ಕಾಂತರಾಜು ವರದಿ: ಗೊಂದಲ ಯಾಕೆ?
ಕಾಂತರಾಜು ವರದಿ ಇಂದಿನ ಅಗತ್ಯವಾಗಿದೆ. ಏಕೆಂದರೆ, ಹಿಂದಿನ ಕಾಂಗ್ರೆಸ್ ಸರಕಾರ, ರಾಜ್ಯದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಸಲು ಮುಂದಾಗಿತ್ತು. ಆದರೆ, ಅದರ ಉದ್ದೇಶ ಕೇವಲ ಕುರುಬ ಸಮುದಾಯದ ಜನಸಂಖ್ಯೆ ಅನಾವರಣ ಮಾಡುವ ಮೂಲ ಉದ್ದೇಶ ಆಗಿರಲಿಲ್ಲ. ಅದರ ಬದಲು ರಾಜ್ಯದಲ್ಲಿ ಮೂರು ಹಿಂದುಳಿದ ವರ್ಗಗಳ ಆಯೋಗಗಳು ಕೇವಲ ಪ್ರಾತಿನಿಧಿಕ ಸಮೀಕ್ಷೆ ಮೂಲಕ ಹಿಂದುಳಿದ ವರ್ಗಗಳ ಸಮಾಜಗಳನ್ನು ಗಣಿಸಿವೆ. ಇಂತಹ ಒಂದು ಸಾರ್ವತ್ರಿಕ ಸಮೀಕ್ಷೆ ವರದಿ ಮೇಲೆ ಯಾರ ಅಭಿವೃದ್ಧಿ ಎಷ್ಟು?, ಹಿಂದುಳಿದವರೆಷ್ಟು?, ಅವಕಾಶ ಸಿಗದವರೆಷ್ಟು ಎಂಬ ಅಳತೆಗೋಲು ಹೊರಬರುತ್ತದೆ ಎಂದು ಸರಕಾರದ ಅಭಿಲಾಷೆಯಾಗಿತ್ತು. ಒಂದುವೇಳೆ ನಡೆದಿರುವ ಸಮೀಕ್ಷೆ ಜನಸಂಖ್ಯೆ ಆ ಸಾಲಿನ ಮಧ್ಯೆ ವಾರ್ಷಿಕ ಬೆಳವಣಿಗೆ ದರವನ್ನು ಸಮೀಪದಲ್ಲಿ ಮುಟ್ಟಿ ಅದರ ಅಂದಾಜು ಜನಸಂಖ್ಯೆಗೆ ಸಮೀಪದ ಸಂಖ್ಯೆ ಬಂದರೂ ಅದೊಂದು ನಂಬಲು ಅರ್ಹವಾದ ಸಮೀಕ್ಷೆ ಆಗುತ್ತದೆ. ಆ ವರದಿಯಲ್ಲಿ ಅತಿ ಹಿಂದುಳಿದ ವರ್ಗಗಳ ಮತ್ತು ಹಿಂದುಳಿದ ವರ್ಗಗಳ ಜಾತಿಗಳ ಒಳಗಿರುವ ಅಗೋಚರವಾದ ಸೂಕ್ಷ್ಮ ಜಾತಿ ಗುಂಪುಗಳು ಮೂಡಿವೆ.
ಸಾಮಾನ್ಯವಾಗಿ ರಾಜ್ಯದ ಜನಸಂಖ್ಯೆ ಅಳೆದಾಗ ಸಹಜವಾಗಿ ಲಿಂಗಾಯತ ಮತ್ತು ಅದರ ಉಪ ಸಮುದಾಯಗಳು ಮೊದಲ ಸ್ಥಾನದಲ್ಲಿರುವವರು. ಎರಡನೆಯ ಸ್ಥಾನದಲ್ಲಿ ಒಕ್ಕಲಿಗರು ಬರುತ್ತಾರೆ. ಇವರಿಬ್ಬರ ಸಂಖ್ಯಾಬಲವನ್ನು ಹಿಂದಕ್ಕೆ ಸರಿಸಿ ಕುರುಬ ಅಥವಾ ಬೇರೊಂದು ಸಮುದಾಯ ಅವುಗಳ ಸ್ಥಾನದಲ್ಲಿ ನಿಲ್ಲಲು ಸಾಧ್ಯವೇ? ಅಥವಾ ಪರಿಶಿಷ್ಟ ಜಾತಿ ಜನರನ್ನು ಒಂದು ಸ್ವಗುಂಪಾಗಿ ಗಣಿಸಿದಾಗ ಅವರೇ ರಾಜ್ಯದಲ್ಲಿ ಮೊದಲ ಸಂಖ್ಯಾಬಲವುಳ್ಳವರಾಗುತ್ತಾರೆ. ಬಹುತೇಕ ಜಿಲ್ಲೆಗಳಲ್ಲಿ ಶೇ. 98ರಷ್ಟು ಜನರನ್ನು ಆ ಸಮೀಕ್ಷೆ ಮುಟ್ಟಲು ಸಾಧ್ಯವಾಗಿದ್ದರೆ ಅದೊಂದು ಐತಿಹಾಸಿಕ ಅಂಕಿ ಅಂಶಗಳ ಆಗರವಾಗುತ್ತದೆ. ಜಸುವ್ಹಾ ಎಂಬ ಜನಸಂಖ್ಯೆಯ ಅಧ್ಯಯನ ಸಂಸ್ಥೆ ಜನಗಣತಿಯ ಅಂದಾಜು ಪ್ರಕಾರವನ್ನು ದಾಟಿದ್ದರೆ ಒಪ್ಪುವ ದಾಖಲೆ ಆಗುತ್ತದೆ.
ಸಾಮಾನ್ಯ ಜನಗಣತಿಯಲ್ಲಿಯೂ ಎರಡು ಲೋಪಗಳಿರುತ್ತವೆ. ಒಂದು ಸಮೀಕ್ಷೆಯ ಸಂದರ್ಭದಲ್ಲಿ ಮನೆಯವರು ಇಲ್ಲದಿದ್ದಾಗ ಅಕ್ಕಪಕ್ಕದ ಮನೆಯವರ ಜೊತೆ ಸಮಾಲೋಚನೆ ಮಾಡಿ ಮಾಹಿತಿ ಪಡೆದಾಗ ನೆರಳು ಮಾಹಿತಿ ಆಗುತ್ತದೆ. ಇನ್ನೊಂದು ಊರುಬಿಟ್ಟು ಬಂದವರನ್ನು ಸ್ವಗ್ರಾಮದಲ್ಲಿ ಅಥವಾ ನಗರಗಳಲ್ಲಿ ದಾಖಲೆ ಮಾಡಿದಾಗ ಅದೂ ಸಹ ದ್ವಿಗಣತಿ ಆಗುತ್ತದೆ ಹಾಗೂ ಜನಗಣತಿಯ ಜಪ್ತಿಗೆ ಸಿಗದವರೂ ಇರುವ ಸಾಧ್ಯತೆ ಇರುತ್ತದೆ. ಹಿಂದಿನ ಕಾಂಗ್ರೆಸ್ ಸರಕಾರ ಆರಂಭ ಮಾಡಿದ್ದ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಮೇಲೆ ಅನೇಕರ ಕಣ್ಣಿತ್ತು. 1948ರ ಕೇಂದ್ರ ಜನಗಣತಿ ಕಾಯ್ದೆ ಪ್ರಕಾರ ಸಮಗ್ರ ಜನಗಣತಿ ಮಾಡುವ ಅಧಿಕಾರ ಕೇಂದ್ರ ಸರಕಾರ ಮಾತ್ರ ಹೊಂದಿದೆ. ಸಮೀಕ್ಷೆ ಮೇಲಿನ ಬೀಸುಗತ್ತಿಯ ಏಟನ್ನು ತಪ್ಪಿಸಲು ಅಂದು ರಾಜ್ಯ ಸರಕಾರ ನ್ಯಾಯಾಲಯದ ಮುಂದೆ ನಾವು ನಡೆಸುತ್ತಿರುವುದು ಸಮೀಕ್ಷೆ ಹೊರತು ಜನಗಣತಿ ಅಲ್ಲ ಎಂದು ಹೇಳಿತ್ತು. ಈ ದೃಷ್ಟಿಯಿಂದ ನೋಡಿದಾಗ ಸಮೀಕ್ಷೆಯಲ್ಲಿ ಬರುವ ವಿವಿಧ ಸಮುದಾಯಗಳ ಅಂಕಿಅಂಶಗಳು ಸಾಮೀಪ್ಯದ ಸತ್ಯಾಂಶವನ್ನು ನೀಡದೆ ಇರಲಾರವು. ಒಳ ಮೀಸಲಾತಿ ಜಾರಿಗೆ ದತ್ತಾಂಶ ಕೊರತೆ ಇದೆ ಎಂದು ಸರಕಾರದ ಇಂದಿನ ಅಭಿಮತವಾಗಿದೆ. ಬಹುಶಃ ಅಂದಿನ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ವರದಿ ಸಾರ್ವಜನಿಕವಾಗಿ ಸಿಗುವುದಾಗಿದ್ದರೆ ಒಳ ಜಾತಿಗಳ ಸಂಖ್ಯಾಬಲ ಯಾದವಿ ಗುದ್ದಾಟ ನಿಲ್ಲುತ್ತಿತ್ತು.
ನ್ಯಾಯಮೂರ್ತಿ ಟಿ. ವೆಂಕಟಸ್ವಾಮಿ ಆಯೋಗದ ವರದಿಯನ್ನು ಒಮ್ಮೆ ಮುಕ್ತ ಮನಸ್ಸಿನಿಂದ ಅವಲೋಕಿಸಿದಾಗ, ಈ ರಾಜ್ಯದಲ್ಲಿ ಯಾವ ಹಿಂದುಳಿದ ವರ್ಗಗಳ ಸಮುದಾಯಗಳು ಎಷ್ಟು ಸಾರ್ವಜನಿಕ ಹುದ್ದೆ ಹೊಂದಿವೆ ಮತ್ತು ಇತರ ಆರ್ಥಿಕ ನಿರ್ವಹಣೆಗಳಲ್ಲಿ ಅವುಗಳು ಹೊಂದಿರುವ ಪ್ರಾಬಲ್ಯ ತಿಳಿಸುತ್ತದೆ. ಆದರೆ ಅದು ಪ್ರಬಲ ಕೋಮುಗಳ ತಿಕ್ಕಾಟದಲ್ಲಿ ಸಿಲುಕಿ ನುಚ್ಚುನೂರು ಆಯಿತು.
ಕೇಂದ್ರ ಸಚಿವ ಕುಮಾರಸ್ವಾಮಿಯವರಂತಹ ರಾಜಕಾರಣಿ ಮೊದಲು ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ವರದಿ ಬಿಡುಗಡೆ ಮಾಡಿಸಲು ಒತ್ತಡ ಹಾಕಬೇಕು. ಉಪಚುನಾವಣೆ ಮೇಲಿನ ಆಸೆಯಿಂದ ಟೀಕಿಸುವುದು ಸಲ್ಲದು ಅಥವಾ ಕುರುಬರಿಗೆ ಮಾತ್ರ ಅನುಕೂಲವಾಗುತ್ತದೆ ಎಂದು ಪ್ರತಿಪಾದಿಸುವುದು ಸಾಮುದಾಯಿಕ ನ್ಯಾಯ ಆಗಲಾರದು. ಒಂದುವೇಳೆ, ಒಕ್ಕಲಿಗರ ಅಥವಾ ಲಿಂಗಾಯತ ಧರ್ಮದ ಜನರು ಅತ್ಯಂತ ಕಡಿಮೆಯಾಗಿದ್ದರೆ ಅದನ್ನು ಯಾರೂ ಮಾನ್ಯ ಮಾಡುವುದಿಲ್ಲ. ಅಂತೆ ಕಂತೆ ಪೋಣಿಸಿ ಹೇಳುವ ಮಾಹಿತಿಯನ್ನು ನಂಬಿ ಲಿಂಗಾಯತ ಧರ್ಮದ ಅನೇಕರು ಪ್ರತಿರೋಧ ಹಾಕಿದ್ದಾರೆ.
ಇತ್ತೀಚೆಗೆ ಲಿಂಗಾಯತ ವೀರಶೈವ ಧರ್ಮದ ರಾಜಕಾರಣಿಗಳು ಆ ವರದಿಯಲ್ಲಿರುವ ಗುಣಾತ್ಮಕ ಅಂಶಗಳು ಯಾವುವು; ನಕಾರಾತ್ಮಕವಾಗಿ ಬಂದಿರುವ ಸಂಖ್ಯಾಬಲವೇನು ಎಂದು ನೋಡಿ ಅರಿಯದೆ, ತಿಳಿಯದೆ ಬಿಡುಗಡೆ ಬೇಡವೆಂದಿದ್ದಾರೆ.
ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ವರದಿ ಸಾರ್ವಜನಿಕವಾಗಿ ಸಿಗುವುದಾದರೆ ಅದರ ಮೇಲಿನ ಪರ ವಿರೋಧವಾಗಿ ಯಾರು ಬೇಕಾದರೂ ಭಾಷ್ಯವನ್ನು ಬರೆದು ಟೀಕಿಸಬಹುದು. ವರದಿಯನ್ನು ಪೂರ್ಣ ಪ್ರಮಾಣದಲ್ಲಿ ಓದದೆ ಕೇವಲ ಗಾಳಿಮಾತು ನಂಬಿ ಟೀಕಿಸುವುದು ಉತ್ತಮ ಸಂಸದೀಯ ನಡಾವಳಿಗಳು ಆಗಲಾರವು. ಮೊದಲು ವರದಿಗೆ ಪ್ರಸೂತಿ ಮಾಡಿಸಿ ಆಮೇಲಾಮೇಲೆ ಅದರ ಆರೋಗ್ಯ ಅಥವಾ ಅನಾರೋಗ್ಯ ಬಗ್ಗೆ ಉತ್ತಮ ಸಂಖ್ಯಾಶಾಸ್ತ್ರದ ಶ್ರೇಷ್ಠ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಸತ್ಯ ತಿಳಿಯಲು ಸಾಧ್ಯ.
ಈ ರಾಜ್ಯದ ಸರ್ವ ಜನ ಸಮುದಾಯದ ಆಶಯವನ್ನು ಅರಿತು ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ವರದಿ ಬಿಡುಗಡೆಗೆ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯದ ಪ್ರಾಜ್ಞರು ಮುಂದಾಗಬೇಕು. ಬಹಿರಂಗವಾದ ವರದಿಯಲ್ಲಿ ತಪ್ಪಿವೆ ಅನ್ನುವುದು ನ್ಯಾಯ ಸಮ್ಮತವಲ್ಲ. ಅದರ ಹತ್ತಾರು ಸಂಪುಟದಲ್ಲಿರುವ ಮಾಹಿತಿಯನ್ನು ರಾಜ್ಯದ ಜನರು ನೋಡಿ, ಅದರ ತಪ್ಪುಗಳನ್ನು ದಾಖಲಿಸಲು ಅವಕಾಶವನ್ನು ದಯಪಾಲಿಸುವತ್ತ ಚಿಂತಿಸಲಿ. ಬಹುತೇಕ ಹಿಂದುಳಿದ ವರ್ಗಗಳ ಆಯೋಗಗಳು ಪ್ರಾತಿನಿಧಿಕ ಸಮೀಕ್ಷೆ ಮೂಲಕ ಹಿಂದುಳಿದ ವರ್ಗಗಳ ಜನಸಂಖ್ಯೆ ಹೇಳಿವೆ. ಇದೊಂದು ಮೈಲುಗಲ್ಲು ಅಂಕಿ ಅಂಶವಾಗುತ್ತದೆ. ಒಂದುವೇಳೆ ನಿಮ್ಮ ಸಂಖ್ಯಾಬಲದ ಮುಂದೆ ದುರ್ಬಲರ ವರ್ಗಗಳು ಸಾಮಾಜಿಕವಾಗಿ ಸಂಘಟಿತವಾಗಿ ತಮ್ಮನ್ನು ತಾವೇ ಸಂರಕ್ಷಣೆ ಮಾಡಿಕೊಳ್ಳಲು ಮುಂದಾದರೆ ಏನು ಮಾಡುವುದು?.
ರಾಜ್ಯದ ಸಂಖ್ಯಾಬಲದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ ಕ್ರೋಡೀಕರಿಸಿದರೆ ಸಹಜವಾಗಿ ಈ ರಾಜ್ಯದಲ್ಲಿ ಅವರೇ ಮೊದಲಿಗರು. ಇವರು ಸರಿ ಸುಮಾರು 1 ಕೋಟಿ 75 ಲಕ್ಷದಷ್ಟು ಆಗುತ್ತಾರೆ. ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯ ನಂತರದ ಸ್ಥಾನದಲ್ಲಿವೆ. ವರದಿಯನ್ನು ಇಲ್ಲಿಯ ತನಕವೂ ನೋಡದೆ ವ್ಯಾಖ್ಯಾನ ಮಾಡುವವರ ಮನೋಧರ್ಮ ಹೇಗಿದೆಯೆಂದರೆ, ಎಂದೂ ಗಿರಿಯ ತುದಿ ತುಳಿಯುದವರು ಅದರ ಮೇಲೆ ಸಾಲು ಸಾಲು ಪ್ರವಚನ ನೀಡಿದಂತಾಗುತ್ತಿದೆ.
ರಾಜ್ಯದ ಸರ್ವಜನಾಂಗದ ಒಳಿತಿಗಾಗಿ, ಅವರ ಉಪಯೋಗಕ್ಕೆ ಸಮೀಕ್ಷೆ ವರದಿ ಬೇಕಿದೆ. ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಮುಂಬರಲಿರುವ ಜನಗಣತಿಯಲ್ಲಿ ಜಾತಿ, ಉಪ ಜಾತಿಗಳನ್ನು ಪರಿಶಿಷ್ಟ ಜಾತಿ/ಪಂಗಡದಲ್ಲಿ ಜನಗಣತಿ ಮಾಡುವಂತೆ ಹಿಂದುಳಿದ ಮತ್ತು ಅಲ್ಪಸಂಖ್ಯಾತರು, ಸಾಮಾನ್ಯ ವರ್ಗಗಳನ್ನೂ ಪರಿಗಣಿಸಲು ಒತ್ತಾಯಿಸಬೇಕು. ಆಗ ರಾಷ್ಟ್ರೀಯ ಮತ್ತು ರಾಜ್ಯಗಳ ಜನಸಂಖ್ಯಾ ಸಚಿತ್ರಣಗಳು ಮೂಡುತ್ತವೆ. ದೇಶಾಭಿವೃದ್ಧಿಗೆ ಮುಂಬೆಳಕಾಗುತ್ತದೆ. ಅದಲ್ಲದೆ ಮಹಿಳಾ ಮೀಸಲಾತಿ ಜಾರಿಗೂ ಸಹಕಾರಿ ಆದೀತು.