ರೋಗಿಗಳ ಹಸಿವು ನೀಗಿಸುವ 'ರೋಟಿ ಚಾರಿಟಿ ಟ್ರಸ್ಟ್ʼ

Update: 2024-06-10 06:01 GMT

ಬೆಂಗಳೂರು: ‘‘ಅನ್ನ ದೇವರ ಮುಂದೆ, ಇನ್ನು ದೇವರು ಉಂಟೆ? ಅನ್ನವಿರುವತನಕ ಪ್ರಾಣವು- ಜಗದೊಳಗನ್ನವೇ ದೈವ ಸರ್ವಜ್ಞ.’’ ಎನ್ನುವ ಸರ್ವಜ್ಞನ ವಚನದಂತೆ ಇಲ್ಲೋರ್ವ ಹಸಿವಿನ ಮಹತ್ವ ಅರಿತು ಆಸ್ಪತ್ರೆಗಳ ರೋಗಿಗಳಿಗೆ ಅನ್ನ ದಾಸೋಹಿಯಾಗಿದ್ದಾರೆ.

ಹೌದು.. ಸೈಯದ್ ಗುಲಾಬ್ ಎನ್ನುವವರು ಎಲೆಮರೆಯ ಕಾಯಿಯಂತೆ ಅನ್ನ ದಾಸೋಹ ಕಾರ್ಯದಲ್ಲಿ ತೊಡಗಿದ್ದು, ಚಳಿ, ಮಳೆ, ಗಾಳಿ ಎನ್ನದೇ ಪ್ರತಿದಿನ ಬೆಂಗಳೂರಿನ ದೊಡ್ಡ ದೊಡ್ಡ ಆಸ್ಪತ್ರೆಗಳಿಗೆ ಖುದ್ದು ತೆರಳಿ, ನೂರಾರು ರೋಗಿಗಳು ಹಾಗೂ ಅವರ ಸಂಬಂಧಿಕರ ಹಸಿವು ನೀಗಿಸುತ್ತಿದ್ದಾರೆ.

ಜಯನಗರದ ತಿಲಕ್‌ನಗರ ನಿವಾಸಿಯಾಗಿರುವ ಸೈಯದ್ ಗುಲಾಬ್, ತಮ್ಮದೇ ಆದ ಸ್ವಂತ ಉದ್ಯಮವನ್ನು ನಡೆಸುತ್ತಿದ್ದು, ಇದರ ಜತೆಗೆ ಪ್ರತಿದಿನವೂ ಬೆಂಗಳೂರಿನ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ, ರಾಜೀವ್ ಗಾಂಧಿ ಆಸ್ಪತ್ರೆ, ಸಂಜಯ್ ಗಾಂಧಿ ಆಸ್ಪತ್ರೆ ಮತ್ತು ನಿಮ್ಹಾನ್ಸ್ ಆಸ್ಪತ್ರೆಗೆ ಚಿಕಿತ್ಸೆಗೆಂದು ಬರುವ ಸುಮಾರು 300ಕ್ಕೂ ಹೆಚ್ಚು ಬಡ ರೋಗಿಗಳು ಮತ್ತು ಅವರ ಪೋಷಕರ ಹಸಿವು ತಣಿಸುತ್ತಿದ್ದಾರೆ.

8 ವರ್ಷಗಳಿಂದ ದಾನಿಗಳ ಸಹಾಯ ಹಾಗೂ ತಮ್ಮದೇ ‘ರೋಟಿ ಚಾರಿಟಿ ಟ್ರಸ್ಟ್’ ಸ್ಥಾಪಿಸಿಕೊಂಡು ವ್ಯಾನ್‌ನಲ್ಲಿ ಆಸ್ಪತ್ರೆಗಳಿಗೆ ತೆರಳಿ ಆಹಾರದ ಪೊಟ್ಟಣ ಹಂಚುವ ಪುಣ್ಯದ ಕೆಲಸದಲ್ಲಿ ಅವರು ನಿರತರಾಗಿದ್ದಾರೆ.

ಆಸ್ಪತ್ರೆಗಳ ಬಳಿ ಪ್ರತಿದಿನ ಮಧ್ಯಾಹ್ನ 12:30ರ ವೇಳೆಗೆ ಊಟವನ್ನು ಹೊತ್ತು ತರುವ ಸೈಯದ್ ಅವರ ವಾಹನವನ್ನು ರೋಗಿಗಳು ಹಾಗೂ ಪೋಷಕರು ಎದುರು ನೋಡುತ್ತಿರುತ್ತಾರೆ. ಊಟದ ವಾಹನ ಬಂದು ಆಸ್ಪತ್ರೆಗಳ ಗೇಟ್ ಮುಂಭಾಗದಲ್ಲಿ ನಿಲ್ಲಿಸಿದ ಕೂಡಲೇ ಎಲ್ಲರೂ ಸರದಿಯಲ್ಲಿ ನಿಂತು, ಆಹಾರದ ಪೊಟ್ಟಣವನ್ನು ಸ್ವೀಕರಿಸುತ್ತಾ, ಸೈಯದ್ ಅವರಿಗೆ ಧನ್ಯವಾದ ತಿಳಿಸುತ್ತಾರೆ.

ಈವರೆಗೆ ಮಳೆ, ಚಳಿ, ಬಿಸಿಲು ಎನ್ನದೇ ಹಬ್ಬ-ಹರಿದಿನಗಳನ್ನು ಲೆಕ್ಕಿಸದೇ ಒಂದು ದಿನವೂ ತಪ್ಪದೇ ಉಚಿತ ಆಹಾರ ವಿತರಿಸುವ ಮಹತ್ಕಾರ್ಯವನ್ನು ಸೈಯದ್ ಅವರು ಮುಂದುವರಿಸಿಕೊಂಡು ಬರುತ್ತಿರುವುದು ಇತರರಿಗೂ ಮಾದರಿಯಾಗಿದೆ.

ನಿಮ್ಹಾನ್ಸ್, ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಗಳಲ್ಲಿ ಮಕ್ಕಳು, ರೋಗಿಗಳು ಅನೇಕ ತಿಂಗಳುಗಳವರೆಗೆ ದಾಖಲಾಗಿರುತ್ತಾರೆ. ರೋಗಿಗಳಿಗೆ ಆಸ್ಪತ್ರೆಯಲ್ಲಿ ಊಟ-ತಿಂಡಿ ವ್ಯವಸ್ಥೆ ಇರುತ್ತದೆ. ಆದರೆ, ರೋಗಿ ನೋಡಿಕೊಳ್ಳಲು ಬಂದಿರುವವರು ಊಟಕ್ಕಾಗಿ ಪರದಾಡುತ್ತಿದ್ದದ್ದನ್ನು ಕಂಡು ಉಚಿತ ಊಟ ನೀಡಲು ತೀರ್ಮಾನಿಸಿದೆ ಎನ್ನುತ್ತಾರೆ ರೋಟಿ ಚಾರಿಟಿ ಟ್ರಸ್ಟ್ ಸಂಸ್ಥಾಪಕ ಸೈಯದ್ ಗುಲಾಬ್.

ಪುಣ್ಯದ ಕಾರ್ಯಕ್ಕೆ ಪ್ರೇರಣೆಯೇನು?

‘‘ಅದು 2016ರ ಸಂದರ್ಭ. ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ದಾಖಲಾಗಿದ್ದ ತನ್ನ ಸ್ನೇಹಿತನ ಮಗಳನ್ನು ನೋಡಲು ವಾರದಲ್ಲಿ ಎರಡ್ಮೂರು ಬಾರಿ ಆಸ್ಪತ್ರೆ ಬಳಿ ತೆರಳುತ್ತಿದ್ದೆ. ಆಗ ಮಕ್ಕಳನ್ನು ನೋಡಿಕೊಳ್ಳುತ್ತಿದ್ದ ಪೋಷಕರು ಊಟಕ್ಕಾಗಿ ಪರದಾಡುತ್ತಿದ್ದರು. ಅದರಲ್ಲೂ ರವಿವಾರ ಆಸ್ಪತ್ರೆ ಕ್ಯಾಂಟೀನ್ ಕೂಡ ಮುಚ್ಚಿರುತ್ತಿತ್ತು. ಊಟಕ್ಕಾಗಿ ದೂರದ ಹೊಟೇಲ್‌ಗಳಿಗೆ ನಡೆದುಕೊಂಡು ಹೋಗಬೇಕಿತ್ತು. ಇದನ್ನು ಕಂಡ ನಂತರ, ಪ್ರತಿ ರವಿವಾರದಂದು ಕೈಲಾದಷ್ಟು ಜನರಿಗೆ ಉಚಿತ ಊಟ ವಿತರಿಸಬೇಕು ಎಂದು ನಿರ್ಧರಿಸಿದೆ.

ಮೊದಲ 6 ತಿಂಗಳುಗಳ ಕಾಲ ಪ್ರತೀ ರವಿವಾರ ಮಧ್ಯಾಹ್ನದ ಊಟ ವಿತರಿಸಿದೆ. ಬಳಿಕ ಇದನ್ನು ಫೇಸ್‌ಬುಕ್ ಸೇರಿದಂತೆ ಇತರ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದೆ. ಇದರಿಂದಾಗಿ ಅನೇಕ ಮಂದಿ ತಮ್ಮ ಜನ್ಮದಿನ, ವಿವಾಹ ವಾರ್ಷಿಕೋತ್ಸವ, ಮಕ್ಕಳ ಹುಟ್ಟುಹಬ್ಬ ಸೇರಿದಂತೆ ಶುಭ ಸಮಾರಂಭಗಳ ಸಂದರ್ಭದಲ್ಲಿ ನನ್ನ ಜತೆ ಕೈಜೋಡಿಸುತ್ತಿದ್ದರು. ಕೆಲ ದಾನಿಗಳು ನನ್ನ ಬೆನ್ನು ತಟ್ಟಿ, ವಾರಕ್ಕೊಮ್ಮೆ ಬದಲು ಪ್ರತಿದಿನ ಆಹಾರ ವಿತರಿಸುವ ಎಂದು ಭರವಸೆ ನೀಡಿದರು. ಬಳಿಕ ‘ರೋಟಿ ಚಾರಿಟಿ ಟ್ರಸ್ಟ್’ ಎಂಬ ಟ್ರಸ್ಟ್‌ವೊಂದನ್ನು ಪ್ರಾರಂಭಿಸಿ, ಇದರ ಹೆಸರಿನಲ್ಲಿ ನಿತ್ಯ ಅನ್ನ, ತರಕಾರಿ ಸಾಂಬಾರು ಜತೆಗೆ ಮಕ್ಕಳಿಗೆ ಬಿಸ್ಕತ್ ವಿತರಿಸಲಾಗುತ್ತಿದೆ’’ ಎಂದು ವಿವರಿಸುತ್ತಾರೆ ಸೈಯದ್ ಗುಲಾಬ್.

ಹಸಿವಿಗೆ ಜಾತಿ, ಧರ್ಮಗಳಿಲ್ಲ

ಹಸಿವಿಗೆ ಯಾವುದೇ ಜಾತಿ, ಧರ್ಮಗಳಿಲ್ಲ. ಎಲ್ಲ ಮನುಷ್ಯರಿಗೂ ಹಸಿವು ಕಾಡುತ್ತದೆ. ಹೊಟ್ಟೆ ಹಸಿದು ಬಂದವರಿಗೆ ತಾರತಮ್ಯ ಮಾಡದೇ ಊಟದ ಪೊಟ್ಟಣಗಳನ್ನು ವಿತರಿಸುತ್ತಿದ್ದೇನೆ. ಆಸ್ಪತ್ರೆಗಳ ವೈದ್ಯರ ಸಲಹೆಯಂತೆ ರೋಗಿಗಳಿಗೆ ಬೇಕಾದ ಗೀ ರೈಸ್, ಪಲಾವ್, ಅನ್ನ ಸಾಂಬಾರ್, ಬಾಳೆಹಣ್ಣು, ಬಿಸ್ಕತ್ ಸೇರಿದಂತೆ ಗುಣಮಟ್ಟದ ಪದಾರ್ಥಗಳನ್ನು ವಿತರಿಸುತ್ತಿದ್ದೇನೆ ಎನ್ನುತ್ತಾರೆ ಸೈಯದ್ ಗುಲಾಬ್.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಯೋಗೇಶ್ ಮಲ್ಲೂರು

contributor

Similar News