ರಕವಿ ಕುವೆಂಪು, ಮಾಜಿ ಮುಖ್ಯಮಂತ್ರಿ ದಿ. ಕೆಂಗಲ್ ಹನುಮಂತಯ್ಯನವರು ಸೇರಿದಂತೆ ಹಲವರು ಮಾತ್ರ ಕರ್ನಾಟಕ ಏಕೀಕರಣದ ಪರವಾಗಿದ್ದರು. ಬೆಂಗಳೂರು-ಮೈಸೂರು ಭಾಗದ ಹಲವರಿಗೆ ಮುಂಬೈ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕದ ಭೂಪ್ರದೇಶಗಳು ವಿಶಾಲ ಮೈಸೂರು ರಾಜ್ಯದಲ್ಲಿ ಸೇರ್ಪಡೆಯಾಗುವುದು ಬೇಕಿರಲಿಲ್ಲ. 1956ರಲ್ಲಿ ಭಾಷಾವಾರು ಪ್ರಾಂತಗಳ ರಚನೆಗೆ ನಾಂದಿ ಹಾಡಲಾಯಿತು. ನವೆಂಬರ್ 1, 1956ರಂದು ಅಂದಿನ ರಾಷ್ಟ್ರಪತಿ ಡಾ. ಬಾಬು ರಾಜೇಂದ್ರ ಪ್ರಸಾದ್ ಅವರು ವಿಶಾಲ ಮೈಸೂರು ರಾಜ್ಯವನ್ನು ಉದ್ಘಾಟಿಸಿದರು. 1973ರ ನವೆಂಬರ್ ಒಂದರಂದು ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರು ವಿಶಾಲ ಮೈಸೂರು ರಾಜ್ಯವನ್ನು ‘ಕರ್ನಾಟಕ’ ಎಂದು ಮರುನಾಮಕರಣ ಮಾಡಿದರು. ಕರ್ನಾಟಕ ಎಂದು ಹೆಸರು ಪಡೆದೇ 50 ವರ್ಷಗಳಾದವು ಅಖಂಡ ಕರ್ನಾಟಕ ಅಸ್ತಿತ್ವಕ್ಕೆ ಬಂದು 67 ವರ್ಷ ಕಳೆದರೂ ಎಲ್ಲಾ ಪ್ರದೇಶಗಳನ್ನು ಸಮಾನವಾಗಿ ಕಾಣುವ, ಅಭಿವೃದ್ಧಿ ಪಡಿಸುವ ಪ್ರಬಲವಾದ ರಾಜಕೀಯ ಇಚ್ಛಾಶಕ್ತಿ ರೂಪುಗೊಳ್ಳಲೇ ಇಲ್ಲ. ಕರ್ನಾಟಕವೆಂದರೆ ಬೆಂಗಳೂರು-ಮೈಸೂರು, ಉತ್ತರ ಕರ್ನಾಟಕವೆಂದರೆ ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮಾತ್ರ ಎನ್ನುವಂತಾಗಿದೆ.

ರಾಜ್ಯ ಪುನರ್ ವಿಂಗಡಣಾ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಫಝಲ್ ಅಲಿ ಅವರು ಹೈದರಾಬಾದ್ ನಿಜಾಮ್ ರಾಜ್ಯದ ಭಾಗವಾಗಿದ್ದ ತೆಲಂಗಾಣ, ವಿದರ್ಭ ಮತ್ತು ಹೈದರಾಬಾದ್ ಕರ್ನಾಟಕದ ಜಿಲ್ಲೆಗಳು ಐತಿಹಾಸಿಕ ಕಾರಣಕ್ಕೆ ಹಿಂದುಳಿದಿವೆ ಎಂಬುದನ್ನು ಸ್ಪಷ್ಟವಾಗಿ ಗುರುತಿಸಿದ್ದರು. ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಮತ್ತು ಸಾಂಸ್ಕೃತಿಕವಾಗಿ ಹಿಂದುಳಿದಿರುವ ಈ ಭಾಗಗಳಿಗೆ ಸಂವಿಧಾನದ ತಿದ್ದುಪಡಿ ಮಾಡುವ ಮೂಲಕ ವಿಶೇಷ ಸ್ಥಾನಮಾನ ಕಲ್ಪಿಸಿ ಅಭಿವೃದ್ಧಿ ಪಡಿಸಬೇಕೆಂದು ಶಿಫಾರಸು ಮಾಡಿದ್ದರು. ಫಝಲ್ ಅಲಿ ಅವರ ಶಿಫಾರಸಿನ ಕಾರಣಕ್ಕೆ ವಿದರ್ಭ, ತೆಲಂಗಾಣ ಪ್ರದೇಶಗಳಿಗೆ ಎರಡು ಮೂರು ದಶಕಗಳ ಹಿಂದೆಯೇ ವಿಶೇಷ ಸ್ಥಾನಮಾನ ಕಲ್ಪಿಸಲಾಗಿತ್ತು. ನಿರಂತರ ಹೋರಾಟದ ಫಲವಾಗಿ ತೆಲಂಗಾಣ ಪ್ರತ್ಯೇಕ ರಾಜ್ಯವಾಗಿ ರೂಪುಗೊಂಡಿತು. ಜನತಾ ಪರಿವಾರದ ಹಿರಿಯ ಮುಖಂಡ ದಿ. ವೈಜನಾಥ ಪಾಟೀಲರ ನಿರಂತರ ಹೋರಾಟ ಮತ್ತು ಕಾಂಗ್ರೆಸ್‌ನ ಹಿರಿಯ ನಾಯಕರಾದ ಧರಂಸಿಂಗ್, ಮಲ್ಲಿಕಾರ್ಜುನ ಖರ್ಗೆಯವರ ಪ್ರಯತ್ನದ ಫಲವಾಗಿ ಹೈದರಾಬಾದ್ ಕರ್ನಾಟಕ ಪ್ರದೇಶದ ಜಿಲ್ಲೆಗಳಿಗೆ 371(ಜೆ) ಕಲಂ ತಿದ್ದುಪಡಿ ಮಾಡುವ ಮೂಲಕ ವಿಶೇಷ ಸ್ಥಾನಮಾನ ಕಲ್ಪಿಸಲಾಗಿದೆ. ಉದ್ಯೋಗದಲ್ಲಿ ಮೀಸಲಾತಿ ನೀಡಲಾಗುತ್ತಿದೆ. ಆದರೆ ಸಾಂಸ್ಕೃತಿಕವಾಗಿ ಹೈದರಾಬಾದ್ ಕರ್ನಾಟಕ(ಕಲ್ಯಾಣ ಕರ್ನಾಟಕ)ದ ಬೀದರ್, ಕಲಬುರಗಿ, ಯಾದಗಿರ್, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳು ಕಳೆದ 67 ವರ್ಷಗಳಿಂದ ಅನ್ಯಾಯಕ್ಕೊಳಗಾಗುತ್ತಿವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಅನುಸರಿಸುತ್ತಿರುವ ಪ್ರಾದೇಶಿಕ ತಾರತಮ್ಯ ನೀತಿಯು ಭಾರತದ ಸಂವಿಧಾನ ಮತ್ತು ಸಮಾನತೆಯ ತತ್ವವನ್ನೇ ಅಣಕಿಸುವಂತಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸುದೀರ್ಘ ಇತಿಹಾಸವಿದೆ. ವಿಶಾಲ ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬರುವ ಮೊದಲೇ (1951) ಅಂದಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರ ಪ್ರಯತ್ನದ ಫಲವಾಗಿ ಕನ್ನಡ ಸಾಹಿತ್ಯ ಸಂಸ್ಕೃತಿಯನ್ನು ಉತ್ತೇಜಿಸಲು ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆಯನ್ನು ಸ್ಥಾಪಿಸಲಾಯಿತು. ಇಲಾಖೆಯ ಮೊದಲ ನಿರ್ದೇಶಕರನ್ನಾಗಿ ವಿದ್ವಾನ್ ಸಿ.ಕೆ. ವೆಂಕಟರಾಮಯ್ಯ ಅವರನ್ನು ನೇಮಿಸಲಾಗಿತ್ತು. ಆನಂತರ ಪ್ರೊ. ಎ.ಎನ್. ಮೂರ್ತಿರಾವ್ ಅವರು ಇಲಾಖೆಯ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದರು. 1963ರಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆಯನ್ನು ರದ್ದುಗೊಳಿಸಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಒಂದು ಶಾಖೆಯನ್ನಾಗಿ ರೂಪಿಸಲಾಯಿತು. 1968ರಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಹೆಸರಿನ ಈ ಶಾಖೆಯನ್ನು ಪಠ್ಯಪುಸ್ತಕ ನಿರ್ದೇಶನಾಲಯಕ್ಕೆ ವರ್ಗಾಯಿಸಲಾಯಿತು. 1977ರಲ್ಲಿ ಸರಕಾರದ ಮಟ್ಟದಲ್ಲಿ ಶಿಕ್ಷಣ ಮತ್ತು ಯುವಜನ ಸೇವಾ ಇಲಾಖೆಯ ಅಧೀನದಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವ್ಯವಹಾರಗಳ ನಿರ್ದೇಶನಾಲಯವನ್ನು ಸ್ಥಾಪಿಸಲಾಯಿತು. ನಂತರ ಅದು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಎಂದು ಮರುನಾಮಕರಣಗೊಂಡಿತು. ಈ ನಿರ್ದೇಶನಾಲಯವು 1993ರಲ್ಲಿ (ಕಾಂಗ್ರೆಸ್ ಸರಕಾರ ಇದ್ದಾಗ) ಸರಕಾರದ ಮಟ್ಟದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಎಂದು ಸೃಜನಗೊಂಡಿತು. ಈಗ ಈ ಇಲಾಖೆಗೆ ಶಿವರಾಜ ತಂಗಡಗಿ ಅವರು ಮಂತ್ರಿಯಾಗಿದ್ದಾರೆ. ತಾಂತ್ರಿಕವಾಗಿ ಕಲ್ಯಾಣ ಕರ್ನಾಟಕದ ಮೊದಲ ಕನ್ನಡ ಮತ್ತು ಸಂಸ್ಕೃತಿ ಸಚಿವರು. (ಕನಕಗಿರಿ ಮತಕ್ಷೇತ್ರದ ಶಾಸಕ) ಆದರೆ ಭಾವನಾತ್ಮಕವಾಗಿ ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಇಲಕಲ್‌ನವರು.

ಕರ್ನಾಟಕ ಏಕೀಕರಣಗೊಂಡು ವಿಶಾಲ ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂದ ದಿನದಿಂದ ಇಲ್ಲಿಯವರೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕವೆಂದರೆ ಬೆಂಗಳೂರು-ಮೈಸೂರು, ಉತ್ತರ ಕರ್ನಾಟಕವೆಂದರೆ ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮಾತ್ರ ಎಂದು ಬಲವಾಗಿ ನಂಬಿ ಕಾರ್ಯನಿರ್ವಹಿಸುತ್ತಿದೆ. ಸ್ವಾತಂತ್ರ್ಯಪೂರ್ವದಲ್ಲಿ ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಬೆಂಗಳೂರು-ಮೈಸೂರನ್ನು ಸಾಂಸ್ಕೃತಿಕ ಕೇಂದ್ರವನ್ನಾಗಿ ರೂಪಿಸಿದ್ದರು. ನಾಲ್ವಡಿಯವರ ಆಸಕ್ತಿಯ ಫಲವಾಗಿ ನೂರು ವರ್ಷಗಳ ಹಿಂದೆಯೇ ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್, ಧಾರವಾಡದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘಗಳು ಸ್ಥಾಪನೆಯಾಗಿದ್ದವು. ವಿಶ್ವವಿಖ್ಯಾತ ಮೈಸೂರು ದಸರಾ ಸಾಹಿತಿ ಕಲಾವಿದರ ಆಶ್ರಯ ತಾಣವಾಗಿತ್ತು. ಬಿ.ಡಿ. ಜತ್ತಿ, ಸರ್ ಸಿದ್ದಪ್ಪ ಕಂಬಳಿಯವರ ಪ್ರಯತ್ನದಿಂದಾಗಿ ಮುಂಬೈ ಕರ್ನಾಟಕದ ಜಿಲ್ಲೆಗಳು ಅತ್ಯುತ್ತಮ ಶೈಕ್ಷಣಿಕ ಕೇಂದ್ರಗಳಾಗಿ ಹೆಸರುವಾಸಿಯಾಗಿದ್ದವು. ಹೈದರಾಬಾದ್ ನಿಜಾಮ್ ರಾಜ್ಯದ ಭಾಗವಾಗಿದ್ದ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಕರ್ನಾಟಕ ಏಕೀಕರಣ ವಾಗುವವರೆಗೂ ಉರ್ದು ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುತ್ತಿತ್ತು. ಈ ಭಾಗದ ಜನ ಉನ್ನತ ಶಿಕ್ಷಣಕ್ಕೆ ಹೈದರಾಬಾದಿನ ಉಸ್ಮಾನಿಯ ವಿಶ್ವವಿದ್ಯಾನಿಲಯವನ್ನು ಅವಲಂಬಿಸಿದ್ದರು. ಉನ್ನತ ಶಿಕ್ಷಣ ಜನಸಾಮಾನ್ಯರಿಗೆ ನಿಲುಕುತ್ತಿರಲಿಲ್ಲ. ಸಾಹಿತ್ಯ, ಸಂಗೀತ, ಲಲಿತ ಕಲೆಗಳಿಗೆ ಪ್ರೋತ್ಸಾಹವಿರಲಿಲ್ಲ. ನಿಜಾಮ ಕಲಾಪೋಷಕನಾಗಿರಲಿಲ್ಲ. ಕನ್ನಡ ಭಾಷಾ ಬೆಳವಣಿಗೆಗೆ ಉತ್ತೇಜನ ನೀಡುತ್ತಿರಲಿಲ್ಲ. ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಅಖಂಡ ಕರ್ನಾಟಕದ ಭಾಗವಾದ ಮೇಲೆಯೂ ಕರ್ನಾಟಕ ಸರಕಾರಗಳು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಾಂಸ್ಕೃತಿಕವಾಗಿ ಕಡೆಗಣಿಸುತ್ತಲೇ ಇವೆ; ನಿಜಾಮನ ಹಾಗೆಯೇ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನದಲ್ಲಿ ಹುಟ್ಟು 14 ಅಕಾಡಮಿಗಳು, ನಾಲ್ಕು ಪ್ರಾಧಿಕಾರಗಳು, 21 ಟ್ರಸ್ಟ್‌ಗಳು ಹಾಗೂ ನಾಲ್ಕು ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಈ ಎಲ್ಲಾ ಸಾಂಸ್ಕೃತಿಕ ಸಂಘಗಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೇ ಅನುದಾನ ನೀಡುತ್ತದೆ. ಅಷ್ಟು ಮಾತ್ರವಲ್ಲ ಮೈಸೂರು, ಧಾರವಾಡ, ಶಿವಮೊಗ್ಗ, ಕಲಬುರಗಿ, ಯಕ್ಷ ರಂಗಾಯಣ ಉಡುಪಿ, ವೃತ್ತಿ ರಂಗಾಯಣ ದಾವಣಗೆರೆಯಲ್ಲಿ-ಒಟ್ಟು ಆರು ರಂಗಾಯಣಗಳು ಕ್ರಿಯಾಶೀಲವಾಗಿವೆ. 14 ಅಕಾಡಮಿಗಳ ಪೈಕಿ ಕರ್ನಾಟಕ ಸಾಹಿತ್ಯ ಅಕಾಡಮಿ, ಕರ್ನಾಟಕ ನಾಟಕ ಅಕಾಡಮಿ, ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡಮಿ, ಕರ್ನಾಟಕ ಜಾನಪದ ಅಕಾಡಮಿ, ಕರ್ನಾಟಕ ಲಲಿತಕಲಾ ಅಕಾಡಮಿ, ಕರ್ನಾಟಕ ಶಿಲ್ಪಕಾಲ ಅಕಾಡಮಿಗಳು ಅಖಂಡ ಕರ್ನಾಟಕದ ವ್ಯಾಪ್ತಿ ಹೊಂದಿವೆ. ತುಳು ಅಕಾಡಮಿ, ಕರ್ನಾಟಕ ಯಕ್ಷಗಾನ ಅಕಾಡಮಿ, ಕರ್ನಾಟಕ ಅರೆ ಭಾಷಾ ಅಕಾಡಮಿ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿ, ಕರ್ನಾಟಕ ಕೊಡವ ಅಕಾಡಮಿ, ಕರ್ನಾಟಕ ಬ್ಯಾರಿ ಅಕಾಡಮಿ, ಕರ್ನಾಟಕ ಬಯಲಾಟ ಅಕಾಡಮಿ, ಕರ್ನಾಟಕ ಲಂಬಾಣಿ ಭಾಷಾ ಅಕಾಡಮಿಗಳು ನಿರ್ದಿಷ್ಟ ಪ್ರದೇಶಗಳಿಗೆ ಸೀಮಿತಗೊಂಡಿವೆ. ಕೆಲವು ಪ್ರದೇಶಗಳಿಗೆ ಸೀಮಿತವಾಗಿರುವ ಎಂಟು ಅಕಾಡಮಿಗಳಿಗೆ ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗದ ಸಾಹಿತಿ, ಕಲಾವಿದರು ಅಧ್ಯಕ್ಷ, ಸದಸ್ಯರ ನೇಮಕಾತಿಗೆ ಅರ್ಹರಾಗುವುದಿಲ್ಲ. ಇನ್ನು 21 ಟ್ರಸ್ಟ್‌ಗಳು ಮೂರು ಕೇಂದ್ರಗಳು ವಿಶೇಷವಾಗಿ ಹಳೆ ಮೈಸೂರು ಮತ್ತು ಮುಂಬೈ ಕರ್ನಾಟಕ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿವೆ. ಆ ಟ್ರಸ್ಟ್‌ಗಳು ಮತ್ತು ಕೇಂದ್ರಗಳ ಅಧ್ಯಕ್ಷ, ಸದಸ್ಯ ಸ್ಥಾನಗಳಿಗೆ ಕಲ್ಯಾಣ ಕರ್ನಾಟಕ ಭಾಗದ ಸಾಹಿತಿ, ಕಲಾವಿದರನ್ನು ಪರಿಗಣಿಸುವುದಿಲ್ಲ. ಕೊಡಗು, ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಸೀಮಿತಗೊಂಡು ಒಟ್ಟು ಆರು ಅಕಾಡಮಿಗಳಿವೆ. ಇದರ ಹೊರತಾಗಿಯೂ ಉಳಿದ ಅಕಾಡಮಿ-ಪ್ರಾಧಿಕಾರಗಳಲ್ಲಿಯೂ ಪಾಲು ಪಡೆದುಕೊಳ್ಳುತ್ತಾರೆ.

ಇನ್ನು ಉತ್ತರ ಕರ್ನಾಟಕವೆಂದರೆ ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಎಂದು ಪ್ರಬಲವಾಗಿ ವಾದ ಮಂಡಿಸುವ ಆ ಭಾಗದ ಸಾಹಿತಿ-ಕಲಾವಿದರು, ರಾಜಕಾರಣಿಗಳಿಗೆ ಕಲ್ಯಾಣ ಕರ್ನಾಟಕ ಕಾಣಿಸುವುದೇ ಇಲ್ಲ. ಹಾಗಾಗಿ ಮುಂಬೈ ಕರ್ನಾಟಕದ ಜಿಲ್ಲೆಗಳಲ್ಲಿ ಇತ್ತೀಚೆಗೆ ಸ್ಥಾಪನೆಯಾದ ಎಂ.ಎಂ. ಕಲಬುರ್ಗಿ ಹೆಸರಿನ ಟ್ರಸ್ಟ್ ಸೇರಿ ಒಟ್ಟು 14 ಟ್ರಸ್ಟ್ ಮತ್ತು ಪ್ರತಿಷ್ಠಾನಗಳು ಕಾರ್ಯನಿರ್ವಹಿಸುತ್ತಿವೆ. ಡಾ. ವಿ.ಕೃ. ಗೋಕಾಕ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಹಾವೇರಿ, ಹುತಾತ್ಮ ಮೈಲಾರ ಮಹಾದೇವಪ್ಪನವರ ರಾಷ್ಟ್ರೀಯ ಟ್ರಸ್ಟ್, ಹಾವೇರಿ, ಡಾ. ಮಲ್ಲಿಕಾರ್ಜುನ ಮನ್ಸೂರ್ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಧಾರವಾಡ, ಕವಿ ಚಕ್ರವರ್ತಿ ರನ್ನ ಪ್ರತಿಷ್ಠಾನ ಮುಧೋಳ, ಬಾಗಲಕೋಟೆ, ಪಿ.ಬಿ.ದುತ್ತರಗಿ ಪ್ರತಿಷ್ಠಾನ (ಸೂಳೇಬಾವಿ, ಬಾಗಲಕೋಟೆ, ಹಲಸಂಗಿ ಗೆಳೆಯರ ಪ್ರತಿಷ್ಠಾನ, ವಿಜಯಪುರ, ಶ್ರೀ ಗಳಗನಾಥ ಮತ್ತು ನಾ.ಶ್ರೀ. ರಾಜಪುರೋಹಿತ ಪ್ರತಿಷ್ಠಾನ, ಹಾವೇರಿ, ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಧಾರವಾಡ, ಸ್ವರ ಸಾಮ್ರಾಟ ಪಂ. ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಧಾರವಾಡ, ಕರ್ನಾಟಕ ಕುಲ ಪುರೋಹಿತ ಆಲೂರು ವೆಂಕಟರಾವ್ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಧಾರವಾಡ, ಡಾ. ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್, ಗದಗ. ಡಾ. ಬಸವರಾಜ ಕಟ್ಟೀಮನಿ ಸಾಹಿತ್ಯ ಟ್ರಸ್ಟ್, ಬೆಳಗಾವಿ, ಡಿ.ವಿ. ಹಾಲಬಾವಿ ಟ್ರಸ್ಟ್, ಧಾರವಾಡ. ಸಾಮಾನ್ಯವಾಗಿ ಅಧ್ಯಕ್ಷ, ಸದಸ್ಯರನ್ನೂ ಅದೇ ಭಾಗದವರನ್ನು ನೇಮಿಸುತ್ತಾರೆ.

ಹಳೆ ಮೈಸೂರು ಭಾಗದಲ್ಲಿ; ಡಾ. ಡಿ.ವಿ.ಜಿ. ಪ್ರತಿಷ್ಠಾನ, ಕೋಲಾರ, ಡಾ. ಗುಬ್ಬಿ ವೀರಣ್ಣ ಟ್ರಸ್ಟ್, ತುಮಕೂರು, ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ, ಕೊಟ್ಟಿಗೆಹಾರ-ಚಿಕ್ಕಮಗಳೂರು, ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಪ್ರತಿಷ್ಠಾನ, ಬೆಂಗಳೂರು, ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಟ್ರಸ್ಟ್, ಕೋಲಾರ, ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಕುಪ್ಪಳಿ, ಶಿವಮೊಗ್ಗ, ಕೆ.ಎಸ್. ನರಸಿಂಹ ಸ್ವಾಮಿ ಟ್ರಸ್ಟ್, ಮಂಡ್ಯ, ಡಾ. ಪು.ತಿ.ನ. ಟ್ರಸ್ಟ್, ಬೆಂಗಳೂರು.-ಒಟ್ಟು ಎಂಟು ಟ್ರಸ್ಟ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಅದಲ್ಲದೆ ರಾಷ್ಟ್ರೀಯ ಸಂತ ಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಸಾಂಪ್ರದಾಯಿಕ ಶಿಲ್ಪ ಗುರುಕುಲಗಳ ಕೇಂದ್ರ ಬೆಂಗಳೂರಿನಲ್ಲೇ ಇವೆ. ಉಡುಪಿಯಲ್ಲಿ ಡಾ. ಕೋಟ ಶಿವರಾಮ ಕಾರಂತ ಟ್ರಸ್ಟ್, ಹುಬ್ಬಳ್ಳಿಯಲ್ಲಿ ಡಾ. ಗಂಗೂಬಾಯಿ ಹಾನಗಲ್ ಗುರುಕುಲ ಕೇಂದ್ರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವ್ಯಾಪ್ತಿಯಲ್ಲೇ ಕೆಲಸ ಮಾಡುತ್ತಿವೆ. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರ, ಕುವೆಂಪು ಭಾಷಾ ಭಾರತಿಯಂತಹ ಪ್ರತಿಷ್ಠಿತ ಅಧಿಕಾರಗಳು ಬೆಂಗಳೂರಿನಲ್ಲೇ ನೆಲೆಗೊಂಡಿವೆ. ಟ್ರಸ್ಟ್‌ಗಳ ರಚನೆ ಮಾಡುವಾಗ ಯಾವ ಮಾನದಂಡ ಅನುಸರಿಸಿದ್ದಾರೆ ಎನ್ನುವುದು ಇಲಾಖೆಯ ಮಂತ್ರಿ ಶಿವರಾಜ ತಂಗಡಗಿ ಅವರೇ ಉತ್ತರಿಸಬೇಕು. ಇಲ್ಲಿ ಸಾಮಾಜಿಕ ನ್ಯಾಯ, ಮಹಿಳಾ ನ್ಯಾಯ, ಪ್ರತಿಭಾ ನ್ಯಾಯ ಪಾಲನೆಯಾಗಿಲ್ಲ ಎನ್ನುವುದು ಮೇಲ್ನೋಟಕ್ಕೆ ಮನವರಿಕೆಯಾಗುತ್ತದೆ. ಮಹಿಳಾ ನ್ಯಾಯಕ್ಕಾಗಿ ಡಾ. ಗಂಗೂಬಾಯಿ ಹಾನಗಲ್ ಹೆಸರಿನ ಏಕೈಕ ಗುರುಕುಲ ಸ್ಥಾಪನೆಯಾಗಿರುವುದು ನೋಡಿ ಸಮಾಧಾನ ಪಟ್ಟುಕೊಳ್ಳಬಹುದು. ಸಾಮಾಜಿಕ ನ್ಯಾಯ ಮತ್ತು ಪ್ರಾದೇಶಿಕ ನ್ಯಾಯವನ್ನು ಟ್ರಸ್ಟ್ ರಚನೆ ಮಾಡುವಾಗ ಪರಿಗಣನೆಗೇ ತೆಗೆದುಕೊಂಡಿಲ್ಲ. ಒಬ್ಬ ದಲಿತ ಸಾಹಿತಿ-ಕಲಾವಿದರ ಹೆಸರಲ್ಲಿ ಒಂದೇ ಒಂದು ಟ್ರಸ್ಟ್ ಇಲ್ಲ.

ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಪೈಕಿ ಒಂದೇ ಒಂದು ಜಿಲ್ಲೆಯಲ್ಲಿ ಟ್ರಸ್ಟ್ ಅಥವಾ ಸಂಶೋಧನಾ ಕೇಂದ್ರ ಸ್ಥಾಪನೆಯಾಗಿಲ್ಲ. ಏಳು ಜಿಲ್ಲೆಗಳಲ್ಲಿ ಒಟ್ಟು 41 ಶಾಸಕರು ಇದ್ದಾರೆ. ಯಾರೊಬ್ಬರಿಗೂ ಇದು ಅನ್ಯಾಯವೆಂದು ಅನಿಸಿಯೇ ಇಲ್ಲ. ಸಮಾನತೆಯ ತತ್ವ ಎತ್ತಿ ಹಿಡಿಯಬೇಕಾದ ಸಾಂಸ್ಕೃತಿಕ ಲೋಕದಲ್ಲಿಯೇ ಸಾಮಾಜಿಕ ನ್ಯಾಯ, ಮಹಿಳಾ ನ್ಯಾಯ, ಪ್ರಾದೇಶಿಕ ನ್ಯಾಯ ಗಾಳಿಗೆ ತೂರಿರುವಾಗ ಇನ್ನುಳಿದ ವಲಯಗಳಲ್ಲಿ ಯಾವ ಮಟ್ಟದ ಅನ್ಯಾಯವಾಗಿರಬೇಕು? ಹಾಗಂತ ಕರ್ನಾಟಕದಲ್ಲಿ ದಲಿತರು, ಮಹಿಳೆಯರಲ್ಲಿ ಕಲ್ಯಾಣ ಕರ್ನಾಟಕದವರಲ್ಲಿ ಪ್ರತಿಭಾವಂತರೇ ಇಲ್ಲ ಎಂದು ಯಾರಾದರೂ ಭಾವಿಸಿದ್ದರೆ ಅದು ಪರಮ ಮೂರ್ಖತನವೆನಿಸುತ್ತದೆ. ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಸಾಂಸ್ಕೃತಿಕ ಪರಂಪರೆ ಅತ್ಯಂತ ಸಮೃದ್ಧವೂ, ಶ್ರೀಮಂತವೂ ಆಗಿದೆ. ಕನ್ನಡಕ್ಕೆ ಮೊದಲ ಲಾಕ್ಷಣಿಕ ಗ್ರಂಥ ಕೊಟ್ಟ ಕವಿರಾಜ ಮಾರ್ಗದ ಕರ್ತೃ ನೃಪತುಂಗ ಕಲಬುರ್ಗಿ ಜಿಲ್ಲೆಯ ಮಾನ್ಯಖೇಟದವರು. ಸಂಗೀತ ಲೋಕದ ಪ್ರಾಚೀನ ಪ್ರತಿಭೆ ಬೃಹದ್ದೇಶಿಯ ಮಾತಂಗ ಮುನಿ ಹಂಪಿ ಪರಿಸರದಲ್ಲಿ ಕ್ರಿಯಾಶೀಲವಾಗಿದ್ದ ಮಹಾನ್ ಚೇತನ. ಹರಿಹರ, ರಾಘವಾಂಕರು, ವಚನ ಸಾಹಿತ್ಯದ ಮೇರುಗಳಾದ ಬಸವಣ್ಣ, ಮಾದರ ಚೆನ್ನಯ್ಯ, ಜೆೇಡರ ದಾಸಿಮಯ್ಯ, ಅಲ್ಲಮಪ್ರಭು, ಸಿದ್ದರಾಮ, ಅಕ್ಕಮಹಾದೇವಿ, ಮುಕ್ತಾಯಕ್ಕ, ಚನ್ನಬಸವಣ್ಣನವರ ಅನುಭವ ಮಂಟಪ ಬೀದರ ಜಿಲ್ಲೆಯ ಬಸವಕಲ್ಯಾಣದಲಿತ್ತು. ಕರ್ನಾಟಕ ಸಂಗೀತದ ಪಿತಾಮಹ ಪುರಂದರದಾಸರು, ಹಂಪಿಯ ವಿಜಯನಗರ ಸಾಮ್ರಾಜ್ಯದ ಅನರ್ಘ್ಯ ರತ್ನ. ಬಸವಾದಿ ಶರಣರು, ದಾಸರು, ಸೂಪಿಗಳು, ತತ್ವಪದಕಾರರು ಕಲ್ಯಾಣ ಕರ್ನಾಟಕವನ್ನು ಸೌಹಾರ್ದ ಪರಂಪರೆಯ ನೆಲೆಯನ್ನಾಗಿಸಿದ್ದಾರೆ.

ಕಡಕೋಳ ಮಡಿವಾಳಪ್ಪ, ರಾಮಪುರದ ಬಕ್ಕಪ್ಪ, ಕೂಡಲೂರ ಬಸವಲಿಂಗ ಶರಣರು, ಖೈನೂರು ಕೃಷ್ಣಪ್ಪ, ಚನ್ನೂರು ಜಲಾಲ್ ಸಾಬ್, ಅಣವೀರಪ್ಪ ಸೇರಿದಂತೆ ಹಲವಾರು ಜನ ತತ್ವಪದಕಾರರು ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಆಧುನಿಕ ಕಾಲದಲ್ಲೂ ಸಾಹಿತ್ಯ, ಸಂಗೀತ, ಚಿತ್ರಕಲಾ ಕ್ಷೇತ್ರವನ್ನು ಸಮೃದ್ಧಗೊಳಿಸಿದ ಅನೇಕ ಮಹನೀಯರು ಕಲ್ಯಾಣ ಕರ್ನಾಟಕದ ಸಂಸ್ಕೃತಿಕ ಲೋಕವನ್ನು ಬೆಳಗಿದ್ದಾರೆ. ಬಿ. ಶಾಮ ಸುಂದರ್, ತವಗ ಭೀಮಸೇನ್ ರಾವ್, ಜಯತೀರ್ಥ ರಾಜಪೂರೋಹಿತ, ಕಪಟರಾಳ ಕೃಷ್ಣರಾವ್, ಸಿದ್ದಯ್ಯ ಪುರಾಣಿಕ, ಪಂಚಾಕ್ಷರಿ ಹಿರೇಮಠ, ಶಾಂತರಸ, ಮುದೇನೂರು ಸಂಗಣ್ಣ, ಚನ್ನಣ್ಣ ವಾಲೀಕಾರ್, ಗೀತಾ ನಾಗಭೂಷಣ, ಶೈಲಜಾ ಉಡಚಣ, ಷ. ಶೆಟ್ಟರ್ ಮುಂತಾದವರು ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ವೈ ನಾಗೇಶ ಶಾಸ್ತ್ರಿ, ಜೋಳದ ರಾಶಿ ದೊಡ್ಡನ ಗೌಡರ, ಬೆಳಗಲ್ಲು ವೀರಣ್ಣ, ಬುರ‌್ರಕಥಾ ಈರಮ್ಮ, ಸಿದ್ದರಾಮ ಜಂಬಲದಿನ್ನಿ, ಎಸ್. ಎಂ. ಪಂಡಿತ್, ಸಾತಲಿಂಗಪ್ಪ ದುಧನಿ, ಸುಭದ್ರಮ್ಮ ಮನ್ಸೂರ್ ಸೇರಿದಂತೆ ಅಸಂಖ್ಯಾತ ಕಲಾವಿದರು ಸಾಧನೆಗೈದಿದ್ದಾರೆ. ಇದೆಲ್ಲ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರ ಗಮನಕ್ಕೆ ಬಂದಿಲ್ಲವೆಂದರೆ; ಅದು ಜಾಣ ಕುರುಡುತನವಲ್ಲದೆ ಮತ್ತೇನೂ ಅಲ್ಲ. ಈಗಲೂ ಸಾಹಿತ್ಯ, ಸಂಗೀತ, ಚಿತ್ರಕಲಾ ಕ್ಷೇತ್ರದಲ್ಲಿ ಈ ಭಾಗದ ಸಾಹಿತಿ ಕಲಾವಿದರು ಅಪಾರ ಸಂಖ್ಯೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ಪ್ರಜಾವಾಣಿ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ಕಲ್ಯಾಣ ಕರ್ನಾಟಕದ ಪ್ರತಿಭಾವಂತ ಕಥೆಗಾರರೇ ಸತತ 10 ವರ್ಷಗಳ ಕಾಲ ಮೇಲ್ಗೈ ಸಾಧಿಸಿದ್ದರು.

ಇಷ್ಟಿದ್ದೂ ಈ ಭಾಗದ ಸಾಹಿತಿ, ಕಲಾವಿದರ ಹೆಸರಲ್ಲಿ ಒಂದೇ ಒಂದು ಟ್ರಸ್ಟ್ ಇಲ್ಲ. ಅಕಾಡಮಿ-ಪ್ರಾಧಿಕಾರಗಳ ಅಧ್ಯಕ್ಷ, ಸದಸ್ಯರ ನೇಮಕಾತಿಯಲ್ಲಿ ಬೆರಳೆಣಿಕೆ ಸಾಹಿತಿ, ಕಲಾವಿದರಿಗೆ ಮಾತ್ರ ಅವಕಾಶ ನೀಡಲಾಗಿದೆ. ಕರ್ನಾಟಕ ಏಕೀಕರಣಗೊಂಡು 67 ವರ್ಷ ಕಳೆದರೂ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಉತ್ತರ ಕರ್ನಾಟಕದ ಒಬ್ಬ ಮಹಿಳೆ ಅಧ್ಯಕ್ಷರಾಗಿ ನೇಮಕಗೊಂಡಿಲ್ಲ. ಒಂದೇ ಒಂದು ಪುಸ್ತಕ ಬರೆದವರು ಮತ್ತು ಬರೆಯದವರು ಅಕಾಡಮಿ-ಪ್ರಾಧಿಕಾರಗಳ ಅಧ್ಯಕ್ಷರಾಗಿ ಮೆರೆದಿದ್ದಾರೆ. ಕಲ್ಯಾಣ ಕರ್ನಾಟಕದವರನ್ನು, ಅದರಲ್ಲೂ ಮಹಿಳೆ ಮತ್ತು ದಲಿತರನ್ನು ಸಂಪೂರ್ಣ ಕಡೆಗಣಿಸುತ್ತಾ ಬರಲಾಗಿದೆ. ಮುಂಬೈ ಕರ್ನಾಟಕದವರು ಉತ್ತರ ಕರ್ನಾಟಕದ ಪ್ರತ್ಯೇಕ ರಾಜ್ಯದ ಕೂಗು ಹಾಕುತ್ತಲೇ ಸಾಕಷ್ಟು ನ್ಯಾಯ ಪಡೆದುಕೊಂಡಿದ್ದಾರೆ. ಪ್ರಾದೇಶಿಕ ನ್ಯಾಯ, ಸಾಮಾಜಿಕ ನ್ಯಾಯ, ಮಹಿಳಾ ನ್ಯಾಯದ ಮಾತುಗಳು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮಾತ್ರ ಅರ್ಥವಾಗಬಲ್ಲವು. ಅವರೇ ಮಧ್ಯಪ್ರವೇಶ ಮಾಡಿ ನ್ಯಾಯ ಕೊಡಿಸಬೇಕು. ಇಲ್ಲದಿದ್ದರೆ ಕರ್ನಾಟಕ ಏಕೀಕರಣದ ಒಟ್ಟಾಶಯಕ್ಕೆ, ಭಾರತದ ಸಂವಿಧಾನಕ್ಕೆ ಅಪಮಾನ ಮಾಡಿದಂತೆ. ಒಂದು ಸಾಂಸ್ಕೃತಿಕ ನೀತಿ ಇಲ್ಲದಿರುವುದರಿಂದ ಬೇಕಾಬಿಟ್ಟಿ ಟ್ರಸ್ಟ್‌ಗಳು ರಚನೆಯಾಗಿವೆ. ಕಲ್ಯಾಣ ಕರ್ನಾಟಕವನ್ನು ನಿರಂತರ ಕಡೆಗಣಿಸಲು ಸಾಧ್ಯವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಡಾ. ರಾಜಶೇಖರ ಹತಗುಂದಿ

ಹಿರಿಯ ಬರಹಗಾರ, ಪತ್ರಕರ್ತ

Similar News